ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್ (ಸಿಡಬ್ಲ್ಯೂಎಫ್‌ಐ, ಸಿಐಟಿಯು) ಶಹಾಪುರ ತಾಲೂಕು ಸಮಿತಿ ವತಿಯಿಂದ ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಅವರಿಗೆ ಮನವಿ ಸಲ್ಲಿಸಿದರು.
‘2021-22 ಹಾಗೂ 2022-23ನೇ ಸಾಲಿನ ಬಾಕಿ ಇರುವ ಶೈಕ್ಷಣಿಕ ಸಹಾಯಧನವನ್ನು ಹೈಕೋರ್ಟ್ ಆದೇಶ ಹಾಗೂ 2021ರ ಅಧಿಸೂಚನೆಯಂತೆ ಪಾವತಿಸಬೇಕು. 2025ರ ಶೈಕ್ಷಣಿಕ ಸಹಾಯಧನವನ್ನೂ 2021ರ ಅಧಿಸೂಚನೆಯಂತೆ ನೀಡಬೇಕು. SSP ಪೋರ್ಟಲ್‌ನಲ್ಲಿ ಶೈಕ್ಷಣಿಕ ಸಹಾಯಧನ ಅರ್ಜಿ ಸಲ್ಲಿಸುವಾಗ ಎದುರಾಗುತ್ತಿರುವ ತಾಂತ್ರಿಕ ಸಮಸ್ಯೆಗಳನ್ನು ನಿವಾರಿಸಿ, ವಿದ್ಯಾರ್ಥಿಗಳಿಗೆ ಅರ್ಜಿ ಸಲ್ಲಿಸಲು ಅನುಕೂಲ ಕಲ್ಪಿಸಬೇಕು’ ಎಂದು ಒತ್ತಾಯಿಸಿದರು.
‘ಕಾರ್ಮಿಕರಿಗೆ ಉಪಯೋಗವಾಗದ ಟೂಲ್‌ಕಿಟ್ ಸೇರಿದಂತೆ ವಿವಿಧ ಕಿಟ್‌ಗಳ ಖರೀದಿ ಪ್ರಕ್ರಿಯೆ ನಿಲ್ಲಿಸಬೇಕು. ಕಾರ್ಮಿಕರ ಆರೋಗ್ಯ ತಪಾಸಣೆ ಯೋಜನೆ ಹಾಗೂ ಕೋವಿಡ್ ಅವಧಿಯಲ್ಲಿ ಕಲ್ಯಾಣ ಮಂಡಳಿ ನಿಧಿ ಬಳಕೆಗೆ ಸಂಬಂಧಿಸಿದ ಆರೋಪಗಳ ಕುರಿತು ತನಿಖೆ ನಡೆಸಬೇಕು’ ಎಂದು ಆಗ್ರಹಿಸಿದರು.
‘ನಿರ್ಮಾಣ ಕಾಮಗಾರಿ ಸ್ಥಳಗಳಲ್ಲಿ ಕಾರ್ಮಿಕರಿಗೆ ಸುರಕ್ಷತಾ ಸಾಧನಗಳು, ಶುದ್ಧ ಕುಡಿಯುವ ನೀರು, ಶೌಚಾಲಯ ಹಾಗೂ ಪ್ರಥಮ ಚಿಕಿತ್ಸಾ ಸೌಲಭ್ಯ ಕಡ್ಡಾಯವಾಗಿ ಕಲ್ಪಿಸಬೇಕು. 50ಕ್ಕೂ ಹೆಚ್ಚು ಕಾರ್ಮಿಕರು ಕೆಲಸ ಮಾಡುವ ಕಾಮಗಾರಿ ಸ್ಥಳಗಳಲ್ಲಿ ಕ್ಯಾಂಟೀನ್ ಮತ್ತು ವಲಸೆ ಕಾರ್ಮಿಕರಿಗೆ ಸೂಕ್ತ ವಸತಿ ವ್ಯವಸ್ಥೆ ಮಾಡಬೇಕು. ಮಹಿಳಾ ಕಾರ್ಮಿಕರಿಗೆ ಸಮಾನ ವೇತನ ಖಚಿತಪಡಿಸಬೇಕು’ ಎಂದು ತಿಳಿಸಲಾಯಿತು.
