ಭಾರತೀಯ ಕ್ರಿಕೆಟ್‌ನ ಸ್ಪಿನ್ ಬೌಲಿಂಗ್ ಪರಂಪರೆ ಮತ್ತು ಹೊಸ ಮಾಂತ್ರಿಕ ಮಾನವ್ ಸುತಾರ್

Date:

ಶ್ರೀಲಂಕಾ ವಿರುದ್ಧ ಗಾಲೆ ಟೆಸ್ಟ್‌ನಲ್ಲಿ 10 ವಿಕೆಟ್ ಪಡೆದು ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ಎಡಗೈ ಸ್ಪಿನ್ ಬೌಲರ್ ಮಾನವ್ ಸುತಾರ್ ಸದ್ಯಕ್ಕೆ ಸುದ್ದಿಯಲ್ಲಿದ್ದಾರೆ. ಆ ಮೂಲಕ ಭಾರತ ಕ್ರಿಕೆಟ್ ತಂಡದಲ್ಲಿ ತಮ್ಮ ಸ್ಥಾನವನ್ನು ಭದ್ರ ಮಾಡಿಕೊಂಡಿದ್ದಾರೆ.

ಗಾಲೆಯಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯವನ್ನು ಟೀಂ ಇಂಡಿಯಾ 165 ರನ್‌ಗಳಿಂದ ಗೆದ್ದುಕೊಂಡಿತು. ತಂಡದ ಈ ಗೆಲುವಿನಲ್ಲಿ ಕರ್ನಾಟಕದ ದೇವದತ್ ಪಡಿಕ್ಕಲ್ ಮತ್ತು ರಾಜಸ್ಥಾನದ ಮಾನವ್ ಸುತಾರ್ ಅವರ ಪಾತ್ರ ಪ್ರಮುಖವಾಗಿತ್ತು. ಅದರಲ್ಲೂ ಅಂತಾರಾಷ್ಟ್ರೀಯ ವೃತ್ತಿಜೀವನದ ಎರಡನೇ ಟೆಸ್ಟ್ ಪಂದ್ಯವನ್ನಾಡಿದ ಮಾನವ್, ಎರಡೂ ಇನ್ನಿಂಗ್ಸ್​ಗಳಲ್ಲಿ 45.2 ಓವರ್‌ಗಳನ್ನು ಬೌಲ್ ಮಾಡಿ, 131 ರನ್‌ಗಳನ್ನು ನೀಡಿ 10 ವಿಕೆಟ್‌ಗಳನ್ನು ಕಬಳಿಸಿದ್ದರು. ಇದು ಸಾಮಾನ್ಯ ಸಾಧನೆಯಲ್ಲ. ಮಾನವ್ ಸ್ಪಿನ್ ಮೋಡಿಗೆ ಆತಿಥೇಯ ಲಂಕಾ ತಂಡ ಮಂಡಿಯೂರದೇ ಇರಲಿಲ್ಲ.

- Advertisement -

ಭಾರತೀಯ ಕ್ರಿಕೆಟ್‌ನ ಇತಿಹಾಸವನ್ನು ಸೂಕ್ಷ್ಮವಾಗಿ ಗಮನಿಸಿದರೆ, ಸ್ಪಿನ್ ಬೌಲಿಂಗ್ ಮೋಡಿ ಎದ್ದು ಕಾಣುತ್ತದೆ. ಸ್ಪಿನ್ ಎನ್ನುವುದು ಕೇವಲ ಒಂದು ಬೌಲಿಂಗ್ ವಿಧಾನವಲ್ಲ; ಅದು ಭಾರತೀಯ ಕ್ರಿಕೆಟ್‌ನ ಬ್ರ್ಯಾಂಡ್ ಎಂದೇ ಹೇಳಬೇಕಾಗಿದೆ. ಫಾಸ್ಟ್ ಬೌಲರ್‌ಗಳಿಗಿಂತ ಸ್ಪಿನ್ನರ್‌ಗಳ ಮೇಲೆ ಹೆಚ್ಚಿನ ಅವಲಂಬನೆಯ ಜೊತೆಗೆ ನಂಬಿಕೆ ಇಟ್ಟಿದ್ದ ಕಾಲದಿಂದ ಹಿಡಿದು, ಇಂದಿನ ಟೆಸ್ಟ್ ಕ್ರಿಕೆಟ್‌ನಲ್ಲಿ 10 ವಿಕೆಟ್ ಪಡೆದ ಮಾನವ್‌ವರೆಗೆ- ಸ್ಪಿನ್ ವಿನ್ ಸಾಬೀತಾಗಿದೆ. ಹಾಗೆ ನೋಡಿದರೆ, ಸ್ಪಿನ್ ಬೌಲಿಂಗಿಗೆ ಭಾರತದಲ್ಲಿ ಬಹಳ ದೊಡ್ಡ ಪರಂಪರೆಯೇ ಇದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಮಹಿಳಾ ಮೀಸಲಾತಿ ಮರೆಯಲ್ಲಿ ಕ್ಷೇತ್ರ ಮರುವಿಂಗಡಣೆ: ವಿರೋಧ ಪಕ್ಷಗಳ...

2023ರ ಮಹಿಳಾ ಮೀಸಲಾತಿ ಕಾಯ್ದೆಯನ್ನು ಅನಗತ್ಯವಾಗಿ ಕ್ಷೇತ್ರ ಪುನರ್ವಿಂಗಡಣೆಯೊಂದಿಗೆ ತಳುಕು ಹಾಕಿರುವ ಮೋದಿ ಸರ್ಕಾರದ ನಡೆ, ಭಾರತೀಯ ಪ್ರಜಾಪ್ರಭುತ್ವ ಮತ್ತು ಸಂಸದೀಯ ಇತಿಹಾಸದಲ್ಲಿಯೇ ಒಂದು ಅಪರೂಪದ ರಾಜಕೀಯ ಹಾಗೂ ಸಾಂವಿಧಾನಿಕ ಬಿಕ್ಕಟ್ಟನ್ನು ಸೃಷ್ಟಿಸಿದೆ....

