ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತ ವೇಗವಾಗಿ ಅಭಿವೃದ್ಧಿ ಹೊಂದುತ್ತಿದ್ದು, ಎಂಜಿನಿಯರಿಂಗ್ ವಿದ್ಯಾರ್ಥಿಗಳು ನಿರಂತರ ಕಲಿಕೆಯ ಜೊತೆಗೆ ಹೊಸ ಆಲೋಚನೆ ಮತ್ತು ಆವಿಷ್ಕಾರದ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಉಪಮುಖ್ಯಮಂತ್ರಿ ಹಾಗೂ ಶ್ರೀ ಸಿದ್ಧಾರ್ಥ ಅಕಾಡೆಮಿ ಆಫ್ ಹೈಯರ್ ಎಜುಕೇಷನ್ (SAHE) ವಿಶ್ವವಿದ್ಯಾನಿಲಯದ ಕುಲಾಧಿಪತಿ ಡಾ.ಜಿ. ಪರಮೇಶ್ವರ ಕರೆ ನೀಡಿದರು.
ತುಮಕೂರು ನಗರದ ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದ (SSIT) ಆವರಣದಲ್ಲಿ 48ನೇ ಬ್ಯಾಚ್‌ನ ನೂತನ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ‘ಸ್ವಾಗತಂ-2026’ ಉದ್ಘಾಟಿಸಿ ಅವರು ಮಾತನಾಡಿದರು.
ಭಾರತದಲ್ಲಿ ಪ್ರತಿವರ್ಷ ಲಕ್ಷಾಂತರ ಎಂಜಿನಿಯರ್‌ಗಳು ಪದವಿ ಪಡೆದು ಹೊರಬರುತ್ತಿದ್ದು, ಜಾಗತಿಕ ಮಟ್ಟದಲ್ಲಿ ದೇಶದ ತಾಂತ್ರಿಕ ಮಾನವ ಸಂಪನ್ಮೂಲಕ್ಕೆ ಮಹತ್ವದ ಸ್ಥಾನವಿದೆ. ಎಂಜಿನಿಯರಿಂಗ್ ಕ್ಷೇತ್ರವು ನಿರಂತರ ಕಲಿಕೆಯ ಪ್ರಕ್ರಿಯೆಯಾಗಿದ್ದು, ವಿದ್ಯಾರ್ಥಿಗಳು ಹೊಸ ತಂತ್ರಜ್ಞಾನಗಳನ್ನು ಕಲಿಯುವುದರೊಂದಿಗೆ ಹೊಸ ಆಲೋಚನೆಗಳನ್ನು ಕಾರ್ಯರೂಪಕ್ಕೆ ತರುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.
ವಿದ್ಯಾರ್ಥಿಗಳು ಶಿಕ್ಷಣದ ಜತೆಗೆ ನೈತಿಕ ಮೌಲ್ಯಗಳನ್ನು ಬೆಳೆಸಿಕೊಳ್ಳುವುದು ಅತ್ಯಗತ್ಯ. ಸಮಾಜದ ಆರೋಗ್ಯಕರ ಬೆಳವಣಿಗೆಗೆ ನೈತಿಕತೆ ಪ್ರಮುಖ ಪಾತ್ರ ವಹಿಸುತ್ತದೆ. ತಾಂತ್ರಿಕ ಜ್ಞಾನವನ್ನು ಸಮಾಜದ ಒಳಿತಿಗಾಗಿ ಬಳಸುವ ಜವಾಬ್ದಾರಿಯನ್ನು ವಿದ್ಯಾರ್ಥಿಗಳು ಅರಿತುಕೊಳ್ಳಬೇಕು ಎಂದು ಹೇಳಿದರು.
