ಶಾಲಾ ದಾಖಲೆ ಪರಿಶೀಲಿಸಿ; ತಿದ್ದುಪಡಿಗೆ ಶಾಲೆ-BEO ಹಂತದವರೆಗೆ ಇರುವ ಮಾರ್ಗವೇನು?

Date:

ಇವತ್ತಿನ ದಿನಮಾನದಲ್ಲಿ ಯಾವುದೇ ವಿಷಯವನ್ನು ಕೇವಲ ಮಾತಿನ ಮೂಲಕ ಸಾಬೀತುಪಡಿಸುವುದು ಕಷ್ಟ. ಪ್ರತಿಯೊಂದು ಮಾಹಿತಿಗೂ ದಾಖಲೆ, ದಾಖಲೆಗಳಿಗೆ ಮತ್ತೊಂದು ದಾಖಲೆ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ವ್ಯಕ್ತಿಯ ಹೆಸರು, ತಂದೆ-ತಾಯಿಯ ಹೆಸರು, ಜನ್ಮ ದಿನಾಂಕ, ವಿಳಾಸ, ಜಾತಿ, ಸಂಬಂಧ ಮತ್ತಿತರ ಮಾಹಿತಿಗಳು ಒಂದು ದಾಖಲೆಯಲ್ಲಿ ಹೇಗಿದೆಯೋ ಅದೇ ಮಾಹಿತಿ ಮತ್ತೊಂದು ದಾಖಲೆಯಲ್ಲೂ ಹೊಂದಿಕೆಯಾಗಬೇಕಾದ ಅಗತ್ಯ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ವಿಶೇಷವಾಗಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಸಂದರ್ಭದಲ್ಲಿ ದಾಖಲೆಗಳ ಮಹತ್ವ ಮತ್ತಷ್ಟು ಮುನ್ನೆಲೆಗೆ ಬಂದಿದೆ. ಒಂದು ದಾಖಲೆಯಲ್ಲಿ ಇರುವ ಸಣ್ಣ ತಪ್ಪು ಮತ್ತೊಂದು ದಾಖಲೆಯಲ್ಲಿ ವ್ಯಕ್ತಿಯ ಗುರುತನ್ನೇ ಪ್ರಶ್ನಿಸುವಂತಹ ಪರಿಸ್ಥಿತಿಗೆ ಕಾರಣವಾಗಬಹುದು.

- Advertisement -

SIR ಪ್ರಕ್ರಿಯೆಯಲ್ಲಿ ಅಗತ್ಯ ದಾಖಲೆಗಳನ್ನು ಒದಗಿಸುವ ಸಂದರ್ಭ ಎದುರಾಗುತ್ತಿರುವಾಗ ಶಾಲಾ ವರ್ಗಾವಣೆ ಪ್ರಮಾಣಪತ್ರ (Transfer Certificate-TC), ಅಂಕಪಟ್ಟಿ, ಶಾಲಾ ದಾಖಲಾತಿ ನೋಂದಣಿ ಮುಂತಾದ ಹಳೆಯ ದಾಖಲೆಗಳಿಗೂ ಮಹತ್ವ ಬಂದಿದೆ. ಆದರೆ, ಸಮಸ್ಯೆ ಇಲ್ಲಿಯೇ ಆರಂಭವಾಗುತ್ತದೆ. ಹಿಂದಿನ ತಲೆಮಾರಿನವರ ದಾಖಲೆಗಳಲ್ಲಷ್ಟೇ ಅಲ್ಲ, ಇಂದಿನ ಪೀಳಿಗೆಯ ಮಕ್ಕಳ ಶಾಲಾ ದಾಖಲೆಗಳಲ್ಲಿಯೂ ಹೆಸರು, ತಂದೆ-ತಾಯಿಯ ಹೆಸರು, ಇನಿಷಿಯಲ್, ಜನ್ಮ ದಿನಾಂಕ, ಜಾತಿ ಮುಂತಾದ ಮಾಹಿತಿಗಳಲ್ಲಿ ತಪ್ಪುಗಳು ಕಂಡುಬರುತ್ತಿವೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

SIR ಅಕ್ರಮ | ಜ್ಞಾನೇಶ್‌ ಕುಮಾರ್ ‘ಅಪರಾಧಿ’ಯಾದ್ರೆ, ಮೋದಿ-ಅಮಿತ್...

ಭಾರತೀಯ ಪ್ರಜಾಪ್ರಭುತ್ವದ ಇತಿಹಾಸದಲ್ಲೇ ಅತ್ಯಂತ ಕರಾಳ ಅಧ್ಯಾಯವೊಂದು ಈಗ ಜಗಜ್ಜಾಹೀರಾಗಿದೆ. ಪ್ರತಿಯೊಬ್ಬ ನಾಗರಿಕನ ಅತಿ ದೊಡ್ಡ ರಾಜಕೀಯ ಶಕ್ತಿಯಾಗಿರುವ 'ಮತದಾನದ ಹಕ್ಕು' ಮತ್ತು ಅದನ್ನು ಕಾಯಬೇಕಾದ ಸಾಂವಿಧಾನಿಕ ಸಂಸ್ಥೆಯನ್ನೇ ಆಡಳಿತಾರೂಢ ಮೋದಿ-ಅಮಿತ್ ಶಾ...

7 ದಿನಗಳಲ್ಲಿ 8 ಇ-ಮೇಲ್‌ಗಳು; ಆದರೂ ಮತಪಟ್ಟಿಯಲ್ಲಿ ಉಳಿಯಲಿಲ್ಲ...

90 ಕೋಟಿಗೂ ಹೆಚ್ಚು ಮತದಾರರನ್ನು ಹೊಂದಿರುವ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವದಲ್ಲಿ 97 ಮತದಾರರು ಎಂಬ ಸಂಖ್ಯೆ ಅತಿ ಚಿಕ್ಕದಾಗಿ ಕಾಣಬಹುದು. ಆದರೆ, ಗೋವಾದ ಈ 97 ಮತದಾರರ ಪ್ರಕರಣವು ಚುನಾವಣಾ ಆಯೋಗದ ಕಾರ್ಯವಿಧಾನ,...

ಮತದಾರರ ಪಟ್ಟಿ: ನಿರ್ಧಾರ ತೆಗೆದುಕೊಳ್ಳುವುದು, ಜಾರಿಗೆ ತರುವುದು ಯಾರು?

ಗೋವಾದ 97 ಮತದಾರರ ಪ್ರಕರಣ ಚುನಾವಣಾ ವ್ಯವಸ್ಥೆಯ ಮುಂದಿರುವ ಒಂದು ಮಹತ್ವದ ಪ್ರಶ್ನೆಯನ್ನು ಎದುರುತರುತ್ತದೆ: ಸ್ಥಳೀಯ ಮಟ್ಟದ ಮತದಾರರ ನೋಂದಣಿ ಅಧಿಕಾರಿಗಳು (ERO) ದಾಖಲೆಗಳನ್ನು ಪರಿಶೀಲಿಸಿ ಅಂತಿಮ ಪಟ್ಟಿಯಲ್ಲಿ ಸೇರಿಸಲು ಅರ್ಹರೆಂದು ಕಂಡುಕೊಂಡ...

ಶಾಲಾ ದಾಖಲೆಗಳಲ್ಲಿ ತಪ್ಪು ಹೇಗೆ ಬರುತ್ತದೆ?

ಮಗುವನ್ನು ಶಾಲೆಗೆ ದಾಖಲಿಸುವ ಸಂದರ್ಭದಲ್ಲಿ ಪೋಷಕರು ನೀಡಿದ ಮಾಹಿತಿಯನ್ನು ಆಧರಿಸಿ Admission Registerನಲ್ಲಿ ವಿವರಗಳನ್ನು ನಮೂದಿಸಲಾಗುತ್ತದೆ. ಕೆಲವೊಮ್ಮೆ ಅರ್ಜಿ ಬರೆಯುವಾಗ ಆಗುವ ತಪ್ಪು, ದಾಖಲೆ ಓದುವಾಗ ಉಂಟಾಗುವ ತಪ್ಪು, ಅಕ್ಷರದ ತಪ್ಪು, ಇನಿಷಿಯಲ್ ಬಿಟ್ಟುಹೋಗುವುದು, ಹೆಸರು ಅಥವಾ ತಂದೆ-ತಾಯಿಯ ಹೆಸರಿನ ಕ್ರಮ ಬದಲಾಗುವುದು, ಜನ್ಮ ದಿನಾಂಕ ತಪ್ಪಾಗಿ ನಮೂದಾಗುವುದು ಮುಂತಾದ ಕಾರಣಗಳಿಂದ ಶಾಲಾ ದಾಖಲೆಯಲ್ಲಿ ತಪ್ಪು ಉಳಿದುಕೊಳ್ಳಬಹುದು.

