‘ಶ್ರೀರಾಮ ಮಂದಿರ ಅಯೋಧ್ಯ ಪ್ರಸಾದ’ ಹೆಸರಿನಲ್ಲಿ ಸಿಹಿತಿಂಡಿಗಳನ್ನು ತನ್ನ ವೇದಿಕೆಯಲ್ಲಿ ಮಾರಾಟ ಮಾಡಿದ ಸಂಬಂಧ ಇ-ಕಾಮರ್ಸ್ ದೈತ್ಯ ಅಮೆಝಾನ್ ಕಂಪನಿಯ ವಿರುದ್ಧ ಕೇಂದ್ರ ಗ್ರಾಹಕ ಸಂರಕ್ಷಣಾ ಪ್ರಾಧಿಕಾರ(ಸಿಸಿಪಿಎ) ನೋಟಿಸ್ ಜಾರಿ ಮಾಡಿದೆ.
ರಾಮಪ್ರಸಾದ ಹೆಸರಿನಲ್ಲಿ ನಕಲಿ ಉತ್ಪನ್ನಗಳನ್ನು ಮಾರಾಟ ಮಾಡುವ ಮೂಲಕ ಅಮೆಝಾನ್ ಆನ್‌ಲೈನ್ ಗ್ರಾಹಕರನ್ನು ದಾರಿ ತಪ್ಪಿಸುತ್ತಿದೆ ಎಂದು ಆರೋಪಿಸಿ ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ (ಸಿಎಐಟಿ) ಕೇಂದ್ರ ಸರ್ಕಾರಕ್ಕೆ ದೂರು ಸಲ್ಲಿಸಿತ್ತು.
ದೂರಿಗೆ ಪ್ರತಿಕ್ರಿಯಿಸಿದ ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರ (ಸಿಸಿಪಿಎ) ಅಮೆಝಾನ್ ಸಂಸ್ಥೆಗೆ ನೋಟಿಸ್ ಜಾರಿ ಮಾಡಿದೆ. ಈ ಬಗ್ಗೆ ವಾರದೊಳಗೆ ವಿವರಣೆ ನೀಡುವಂತೆ ಗಡುವು ನೀಡಲಾಗಿದೆ. ಇಲ್ಲವಾದಲ್ಲಿ ಕಂಪನಿ ವಿರುದ್ಧ ಗ್ರಾಹಕ ಸಂರಕ್ಷಣಾ ಕಾಯ್ದೆ-2019ರ ಅನ್ವಯ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದೆ.
ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರದ ಮುಖ್ಯ ಆಯುಕ್ತ ರೋಹಿತ್ ಕುಮಾರ್ ಸಿಂಗ್ ನೇತೃತ್ವದ ಕೇಂದ್ರಿಯ ಗ್ರಾಹಕ ರಕ್ಷಣಾ ಪ್ರಾಧಿಕಾರ (CCPA) ನೋಟಿಸ್ ಜಾರಿ ಮಾಡಿದ್ದು, “ಸಿಸಿಪಿಎ ನೀಡಿದ ನೋಟಿಸ್ ನಲ್ಲಿ ಏಳು ದಿನಗಳ ಒಳಗೆ ಪ್ರತಿಕ್ರಿಯೆ ಸಲ್ಲಿಸಬೇಕು. ಒಂದು ವೇಳೆ ನೋಟಿಸ್‌ಗೆ ಉತ್ತರ ನೀಡಲು ವಿಫಲವಾದಲ್ಲಿ ಗ್ರಾಹಕರ ಸಂರಕ್ಷಣಾ ಕಾಯಿದೆ- 2019ರ ನಿಬಂಧನೆಗಳ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗುವುದು” ಎಂದು ತಿಳಿಸಿದೆ.
ಇದನ್ನು ಓದಿದ್ದೀರಾ? ರಾಮಮಂದಿರಕ್ಕೆ ದಲಿತರು ಕೊಟ್ಟ ದೇಣಿಗೆಯನ್ನು ‘ಅಶುದ್ಧ’ವೆಂದು ವಾಪಸ್ ಕೊಟ್ಟ ಸವರ್ಣೀಯರು
ದೇಸಿ ಹಸುವಿನ ಹಾಲಿನ ಪೇಡ, ಘೀ ಬಂಡಿ ಲಡ್ಡು, ರಘುಪತಿ ಘೀ ಲಡ್ಡು, ಖೋಯಾ ಖೋಬಿ ಲಡ್ಡು ಸೇರಿದಂತೆ ಹಲವು ಸಿಹಿ ತಿಂಡಿಗಳನ್ನು ಹೈಲೈಟ್ ಮಾಡಿ ಅಮೆಝಾನ್ ಮಾರಾಟ ಮಾಡುತ್ತಿತ್ತು ಎಂದು ಆರೋಪಿಸಲಾಗಿದೆ.