ಯುವ ಪೀಳಿಗೆ ಸಾಮಾಜಿಕ ಪ್ರಜ್ಞೆ ಬೆಳೆಸಿಕೊಂಡು ಸಮಾಜದ ಅಭಿವೃದ್ಧಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದು ಅಲ್ ಅಮೀನ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಮುಬಾಶಿರ್ ಸಿಂಧೆ ಹೇಳಿದರು.
ಬೀದರ್ ನಗರದ ಅಲ್ ಅಮೀನ್ ಪದವಿ ಕಾಲೇಜಿನಲ್ಲಿ ಸೋಮವಾರ ಚಂದ್ರ ಸಾಂಸ್ಕೃತಿಕ, ಸಾಹಿತ್ಯಿಕ ಹಾಗೂ ಶೈಕ್ಷಣಿಕ ಚಾರಿಟಬಲ್ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಮಹಿಳಾ ಸಬಲೀಕರಣ, ನಾಯಕತ್ವ ಬೆಳವಣಿಗೆ, ಕೃತಕ ಬುದ್ಧಿಮತ್ತೆ, ಪರಿಸರ ಸಂರಕ್ಷಣೆ, ಮಹಿಳೆಯರ ಆರೋಗ್ಯ ಹಾಗೂ ಋತುಚಕ್ರ ಸ್ವಚ್ಛತೆ ಕುರಿತ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಾಮಾಜಿಕ ಹೊಣೆಗಾರಿಕೆ ಪ್ರತಿಯೊಬ್ಬರ ಮೇಲೂ ಇದೆ. ಹೆಣ್ಣುಮಕ್ಕಳನ್ನು ಸಾಧನೆಯತ್ತ ಪ್ರೇರೇಪಿಸುವುದರ ಜತೆಗೆ ಅವರಲ್ಲಿ ಆತ್ಮವಿಶ್ವಾಸ ಬೆಳೆಸುವ ಕಾರ್ಯಕ್ರಮಗಳು ಹೆಚ್ಚಿನ ಸಂಖ್ಯೆಯಲ್ಲಿ ನಡೆಯಬೇಕು ಎಂದು ಹೇಳಿದರು.

ಸರ್ಕಾರಿ ಮಹಿಳಾ ಪದವಿ ಕಾಲೇಜಿನ ಪ್ರಾಧ್ಯಾಪಕ ಡಾ.ಮನೋಹರ ಮೇತ್ರೆ ಮಾತನಾಡಿ, “ಮಹಿಳೆಯರು ಶಿಕ್ಷಣ, ಆಡಳಿತ, ಉದ್ಯಮ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲೂ ಮುನ್ನಡೆಯಬೇಕು. ಸಮಾಜದ ಸಮಗ್ರ ಪ್ರಗತಿಗಾಗಿ ಮಹಿಳೆಯರಿಗೆ ಪುರುಷರಷ್ಟೇ ಸಮಾನ ಅವಕಾಶಗಳನ್ನು ಕಲ್ಪಿಸುವುದು ಅತ್ಯಗತ್ಯ” ಎಂದು ತಿಳಿಸಿದರು.
ಸರ್ಕಾರಿ ಪಾಲಿಟೆಕ್ನಿಕ್‌ನ ಗಣಕಯಂತ್ರ ವಿಭಾಗದ ವಿಭಾಗಾಧಿಕಾರಿ ವಿಜಯಕುಮಾರ ವಲ್ಲೂರೆ ಮಾತನಾಡಿ, “ಕೃತಕ ಬುದ್ಧಿಮತ್ತೆ (ಎಐ) ಶಿಕ್ಷಣ, ಉದ್ಯೋಗ ಹಾಗೂ ದೈನಂದಿನ ಜೀವನದಲ್ಲಿ ಮಹತ್ವದ ಬದಲಾವಣೆಗಳನ್ನು ತರುತ್ತಿದೆ. ವಿದ್ಯಾರ್ಥಿನಿಯರು ಆಧುನಿಕ ತಂತ್ರಜ್ಞಾನದ ಬಗ್ಗೆ ಅರಿವು ಬೆಳೆಸಿಕೊಂಡು, ಅದನ್ನು ಸದುಪಯೋಗಪಡಿಸಿಕೊಳ್ಳಬೇಕು” ಎಂದು ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಟ್ರಸ್ಟ್ ಅಧ್ಯಕ್ಷ ಪ್ರವೀಣಚಂದ್ರ ಮೀರಾಗಂಜಕರ್ ಮಾತನಾಡಿ, “ಇಂದಿನ ವಿದ್ಯಾರ್ಥಿನಿಯರೇ ನಾಳಿನ ನಾಯಕಿಯರು. ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆ ತರಲು ಪ್ರತಿಯೊಬ್ಬರೂ ಕೈಜೋಡಿಸಬೇಕು. ಟ್ರಸ್ಟ್ ಮಹಿಳಾ ಸಬಲೀಕರಣಕ್ಕಾಗಿ ಶ್ರಮಿಸುತ್ತಿದ್ದು, ಹೆಣ್ಣುಮಕ್ಕಳು ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಪ್ರೇರೇಪಿಸುತ್ತಿದೆ” ಎಂದು ಹೇಳಿದರು.

ಕೃಷಿ ಅಧಿಕಾರಿ ಡಾ.ವರ್ಷಾ ಗಾಯತೊಂಡೆ ಹಾಗೂ ಮಕ್ಕಳ ಕಲ್ಯಾಣ ಸಮಿತಿ ಸದಸ್ಯೆ ಶಾಲಿನಿ ಫ್ಲಾರೆನ್ಸ್ ಮಾತನಾಡಿದರು.
ಇದನ್ನೂ ಓದಿ : ಬೀದರ್ | ಐತಿಹಾಸಿಕ ಕರೇಜ್ ಅಭಿವೃದ್ಧಿಗೆ ಬುಡಾ ಕೈಜೋಡಿಸಲಿ
ಅಲ್ ಅಮೀನ್ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಮೊಹಮ್ಮದ್ ಮಕ್ಬೂಲ್ ಅಹಮ್ಮದ್ ಹಾಗೂ ಪ್ರಾಚಾರ್ಯ ಮೊಹಮ್ಮದ್ ಖಾಜಾ ಉಪಸ್ಥಿತರಿದ್ದರು. ಡ್ಯಾನಿಯಲ್ ಮೇತ್ರೆ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕಿ ಸೈಯದಾ ಕರೀಮ್ ಖಾದ್ರಿ ವಂದಿಸಿದರು




