ಚುನಾವಣಾ ಆಯೋಗದ ಮತದಾರರ ಪಟ್ಟಿ ನಿರ್ವಹಣಾ ಸಾಫ್ಟ್‌ವೇರ್ ವ್ಯವಸ್ಥೆಯ ಕಾರ್ಯವೈಖರಿ ಹಾಗೂ ಅದರಲ್ಲಿನ ಅಧಿಕಾರ ಕೇಂದ್ರೀಕರಣದ ಬಗ್ಗೆ ಚುನಾವಣಾ ಆಯುಕ್ತರಾದ ಸುಖಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಕುರಿತು ಅವರು ಹಲವು ಬಾರಿ ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಅವರ ಗಮನಕ್ಕೆ ತಂದಿದ್ದು, ಜುಲೈನಲ್ಲಿ ಆಯೋಗದ ಆಡಳಿತ ವಿಭಾಗಕ್ಕೆ ಸಂಬಂಧಿಸಿದ ಆದೇಶವೊಂದನ್ನು ಪ್ರಶ್ನಿಸಿ ನೇರವಾಗಿ ಕೇಂದ್ರ ಸರ್ಕಾರದ ಕ್ಯಾಬಿನೆಟ್ ಕಾರ್ಯದರ್ಶಿ ಟಿ.ವಿ. ಸೋಮನಾಥನ್ ಅವರಿಗೂ ಪತ್ರ ಬರೆದಿದ್ದಾರೆ ಎಂದು The Indian Express ವರದಿ ಮಾಡಿದೆ.
ಸುಮಾರು ಒಂದು ಶತಕೋಟಿ ಮತದಾರರನ್ನು ಒಳಗೊಂಡ ಚುನಾವಣಾ ವ್ಯವಸ್ಥೆಯ ತಂತ್ರಜ್ಞಾನ ಆಧಾರವಾಗಿ ಜನವರಿ 22ರಂದು ಚುನಾವಣಾ ಆಯೋಗ ECINet ಅನ್ನು ಆರಂಭಿಸಿತ್ತು. ಆಯೋಗದ 40ಕ್ಕೂ ಹೆಚ್ಚು ಆ್ಯಪ್‌ಗಳು ಮತ್ತು ಪೋರ್ಟಲ್‌ಗಳನ್ನು ಒಂದೇ ವೇದಿಕೆಯಡಿ ತರಲಾಗಿತ್ತು. ಈ ವ್ಯವಸ್ಥೆಯನ್ನು ಕಾನೂನಿಗೆ ಅನುಗುಣವಾಗಿ ರೂಪಿಸಲಾಗಿದೆ ಎಂದು ಸಿಇಸಿ ಗ್ಯಾನೇಶ್ ಕುಮಾರ್ ಹೇಳಿದ್ದರು. ಇದು ಚುನಾವಣಾ ಪ್ರಕ್ರಿಯೆಯಲ್ಲಿ ಪಾರದರ್ಶಕತೆ, ವಿಶ್ವಾಸಾರ್ಹತೆ ಮತ್ತು ಸಾರ್ವಜನಿಕರ ನಂಬಿಕೆಯನ್ನು ಹೆಚ್ಚಿಸಲಿದೆ ಎಂದು ಆಯೋಗದ ಐಟಿ ವಿಭಾಗದ ಮಹಾನಿರ್ದೇಶಕಿ ಸೀಮಾ ಖನ್ನಾ ಹೇಳಿದ್ದರು.