ಖಾಸಗಿ ವೈದ್ಯರ ಎಡವಟ್ಟು; ಬಡ ಕುಟುಂಬದ ಆಧಾರ ಸ್ತಂಭ...

ಆತ ಕೂಲಿ‌ ಕೆಲಸ ಮಾಡಿಕೊಂಡು ಹಂಗೊ ಹೆಂಗೋ ಜೀವನ‌ ನಡೆಸಿಕೊಂಡು ಬಂದಿದ್ದ ಚಿರ ಯೌವ್ವನದ ಯುವಕ. ತನ್ನ ಮನೆ ಜವಾಬ್ದಾರಿಯನ್ನು ತನ್ನದೇ ಹೆಗಲ ಮೇಲೆರಿಸಿ ಕಷ್ಟಪಟ್ಟು ದುಡಿದು ತನ್ನ ಇಬ್ಬರು ಸಹೋದರಿಯರಿಗೆ ಮದುವೆಯನ್ನೂ...

ಭಾಷಣಗಳಲ್ಲಿ ಆಗಾಗ ಎಡವಟ್ಟು, ಸುಳ್ಳು-ಅತಿಶಯೋಕ್ತಿಯೇ ಮೇಲುಗೈ: ನವಭಾರತದ ‘ಪಪ್ಪು’...

ಒಂದು ಕಾಲದಲ್ಲಿ ರಾಹುಲ್ ಗಾಂಧಿ ಅವರನ್ನು ಅಪಹಾಸ್ಯ ಮಾಡಲು ಬಳಸುತ್ತಿದ್ದ 'ಪಪ್ಪು' ಎಂಬ ಪದವೇ ಇದೀಗ ಮೋದಿ ಅವರತ್ತ ತಿರುಗಿದೆ. 1987-88ರ ಡಿಜಿಟಲ್ ಕ್ಯಾಮೆರಾ-ಇಮೇಲ್ ಕಥೆಯಿಂದ ಹಿಡಿದು ಐತಿಹಾಸಿಕ ಪ್ರಮಾದಗಳವರೆಗೆ, ಮೋದಿ ಅವರ...

ಭಾರತೀಯ ಕ್ರಿಕೆಟ್‌ನ ಆರಂಭಿಕ ದಶಕಗಳಲ್ಲೇ ಸ್ಪಿನ್ ಬೌಲಿಂಗ್‌ಗೆ ಭದ್ರವಾದ ನೆಲೆ ಸಿಕ್ಕಿತ್ತು. 1950ರ ದಶಕದಲ್ಲಿ ವಿನೂ ಮಂಕಡ್, ಗುಲಾಂ ಅಹ್ಮದ್ ಮತ್ತು ಸುಭಾಷ್ ಗುಪ್ತೆ ಪ್ರಮುಖ ಸ್ಪಿನ್ನರ್‌ಗಳಾಗಿ ಹೊರಹೊಮ್ಮಿದ್ದರು. ನಂತರ ಸಲೀಂ ದುರಾನಿ, ಚಂದು ಬೋರ್ಡೆ ಮತ್ತು ಬಾಪು ನಾಡ್ಕರ್ಣಿ ಮುಂತಾದವರು ಈ ಪರಂಪರೆಯನ್ನು ಮುಂದುವರಿಸಿದರು. ಆ ಕಾಲದಲ್ಲಿ ಭಾರತ ಕ್ರಿಕಟ್ ತಂಡಕ್ಕೆ ವಿಶ್ವಮಟ್ಟದ ಫಾಸ್ಟ್ ಬೌಲರ್‍‌ಗಳಿರಲಿಲ್ಲ. ಇದ್ದರೂ ಅವರ ದಾಳಿ ನಿರಂತರವಾಗಿ ಲಭ್ಯವಿರಲಿಲ್ಲ. ಹೀಗಾಗಿ ಸ್ಪಿನ್ನರ್‌ಗಳನ್ನು ಅವಲಂಬಿಸಬೇಕಾಗಿತ್ತು. ಆ ಸಂದರ್ಭಗಳಲ್ಲಿ ಸ್ಪಿನ್ನರ್ ಕೇವಲ ರನ್ ತಡೆಯುವ ಬೌಲರ್‌ಗಳಾಗದೆ, ವಿಕೆಟ್ ಪಡೆಯುವ ಪ್ರಮುಖ ಅಸ್ತ್ರಗಳಾಗಿದ್ದರು. ಅದಕ್ಕೆ ತಕ್ಕಂತೆ ದೇಶೀಯ ಪರಿಸ್ಥಿತಿಗಳಲ್ಲಿ ನಿಧಾನಗತಿಯ ಹಾಗೂ ತಿರುವು ಪಡೆಯುವ ಪಿಚ್‌ಗಳು ಕೂಡ ಸ್ಪಿನ್ನರ್‌ಗಳಿಗೆ ಸಹಾಯ ಮಾಡುತ್ತಿದ್ದವು.