ಎಸ್‌ಎಸ್‌ಐಟಿಯಲ್ಲಿ ಬಾಹ್ಯಾಕಾಶ ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಕೋರ್ಸ್‌ಗಳನ್ನು ಆರಂಭಿಸುವ ಕುರಿತು ಚಿಂತನೆ ನಡೆಸಬೇಕು. ಇಂತಹ ಕೋರ್ಸ್‌ಗಳ ಮೂಲಕ ವಿದ್ಯಾರ್ಥಿಗಳಿಗೆ ಬಾಹ್ಯಾಕಾಶ ಕ್ಷೇತ್ರದಲ್ಲಿ ಹೆಚ್ಚಿನ ಅವಕಾಶಗಳು ದೊರೆಯಲಿದ್ದು, ಭವಿಷ್ಯದಲ್ಲಿ ಇಸ್ರೋ ಸೇರಿದಂತೆ ವಿವಿಧ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಲು ನೆರವಾಗಲಿದೆ ಎಂಬ ಆಶಯ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದ ಇಸ್ರೋ ಸಂಸ್ಥೆಯ ಮಾಜಿ ವೈಜ್ಞಾನಿಕ ಕಾರ್ಯದರ್ಶಿ ಹಾಗೂ ವಿಜ್ಞಾನಿ ಡಾ. ಪಿ.ಜಿ. ದಿವಾಕರ್ ಮಾತನಾಡಿ, ಭಾರತದ ಶ್ರೇಷ್ಠ ಎಂಜಿನಿಯರ್ ಸರ್ ಎಂ. ವಿಶ್ವೇಶ್ವರಯ್ಯ ಅವರ ತಾಂತ್ರಿಕ ಸಾಧನೆಗಳು ಪ್ರತಿಯೊಬ್ಬ ಎಂಜಿನಿಯರಿಂಗ್ ವಿದ್ಯಾರ್ಥಿಗೂ ಪ್ರೇರಣೆಯಾಗಬೇಕು ಎಂದರು.
ಪ್ರಾಮಾಣಿಕತೆ, ಕಠಿಣ ಪರಿಶ್ರಮ ಮತ್ತು ನಾವೀನ್ಯತೆ ಈ ಮೂರು ಅಂಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಅಸಾಧ್ಯವೆನಿಸುವ ಗುರಿಗಳನ್ನೂ ಸಾಧಿಸಲು ಸಾಧ್ಯ ಎಂದು ಹೇಳಿದರು.
ಭಾರತದ ಬಾಹ್ಯಾಕಾಶ ಕ್ಷೇತ್ರದ ಸಾಧನೆಗಳು ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿವೆ. ಚಂದ್ರಯಾನ ಸೇರಿದಂತೆ ವಿವಿಧ ಬಾಹ್ಯಾಕಾಶ ಯೋಜನೆಗಳ ಮೂಲಕ ಭಾರತ ತನ್ನ ತಾಂತ್ರಿಕ ಸಾಮರ್ಥ್ಯವನ್ನು ಪ್ರದರ್ಶಿಸಿದೆ. ವಿಕ್ರಮ್ ಲ್ಯಾಂಡರ್ ಮತ್ತು ಪ್ರಗ್ಯಾನ್ ರೋವರ್ ಮೂಲಕ ಚಂದ್ರನ ದಕ್ಷಿಣ ಧ್ರುವ ಪ್ರದೇಶದಲ್ಲಿ ಸಂಶೋಧನಾ ದತ್ತಾಂಶ ಸಂಗ್ರಹಿಸಿರುವುದು ಮಹತ್ವದ ಸಾಧನೆಯಾಗಿದೆ ಎಂದರು.
ಸೂರ್ಯನ ಕರೋನಾ ಮತ್ತು ಸೌರ ಚಟುವಟಿಕೆಗಳ ಅಧ್ಯಯನಕ್ಕಾಗಿ ಆದಿತ್ಯ-ಎಲ್1 ಯೋಜನೆಯ ಮೂಲಕ ಸೂರ್ಯ-ಭೂಮಿ ವ್ಯವಸ್ಥೆಯ ಲ್ಯಾಗ್ರಾಂಜ್ ಪಾಯಿಂಟ್‌ನಲ್ಲಿ ನೌಕೆಯನ್ನು ಯಶಸ್ವಿಯಾಗಿ ಸ್ಥಾಪಿಸಲಾಗಿದೆ. ಮುಂದಿನ ದಿನಗಳಲ್ಲಿ ಚಂದ್ರಯಾನ-4 ಸೇರಿದಂತೆ ಹಲವು ಮಹತ್ವಾಕಾಂಕ್ಷೆಯ ಬಾಹ್ಯಾಕಾಶ ಯೋಜನೆಗಳನ್ನು ಕೈಗೆತ್ತಿಕೊಳ್ಳುವ ಉದ್ದೇಶವಿದೆ ಎಂದರು.