ಆದರೆ ECINet ಆರಂಭವಾದ ಕೆಲವೇ ತಿಂಗಳಲ್ಲಿ ಅದರ ಕಾರ್ಯವೈಖರಿ ಕುರಿತು ಆಯೋಗದೊಳಗೇ ಆಕ್ಷೇಪಗಳು ಕೇಳಿಬಂದಿವೆ. ಕಾನೂನಿನ ಪ್ರಕಾರ ಮತದಾರರ ಪಟ್ಟಿಗೆ ಹೆಸರು ಸೇರಿಸುವುದು, ಹೆಸರು ಅಳಿಸುವುದು ಹಾಗೂ ದಾಖಲೆಗಳನ್ನು ತಿದ್ದುಪಡಿ ಮಾಡುವ ಜವಾಬ್ದಾರಿ ಹೊಂದಿರುವ ರಾಜ್ಯಮಟ್ಟದ ಅಧಿಕಾರಿಗಳಿಗೆ ಸಾಫ್ಟ್‌ವೇರ್‌ನಲ್ಲಿ ಅಗತ್ಯವಿರುವ ಸಂಪೂರ್ಣ ಪ್ರವೇಶ ಸಿಗುತ್ತಿಲ್ಲ ಎಂದು ಇಬ್ಬರು ಚುನಾವಣಾ ಆಯುಕ್ತರು ಆಕ್ಷೇಪಿಸಿದ್ದಾರೆ. ಮತದಾರರ ಪಟ್ಟಿಯ ಡೇಟಾಬೇಸ್ ಕ್ರಮೇಣ ದೆಹಲಿಯಲ್ಲಿರುವ ಐಟಿ ವಿಭಾಗದ ನಿಯಂತ್ರಣಕ್ಕೆ ಕೇಂದ್ರೀಕೃತವಾಗುತ್ತಿದೆ ಎಂಬ ಆತಂಕವನ್ನೂ ಅವರು ವ್ಯಕ್ತಪಡಿಸಿದ್ದಾರೆ.
ಮತದಾರರ ಪಟ್ಟಿಯ ನಿರ್ವಹಣೆಯ ಜವಾಬ್ದಾರಿಯನ್ನು Representation of the People Act, 1950 ಮತ್ತು Registration of Electors Rules, 1960 ಅಡಿಯಲ್ಲಿ Electoral Registration Officer (ERO)ಗಳಿಗೆ ನೀಡಲಾಗಿದೆ. ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಸಾಮಾನ್ಯವಾಗಿ ಒಬ್ಬ ERO ಇರುತ್ತಾರೆ. ಮತದಾರರ ಪಟ್ಟಿಯನ್ನು ಸಿದ್ಧಪಡಿಸುವುದು, ಹಕ್ಕು-ಆಕ್ಷೇಪಣೆಗಳನ್ನು ವಿಚಾರಣೆ ನಡೆಸುವುದು ಹಾಗೂ ಹೆಸರು ಸೇರ್ಪಡೆ ಅಥವಾ ಅಳಿಸುವ ಕುರಿತು ನಿರ್ಧಾರ ಕೈಗೊಳ್ಳುವುದು ಅವರ ಜವಾಬ್ದಾರಿ. ಈ ವ್ಯವಸ್ಥೆಯ ಉದ್ದೇಶವೇ ಮತದಾರರ ಪಟ್ಟಿಯ ನಿರ್ವಹಣೆಯನ್ನು ವಿಕೇಂದ್ರೀಕರಿಸುವುದಾಗಿದೆ ಎಂದು ವರದಿ ವಿವರಿಸಿದೆ.
ಆದರೆ ಕಳೆದ ಸುಮಾರು 10 ತಿಂಗಳಲ್ಲಿ ಹಲವು ರಾಜ್ಯಗಳಲ್ಲಿ EROಗಳಿಗೆ ಸಾಫ್ಟ್‌ವೇರ್ ಮೂಲಕ ತಮ್ಮ ಕಾನೂನುಬದ್ಧ ಕರ್ತವ್ಯಗಳನ್ನು ನಿರ್ವಹಿಸಲು ತೊಂದರೆಯಾಗಿರುವ ಪ್ರಕರಣಗಳು ಕಂಡುಬಂದಿವೆ ಎಂದು ಇಬ್ಬರು ಆಯುಕ್ತರು ದಾಖಲಿಸಿದ್ದಾರೆ. ಹೆಸರು ಸೇರಿಸುವುದು, ಅಳಿಸುವುದು, ಹಿಂದಿನ ನಿರ್ಧಾರವನ್ನು ಬದಲಿಸುವುದು ಅಥವಾ ಮೇಲ್ಮನವಿ ಪ್ರಕ್ರಿಯೆ ನಡೆಸುವುದು ಸೇರಿದಂತೆ ಕೆಲವು ಕಾರ್ಯಗಳನ್ನು ಸಾಫ್ಟ್‌ವೇರ್‌ನಲ್ಲಿ ಮಾಡಲು ಸಾಧ್ಯವಾಗದ ಪರಿಸ್ಥಿತಿ ಉಂಟಾಗಿದೆ. ಯಾವ ಅಧಿಕಾರಿಗೆ ಯಾವ ರೀತಿಯ ಪ್ರವೇಶ ಇರಬೇಕು ಎಂಬುದನ್ನು ದೆಹಲಿಯಲ್ಲಿರುವ ಐಟಿ ವಿಭಾಗ ನಿರ್ಧರಿಸುತ್ತಿದೆ ಎಂಬುದು ಅವರ ಪ್ರಮುಖ ಆಕ್ಷೇಪ.
