ಉತ್ತರ ಕನ್ನಡ ಜಿಲ್ಲೆಯ ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ಪುನರ್‌ವಿಂಗಡಣೆ ಮತ್ತೊಮ್ಮೆ ಚರ್ಚೆಗೆ ಗ್ರಾಸವಾಗಿದೆ. 39 ಕ್ಷೇತ್ರಗಳಿಂದ 54ಕ್ಕೆ ಏರಿಕೆಯಾಗಿದ್ದ ಸಂಖ್ಯೆಯನ್ನು ಇದೀಗ 53ಕ್ಕೆ ಇಳಿಸಿರುವ ಅಂತಿಮ ಅಧಿಸೂಚನೆ ಹೊರಬಿದ್ದಿದ್ದು, ಈ ಬದಲಾವಣೆಯ ಹಿಂದಿರುವ ಆಡಳಿತಾತ್ಮಕ ಹಾಗೂ ರಾಜಕೀಯ ಪರಿಣಾಮಗಳ ಬಗ್ಗೆ ಸಾರ್ವಜನಿಕ ವಲಯದಲ್ಲಿ ಚರ್ಚೆಗಳು ಗರಿಗೆದರುತ್ತಿವೆ.
ಈ ಇಳಿಕೆಯ ಮೂಲ ಕಾರಣ ಭಟ್ಕಳ ಪ್ರದೇಶದ ಆಡಳಿತಾತ್ಮಕ ಬದಲಾವಣೆ. ನಗರಸಭೆಯಾಗಿ ಮೇಲ್ದರ್ಜೆಗೇರಿದ ಹಿನ್ನೆಲೆ, ಅದರ ವ್ಯಾಪ್ತಿಗೆ ಸೇರಿದ ಒಂದು ಗ್ರಾಮೀಣ ಜಿಲ್ಲಾ ಪಂಚಾಯಿತಿ ಕ್ಷೇತ್ರವನ್ನು ಕೈಬಿಡಲಾಗಿದೆ. ಇದರಿಂದ ಒಟ್ಟು ಕ್ಷೇತ್ರಗಳ ಸಂಖ್ಯೆ ಒಂದರಷ್ಟು ಕಡಿಮೆಯಾಗಿದೆ.
ಗ್ರಾಮೀಣ ಪ್ರದೇಶಗಳನ್ನು ನಗರ ಆಡಳಿತಕ್ಕೆ ಸೇರಿಸುವ ಪ್ರಕ್ರಿಯೆ ಅಭಿವೃದ್ಧಿಯ ಸೂಚಕವಾದರೂ, ಗ್ರಾಮೀಣ ಜನರ ಪ್ರತಿನಿಧಿತ್ವ ಕಡಿಮೆಯಾಗುವ ಆತಂಕವನ್ನು ಕೆಲವರು ವ್ಯಕ್ತಪಡಿಸುತ್ತಿದ್ದಾರೆ.
ಜಿಲ್ಲೆಯಲ್ಲಿ ಕ್ಷೇತ್ರಗಳ ಪುನರ್‌ವಿಂಗಡಣೆ ಪ್ರಕ್ರಿಯೆ ಕಳೆದ ಕೆಲವು ವರ್ಷಗಳಿಂದ ಹಂತ ಹಂತವಾಗಿ ನಡೆದಿದೆ. 2015ರಲ್ಲಿ ಇದ್ದ 39 ಕ್ಷೇತ್ರಗಳನ್ನು 2024ರಲ್ಲಿ ಪುನರ್‌ವಿಂಗಡಿಸಿ 54ಕ್ಕೆ ಹೆಚ್ಚಿಸಲಾಗಿತ್ತು. ಈ ವೇಳೆ ಸಾರ್ವಜನಿಕರಿಂದ ಆಕ್ಷೇಪಣೆಗಳಿಗೆ ಅವಕಾಶ ನೀಡಲಾಗಿದ್ದರೂ, ಮಹತ್ವದ ವಿರೋಧ ವ್ಯಕ್ತವಾಗದೆ ಕರಡು ಅಧಿಸೂಚನೆ ಅಂತಿಮಗೊಂಡಿತ್ತು.

