ಕರ್ನಾಟಕದಲ್ಲಿ ಪ್ರತಿ ವರ್ಷ ಸುಮಾರು ಎರಡು ಸಾವಿರಕ್ಕೂ ಹೆಚ್ಚು ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳು ದಾಖಲಾಗುತ್ತಿವೆ ಎಂಬುದು ಕಳವಳಕಾರಿ ವಿಷಯ. ದೌರ್ಜನ್ಯ ಪ್ರಕರಣಗಳ ಸಂಖ್ಯೆ, ಅವುಗಳ ಫಲಿತಾಂಶ, ಕಾಯ್ದೆಗಳ ಅನುಷ್ಠಾನ, ಮೀಸಲಾತಿ ಮತ್ತು ಇತ್ತೀಚಿನ ‘ಮೀಸಲಾತಿ ಹಠಾವೋ’ ಆಂದೋಲನ – ಇವೆಲ್ಲವನ್ನೂ ಕ್ರೋಢಿಕರಿಸಿ ನೋಡಿದಾಗಲಷ್ಟೇ ಈ ಸಮಾಜದ ಬಲಿತರಿಗೆ, ದಲಿತರು ಹಿಂದುಳಿದವರ ಮೇಲಿರುವ ಅಸಮಾಧಾನದ ನೈಜ ರೂಪ ಬಯಲಾಗುತ್ತದೆ.
ಅಧಿಕೃತ ಮಾಹಿತಿಯ ಪ್ರಕಾರ, ಕಳೆದ ಐದು ವರ್ಷಗಳಲ್ಲಿ ರಾಜ್ಯದಲ್ಲಿ ಸುಮಾರು 10,573 ದೌರ್ಜನ್ಯ ಪ್ರಕರಣಗಳು ದಾಖಲಾಗಿವೆ. 2021ರಲ್ಲಿ ಸುಮಾರು 1,750–2,000 ಪ್ರಕರಣಗಳಿದ್ದರೆ, 2025ರಲ್ಲಿ ಅದು 2,400ರಿಂದ 2,700ರವರೆಗೆ ಏರಿದೆ. ಬೆಂಗಳೂರು ನಗರದಲ್ಲಿ ಅತಿ ಹೆಚ್ಚು ಪ್ರಕರಣಗಳು ದಾಖಲಾಗಿದೆ. ಈ ಪ್ರಕರಣಗಳಲ್ಲಿ ಸುಮಾರು 1,598 ಪ್ರಕರಣಗಳು ತಪ್ಪು ಎಂದು ಕಂಡುಬಂದಿವೆ. ಮತ್ತೊಂದು ಸಾವಿರಕ್ಕೂ ಹೆಚ್ಚು ಪ್ರಕರಣಗಳು ವಜಾಗೊಂಡಿವೆ ಅಥವಾ ಖುಲಾಸೆಗೊಂಡಿವೆ. ಶಿಕ್ಷೆಗೊಳಗಾದ ಪ್ರಕರಣಗಳ ಸಂಖ್ಯೆ ಕೇವಲ 47. ಶಿಕ್ಷೆಯ ಪ್ರಮಾಣ ಸುಮಾರು 10% ಅಥವಾ ಅದಕ್ಕಿಂತ ಕಡಿಮೆ ಇದೆ. ಕೆಲವು ವರದಿಗಳಲ್ಲಿ 2024ರಲ್ಲಿ ಇದು ಒಂದು ಶೇಕಡಾಕ್ಕಿಂತ ಕಡಿಮೆ ಎಂದು ಉಲ್ಲೇಖವಾಗಿದೆ. ಇದರ ಅರ್ಥ ಸ್ಪಷ್ಟ. ಪ್ರಕರಣಗಳು ಹೆಚ್ಚಾಗುತ್ತಿವೆ, ಆದರೆ ನ್ಯಾಯ ಒದಗಿಸುವ ವ್ಯವಸ್ಥೆ ಸೋಲುತ್ತಿದೆ. ತನಿಖೆಯ ಗುಣಮಟ್ಟ, ಸಾಕ್ಷ್ಯ ಸಂಗ್ರಹದಲ್ಲಿ ವಿಳಂಬ, ಸಾಕ್ಷಿಗಳು ಹಿಮ್ಮೆಟ್ಟುವುದು ಮತ್ತು ಕೆಲವು ಸಂದರ್ಭಗಳಲ್ಲಿ ಕಾಯ್ದೆಯ ದುರುಪಯೋಗ – ಇವೆಲ್ಲವೂ ಕಾರಣಗಳಾಗಿವೆ. ಹೈಕೋರ್ಟ್ ಸಹ ಕೆಲವು ಪ್ರಕರಣಗಳಲ್ಲಿ ಕಾಯ್ದೆಯ ದುರುಪಯೋಗವನ್ನು ಗುರುತಿಸಿ ಪ್ರಕರಣಗಳನ್ನು ರದ್ದುಗೊಳಿಸಿದೆ.
