ಬಸವಕಲ್ಯಾಣ: ಬೀದರ್ ಜಿಲ್ಲೆಯ ಬಸವಕಲ್ಯಾಣದಲ್ಲಿ ನವೆಂಬರ್ 28 ಮತ್ತು 29ರಂದು ನಡೆಯಲಿರುವ 47ನೇ ಶರಣ ಕಮ್ಮಟ ಹಾಗೂ ಅನುಭವ ಮಂಟಪ ಉತ್ಸವ-2026ರ ಅಂಗವಾಗಿ ಅನುಭವ ಮಂಟಪದಿಂದ ನೀಡಲಾಗುವ 2026ನೇ ಸಾಲಿನ ನಾಲ್ಕು ಪ್ರತಿಷ್ಠಿತ ಪ್ರಶಸ್ತಿಗಳನ್ನು ಘೋಷಿಸಲಾಗಿದೆ.
ನಾಡೋಜ ಬಸವಲಿಂಗ ಪಟ್ಟದ್ದೇವರು ಪ್ರಶಸ್ತಿ ಪುರಸ್ಕೃತರ ಹೆಸರುಗಳನ್ನು ಪ್ರಕಟಿಸಿದ್ದು, ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ, ಬಸವತತ್ವದ ಅನುಭಾವಿ ನವಲಿಂಗ ಶರಣರು, ಮನೋವೈದ್ಯ ಡಾ.ಸಿ.ಆರ್.ಚಂದ್ರಶೇಖರ ಅವರು ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಶರಣ ಡಾ.ಹಂಸಲೇಖ (ಬೆಂಗಳೂರು) ಅವರಿಗೆ ಸಂಗೀತ ಕ್ಷೇತ್ರದಲ್ಲಿನ ಅಪಾರ ಕೊಡುಗೆ ಹಾಗೂ ಸಾಮಾಜಿಕ ಸೇವೆಯನ್ನು ಗುರುತಿಸಿ ‘ಪೂಜ್ಯ ಶ್ರೀ ಡಾ.ಚನ್ನಬಸವ ಪಟ್ಟದ್ದೇವರು ಅನುಭವಮಂಟಪ ಪ್ರಶಸ್ತಿ’ ನೀಡಿ ಗೌರವಿಸಲಾಗುತ್ತಿದೆ. ಗೀತರಚನೆಕಾರ, ಸಂಗೀತ ನಿರ್ದೇಶಕ, ಗಾಯಕ ಹಾಗೂ ಸಂಯೋಜಕರಾಗಿ ಗುರುತಿಸಿಕೊಂಡಿರುವ ಅವರು ಮೂರೂವರೆ ಸಾವಿರಕ್ಕೂ ಅಧಿಕ ಹಾಡುಗಳನ್ನು ರಚಿಸಿ, ಸಂಯೋಜಿಸಿದ್ದಾರೆ. ಈ ಪ್ರಶಸ್ತಿಯು ₹1 ಲಕ್ಷ ನಗದು ಹಾಗೂ ಪ್ರಶಸ್ತಿ ಫಲಕ ಒಳಗೊಂಡಿದೆ.
ನವಲಿಂಗ ಶರಣರು (ಶಿವಮೊಗ್ಗ) ಅವರಿಗೆ ಬಸವತತ್ವ ಪ್ರಸಾರ ಹಾಗೂ ಶರಣರ ವಿಚಾರಧಾರೆಗಳನ್ನು ಜನಮಾನಸದಲ್ಲಿ ಬಿತ್ತುವ ನಿಟ್ಟಿನಲ್ಲಿ ಸಲ್ಲಿಸಿದ ಸೇವೆಗಾಗಿ ‘ಬಸವಭಾಸ್ಕರ ರಾಷ್ಟ್ರೀಯ ಪ್ರಶಸ್ತಿ’ ಘೋಷಿಸಲಾಗಿದೆ. 1984ರಲ್ಲಿ ಪ್ರಭುದೇವ ಜ್ಞಾನಕೇಂದ್ರ ಸ್ಥಾಪಿಸುವ ಮೂಲಕ ಬಸವತತ್ವದ ಅಧ್ಯಯನ, ಬೋಧನೆ ಹಾಗೂ ಪ್ರಸಾರದ ಕಾರ್ಯದಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದಾರೆ. ಈ ಪ್ರಶಸ್ತಿಯು ₹1 ಲಕ್ಷ ನಗದು ಹಾಗೂ ಪ್ರಶಸ್ತಿ ಫಲಕ ಒಳಗೊಂಡಿದೆ.