ಆದರೆ, ನಂತರ ಭಟ್ಕಳ ನಗರ ವಿಸ್ತರಣೆ ಹಿನ್ನೆಲೆಯಲ್ಲಿ ಒಂದು ಕ್ಷೇತ್ರವನ್ನು ಕೈಬಿಡುವ ಪ್ರಸ್ತಾವ ಮೂಡಿ ಬಂದಿದೆ. ಈ ಪ್ರಸ್ತಾವನೆಗೆ ಅನುಗುಣವಾಗಿ ಇದೀಗ ಅಂತಿಮ ಅಧಿಸೂಚನೆ ಪ್ರಕಟವಾಗಿದೆ.
ತಾಲೂಕುವಾರು ಕ್ಷೇತ್ರಗಳ ಹಂಚಿಕೆ ಗಮನಿಸಿದರೆ, ಕಾರವಾರ ಮತ್ತು ಅಂಕೋಲಾ ತಲಾ 5 ಕ್ಷೇತ್ರಗಳನ್ನು ಹೊಂದಿದ್ದರೆ, ಕುಮಟಾ 6, ಹೊನ್ನಾವರ 7, ಭಟ್ಕಳ 5, ಶಿರಸಿ 6, ಸಿದ್ದಾಪುರ 4, ಯಲ್ಲಾಪುರ 3, ಮುಂಡಗೋಡ 4, ಹಳಿಯಾಳ 4, ಜೊಯಿಡಾ 3 ಹಾಗೂ ದಾಂಡೇಲಿ 1 ಕ್ಷೇತ್ರವನ್ನು ಹೊಂದಿವೆ.
ಹೋಲಿಕೆ ಮಾಡಿದರೆ 2015ರಲ್ಲಿದ್ದ ಬಹುತೇಕ ಎಲ್ಲ ತಾಲೂಕುಗಳಲ್ಲಿ ಕ್ಷೇತ್ರಗಳ ಸಂಖ್ಯೆ ಹೆಚ್ಚಳ ಕಂಡಿದ್ದರೂ, ಈಗಿನ ಇಳಿಕೆಯಿಂದ ಒಟ್ಟಾರೆ ಸಮತೋಲನದ ಬಗ್ಗೆ ಪ್ರಶ್ನೆಗಳು ಉದ್ಭವಿಸುತ್ತಿವೆ. ಹೊಸ ಕ್ಷೇತ್ರಗಳ ವಿನ್ಯಾಸದಲ್ಲೂ ಗಮನಾರ್ಹ ಬದಲಾವಣೆ ಕಂಡುಬಂದಿದೆ.
ಜೊಯಿಡಾ, ದಾಂಡೇಲಿ, ಹಳಿಯಾಳ, ಕಾರವಾರ, ಯಲ್ಲಾಪುರ, ಮುಂಡಗೋಡ, ಅಂಕೋಲಾ, ಶಿರಸಿ, ಕುಮಟಾ, ಸಿದ್ದಾಪುರ, ಹೊನ್ನಾವರ ಹಾಗೂ ಭಟ್ಕಳ ತಾಲೂಕುಗಳಲ್ಲಿ ಹಲವು ಹೊಸ ಕ್ಷೇತ್ರಗಳನ್ನು ರೂಪಿಸಲಾಗಿದೆ. ಈ ಪುನರ್‌ವಿಂಗಡಣೆ ಸ್ಥಳೀಯ ಆಡಳಿತಕ್ಕೆ ಸಮೀಪಿಕರಣ ನೀಡುವ ಉದ್ದೇಶ ಹೊಂದಿದ್ದರೂ, ಸ್ಥಳೀಯ ರಾಜಕೀಯ ಸಮೀಕರಣಗಳ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ.
ಇನ್ನೊಂದೆಡೆ, ಜಿಲ್ಲಾ ಪಂಚಾಯಿತಿಯ ಆಡಳಿತ ವ್ಯವಸ್ಥೆಯಲ್ಲಿನ ವಿಳಂಬವೂ ಪ್ರಶ್ನಾರ್ಹವಾಗಿದೆ. 2021ರ ಏಪ್ರಿಲ್‌ನಲ್ಲೇ ಹಿಂದಿನ ಆಡಳಿತ ಮಂಡಳಿಯ ಅವಧಿ ಮುಕ್ತಾಯಗೊಂಡಿದ್ದರೂ, ಐದು ವರ್ಷ ಕಳೆದರೂ ಹೊಸ ಚುನಾಯಿತ ಪ್ರತಿನಿಧಿಗಳು ಅಧಿಕಾರಕ್ಕೆ ಬಂದಿಲ್ಲ. ಇದರಿಂದ ಜಿಲ್ಲಾ ಪಂಚಾಯಿತಿ ಪ್ರಸ್ತುತ ಆಡಳಿತಾಧಿಕಾರಿಗಳ ಮೂಲಕವೇ ಕಾರ್ಯನಿರ್ವಹಿಸುತ್ತಿದೆ.