‘ಕಾರ್ಮಿಕರ ಮಾಸಿಕ ಪಿಂಚಣಿಯನ್ನು ₹5 ಸಾವಿರಕ್ಕೆ ಹಾಗೂ ಕುಟುಂಬ ಪಿಂಚಣಿಯನ್ನು ₹3 ಸಾವಿರಕ್ಕೆ ಹೆಚ್ಚಿಸಬೇಕು. ಪಿಂಚಣಿದಾರರಿಗೆ ವೈದ್ಯಕೀಯ ಸಹಾಯಧನ ಮುಂದುವರಿಸಬೇಕು. ವಯಸ್ಸಿನ ಕಾರಣದಿಂದ ತಿರಸ್ಕೃತಗೊಂಡಿರುವ ಪಿಂಚಣಿ ಅರ್ಜಿಗಳನ್ನು ಮರುಪರಿಶೀಲಿಸಿ ಅರ್ಹರಿಗೆ ಸೌಲಭ್ಯ ಕಲ್ಪಿಸಬೇಕು’ ಎಂದು ಒತ್ತಾಯಿಸಿದರು.
‘ಮನೆ ನಿರ್ಮಾಣಕ್ಕೆ ₹5 ಲಕ್ಷ ಸಹಾಯಧನ ನೀಡಬೇಕು, ಪರಿಷ್ಕೃತ ಕನಿಷ್ಠ ವೇತನ ಜಾರಿಗೊಳಿಸಬೇಕು, ಅಸಂಘಟಿತ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಒದಗಿಸಬೇಕು, ಗುತ್ತಿಗೆ ಹಾಗೂ ಹೊರಗುತ್ತಿಗೆ ಪದ್ಧತಿ ರದ್ದುಪಡಿಸಿ ಖಾಯಂ ಉದ್ಯೋಗಕ್ಕೆ ಕ್ರಮ ಕೈಗೊಳ್ಳಬೇಕು, ವಸತಿ ರಹಿತ ಕಾರ್ಮಿಕರಿಗೆ ವಸತಿ ಕಲ್ಪಿಸಬೇಕು ಹಾಗೂ ಬಿಪಿಎಲ್ ಕಾರ್ಡ್ ಪಡೆಯಲು ಇರುವ ಆದಾಯ ಮಿತಿಯನ್ನು ಹೆಚ್ಚಿಸಬೇಕು’ ಎಂದು ಮನವಿ ಮಾಡಿದರು.
ಇದನ್ನು ಓದಿದ್ದೀರಾ? ಯಾದಗಿರಿ | ಯಕ್ಷಿಂತಿ ಗ್ರಾಮಕ್ಕೆ ಮೂಲಸೌಲಭ್ಯ ನೀಡಿ: ಪ್ರಜಾಸೇವಾ ಅಭಿಯಾನದಲ್ಲಿ ಗ್ರಾಮಸ್ಥರ ಮನವಿ
ಈ ಸಂದರ್ಭದಲ್ಲಿ ಸಂಘಟನೆಯ ತಾಲೂಕು ಅಧ್ಯಕ್ಷ ದೇವಿಂದ್ರಕುಮಾರ, ತಾಲೂಕು ಮುಖಂಡ ಶರಣಬಸವ ಹೂಗಾರ, ತಾಲೂಕು ಕಾರ್ಯದರ್ಶಿ ನಿಂಗಣ್ಣ ನಾಟೇಕರ್, ಮಲ್ಲಿಕಾರ್ಜುನ ಸೂಗೂರ, ಖಜಾಂಚಿ ಗೀತಾ, ಸಹ ಕಾರ್ಯದರ್ಶಿ ಕಾಳಪ್ಪ ವಿಶ್ವಕರ್ಮ ಸೇರಿದಂತೆ ಪದಾಧಿಕಾರಿಗಳು ಸೇರಿದಂತೆ ಇತರರು ಇದ್ದರು.