ಈ ಬಗ್ಗೆ 2025ರ ನವೆಂಬರ್ 4ರಂದೇ ಚುನಾವಣಾ ಆಯೋಗದೊಳಗೆ ಎಚ್ಚರಿಕೆ ನೀಡಲಾಗಿತ್ತು. ECINetಗೂ ಮುನ್ನ ಬಳಕೆಯಲ್ಲಿದ್ದ ERONet ವ್ಯವಸ್ಥೆಯಲ್ಲಿಯೂ ERO, DEO ಮತ್ತು CEOಗಳ ಕಾನೂನುಬದ್ಧ ಅಧಿಕಾರವನ್ನು ಐಟಿ ವ್ಯವಸ್ಥೆ ನಿರ್ಬಂಧಿಸಬಾರದು ಎಂದು ಡೆಪ್ಯುಟಿ ಚುನಾವಣಾ ಆಯುಕ್ತ ಸಂಜಯ್ ಕುಮಾರ್ ಅವರು ಸೀಮಾ ಖನ್ನಾ ಹಾಗೂ ಹಿರಿಯ ಅಧಿಕಾರಿಗಳಿಗೆ ಪತ್ರ ಬರೆದಿದ್ದರು.
2026ರ ಜನವರಿ 2ರಂದು, 12 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ SIR ಪ್ರಕ್ರಿಯೆ ನಡೆಯುತ್ತಿದ್ದ ಸಂದರ್ಭದಲ್ಲಿ, EROಗಳ ನಿರ್ಧಾರ ಕೈಗೊಳ್ಳುವ ಸ್ವಾತಂತ್ರ್ಯಕ್ಕೆ ಐಟಿ ವ್ಯವಸ್ಥೆಯಿಂದ ಯಾವುದೇ ನಿರ್ಬಂಧ ಬರದಂತೆ ನೋಡಿಕೊಳ್ಳಬೇಕು ಎಂದು ಸಂಜಯ್ ಕುಮಾರ್ ಮತ್ತೊಮ್ಮೆ ಸೂಚಿಸಿದ್ದರು. ಇದರ ಸುಮಾರು 20 ದಿನಗಳ ಬಳಿಕ ECINet ಆರಂಭಗೊಂಡಿತ್ತು.
ಏಪ್ರಿಲ್ 16ರಂದು, ಚುನಾವಣಾ ಆಯುಕ್ತ ಸುಖಬೀರ್ ಸಿಂಗ್ ಸಂಧು ಅವರು ಐಟಿ ವಿಭಾಗವು ಕಳೆದ ಕೆಲವು ತಿಂಗಳಲ್ಲಿ ಹಲವು ಹೊಸ ಮಾಡ್ಯೂಲ್‌ಗಳು ಮತ್ತು ಪೋರ್ಟಲ್‌ಗಳನ್ನು ಅಭಿವೃದ್ಧಿಪಡಿಸಿದ್ದರೂ ಅವುಗಳ ಬಗ್ಗೆ ಆಯೋಗದ ಎಲ್ಲ ಸದಸ್ಯರಿಗೆ ಮಾಹಿತಿ ನೀಡಲಾಗಿಲ್ಲ ಎಂದು ದಾಖಲಿಸಿದ್ದರು. ಹೊಸ ಬೆಳವಣಿಗೆಗಳ ಬಗ್ಗೆ ಮಾಧ್ಯಮಗಳಿಂದಲೇ ತಿಳಿದುಕೊಳ್ಳಬೇಕಾದ ಪರಿಸ್ಥಿತಿ ಬಂದಿದೆ ಎಂದು ಅವರು ಹೇಳಿದ್ದು, ಯಾವುದೇ ಹೊಸ ವ್ಯವಸ್ಥೆ ಜಾರಿಗೆ ತರುವ ಮೊದಲು ಆಯೋಗದ ಎಲ್ಲ ಸದಸ್ಯರಿಗೆ ಮಾಹಿತಿ ನೀಡಿ ಅಗತ್ಯ ಅನುಮೋದನೆ ಪಡೆಯುವಂತೆ ಸೂಚಿಸಿದ್ದರು.