ಇದನ್ನು ಓದಿದ್ದೀರಾ?: ಮಾನವ್ ಸುತಾರ್ ಸ್ಪಿನ್ ಮೋಡಿಗೆ ಬೆಚ್ಚಿದ ಶ್ರೀಲಂಕಾ: ಮೊದಲ ಟೆಸ್ಟ್‌ನಲ್ಲಿ ಟೀಮ್ ಇಂಡಿಯಾಗೆ ಭರ್ಜರಿ ಜಯ

ಅದರಲ್ಲೂ 1960 ಮತ್ತು 70ರ ದಶಕಗಳಲ್ಲಿ ಭಾರತೀಯ ಸ್ಪಿನ್ ಬೌಲಿಂಗ್ ವಿಶ್ವ ಕ್ರಿಕೆಟ್‌ನಲ್ಲೇ ಒಂದು ಶಕ್ತಿಯಾಗಿ ರೂಪುಗೊಂಡಿತ್ತು. ಆ ಅವಧಿಯ ನಾಲ್ಕು ದಿಗ್ಗಜರನ್ನು- ಬಿಶನ್ ಸಿಂಗ್ ಬೇಡಿ, ಚಂದ್ರಶೇಖರ್, ಪ್ರಸನ್ನ, ವೆಂಕಟರಾಘವನ್- ಇಂಡಿಯನ್ ಸ್ಪಿನ್ ಕ್ವಾರ್ಟೆಟ್ ಎಂದು ಕರೆಯಲಾಗುತ್ತಿತ್ತು. ಈನಾಲ್ವರೂ ಒಂದೇ ಟೆಸ್ಟ್‌ನಲ್ಲಿ ಒಟ್ಟಿಗೆ ಆಡಿದ್ದು ಅಪರೂಪವಾದರೂ, ಅವರ ಸಂಯೋಜನೆಯೇ ಭಾರತದ ಬೌಲಿಂಗ್ ದಾಳಿಯ ಬೆನ್ನೆಲುಬಾಗಿತ್ತು. ಒಟ್ಟಾಗಿ ಅವರು 231 ಟೆಸ್ಟ್‌ಗಳಲ್ಲಿ 853 ವಿಕೆಟ್‌ಗಳನ್ನು ಪಡೆದು ದಾಖಲೆ ಬರೆದಿದ್ದರು.

WhatsApp Image 2026 08 21 at 15.12.43
ಚಂದ್ರಶೇಖರ್, ವೆಂಕಟರಾಘವನ್, ಪ್ರಸನ್ನ ಮತ್ತು ಬೇಡಿ

ಈ ನಾಲ್ವರ ವಿಶೇಷತೆ ಏನೆಂದರೆ, ಒಬ್ಬೊಬ್ಬರದೂ ಒಂದೊಂದು ರೀತಿಯ ವಿಶಿಷ್ಟ ಬೌಲಿಂಗ್. ಬೇಡಿಯವರ ಬಾಲ್ ಫ್ಲೈಟ್ ಮತ್ತು ನಿಯಂತ್ರಣ, ಚಂದ್ರಶೇಖರ್ ಅವರ ಲೆಗ್ ಸ್ಪಿನ್ ಮತ್ತು ವೇಗದ ವೈವಿಧ್ಯ, ಪ್ರಸನ್ನ ಅವರ ಚಾತುರ್ಯ ಮತ್ತು ನಿಖರತೆ, ವೆಂಕಟರಾಘವನ್ ಅವರ ಶಿಸ್ತು ಮತ್ತು ರನ್ ನಿಯಂತ್ರಣ- ಇವೆಲ್ಲವೂ ಸೇರಿ ಎದುರಾಳಿಗೆ ವಿಭಿನ್ನ ಸವಾಲು ಸೃಷ್ಟಿಸುತ್ತಿದ್ದವು.

ಭಾರತೀಯ ಸ್ಪಿನ್ನರ್‌ಗಳ ಚಮತ್ಕಾರಿಕೆ, ಮಹತ್ವ ಮತ್ತು ಗೆಲುವು ಕೇವಲ ಭಾರತೀಯ ಪಿಚ್‌ಗಳಿಗೆ ಸೀಮಿತವಾಗಿರಲಿಲ್ಲ. 1960-70ರ ದಶಕದಲ್ಲಿ ವಿದೇಶಗಳಲ್ಲಿಯೂ ಅವರು ಭಾರತದ ಗೆಲುವುಗಳಿಗೆ ಪ್ರಮುಖ ಕೊಡುಗೆ ನೀಡಿ, ಅಪವಾದದಿಂದ ಮುಕ್ತರಾದದ್ದೂ ಇದೆ. 1971ರಲ್ಲಿ ವೆಸ್ಟ್ ಇಂಡೀಸ್ ಮತ್ತು ಇಂಗ್ಲೆಂಡ್ ವಿರುದ್ಧ ಭಾರತ ಸಾಧಿಸಿದ ಐತಿಹಾಸಿಕ ಸರಣಿ ಗೆಲುವುಗಳು ಭಾರತೀಯ ಕ್ರಿಕೆಟ್‌ನ ಆತ್ಮವಿಶ್ವಾಸವನ್ನು ಅಟ್ಟಕ್ಕೇರಿಸಿದವು. ಅಷ್ಟೇ ಅಲ್ಲ, ಆ ಗೆಲುವುಗಳು ಮುಂದಿನ ಪೀಳಿಗೆಯ ಭಾರತ ತಂಡಗಳಿಗೆ ವಿದೇಶದಲ್ಲೂ ಗೆಲ್ಲುವ ನಂಬಿಕೆಯನ್ನು ನೀಡಿದವು. 

