- ಸಮಾಜಕ್ಕೆ ಸೇವೆ ಸಲ್ಲಿಸುತ್ತಿರುವ ಆಟೋ ಚಾಲಕರ ಪರ ಕಾಂಗ್ರೆಸ್ ನಿಲ್ಲಲಿದೆ
- ಆಟೋ ಚಾಲಕರನ್ನು ಬಳಸಿಕೊಳ್ಳುತ್ತಿರುವ ಬೇರೆ ಪಕ್ಷದವರು ಅವರ ರಕ್ಷಣೆಗೆ ಬರುತ್ತಿಲ್ಲ
“ಚುನಾವಣೆ ಸಮಯದಲ್ಲಿ ಆಟೋ ಚಾಲಕರು ತಮಗೆ ಬೇಕಾದ ಪಕ್ಷದ ಪರ ಪ್ರಚಾರ ಮಾಡುತ್ತಿದ್ದಾರೆ. ಆದರೆ, ಕಾಂಗ್ರೆಸ್ ಪರ ಪ್ರಚಾರ ಮಾಡುತ್ತಿರುವ ಆಟೋ ಚಾಲಕರ ಮೇಲೆ ₹5,000 ದಂಡ ಹಾಕಲಾಗುತ್ತಿದೆ” ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಆರೋಪಿಸಿದರು.
ಸದಾಶಿವನಗರ ನಿವಾಸದ ಬಳಿ ಶನಿವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಪಕ್ಷದ ಪರ ಪ್ರಚಾರಕ್ಕೆ ಆಟೋಗಳ ಮೇಲೆ ಫೋಟೋ ಹಾಕಿಕೊಳ್ಳಬಾರದು ಎಂದು ಯಾವ ಕಾನೂನಿನಲ್ಲಿದೆ? ಚುನಾವಣಾ ಆಯೋಗದವರು ಆಟೋ ಚಾಲಕರಿಗೆ ಬಾಯಿ ಮಾತಲ್ಲಿ ತಿಳುವಳಿಕೆ ಹೇಳಲಿ. ಆದರೆ, ಮೂರು ನಾಲ್ಕು ದಿನಗಳವರೆಗೆ ಆಟೋವನ್ನು ಮುಟ್ಟುಗೋಲು ಹಾಕಿಕೊಳ್ಳುವುದು ಏಕೆ? ಪೆಟ್ರೋಲ್, ಡೀಸೆಲ್ ಹಾಗೂ ಗ್ಯಾಸ್ ಬೆಲೆ ಏರಿಕೆಯಿಂದ ಅವರ ಬದುಕಿನ ಮೇಲೆ ಈಗಾಗಲೇ ಬರೆ ಬಿದ್ದಿದೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಕರಗಕ್ಕೆ ಕರಗಿದ ಬಿಬಿಎಂಪಿ ಅನುದಾನ
“ಆಟೋ ಚಾಲಕರನ್ನು ಬಳಸಿಕೊಳ್ಳುತ್ತಿರುವ ಬೇರೆ ಪಕ್ಷದವರು ಅವರ ರಕ್ಷಣೆಗೆ ಬರುತ್ತಿಲ್ಲ. ಆಟೋ ಚಾಲಕರು ಯಾವುದೇ ಪಕ್ಷದ ಪರವಾಗಿ ಬೇಕಾದರೂ ಪ್ರಚಾರ ಮಾಡಲಿ. ಅವರಿಗೆ ಈ ರೀತಿ ಕಿರುಕುಳ ನೀಡಿದರೆ, ಅವರ ಪರವಾಗಿ ನಾವು ನಿಲ್ಲುತ್ತೇವೆ. ನಮ್ಮ ಸಮಾಜಕ್ಕೆ ಸೇವೆ ಸಲ್ಲಿಸುತ್ತಿರುವ ಆಟೋ ಚಾಲಕರು ಧೈರ್ಯವಾಗಿರಬೇಕು. ತಮ್ಮ ಹಕ್ಕು, ವಿಚಾರವನ್ನು ಅವರು ವ್ಯಕ್ತಪಡಿಸುತ್ತಿದ್ದಾರೆ. ಈ ಬಗ್ಗೆ ಪೊಲೀಸ್ ಆಯುಕ್ತರು ಹಾಗೂ ಚುನಾವಣಾ ಆಯೋಗಕ್ಕೆ ಪತ್ರ ಬರೆದು ಇದಕ್ಕೆ ನಿರ್ಬಂಧ ಹೇರುವ ಕಾನೂನು ಇಲ್ಲ, ಹೀಗಾಗಿ, ಆಟೋ ಚಾಲಕರಿಗೆ ಕಿರುಕುಳ ನೀಡಬಾರದು” ಎಂದರು.