ಮೇ 29ರಂದು, ಚುನಾವಣಾ ಆಯುಕ್ತ ವಿವೇಕ್ ಜೋಶಿ ಅವರು ಮತದಾರರ ಡೇಟಾಬೇಸ್ ಕ್ರಮೇಣ ಕೇಂದ್ರೀಕರಣಗೊಳ್ಳುತ್ತಿರುವ ಬಗ್ಗೆ ಮುಖ್ಯ ಚುನಾವಣಾ ಆಯುಕ್ತರು ಹಾಗೂ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದಿದ್ದರು. ಮತದಾರರ ಡೇಟಾಬೇಸ್‌ನಲ್ಲಿ ಬದಲಾವಣೆ ಮಾಡಲು ಕಾನೂನಿನಡಿ ಅಧಿಕಾರ ಹೊಂದಿರುವವರ ಹೊರತು ಬೇರೆ ಯಾರಿಗೂ ಅಗತ್ಯ ಕ್ರೆಡೆನ್ಶಿಯಲ್ಸ್ ಇಲ್ಲ ಎಂಬುದನ್ನು ಖಚಿತಪಡಿಸಲು IITಗಳಂತಹ ಸಂಸ್ಥೆಗಳ ಹೊರಗಿನ ತಜ್ಞರನ್ನು ಒಳಗೊಂಡ ಆಡಿಟ್ ನಡೆಸಬೇಕು ಎಂದು ಅವರು ಪ್ರಸ್ತಾಪಿಸಿದ್ದರು.
ಇದರ ಜೊತೆಗೆ ಎರಡು ಸಮಿತಿಗಳನ್ನು ರಚಿಸುವಂತೆಯೂ ಜೋಶಿ ಸೂಚಿಸಿದ್ದರು. ಒಂದು ಸಮಿತಿ ಕಾಲಕಾಲಕ್ಕೆ ಸಾಫ್ಟ್‌ವೇರ್ ವ್ಯವಸ್ಥೆಯನ್ನು ಪರಿಶೀಲಿಸಿ, ಕಾನೂನಿನಡಿ ಅಧಿಕಾರ ಹೊಂದಿರುವವರಿಗಷ್ಟೇ ಮತದಾರರ ಡೇಟಾಬೇಸ್ ಬದಲಾಯಿಸುವ ಅವಕಾಶವಿದೆ ಎಂಬುದನ್ನು ದೃಢಪಡಿಸಬೇಕು. ಮತ್ತೊಂದು ಸಮಿತಿ ECINet ಕಾನೂನುಬದ್ಧವಾಗಿದೆಯೇ ಎಂಬುದನ್ನು ಪರಿಶೀಲಿಸಬೇಕು ಹಾಗೂ ERONet ಮತ್ತು ECINetನಲ್ಲಿ ಯಾವುದೇ ನೀತಿ ಅಥವಾ ಪ್ರಕ್ರಿಯೆ ಬದಲಾವಣೆಗಳನ್ನು ಆಯೋಗದ ಮುಂದೆ ತರಲಾಗುತ್ತಿದೆಯೇ ಎಂಬುದನ್ನು ಪರಿಶೀಲಿಸಬೇಕು ಎಂಬುದು ಅವರ ಪ್ರಸ್ತಾಪವಾಗಿತ್ತು.
ಜುಲೈ 13ರಂದು ಸಂಧು ಅವರು ಜೋಶಿ ಅವರ ಪ್ರಸ್ತಾಪವನ್ನು ಬೆಂಬಲಿಸಿ, ಅದು ವ್ಯವಸ್ಥೆಯನ್ನು ಸುಧಾರಿಸಲು ಸಹಾಯ ಮಾಡಲಿದೆ ಎಂದು ದಾಖಲಿಸಿದ್ದರು. ಆದರೆ ಆಗಸ್ಟ್ 14ರಂದು, ಈ ಎರಡು ಪ್ರಸ್ತಾಪಗಳ ಕುರಿತು ಕೈಗೊಂಡ ಕ್ರಮದ ಬಗ್ಗೆ ತಮಗೆ ಯಾವುದೇ ಮಾಹಿತಿ ಇಲ್ಲ ಎಂದು ಸಂಧು ದಾಖಲಿಸಿದ್ದರು.
