ಕಳೆದ ಭಾನುವಾರ(ಅ29) ಮೂವರು ಸಾವನ್ನಪ್ಪಿ, 50ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದ ಕೇರಳದ ಕಳಮಶ್ಶೇರಿ ಬಾಂಬ್ ಸ್ಫೋಟ ಪ್ರಕರಣದ ಪ್ರಮುಖ ಆರೋಪಿ ಡೊಮಿನಿಕ್ ಮಾರ್ಟಿನ್, ನ್ಯಾಯಾಲಯದಲ್ಲಿ ತನ್ನ ಪರವಾಗಿ ವಾದಿಸಲು ವಕೀಲರು ಬೇಡ, ನಾನೇ ವಾದಿಸುತ್ತೇನೆ ಎಂದು ತಿಳಿಸುವ ಮೂಲಕ ಕಾನೂನು ನೆರವನ್ನು ತಿರಸ್ಕರಿಸಿದ್ದಾನೆ.
ಕಾನೂನು ನೆರವು ನಿರಾಕರಿಸಿರುವ ಹಿನ್ನೆಲೆಯಲ್ಲಿ ಆರೋಪಿಯನ್ನು ನವೆಂಬರ್ 29ರವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಆರೋಪಿ ಡೊಮಿನಿಕ್ ಅನ್ನು ನಿನ್ನೆ ಸಂಜೆ(ನ.1) ನ್ಯಾಯಾಲಯಕ್ಕೆ ಹಾಜರುಪಡಿಸಿದ ವೇಳೆ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಹನಿ ಎಂ ವರ್ಗೀಸ್ ಅವರು ಹಲವಾರು ಬಾರಿ ಮನವಿ ಮಾಡಿದ ಹೊರತಾಗಿಯೂ, ಕಾನೂನು ನೆರವು ವಕೀಲರ ನೆರವನ್ನು ನಿರಾಕರಿಸಿದ್ದಾನೆ. ಅಲ್ಲದೇ, ನನ್ನನ್ನು ಸ್ವತಃ ನಾನೇ ಪ್ರತಿನಿಧಿಸುವುದಾಗಿ ಹೇಳಿಕೆ ನೀಡಿದ್ದಾನೆ. ಆರೋಪಿಯು ಕಾನೂನು ನೆರವಿಗೆ ಒಪ್ಪದ ಹಿನ್ನೆಲೆಯಲ್ಲಿ ನ್ಯಾಯಾಧೀಶರು ನವೆಂಬರ್ 29ರವರೆಗೆ ನ್ಯಾಯಾಂಗ ಬಂಧನ ವಿಧಿಸಿದರು.
ಈ ಹಿನ್ನೆಲೆಯಲ್ಲಿ ಆರೋಪಿಯನ್ನು ಸಾಕ್ಷ್ಯ ಸಂಗ್ರಹಕ್ಕಾಗಿ ಆತನ ಮನೆಗೆ ಕರೆದೊಯ್ಯಲಾಯಿತು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಆರೋಪಿಯು 17 ವರ್ಷಗಳ ಕಾಲ ವಿದೇಶದಲ್ಲಿ ಕೆಲಸ ಮಾಡುತ್ತಿದ್ದು ಹೆಚ್ಚಿನ ಸಂಬಳದ ಉದ್ಯೋಗವನ್ನು ಹೊಂದಿದ್ದ. ಆತ ತುಂಬಾ ಬುದ್ಧಿವಂತ. ಎಲ್ಲವನ್ನೂ ವ್ಯವಸ್ಥಿತವಾಗಿ ನಡೆಸಿದ್ದಾನೆ. ಬಾಂಬ್ ಸ್ಫೋಟದ ಬಳಿಕ ತನ್ನ ಮೊಬೈಲ್‌ನಿಂದ ಯಾರಿಗೆಲ್ಲ ಕರೆ ಮಾಡಿದ್ದಾನೆ ಎಂಬುದನ್ನು ಕೂಡ ತನಿಖೆಯಲ್ಲಿ ಪತ್ತೆ ಹಚ್ಚುತ್ತಿದ್ದೇವೆ ಮತ್ತು ಘಟನೆಯ ವಿಡಿಯೋವನ್ನು ಯಾರಿಗೆಲ್ಲ ಕಳುಹಿಸಿದ್ದ ಎಂಬುದರ ಬಗ್ಗೆಯೂ ತನಿಖೆ ನಡೆಸುತ್ತಿದ್ದೇವೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಆರೋಪಿಯನ್ನು ಕಾಕನಾಡು ಜಿಲ್ಲಾ ಕಾರಾಗೃಹಕ್ಕೆ ಸ್ಥಳಾಂತರಿಸಲಾಗುವುದು ಎಂದು ತನಿಖೆ ನಡೆಸುತ್ತಿರುವ ಪೊಲೀಸರು ತಿಳಿಸಿದ್ದಾರೆ.