ಫುಟ್ಬಾಲ್ ಇತಿಹಾಸದಲ್ಲಿ ಕೆಲವು ಹೆಸರುಗಳು ಕೇವಲ ಆಟಗಾರರದ್ದಲ್ಲ, ಒಂದು ಯುಗದ ಸಂಕೇತಗಳಾಗಿವೆ. ಬ್ರೆಜಿಲ್‌ನ ಪೆಲೆ, ಅರ್ಜೆಂಟೀನಾದ ಡಿಯಾಗೊ ಮರಡೋನಾ, ಪೋರ್ಚುಗಲ್‌ನ ಕ್ರಿಸ್ಟಿಯಾನೊ ರೊನಾಲ್ಡೊ ಹಾಗೂ ಅರ್ಜೆಂಟೀನಾದ ಲಿಯೊನೆಲ್ ಮೆಸ್ಸಿ ತಮ್ಮ ಅಸಾಧಾರಣ ಪ್ರತಿಭೆ, ದಾಖಲೆಗಳು ಮತ್ತು ಸಾಧನೆಗಳ ಮೂಲಕ ವಿಶ್ವದ ಕೋಟ್ಯಂತರ ಅಭಿಮಾನಿಗಳ ಮನಸ್ಸಿನಲ್ಲಿ ಶಾಶ್ವತ ಸ್ಥಾನ ಪಡೆದಿದ್ದಾರೆ. ಇವರ ನಡುವಿನ ಶ್ರೇಷ್ಠತೆಯ ಚರ್ಚೆ ಇಂದಿಗೂ ಫುಟ್ಬಾಲ್ ಪ್ರೇಮಿಗಳ ನೆಚ್ಚಿನ ವಿಷಯವಾಗಿದೆ.
ಪೆಲೆ ಅವರನ್ನು ವಿಶ್ವ ಫುಟ್ಬಾಲ್‌ನ ಮೊದಲ ಮಹಾನ್ ಸೂಪರ್‌ಸ್ಟಾರ್ ಎಂದು ಕರೆಯಲಾಗುತ್ತದೆ. ಕೇವಲ 17ನೇ ವಯಸ್ಸಿನಲ್ಲಿ ವಿಶ್ವಕಪ್ ಗೆದ್ದ ಅವರು ಮೂರು ವಿಶ್ವಕಪ್‌ಗಳನ್ನು ಜಯಿಸಿದ ಏಕೈಕ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಗೋಲುಗಳ ಸುರಿಮಳೆಗೈದ ಪೆಲೆ, ಫುಟ್ಬಾಲ್ ಅನ್ನು ಜಾಗತಿಕ ಮಟ್ಟದಲ್ಲಿ ಜನಪ್ರಿಯಗೊಳಿಸುವಲ್ಲಿ ಮಹತ್ವದ ಪಾತ್ರ ವಹಿಸಿದರು. ಅವರ ಆಟದ ಶೈಲಿ ಮುಂದಿನ ಪೀಳಿಗೆಗೆ ಮಾದರಿಯಾಯಿತು.
ಮರಡೋನಾ ಎಂದರೆ ಅಸಾಮಾನ್ಯ ಕೌಶಲ್ಯದ ಪ್ರತೀಕ. 1986ರ ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಗಳಿಸಿದ ‘ಹ್ಯಾಂಡ್ ಆಫ್ ಗಾಡ್’ ಗೋಲು ಹಾಗೂ ಅದೇ ಪಂದ್ಯದಲ್ಲಿ ಹಲವು ಆಟಗಾರರನ್ನು ಮಣಿಸಿ ದಾಖಲಿಸಿದ ‘ಗೋಲ್ ಆಫ್ ದ ಸೆಂಚುರಿ’ ಇಂದಿಗೂ ಫುಟ್ಬಾಲ್ ಇತಿಹಾಸದ ಅತ್ಯಂತ ಚರ್ಚಿತ ಕ್ಷಣಗಳಾಗಿವೆ. ವಿವಾದಗಳ ನಡುವೆಯೂ ಅರ್ಜೆಂಟೀನಾಕ್ಕೆ ವಿಶ್ವಕಪ್ ತಂದುಕೊಟ್ಟ ನಾಯಕನಾಗಿ ಅವರು ಅಮರರಾಗಿದ್ದಾರೆ.
ಆಧುನಿಕ ಫುಟ್ಬಾಲ್‌ನಲ್ಲಿ ಕ್ರಿಸ್ಟಿಯಾನೊ ರೊನಾಲ್ಡೊ ಮತ್ತು ಲಿಯೊನೆಲ್ ಮೆಸ್ಸಿ ಹೊಸ ಮಾನದಂಡಗಳನ್ನು ನಿರ್ಮಿಸಿದ್ದಾರೆ. ರೊನಾಲ್ಡೊ ಅವರ ದೈಹಿಕ ಸಾಮರ್ಥ್ಯ, ಶಿಸ್ತು, ಗೋಲು ಗಳಿಸುವ ಹಂಬಲ ಹಾಗೂ ಹಲವು ದೇಶಗಳ ಲೀಗ್‌ಗಳಲ್ಲಿ ಮೆರೆದ ಸಾಧನೆ ವಿಶಿಷ್ಟವಾಗಿದೆ. ಮತ್ತೊಂದೆಡೆ ಮೆಸ್ಸಿಯ ಅದ್ಭುತ ಡ್ರಿಬ್ಲಿಂಗ್, ನಿಖರ ಪಾಸ್‌ಗಳು ಮತ್ತು ಸೃಜನಶೀಲ ಆಟದ ಮೂಲಕ ಅಭಿಮಾನಿಗಳನ್ನು ಮಂತ್ರಮುಗ್ಧರನ್ನಾಗಿಸಿದ್ದಾರೆ. 2022ರ ವಿಶ್ವಕಪ್ ಗೆಲುವಿನೊಂದಿಗೆ ಮೆಸ್ಸಿ ತಮ್ಮ ವೃತ್ತಿಜೀವನದ ಬಹುದೊಡ್ಡ ಕನಸನ್ನು ನನಸಾಗಿಸಿಕೊಂಡರು.