ಕೆಲವು ಸಂದರ್ಭಗಳಲ್ಲಿ ಪೋಷಕರಿಗೂ ಈ ತಪ್ಪು ಹಲವು ವರ್ಷಗಳವರೆಗೆ ಗೊತ್ತಾಗುವುದಿಲ್ಲ. ಮಗು ಒಂದು ಶಾಲೆಯಿಂದ ಮತ್ತೊಂದು ಶಾಲೆಗೆ ಹೋಗುವಾಗ TC ಕೈಗೆ ಬಂದಾಗ, SSLC ಪರೀಕ್ಷೆಯ ನೋಂದಣಿ ಸಂದರ್ಭದಲ್ಲಿ, ಅಂಕಪಟ್ಟಿ ಬಂದ ನಂತರ ಅಥವಾ ಉದ್ಯೋಗ, ವಿದ್ಯಾರ್ಥಿವೇತನ, ಉನ್ನತ ಶಿಕ್ಷಣ, ಜಾತಿ ಪ್ರಮಾಣಪತ್ರ ಅಥವಾ ಇತರ ಸರ್ಕಾರಿ ಸೌಲಭ್ಯ ಪಡೆಯುವ ಸಂದರ್ಭದಲ್ಲಿ ಮಾತ್ರ ಸಮಸ್ಯೆ ಗಮನಕ್ಕೆ ಬರುತ್ತದೆ. ಆಗ ‘ತಪ್ಪು ಹೇಗೆ ಬಂತು?’ ಎಂಬುದಕ್ಕಿಂತ ‘ಈಗ ಅದನ್ನು ಸರಿಪಡಿಸುವವರು ಯಾರು?’ ಎಂಬ ಪ್ರಶ್ನೆಯೇ ಪೋಷಕರ ಮುಂದೆ ನಿಲ್ಲುತ್ತದೆ.

“ಲೆಡ್ಜರ್‌ನಲ್ಲಿ ಇರುವುದೇ ಸರಿ” ಎನ್ನುವ ಉತ್ತರದಿಂದ ಸಮಸ್ಯೆ ಬಗೆಹರಿಯುತ್ತದೆಯೇ?

ಶಾಲಾ ದಾಖಲಾತಿಯಲ್ಲಿ ತಪ್ಪಿರುವುದನ್ನು ಪೋಷಕರು ಗಮನಕ್ಕೆ ತಂದಾಗ, “ನಮ್ಮ ಬಳಿ ಲೆಡ್ಜರ್‌ನಲ್ಲಿ ಇರುವ ಮಾಹಿತಿ ಅದೇ; ಹಿಂದಿನ ಮುಖ್ಯ ಶಿಕ್ಷಕರ ಕಾಲದಲ್ಲಿ ದಾಖಲಾಗಿದೆ; ಅವರನ್ನೇ ಸಂಪರ್ಕಿಸಿ” ಎಂಬ ಉತ್ತರ ಸಿಕ್ಕರೆ ಪೋಷಕರಿಗೆ ಮತ್ತಷ್ಟು ಗೊಂದಲ ಉಂಟಾಗುತ್ತದೆ. ಶಾಲೆಯ ಮುಖ್ಯಸ್ಥರು ದಾಖಲೆಗಳ ನೈಜತೆಯನ್ನು ಪರಿಶೀಲಿಸಬೇಕಾದ ಜವಾಬ್ದಾರಿ ಹೊಂದಿರುತ್ತಾರೆ. ಆದರೆ, ಹಳೆಯ ಮುಖ್ಯ ಶಿಕ್ಷಕರು ವರ್ಗಾವಣೆಯಾಗಿರಬಹುದು, ನಿವೃತ್ತರಾಗಿರಬಹುದು ಅಥವಾ ಬೇರೆಡೆ ಕರ್ತವ್ಯದಲ್ಲಿರಬಹುದು. ಆಗ ಪ್ರತಿಯೊಬ್ಬ ಪೋಷಕರೂ ಹಳೆಯ ಅಧಿಕಾರಿಯನ್ನು ಹುಡುಕಿಕೊಂಡು ಹೋಗುವುದು ಪ್ರಾಯೋಗಿಕ ಪರಿಹಾರವಾಗುವುದಿಲ್ಲ.

ಮುಖ್ಯವಾಗಿ, ದಾಖಲೆ ತಿದ್ದುಪಡಿ ಒಂದು ಆಡಳಿತಾತ್ಮಕ ಪ್ರಕ್ರಿಯೆ. ಆದ್ದರಿಂದ, ಪೋಷಕರ ಅರ್ಜಿಯನ್ನು ಸ್ವೀಕರಿಸಿ, ಲಭ್ಯವಿರುವ ಮೂಲ ದಾಖಲೆಗಳನ್ನು ಪರಿಶೀಲಿಸಿ, ನಿಯಮಾನುಸಾರ ಮುಂದಿನ ಹಂತಕ್ಕೆ ಕಳುಹಿಸುವ ವ್ಯವಸ್ಥೆ ಇರಬೇಕು. ಕರ್ನಾಟಕದ SATS ವ್ಯವಸ್ಥೆಯೂ ಶಾಲಾ ಮಟ್ಟದ ವಿದ್ಯಾರ್ಥಿ ದಾಖಲೆ ಮತ್ತು ವಿವಿಧ ಶೈಕ್ಷಣಿಕ ಸೇವೆಗಳನ್ನು ನಿರ್ವಹಿಸಲು ಬಳಸಲಾಗುತ್ತಿದೆ. ಅಧಿಕೃತ SATS ಪೋರ್ಟಲ್‌ನಲ್ಲಿ ಶಾಲಾ ಲಾಗಿನ್ ಮೂಲಕ ವಿದ್ಯಾರ್ಥಿ ಸಂಬಂಧಿತ ಸೇವೆಗಳು ಲಭ್ಯವಿರುವುದನ್ನು ಇಲಾಖೆ ಪ್ರಕಟಿಸಿದೆ.

ಯಾವ ದಾಖಲೆಗಳಲ್ಲಿ ತಪ್ಪಿದ್ದರೆ ತಕ್ಷಣ ಗಮನಿಸಬೇಕು?

ಪೋಷಕರು ಮಗುವಿನ ಶಾಲಾ ದಾಖಲೆಗಳನ್ನು ಪರಿಶೀಲಿಸುವಾಗ ಕನಿಷ್ಠ ಈ ಮಾಹಿತಿಗಳನ್ನು ಒಮ್ಮೆ ತಾಳೆ ಮಾಡಿಕೊಳ್ಳುವುದು ಅಗತ್ಯ:

  • ವಿದ್ಯಾರ್ಥಿಯ ಪೂರ್ಣ ಹೆಸರು
  • ತಂದೆಯ ಪೂರ್ಣ ಹೆಸರು
  • ತಾಯಿಯ ಪೂರ್ಣ ಹೆಸರು
  • ತಂದೆ-ತಾಯಿಯ ಇನಿಷಿಯಲ್
  • ವಿದ್ಯಾರ್ಥಿಯ ಜನ್ಮ ದಿನಾಂಕ
  • ಲಿಂಗ
  • ಜಾತಿ/ವರ್ಗಕ್ಕೆ ಸಂಬಂಧಿಸಿದ ದಾಖಲೆ
  • ವಿಳಾಸ
  • ಶಾಲಾ ಪ್ರವೇಶದ ಮೂಲ ಮಾಹಿತಿ
  • Admission Registerನಲ್ಲಿರುವ ವಿವರ
  • Transfer Certificateನಲ್ಲಿರುವ ವಿವರ
  • SATSನಲ್ಲಿ ದಾಖಲಾಗಿರುವ ವಿವರ
  • SSLCಗೆ ಸಂಬಂಧಿಸಿದ Nominal Roll/ಪರೀಕ್ಷಾ ನೋಂದಣಿ ಮಾಹಿತಿಯಲ್ಲಿರುವ ವಿವರ

ಒಂದು ದಾಖಲೆಯಲ್ಲಿರುವ ಮಾಹಿತಿಯನ್ನು ಮತ್ತೊಂದು ದಾಖಲೆಯೊಂದಿಗೆ ಹೋಲಿಸುವ ಅಭ್ಯಾಸವನ್ನು ಪೋಷಕರು ಮಾಡಿಕೊಳ್ಳಬೇಕು.

ಶಾಲೆಯಲ್ಲೇ ತಪ್ಪು ಗೊತ್ತಾದರೆ ಮೊದಲ ಹೆಜ್ಜೆ ಏನು?

ಮಗು ಪ್ರಸ್ತುತ ಶಾಲೆಯಲ್ಲಿ ಓದುತ್ತಿದ್ದರೆ, ಮೊದಲ ಹಂತವಾಗಿ ಆ ಶಾಲೆಯ ಮುಖ್ಯೋಪಾಧ್ಯಾಯರು ಅಥವಾ ಮುಖ್ಯಸ್ಥರಿಗೆ ಲಿಖಿತ ಅರ್ಜಿ ಸಲ್ಲಿಸುವುದು ಸೂಕ್ತ. ಅರ್ಜಿಯಲ್ಲಿ ‘ಯಾವ ದಾಖಲೆಯಲ್ಲಿ ಯಾವ ಮಾಹಿತಿ ತಪ್ಪಾಗಿದೆ?’, ‘ಸರಿಯಾದ ಮಾಹಿತಿ ಏನು?’, ‘ಸರಿಯಾದ ಮಾಹಿತಿಯನ್ನು ದೃಢೀಕರಿಸುವ ದಾಖಲೆ ಯಾವುದು?’ ಎಂಬುದನ್ನು ಸ್ಪಷ್ಟವಾಗಿ ನಮೂದಿಸಬೇಕು. ಮೌಖಿಕವಾಗಿ ಹೇಳಿ ಹಿಂದಿರುಗುವುದಕ್ಕಿಂತ ಲಿಖಿತ ಅರ್ಜಿ ಸಲ್ಲಿಸುವುದು ಮುಖ್ಯ. ಅರ್ಜಿಯ ಒಂದು ಪ್ರತಿಯನ್ನು ಪೋಷಕರು ತಮ್ಮ ಬಳಿ ಇಟ್ಟುಕೊಳ್ಳಬೇಕು. ಸಾಧ್ಯವಾದರೆ ಅರ್ಜಿ ಸ್ವೀಕರಿಸಿದ ದಿನಾಂಕ ಮತ್ತು ಸ್ವೀಕೃತಿ/ಸ್ವೀಕೃತಿ ಸಂಖ್ಯೆ ಪಡೆಯಬೇಕು. ಇದು ಮುಂದೆ ಅರ್ಜಿ ಸಲ್ಲಿಸಿದ್ದೆವು ಎಂಬುದನ್ನು ಸಾಬೀತುಪಡಿಸಲು ಸಹಾಯಕವಾಗುತ್ತದೆ.