ಭಾರತೀಯ ಅಂತರಿಕ್ಷ ನಿಲ್ದಾಣದಂತಹ ಭವಿಷ್ಯದ ಯೋಜನೆಗಳು ಮೈಕ್ರೋ-ಗ್ರಾವಿಟಿ ಸಂಶೋಧನೆಗಳಿಗೆ ಹೊಸ ಅವಕಾಶಗಳನ್ನು ಸೃಷ್ಟಿಸಲಿವೆ. ಬಾಹ್ಯಾಕಾಶ ಕ್ಷೇತ್ರದಲ್ಲಿ ರೋಬೋಟಿಕ್ಸ್, ಕೃತಕ ಬುದ್ಧಿಮತ್ತೆ (AI) ಹಾಗೂ ಡ್ರೋನ್ ತಂತ್ರಜ್ಞಾನಗಳು ಮಹತ್ವದ ಪಾತ್ರ ವಹಿಸುತ್ತಿದ್ದು, ಯುವ ಎಂಜಿನಿಯರ್‌ಗಳು ಈ ಕ್ಷೇತ್ರಗಳಲ್ಲಿ ತಮ್ಮ ಕೌಶಲ್ಯವನ್ನು ಬೆಳೆಸಿಕೊಂಡು ದೇಶದ ಅಭಿವೃದ್ಧಿಗೆ ಕೊಡುಗೆ ನೀಡಬೇಕು ಎಂದು ಕರೆ ನೀಡಿದರು.
ಮೈಸೂರಿನ ಇನ್ಫೋಸಿಸ್ ಡೆವಲಪ್‌ಮೆಂಟ್ ಸೆಂಟರ್‌ನ ಮುಖ್ಯಸ್ಥರು ಹಾಗೂ ಉಪಾಧ್ಯಕ್ಷರಾದ ವಿನಾಯಕ್ ಪಿ. ಹೆಗಡೆ ಮಾತನಾಡಿ, ಬಲವಾದ ಬುನಾದಿಯಿದ್ದರೆ ಮಾತ್ರ ಎತ್ತರದ ಯಶಸ್ಸು ಸಾಧಿಸಲು ಸಾಧ್ಯ. ವಿದ್ಯಾರ್ಥಿಗಳು ಎಂಜಿನಿಯರಿಂಗ್ ಶಿಕ್ಷಣದ ಅವಧಿಯಲ್ಲಿ ತಮ್ಮ ಜ್ಞಾನಕ್ಕೆ ಭದ್ರ ಬುನಾದಿ ನಿರ್ಮಿಸಿಕೊಳ್ಳಬೇಕು ಎಂದರು.
ವೈಜ್ಞಾನಿಕ ವಿಚಾರಗಳನ್ನು ಅನ್ವೇಷಿಸುವುದರ ಜತೆಗೆ, ಜಗತ್ತಿನಲ್ಲಿ ಇಲ್ಲದಿರುವುದನ್ನು ಹೊಸದಾಗಿ ಸೃಷ್ಟಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ವಿದ್ಯಾರ್ಥಿಗಳು ದೇಶ ಮತ್ತು ಸಮಾಜದ ಭವಿಷ್ಯ ನಿರ್ಮಿಸುವ ಹೊಣೆಗಾರಿಕೆ ಹೊಂದಿದ್ದಾರೆ ಎಂದು ಹೇಳಿದರು.