ಈ ನಾಲ್ವರ ಸ್ಪಿನ್ ಕ್ವಾರ್ಟೆಟ್‌ನ ನಂತರ ಭಾರತೀಯ ಕ್ರಿಕೆಟ್‌ನಲ್ಲಿ ಮತ್ತೊಂದು ದೊಡ್ಡ ಸ್ಪಿನ್ ಜೋಡಿ ರೂಪುಗೊಂಡಿತು- ಅದು ಅನಿಲ್ ಕುಂಬ್ಳೆ ಮತ್ತು ಹರ್ಭಜನ್ ಸಿಂಗ್. ಕುಂಬ್ಳೆ, ಲೆಗ್ ಸ್ಪಿನ್, ವೇಗವಾದ ಗೂಗ್ಲಿ ಮತ್ತು ನಿಖರತೆಯಿಂದ ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತದ ಪ್ರಮುಖ ವಿಕೆಟ್ ಟೇಕರ್‌ಗಳಲ್ಲಿ ಒಬ್ಬರಾದರು. ಹರ್ಭಜನ್ ಸಿಂಗ್ ಆಫ್ ಸ್ಪಿನ್ನರ್ ಆಗಿ, ವಿಶೇಷವಾಗಿ ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳ ವಿರುದ್ಧ ಪರಿಣಾಮಕಾರಿ ಬೌಲರ್ ಎನಿಸಿಕೊಂಡರು. ಇವರಿಬ್ಬರೂ ಒಟ್ಟಿಗೆ ಆಡಿದ ಟೆಸ್ಟ್‌ಗಳಲ್ಲಿ 501 ವಿಕೆಟ್‌ಗಳನ್ನು- ಕುಂಬ್ಳೆ 281 ಮತ್ತು ಹರ್ಭಜನ್ 220 ಪಡೆದು ದಾಖಲೆ ಬರೆದರು.

anil singh
ಹರ್ಭಜನ್ ಸಿಂಗ್ ಮತ್ತು ಅನಿಲ್ ಕುಂಬ್ಳೆ

ಕುಂಬ್ಳೆ ಮತ್ತು ಹರ್ಭಜನ್ ಸಿಂಗ್‌ರ ನಂತರ, 2010ರ ದಶಕದಲ್ಲಿ ಭಾರತೀಯ ಟೆಸ್ಟ್ ಕ್ರಿಕೆಟ್‌ನ ಸ್ಪಿನ್ ದಾಳಿಗೆ ಹೊಸ ರೂಪ ನೀಡಿದ ಜೋಡಿ ಎಂದರೆ, ರವಿಚಂದ್ರನ್ ಅಶ್ವಿನ್ ಮತ್ತು ರವೀಂದ್ರ ಜಡೇಜಾ. ಅಶ್ವಿನ್ ಅವರ ಆಫ್ ಸ್ಪಿನ್, ಕ್ಯಾರಮ್ ಬಾಲ್, ವೇಗದ ಬದಲಾವಣೆ ಮತ್ತು ಬ್ಯಾಟರ್‌ನ ಮನಸ್ಥಿತಿಯನ್ನು ಓದುವ ಸಾಮರ್ಥ್ಯ ಒಂದು ಕಡೆಯಾದರೆ; ಜಡೇಜಾ ಅವರ ಎಡಗೈ ಸ್ಪಿನ್, ವೇಗ, ನಿಖರ ಲೈನ್ ಅಂಡ್ ಲೆಂಗ್ತ್ ಮತ್ತು ಬ್ಯಾಟಿಂಗ್ ಸಾಮರ್ಥ್ಯ ಮತ್ತೊಂದು ಕಡೆ. ಇಬ್ಬರೂ ಸೇರಿ ಭಾರತದ ಟೆಸ್ಟ್ ತಂಡಕ್ಕೆ ಅದ್ಭುತ ಸಮತೋಲನ ನೀಡಿದರು. ಅವರು ಒಟ್ಟಿಗೆ ಆಡಿದ 37 ಟೆಸ್ಟ್‌ಗಳಲ್ಲಿ ಭಾರತ 29 ಗೆಲುವುಗಳನ್ನು ಸಾಧಿಸಿದ್ದು, ಅವರ ಪ್ರತಿಭೆ ಮತ್ತು ಪ್ರಭಾವವನ್ನು ತೋರಿಸುತ್ತದೆ. 

ಭಾರತೀಯ ಸ್ಪಿನ್ ಪರಂಪರೆ ಕೇವಲ ಆಫ್ ಸ್ಪಿನ್ ಮತ್ತು ಎಡಗೈ ಆರ್ಥಡಾಕ್ಸ್‌ಗಷ್ಟೇ ಸೀಮಿತವಾಗಲಿಲ್ಲ. ಅಶ್ವಿನ್-ಜಡೇಜಾ ನಂತರ ಬಂದ ಕುಲ್ದೀಪ್ ಯಾದವ್, ಎಡಗೈ ರಿಸ್ಟ್ ಸ್ಪಿನ್ನರ್ ಆಗಿ ಭಾರತೀಯ ಬೌಲಿಂಗ್ ದಾಳಿಗೆ ಅಪರೂಪದ ವೈವಿಧ್ಯತೆ ತಂದರು. ಇದರಿಂದ ಭಾರತೀಯ ತಂಡದ ಸ್ಪಿನ್ ಬೌಲಿಂಗ್ ಆಯ್ಕೆ, ಮತ್ತೊಂದು ಹಂತಕ್ಕೆ ಜಿಗಿಯಿತು. ಆಫ್ ಸ್ಪಿನ್ನರ್, ಎಡಗೈ ಆರ್ಥಡಾಕ್ಸ್, ಲೆಗ್ ಸ್ಪಿನ್ನರ್ ಮತ್ತು ಎಡಗೈ ರಿಸ್ಟ್ ಸ್ಪಿನ್ನರ್ ಎಂಬ ಹಲವು ಆಯ್ಕೆಗಳು ಚಾಲ್ತಿಗೆ ಬಂದವು.