ಯಾವ ದಾಖಲೆಗಳನ್ನು ಪೂರಕವಾಗಿ ನೀಡಬಹುದು?

ತಪ್ಪಿನ ಸ್ವರೂಪವನ್ನು ಅವಲಂಬಿಸಿ ಪೂರಕ ದಾಖಲೆಗಳು ಬದಲಾಗುತ್ತವೆ. ಉದಾಹರಣೆಗೆ:

ಜನ್ಮ ದಿನಾಂಕ ಅಥವಾ ಜನ್ಮಸ್ಥಳಕ್ಕೆ ಸಂಬಂಧಿಸಿದ ತಪ್ಪು: ಜನನ ಪ್ರಮಾಣಪತ್ರ ಪ್ರಮುಖ ಪುರಾವೆಯಾಗಬಹುದು. ಹೆಸರು ಅಥವಾ ತಂದೆ-ತಾಯಿಯ ಹೆಸರು: ಜನನ ಪ್ರಮಾಣಪತ್ರ, ಪೋಷಕರ ಅಧಿಕೃತ ಗುರುತಿನ ದಾಖಲೆಗಳು ಮತ್ತು ಈಗಾಗಲೇ ಅಸ್ತಿತ್ವದಲ್ಲಿರುವ ಶೈಕ್ಷಣಿಕ ದಾಖಲೆಗಳನ್ನು ಪರಿಶೀಲನೆಗೆ ನೀಡಬಹುದು. ತಾಯಿ/ತಂದೆಯ ಇನಿಷಿಯಲ್: ಪೋಷಕರ ಶಾಲಾ ದಾಖಲೆ, TC, ಇತರ ಅಧಿಕೃತ ದಾಖಲೆಗಳು ಮತ್ತು ಮಗುವಿನ ಜನನ ಪ್ರಮಾಣಪತ್ರದಲ್ಲಿರುವ ಸಂಬಂಧಿತ ವಿವರಗಳು ಸಹಾಯಕವಾಗಬಹುದು. ಜಾತಿಗೆ ಸಂಬಂಧಿಸಿದ ದಾಖಲೆ: ಜಾತಿ ಪ್ರಮಾಣಪತ್ರ, ಕುಟುಂಬದ ಹಿಂದಿನ ಶೈಕ್ಷಣಿಕ ದಾಖಲೆಗಳು ಮತ್ತು ಸಂಬಂಧವನ್ನು ದೃಢೀಕರಿಸುವ ಅಧಿಕೃತ ದಾಖಲೆಗಳನ್ನು ಪ್ರಕರಣದ ಸ್ವರೂಪಕ್ಕೆ ಅನುಗುಣವಾಗಿ ಕೇಳಬಹುದು.
ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ ಪ್ರತಿಯೊಂದು ತಿದ್ದುಪಡಿಗೂ ಒಂದೇ ದಾಖಲೆ ಸಾಕು ಎಂದು ಹೇಳಲು ಸಾಧ್ಯವಿಲ್ಲ. ತಪ್ಪಿನ ಸ್ವರೂಪ, ಶಾಲಾ ದಾಖಲೆಗಳಲ್ಲಿ ಈಗಾಗಲೇ ಇರುವ ಮಾಹಿತಿ ಮತ್ತು ಇಲಾಖೆಯ ನಿಯಮಗಳ ಆಧಾರದ ಮೇಲೆ ಹೆಚ್ಚುವರಿ ದಾಖಲೆಗಳನ್ನು ಕೇಳಬಹುದು.

ಆಧಾರ್ ಕಾರ್ಡ್ ಇದ್ದರೆ ಎಲ್ಲವೂ ಸ್ವಯಂಚಾಲಿತವಾಗಿ ಸರಿಯಾಗುತ್ತದೆಯೇ?

ಆಧಾರ್ ಕಾರ್ಡ್ ಉಪಯುಕ್ತ ಪೂರಕ ದಾಖಲೆಯಾಗಬಹುದು. ಆದರೆ, ಶಾಲಾ ದಾಖಲೆಯಲ್ಲಿ ಯಾವುದೇ ಮಾಹಿತಿಯನ್ನು ಬದಲಾಯಿಸಲು ಆಧಾರ್ ಒಂದೇ ಅಂತಿಮ ಮತ್ತು ಎಲ್ಲ ಸಂದರ್ಭಗಳಲ್ಲೂ ಸಾಕಾಗುವ ದಾಖಲೆ ಎಂದು ಸಾಮಾನ್ಯೀಕರಿಸುವುದು ಸರಿಯಲ್ಲ. ಉದಾಹರಣೆಗೆ ಮಗುವಿನ ಜನ್ಮ ದಿನಾಂಕಕ್ಕೆ ಸಂಬಂಧಿಸಿದ ತಿದ್ದುಪಡಿಯಲ್ಲಿ ಜನನ ಪ್ರಮಾಣಪತ್ರಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇರಬಹುದು. ಹೆಸರು ಅಥವಾ ಪೋಷಕರ ಹೆಸರಿನ ವಿಷಯದಲ್ಲಿ ಶಾಲೆಯ ಮೂಲ ದಾಖಲಾತಿ, ಜನನ ಪ್ರಮಾಣಪತ್ರ ಮತ್ತು ಇತರ ದಾಖಲೆಗಳನ್ನು ಒಟ್ಟಾಗಿ ಪರಿಶೀಲಿಸುವ ಅಗತ್ಯ ಬರಬಹುದು. ಆದ್ದರಿಂದ, ‘ಆಧಾರ್ ಇದೆ, ತಕ್ಷಣ ಬದಲಾಯಿಸಲೇಬೇಕು’ ಎನ್ನುವುದಕ್ಕಿಂತ ಸರಿಯಾದ ಮೂಲ ದಾಖಲೆಗಳನ್ನು ಒಟ್ಟುಗೂಡಿಸಿ ಶಾಲೆಗೆ ಸಲ್ಲಿಸುವುದು ಹೆಚ್ಚು ಸುರಕ್ಷಿತ ಕ್ರಮ.

ಶಾಲೆಯ ಮುಖ್ಯಸ್ಥರ ಜವಾಬ್ದಾರಿ ಏನು?

ಅರ್ಜಿಯನ್ನು ಸ್ವೀಕರಿಸಿದ ನಂತರ ಶಾಲೆಯ ಮುಖ್ಯಸ್ಥರು ಸಂಬಂಧಿಸಿದ ಶಾಲಾ ದಾಖಲಾತಿಗಳನ್ನು ಪರಿಶೀಲಿಸಬೇಕು. Admission Register, ವಿದ್ಯಾರ್ಥಿಯ ಪ್ರವೇಶ ಅರ್ಜಿ, ಹಿಂದಿನ ಶಾಲೆಯ TC, ಲಭ್ಯವಿರುವ ಇತರ ದಾಖಲೆಗಳು ಹಾಗೂ ಪ್ರಸ್ತುತ ಡಿಜಿಟಲ್ ದಾಖಲಾತಿಗಳ ನಡುವೆ ತಾಳೆ ಮಾಡುವುದು ಅಗತ್ಯ. ತಪ್ಪು ಶಾಲಾ ಮಟ್ಟದಲ್ಲೇ ನಿಯಮಾನುಸಾರ ಸರಿಪಡಿಸಲು ಸಾಧ್ಯವಿದ್ದರೆ ಸಂಬಂಧಿಸಿದ ಪ್ರಕ್ರಿಯೆ ಕೈಗೊಳ್ಳಬೇಕು. ಶಾಲಾ ಲಾಗಿನ್‌ನಲ್ಲಿ ತಿದ್ದುಪಡಿ ಮಾಡಲು ಅವಕಾಶವಿಲ್ಲದಿದ್ದರೆ ಅಥವಾ ಮೇಲಧಿಕಾರಿಗಳ ಅನುಮೋದನೆ ಅಗತ್ಯವಿರುವ ಪ್ರಕರಣವಾಗಿದ್ದರೆ, ನಿಯಮಾನುಸಾರ ಸಂಬಂಧಿಸಿದ ಶಿಕ್ಷಣಾಧಿಕಾರಿಗಳ ಹಂತಕ್ಕೆ ಪ್ರಸ್ತಾವನೆ ಕಳುಹಿಸುವ ಅಗತ್ಯ ಬರಬಹುದು. SATS ಅಧಿಕೃತ ವ್ಯವಸ್ಥೆಯಲ್ಲಿ ಶಾಲಾ ಲಾಗಿನ್ ಹಾಗೂ ಇಲಾಖೆಯ ಲಾಗಿನ್ ವ್ಯವಸ್ಥೆಗಳು ಇರುವುದನ್ನು ಪೋರ್ಟಲ್ ತೋರಿಸುತ್ತದೆ. SSLC ಪರೀಕ್ಷೆಯ Nominal Roll ಮಾಹಿತಿಯನ್ನು SATS ಮೂಲಕ ನಿರ್ವಹಿಸುವ ಕುರಿತು ಇಲಾಖೆಯ ಬಳಕೆದಾರರ ಕೈಪಿಡಿಯೂ ಲಭ್ಯವಿದೆ.

BEO ಹಂತ ಯಾವಾಗ ಮುಖ್ಯವಾಗುತ್ತದೆ?