SC/ST (Prevention of Atrocities) ಕಾಯ್ದೆ:
2015 ಮತ್ತು 2016ರ ತಿದ್ದುಪಡಿಗಳ ನಂತರ ಹೆಸರಿಗಷ್ಟೇ ಈ ಕಾಯ್ದೆ ಹಿಂದಿಗಿಂತ ಇನ್ನೂ ಕಠಿಣ. ರಾಜ್ಯ ಸರ್ಕಾರ 2025ರ ಏಪ್ರಿಲ್‌ನಿಂದ 33 ವಿಶೇಷ DCRE ಪೊಲೀಸ್ ಠಾಣೆಗಳನ್ನು ಕಾರ್ಯಾರಂಭ ಮಾಡಿದೆ. ಪ್ರತಿ ಜಿಲ್ಲೆಗೆ ಒಂದು, ಬೆಂಗಳೂರಿಗೆ ಎರಡು ಠಾಣೆಗಳು. 11 ವಿಶೇಷ ನ್ಯಾಯಾಲಯಗಳೂ ಇವೆ. ದಲಿತ ಸಮುದಾಯದ ಮೇಲಿನ ದೌರ್ಜನ್ಯ ಪ್ರಕರಣಗಳ ತನಿಖೆ ಹಾಗೂ ಕಾಯ್ದೆಯ ಅನುಷ್ಠಾನವನ್ನು ಹೆಚ್ಚು ಪರಿಣಾಮಕಾರಿಯಾಗಿ ಕೈಗೊಳ್ಳಲು ಈ ವಿಶೇಷ DCRE ಪೊಲೀಸ್ ಠಾಣೆಗಳು ಕಾರ್ಯನಿರ್ವಹಿಸುತ್ತಿವೆ.
ಸಾಮಾನ್ಯ ಪೊಲೀಸ್ ಠಾಣೆಗಳ ಮೇಲಿನ ದೈನಂದಿನ ಒತ್ತಡದಿಂದಾಗಿ ಪ್ರಕರಣಗಳು ವಿಳಂಬವಾಗುವುದನ್ನು ತಪ್ಪಿಸಿ, ಕೇವಲ SC/ST ಕಾಯ್ದೆಯಡಿ ದಾಖಲಾಗುವ ಪ್ರಕರಣಗಳ ಮೇಲೆ ಗಮನ ಹರಿಸಿ ಶೀಘ್ರವಾಗಿ ಚಾರ್ಜ್‌ಶೀಟ್ ಸಲ್ಲಿಸುವುದು, ಸಂತ್ರಸ್ತರು ಮತ್ತು ಸಾಕ್ಷಿಗಳಿಗೆ ಸೂಕ್ತ ಭದ್ರತೆ ನೀಡಿ ಅವರು ಬೆದರಿಕೆಗೆ ಒಳಗಾಗದೆ ನ್ಯಾಯಾಲಯದಲ್ಲಿ ಹೇಳಿಕೆ ನೀಡುವಂತೆ ನೋಡಿಕೊಳ್ಳುವುದು, ಕಾಯ್ದೆಯಡಿಯ ಬಲವಾದ ತಿದ್ದುಪಡಿಗಳನ್ನು ಸರಿಯಾಗಿ ಅನ್ವಯಿಸಿ ಸಂತ್ರಸ್ತರಿಗೆ ಸಿಗಬೇಕಾದ ಪರಿಹಾರ ಮತ್ತು ನ್ಯಾಯ ಸಿಗುವಂತೆ ಮೇಲ್ವಿಚಾರಣೆ ಮಾಡುವುದು ಹಾಗೂ ತನಿಖೆಯ ಗುಣಮಟ್ಟವನ್ನು ಹೆಚ್ಚಿಸುವ ಮೂಲಕ ಸುಳ್ಳು ದೂರುಗಳನ್ನು ಗುರುತಿಸುವುದು ಮತ್ತು ನಿಜವಾದ ಸಂತ್ರಸ್ತರಿಗೆ ಶಿಕ್ಷೆಯ ಪ್ರಮಾಣವನ್ನು ಹೆಚ್ಚಿಸಲು ಅಗತ್ಯವಾದ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸುವುದು ಮುಂತಾದ ಕೆಲಸಗಳನ್ನು ನಿರ್ವಹಿಸುತ್ತಿವೆ.
