ದೇಶದ ರಾಷ್ಟ್ರೀಯ ಕ್ರೀಡಾ ಸಂಸ್ಥೆಯಲ್ಲಿನ ಆಡಳಿತಾತ್ಮಕ ಬಿಕ್ಕಟ್ಟು ಮತ್ತು ನಿಯಮಗಳ ಉಲ್ಲಂಘನೆಯ ಹಿನ್ನೆಲೆಯಲ್ಲಿ ಭಾರತೀಯ ಟೇಬಲ್ ಟೆನ್ನಿಸ್ ಫೆಡರೇಶನ್‌ಅನ್ನು (TTFI) ಕೇಂದ್ರ ಕ್ರೀಡಾ ಸಚಿವಾಲಯ ಅಮಾನತುಗೊಳಿಸಿದೆ. ಸೂಕ್ತ ಆಡಳಿತ ವ್ಯವಸ್ಥೆ ಮರುಸ್ಥಾಪನೆ ಆಗುವವರೆಗೆ ಟೇಬಲ್ ಟೆನ್ನಿಸ್ ಕ್ರೀಡೆಯ ದೈನಂದಿನ ಆಡಳಿತವನ್ನು ನೋಡಿಕೊಳ್ಳಲು ‘ಅಡ್-ಹಾಕ್ (ಹಂಗಾಮಿ) ಸಮಿತಿ’ಯನ್ನು ರಚಿಸುವಂತೆ ಭಾರತೀಯ ಒಲಿಂಪಿಕ್ ಸಂಸ್ಥೆಗೆ (IOA) ನಿರ್ದೇಶನ ನೀಡಿದೆ.
ನಿಯಮಾವಳಿಗಳ ಪ್ರಕಾರ ನಿಗದಿತ ಸಮಯದೊಳಗೆ ಚುನಾವಣೆ ನಡೆಸಲು ಟಿಟಿಎಫ್‌ಐ ವಿಫಲವಾಗಿರುವುದು ಅಮಾನತಿಗೆ ಪ್ರಮುಖ ಕಾರಣವಾಗಿದೆ ಎಂದು ವರದಿಯಾಗಿದೆ.
ಚುನಾವಣೆ ನಡೆಸುವಲ್ಲಿ ವೈಫಲ್ಯದ ಕುರಿತು ಸಚಿವಾಲಯ ನೀಡಿದ್ದ ಶೋಕಾಸ್ ನೋಟೀಸ್‌ಗೆ ಫೆಡರೇಶನ್ ನೀಡಿದ ಉತ್ತರ ‘ಅಸಮಾಧಾನಕರ’ವಾಗಿದೆ ಎಂದು ಕ್ರೀಡಾ ಸಚಿವಾಲಯ ತಿಳಿಸಿದೆ. ಅಂತಾರಾಷ್ಟ್ರೀಯ ಟೇಬಲ್ ಟೆನ್ನಿಸ್ ಫೆಡರೇಶನ್ (ITTF) ಜೊತೆ ಸಮಾಲೋಚಿಸಿ ಮಧ್ಯಂತರ ಆಡಳಿತ ವ್ಯವಸ್ಥೆಯನ್ನು ರೂಪಿಸುವಂತೆ ಐಒಎಗೆ ಸಚಿವಾಲಯ ಸೂಚಿಸಿದೆ.
ಟಿಟಿಎಫ್‌ಐನಲ್ಲಿ ಕಳೆದ ಕೆಲವು ಸಮಯದಿಂದ ಆಡಳಿತಾತ್ಮಕ ಮತ್ತು ಹಣಕಾಸಿನ ಅಕ್ರಮಗಳ ಆರೋಪಗಳು ಕೇಳಿಬರುತ್ತಿದ್ದವು. ಇದೇ ಆರೋಪಗಳ ಕಾರಣಕ್ಕಾಗಿ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಕಮಲೇಶ್ ಮೆಹ್ತಾ ಅವರನ್ನು ಹುದ್ದೆಯಿಂದ ಅಮಾನತುಗೊಳಿಸಿ, ತನಿಖೆಗೂ ಆದೇಶಿಸಲಾಗಿತ್ತು. ಇದೀಗ, ಟಿಟಿಎಫ್‌ಐಗೆ ನೀಡಲಾಗಿದ್ದ ಮಾನ್ಯತೆಯನ್ನೂ ಅಮಾನತು ಮಾಡಲಾಗಿದೆ.
ಸೆಪ್ಟೆಂಬರ್ 19 ರಿಂದ ಅಕ್ಟೋಬರ್ 4 ರವರೆಗೆ ಜಪಾನ್‌ನ ಐಚಿ-ನಗೋಯಾದಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್‌ಗಾಗಿ ಭಾರತೀಯ ತಂಡವನ್ನು ಆಯ್ಕೆ ಮಾಡುವಾಗ ಟಿಟಿಎಫ್‌ಐ ತನ್ನದೇ ಸಂವಿಧಾನವನ್ನು ಉಲ್ಲಂಘಿಸಿದೆ ಎಂದು ದೇಶದ ತಾರಾ ಆಟಗಾರ್ತಿ ಮಣಿಕಾ ಬಾತ್ರಾ ಜೂನ್‌ನಲ್ಲಿ ಗಂಭೀರ ಆರೋಪ ಮಾಡಿದ್ದರು. 31 ವರ್ಷದ ಮಣಿಕಾ ಬಾತ್ರಾ ಅವರನ್ನು 10 ಸದಸ್ಯರ ಮುಖ್ಯ ತಂಡದಿಂದ ಕೈಬಿಟ್ಟು ಮೀಸಲು ಆಟಗಾರ್ತಿಯನ್ನಾಗಿ ಹೆಸರಿಸಲಾಗಿತ್ತು. 9 ಸದಸ್ಯರ ಆಯ್ಕೆ ಸಮಿತಿಯು ನಿಯಮಗಳನ್ನು ಗಾಳಿಗೆ ತೂರಿ ತಂಡವನ್ನು ಅಂತಿಮಗೊಳಿಸಿದೆ ಎಂಬ ಆರೋಪವು ರಾಷ್ಟ್ರೀಯ ಟೇಬಲ್ ಟೆನ್ನಿಸ್ ಮಂಡಳಿಯ ಕಾರ್ಯಾಚರಣೆಯ ಮೇಲಿನ ಅನುಮಾನಗಳನ್ನು ಮತ್ತಷ್ಟು ಹೆಚ್ಚಿಸಿತ್ತು.



