ಜೇವರ್ಗಿ ಹಾಗೂ ಯಡ್ರಾಮಿ ಅವಳಿ ತಾಲೂಕಿನ ಗ್ರಾಮೀಣ ಪ್ರದೇಶಗಳ ಜನರು ಆಧಾರ್ ಕಾರ್ಡ್‌ನಲ್ಲಿರುವ ಲೋಪದೋಷಗಳನ್ನು ಸರಿಪಡಿಸಿಕೊಳ್ಳಲು ಜೇವರ್ಗಿಗೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಸಾರ್ವಜನಿಕರ ಅನುಕೂಲಕ್ಕಾಗಿ ಹೆಚ್ಚುವರಿ ಆಧಾರ್ ತಿದ್ದುಪಡಿ ಕೇಂದ್ರಗಳನ್ನು ಆರಂಭಿಸಬೇಕು ಎಂದು ಸಾಮಾಜಿಕ ಹೋರಾಟಗಾರ ಸಿದ್ದರಾಮ ಕಟ್ಟಿ ಆಗ್ರಹಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿದ ಅವರು ‘ಜೇವರ್ಗಿ ವಿಧಾನಸೌಧದ ಕೆಳ ಮಹಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಆಧಾರ್ ಕೇಂದ್ರಕ್ಕೆ ಜೇವರ್ಗಿ ಹಾಗೂ ಯಡ್ರಾಮಿ ತಾಲೂಕಿನ ವಿವಿಧ ಗ್ರಾಮಗಳಿಂದ ಪ್ರತಿದಿನ ನೂರಾರು ಮಹಿಳೆಯರು, ಮಕ್ಕಳು, ವಿದ್ಯಾರ್ಥಿಗಳು ಹಾಗೂ ಪಾಲಕರು ಆಗಮಿಸುತ್ತಿದ್ದಾರೆ. ಆದರೆ ಎರಡು ತಾಲೂಕುಗಳಿಗೆ ಕೇವಲ ಎರಡು ಕೇಂದ್ರಗಳಿರುವುದರಿಂದ ತಿದ್ದುಪಡಿಗಾಗಿ ಜನರು ಗಂಟೆಗಟ್ಟಲೆ ಕಾಯಬೇಕಾದ ಪರಿಸ್ಥಿತಿ’ ಎದುರಾಗಿದೆ.
‘ಆಧಾರ್ ತಿದ್ದುಪಡಿ ಒಂದೇ ದಿನದಲ್ಲಿ ಪೂರ್ಣಗೊಳ್ಳದ ಸಂದರ್ಭಗಳಲ್ಲಿ ಜನರು ಎರಡು–ಮೂರು ದಿನಗಳ ಕಾಲ ಸತತವಾಗಿ ಜೇವರ್ಗಿಗೆ ಬರುವಂತಾಗಿದೆ. ಇದರಿಂದ ವಿದ್ಯಾರ್ಥಿಗಳು ಶಾಲಾ–ಕಾಲೇಜುಗಳಿಗೆ ಗೈರಾಗಬೇಕಾಗಿದ್ದು, ಪಾಲಕರು ತಮ್ಮ ದಿನನಿತ್ಯದ ಕೆಲಸಗಳನ್ನು ಬದಿಗೊತ್ತಿ ಮಕ್ಕಳೊಂದಿಗೆ ಕೇಂದ್ರಕ್ಕೆ ಬರುವ ಅನಿವಾರ್ಯತೆ ಎದುರಾಗಿದೆ’ ಎಂದು ತಿಳಿಸಿದ್ದಾರೆ.