ತಿದ್ದುಪಡಿಯ ಸ್ವರೂಪವನ್ನು ಅವಲಂಬಿಸಿ ಶಾಲೆಯಿಂದ ಕ್ಷೇತ್ರ ಶಿಕ್ಷಣಾಧಿಕಾರಿ (BEO) ಕಚೇರಿಗೆ ಪ್ರಸ್ತಾವನೆ ಅಥವಾ ಶಿಫಾರಸು ಹೋಗುವ ಸಂದರ್ಭ ಬರಬಹುದು. ವಿಶೇಷವಾಗಿ ಶಾಲಾ ಮಟ್ಟದ ಲಾಗಿನ್‌ನಲ್ಲಿ ಬದಲಾವಣೆ ಮಾಡಲು ಸಾಧ್ಯವಾಗದಿದ್ದರೆ ಅಥವಾ ಮೇಲಧಿಕಾರಿಗಳ ಪರಿಶೀಲನೆ ಅಗತ್ಯವಿರುವ ಪ್ರಕರಣಗಳಲ್ಲಿ BEO ಕಚೇರಿಯ ಪಾತ್ರ ಎದುರಾಗಬಹುದು. ಅಂತಹ ಸಂದರ್ಭದಲ್ಲಿ ಪೋಷಕರು ಶಾಲೆಯ ಮೂಲಕವೇ ಪ್ರಸ್ತಾವನೆ ಕಳುಹಿಸಲಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ‘ಅರ್ಜಿಯನ್ನು BEOಗೆ ಕಳುಹಿಸಲಾಗಿದೆ’ ಎಂಬ ಮಾತಿನ ಬದಲು, ಸಾಧ್ಯವಾದರೆ ಅರ್ಜಿಯ ಸಂಖ್ಯೆ, ಕಳುಹಿಸಿದ ದಿನಾಂಕ ಅಥವಾ ಸಂಬಂಧಿತ ಪತ್ರದ ವಿವರವನ್ನು ಪಡೆದುಕೊಳ್ಳುವುದು ಉತ್ತಮ. ಇದು ಪೋಷಕರಿಗೆ ಪ್ರಕರಣದ ಸ್ಥಿತಿ ತಿಳಿದುಕೊಳ್ಳಲು ಸಹಾಯ ಮಾಡುತ್ತದೆ.

ಹಳೆಯ ಶಾಲೆಯಲ್ಲಿ ತಪ್ಪು ಇದ್ದರೆ?

ಮಗು ಈಗ ಬೇರೆ ಶಾಲೆಯಲ್ಲಿ ಓದುತ್ತಿದ್ದರೆ, ತಪ್ಪು ಹಿಂದಿನ ಶಾಲೆಯ Admission Register ಅಥವಾ ಮೂಲ ದಾಖಲೆಯಲ್ಲಿ ಇದ್ದರೆ ಹಿಂದಿನ ಶಾಲೆಯ ದಾಖಲೆಗಳನ್ನೂ ಪರಿಶೀಲಿಸಬೇಕಾಗಬಹುದು. ಈ ಸಂದರ್ಭದಲ್ಲಿ ಪ್ರಸ್ತುತ ಶಾಲೆಯ ಮೂಲಕ ಅಥವಾ ಹಿಂದಿನ ಶಾಲೆಯ ಮುಖ್ಯಸ್ಥರೊಂದಿಗೆ ಸಮನ್ವಯ ಮಾಡಿಕೊಂಡು ಮೂಲ ದಾಖಲೆಯ ತಿದ್ದುಪಡಿ ಪ್ರಕ್ರಿಯೆ ಯಾವ ಕಚೇರಿಯ ಮೂಲಕ ನಡೆಯಬೇಕು ಎಂಬುದನ್ನು ತಿಳಿದುಕೊಳ್ಳಬೇಕು. ಹಳೆಯ ಮುಖ್ಯೋಪಾಧ್ಯಾಯರು ಇಲ್ಲದಿದ್ದರೆ, ‘ಅವರು ಇಲ್ಲದ ಕಾರಣ ತಿದ್ದುಪಡಿ ಸಾಧ್ಯವಿಲ್ಲ’ ಎಂಬುದೇ ಅಂತಿಮ ಉತ್ತರವಾಗಬೇಕೆಂದಿಲ್ಲ. ದಾಖಲೆಗಳನ್ನು ಸಂರಕ್ಷಿಸುವ ಸಂಬಂಧಿತ ಸಂಸ್ಥೆ/ಶಿಕ್ಷಣ ಇಲಾಖೆಯ ಅಧಿಕಾರಿಗಳ ಮೂಲಕ ಮುಂದಿನ ಕ್ರಮದ ಮಾರ್ಗವನ್ನು ಪೋಷಕರು ಲಿಖಿತವಾಗಿ ಕೇಳಬಹುದು. ಕರ್ನಾಟಕ ಹೈಕೋರ್ಟ್‌ನ ಕೆಲವು ಪ್ರಕರಣಗಳಲ್ಲಿ ಶಾಲಾ ದಾಖಲೆಗಳಲ್ಲಿ ತಂದೆಯ ಹೆಸರಿನ ತಪ್ಪನ್ನು ಸರಿಪಡಿಸುವಂತೆ ಶಿಕ್ಷಣ ಅಧಿಕಾರಿಗಳಿಗೆ ನಿರ್ದೇಶನ ನೀಡಿರುವ ಉದಾಹರಣೆಗಳಿವೆ. 2014ರ ಒಂದು ಪ್ರಕರಣದಲ್ಲಿ ಆಧಾರ್ ಮತ್ತು ರೇಷನ್ ಕಾರ್ಡ್ ಸೇರಿದಂತೆ ದಾಖಲೆಗಳನ್ನು ಪರಿಶೀಲಿಸಿ ತಂದೆಯ ಹೆಸರನ್ನು ಶಾಲಾ ದಾಖಲೆಗಳು ಮತ್ತು TCಯಲ್ಲಿ ಸರಿಪಡಿಸುವಂತೆ ನಿರ್ದೇಶಿಸಲಾಗಿತ್ತು.

SSLCಗೆ ಮುನ್ನ ತಿದ್ದುಪಡಿ ಮಾಡಿಕೊಳ್ಳುವುದೇಕೆ ಮುಖ್ಯ?

ಮಗು SSLC ಹಂತಕ್ಕೆ ಬಂದಾಗ ಶಾಲಾ ದಾಖಲೆಯ ಪ್ರತಿಯೊಂದು ಮಾಹಿತಿಗೂ ಹೆಚ್ಚಿನ ಮಹತ್ವ ಬರುತ್ತದೆ. SSLC ಪರೀಕ್ಷೆಯ ನೋಂದಣಿ ಮತ್ತು Nominal Rollನಲ್ಲಿ ವಿದ್ಯಾರ್ಥಿಯ ವಿವರಗಳು ಸರಿಯಾಗಿ ದಾಖಲಾಗುವುದು ಮುಂದಿನ ದಾಖಲೆಗಳಿಗೂ ಪರಿಣಾಮ ಬೀರುತ್ತದೆ. ಕರ್ನಾಟಕದ SATS ವ್ಯವಸ್ಥೆಯ ಅಧಿಕೃತ SSLC Nominal Roll ಕೈಪಿಡಿಯಲ್ಲಿ ಶಾಲೆಗಳು SATSನಲ್ಲಿ ನೋಂದಾಯಿಸಿಕೊಂಡಿರಬೇಕು ಮತ್ತು ವಿದ್ಯಾರ್ಥಿಗಳಿಗೆ SATS ID ಇರಬೇಕು ಎಂದು ಸೂಚಿಸಲಾಗಿದೆ. ಆದ್ದರಿಂದ, SSLC ಪರೀಕ್ಷೆಗೆ ಮುನ್ನವೇ ಹೆಸರು, ತಂದೆ-ತಾಯಿಯ ಹೆಸರು, ಜನ್ಮ ದಿನಾಂಕ ಸೇರಿದಂತೆ ಅಗತ್ಯ ವಿವರಗಳನ್ನು ಪೋಷಕರು ಪರಿಶೀಲಿಸಿಕೊಳ್ಳುವುದು ಸುರಕ್ಷಿತ ಕ್ರಮ. ‘ಅಂಕಪಟ್ಟಿ ಬಂದ ನಂತರ ನೋಡೋಣ’ ಎನ್ನುವ ಮನೋಭಾವ ಸಮಸ್ಯೆಯನ್ನು ಮತ್ತಷ್ಟು ಸಂಕೀರ್ಣಗೊಳಿಸಬಹುದು.

SSLC ಅಂಕಪಟ್ಟಿ ಬಂದ ನಂತರ ಏನಾಗುತ್ತದೆ?