jadeja ashwin
ರವೀಂದ್ರ ಜಡೇಜಾ ಮತ್ತು ಅಶ್ವಿನ್

ಸ್ಪಿನ್ ಬೌಲಿಂಗ್‌ನ ಭವ್ಯ ಪರಂಪರೆ ಇರುವ ಭಾರತೀಯ ಕ್ರಿಕೆಟ್, ಕಾಲಕ್ಕೆ ತಕ್ಕಂತೆ ಆಟವೂ ಬದಲಾಗಿದೆ, ಆಟಗಾರರೂ ಬದಲಾಗಿದ್ದಾರೆ, ನೋಡುಗರ ನಿರೀಕ್ಷೆಗಳೂ ಮಿತಿಮೀರಿವೆ.  

ಇಂತಹ ಸಂದರ್ಭದಲ್ಲಿಯೇ ಮಾನವ್ ಸುತಾರ್ ಅವರಂತಹ ಯುವ ಸ್ಪಿನ್ನರ್‌ಗಳ ಮಹತ್ವ ಹೆಚ್ಚುವುದು. ಮಾನವ್ ಒಬ್ಬ ಎಡಗೈ ಆರ್ಥಡಾಕ್ಸ್ ಸ್ಪಿನ್ನರ್. ಈ ಶೈಲಿಗೆ ಭಾರತದ ಸ್ಪಿನ್ ಬೌಲಿಂಗ್ ಇತಿಹಾಸದಲ್ಲಿ ಬಿಶನ್ ಸಿಂಗ್ ಬೇಡಿಯಂತಹ ದಿಗ್ಗಜರ ಪರಂಪರೆ ಇದೆ. ಆದರೆ ಮಾನವ್ ಅವರ ಬೌಲಿಂಗ್ ಅನ್ನು ಬೇಡಿಯೊಂದಿಗೆ ನೇರವಾಗಿ ಹೋಲಿಸುವುದಕ್ಕಿಂತ, ಆ ಪರಂಪರೆಯನ್ನು ಆಧುನಿಕ ಕ್ರಿಕೆಟ್‌ಗೆ ಹೊಂದಿಸಿಕೊಂಡ ಹೊಸ ಪೀಳಿಗೆಯ ಆಟಗಾರ ಎಂದು ಗುರುತಿಸುವುದು ಸೂಕ್ತವೆನಿಸುತ್ತದೆ. ಮಾನವ್ ಅವರ ಬೌಲಿಂಗ್ ವಿಶೇಷತೆಗಳಲ್ಲಿ ಬಾಲ್‌ಗೆ ಫ್ಲೈಟ್ ನೀಡುವುದು, ತಿರುವು ಪಡೆಯುವಂತೆ ಮಾಡುವುದು, ವೇಗದಲ್ಲಿ ಬದಲಾವಣೆ ತರುವುದು ಮತ್ತು ದೀರ್ಘ ಸ್ಪೆಲ್‌ಗಳಲ್ಲಿ ತಾಳ್ಮೆಯಿಂದ ಬೌಲಿಂಗ್ ಮಾಡುವುದು ಅತಿ ಮುಖ್ಯವಾಗಿದೆ.

ಮಾನವ್ ಸುತಾರ್ ಭಾರತೀಯ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಿದ್ದೇ ಒಂದು ಪವಾಡದಂತಿದೆ. ಸದ್ಯದ ಭಾರತ ಕ್ರಿಕೆಟ್ ತಂಡದಲ್ಲಿ ಸ್ಪಿನ್ ಬೌಲರ್‍‌ಗಳಿಗೇನೂ ಕೊರತೆ ಇಲ್ಲ. ಎಡಗೈ ಸ್ಪಿನ್ನರ್ ಗಳಾದ ರವೀಂದ್ರ ಜಡೇಜಾ, ಅಕ್ಷರ್ ಪಟೇಲ್ ಮತ್ತು ಕುಲದೀಪ್ ಯಾದವ್; ಆಫ್ ಸ್ಪಿನ್ನರ್ ವಾಷಿಂಗ್ಟನ್ ಸುಂದರ್, ಮಿಸ್ಟರಿ ಸ್ಪಿನ್ನರ್ ವರುಣ್ ಚಕ್ರವರ್ತಿ, ಲೆಗ್ ಸ್ಪಿನ್ನರ್ ರವಿ ಬಿಷ್ಣೋಯಿ, ಯಜುವೇಂದ್ರ ಚಹಾಲ್… ಲೆಕ್ಕವಿಲ್ಲದಷ್ಟು ಥರಾವರಿ ಸ್ಪಿನ್ ಬೌಲರ್‍‌ಗಳಿದ್ದಾರೆ. ಈ ಭಾರೀ ಪೈಪೋಟಿಯ ನಡುವೆಯೂ ಮಾನವ್ ಸುತಾರ್‍‌ಗೆ ಅವಕಾಶ ಸಿಕ್ಕಿದ್ದು ಮತ್ತು ಆ ಅವಕಾಶವನ್ನು ಆತ ಸದುಪಯೋಗಪಡಿಸಿಕೊಂಡಿದ್ದು ಮೆಚ್ಚಬೇಕಾದ ಅಂಶ.