ಡಾ. ಸಿ.ಆರ್.ಚಂದ್ರಶೇಖರ (ಬೆಂಗಳೂರು) ಅವರಿಗೆ ಮನೋವೈದ್ಯಕೀಯ ಕ್ಷೇತ್ರದಲ್ಲಿ ಸಲ್ಲಿಸಿರುವ ಐದು ದಶಕಗಳಿಗೂ ಹೆಚ್ಚಿನ ಸೇವೆಯನ್ನು ಪರಿಗಣಿಸಿ ‘ಅನುಭವಮಂಟಪ ರಾಷ್ಟ್ರೀಯ ಪ್ರಶಸ್ತಿ’ ನೀಡಲಾಗುತ್ತಿದೆ. ನಿವೃತ್ತ ಪ್ರಾಧ್ಯಾಪಕರಾಗಿರುವ ಅವರು ಮನೋರೋಗಿಗಳಿಗೆ ಚಿಕಿತ್ಸೆ ನೀಡುವುದರ ಜತೆಗೆ ವಿದ್ಯಾರ್ಥಿಗಳಿಗೆ ಬೋಧನೆ ಮಾಡಿದ್ದಾರೆ. ಒಂದು ಲಕ್ಷಕ್ಕೂ ಅಧಿಕ ಜನರಿಗೆ ಉಚಿತ ಚಿಕಿತ್ಸೆ ನೀಡಿರುವುದು ಅವರ ಸೇವೆಯ ಮಹತ್ವವನ್ನು ಸಾರುತ್ತದೆ. ಈ ಪ್ರಶಸ್ತಿಯು ₹1 ಲಕ್ಷ ನಗದು ಹಾಗೂ ಪ್ರಶಸ್ತಿ ಫಲಕ ಒಳಗೊಂಡಿದೆ.
ಡಾ.ಎಂ.ಎಂ. ಕಲಬುರಗಿ ಸಾಹಿತ್ಯ ಸಂಶೋಧನಾ ರಾಷ್ಟ್ರೀಯ ಪ್ರಶಸ್ತಿ :
ಡಾ. ಸಂತೋಷ ಹಾನಗಲ್ಲ (ಬೆಂಗಳೂರು) ಅವರಿಗೆ ಕನ್ನಡ ಸಾಹಿತ್ಯ ಹಾಗೂ ಸಂಶೋಧನಾ ಕ್ಷೇತ್ರದ ಕೊಡುಗೆಗಾಗಿ ‘ಡಾ.ಎಂ.ಎಂ. ಕಲಬುರಗಿ ಸಾಹಿತ್ಯ ಸಂಶೋಧನಾ ರಾಷ್ಟ್ರೀಯ ಪ್ರಶಸ್ತಿ’ ನೀಡಿ ಗೌರವಿಸಲಾಗುತ್ತಿದೆ. ಸಂಶೋಧನೆ ಮತ್ತು ಸೃಜನಶೀಲ ಬರವಣಿಗೆಯಲ್ಲಿ ತೊಡಗಿಸಿಕೊಂಡಿರುವ ಅವರು ಇದುವರೆಗೆ 27 ಗದ್ಯ ಸಾಹಿತ್ಯ ಕೃತಿಗಳನ್ನು ರಚಿಸಿದ್ದಾರೆ. ಭಾಷಾಸಮ್ಮಿಲನ, ಭಾಷಾತೋರಣ, ಸಂಶೋಧನೆ ಹಾಗೂ ಸಂಘಟನಾ ಕ್ಷೇತ್ರಗಳಲ್ಲಿಯೂ ಸೇವೆ ಸಲ್ಲಿಸಿದ್ದಾರೆ. ಈ ಪ್ರಶಸ್ತಿಯು ₹50 ಸಾವಿರ ನಗದು ಹಾಗೂ ಪ್ರಶಸ್ತಿ ಫಲಕ ಒಳಗೊಂಡಿದೆ.
ಬಸವಕಲ್ಯಾಣದಲ್ಲಿ ನವೆಂಬರ್ 28 ಮತ್ತು 29ರಂದು ನಡೆಯಲಿರುವ ಅನುಭವ ಮಂಟಪ ಉತ್ಸವದಲ್ಲಿ ಪೂಜ್ಯರು ಹಾಗೂ ಗಣ್ಯರ ಸಮ್ಮುಖದಲ್ಲಿ ನಾಲ್ಕೂ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುವುದು ಎಂದು ಅನುಭವಮಂಟಪದ ಪ್ರಕಟಣೆ ತಿಳಿಸಿದೆ.
ಇದನ್ನೂ ಓದಿ : ಬೀದರ್ ವಿವಿ | ಪರೀಕ್ಷೆಗೂ ಮುನ್ನವೇ ಮುಂದಿನ ಸೆಮಿಸ್ಟರ್ ತರಗತಿ ಪುನಾರಾರಂಭ?