SC/ST ಕಾಯ್ದೆಯ ಅನುಷ್ಠಾನದಲ್ಲಿ ಸವಾಲುಗಳು :
ಕಾಯ್ದೆಯ ಪ್ರಕಾರ ಚಾರ್ಜ್‌ಶೀಟ್ 60 ದಿನಗಳೊಳಗೆ ಸಲ್ಲಿಸಬೇಕು. ಆದರೆ ಅನೇಕ ಪ್ರಕರಣಗಳಲ್ಲಿ ತಿಂಗಳುಗಳು ಅಥವಾ ವರ್ಷಗಳು ಕಳೆದರೂ ಚಾರ್ಜ್‌ಶೀಟ್ ಸಲ್ಲಿಸುವುದಿಲ್ಲ. ಸಾಕ್ಷ್ಯ ಸಂಗ್ರಹದಲ್ಲಿ ದೌರ್ಬಲ್ಯ ಕಂಡುಬರುತ್ತದೆ. ಸಾಕ್ಷಿಗಳು ಬೆದರಿಕೆಗೆ ಒಳಗಾಗುವುದು, ಹಿಮ್ಮೆಟ್ಟುವುದು ಅಥವಾ ಸಾಕ್ಷ್ಯಾಧಾರಗಳು ಸರಿಯಾಗಿ ದಾಖಲಾಗದಿರುವುದು ಶಿಕ್ಷೆಯ ಪ್ರಮಾಣವನ್ನು ಕಡಿಮೆ ಮಾಡುತ್ತಿದೆ. ವಿಶೇಷ ನ್ಯಾಯಾಲಯಗಳಿದ್ದರೂ ಸಾವಿರಾರು ಪ್ರಕರಣಗಳು ಬಾಕಿ ಉಳಿದಿವೆ ಮತ್ತು ವಿಚಾರಣೆ ವರ್ಷಗಳು ನಡೆಯುತ್ತವೆ.
ಕಾಯ್ದೆಯಡಿ ತಕ್ಷಣದ ಪರಿಹಾರ ಮತ್ತು ಪುನರ್ವಸತಿ ಸಿಗಬೇಕು. ಆದರೆ ಅನೇಕ ಸಂದರ್ಭಗಳಲ್ಲಿ ಇದು ವಿಳಂಬವಾಗುತ್ತದೆ. ಕೆಲವು ಪೊಲೀಸ್ ಮತ್ತು ನ್ಯಾಯಾಂಗ ಅಧಿಕಾರಿಗಳಲ್ಲಿ ಕಾಯ್ದೆಯ ಮಹತ್ವವನ್ನು ಅರ್ಥಮಾಡಿಕೊಳ್ಳುವಲ್ಲಿ ಕೊರತೆ ಕಂಡುಬರುತ್ತದೆ. ವಿಶೇಷ ಠಾಣೆಗಳು ಮತ್ತು ನ್ಯಾಯಾಲಯಗಳಿಗೆ ಸಾಕಷ್ಟು ಸಿಬ್ಬಂದಿ, ತರಬೇತಿ ಮತ್ತು ಮೂಲಸೌಕರ್ಯಗಳು ಇನ್ನೂ ಸಂಪೂರ್ಣವಾಗಿ ಒದಗಿಸಲಾಗಿಲ್ಲ. ಈ ಸವಾಲುಗಳಿಂದಾಗಿ ಕಾಯ್ದೆ ಇದ್ದರೂ ನ್ಯಾಯ ಸಿಗುವುದು ಕಷ್ಟವಾಗುತ್ತಿದೆ. ಕಾಯ್ದೆ ಇದೆ ಅನುಷ್ಠಾನದಲ್ಲಿ ದೌರ್ಬಲ್ಯವಿದೆ. ಇದು ನಮ್ಮ ನ್ಯಾಯ ವ್ಯವಸ್ಥೆಯ ಹುಳುಕು.
