ಚಿಂತಾಮಣಿ ತಾಲ್ಲೂಕಿನ ನಂದಿಗಾನಹಳ್ಳಿ ವ್ಯವಸಾಯ ಸೇವಾ ಸಹಕಾರ ಸಂಘದ 2025-26 ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯ ಸಭೆಯನ್ನು ಸಂಘದ ಆವರಣದಲ್ಲಿ ಆಯೋಜಿಸಲಾಗಿತ್ತು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಸಂಘದ ಅಧ್ಯಕ್ಷರಾದ ಎಸ್.ಕೃಷ್ಣಮೂರ್ತಿ ಅವರು,ಸಂಘದ ಯಶಸ್ಸಿನಲ್ಲಿ ಕಾರ್ಯನಿರ್ವಹಿಸಿದ ಎಲ್ಲಾ ಹಾಲಿ ಹಾಗೂ ಮಾಜಿ ನಿರ್ದೇಶಕರು,ಅಧ್ಯಕ್ಷರು,ಸದಸ್ಯರು ಮತ್ತು ರೈತ ಬಾಂಧವರ ಸಹಕಾರವನ್ನು ಸ್ಮರಿಸಿದರು.ಸಂಘದ ಏಳಿಗೆಗೆ ಶ್ರಮಿಸಿದ ಪ್ರಮುಖರ ಕೊಡುಗೆಯನ್ನು ನೆನೆದ ಅವರು,ಮುಂದಿನ ದಿನಗಳಲ್ಲೂ ಎಲ್ಲರೂ ಒಗ್ಗಟ್ಟಿನಿಂದ ಸಲಹೆ ಮತ್ತು ಸೂಚನೆಗಳನ್ನು ನೀಡುತ್ತಾ ಸಂಘವನ್ನು ಮುನ್ನಡೆಸಬೇಕೆಂದು ಕೋರಿದರು.ಎಲ್ಲರ ಸಹಕಾರದಿಂದ ಸಂಘವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಲು ಶ್ರಮಿಸುವುದಾಗಿ ತಿಳಿಸಿದರು.
ಸಂಘದ ಮುಖಂಡರಾದ ಮುರುಗಮಲ್ಲ ಲಕ್ಷ್ಮೀನಾರಾಯಣ್ ರೆಡ್ಡಿ ಅವರು ಸಹಕಾರ ಕ್ಷೇತ್ರ ಮತ್ತು ತಾಲೂಕಿನ ಅಭಿವೃದ್ಧಿ ಕಾರ್ಯಗಳ ಕುರಿತು ಸುದೀರ್ಘವಾಗಿ ಮಾತನಾಡಿದರು. ಪಿಎಲ್‌ಡಿ ಬ್ಯಾಂಕ್‌ಗೆ ಪುನಶ್ಚೇತನ ನೀಡಿದ ಶಾಸಕ ಸುಧಾಕರ್ ರೆಡ್ಡಿ ಅವರಿಗೆ ತಾಲೂಕಿನ ರೈತರು ಹಾಗೂ ಸಾರ್ವಜನಿಕರ ಪರವಾಗಿ ಅವರು ಅಭಿನಂದನೆಗಳನ್ನು ಸಲ್ಲಿಸಿದರು.
ಕೋಲಾರ ಶಾಸಕರಾದ ಮಂಜುನಾಥ್ ಅವರ ನೇತೃತ್ವದಲ್ಲಿ ಡಿಸಿಸಿ ಬ್ಯಾಂಕ್‌ಗೂ ಮರುಜೀವ ಸಿಕ್ಕಿದ್ದು,ಮುಂಬರುವ ದಿನಗಳಲ್ಲಿ ಪಿಎಲ್‌ಡಿ ಹಾಗೂ ಡಿಸಿಸಿ ಬ್ಯಾಂಕ್‌ಗಳ ಮೂಲಕ ತಾಲೂಕಿನ ರೈತರಿಗೆ ಮತ್ತು ಮಹಿಳೆಯರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದರು.
ಹಿಂದೆ 2-3 ಲಕ್ಷ ರೂಪಾಯಿಗಳವರೆಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ದೊರೆಯುತ್ತಿತ್ತು ಹಾಗೂ ಮರುಪಾವತಿಯೂ ಉತ್ತಮವಾಗಿ ನಡೆಯುತ್ತಿತ್ತು.ಈಗ ಸ್ಥಗಿತಗೊಂಡಿದ್ದ ಈ ವ್ಯವಸ್ಥೆಗೆ ಮತ್ತೆ ಚಾಲನೆ ನೀಡಲಾಗುತ್ತಿದ್ದು,ಮಹಿಳೆಯರು ಮತ್ತು ರೈತರ ಆರ್ಥಿಕ ಸಬಲೀಕರಣಕ್ಕೆ ಇದು ನೆರವಾಗಲಿದೆ ಎಂದು ತಿಳಿಸಿದರು.
