ರೈತರು ಹಾಗೂ ಮಹಿಳಾ ಸ್ವಸಹಾಯ ಸಂಘಗಳಿಗೆ ಮತ್ತೆ ಸಾಲ ಸೌಲಭ್ಯ ಕಲ್ಪಿಸಲು ಸಹಕಾರಿ ಸಂಘಗಳಲ್ಲಿನ ಸಾಲ ಮರುಪಾವತಿ ಪ್ರಮಾಣ ಹೆಚ್ಚಿಸಬೇಕು. ಸಾಲ ವಸೂಲಾತಿಗೆ ಆಡಳಿತ ಮಂಡಳಿಗಳು ಹೆಚ್ಚಿನ ಆದ್ಯತೆ ನೀಡಬೇಕು ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಹಾಗೂ ಶಾಸಕ ಕೊತ್ತೂರು ಮಂಜುನಾಥ್ ಹೇಳಿದರು.
ತಾಲ್ಲೂಕಿನ ಕ್ಯಾಲನೂರು ವಿವಿಧೋದ್ದೇಶ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಬಳಿಕ ಮೊದಲ ಬಾರಿಗೆ ಇದೇ ಸೊಸೈಟಿಗೆ ಭೇಟಿ ನೀಡಿದ್ದೇನೆ. ರೈತರು ಇದ್ದರೆ ಮಾತ್ರ ದೇಶ ಉಳಿಯಲು ಸಾಧ್ಯ. ರೈತರನ್ನು ಕಾಪಾಡುವ ಜವಾಬ್ದಾರಿ ಸಹಕಾರಿ ಸಂಸ್ಥೆಗಳ ಮೇಲಿದೆ ಎಂದರು.
ಡಿಸಿಸಿ ಬ್ಯಾಂಕ್‌ನಲ್ಲಿ ಸುಮಾರು ₹217 ಕೋಟಿ ಸಾಲ ಸುಸ್ತಿಯಾಗಿದೆ. ಇದರಿಂದ ಅಪೆಕ್ಸ್ ಬ್ಯಾಂಕ್‌ನಿಂದ ಅಗತ್ಯ ಸಾಲ ಪಡೆಯಲು ಸಾಧ್ಯವಾಗುತ್ತಿಲ್ಲ ರೈತರು ಹಾಗೂ ಸ್ತ್ರೀಶಕ್ತಿ ಸಂಘಗಳ ಸಾಲ ಮರುಪಾವತಿ ಮಾಡಿದರೆ, ಮುಂದೆ ಕೇಳಿದಷ್ಟು ಸಾಲ ಒದಗಿಸಲು ಸಾಧ್ಯವಾಗುತ್ತದೆ. ಸೊಸೈಟಿಗಳ ಮೂಲಕ ಸಾಲ ವಸೂಲಿ ಹೆಚ್ಚಾದರೆ ಡಿಸಿಸಿ ಬ್ಯಾಂಕ್ ಬಲಪಡಿಸಲು ಸಾಧ್ಯ ಎಂದರು.
