ಮಾಜಿ ಸಂಸದ ಪ್ರತಾಪ್ ಸಿಂಹ ಅವರು ದಲಿತ ಸಂಘರ್ಷ ಸಮಿತಿ (ದ.ಸಂ.ಸ) ಹಾಗೂ ದಲಿತ ಸಮುದಾಯದ ಕುರಿತು ನೀಡಿರುವ ಅವಹೇಳನಕಾರಿ ಹೇಳಿಕೆಗಳನ್ನು ಖಂಡಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ಬಾಗಲಕೋಟೆ ಜಿಲ್ಲಾ ಘಟಕ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ಬಾಗಲಕೋಟೆ ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದ.ಸಂ.ಸ (ಡಿ. ಜೆ ಸಾಗರ ಬಣ ) ಜಿಲ್ಲಾ ಸಂಚಾಲಕ ಪರಶುರಾಮ ಕಾಂಬಳೆ, “ಬಿ.ಆರ್. ಅಂಬೇಡ್ಕರ್ ಅವರ ಸಾಮಾಜಿಕ ವಿಚಾರಧಾರೆ ಹಾಗೂ ಸಮಾನತೆಯ ಆಶಯಗಳ ಹಿನ್ನೆಲೆಯಲ್ಲಿ ರೂಪುಗೊಂಡಿರುವ ದಲಿತ ಸಂಘರ್ಷ ಸಮಿತಿ, 1970ರ ದಶಕದಿಂದಲೂ ಶೋಷಿತರು, ಅಸ್ಪೃಶ್ಯರು ಹಾಗೂ ದಮನಿತ ಸಮುದಾಯಗಳ ಹಕ್ಕುಗಳಿಗಾಗಿ ನಿರಂತರ ಹೋರಾಟ ನಡೆಸುತ್ತಾ ಬಂದಿದೆ” ಎಂದು ಹೇಳಿದರು.
“ದಲಿತ ಚಳವಳಿಯ ಇತಿಹಾಸ ಹಾಗೂ ಅದರ ಸಾಮಾಜಿಕ ಹಿನ್ನೆಲೆಯನ್ನು ಅರಿಯದೆ ಪ್ರತಾಪ್ ಸಿಂಹ ಅವರು ದ.ಸಂ.ಸ ಹಾಗೂ ದಲಿತ ಸಮುದಾಯದ ಕುರಿತು ಹೀಗಳೆಯುವ ರೀತಿಯಲ್ಲಿ ಮಾತನಾಡಿರುವುದು ಖಂಡನೀಯ” ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಇತ್ತೀಚೆಗೆ ನರಸೀಪುರದಲ್ಲಿ ನಡೆದ ಗಣಪತಿ ವಿಸರ್ಜನೆ ಮೆರವಣಿಗೆ ಸಂದರ್ಭದಲ್ಲಿ ಪ್ರತಾಪ್ ಸಿಂಹ ಅವರು ನೀಡಿದ ಹೇಳಿಕೆಗಳು ಹಾಗೂ ಅವರ ನಡೆ ಸೌಹಾರ್ದಯುತ ವಾತಾವರಣಕ್ಕೆ ಧಕ್ಕೆ ತರುವಂತಿವೆ ಎಂದು ಆರೋಪಿಸಿದ ಅವರು, ಇಂತಹ ಹೇಳಿಕೆಗಳು ಸಮಾಜದಲ್ಲಿ ಜಾತಿ ಹಾಗೂ ಕೋಮು ಸಂಘರ್ಷಕ್ಕೆ ಕಾರಣವಾಗುವ ಸಾಧ್ಯತೆ ಇದೆ ಎಂದು ಹೇಳಿದರು.
This video cannot be played in your browser. Open the video directly
ಪ್ರತಾಪ್ ಸಿಂಹ ಅವರು ತಮ್ಮ ಹೇಳಿಕೆಗಳನ್ನು ತಕ್ಷಣವೇ ಹಿಂಪಡೆದು, ದಲಿತ ಸಮುದಾಯದ ಕ್ಷಮೆಯಾಚಿಸಬೇಕು ಎಂದು ದ.ಸಂ.ಸ ಒತ್ತಾಯಿಸಿದೆ. ಸಮಾಜದಲ್ಲಿ ಕೋಮುಭಾವನೆ ಮತ್ತು ಜಾತಿ ಸಂಘರ್ಷಕ್ಕೆ ಕಾರಣವಾಗುವಂತಹ ಹೇಳಿಕೆಗಳು ಹಾಗೂ ನಡೆಗಳಿಗೆ ಸರ್ಕಾರ ಕಡಿವಾಣ ಹಾಕಬೇಕು. ಈ ಸಂಬಂಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಲಾಯಿತು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಸಂಘಟನಾ ಸಂಚಾಲಕ ಬಸವರಾಜ ಹಳ್ಳದಮನಿ, ಆಶಾಬೇಗಂ ಬಿರಾದಾರ, ರಮೇಶ ಅನಗವಾಡಿ, ಹುಲ್ಲಪ್ಪ ಅಂಟರದಾನಿ ಹಾಗೂ ಬಸವರಾಜ ದೊಡಮನಿ ಇದ್ದರು.