ಕರ್ನಾಟಕದಲ್ಲಿ SC/ST (Prevention of Atrocities) Act ಅಡಿಯಲ್ಲಿ ಕೋರ್ಟ್‌ನಲ್ಲಿ ಬಾಕಿ ಇರುವ ಪ್ರಕರಣಗಳ 2025ರ ಮಾಹಿತಿ ಪ್ರಕಾರ, ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ 11 ವಿಶೇಷ ನ್ಯಾಯಾಲಯಗಳಲ್ಲಿ ಒಟ್ಟು 2,593 ಪ್ರಕರಣಗಳು ಬಾಕಿ ಇವೆ. ಇವುಗಳಲ್ಲಿ ತುಮಕೂರು ಜಿಲ್ಲೆಯಲ್ಲಿ ಅತಿ ಹೆಚ್ಚು 407 ಪ್ರಕರಣಗಳು, ಬೆಳಗಾವಿಯಲ್ಲಿ 346 ಮತ್ತು ಯಾದಗಿರಿಯಲ್ಲಿ 274 ಪ್ರಕರಣಗಳು ಬಾಕಿ ಇವೆ. ಈ ವಿಶೇಷ ನ್ಯಾಯಾಲಯಗಳು ಮೈಸೂರು, ವಿಜಯಪುರ, ರಾಯಚೂರು, ಕೋಲಾರ, ಕಲಬುರಗಿ, ಬೆಂಗಳೂರು ಸೌತ್ (ರಾಮನಗರ), ಶಿವಮೊಗ್ಗ ಮತ್ತು ಬಾಗಲಕೋಟೆ ಸೇರಿದಂತೆ 11 ಜಿಲ್ಲೆಗಳಲ್ಲಿ ಇವೆ. ಆ ವರ್ಷದಲ್ಲಿ ಈ ನ್ಯಾಯಾಲಯಗಳ ಮುಂದೆ ಒಟ್ಟು 2,904 ಪ್ರಕರಣಗಳಿದ್ದು, ಅವುಗಳಲ್ಲಿ 311ನ್ನು ವಿಲೇವಾರಿ ಮಾಡಲಾಗಿದೆ ಮತ್ತು ಶಿಕ್ಷೆ ದರ ಸುಮಾರು 11% ಮಾತ್ರ ಎಂಬುದು ಆಘಾತಕಾರಿ ವಿಚಾರ.
ರಾಜ್ಯಾದ್ಯಂತ ಎಲ್ಲಾ ನ್ಯಾಯಾಲಯಗಳಲ್ಲಿ (ವಿಶೇಷ ಮತ್ತು ಸಾಮಾನ್ಯ) ಸುಮಾರು 6,761 ಪ್ರಕರಣಗಳು ಬಾಕಿ ಇವೆ. NCRB ಡೇಟಾದಲ್ಲಿ SC ಪ್ರಕರಣಗಳಿಗೆ ಮಾತ್ರ ವರ್ಷಾಂತ್ಯದಲ್ಲಿ 8,000ರಿಂದ 10,000ಕ್ಕೂ ಹೆಚ್ಚು ಬಾಕಿ ಇದ್ದು, ಒಟ್ಟಾರೆ ಪೆಂಡೆನ್ಸಿ 90%ಕ್ಕೂ ಹೆಚ್ಚು ಇರುವುದು ಸಾಮಾನ್ಯವಾಗಿದೆ. ವಿಚಾರಣೆ ವಿಳಂಬಕ್ಕೆ ತನಿಖೆ ವಿಳಂಬ, 60 ದಿನಗಳಲ್ಲಿ ಚಾರ್ಜ್‌ಶೀಟ್ ಸಲ್ಲಿಸದಿರುವುದು ಮತ್ತು ನ್ಯಾಯಾಲಯಗಳ ಹೆಚ್ಚಿನ ಹೊರೆ ಮುಂತಾದ ನೆವಗಳಿವೆ. ಸರ್ಕಾರ ಇತರ ಜಿಲ್ಲೆಗಳಿಗೂ ವಿಶೇಷ ನ್ಯಾಯಾಲಯಗಳನ್ನು ವಿಸ್ತರಿಸಲು ಪ್ರಸ್ತಾವನೆ ಮಾಡಿದ್ದು, ಈ ಪ್ರಸ್ತಾಪವೂ ಹೈಕೋರ್ಟ್‌ನಲ್ಲಿ ಬಾಕಿ ಇದೆ.