This video cannot be played in your browser. Open the video directly
ತಾಲೂಕಿನಲ್ಲಿ ರೈತರ ಹಿತ ಕಾಯಲು ಹಾಗೂ ಯುವಕರಿಗೆ ಉದ್ಯೋಗಾವಕಾಶ ಕಲ್ಪಿಸಲು ಹಲವು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ ಮುರುಗಮಲ್ಲ ಹೋಬಳಿ ವ್ಯಾಪ್ತಿಯಲ್ಲಿ ಸುಮಾರು 100 ಕೋಟಿ ರೂಪಾಯಿ ವೆಚ್ಚದಲ್ಲಿ ಚೆಕ್ ಡ್ಯಾಂಗಳನ್ನು ನಿರ್ಮಿಸಿ,ಅಂತರ್ಜಲ ಮಟ್ಟ ಹೆಚ್ಚಿಸುವ ಹಾಗೂ ನೀರು ಸಂಗ್ರಹಿಸುವ ಮಹತ್ವದ ಕೆಲಸ ಮಾಡಲಾಗಿದೆ.
ಮಸ್ತೇನಹಳ್ಳಿ,ಮುರುಗಮಲ್ಲ,ಕನ್ನಶೆಟ್ಟಿಹಳ್ಳಿ,ಕಾಗತಿ,ಭಾಗ ದಲ್ಲಿ ಸುಮಾರು 3,595 ಎಕರೆ ಪ್ರದೇಶದಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಲಾಗುತ್ತಿದೆ.ರೈತರ ಮಕ್ಕಳಿಗೆ ಹಾಗೂ ಸ್ಥಳೀಯ ಯುವಕ-ಯುವತಿಯರಿಗೆ ಸ್ವಯಂ ಉದ್ಯೋಗ ಮತ್ತು ಕೈಗಾರಿಕೆಗಳಲ್ಲಿ ಉದ್ಯೋಗಾವಕಾಶ ಕಲ್ಪಿಸುವ ಬೃಹತ್ ಯೋಜನೆ ಇದಾಗಿದೆ ಎಂದು ಅವರು ಹೇಳಿದರು.
ಸಹಕಾರ ಕ್ಷೇತ್ರದ ಬಲವರ್ಧನೆ ಹಾಗೂ ತಾಲೂಕಿನ ಆರ್ಥಿಕ ಪ್ರಗತಿಗೆ ಎಲ್ಲರೂ ಒಗ್ಗೂಡಿ ಶ್ರಮಿಸಬೇಕೆಂದು ಈ ಸಂದರ್ಭದಲ್ಲಿ ಕಷ್ಟಪಟ್ಟು ದುಡಿಯುವ ರೈತರಿಗೆ ಹಾಗೂ ಸಂಘದ ಸದಸ್ಯರಿಗೆ ಕರೆ ನೀಡಿದರು.
ಇದನ್ನು ಓದಿದ್ದೀರಾ..?ಕೋಲಾರ | ಸಾಲ ಮರುಪಾವತಿಸಿ, ಸಹಕಾರಿ ವ್ಯವಸ್ಥೆ ಉಳಿಸಿ: ಕೊತ್ತೂರು ಮಂಜುನಾಥ್
ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ರತ್ನಮ್ಮ,ನಿರ್ದೇಶಕರಾದ ಏನ್ ಸಿ ಆಂಜನೇಯ ರೆಡ್ಡಿ,ವಿ ನಾರಾಯಣಸ್ವಾಮಿ,ಬಿ ಎನ್ ರಘುನಾಥ್ ರೆಡ್ಡಿ,ಜಯರಾಮ್ ರೆಡ್ಡಿ,ಬಿ ಅಮೀರ್ ಜಾನ್, ಚನ್ನಕೇಶವ ರೆಡ್ಡಿ,ಎಸ್ ಕೃಷ್ಣಪ್ಪ,ಕೆ ಎನ್ ಬೈರೆಡ್ಡಿ,ರಾಜಣ್ಣ, ಎಸ್ ಶೋಭಾ,ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಹಾಜಿ ಅನ್ಸರ್ ಖಾನ್,ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿ ಚೌಡರೆಡ್ಡಿ,ಸೇರಿದಂತೆ ಮತ್ತಿತರರು ಇದ್ದರು