ಜನಪ್ರತಿನಿಧಿಗಳ ಕೊರತೆಯಿಂದ ಸ್ಥಳೀಯ ಸಮಸ್ಯೆಗಳ ಪರಿಹಾರದಲ್ಲಿ ವಿಳಂಬವಾಗುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿವೆ. ಪುನರ್‌ವಿಂಗಡಣೆ ಹಾಗೂ ಮೀಸಲಾತಿ ಹಂಚಿಕೆ ಪ್ರಕ್ರಿಯೆಗಳಲ್ಲಿ ವಿಳಂಬವಾಗುತ್ತಿರುವುದರಿಂದಲೇ ಚುನಾವಣೆ ನಡೆಯುತ್ತಿಲ್ಲ ಎಂಬ ಟೀಕೆಗಳೂ ವ್ಯಕ್ತವಾಗುತ್ತಿವೆ. ಜನಪ್ರತಿನಿಧಿಗಳಿಲ್ಲದ ಆಡಳಿತ ವ್ಯವಸ್ಥೆ ಪ್ರಜಾಪ್ರಭುತ್ವದ ಆತ್ಮಕ್ಕೆ ವಿರುದ್ಧ ಎಂಬ ಅಭಿಪ್ರಾಯಗಳು ಕೂಡ ಕೇಳಿಬರುತ್ತಿವೆ.

ಒಟ್ಟಾರೆ ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ಸಂಖ್ಯೆಯಲ್ಲಿ ಕಂಡುಬಂದ ಇಳಿಕೆ ಕೇವಲ ಸಂಖ್ಯಾತ್ಮಕ ಬದಲಾವಣೆ ಮಾತ್ರವಲ್ಲ, ಇದು ಗ್ರಾಮೀಣ ಪ್ರತಿನಿಧಿತ್ವ, ಸ್ಥಳೀಯ ಆಡಳಿತದ ದಿಕ್ಕು ಹಾಗೂ ರಾಜಕೀಯ ಸಮತೋಲನದ ಮೇಲೆ ಪರಿಣಾಮ ಬೀರುವ ಮಹತ್ವದ ಬೆಳವಣಿಗೆಯಾಗಿ ಕಾಣಿಸಿಕೊಂಡಿದೆ. ಮುಂದಿನ ದಿನಗಳಲ್ಲಿ ಈ ಬದಲಾವಣೆಗಳ ಪರಿಣಾಮ ಹೇಗೆ ಹೊರಹೊಮ್ಮುತ್ತದೆ ಎಂಬುದರ ಮೇಲೆ ಜಿಲ್ಲೆಯ ರಾಜಕೀಯ ಮತ್ತು ಆಡಳಿತದ ದಿಕ್ಕು ನಿರ್ಧಾರವಾಗಲಿದೆ.
“ಹೊನ್ನಾವರ ತಾಲೂಕಿನಲ್ಲಿ ಕ್ಷೇತ್ರಗಳ ಸಂಖ್ಯೆ 7ಕ್ಕೆ ಏರಿಕೆಯಾಗಿರುವುದು ಸ್ವಾಗತಾರ್ಹ. ಕ್ಷೇತ್ರಗಳು ಚಿಕ್ಕದಾದಷ್ಟೂ ಜನಸಾಮಾನ್ಯರ ಸಮಸ್ಯೆಗಳಿಗೆ ಶೀಘ್ರವಾಗಿ ಸ್ಪಂದಿಸಲು ಸಾಧ್ಯವಾಗುತ್ತದೆ. ಆದರೆ, ಕೇವಲ ಕಾಗದದ ಮೇಲೆ ಕ್ಷೇತ್ರಗಳನ್ನು ಹೆಚ್ಚಿಸಿದರೆ ಸಾಲದು, ತಕ್ಷಣವೇ ಚುನಾವಣೆ ನಡೆಸಿ ಜನಪ್ರತಿನಿಧಿಗಳ ಕೈಗೆ ಅಧಿಕಾರ ನೀಡಬೇಕು. 5 ವರ್ಷಗಳಿಂದ ಆಡಳಿತಾಧಿಕಾರಿಗಳ ಕೈಯಲ್ಲಿ ಸಿಲುಕಿ ಗ್ರಾಮೀಣ ಭಾಗದ ನೈಜ ಸಮಸ್ಯೆಗಳು ಮೂಲೆಗುಂಪಾಗಿವೆ” ಎನ್ನುತ್ತಾರೆ ಹೊನ್ನಾವರ ಸ್ಥಳೀಯ ರಾಘವೇಂದ್ರ ನಾಯಕ.