ಮೀಸಲಾತಿ ಇಲ್ಲದಿದ್ದರೆ ಸಮಾಜದ ಪರಿಸ್ಥಿತಿ ಹೇಗಿರುತ್ತಿತ್ತು?
ಮೀಸಲಾತಿ ಸಂವಿಧಾನಾತ್ಮಕ ಹಕ್ಕು. ಅದು ಐತಿಹಾಸಿಕ ಅನ್ಯಾಯವನ್ನು ಸರಿಪಡಿಸಲು ಜಾರಿಗೆ ಬಂದಿದೆ. ದಲಿತರಲ್ಲಿ ಶಿಕ್ಷಣ, ಉದ್ಯೋಗ ಮತ್ತು ರಾಜಕೀಯ ಪ್ರಾತಿನಿಧ್ಯ ಹೆಚ್ಚಾಗಿದೆ ಎಂಬುದು ಸತ್ಯ, ಮೀಸಲಾತಿಯ ಉದ್ದೇಶವೆ ಇದಾಗಿತ್ತು. ಶಿಕ್ಷಣ ಕ್ಷೇತ್ರದಲ್ಲಿ ಸಾವಿರಾರು ದಲಿತ ವಿದ್ಯಾರ್ಥಿಗಳು ವೈದ್ಯಕೀಯ, ಎಂಜಿನಿಯರಿಂಗ್ ಮತ್ತು ಇತರ ಉನ್ನತ ಶಿಕ್ಷಣಕ್ಕೆ ಪ್ರವೇಶ ಪಡೆದಿದ್ದಾರೆ. ಸರ್ಕಾರಿ ಮತ್ತು ಸಾರ್ವಜನಿಕ ವಲಯಗಳಲ್ಲಿ ಉದ್ಯೋಗಾವಕಾಶಗಳು ಹೆಚ್ಚಾಗಿ, ಆರ್ಥಿಕ ಸ್ವಾವಲಂಬನೆ ಬಲಗೊಂಡಿದೆ. ರಾಜಕೀಯ ಕ್ಷೇತ್ರದಲ್ಲಿ ಶಾಸಕರು, ಸಂಸದರು ಮತ್ತು ಸ್ಥಳೀಯ ಸಂಸ್ಥೆಗಳಲ್ಲಿ ಪ್ರಾತಿನಿಧ್ಯ ಹೆಚ್ಚಾಗಿ, ದಲಿತ ಸಮುದಾಯದ ಧ್ವನಿ ಕೇಳಿಸುವಂತಾಗಿದೆ. ಸಾಮಾಜಿಕ ಸ್ಥಾನಮಾನ ಮತ್ತು ಆತ್ಮವಿಶ್ವಾಸ ಹೆಚ್ಚಾಗಿ, ಹಿಂದಿನ ತಲೆಮಾರುಗಳಿಗಿಂತ ಉತ್ತಮ ಜೀವನ ಮಟ್ಟ ಸಾಧ್ಯವಾಗಿದೆ.
ಅಸ್ಪೃಶ್ಯತೆ ಮತ್ತು ಸಾಮಾಜಿಕ ತಾರತಮ್ಯ ಈಗಲೂ ಜೀವಂತವಿರುವಾಗ, ಮೀಸಲಾತಿ ಇಲ್ಲದಿದ್ದರೆ ಪರಿಸ್ಥಿತಿ ಇನ್ನೂ ಹೀನಾಯ. ಶಿಕ್ಷಣ ಮತ್ತು ಉದ್ಯೋಗದಲ್ಲಿ ದಲಿತರ ಪ್ರವೇಶ ಅತ್ಯಲ್ಪವಾಗುತ್ತಿತ್ತು. ರಾಜಕೀಯ ಪ್ರಾತಿನಿಧ್ಯ ಕಡಿಮೆಯಾಗಿ, ಅವರ ಹಕ್ಕುಗಳು ಮತ್ತು ಸಮಸ್ಯೆಗಳು ನಿರ್ಲಕ್ಷಿತವಾಗುತ್ತಿದ್ದವು. ಆರ್ಥಿಕ ಅಸಮಾನತೆ ಇನ್ನಷ್ಟು ಆಳವಾಗಿ, ಸಾಮಾಜಿಕ ಹಿಂಸೆ ಮತ್ತು ಶೋಷಣೆ ಹೆಚ್ಚಾಗುತ್ತಿತ್ತು. ಮೀಸಲಾತಿ ಇಲ್ಲದಿದ್ದರೆ ದಲಿತ ಸಮುದಾಯಗಳು ಈಗಲೂ ಹಿಂದುಳಿದ ಸ್ಥಿತಿಯಲ್ಲೇ ಉಳಿದುಬಿಡುತ್ತಿದ್ದವು.