SSLC ಅಂಕಪಟ್ಟಿ ಈಗಾಗಲೇ ಹೊರಬಂದಿದ್ದರೆ ವಿಷಯ ಕೇವಲ ಶಾಲಾ ದಾಖಲೆಯ ತಿದ್ದುಪಡಿಗೆ ಸೀಮಿತವಾಗುವುದಿಲ್ಲ. ಶಾಲಾ ದಾಖಲೆ ಮತ್ತು ಪರೀಕ್ಷಾ ಮಂಡಳಿಯ ದಾಖಲೆಯ ನಡುವೆ ಸಮನ್ವಯ ಅಗತ್ಯವಾಗುತ್ತದೆ. ಇಂತಹ ಸಂದರ್ಭಗಳಲ್ಲಿ ಶಾಲೆಯಿಂದ ಅಗತ್ಯ ದೃಢೀಕರಣ/ಪ್ರಸ್ತಾವನೆ ಪಡೆದು ಸಂಬಂಧಪಟ್ಟ ಪರೀಕ್ಷಾ ಮಂಡಳಿಯ ನಿಯಮಾನುಸಾರ ಅರ್ಜಿ ಸಲ್ಲಿಸಬೇಕಾಗಬಹುದು. 2025ರ ಕರ್ನಾಟಕ ಹೈಕೋರ್ಟ್ ಪ್ರಕರಣವೊಂದರಲ್ಲಿ, ಶಾಲಾ ದಾಖಲೆಗಳಲ್ಲಿ ಸರಿಯಾದ ಜನ್ಮ ದಿನಾಂಕವಿದ್ದರೂ SSLC ಅಂಕಪಟ್ಟಿಯಲ್ಲಿ ತಪ್ಪು ದಾಖಲಾಗಿದ್ದ ಪ್ರಕರಣದಲ್ಲಿ ಶಾಲೆಯ ಮೂಲಕ ತಿದ್ದುಪಡಿ ಕೋರಿ ಅರ್ಜಿ ಸಲ್ಲಿಸಿದ್ದ ವಿಚಾರ ದಾಖಲಾಗಿದೆ. ಅಂದರೆ, SSLC ಮುಗಿದ ನಂತರ ತಿದ್ದುಪಡಿ ಎಂದರೆ ಅಸಾಧ್ಯ ಎಂಬುದಲ್ಲ; ಆದರೆ, ಪ್ರಕ್ರಿಯೆ ಹೆಚ್ಚು ನಿಯಮಬದ್ಧವಾಗಬಹುದು ಮತ್ತು ಹೆಚ್ಚುವರಿ ದಾಖಲೆಗಳು ಬೇಕಾಗಬಹುದು.

ಹೆಸರು ಬದಲಾವಣೆ ಮತ್ತು ಹೆಸರು ತಿದ್ದುಪಡಿ ಒಂದೇ ಅಲ್ಲ

ಇದು ಪೋಷಕರು ವಿಶೇಷವಾಗಿ ಗಮನಿಸಬೇಕಾದ ಅಂಶ. ‘ಮೋಹನ್ ಕುಮಾರ್’ಎಂಬ ಹೆಸರು ತಪ್ಪಾಗಿ ‘ಮೋಹನ್ ಕಮಾರ್’ ಎಂದು ದಾಖಲಾಗಿರುವುದು ಅಕ್ಷರ ದೋಷವಾಗಿರಬಹುದು. ತಂದೆಯ ಹೆಸರಿನಲ್ಲಿ ಇನಿಷಿಯಲ್ ಬಿಟ್ಟುಹೋಗಿರುವುದು ಮತ್ತೊಂದು ರೀತಿಯ ತಿದ್ದುಪಡಿ. ಆದರೆ, ಒಬ್ಬ ವ್ಯಕ್ತಿ ತನ್ನ ಹೆಸರನ್ನೇ ಹೊಸದಾಗಿ ಬದಲಾಯಿಸಿಕೊಳ್ಳಲು ಬಯಸುವುದು ಸಂಪೂರ್ಣವಾಗಿ ಬೇರೆ ಪ್ರಕ್ರಿಯೆಯಾಗಬಹುದು. ಆದ್ದರಿಂದ, ಅರ್ಜಿಯಲ್ಲಿ ‘ತಪ್ಪಾಗಿ ದಾಖಲಾಗಿರುವ ಮಾಹಿತಿಯನ್ನು ಸರಿಪಡಿಸುವುದು’ ಮತ್ತು ‘ಹೊಸ ಹೆಸರು ಅಳವಡಿಸುವುದು’ ಎಂಬ ಎರಡರ ನಡುವಿನ ವ್ಯತ್ಯಾಸ ಸ್ಪಷ್ಟವಾಗಿರಬೇಕು. ಕರ್ನಾಟಕದ ನ್ಯಾಯಾಲಯಗಳ ಇತ್ತೀಚಿನ ಪ್ರಕರಣಗಳಲ್ಲಿಯೂ ಶಾಲಾ ದಾಖಲೆಗಳಲ್ಲಿನ ತಿದ್ದುಪಡಿ ಮತ್ತು ನಂತರದ ಹೆಸರು ಬದಲಾವಣೆಯ ಪ್ರಶ್ನೆಗಳು ಪ್ರತ್ಯೇಕವಾಗಿ ಎದುರಾಗಿವೆ.

ಜಾತಿ ನಮೂದಿನಲ್ಲಿ ತಪ್ಪಿದ್ದರೆ?

ಜಾತಿಗೆ ಸಂಬಂಧಿಸಿದ ದಾಖಲೆ ಅತ್ಯಂತ ಸೂಕ್ಷ್ಮವಾದ ವಿಷಯ. ಶಾಲಾ ದಾಖಲೆ, ಜಾತಿ ಪ್ರಮಾಣಪತ್ರ ಮತ್ತು ಇತರ ದಾಖಲೆಗಳಲ್ಲಿ ವ್ಯತ್ಯಾಸವಿದ್ದರೆ ಅದನ್ನು ಸಾಮಾನ್ಯ ಹೆಸರು/ಇನಿಷಿಯಲ್ ತಿದ್ದುಪಡಿಯಂತೆ ನೋಡಲಾಗುವುದಿಲ್ಲ. ಮೊದಲಿಗೆ ಶಾಲಾ ದಾಖಲೆಯಲ್ಲಿ ತಪ್ಪು ಎಲ್ಲಿಂದ ಉಂಟಾಗಿದೆ ಎಂಬುದನ್ನು ಪತ್ತೆಹಚ್ಚಬೇಕು. ನಂತರ ಶಾಲಾ ದಾಖಲೆ, ಪೋಷಕರ ದಾಖಲೆಗಳು, ಲಭ್ಯವಿರುವ ಜಾತಿ ಪ್ರಮಾಣಪತ್ರ ಹಾಗೂ ಸಂಬಂಧಿತ ಕಂದಾಯ/ಸಮಾಜ ಕಲ್ಯಾಣ ದಾಖಲೆಗಳ ನಡುವೆ ತಾಳೆ ಮಾಡಬೇಕು. ಶಾಲಾ ಹಂತದಲ್ಲಿ ಪರಿಹಾರ ಸಾಧ್ಯವಾಗದಿದ್ದರೆ ಸಂಬಂಧಿಸಿದ ಶಿಕ್ಷಣ ಮತ್ತು ಪ್ರಮಾಣಪತ್ರ ನೀಡುವ ಅಧಿಕಾರಿಗಳ ಮುಂದೆ ನಿಯಮಾನುಸಾರ ಕ್ರಮ ಕೈಗೊಳ್ಳಬೇಕು. ಕೆಲವು ಪ್ರಕರಣಗಳಲ್ಲಿ ನ್ಯಾಯಾಲಯದ ಮೊರೆ ಹೋಗುವ ಪರಿಸ್ಥಿತಿಯೂ ಎದುರಾಗಬಹುದು. ಆದರೆ, ಪ್ರತಿಯೊಂದು ಜಾತಿ ತಿದ್ದುಪಡಿಗೂ ನ್ಯಾಯಾಲಯವೇ ಏಕೈಕ ಮಾರ್ಗ ಎಂದು ಹೇಳುವುದು ಸರಿಯಲ್ಲ; ಪ್ರಕರಣದ ಸ್ವರೂಪ ಮತ್ತು ಅಧಿಕಾರಿಗಳ ಆದೇಶದ ಮೇಲೆ ಮಾರ್ಗ ಬದಲಾಗುತ್ತದೆ.

TCಯಲ್ಲಿ ತಪ್ಪಿದ್ದರೆ?

TC ವಿದ್ಯಾರ್ಥಿಯ ಶೈಕ್ಷಣಿಕ ಜೀವನದಲ್ಲಿ ಪ್ರಮುಖ ದಾಖಲೆಯಾಗಿದೆ. ವಿಶೇಷವಾಗಿ ಹೆಸರು, ತಂದೆ-ತಾಯಿಯ ಹೆಸರು, ಜನ್ಮ ದಿನಾಂಕ ಮುಂತಾದ ಮಾಹಿತಿಗಳಲ್ಲಿ ತಪ್ಪಿದ್ದರೆ ಮುಂದಿನ ಶಾಲೆ, ಕಾಲೇಜು ಅಥವಾ ಇತರ ದಾಖಲೆಗಳಲ್ಲಿ ಅದೇ ತಪ್ಪು ಮುಂದುವರಿಯುವ ಸಾಧ್ಯತೆ ಇದೆ. ಆದ್ದರಿಂದ, TC ಕೈಗೆ ಬಂದ ಕೂಡಲೇ ಪೋಷಕರು ಅದರಲ್ಲಿರುವ ಪ್ರತಿಯೊಂದು ವಿವರವನ್ನು ಪರಿಶೀಲಿಸಬೇಕು. ತಪ್ಪಿದ್ದರೆ ‘TC ತೆಗೆದುಕೊಂಡು ಹೋಗಿ, ನಂತರ ನೋಡೋಣ’ ಎನ್ನದೆ ತಕ್ಷಣವೇ ಸಂಬಂಧಿಸಿದ ಶಾಲೆಯ ಮುಖ್ಯಸ್ಥರನ್ನು ಸಂಪರ್ಕಿಸಿ ಲಿಖಿತವಾಗಿ ತಿದ್ದುಪಡಿ ಕೇಳುವುದು ಉತ್ತಮ.

ಅಂಕಪಟ್ಟಿಯಲ್ಲೂ ಇದೇ ನಿಯಮ ಅನ್ವಯವಾಗುತ್ತದೆಯೇ?