4 in one
ಯಜುವೇಂದ್ರ ಚಹಾಲ್, ಕುಲ್ದೀಪ್ ಯಾದವ್, ಆಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್

ಸಚಿನ್ ತೆಂಡೂಲ್ಕರ್ ನಂತರ ಭಾರತೀಯರ ಕ್ರಿಕೆಟ್ ಕನಸು ಮುಗಿಲು ಮುಟ್ಟಿದೆ. ಅದಕ್ಕೆ ಕಾರಣ ಯಥೇಚ್ಚ ಹಣ ಮತ್ತು ಜನಪ್ರಿಯತೆ. ಭಾರತೀಯ ಪೋಷಕರು ಈಗ ತಮ್ಮ ಮಕ್ಕಳನ್ನು ಕ್ರಿಕೆಟ್ ಆಟಗಾರರನ್ನಾಗಿ ಮಾಡಲು ಇನ್ನಿಲ್ಲದ ಕಸರತ್ತಿಗೆ ಕೈಹಾಕಿದ್ದಾರೆ. ಪ್ರತಿಭೆಯುಳ್ಳ ಯುವ ಆಟಗಾರರೂ ಭಾರೀ ಉತ್ಸಾಹದಿಂದಲೇ ಮೈದಾನಕ್ಕಿಳಿಯುತ್ತಿದ್ದಾರೆ. ಪ್ರತಿಭೆ ಮತ್ತು ಧೈರ್ಯದಿಂದ ಆಟದ ಝಲಕ್ ತೋರುತ್ತಿದ್ದಾರೆ. ಆದರೆ ಆಯ್ಕೆದಾರರ ಕಣ್ಣಿಗೆ ಬೀಳುವುದು ಬಲು ಕಷ್ಟವಾಗಿದೆ. ಅದರಲ್ಲೂ ಬಹುತ್ವ ಭಾರತದಲ್ಲಿ ಜಾತಿ, ಹಣ, ಪ್ರಭಾವ, ಪ್ರಾದೇಶೀಕತೆಗಳೇ ಕಗ್ಗಂಟಾಗಿವೆ. ಇದರಿಂದ ನಿಜಪ್ರತಿಭೆಗಳು ಇದ್ದಲ್ಲೇ ಇಂಗಿಹೋದ ಉದಾಹರಣೆಗಳು ಬೇಕಾದಷ್ಟಿವೆ.

ಹೀಗಿರುವಾಗ ವಿವಿಎಸ್ ಲಕ್ಷ್ಮಣ್ ಅವರ ಶಿಫಾರಸ್ಸಿನ ಮೇರೆಗೆ, ಆಯ್ಕೆದಾರರ ಕಣ್ಣಿಗೆ ಬಿದ್ದ ಮಾನವ್ ಸುತಾರ್, ಅಫ್ಘಾನಿಸ್ತಾನ ವಿರುದ್ಧದ ಏಕೈಕ ಟೆಸ್ಟ್ ಪಂದ್ಯದಲ್ಲಿ ಟೆಸ್ಟ್‌ಗೆ ಪಾದಾರ್ಪಣೆ ಮಾಡಿದರು. ಅದು ಕೂಡ ಎಡಗೈ ಸ್ಪಿನ್ನರ್ ರವೀಂದ್ರ ಜಡೇಜಾ ಅವರು ವಿಶ್ರಾಂತಿಗೆ ತೆರಳಿದ್ದರಿಂದ, ಆ ಜಾಗಕ್ಕೆ ಅವರನ್ನು ಆಯ್ಕೆ ಮಾಡಲಾಗಿತ್ತು. ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಂಡ ಸುತಾರ್, ಮೊದಲ ಪಂದ್ಯದಲ್ಲಿಯೇ 7 ವಿಕೆಟ್ ಕಬಳಿಸುವ ಮೂಲಕ ಕ್ರಿಕೆಟ್ ಪ್ರೇಮಿಗಳ ಗಮನ ಸೆಳೆದರು. ಇದೀಗ ಗಾಲೆ ಟೆಸ್ಟ್​ನಲ್ಲಿ 10 ವಿಕೆಟ್​ ಉರುಳಿಸಿದ ಸಾಧನೆ ಮಾಡಿದ್ದಾರೆ. ಆ ಮೂಲಕ ಮಾನವ್ ಸುತಾರ್, ಗಾಲೆ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ 10 ವಿಕೆಟ್ ಪಡೆದ ಮೂರನೇ ಭಾರತೀಯ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಹಾಗೆಯೇ ತಮ್ಮ ವೃತ್ತಿಜೀವನದ ಎರಡನೇ ಟೆಸ್ಟ್ ಪಂದ್ಯದಲ್ಲಿ 10 ವಿಕೆಟ್‌ಗಳ ಗಡಿ ದಾಟುವ ಮೂಲಕ, ಈ ಸಾಧನೆ ಮಾಡಿದ ಒಂಬತ್ತನೇ ಭಾರತೀಯ ಎಡಗೈ ಸ್ಪಿನ್ನರ್ ಎನಿಸಿಕೊಂಡಿದ್ದಾರೆ.