ಈ ನಾಲ್ವರು ಆಟಗಾರರು ವಿಭಿನ್ನ ಕಾಲಘಟ್ಟಗಳಲ್ಲಿ ಫುಟ್ಬಾಲ್‌ಗೆ ಹೊಸ ಅರ್ಥ ನೀಡಿದ್ದಾರೆ. ಪೆಲೆ ಆಟವನ್ನು ವಿಶ್ವದ ಮೂಲೆಮೂಲೆಗೂ ತಲುಪಿಸಿದರೆ, ಮರಡೋನಾ ಅದಕ್ಕೆ ಭಾವೋದ್ವೇಗದ ಸ್ಪರ್ಶ ನೀಡಿದರು. ರೊನಾಲ್ಡೊ ಪರಿಶ್ರಮದ ಪ್ರತೀಕವಾಗಿ ಹೊರಹೊಮ್ಮಿದರೆ, ಮೆಸ್ಸಿ ಸಹಜ ಪ್ರತಿಭೆಯ ಪರಮಾವಧಿಯನ್ನು ತೋರಿಸಿದರು. ದಾಖಲೆಗಳು ಬದಲಾಗಬಹುದು, ಹೊಸ ತಾರೆಗಳು ಮೂಡಿಬರಬಹುದು; ಆದರೆ ಈ ನಾಲ್ವರು ದಿಗ್ಗಜರ ಹೆಸರುಗಳು ಫುಟ್ಬಾಲ್ ಇತಿಹಾಸದಲ್ಲಿ ಸದಾ ಚಿನ್ನದ ಅಕ್ಷರಗಳಲ್ಲಿ ಉಳಿಯಲಿವೆ.
ಗೋಲುಗಳ ಸಂಖ್ಯೆಯಲ್ಲೂ ಈ ನಾಲ್ವರು ಫುಟ್ಬಾಲ್ ದಂತಕಥೆಗಳು ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಪೆಲೆ ತಮ್ಮ ವೃತ್ತಿಜೀವನದಲ್ಲಿ ಅಧಿಕೃತ ಪಂದ್ಯಗಳಲ್ಲಿ 757 ಗೋಲುಗಳನ್ನು ದಾಖಲಿಸಿದ್ದು, ಬ್ರೆಜಿಲ್‌ಗೆ ಮೂರು ಫಿಫಾ ವಿಶ್ವಕಪ್‌ಗಳನ್ನು (1958, 1962, 1970) ಗೆದ್ದ ಏಕೈಕ ಆಟಗಾರ ಎಂಬ ಹೆಗ್ಗಳಿಕೆ ಹೊಂದಿದ್ದಾರೆ. ಡಿಯಾಗೊ ಮರಡೋನಾ ಅಧಿಕೃತವಾಗಿ 345 ಗೋಲುಗಳನ್ನು ಗಳಿಸಿದ್ದು, 1986ರ ಫಿಫಾ ವಿಶ್ವಕಪ್‌ನಲ್ಲಿ ಅರ್ಜೆಂಟೀನಾವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ ನಾಯಕನಾಗಿ ಇತಿಹಾಸ ನಿರ್ಮಿಸಿದರು.
ಕ್ರಿಸ್ಟಿಯಾನೊ ರೊನಾಲ್ಡೊ ಅಧಿಕೃತ ಪಂದ್ಯಗಳಲ್ಲಿ 900ಕ್ಕೂ ಅಧಿಕ ಗೋಲುಗಳನ್ನು ದಾಖಲಿಸಿದ ವಿಶ್ವದ ಮೊದಲ ಆಟಗಾರರಲ್ಲಿ ಒಬ್ಬರಾಗಿದ್ದು, ಪುರುಷರ ಅಂತರರಾಷ್ಟ್ರೀಯ ಫುಟ್ಬಾಲ್‌ನಲ್ಲಿ ಅತ್ಯಧಿಕ ಗೋಲುಗಳ ದಾಖಲೆ ಅವರ ಹೆಸರಿನಲ್ಲಿದೆ. ಲಿಯೊನೆಲ್ ಮೆಸ್ಸಿ ಅಧಿಕೃತ ಪಂದ್ಯಗಳಲ್ಲಿ 850ಕ್ಕೂ ಅಧಿಕ ಗೋಲುಗಳನ್ನು ಗಳಿಸಿದ್ದು, 2022ರ ಫಿಫಾ ವಿಶ್ವಕಪ್‌ನ್ನು ಅರ್ಜೆಂಟೀನಾಗೆ ಗೆದ್ದುಕೊಟ್ಟ ನಾಯಕನಾಗಿ ಶ್ರೇಷ್ಟರಾಗಿದ್ದಾರೆ. ಜೊತೆಗೆ ಫಿಫಾ ವಿಶ್ವಕಪ್‌ನಲ್ಲಿ ಎರಡು ಗೋಲ್ಡನ್ ಬಾಲ್ ಪ್ರಶಸ್ತಿಗಳನ್ನು (2014, 2022) ಗೆದ್ದ ಏಕೈಕ ಆಟಗಾರ ಎಂಬ ಅಪರೂಪದ ಸಾಧನೆಯೂ ಮೆಸ್ಸಿಯ ಹೆಸರಿನಲ್ಲಿದೆ.