SSLCಗೂ ಮುನ್ನ ಶಾಲಾ ದಾಖಲೆ ಸರಿಪಡಿಸುವುದು ಮತ್ತು SSLC ಅಂಕಪಟ್ಟಿ ಹೊರಬಂದ ನಂತರ ಅಂಕಪಟ್ಟಿ ಸರಿಪಡಿಸುವುದು ಎರಡು ವಿಭಿನ್ನ ಹಂತಗಳು. SSLCಗೆ ಮುನ್ನ ಶಾಲಾ ದಾಖಲೆ, SATS ಹಾಗೂ ಪರೀಕ್ಷಾ ನೋಂದಣಿ ಮಾಹಿತಿಯನ್ನು ಸರಿಯಾಗಿ ಮಾಡಿಕೊಳ್ಳಲು ಅವಕಾಶ ಇರುವುದರಿಂದ ಪೋಷಕರು ಈ ಹಂತದಲ್ಲೇ ಎಚ್ಚರ ವಹಿಸಬೇಕು. ಅಂಕಪಟ್ಟಿ ಹೊರಬಂದ ನಂತರ ಪರೀಕ್ಷಾ ಮಂಡಳಿಯ ನಿಯಮಗಳು ಅನ್ವಯಿಸುತ್ತವೆ. ಅಧಿಕೃತ KSEAB ವ್ಯವಸ್ಥೆಯ ಪ್ರಸ್ತುತ ಹೆಸರೇ Karnataka School Examination and Assessment Board ಆಗಿದೆ.

ಅರ್ಜಿ ಕೊಟ್ಟ ನಂತರ ಪೋಷಕರು ಏನು ಮಾಡಬೇಕು?

ಅರ್ಜಿಯನ್ನು ಕೊಟ್ಟು ಸುಮ್ಮನಿರುವುದಕ್ಕಿಂತ ಅದರ ಪ್ರಗತಿಯನ್ನು ಪೋಷಕರು ಗಮನಿಸಬೇಕು. ಮೊದಲನೆಯದಾಗಿ ಅರ್ಜಿಯ ಸ್ವೀಕೃತಿ ಪಡೆಯಬೇಕು. ಎರಡನೆಯದಾಗಿ ಶಾಲಾ ದಾಖಲೆಯಲ್ಲಿ ತಿದ್ದುಪಡಿ ಆಗಿದೆಯೇ ಎಂಬುದನ್ನು ಪರಿಶೀಲಿಸಬೇಕು. ಮೂರನೆಯದಾಗಿ SATSನಲ್ಲಿ ಸಂಬಂಧಿತ ಮಾಹಿತಿ ಬದಲಾಗಿದೆಯೇ ಎಂಬುದನ್ನು ಶಾಲೆಯೊಂದಿಗೆ ಖಚಿತಪಡಿಸಿಕೊಳ್ಳಬೇಕು. BEO ಅಥವಾ ಇನ್ನಾವುದೇ ಮೇಲಧಿಕಾರಿ ಹಂತಕ್ಕೆ ಪ್ರಸ್ತಾವನೆ ಹೋಗಿದ್ದರೆ ಅದರ ಸ್ಥಿತಿಯನ್ನು ವಿಚಾರಿಸಬೇಕು. ತಿದ್ದುಪಡಿ ಆದ ನಂತರವೂ ಹಳೆಯ ತಪ್ಪು TC ಅಥವಾ ಇತರ ದಾಖಲೆಗಳಲ್ಲಿ ಉಳಿದಿದೆಯೇ ಎಂಬುದನ್ನು ಪರಿಶೀಲಿಸಬೇಕು. ಒಂದು ದಾಖಲೆಯಲ್ಲಿ ಸರಿಪಡಿಸಿ ಮತ್ತೊಂದು ದಾಖಲೆಯಲ್ಲಿ ಅದೇ ತಪ್ಪು ಉಳಿಯದಂತೆ ನೋಡುವುದು ಬಹಳ ಮುಖ್ಯ. ಪೋಷಕರು ತಮ್ಮ ಬಳಿ ದಾಖಲೆಗಳ ಪ್ರತ್ಯೇಕ ಕಡತ ಇಟ್ಟುಕೊಳ್ಳಬೇಕು ಪ್ರತಿ ವಿದ್ಯಾರ್ಥಿಗೂ ಒಂದು ‘ದಾಖಲೆ ಕಡತ’ ಇಟ್ಟುಕೊಳ್ಳುವುದು ಉಪಯುಕ್ತ. ಅದರಲ್ಲಿರಬೇಕಾದವು…

  • ಜನನ ಪ್ರಮಾಣಪತ್ರ
  • ಆಧಾರ್ ಪ್ರತಿಗೆ
  • ತಂದೆ-ತಾಯಿಯ ಗುರುತಿನ ದಾಖಲೆಗಳು
  • ಶಾಲಾ ಪ್ರವೇಶ ಅರ್ಜಿಯ ಪ್ರತಿ
  • Admission Registerಗೆ ಸಂಬಂಧಿಸಿದ ಲಭ್ಯ ದಾಖಲೆ
  • ಎಲ್ಲಾ TCಗಳ ಪ್ರತಿಗಳು
  • ಹಿಂದಿನ ತರಗತಿಗಳ ಅಂಕಪಟ್ಟಿಗಳು
  • ಪ್ರಸ್ತುತ ಶಾಲಾ ದಾಖಲೆ
  • SATS ID/ಲಭ್ಯವಿರುವ ವಿವರ
  • ಜಾತಿ ಪ್ರಮಾಣಪತ್ರ
  • ತಿದ್ದುಪಡಿಗಾಗಿ ಸಲ್ಲಿಸಿದ ಅರ್ಜಿಗಳ ಪ್ರತಿಗಳು
  • ಶಾಲೆಯಿಂದ ಬಂದ ಉತ್ತರ/Endorsement
  • BEO ಕಚೇರಿಗೆ ಕಳುಹಿಸಿದ ಪತ್ರದ ವಿವರ
  • ಅಂತಿಮವಾಗಿ ತಿದ್ದುಪಡಿಯಾದ ದಾಖಲೆಯ ಪ್ರತಿ

ಇದರಿಂದ ವರ್ಷಗಳ ನಂತರ ದಾಖಲೆ ಹುಡುಕುವ ಸಮಸ್ಯೆ ಕಡಿಮೆಯಾಗುತ್ತದೆ.

ಶಾಲೆ ಅರ್ಜಿಯನ್ನು ಸ್ವೀಕರಿಸದಿದ್ದರೆ?

ಪೋಷಕರು ಮೊದಲಿಗೆ ಲಿಖಿತ ಅರ್ಜಿಯನ್ನು ಸಲ್ಲಿಸಲು ಪ್ರಯತ್ನಿಸಬೇಕು. ಅರ್ಜಿ ಸ್ವೀಕರಿಸಲು ನಿರಾಕರಿಸಿದರೆ, ಸಂಬಂಧಿತ ಶಿಕ್ಷಣಾಧಿಕಾರಿ ಕಚೇರಿಯ ಮಾರ್ಗವನ್ನು ಬಳಸಬಹುದು. ಅಗತ್ಯವಿದ್ದರೆ ಅಂಚೆ/ಸ್ವೀಕೃತಿ ದೊರೆಯುವ ವಿಧಾನದಲ್ಲಿ ಅರ್ಜಿ ಸಲ್ಲಿಸುವುದೂ ಪರಿಗಣಿಸಬಹುದು. ಕರ್ನಾಟಕ ಸರ್ಕಾರದ ಜನಸ್ಪಂದನ/ಪಬ್ಲಿಕ್ ಗ್ರಿವನ್ಸ್ ವ್ಯವಸ್ಥೆಯೂ ಸರ್ಕಾರಿ ಸೇವೆಗಳಿಗೆ ಸಂಬಂಧಿಸಿದ ದೂರುಗಳನ್ನು ದಾಖಲಿಸಲು ಲಭ್ಯವಿದೆ. ಆದರೆ, ದೂರು ನೀಡುವ ಮೊದಲು ಶಾಲೆಗೆ ನೀಡಿದ ಅರ್ಜಿ, ದಾಖಲೆಗಳು, ಸ್ವೀಕೃತಿ ಮತ್ತು ಶಾಲೆಯಿಂದ ಬಂದ ಉತ್ತರಗಳ ಪ್ರತಿಗಳನ್ನು ಸಂಗ್ರಹಿಸಿಟ್ಟುಕೊಳ್ಳುವುದು ಮುಖ್ಯ.