ಇದರ ನಡುವೆ ಜುಲೈ ಅಂತ್ಯದಲ್ಲಿ ಆಯೋಗದ ಐಟಿ ವಿಭಾಗದ ಮೇಲ್ವಿಚಾರಣೆಗೆ ಸಂಬಂಧಿಸಿದಂತೆ ಮತ್ತೊಂದು ಬೆಳವಣಿಗೆ ನಡೆದಿದೆ. ಇದುವರೆಗೆ ಡೆಪ್ಯುಟಿ ಚುನಾವಣಾ ಆಯುಕ್ತ ಸಂಜಯ್ ಕುಮಾರ್ ಅವರು ಐಟಿ ವಿಭಾಗದ ಕೆಲಸವನ್ನು ಮೇಲ್ವಿಚಾರಣೆ ಮಾಡುತ್ತಿದ್ದು, ಅದರ ಕಡತಗಳನ್ನು ಮೂವರು ಸದಸ್ಯರ ಚುನಾವಣಾ ಆಯೋಗದ ಮುಂದೆ ಮಂಡಿಸುವ ಜವಾಬ್ದಾರಿಯನ್ನೂ ಹೊಂದಿದ್ದರು. ಜುಲೈ 28ರಂದು, ಹಿರಿಯ ಡೆಪ್ಯುಟಿ ಚುನಾವಣಾ ಆಯುಕ್ತ ಮನೀಶ್ ಗರ್ಗ್ ಅವರಿಗೆ ಆಡಳಿತ ವಿಭಾಗದ ಹೆಚ್ಚುವರಿ ಜವಾಬ್ದಾರಿ ನೀಡಲಾಯಿತು. ಬಳಿಕ ಅವರು ಚುನಾವಣಾ ಆಯೋಗದೊಂದಿಗೆ ಸಮಾಲೋಚನೆ ನಡೆಸದೆ ಕೆಲಸ ಹಂಚಿಕೆ ಆದೇಶದಲ್ಲಿ ಬದಲಾವಣೆ ಮಾಡಿ, ಐಟಿ ವಿಭಾಗದ ಮೇಲ್ವಿಚಾರಣೆಯಿಂದ ಸಂಜಯ್ ಕುಮಾರ್ ಅವರನ್ನು ತೆಗೆದುಹಾಕಿದರು ಎಂದು ವರದಿ ಹೇಳಿದೆ.
ಈ ಆದೇಶವನ್ನು ಸುಖಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಪ್ರಶ್ನಿಸಿದರು. ಜುಲೈ 29ರಂದು, ಇಬ್ಬರೂ ಪ್ರತ್ಯೇಕವಾಗಿ ಕ್ಯಾಬಿನೆಟ್ ಕಾರ್ಯದರ್ಶಿ ಟಿ.ವಿ. ಸೋಮನಾಥನ್ ಅವರಿಗೆ ಪತ್ರ ಬರೆದು, ಈ ಆದೇಶವನ್ನು ಆಯೋಗವನ್ನು ನಿಯಂತ್ರಿಸುವ ಕಾನೂನಿನ ಸ್ಪಷ್ಟ ಉಲ್ಲಂಘನೆ ಎಂದು ಆರೋಪಿಸಿ ಸೂಕ್ತ ಕ್ರಮಕ್ಕೆ ಮನವಿ ಮಾಡಿದರು.
ಜುಲೈ 30ರಂದು, ಇಬ್ಬರು ಚುನಾವಣಾ ಆಯುಕ್ತರು ಜಂಟಿಯಾಗಿ ಗರ್ಗ್ ಅವರ ಆದೇಶವನ್ನು ಬದಿಗಿಟ್ಟರು. ಯಾವುದೇ ಕಾರಣ ಅಥವಾ ಸಮರ್ಥನೆ ಇಲ್ಲದೆ ಕೆಲಸ ಹಂಚಿಕೆಯಲ್ಲಿ ಬದಲಾವಣೆ ಮಾಡಲಾಗಿದೆ ಎಂದು ಅವರು ಹೇಳಿದ್ದು, ಆಯೋಗದಲ್ಲಿ ಒಮ್ಮತ ಮೂಡುವವರೆಗೆ ಹಿಂದಿನ ಕೆಲಸ ಹಂಚಿಕೆ ವ್ಯವಸ್ಥೆಯನ್ನೇ ಮುಂದುವರಿಸುವಂತೆ ಸೂಚಿಸಿದರು. ಈ ಟಿಪ್ಪಣಿಯನ್ನು ಮುಖ್ಯ ಚುನಾವಣಾ ಆಯುಕ್ತರಿಗೂ ಕಳುಹಿಸಲಾಗಿತ್ತು.