ಬನವಾಸಿಯ ಸುಮನ್ ಹೆಗಡೆ ಮಾತನಾಡಿ, “ಬನವಾಸಿ, ಸೋಂದಾದಂತಹ ಪ್ರಮುಖ ಭಾಗಗಳು ಪ್ರತ್ಯೇಕ ಕ್ಷೇತ್ರಗಳಾಗಿ ಗುರುತಿಸಿಕೊಂಡಿರುವುದು ಒಳ್ಳೆಯ ನಿರ್ಧಾರ. ಇದರಿಂದ ಮಲೆನಾಡಿನ ಗ್ರಾಮೀಣ ಭಾಗದ ರಸ್ತೆ, ಕುಡಿಯುವ ನೀರು ಮತ್ತು ಕೃಷಿ ಸಂಬಂಧಿತ ಸಮಸ್ಯೆಗಳಿಗೆ ಹೆಚ್ಚಿನ ಅನುದಾನ ಸಿಗುವ ನಿರೀಕ್ಷೆ ಇದೆ. ಸರ್ಕಾರ ಇನ್ನು ಮುಂದೆಯಾದರೂ ವಿಳಂಬ ಮಾಡದೇ ಮೀಸಲಾತಿ ಪಟ್ಟಿಯನ್ನು ಬಿಡುಗಡೆ ಮಾಡಿ ಚುನಾವಣಾ ಪ್ರಕ್ರಿಯೆಗೆ ಚಾಲನೆ ನೀಡಬೇಕು” ಎಂದರು.
ಸಾಮಾಜಿಕ ಕಾರ್ಯಕರ್ತ ಕಲ್ಲಪ್ಪ ಕಾದ್ರೋಳ್ಳಿ, “ದಾಂಡೇಲಿಗೆ ಒಂದು ಪ್ರತ್ಯೇಕ ಕ್ಷೇತ್ರ ಸಿಕ್ಕಿರುವುದು ಹಾಗೂ ಕಾರವಾರದಲ್ಲಿ ಸ್ಥಾನಗಳು ಹೆಚ್ಚಿರುವುದು ಭೌಗೋಳಿಕವಾಗಿ ಸರಿಯಾದ ಕ್ರಮ. ಆದರೆ, ಐದು ವರ್ಷಗಳಿಂದ ಜಿಲ್ಲಾ ಪಂಚಾಯತ್‌ನಲ್ಲಿ ಜನಪ್ರತಿನಿಧಿಗಳೇ ಇಲ್ಲದಿರುವುದು ಪ್ರಜಾಪ್ರಭುತ್ವಕ್ಕೆ ಮಾರಕ. ಶಾಸಕರು ಕೇವಲ ತಾಲೂಕು ಕೇಂದ್ರಗಳಿಗೆ ಸೀಮಿತವಾಗುತ್ತಾರೆ, ಆದರೆ ಹಳ್ಳಿ ಹಳ್ಳಿಗಳ ಅಭಿವೃದ್ಧಿಗೆ ಜಿಪಂ ಸದಸ್ಯರೇ ಬೇಕು. ಆಡಳಿತ ಯಂತ್ರದ ಜಡತ್ವ ದೂರಾಗಬೇಕಾದರೆ ಚುನಾವಣೆ ಒಂದೇ ದಾರಿ. ಸರ್ಕಾರ ಕೂಡಲೇ ಇತ್ತ ಗಮನಹರಿಸಬೇಕು” ಎಂದರು.
