ದ್ವಿಚಕ್ರ ವಾಹನ ಸವಾರರ ರಸ್ತೆ ಸುರಕ್ಷತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಸಂಚಾರ ಪೊಲೀಸ್ ಇಲಾಖೆ, ಬೆಂಗಳೂರು ನಗರ ಸಂಚಾರ ಪೊಲೀಸರು (ಬಿಟಿಪಿ) ಹಾಫ್ ಹೆಲ್ಮೆಟ್ (ಅರ್ಧ ಹೆಲ್ಮೆಟ್) ಮತ್ತು ಬಿಎಸ್ಐ/ಐಎಸ್ಐ ಪ್ರಮಾಣೀಕರಣವಿಲ್ಲದ ಕಳಪೆ ಗುಣಮಟ್ಟದ ಹೆಲ್ಮೆಟ್ಗಳ ಬಳಕೆಯನ್ನು ಕಡ್ಡಾಯವಾಗಿ ನಿಷೇಧಿಸಿದ್ದಾರೆ. ಈ ನಿಯಮವನ್ನು ಉಲ್ಲಂಘಿಸುವ ಸವಾರರ ವಿರುದ್ಧ ದಂಡ ವಿಧಿಸುವ ಪ್ರಕ್ರಿಯೆಯನ್ನು ಸಂಚಾರ ಪೊಲೀಸರು ಚುರುಕುಗೊಳಿಸಿದ್ದಾರೆ.
ಅಪಘಾತ ಸಂಭವಿಸಿದಾಗ ಹಾಫ್ ಹೆಲ್ಮೆಟ್ಗಳಿಂದಾಗಿ ಸವಾರರ ತಲೆ, ಗಲ್ಲ ಹಾಗೂ ಕತ್ತಿನ ಭಾಗಕ್ಕೆ ಸೂಕ್ತ ರಕ್ಷಣೆ ಸಿಗುತ್ತಿಲ್ಲ. ಅನೇಕ ಅಪಘಾತಗಳಲ್ಲಿ ಹಾಫ್ ಹೆಲ್ಮೆಟ್ ಧರಿಸಿದ್ದರೂ ಗಂಭೀರ ತಲೆ ಏಟು ಉಂಟಾಗಿ ಜೀವಹಾನಿ ಸಂಭವಿಸುತ್ತಿದೆ. ಈ ನಿಟ್ಟಿನಲ್ಲಿ ಕಠಿಣ ನಿರ್ಧಾರ ಕೈಗೊಳ್ಳಲಾಗಿದೆ.
ಇದನ್ನೂ ಓದಿ: ಬೆಳಗಾವಿ | ಕಾರಿಗೂ ಹೆಲ್ಮೆಟ್ ಕಡ್ಡಾಯವೇ? ಎ ಐ ಕ್ಯಾಮೆರಾ ಹೊಸ ನಿಯಮ
ಸಂಚಾರ ನಿಯಮಗಳ ಪ್ರಕಾರ, ದ್ವಿಚಕ್ರ ವಾಹನ ಸವಾರರು ಮತ್ತು ಹಿಂಬದಿ ಸವಾರರು ಕಡ್ಡಾಯವಾಗಿ ಭಾರತೀಯ ಮಾನಕ ಸಂಸ್ಥೆ (ಬಿಎಸ್ಐ/ಐಎಸ್ಐ) ಪ್ರಮಾಣೀಕೃತ ಫುಲ್-ಫೇಸ್ (Full-face) ಹೆಲ್ಮೆಟ್ಗಳನ್ನೇ ಧರಿಸಬೇಕು. ಬಿಎಸ್ಐ ಮುದ್ರೆ ಇಲ್ಲದ ಕ್ಯಾಪ್ ಹೆಲ್ಮೆಟ್ ಅಥವಾ ಹಾಫ್ ಹೆಲ್ಮೆಟ್ಗಳನ್ನು ಹೆಲ್ಮೆಟ್ ಎಂದು ಪರಿಗಣಿಸಲಾಗುವುದಿಲ್ಲ.
ಮೋಟಾರು ವಾಹನ ಕಾಯ್ದೆ ಅಡಿಯಲ್ಲಿ ಹಾಫ್ ಹೆಲ್ಮೆಟ್ ಅಥವಾ ಕಳಪೆ ಹೆಲ್ಮೆಟ್ ಧರಿಸಿ ಚಾಲನೆ ಮಾಡುವುದು ನಿಯಮಬಾಹಿರ. ಪ್ರಥಮ ಬಾರಿಗೆ ನಿಯಮ ಉಲ್ಲಂಘಿಸಿದರೆ ₹500 ದಂಡ ವಿಧಿಸಲಾಗುತ್ತದೆ. ಮರುಕಳಿಸಿದರೆ ದಂಡದ ಜೊತೆಗೆ ಚಾಲನಾ ಪರವಾನಗಿಯನ್ನು (ಡಿಎಲ್) ಮೂರು ತಿಂಗಳ ಅವಧಿಗೆ ಅಮಾನತುಗೊಳಿಸುವ ನಿಬಂಧನೆಯಿದೆ.
ರಸ್ತೆ ಬದಿ ಹಾಗೂ ಅಂಗಡಿಗಳಲ್ಲಿ ಐಎಸ್ಐ ಮುದ್ರೆ ಇಲ್ಲದ, ಸುರಕ್ಷತಾ ಮಾನದಂಡಗಳಿಲ್ಲದ ಹಾಫ್ ಹೆಲ್ಮೆಟ್ಗಳನ್ನು ಮಾರಾಟ ಮಾಡುವವರ ವಿರುದ್ಧವೂ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಪೊಲೀಸರು ಎಚ್ಚರಿಸಿದ್ದಾರೆ.