ಹಿಂದಿನ ಹೆಡ್‌ಮಾಸ್ಟರ್‌ರನ್ನು ಹುಡುಕಿ’ ಎನ್ನುವುದು ಪರಿಹಾರವಲ್ಲ

ಶಾಲಾ ದಾಖಲೆ ತಪ್ಪಾಗಿರುವ ಪ್ರತಿಯೊಂದು ಪ್ರಕರಣದಲ್ಲೂ ಹಿಂದಿನ ಮುಖ್ಯೋಪಾಧ್ಯಾಯರನ್ನು ಹುಡುಕಿಕೊಂಡು ಹೋಗಲು ಪೋಷಕರಿಗೆ ಹೇಳುವುದು ಪ್ರಾಯೋಗಿಕ ಪರಿಹಾರವಾಗುವುದಿಲ್ಲ. ತಪ್ಪು ಯಾವ ದಾಖಲೆಯಲ್ಲಿ ಉಂಟಾಗಿದೆ, ಮೂಲ ದಾಖಲೆಯಲ್ಲಿ ಏನಿದೆ, ಸರಿಯಾದ ಮಾಹಿತಿಯನ್ನು ಯಾವ ದಾಖಲೆ ದೃಢೀಕರಿಸುತ್ತದೆ ಮತ್ತು ಯಾವ ಅಧಿಕಾರಿಗೆ ತಿದ್ದುಪಡಿ ಮಾಡುವ ಅಧಿಕಾರವಿದೆ ಎಂಬುದನ್ನು ಗುರುತಿಸುವುದೇ ಮೊದಲ ಹಂತ. ಶಾಲಾ ದಾಖಲೆಗಳ ತಿದ್ದುಪಡಿಗೆ ಸಂಬಂಧಿಸಿದ ಪ್ರಕರಣಗಳಲ್ಲಿ ನ್ಯಾಯಾಲಯಗಳೂ ಶಾಲಾ ದಾಖಲೆಗಳು, ಜನನ ಪ್ರಮಾಣಪತ್ರ, ಗುರುತಿನ ದಾಖಲೆಗಳು ಮುಂತಾದ ಪುರಾವೆಗಳ ಮಹತ್ವವನ್ನು ಪರಿಶೀಲಿಸಿರುವ ಉದಾಹರಣೆಗಳಿವೆ.

SSLC ಮುಗಿಸುವ ಮುನ್ನ ಪೋಷಕರು ಮಾಡಬೇಕಾದ ‘ದಾಖಲೆ ಪರಿಶೀಲನೆ’

ಮಗುವು 8ನೇ, 9ನೇ ಅಥವಾ 10ನೇ ತರಗತಿಯಲ್ಲಿ ಓದುತ್ತಿದ್ದರೆ ಈ ಪರಿಶೀಲನೆಯನ್ನು ಮುಂದೂಡಬಾರದು.
ಹೆಸರು-ಸರಿಯೇ?, ತಂದೆಯ ಹೆಸರು-ಸರಿಯೇ?, ತಾಯಿಯ ಹೆಸರು-ಸರಿಯೇ?, ಇನಿಷಿಯಲ್-ಸರಿಯೇ?,
ಜನ್ಮ ದಿನಾಂಕ-ಜನನ ಪ್ರಮಾಣಪತ್ರದಂತೆ ಇದೆಯೇ?, ಜಾತಿ/ವರ್ಗ-ಸಂಬಂಧಿತ ದಾಖಲೆಗಳಿಗೆ ಹೊಂದಿಕೆಯಾಗುತ್ತಿದೆಯೇ?, TC-ಹಿಂದಿನ ದಾಖಲೆಗಳಿಗೆ ಹೊಂದಿಕೆಯಾಗುತ್ತಿದೆಯೇ?, SATS-ಶಾಲಾ ದಾಖಲೆಗಳಿಗೆ ಹೊಂದಿಕೆಯಾಗುತ್ತಿದೆಯೇ?, SSLC ಪರೀಕ್ಷಾ ನೋಂದಣಿ ಮಾಹಿತಿ-ಸರಿಯಾಗಿದೆಯೇ? ಈ ಪ್ರಶ್ನೆಗಳಿಗೆ ‘ಹೌದು’ ಎನ್ನುವ ಉತ್ತರ ಸಿಗುವವರೆಗೆ ಪೋಷಕರು ಶಾಲೆಯೊಂದಿಗೆ ತಾಳೆ ಮಾಡಿಕೊಳ್ಳುವುದು ಒಳಿತು.

ಪೋಷಕರಿಗೆ ಒಂದು ಸರಳ ಕಾರ್ಯಯೋಜನೆ

ಮೊದಲ ಹಂತ: ಮಗುವಿನ ಎಲ್ಲ ಶೈಕ್ಷಣಿಕ ದಾಖಲೆಗಳನ್ನು ಒಂದೆಡೆ ಸೇರಿಸಿ. ಎರಡನೇ ಹಂತ: ಜನನ ಪ್ರಮಾಣಪತ್ರ, ಪೋಷಕರ ದಾಖಲೆಗಳು ಮತ್ತು ಶಾಲಾ ದಾಖಲೆಗಳನ್ನು ಪರಸ್ಪರ ಹೋಲಿಸಿ. ಮೂರನೇ ಹಂತ: ತಪ್ಪಿರುವ ವಿವರಗಳನ್ನು ಪ್ರತ್ಯೇಕ ಪಟ್ಟಿಯಾಗಿ ಬರೆಯಿರಿ. ನಾಲ್ಕನೇ ಹಂತ: ಅಗತ್ಯ ಪೂರಕ ದಾಖಲೆಗಳ ಪ್ರತಿಗಳನ್ನು ಸಿದ್ಧಪಡಿಸಿ. ಐದನೇ ಹಂತ: ಶಾಲಾ ಮುಖ್ಯಸ್ಥರಿಗೆ ಲಿಖಿತ ಅರ್ಜಿ ಸಲ್ಲಿಸಿ. ಆರನೇ ಹಂತ: ಅರ್ಜಿಯ ಸ್ವೀಕೃತಿ ಪಡೆದುಕೊಳ್ಳಿ. ಏಳನೇ ಹಂತ: ಶಾಲಾ ದಾಖಲಾತಿ ಮತ್ತು SATSನಲ್ಲಿ ತಿದ್ದುಪಡಿ ಆಗಿದೆಯೇ ಎಂದು ಪರಿಶೀಲಿಸಿ. ಎಂಟನೇ ಹಂತ: ಅಗತ್ಯವಿದ್ದರೆ ಶಾಲೆಯ ಮೂಲಕ BEO/ಸಂಬಂಧಿತ ಶಿಕ್ಷಣಾಧಿಕಾರಿಗಳ ಹಂತಕ್ಕೆ ಪ್ರಸ್ತಾವನೆ ಕಳುಹಿಸುವಂತೆ ಕೇಳಿ. ಒಂಬತ್ತನೇ ಹಂತ: ತಿದ್ದುಪಡಿಯಾದ ನಂತರ TC ಮತ್ತು ಇತರ ದಾಖಲೆಗಳಲ್ಲಿ ಮಾಹಿತಿಯನ್ನು ಮತ್ತೊಮ್ಮೆ ಪರಿಶೀಲಿಸಿ. ಹತ್ತನೇ ಹಂತ: SSLC ಪರೀಕ್ಷಾ ನೋಂದಣಿ/ಅಂತಿಮ ದಾಖಲೆ ಸಿದ್ಧವಾಗುವ ಮೊದಲು ಎಲ್ಲ ಮಾಹಿತಿಯೂ ಸರಿಯಾಗಿರುವುದನ್ನು ಖಚಿತಪಡಿಸಿಕೊಳ್ಳಿ.

ಶಾಲಾ ಮುಖ್ಯಸ್ಥರಿಗೆ ನೀಡಬಹುದಾದ ಅರ್ಜಿಯ ಮಾದರಿ

ಇವರಿಂದ:
ಪೋಷಕರ ಹೆಸರು: _
ವಿಳಾಸ: _

ಮೊಬೈಲ್ ಸಂಖ್ಯೆ: __

ಗೆ:
ಮಾನ್ಯ ಮುಖ್ಯೋಪಾಧ್ಯಾಯರು/ಮುಖ್ಯಸ್ಥರು,
_ ಶಾಲೆ,
_
.

ವಿಷಯ: ವಿದ್ಯಾರ್ಥಿಯ ಶಾಲಾ ದಾಖಲಾತಿ/SATSನಲ್ಲಿ ತಪ್ಪಾಗಿ ನಮೂದಿಸಿರುವ ಮಾಹಿತಿಯನ್ನು ತಿದ್ದುಪಡಿ ಮಾಡುವ ಕುರಿತು.

ಮಾನ್ಯರೇ,

ನನ್ನ ಮಗ/ಮಗಳು ________ ನಿಮ್ಮ ಶಾಲೆಯಲ್ಲಿ ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ವಿದ್ಯಾರ್ಥಿಯ SATS ಸಂಖ್ಯೆ ______________.

ಶಾಲಾ ದಾಖಲಾತಿ/TC/SATSನಲ್ಲಿ ವಿದ್ಯಾರ್ಥಿ/ತಂದೆ/ತಾಯಿ ಹೆಸರು/ಜನ್ಮ ದಿನಾಂಕ/ಇನಿಷಿಯಲ್/ಇತರೆ ವಿವರವು “________” ಎಂದು ತಪ್ಪಾಗಿ ದಾಖಲಾಗಿದೆ.

ಸರಿಯಾದ ಮಾಹಿತಿ “________” ಆಗಿರುತ್ತದೆ. ಈ ಮಾಹಿತಿಯನ್ನು ದೃಢೀಕರಿಸುವ ಜನನ ಪ್ರಮಾಣಪತ್ರ/ಆಧಾರ್/TC/ಅಂಕಪಟ್ಟಿ/ಇತರೆ ದಾಖಲೆಗಳ ಪ್ರತಿಗಳನ್ನು ಅರ್ಜಿಯೊಂದಿಗೆ ಲಗತ್ತಿಸಲಾಗಿದೆ.