ಇದನ್ನೂ ಓದಿ: EC ಒಳಜಗಳ | ಗ್ಯಾನೇಶ್ ಕುಮಾರ್ ಎಡವಟ್ಟುಗಳಿಗೆ ಆಕ್ಷೇಪಗಳ ಸರಮಾಲೆ
ಆಗಸ್ಟ್ 14ರಂದು, ಸಂಧು ಅವರು ಮತದಾರರ ಪಟ್ಟಿ ನಿರ್ವಹಣಾ ಸಾಫ್ಟ್‌ವೇರ್ ಕುರಿತು ತಮ್ಮ ಅತ್ಯಂತ ವಿವರವಾದ ಆಕ್ಷೇಪವನ್ನು ದಾಖಲಿಸಿದರು. ದೇಶದ ಹಲವು ರಾಜ್ಯಗಳ CEO, DEO ಮತ್ತು EROಗಳು ERONetಗೆ “ಸರಿಯಾದ ಮತ್ತು ಸಂಪೂರ್ಣ ಪ್ರವೇಶ” ಇಲ್ಲದಿರುವುದರಿಂದ ತಮ್ಮ ಕಾನೂನುಬದ್ಧ ಕರ್ತವ್ಯಗಳನ್ನು ಸಮರ್ಪಕವಾಗಿ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ ಎಂದು ತಮ್ಮ ಗಮನಕ್ಕೆ ತಂದಿದ್ದಾರೆ ಎಂದು ಅವರು ಹೇಳಿದರು.
ಮತದಾರರ ಪಟ್ಟಿಯ ಜವಾಬ್ದಾರಿ ಕಾನೂನುಬದ್ಧ ಅಧಿಕಾರಿಗಳಿಗೆ ನೀಡಲಾಗಿದ್ದರೂ, ERONetನ ಪ್ರವೇಶ ನಿಯಂತ್ರಣವನ್ನು ಐಟಿ ವಿಭಾಗದ ಮಹಾನಿರ್ದೇಶಕರ ಮಟ್ಟದಲ್ಲಿ ಕೇಂದ್ರೀಕರಿಸಿರುವುದು ವಿಚಿತ್ರ ಎಂದು ಸಂಧು ಆಕ್ಷೇಪಿಸಿದರು. ಕಾನೂನಿನಡಿ ನೀಡಿರುವ ಸಂಪೂರ್ಣ ಪ್ರವೇಶ ಮತ್ತು ಕಾರ್ಯನಿರ್ವಹಣೆಯ ಸ್ವಾತಂತ್ರ್ಯವನ್ನು ನಿರ್ಬಂಧಿಸುವ ಕಾನೂನುಬದ್ಧ ಅಧಿಕಾರ DG(IT)ಗೆ ಇಲ್ಲ ಎಂದು ಅವರು ದಾಖಲಿಸಿದರು. ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿರುವ ಸಂಬಂಧಪಟ್ಟ ಅಧಿಕಾರಿಗಳಿಗೆ ERONetಗೆ ಸಂಪೂರ್ಣ ಪ್ರವೇಶ ನೀಡಬೇಕು ಹಾಗೂ ಅವರು ಯಾವುದೇ ನಿರ್ಬಂಧವಿಲ್ಲದೆ ತಮ್ಮ ಕಾನೂನುಬದ್ಧ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂಬುದನ್ನು ಎಲ್ಲ CEOಗಳ ದೃಢೀಕರಣದ ಮೂಲಕ ಖಚಿತಪಡಿಸಬೇಕು ಎಂದು ಅವರು ಸೂಚಿಸಿರುವುದಾಗಿ ವರದಿ ಉಲ್ಲೇಖಿಸಿದೆ.