ಜೀವನಪೂರ್ತಿ ಕಲಿಯುವ ಮನೋಭಾವ ಬೆಳೆಸಿಕೊಳ್ಳಬೇಕು. ದೊಡ್ಡ ಕನಸು ಕಾಣುವುದರ ಜೊತೆಗೆ ಕಲ್ಪನಾಶಕ್ತಿ ಬೆಳೆಸಿಕೊಳ್ಳಬೇಕು. ಗುರಿಯತ್ತ ನಿರಂತರ ಗಮನ ಮತ್ತು ಶ್ರದ್ಧೆ ಇರಬೇಕು. ಸೋಲುಗಳು ಎದುರಾದರೂ ಪಟ್ಟುಬಿಡದೆ ಮುನ್ನಡೆಯಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ವೈಯಕ್ತಿಕ ಪ್ರತಿಭೆಯಷ್ಟೇ ಅಲ್ಲದೆ ತಂಡವಾಗಿ ಕೆಲಸ ಮಾಡುವ ಸಾಮರ್ಥ್ಯವೂ ಅತ್ಯಂತ ಮುಖ್ಯ. ಪಟ್ಟುಬಿಡದ ಪ್ರಯತ್ನ, ಕಠಿಣ ಪರಿಶ್ರಮ, ಆಸಕ್ತಿ ಮತ್ತು ಕಾಳಜಿಯಿಂದ ಉತ್ತಮ ಫಲಿತಾಂಶ ಪಡೆಯಲು ಸಾಧ್ಯ. ‘ಒಳ್ಳೆಯದನ್ನು ಮತ್ತಷ್ಟು ಉತ್ತಮವಾಗಿ ಹಾಗೂ ಉತ್ತಮವಾದುದನ್ನು ಅತ್ಯುತ್ತಮವಾಗಿ ರೂಪಿಸಿಕೊಳ್ಳಬೇಕು’ ಎಂಬ ಆಶಯದೊಂದಿಗೆ ವಿದ್ಯಾರ್ಥಿಗಳು ತಮ್ಮ ಕೌಶಲ್ಯವನ್ನು ನಿರಂತರವಾಗಿ ಅಭಿವೃದ್ಧಿಪಡಿಸಿಕೊಳ್ಳಬೇಕು ಎಂದರು.
ಇದೇ ಸಂದರ್ಭದಲ್ಲಿ ಡಾ. ಪಿ.ಜಿ. ದಿವಾಕರ್ ಹಾಗೂ ವಿನಾಯಕ್ ಪಿ. ಹೆಗಡೆ ಅವರನ್ನು ಸಂಸ್ಥೆಯ ವತಿಯಿಂದ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಮಹಾಂತೇಶ್ ನಡಕಟ್ಟಿ, ಸಾಹೇ ವಿಶ್ವವಿದ್ಯಾನಿಲಯದ ಕುಲಪತಿ ಡಾ. ಕೆ.ಬಿ. ಲಿಂಗೇಗೌಡ, ಕುಲಸಚಿವ ಡಾ. ಅಶೋಕ್ ಮೆಹ್ತಾ, ಪರೀಕ್ಷಾಂಗ ನಿಯಂತ್ರಕ ಡಾ. ಸುನಿಲ್ ಕೆ., ಕುಲಾಧಿಪತಿಗಳ ಸಲಹೆಗಾರ ಡಾ. ವಿವೇಕ್ ವೀರಯ್ಯ, ಡೀನ್ (ಶೈಕ್ಷಣಿಕ) ಡಾ. ರೇಣುಕಾಲತಾ, ಡೀನ್ (ವಿದ್ಯಾರ್ಥಿ ಕ್ಷೇಮಾಭಿವೃದ್ಧಿ) ಹಾಗೂ ‘ಸ್ವಾಗತಂ-2026’ ಸಂಚಾಲಕಿ ಡಾ. ದಿವ್ಯಪ್ರಭಾ, ಸಹ-ಸಂಚಾಲಕ ಡಾ. ರವೀಂದ್ರ ಸಾಗರ್, ಶ್ರೀ ಸಿದ್ಧಾರ್ಥ ಸ್ಕೂಲ್ ಆಫ್ ಎಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ. ಎಲ್. ಸಂಜೀವ್ ಕುಮಾರ್, ಅಪ್‌ಗ್ರಾಡ್‌ನ ವಿಶ್ವಮೋಹನ್, ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಸೇರಿದಂತೆ ಸಂಸ್ಥೆಯ ವಿವಿಧ ವಿಭಾಗಗಳ ಡೀನ್‌ಗಳು, ವಿಭಾಗ ಮುಖ್ಯಸ್ಥರು, ಆಡಳಿತಾಧಿಕಾರಿಗಳು, ಬೋಧಕ-ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಹಾಗೂ ಪೋಷಕರು ಉಪಸ್ಥಿತರಿದ್ದರು.




