ನವ ಕರ್ನಾಟಕ ರೈತ ಸಂಘದ ವತಿಯಿಂದ ನಗರದ ಸುಮಾರು 18 ಎಕರೆ ವಿಶಾಲ ಪ್ರದೇಶದಲ್ಲಿ ಡಿಸೆಂಬರ್ 12, 13 ಮತ್ತು 14ರಂದು ಮೂರು ದಿನಗಳ ರಾಜ್ಯಮಟ್ಟದ ರೈತ ಸಮಾವೇಶ ಹಾಗೂ ಕೃಷಿಮೇಳ ಆಯೋಜಿಸಲಾಗುವುದು ಎಂದು ಸಮಾವೇಶದ ಸ್ವಾಗತ ಸಮಿತಿ ಅಧ್ಯಕ್ಷ, ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ್ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಕೃಷಿ ಕ್ಷೇತ್ರ ಎದುರಿಸುತ್ತಿರುವ ಬಿಕ್ಕಟ್ಟುಗಳಿಗೆ ಪರಿಹಾರ ಕಂಡುಕೊಳ್ಳುವುದು, ರೈತರ ಸಮಸ್ಯೆಗಳ ಕುರಿತು ಚರ್ಚಿಸುವುದು ಹಾಗೂ ಕೃಷಿ ಅಭಿವೃದ್ಧಿಗೆ ಅಗತ್ಯವಾದ ಕ್ರಮಗಳ ಬಗ್ಗೆ ಅರಿವು ಮೂಡಿಸುವುದು ಸಮಾವೇಶದ ಪ್ರಮುಖ ಉದ್ದೇಶವಾಗಿದೆ” ಎಂದರು.
“ಗ್ರಾಮ ಸ್ವರಾಜ್ಯದ ಬಲವರ್ಧನೆ, ಸ್ವಾವಲಂಬಿ ಕೃಷಿ ಪದ್ಧತಿ, ಆಹಾರ ಪದ್ಧತಿಯಲ್ಲಿನ ಬದಲಾವಣೆ ಹಾಗೂ ರೈತರು ಬೆಳೆದ ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ನಿಗದಿಪಡಿಸುವುದು ಸೇರಿದಂತೆ ಕೃಷಿ ಕ್ಷೇತ್ರದ ಪ್ರಮುಖ ವಿಷಯಗಳ ಕುರಿತು ಸಮಾವೇಶದಲ್ಲಿ ಚರ್ಚೆ ನಡೆಯಲಿದೆ. ಕರ್ನಾಟಕ ಸೇರಿದಂತೆ ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು, ಕೇರಳ ಮತ್ತಿತರ ರಾಜ್ಯಗಳ ರೈತ ಮುಖಂಡರು, ಕೃಷಿ ತಜ್ಞರು ಹಾಗೂ ಗಣ್ಯರು ಪಾಲ್ಗೊಳ್ಳುವ ನಿರೀಕ್ಷೆಯಿದೆ “ಎಂದು ಹೇಳಿದರು.
ದೇಶದ ಪ್ರಸಿದ್ಧ ಕೃಷಿ ತಜ್ಞರು ಮತ್ತು ರೈತ ಮುಖಂಡರು ವಿವಿಧ ವಿಷಯಗಳ ಕುರಿತು ವಿಚಾರ ಮಂಡಿಸಲಿದ್ದು, ಕೃಷಿ ಬಿಕ್ಕಟ್ಟಿನ ನಿವಾರಣೆ, ರೈತರ ಹಕ್ಕುಗಳ ರಕ್ಷಣೆ, ಕೃಷಿ ಕ್ಷೇತ್ರದ ಅಭಿವೃದ್ಧಿ ಹಾಗೂ ರೈತರು ಎದುರಿಸುತ್ತಿರುವ ಸವಾಲುಗಳ ಕುರಿತು ವಿಚಾರ ವಿನಿಮಯ ನಡೆಯಲಿದೆ ಎಂದು ತಿಳಿಸಿದರು.
