“ಸರ್ವರಿಗೂ ಸಮಾನ ಗುಣಮಟ್ಟದ ಶಿಕ್ಷಣಕ್ಕಾಗಿ, ಪ್ರಜಾಪ್ರಭುತ್ವ ರಕ್ಷಣೆಗಾಗಿ, ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ಭಾರತ ವಿದ್ಯಾರ್ಥಿ ಫೆಡರೇಶನ್ (ಎಸ್ಎಫ್ಐ) ಹಾವೇರಿ ಜಿಲ್ಲೆಯ ವಿದ್ಯಾರ್ಥಿಗಳ 9ನೇ ಜಿಲ್ಲಾ ಸಮ್ಮೇಳನದ ನಡೆಯಲಿದೆ” ಎಂದು ನಾಗರಾಜ ಕಾಳೆ ಹೇಳಿದರು.
ಹಾವೇರಿ ಪಟ್ಟಣದ ಪರಿವೀಕ್ಷಣಾ ಮಂದಿರದಲ್ಲಿ ಎಸ್ಎಫ್ಐ ಜಿಲ್ಲಾ ಸಮ್ಮೇಳನದ ಲೋಗೋ ಬಿಡುಗಡೆಗೊಳಿಸಿ ಅವರು ಮಾತನಾಡಿದ ಅವರು, “ಎಸ್‌ಎಫ್‌ಐ ದೇಶದ ಸ್ವಾತಂತ್ರ್ಯ ಚಳುವಳಿಯ ಹಾಗೂ ಅಭ್ಯಾಸ, ಹೋರಾಟ ಮತ್ತು ತ್ಯಾಗದ ಪರಂಪರೆ ಹೊಂದಿರುವ ದೇಶದ ಅತೀ ದೊಡ್ಡ ವಿದ್ಯಾರ್ಥಿ ಸಂಘಟನೆಯಾಗಿದೆ” ಎಂದರು.
‘ಸರ್ವರಿಗೂ ಸಮಾನ ಗುಣಮಟ್ಟದ ಶಿಕ್ಷಣ ಹಾಗೂ ಉದ್ಯೋಗಕ್ಕಾಗಿ’ ದೇಶದ ಐಕ್ಯತೆ, ಸಮಗ್ರತೆ ಹಾಗೂ ಸೌಹಾರ್ದತೆಗಾಗಿ ವಿದ್ಯಾರ್ಥಿಗಳನ್ನು ದುಡಿಯಲು ಪ್ರೇರೆಪಿಸುತ್ತಿದೆಯಲ್ಲದೆ, ವಿದ್ಯಾರ್ಥಿಗಳ ಪ್ರಜಾಸತ್ತಾತ್ಮಕ ಹಕ್ಕುಗಳ ದಮನದ ವಿರುದ್ಧ ನಿರಂತರವಾಗಿ ವಿದ್ಯಾರ್ಥಿಗಳ ಮಧ್ಯೆ ಹೋರಾಟ ಮಾಡುತ್ತಾ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ವಿದ್ಯಾರ್ಥಿ ವಿರೋಧಿ ನೀತಿಗಳನ್ನು ಹಿಮ್ಮೆಟ್ಟಿಸುವ ನಿಟ್ಟಿನಲ್ಲಿ ಎಸ್ಎಫ್ಐ ವಿದ್ಯಾರ್ಥಿ ಸಂಘಟನೆಯ ಜಿಲ್ಲಾ ಸಮ್ಮೇಳನ ಯಶಸ್ವಿಯಾಗಲಿ” ಎಂದರು.
ಎಸ್ಎಫ್ಐ ಜಿಲ್ಲಾಧ್ಯಕ್ಷ ಬಸವರಾಜ ಎಸ್ ಮಾತನಾಡಿ, “ಶಿಕ್ಷಣದ ಉಳಿವಿಗಾಗಿ ಹಾಗೂ ವಿದ್ಯಾರ್ಥಿಗಳ ಪ್ರಜಾಸತ್ತಾತ್ಮಕ ಹಕ್ಕುಗಳಿಗಾಗಿ, ಎಲ್ಲ ಶಿಕ್ಷಣ ಪ್ರೇಮಿಗಳು ಮುಂದಾಗಬೇಕಾಗಿದೆಯಲ್ಲದೆ, ವಿಚ್ಚಿದ್ರಕಾರಿ ಶಕ್ತಿಗಳನ್ನು ಮಟ್ಟ ಹಾಕುವುದರ ಮೂಲಕ ನಾಡಿನ ಸಾಮರಸ್ಯ, ಸೌಹಾರ್ದತೆಯನ್ನು ಗಟ್ಟಿಗೊಳಿಸಬೇಕಾಗಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಲ್ಲಿ ಸದಾ ಜಾಗೃತಿ ಮೂಡಿಸುತ್ತಿರುವ ಎಸ್‌ಎಫ್‌ಐ ಜಿಲ್ಲಾದ್ಯಂತ ವಿದ್ಯಾರ್ಥಿ ಸಮುದಾಯ ಎದುರಿಸುತ್ತಿರುವ ಪ್ರಮುಖ ಸಮಸ್ಯೆಗಳಾದ ಶುಲ್ಕ ಹೆಚ್ಚಳ, ಡೊನೆಷನ್ ಹಾವಳಿ, ಗ್ರಾಮೀಣ ವಿದ್ಯಾರ್ಥಿಗಳಿಗೆ ಸಮರ್ಪಕ ಬಸ್ ಸೌಲಭ್ಯಕ್ಕಾಗಿ, ಟಿಕೆಟ್ ದರ ಹೆಚ್ಚಳ ವಿರೋಧಿಸುತ್ತೇವೆ” ಎಂದರು.
ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ, ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಆಹಾರ ಭತ್ಯೆ ಹೆಚ್ಚಳ, ವೃತ್ತಿಪರ ಶಿಕ್ಷಣ ಜಾರಿಗೆ, ಶಾಲಾ ಕಾಲೇಜುಗಳಿಗೆ ಮೂಲಭೂತ ಸೌಲಭ್ಯಗಳಿಗಾಗಿ, ಬೋಧಕ-ಬೋಧಕೇತರ ಹುದ್ದೆಗಳ ಖಾಯಂ ನೇಮಕಾತಿಗಾಗಿ, ನಿರಂತರ ಆಂದೋಲನ ನಡೆಸುತ್ತಿದೆ. ಜಿಲ್ಲಾ ಕೇಂದ್ರ ಮತ್ತು ಇತರೆ ತಾಲೂಕುಗಳಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗಾಗಿ ನಿರಂತರ ಹೋರಾಟ ನಡೆಸಿ ಯಶಸ್ವಿಯಾಗಿದೆ. ಹಾವೇರಿ ವಿಶ್ವವಿದ್ಯಾಲಯದ ಉಳಿವಿಗಾಗಿ ಪ್ರಗತಿಪರ ಸಂಘಟನೆಗಳ ಸಮಿತಿ ರಚಿಸಿ ಐಕೈ ಹೋರಾಟ ರೂಪಿಸಿ ಯಶಸ್ವಿಯಾಗಿದೆ” ಎಂದರು.
ಅಗಸ್ಟ್ 25ಕ್ಕೆ ಎಸ್ಎಫ್ಐ 9ನೇ ಜಿಲ್ಲಾ ಸಮ್ಮೇಳನ: “ಶೈಕ್ಷಣಿಕ ಸಮಸ್ಯೆಗಳ ವಿರುದ್ಧ ಇನ್ನಷ್ಟು ಬಲಿಷ್ಠ ಹೋರಾಟಗಳನ್ನು ನಡೆಸುವ ಅಗತ್ಯವಿದೆ. ಆದ್ದರಿಂದ ಸರ್ವರಿಗೂ ಸಮಾನ ಗುಣಮಟ್ಟದ ಶಿಕ್ಷಣಕ್ಕಾಗಿ, ಪ್ರಜಾಪ್ರಭುತ್ವ ರಕ್ಷಣೆಗಾಗಿ, ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ಎಸ್‌ಎಫ್‌ಐ ಹಾವೇರಿ ಜಿಲ್ಲೆಯ ವಿದ್ಯಾರ್ಥಿಗಳ 9ನೇ ಜಿಲ್ಲಾ ಸಮ್ಮೇಳನವನ್ನು 25 ಆಗಸ್ಟ್ 2026 ರಾಜ್ಯ ಸರಕಾರಿ ನೌಕರರ ಸಭಾ ಭವನ, ಹಾವೇರಿಯಲ್ಲಿ ನಡೆಸುತ್ತಿದ್ದು, ಜಿಲ್ಲೆಯ ವಿವಿಧ ತಾಲ್ಲೂಕಿನಿಂದ ವಿದ್ಯಾರ್ಥಿ ಪ್ರತಿನಿಧಿಗಳು ಈ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ. ವಿದ್ಯಾರ್ಥಿಗಳ ಸಮ್ಮೇಳನವನ್ನು ಯಶಸ್ವಿಗೊಳಿಸಲು ಸಹಕಾರಿಸಬೇಕೆಂದು ಎಸ್ಎಫ್ಐ ಜಿಲ್ಲಾ ಸಮಿತಿ ವಿನಂತಿಸಿಕೊಳ್ಳುತ್ತದೆ” ಎಂದು ಬಸವರಾಜ್ ಎಸ್ ತಿಳಿಸಿದರು.
ಈ ಸಂದರ್ಭದಲ್ಲಿ ಶ್ರೇಯಸ್ ಶಿಕ್ಷಣ ಸಂಸ್ಥೆ ಮುಖ್ಯಸ್ಥರಾದ ತಿಪ್ಪೇಸ್ವಾಮಿ ಹೊಸಮನಿ, ಸೌಭಾಗ್ಯಲಕ್ಷ್ಮಿ ಹೊಸಮನಿ ಡಿವೈಎಫ್ಐ ಮುಖಂಡ ವಿಠ್ಠಲ ಗೌಳಿ, ಎಸ್ಎಫ್ಐ ಜಿಲ್ಲಾ ಮುಖಂಡ ಅರುಣ್ ಕುಮಾರ್ ನಗವತ್, ಕಾಲೇಜ್ ಘಟಕದ ಅಧ್ಯಕ್ಷೆ ಚೈತ್ರ ಕೊರವರ, ಮುಖಂಡರಾದ ಶೋಭಾ ದೇವರಮನಿ, ಲಿಂಗರಾಜ ಪೂಜಾರ, ಭುವನ್ ಚೌಟಗಿ, ಆದಿತ್ಯ ಹೆಚ್, ವಿನೋದ್ ತಿಗಡಿ, ರೋಷನ್ ದಿಡಗೂರ, ಹನುಮಂತಗೌಡ ಭರಮಗೌಡ್ರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.