ಇದನ್ನೂ ಓದಿ: ಉತ್ತರ ಕನ್ನಡ | ನೀರಿನ ಸಮಸ್ಯೆ ಗ್ರಾಮಗಳಿಗೆ ಶಾಶ್ವತ ಪರಿಹಾರ ಕಲ್ಪಿಸಿ: ಅಧಿಕಾರಿಗಳಿಗೆ ಕಾಗೇರಿ ಸೂಚನೆ

“ಭಟ್ಕಳ ನಗರಸಭೆಯಾಗಿ ಮೇಲ್ದರ್ಜೆಗೇರಿದ ಕಾರಣ ಒಂದು ಜಿಪಂ ಕ್ಷೇತ್ರ ಕಡಿಮೆಯಾಗುವುದು ಅನಿವಾರ್ಯ. ಆದರೆ, ನಗರದ ಸೌಲಭ್ಯಗಳು ಗ್ರಾಮೀಣ ಭಾಗಕ್ಕೂ ವಿಸ್ತರಣೆಯಾಗುವಂತೆ ಹೊಸ ಸೀಮಾ ನಿರ್ಣಯ ಇರಬೇಕು. ಸದ್ಯದ ಪರಿಸ್ಥಿತಿಯಲ್ಲಿ ಅಧಿಕಾರಿಗಳ ದರ್ಬಾರ್ ಹೆಚ್ಚಾಗಿದ್ದು, ಸಾಮಾನ್ಯ ಜನರು ತಮ್ಮ ಕೆಲಸಗಳಿಗಾಗಿ ಜಿಲ್ಲಾ ಕೇಂದ್ರಕ್ಕೆ ಅಲೆಯುವಂತಾಗಿದೆ” ಎಂದು ಅಸಮಾಧಾನ ಹೊರಹಾಕಿದರು ಭಟ್ಕಳದ ಮಹೇಶ್ ಗೌಡ.
ಒಟ್ಟಿನಲ್ಲಿ ನಗರ ವಿಸ್ತರಣೆ ಪರಿಣಾಮವಾಗಿ ಕ್ಷೇತ್ರಗಳ ಸಂಖ್ಯೆ ಕಡಿಮೆಯಾಗಿರುವುದು ಸಹಜವೇ. ಕ್ಷೇತ್ರಗಳ ಗಾತ್ರ ಚಿಕ್ಕದಾಗಿರುವುದರಿಂದ ಸ್ಥಳೀಯ ಸಮಸ್ಯೆಗಳಿಗೆ ಶೀಘ್ರವಾಗಿ ಸ್ಪಂದಿಸಲು ಸಾಧ್ಯವಾಗುತ್ತದೆ ಎಂಬ ಸಕಾರಾತ್ಮಕ ಆಶಾವಾದ ಸಾರ್ವಜನಿಕರಲ್ಲಿದೆ. ಆದರೀಗ ಪ್ರಶ್ನೆ ಎದುರಾಗಿರುವುದು ಆಡಳಿತ ನಡೆಸುವವರಾರು ಎಂದು. ಕೇವಲ ಆಡಳಿತಾಧಿಕಾರಿಗಳ ಮೂಲಕವೇ ವ್ಯವಸ್ಥೆ ನಡೆಯುತ್ತಿದೆ. ಜನಪ್ರತಿನಿಧಿಗಳೇ ಇಲ್ಲದೇ ಕ್ಷೇತ್ರ ಮರುವಿಂಗಡಣೆ ಮಾಡಿ ಪ್ರಯೋಜನವಿಲ್ಲ. ಈ ನಿಟ್ಟಿನಲ್ಲಿ ಕೂಡಲೇ ಎಚ್ಚೆತ್ತು ವಿಳಂಬ ಮಾಡದೇ ಸರ್ಕಾರ ಚುನಾವಣೆ ನಡೆಸಬೇಕಿದೆ. ಜನಪ್ರತಿನಿಧಿಗಳ ಕೈಗೆ ಅಧಿಕಾರ ಮರಳಿದಾಗ ಮಾತ್ರ ಈ ಹೊಸ ಸೀಮಾ ನಿರ್ಣಯ ಮತ್ತು ವಿಕೇಂದ್ರೀಕರಣದ ನಿಜವಾದ ಸೌಲಭ್ಯ ಜನಸಾಮಾನ್ಯರಿಗೆ ತಲುಪಲು ಸಾಧ್ಯ.