ರಾಜಸ್ಥಾನದ ಶ್ರೀಗಂಗಾನಗರದ ಈ ಎಡಗೈ ಸ್ಪಿನ್ನರ್, ದೇಶೀಯ ಕ್ರಿಕೆಟ್‌ನಲ್ಲಿ ವರ್ಷಗಳ ಕಾಲ ಮಾಡಿದ ಪರಿಶ್ರಮದ ಫಲವಾಗಿ ಭಾರತ ಟೆಸ್ಟ್ ತಂಡದಲ್ಲಿ ಈಗ ಸ್ಥಾನ ಪಡೆದಿದ್ದಾರೆ. ಸುತಾರ್ ಕ್ರಿಕೆಟ್ ಪಯಣ ಶ್ರೀಗಂಗಾನಗರದಲ್ಲೇ ಆರಂಭವಾಯಿತು. ಅವರ ತಂದೆ ಜಗದೀಶ್‌ ಸುತಾರ್ ದೈಹಿಕ ಶಿಕ್ಷಣ ಶಿಕ್ಷಕರಾಗಿದ್ದು, ‍ಹರೆಯದಲ್ಲಿ ಕ್ರಿಕೆಟ್ ಆಡಿದ ಅನುಭವವಿತ್ತು. ಮಗ ಕೂಡ ಕ್ರಿಕೆಟ್ ಆಟಗಾರನಾಗಲಿ ಎಂಬ ಆಸೆ ಇತ್ತು. ತಂದೆಯ ಪ್ರೋತ್ಸಾಹ ಮತ್ತು ಕ್ರೀಡೆಯ ಮೇಲಿನ ಆಸಕ್ತಿಯೇ ಸುತಾರ್ ಅವರ ಆರಂಭಿಕ ಕ್ರಿಕೆಟ್ ಬೆಳವಣಿಗೆಗೆ ಪ್ರಮುಖ ಕಾರಣವಾಯಿತು.

ಇದನ್ನು ಓದಿದ್ದೀರಾ?: ಆಸ್ಟ್ರೇಲಿಯಾದಲ್ಲಿ ಐತಿಹಾಸಿಕ ಗೆಲುವು ತಂದುಕೊಟ್ಟಿದ್ದ ನಾಯಕನ ಯುಗಾಂತ್ಯ: ಕ್ರಿಕೆಟ್‌ಗೆ ರಹಾನೆ ವಿದಾಯ

ಆರಂಭದಲ್ಲಿ ಬ್ಯಾಟಿಂಗ್‌ನತ್ತ ಹೆಚ್ಚಿನ ಆಸಕ್ತಿ ಹೊಂದಿದ್ದ ಸುತಾರ್, ಕ್ರಮೇಣ ಎಡಗೈ ಸ್ಪಿನ್ ಬೌಲಿಂಗ್‌ನತ್ತ ಗಮನ ಹರಿಸಿದರು. ಆದರೆ ಕೋಚ್ ಧೀರಜ್ ಶರ್ಮಾ, ಸುತಾರ್‍‌ನ ಬೌಲಿಂಗ್ ಆಕ್ಷನ್ ಗಮನಿಸಿ, ಬೌಲರ್ ಆಗುವುದೇ ಸೂಕ್ತ ಎಂದು ಸಲಹೆ ನೀಡಿದರು. ನಂತರ ಅವರ ಗಮನ ಸಂಪೂರ್ಣವಾಗಿ ಸ್ಪಿನ್ ಬೌಲಿಂಗ್ ಕಡೆ ತಿರುಗಿತು.

ಮಾನವ್ ಅವರ ವೃತ್ತಿಜೀವನದಲ್ಲಿ 2022-23ರ ರಣಜಿ ಟ್ರೋಫಿ ಸೀಸನ್ ಮಹತ್ವದ ತಿರುವಾಯಿತು. ರಾಜಸ್ಥಾನ ಪರ ಕೇವಲ ಆರು ಪಂದ್ಯಗಳಲ್ಲಿ 39 ವಿಕೆಟ್ ಕಬಳಿಸಿ, ಆ ತಂಡದ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡರು. ಇದೇ ಸೀಸನ್‌ನಲ್ಲಿ ಬ್ಯಾಟ್‌ನಿಂದಲೂ ಎರಡು ಅರ್ಧಶತಕಗಳನ್ನು ಸಿಡಿಸಿ ತಮ್ಮ ಆಲ್‌ರೌಂಡ್ ಸಾಮರ್ಥ್ಯ ತೋರಿಸಿದರು. ಈ ಪ್ರದರ್ಶನದಿಂದ ದೇಶದ ಕ್ರಿಕೆಟ್ ವಲಯದ ಗಮನ ಅವರತ್ತ ಹರಿಯಿತು. 2023ರ ಎಸಿಸಿ(ಎಮರ್ಜಿಂಗ್ ಟೀಮ್ಸ್ ಏಷ್ಯಾ ಕಪ್)‌ನಲ್ಲಿಯೂ ಅವರು ಐದು ಪಂದ್ಯಗಳಲ್ಲಿ 10 ವಿಕೆಟ್ ಪಡೆದು ಗಮನಾರ್ಹ ಪ್ರದರ್ಶನ ನೀಡಿದರು. 

ದೇಶೀಯ ಕ್ರಿಕೆಟ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದರೂ ಮಾನವ್ ಅವರ ಪಯಣ ಸುಗಮವಾಗಿರಲಿಲ್ಲ. 2023ರ ಐಪಿಎಲ್ ಹರಾಜಿನಲ್ಲಿ ಅವರು ಮಾರಾಟವಾಗಲಿಲ್ಲ. ಆದರೂ ಅವರು ತಮ್ಮ ಗುರಿಯಿಂದ ಹಿಂದೆ ಸರಿಯಲಿಲ್ಲ. ನಂತರ ಗುಜರಾತ್ ಟೈಟನ್ಸ್ ಅವರನ್ನು ಐಪಿಎಲ್ 2024ರಲ್ಲಿ ತಂಡಕ್ಕೆ ಸೇರಿಸಿಕೊಂಡಿತು. ಅವರು ಒಂದು ಪಂದ್ಯ ಮಾತ್ರ ಆಡಿದರು. 2025ರ ಐಪಿಎಲ್ ಹರಾಜಿನಲ್ಲಿಯೂ ಗುಜರಾತ್ ಟೈಟನ್ಸ್ ಅವರನ್ನು 30 ಲಕ್ಷಕ್ಕೆ ಉಳಿಸಿಕೊಂಡಿತು. ಆ ಮೊತ್ತವೇ ಅಲ್ಲಿಯವರೆಗಿನ ಅವರ ಅತಿ ದೊಡ್ಡ ಸಂಭಾವನೆಯಾಗಿತ್ತು. ಮಾನವ್ ಸುತಾರ್ ಅವರ ಬೌಲಿಂಗ್‌ನ ಪ್ರಮುಖ ಶಕ್ತಿ ಫ್ಲೈಟ್, ವೇಗದ ವೈವಿಧ್ಯ ಮತ್ತು ಚೆಂಡನ್ನು ತಿರುಗಿಸುವ ಸಾಮರ್ಥ್ಯ. ಬ್ಯಾಟರ್‌ಗೆ ಬಾಲ್‌ನ ವೇಗ ಮತ್ತು ಲ್ಯಾಂಡಿಂಗ್‌ನ್ನು ಊಹಿಸಲು ಕಷ್ಟವಾಗುವಂತೆ ಅವರು ಬೌಲಿಂಗ್ ಮಾಡುತ್ತಾರೆ. 