‘ಜೇವರ್ಗಿ ಪಟ್ಟಣದ ಎಸ್‌ಬಿಐ ಬ್ಯಾಂಕ್ ಎದುರು ಖಾಸಗಿ ಕೇಂದ್ರವೊಂದರಲ್ಲಿ ಆಧಾರ್ ತಿದ್ದುಪಡಿ ಮಾಡಲಾಗುತ್ತಿದ್ದು, ಹೆಚ್ಚಿನ ಹಣ ವಸೂಲಿ ಮಾಡಲಾಗುತ್ತಿದೆ ಎಂಬ ದೂರುಗಳಿವೆ. ಸರ್ಕಾರಿ ಕೇಂದ್ರಗಳಲ್ಲಿ ಜನದಟ್ಟಣೆ ಹೆಚ್ಚಿರುವುದರಿಂದ ಖಾಸಗಿ ಕೇಂದ್ರಗಳ ಮೊರೆ ಹೋಗಬೇಕಾದ ಸ್ಥಿತಿ ಸಾರ್ವಜನಿಕರಿಗೆ ಎದುರಾಗಿದೆ’ ಎಂದು ಅವರು ಹೇಳಿದ್ದಾರೆ.
‘ಯಡ್ರಾಮಿ ತಾಲೂಕಿನಲ್ಲಿ ಇಜೇರಿ, ಅರಳಗುಂಡಗಿ ಹಾಗೂ ಮಳ್ಳಿ ಗ್ರಾಮಗಳಲ್ಲಿ ಆಧಾರ್ ತಿದ್ದುಪಡಿ ಕೇಂದ್ರಗಳನ್ನು ಆರಂಭಿಸಬೇಕು. ಜೇವರ್ಗಿ ತಾಲೂಕಿನಲ್ಲಿ ನೆಲೋಗಿ, ಆಂದೋಲ, ಮಂದೇವಾಲ ಹಾಗೂ ಕೋಲ್ಕೂರು ಹೋಬಳಿಗಳಿಗೆ ಒಂದರಂತೆ ಕೇಂದ್ರ ಸ್ಥಾಪಿಸಬೇಕು’ ಎಂದು ಅವರು ಒತ್ತಾಯಿಸಿದ್ದಾರೆ.
‘ಜನರ ಸಮಸ್ಯೆಯನ್ನು ಜೇವರ್ಗಿ–ಯಡ್ರಾಮಿ ಕ್ಷೇತ್ರದ ಶಾಸಕರು ಹಾಗೂ ನೂತನ ಸಚಿವ ಡಾ. ಅಜಯ್ ಸಿಂಗ್ ಮತ್ತು ಎರಡೂ ತಾಲೂಕುಗಳ ತಹಸೀಲ್ದಾರರು ಗಂಭೀರವಾಗಿ ಪರಿಗಣಿಸಿ, ತಕ್ಷಣ ಹೆಚ್ಚುವರಿ ಕೇಂದ್ರಗಳನ್ನು ಆರಂಭಿಸಲು ಕ್ರಮ ಕೈಗೊಳ್ಳಬೇಕು. ಇದರಿಂದ ಗ್ರಾಮೀಣ ಜನರು ಆಧಾರ್ ತಿದ್ದುಪಡಿಗಾಗಿ ಪದೇಪದೇ ಜೇವರ್ಗಿಗೆ ಆಗಮಿಸುವ ತೊಂದರೆ ತಪ್ಪಲಿದೆ’ ಎಂದು ಹೇಳಿದ್ದಾರೆ.
ಇದನ್ನು ಓದಿದ್ದೀರಾ? ಯಾದಗಿರಿ | ದಲಿತ ಸಭೆಯೋ, ಚಹಾ, ಫೋಟೋ ಕೂಟವೋ? ಅಧಿಕಾರಿಗಳ ವಿರುದ್ಧ ವಿಶ್ವ ನಾಟೇಕಾರ್ ಕಿಡಿ
‘ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸಿ ಹೆಚ್ಚುವರಿ ಕೇಂದ್ರಗಳನ್ನು ಸ್ಥಾಪಿಸದಿದ್ದರೆ, ಸಾರ್ವಜನಿಕರೊಂದಿಗೆ ತಹಸೀಲ್ದಾರ್ ಕಚೇರಿ ಎದುರು ಹೋರಾಟ ನಡೆಸಲಾಗುವುದು’ ಎಂದು ಸಿದ್ದರಾಮ ಕಟ್ಟಿ ಎಚ್ಚರಿಕೆ ನೀಡಿದ್ದಾರೆ.





