ಬ್ಯಾಟಿಂಗ್ ವಿಭಾಗದಲ್ಲಿ ನಾವು ಖಂಡಿತವಾಗಿಯೂ 20 ರನ್‌ಗಳನ್ನು ಕಡಿಮೆ ಗಳಿಸಿದೆವು. ಈ ಆವೃತ್ತಿಯುದ್ದಕ್ಕೂ ನಮ್ಮ ಫೀಲ್ಡಿಂಗ್ ಕೂಡ ಅತ್ಯಂತ ಕಳಪೆ ಮಟ್ಟದಲ್ಲಿತ್ತು. ನಾವು ಹಲವು ಕ್ಯಾಚ್‌ಗಳನ್ನು ಕೈಚೆಲ್ಲಿದೆವು...
ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಅವರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ವಿರುದ್ಧ ನಡೆದ ಪಂದ್ಯದಲ್ಲಿ ಸೋಲುಂಡ ನಂತರ, ಐಪಿಎಲ್ ನೀತಿಸಂಹಿತೆ ಉಲ್ಲಂಘಿಸಿದ್ದಕ್ಕಾಗಿ ಅವರಿಗೆ ದಂಡ ವಿಧಿಸಲಾಗಿದೆ. ಮುಂಬೈ ಇಂಡಿಯನ್ಸ್ ತಂಡವು ಈ ಆವೃತ್ತಿಯಲ್ಲಿ ನಿರಾಶಾದಾಯಕ ಪ್ರದರ್ಶನ ನೀಡುತ್ತಿದ್ದು, ಇದು ನಾಯಕನಿಗೆ ಎದುರಾದ ಇನ್ನೊಂದು ಹಿನ್ನಡೆಯಾಗಿದೆ.
ಐಪಿಎಲ್ ಅಧಿಕೃತ ಹೇಳಿಕೆಯ ಪ್ರಕಾರ, ಪಾಂಡ್ಯ ಅವರು ಕ್ರಿಕೆಟ್ ಉಪಕರಣಗಳು ಹಾಗೂ ಮೈದಾನದ ಸಾಧನ-ಸಲಕರಣೆಗಳನ್ನು ದುರ್ಬಳಕೆ ಮಾಡಿದ ನೀತಿಸಂಹಿತೆಯ ಹಂತ 1(Level 1)ರ ನಿಯಮವನ್ನು ಉಲ್ಲಂಘಿಸಿದ್ದಾರೆ. ಕೆಕೆಆರ್ ತಂಡದ ರನ್ ಚೇಸ್‌ನ 10ನೇ ಓವರ್‌ನ 4ನೇ ಎಸೆತದ ನಂತರ, ಹಾರ್ದಿಕ್ ಪಾಂಡ್ಯ ಅವರು ತಮ್ಮ ರನ್-ಅಪ್‌ಗೆ ಹಿಂತಿರುಗುವಾಗ ಕೋಪದಿಂದ ಸ್ಟಂಪ್ ಮೇಲಿದ್ದ ಬೇಲ್ಸ್‌ಗಳನ್ನು ಬಲವಾಗಿ ಹೊಡೆದು ಉರುಳಿಸಿದ್ದರು. ಇದು ಐಪಿಎಲ್ ನೀತಿಸಂಹಿತೆಯ ‘ಆರ್ಟಿಕಲ್ 2.2′(Article 2.2)ರ ಉಲ್ಲಂಘನೆಯಾಗಿದೆ.
ಮ್ಯಾಚ್ ರೆಫರಿ ರಾಜೀವ್ ಸೇಥ್ ಅವರು ವಿಧಿಸಿದ ಶಿಕ್ಷೆಯನ್ನು ಹಾಗೂ ತಮ್ಮ ತಪ್ಪನ್ನು ಹಾರ್ದಿಕ್ ಪಾಂಡ್ಯ ಒಪ್ಪಿಕೊಂಡಿದ್ದಾರೆ. ದಂಡ ಮಾತ್ರವಲ್ಲದೆ, ಪಾಂಡ್ಯರಿಗೆ ಒಂದು ‘ಡಿಮೆರಿಟ್ ಪಾಯಿಂಟ್’ ಕೂಡ ನೀಡಲಾಗಿದೆ. ಐಪಿಎಲ್‌ನಲ್ಲಿ ನಾಲ್ಕರಿಂದ ಏಳು (4 ರಿಂದ 7) ಡಿಮೆರಿಟ್ ಪಾಯಿಂಟ್‌ಗಳನ್ನು ಪಡೆದರೆ, ಅದು ಒಂದು ಪಂದ್ಯದ ಅಮಾನತ್ತಿಗೆ ಕಾರಣವಾಗಬಹುದಾಗಿದೆ.
ಇದನ್ನು ಓದಿದ್ದೀರಾ? BCCI ಸರ್ಕಾರಿ ಸಂಸ್ಥೆಯಲ್ಲ, RTI ವ್ಯಾಪ್ತಿಗೆ ಬರುವುದಿಲ್ಲ: ಕೇಂದ್ರ ಮಾಹಿತಿ ಆಯೋಗ ತೀರ್ಪು
ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ ಕೇವಲ 147/8 ರನ್‌ಗಳ ಸಾಧಾರಣ ಮೊತ್ತ ಕಲೆಹಾಕಿತ್ತು. ಗುರಿ ಬೆನ್ನಟ್ಟಿದ ಕೆಕೆಆರ್, ಇನ್ನು 7 ಬಾಲ್‌ಗಳು ಬಾಕಿ ಇರುವಂತೆಯೇ ಜಯ ಸಾಧಿಸಿತು. ಈ ಸೋಲಿನ ನಂತರ ತಮ್ಮ ನಿರಾಶೆ ವ್ಯಕ್ತಪಡಿಸಿದ ಪಾಂಡ್ಯ, “ಬ್ಯಾಟಿಂಗ್ ವಿಭಾಗದಲ್ಲಿ ನಾವು ಖಂಡಿತವಾಗಿಯೂ 20 ರನ್‌ಗಳನ್ನು ಕಡಿಮೆ ಗಳಿಸಿದೆವು. ಈ ಆವೃತ್ತಿಯುದ್ದಕ್ಕೂ ನಮ್ಮ ಫೀಲ್ಡಿಂಗ್ ಕೂಡ ಅತ್ಯಂತ ಕಳಪೆ ಮಟ್ಟದಲ್ಲಿತ್ತು. ನಾವು ಹಲವು ಕ್ಯಾಚ್‌ಗಳನ್ನು ಕೈಚೆಲ್ಲಿದೆವು” ಎಂದು ಹೇಳಿದ್ದಾರೆ.
ಪ್ಲೇಆಫ್ ಹಂತದಿಂದ ಈಗಾಗಲೇ ಹೊರಬಿದ್ದಿರುವ ಮುಂಬೈ ಇಂಡಿಯನ್ಸ್ ತಂಡವು, ಈ ಆವೃತ್ತಿಯಲ್ಲಿ ಕೇವಲ 4 ಪಂದ್ಯಗಳಲ್ಲಿ ಮಾತ್ರ ಜಯ ಗಳಿಸಿದೆ. ತಮ್ಮ ಅಂತಿಮ ಲೀಗ್ ಪಂದ್ಯದಲ್ಲಿ ಅವರು ರಾಜಸ್ಥಾನ್ ರಾಯಲ್ಸ್ ತಂಡವನ್ನು ಎದುರಿಸಲಿದ್ದಾರೆ.