ಸರ್ಕಾರಗಳು ಬಡ್ಡಿ ಭರಿಸುವ ಯೋಜನೆಗಳಿರುವುದರಿಂದ ಮಹಿಳಾ ಸಂಘಗಳ ಸದಸ್ಯರಿಗೆ ಮನವರಿಕೆ ಮಾಡಿ ಸಾಲ ಮರುಪಾವತಿಸುವಂತೆ ಮಾಡಬೇಕು. ಮಹಿಳಾ ಸಂಘಗಳ ಸಾಲ ಯಾವುದೇ ಕಾರಣಕ್ಕೂ ಮನ್ನಾ ಆಗುವುದಿಲ್ಲ. ಶೂನ್ಯ ಬಡ್ಡಿ ಸಾಲ ಸೌಲಭ್ಯ ಮುಂದುವರಿಯಬೇಕಾದರೆ ಸಾಲ ಕಟ್ಟುವ ಸಂಸ್ಕೃತಿ ಬೆಳೆಸಿಕೊಳ್ಳಬೇಕು ಡಿಸಿಸಿ ಬ್ಯಾಂಕ್‌ನಲ್ಲಿ ನಡೆದಿರುವ ದುರುಪಯೋಗದ ಬಗ್ಗೆ ನಿರ್ಲಕ್ಷ್ಯ ವಹಿಸುವ ಪ್ರಶ್ನೆಯೇ ಇಲ್ಲ. ಅದನ್ನು ಸರಿಪಡಿಸಿ ರೈತರಿಗೆ ಮತ್ತಷ್ಟು ನೆರವು ನೀಡಲು ಕ್ರಮ ಕೈಗೊಳ್ಳಲಾಗುವುದು. ಎರಡು ತಿಂಗಳಲ್ಲಿ ಬ್ಯಾಂಕ್‌ನ ವ್ಯವಸ್ಥೆ ಸುಧಾರಿಸಿ ಮತ್ತೆ ಹೆಚ್ಚಿನ ಪ್ರಮಾಣದಲ್ಲಿ ಸಾಲ ನೀಡುವ ಉದ್ದೇಶವಿದೆ ಎಂದರು.
ಸೊಸೈಟಿ ಅಧ್ಯಕ್ಷ ವೆಂಕಟರೆಡ್ಡಿ ಮಾತನಾಡಿ, ಪ್ರಸಕ್ತ ಸಾಲಿನಲ್ಲಿ ಸಂಘವು ₹3.52 ಲಕ್ಷ ನಿವ್ವಳ ಲಾಭ ಗಳಿಸಿದೆ. ಸ್ತ್ರೀಶಕ್ತಿ ಸಂಘಗಳು ಹಾಗೂ ರೈತರಿಂದ ₹2.50 ಕೋಟಿ ಸಾಲ ಬಾಕಿ ಬರಬೇಕಿದೆ. ಸದಸ್ಯರು ಕೂಡಲೇ ಸಾಲ ಮರುಪಾವತಿಸಿ ಪುನಃ ಸಾಲ ಪಡೆಯಲು ಸಹಕರಿಸಬೇಕು ಎಂದು ಮನವಿ ಮಾಡಿದರು.
ಇದನ್ನು ಓದಿದ್ದೀರಾ..?ಕೋಲಾರ | ನರಸಾಪುರದಲ್ಲಿ ಸೆ.26ರಂದು ಪ್ರಜಾ ಸೇವೆ ಆಂದೋಲನ
ಈ ಸಂದರ್ಭದಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಖಾಜಿಕಲ್ಲಹಳ್ಳಿ ಮುನಿರಾಜು, ವೇಮಗಲ್–ನರಸಾಪುರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಉರಟ ಅಗ್ರಹಾರ ಚೌಡರೆಡ್ಡಿ, ಸೊಸೈಟಿ ಉಪಾಧ್ಯಕ್ಷ ರಾಜಣ್ಣ, ನಿರ್ದೇಶಕರಾದ ರಾಮಾಂಜಿನಪ್ಪ, ಈರಣ್ಣ, ಶ್ರೀನಿವಾಸಪ್ಪ, ನಾರಾಯಣಸ್ವಾಮಿ, ಸಿ.ವಿ. ಪ್ರಕಾಶ್, ಮುನಿಯಪ್ಪ, ಸುರೇಶ್, ರತ್ನಮ್ಮ ಸುಬ್ಬಾರೆಡ್ಡಿ, ಗಿರಿಜಮ್ಮ ಶಿವಕುಮಾರ್, ಕೆ.ಬಿ. ಪ್ರಕಾಶ್, ಸಿಇಒ ನವೀನ್, ಪ್ರಭಾರಿ ಸಿಇಒ ಲಾವಣ್ಯ, ಸಿಬ್ಬಂದಿ ಹಾಗೂ ಷೇರುದಾರರು ಇದ್ದರು.