WhatsApp Image 2026 08 21 at 15.16.30
ಮಾನವ್ ಸುತಾರ್

ಗಾಲೆಯಲ್ಲಿ ಶ್ರೀಲಂಕಾ ವಿರುದ್ಧದ ಟೆಸ್ಟ್‌ನಲ್ಲಿ ಮಾನವ್ ಬೌಲಿಂಗ್‌ನ ಮತ್ತೊಂದು ವಿಶೇಷತೆ ಸ್ಪಷ್ಟವಾಗಿ ಗೋಚರಿಸಿತು. ಅವರು ದೊಡ್ಡ ಪ್ರಮಾಣದಲ್ಲಿ ಚೆಂಡನ್ನು ತಿರುಗಿಸಿ, ಅನುಭವಿ ಸ್ಪಿನ್ನರ್‌ಗಳಿಗಿಂತಲೂ ಬಿಗ್ ಟರ್ನ್ ಡೆಲಿವರಿಗಳನ್ನು ದಾಖಲಿಸಿದರು. ಇದಕ್ಕೆ ಅವರ ತರಬೇತಿ, ಪರಿಸ್ಥಿತಿಗೆ ಹೊಂದಿಕೊಳ್ಳುವ ಸಾಮರ್ಥ್ಯ ಮತ್ತು ತಾಳ್ಮೆ ಕಾರಣವೆಂದು ಕ್ರಿಕೆಟ್ ವಿಶ್ಲೇಷಕರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಇದು ಅವರ ಪ್ರತಿಭೆಯ ಫಲವಲ್ಲ; ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು ಅದಕ್ಕೆ ತಕ್ಕಂತೆ ತಯಾರಾದ ಮನೋಬಲ. ಈ ಮನೋಬಲವನ್ನು ಅವರು ಎಲ್ಲಿಯವರೆಗೆ ಕಾಪಾಡಿಕೊಳ್ಳುತ್ತಾರೆ ಎಂಬುದರ ಮೇಲೆ, ಅವರ ಭವಿಷ್ಯ ನಿರ್ಧಾರವಾಗಲಿದೆ.

Basavaraju Megalkeri
+ posts

ಲೇಖಕ, ಪತ್ರಕರ್ತ

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಬಸವರಾಜು ಮೇಗಲಕೇರಿ
ಬಸವರಾಜು ಮೇಗಲಕೇರಿ
ಲೇಖಕ, ಪತ್ರಕರ್ತ

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಲಡಾಖ್‌: ಎಂಟು ವರ್ಷಗಳ ಬಳಿಕ ಪಂಚಾಯಿತಿ, ಪುರಸಭೆ ಚುನಾವಣೆ

ಜಮ್ಮು ಮತ್ತು ಕಾಶ್ಮೀರದಿಂದ ಪ್ರತ್ಯೇಕಗೊಂಡು ಕೇಂದ್ರಾಡಳಿತ ಪ್ರದೇಶವಾಗಿ ಏಳು ವರ್ಷಗಳಿಗೂ ಹೆಚ್ಚು...

ಪೊಲೀಸ್ ಠಾಣೆಯಲ್ಲಿ ‘ಗಣಪತಿ ಹೋಮ’; ಭುಗಿಲೆದ್ದ ರಾಜಕೀಯ ವಿವಾದ

ಪೊಲೀಸ್ ಠಾಣೆಯ ಒಳಗೇ ಪೊಲೀಸ್ ಇನ್ಸ್‌ಪೆಕ್ಟರ್ ಒಬ್ಬರು ತಮ್ಮ ಕುಟುಂಬ ಸದಸ್ಯರೊಂದಿಗೆ...

ಕಾರ್ಪೊರೇಟ್ ತೆರಿಗೆ ಇಳಿಸಿ ವರ್ಷಗಳ ನಂತರ ಉದ್ಯಮಿಗಳಿಗೆ ಪ್ರಶ್ನೆಯೇ; ಸರ್ಕಾರದ ನೀತಿಯ ಲಾಭ ಶ್ರಮಿಕರಿಗೆ ತಲುಪಿದ್ದೆಷ್ಟು ಮೋದಿಜಿ?

​ಕೈಗಾರಿಕಾ ಬೆಳವಣಿಗೆಗೆ ಪೂರಕವಾಗಿ ಸರ್ಕಾರಗಳು ನೀಡುವ ತೆರಿಗೆ ವಿನಾಯಿತಿಗಳ ಲಾಭವು ತಳಮಟ್ಟದ...