ಕೃಷಿಮೇಳದಲ್ಲಿ ಕೃಷಿ ತಂತ್ರಜ್ಞಾನಗಳ ಪ್ರದರ್ಶನ
ಸಮಾವೇಶದ ಅಂಗವಾಗಿ ಆಯೋಜಿಸುವ ಕೃಷಿಮೇಳದಲ್ಲಿ ಕೃಷಿ ಉತ್ಪನ್ನಗಳು, ಕೃಷಿ ಪರಿಕರಗಳು ಹಾಗೂ ಕೃಷಿಗೆ ಸಂಬಂಧಿಸಿದ ವಸ್ತುಗಳ ಪ್ರದರ್ಶನ ಮತ್ತು ಮಾರಾಟಕ್ಕೆ ಅವಕಾಶ ಕಲ್ಪಿಸಲಾಗುವುದು. ನೂತನ ಕೃಷಿ ತಂತ್ರಜ್ಞಾನಗಳು, ಸುಧಾರಿತ ಕೃಷಿ ಪದ್ಧತಿಗಳು ಹಾಗೂ ಕೃಷಿ ಕ್ಷೇತ್ರದ ಬೆಳವಣಿಗೆಗಳ ಕುರಿತು ರೈತರಿಗೆ ಮಾಹಿತಿ ನೀಡಲಾಗುವುದು ಎಂದರು.
ಸಾವಯವ ಕೃಷಿ, ಸ್ಥಳೀಯ ಬೀಜಗಳ ಸಂರಕ್ಷಣೆ, ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ ಹಾಗೂ ಜಾನುವಾರು ಸಾಕಾಣಿಕೆಗೂ ಆದ್ಯತೆ ನೀಡಲಾಗುವುದು. ಹಸು, ಎಮ್ಮೆ, ಕುರಿ, ಆಡು ಮತ್ತು ಕೋಳಿ ಸಾಕಾಣಿಕೆ ಕುರಿತು ಮಾಹಿತಿ ನೀಡುವುದರ ಜತೆಗೆ ಜಾನುವಾರುಗಳ ಪ್ರದರ್ಶನ ಆಯೋಜಿಸುವ ಉದ್ದೇಶವಿದೆ ಎಂದು ವಿವರಿಸಿದರು.
ಸಮಾವೇಶದಲ್ಲಿ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಾಮಾಜಿಕ ಚಿಂತಕ ಅಣ್ಣಾ ಹಜಾರೆ, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ, ಎಚ್.ಡಿ. ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ, ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು, ಕಣ್ಣೇರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಮಹಾಸ್ವಾಮಿಗಳು, ಕೊಪ್ಪಳದ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಹಾಗೂ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಸೇರಿದಂತೆ ಹಲವು ಗಣ್ಯರು ಭಾಗವಹಿಸುವ ನಿರೀಕ್ಷೆಯಿದೆ ಎಂದು ಮಾಲೀಕಯ್ಯ ಗುತ್ತೇದಾರ್ ತಿಳಿಸಿದರು.
ಇದನ್ನೂ ಓದಿ : ಔರಾದ್ | ಸಾಲಬಾಧೆ : ರೈತ ಆತ್ಮಹತ್ಯೆ
ಸುದ್ದಿಗೋಷ್ಠಿಯಲ್ಲಿ ಸ್ವಾಗತ ಸಮಿತಿಯ ಕಾರ್ಯಾಧ್ಯಕ್ಷ ದಯಾನಂದ ಪಾಟೀಲ್, ಉಪಾಧ್ಯಕ್ಷ ಶಿವಕಾಂತ್ ಮಹಾಜನ್, ಕಾರ್ಯದರ್ಶಿ ಶಿವಕುಮಾರ್ ಪಾಟೀಲ್, ಖಜಾಂಚಿ ಸಂತೋಷ್ ಗುತ್ತೇದಾರ್, ಪವನ್‌ಕುಮಾರ್ ಒಳಕೇರಿ, ಸಂಗಮೇಶ ವಾಲಿ ಹಾಗೂ ನಾಗಲಿಂಗಯ್ಯ ಮಠಪತಿ ಉಪಸ್ಥಿತರಿದ್ದರು.