ಇತ್ತೀಚೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ‘ಮೀಸಲಾತಿ ಹಠಾವೋ’ ಎಂಬ ಚಳವಳಿ ಸದ್ದು ಮಾಡುತ್ತಿದೆ. ಮೀಸಲಾತಿಯನ್ನು ಸಂಪೂರ್ಣವಾಗಿ ತೆಗೆದುಹಾಕಬೇಕು ಎಂಬುದು ಇದರ ಬೇಡಿಕೆ. ಮೀಸಲಾತಿಯಿಂದ ಅಸಮಾನತೆ ಸೃಷ್ಟಿಯಾಗುತ್ತಿದೆ ಎಂಬುದು ದಲಿತರ ಶತಮಾನಗಳ ನೋವಿನ ಕುರಿತು ಕಿಂಚಿತ್ತೂ ಸಂವೇದನೆ ಇರದವರ ಪೊಳ್ಳುವಾದ. ಮೀಸಲಾತಿ ಈ ನೆಲದ ಅಸ್ಪೃಶ್ಯರು, ಹಿಂದುಳಿದವರು ಮತ್ತು ಮಹಿಳೆಯರ ಸಮಗ್ರ ಉದ್ಧಾರಕ್ಕಾಗಿ, ಅವರ ಸಾಮಾಜಿಕ, ರಾಜಕೀಯ ಹಾಗೂ ಶೈಕ್ಷಣಿಕ ಏಳಿಗೆಗಾಗಿ ಜಾರಿಗೆ ತಂದ ತಾತ್ಕಾಲಿಕ ಉಪಕ್ರಮ. ಅದನ್ನು ಒಮ್ಮೆಲೆ ತೆಗೆದುಹಾಕಿದರೆ ಹಿಂದುಳಿದ ವರ್ಗಗಳು ಹಿಂದಿಗಿಂತಲೂ ಹೀನ ಪರಿಸ್ಥಿತಿಗೆ ತಳ್ಳಲ್ಪಡುತ್ತವೆ. ದಲಿತ ಚಳವಳಿ ಐತಿಹಾಸಿಕವಾಗಿ ಅಸ್ಪೃಶ್ಯತೆ, ಭೂಮಿ ಹಕ್ಕು ಮತ್ತು ಶಿಕ್ಷಣಕ್ಕಾಗಿ ಹೋರಾಡಿದೆ. ಅದನ್ನು ನಿರ್ಲಕ್ಷಿಸುವುದು ಸರಿಯಲ್ಲ.
ದಲಿತರ ಮೇಲಿನ ದೌರ್ಜನ್ಯ ನಮ್ಮ ದೇಶದಲ್ಲಿ ಇಂದಿಗೂ ಬಗೆಹರಿಯದ ಸಮಸ್ಯೆ. ಅದನ್ನು ಕಡಿಮೆ ಮಾಡಲು ಕಠಿಣ ತನಿಖೆ, ವೇಗದ ವಿಚಾರಣೆ ಮತ್ತು ನಿಜವಾದ ತಪ್ಪಿತಸ್ಥರಿಗೆ ಶಿಕ್ಷೆ ಅಗತ್ಯ. ತಪ್ಪು ಪ್ರಕರಣಗಳು ಮತ್ತು ಕಡಿಮೆ ಶಿಕ್ಷೆ ಕಾಯ್ದೆಯ ವಿಶ್ವಾಸವನ್ನು ಕುಂದಿಸುತ್ತವೆ. ಮೀಸಲಾತಿ ಅಗತ್ಯವಿದೆ. ‘ಹಠಾವೋ’ ಎನ್ನುವುದು ಪರಿಹಾರವಲ್ಲ. ನೈಜತೆಯನ್ನು ಅರಿತು ಸಮ ಸಮಾಜದ ಹಿತಕ್ಕೆ ಶ್ರಮಿಸುವುದು ನಮ್ಮ ಆದ್ಯ ಕರ್ತವ್ಯವಾಗಬೇಕಿದೆ.