ವಿದ್ಯಾರ್ಥಿಯ ಮುಂದಿನ ಶೈಕ್ಷಣಿಕ ದಾಖಲೆಗಳಲ್ಲಿ ತೊಂದರೆ ಉಂಟಾಗದಂತೆ ಶಾಲಾ ದಾಖಲೆಗಳಲ್ಲಿ ಮತ್ತು ಅನ್ವಯಿಸುವ ಡಿಜಿಟಲ್ ದಾಖಲಾತಿಗಳಲ್ಲಿ ನಿಯಮಾನುಸಾರ ತಿದ್ದುಪಡಿ ಮಾಡಿಕೊಡಬೇಕು. ಶಾಲಾ ಮಟ್ಟದಲ್ಲಿ ತಿದ್ದುಪಡಿ ಸಾಧ್ಯವಾಗದಿದ್ದಲ್ಲಿ, ಸಂಬಂಧಿಸಿದ ಶಿಕ್ಷಣಾಧಿಕಾರಿಗಳ ಹಂತಕ್ಕೆ ಅಗತ್ಯ ಪ್ರಸ್ತಾವನೆ/ಶಿಫಾರಸಿನೊಂದಿಗೆ ಕಳುಹಿಸಿಕೊಡಬೇಕಾಗಿ ವಿನಂತಿಸುತ್ತೇನೆ.

ಧನ್ಯವಾದಗಳು.

ಸ್ಥಳ: _
ದಿನಾಂಕ: _

ಪೋಷಕರ ಹೆಸರು: _
ಸಹಿ: _

ಲಗತ್ತುಗಳು:

  1. ಜನನ ಪ್ರಮಾಣಪತ್ರದ ಪ್ರತಿ
  2. ವಿದ್ಯಾರ್ಥಿಯ ಗುರುತಿನ ದಾಖಲೆ
  3. ತಂದೆ/ತಾಯಿಯ ಸಂಬಂಧಿತ ದಾಖಲೆ
  4. TC/ಅಂಕಪಟ್ಟಿಯ ಪ್ರತಿ
  5. ಇತರೆ ಸಂಬಂಧಿತ ಪುರಾವೆಗಳು

ದಾಖಲೆ ಸರಿಯಾಗಿರುವುದು ವಿದ್ಯಾರ್ಥಿಯ ಹಕ್ಕುಗಳಿಗೂ ಸಂಬಂಧಿಸಿದ ವಿಷಯ

ಒಂದು ಅಕ್ಷರದ ತಪ್ಪು, ಒಂದು ಇನಿಷಿಯಲ್ ಬಿಟ್ಟುಹೋಗುವುದು ಅಥವಾ ಒಂದು ಸಂಖ್ಯೆಯ ತಪ್ಪು ಕೆಲವೊಮ್ಮೆ ಕೇವಲ ಸಣ್ಣ ದೋಷವಾಗಿ ಕಾಣಬಹುದು. ಆದರೆ, ಅದೇ ತಪ್ಪು ವರ್ಷಗಳ ನಂತರ ವಿದ್ಯಾರ್ಥಿಯ ಗುರುತು, ಶಿಕ್ಷಣ, ವಿದ್ಯಾರ್ಥಿವೇತನ, ಜಾತಿ ಅಥವಾ ಇತರ ಸೌಲಭ್ಯಗಳಿಗೆ ಸಂಬಂಧಿಸಿದ ದಾಖಲೆಗಳಲ್ಲಿ ಸಮಸ್ಯೆ ಉಂಟುಮಾಡಬಹುದು. ಕರ್ನಾಟಕದ ನ್ಯಾಯಾಲಯಗಳ ಪ್ರಕರಣಗಳು ತೋರಿಸುವಂತೆ, ಶಾಲಾ ದಾಖಲೆಗಳಲ್ಲಿನ ತಪ್ಪುಗಳನ್ನು ಸರಿಪಡಿಸಲು ಆಡಳಿತಾತ್ಮಕ ಮಾರ್ಗಗಳನ್ನು ಬಳಸುವ ಸಂದರ್ಭಗಳಿವೆ; ಕೆಲವು ಪ್ರಕರಣಗಳಲ್ಲಿ ಶಿಕ್ಷಣ ಅಧಿಕಾರಿಗಳ ಕ್ರಮ, ಶಾಲೆಯ ದಾಖಲೆಗಳು ಮತ್ತು ಪೂರಕ ದಾಖಲೆಗಳು ಪ್ರಮುಖವಾಗುತ್ತವೆ. ಅಗತ್ಯವಿದ್ದರೆ ನ್ಯಾಯಾಂಗ ಪರಿಹಾರದ ಪ್ರಶ್ನೆಯೂ ಉದ್ಭವಿಸಬಹುದು. ಆದ್ದರಿಂದ, ‘SSLC ಆದ ಮೇಲೆ ನೋಡೋಣ’ ಎನ್ನುವುದಕ್ಕಿಂತ ‘SSLCಗೂ ಮುನ್ನವೇ ಎಲ್ಲ ದಾಖಲೆಗಳನ್ನು ಪರಿಶೀಲಿಸೋಣ’ ಎಂಬುದು ಪೋಷಕರಿಗೆ ಸುರಕ್ಷಿತವಾದ ದಾಖಲೆ ನಿರ್ವಹಣೆಯ ವಿಧಾನ.

ಈ ವಿಶೇಷ ವರದಿ ಓದಿದ್ದೀರಾ? ಹೆಚ್ಚಿದ ‘ಆನ್‌ಲೈನ್ ದರ್ಬಾರ್’: ಗ್ಯಾಸ್ ಸಬ್ಸಿಡಿಗೆ ಬಯೋಮೆಟ್ರಿಕ್ ಕಡ್ಡಾಯ, ಆದರೆ ಮಾಹಿತಿ ತಲುಪಿದ್ದು ಎಷ್ಟು ಜನರಿಗೆ?

SIRನಂತಹ ಪ್ರಕ್ರಿಯೆಗಳು ದಾಖಲೆಗಳ ಮಹತ್ವವನ್ನು ನಮ್ಮ ಮುಂದೆ ತಂದಿರುವ ಸಂದರ್ಭದಲ್ಲಿ, ವಿದ್ಯಾರ್ಥಿಗಳ ಶಾಲಾ ದಾಖಲೆಗಳನ್ನೂ ನಿರ್ಲಕ್ಷ್ಯ ಮಾಡಬಾರದು. ಶಾಲೆಗೆ ದಾಖಲಾದ ದಿನದಿಂದಲೇ ಮಗುವಿನ ಹೆಸರು, ಜನ್ಮ ದಿನಾಂಕ, ತಂದೆ-ತಾಯಿಯ ಹೆಸರು, ಇನಿಷಿಯಲ್ ಮತ್ತು ಇತರ ವಿವರಗಳನ್ನು ಪೋಷಕರು ಕಾಲಕಾಲಕ್ಕೆ ಪರಿಶೀಲಿಸುವ ವ್ಯವಸ್ಥೆ ಅಗತ್ಯ. ದಾಖಲೆಗಳಲ್ಲಿ ತಪ್ಪು ಕಂಡರೆ ಮೌನವಾಗಿರಬೇಡಿ. ತಪ್ಪು ಕಂಡ ದಿನವೇ ಲಿಖಿತವಾಗಿ ಪ್ರಶ್ನಿಸಿ. ಶಾಲಾ ಹಂತದಲ್ಲಿ ಪರಿಹಾರ ಸಾಧ್ಯವಿದೆಯೇ ಪರಿಶೀಲಿಸಿ. ಅಗತ್ಯವಿದ್ದರೆ BEO ಸೇರಿದಂತೆ ಸಂಬಂಧಿತ ಶಿಕ್ಷಣಾಧಿಕಾರಿಗಳ ಹಂತಕ್ಕೆ ಹೋಗಿ. SSLCಗೂ ಮುನ್ನ ದಾಖಲೆಗಳನ್ನು ಸರಿಪಡಿಸಿಕೊಳ್ಳಿ.

ಈ ವಿಶೇಷ ವೀಡಿಯೊ ನೋಡಿದ್ದೀರಾ? https://youtu.be/vKFNqG7uBiU?si=531Zvow8ppAjfc8i

ಇದು ಕೇವಲ ಒಂದು ದಾಖಲೆಯ ತಿದ್ದುಪಡಿಯಲ್ಲ; ವಿದ್ಯಾರ್ಥಿಯ ಮುಂದಿನ ಶೈಕ್ಷಣಿಕ ಮತ್ತು ಸರ್ಕಾರಿ ದಾಖಲೆಗಳಲ್ಲಿ ಒಂದೇ ರೀತಿಯ ಸರಿಯಾದ ಗುರುತು ಉಳಿಯುವಂತೆ ಮಾಡುವ ಮುನ್ನೆಚ್ಚರಿಕೆಯ ಕ್ರಮ.

WhatsApp Image 2025 02 05 at 18.09.20
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಇನ್ಸ್‌ಪೆಕ್ಟರ್‌ಗೆ ಜಾತಿ ನಿಂದನೆ: ಪ್ರತಾಪ್ ಸಿಂಹ ವಿರುದ್ಧ ಮತ್ತೊಂದು ಎಫ್‌ಐಆರ್ ದಾಖಲು

ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ಅವರ ವಿರುದ್ಧ ಜಾತಿ ನಿಂದನೆ ಮಾಡಿದ...

ಸೌಜನ್ಯ ಪ್ರಕರಣ: ಮರುತನಿಖೆ ಆದೇಶಕ್ಕೆ ‘ಕೊಂದವರು ಯಾರು?’ ಆಂದೋಲನ ಸ್ವಾಗತ, ದಕ್ಷ ಎಸ್‌ಐಟಿ ರಚನೆಗೆ ಆಗ್ರಹ

ಧರ್ಮಸ್ಥಳದಲ್ಲಿ 2012ರಲ್ಲಿ ನಡೆದಿದ್ದ ಅಪ್ರಾಪ್ತ ವಿದ್ಯಾರ್ಥಿನಿ ಸೌಜನ್ಯಳ ಭೀಕರ ಅತ್ಯಾಚಾರ ಮತ್ತು...