KPSC (ಕರ್ನಾಟಕ ಲೋಕಸೇವಾ ಆಯೋಗ) ನಡೆಸಿದ ಪಶು ವೈದ್ಯಾಧಿಕಾರಿ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಆರೋಪಿಯಾಗಿರುವ ಅಮಾನತುಗೊಂಡ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಗಂಗ್ವಾರ್ ಅವರಿಗೆ ಬೆಂಗಳೂರಿನ ಸತ್ರ ನ್ಯಾಯಾಲಯ ಶುಕ್ರವಾರ ಜಾಮೀನು ನಿರಾಕರಿಸಿದೆ.
ಗಂಗ್ವಾರ್ ಹಾಗೂ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಬಸವರಾಜ್ ಕನ್ನಾಳೆ ನಡುವೆ ಅಭ್ಯರ್ಥಿಗಳಿಂದ ಹಣ ಸಂಗ್ರಹಿಸಿ ವರ್ಗಾವಣೆ ಮಾಡಿರುವುದಕ್ಕೆ ಸಂಬಂಧಿಸಿದಂತೆ ಪ್ರಾಸಿಕ್ಯೂಷನ್ ಸೂಕ್ತ ದಾಖಲೆಗಳನ್ನು ಸಲ್ಲಿಸಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಈ ಹಿನ್ನೆಲೆಯಲ್ಲಿ ಸದ್ಯದ ಹಂತದಲ್ಲಿ ಜಾಮೀನು ನೀಡಲು ಇದು ಸೂಕ್ತ ಪ್ರಕರಣವಲ್ಲ ಎಂದು 51ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸತ್ರ ನ್ಯಾಯಾಧೀಶೆ ಎಸ್. ನಿರ್ಮಲಾ ದೇವಿ ಆದೇಶಿಸಿದ್ದಾರೆ.
ವಿಧಾನಸೌಧ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದಲ್ಲಿ ಗಂಗ್ವಾರ್ ಐದನೇ ಆರೋಪಿಯಾಗಿದ್ದು, ಕನ್ನಾಳೆ ಆರನೇ ಆರೋಪಿಯಾಗಿದ್ದಾರೆ. ಇವರ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) ಸೆಕ್ಷನ್ 318(3) ಹಾಗೂ ಕರ್ನಾಟಕ ಸರ್ಕಾರಿ ಪರೀಕ್ಷೆಗಳ (ನೇಮಕಾತಿಯಲ್ಲಿ ಭ್ರಷ್ಟಾಚಾರ ಮತ್ತು ಅಕ್ರಮ ತಡೆಯುವ ಕ್ರಮಗಳು) ಕಾಯ್ದೆ, 2023ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಅಭ್ಯರ್ಥಿಗಳಿಂದ ಸಂಗ್ರಹಿಸಲಾದ ಹಣದ ವರ್ಗಾವಣೆಗೆ ಸಂಬಂಧಿಸಿದಂತೆ ಗಂಗ್ವಾರ್ ಮತ್ತು ಕನ್ನಾಳೆ ಅವರ ಬ್ಯಾಂಕ್ ಖಾತೆಗಳ ದಾಖಲೆಗಳು ಪ್ರಮುಖ ಸಾಕ್ಷ್ಯಗಳಾಗಿವೆ ಎಂದು ಪ್ರಾಸಿಕ್ಯೂಷನ್ ವಾದಿಸಿದೆ. ಆಯ್ಕೆಯಾದ ಅಭ್ಯರ್ಥಿಗಳು ಒಟ್ಟು ₹15,00,014 ಹಣವನ್ನು ಕನ್ನಾಳೆ ಖಾತೆಗೆ ಜಮೆ ಮಾಡಿದ್ದು, ಬಳಿಕ ಆ ಹಣವನ್ನು ಗಂಗ್ವಾರ್ ಅವರ ಖಾತೆಗೆ ವರ್ಗಾಯಿಸಲಾಗಿದೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.
This video cannot be played in your browser. Open the video directly
ಅಲ್ಲದೆ, ಗಂಗ್ವಾರ್ ಅವರು ಸುಮಾರು ₹52.30 ಲಕ್ಷವನ್ನು ಭೀಮಾ ಜ್ಯುವೆಲರ್ಸ್‌ನಲ್ಲಿ ಚಿನ್ನ ಖರೀದಿಸಲು ಬಳಸಿದ್ದಾರೆ ಎಂಬುದಕ್ಕೆ ಸಂಬಂಧಿಸಿದ ದಾಖಲೆಗಳು ಮತ್ತು ಛಾಯಾಚಿತ್ರಗಳನ್ನು ಪ್ರಾಸಿಕ್ಯೂಷನ್ ನ್ಯಾಯಾಲಯಕ್ಕೆ ಸಲ್ಲಿಸಿದೆ. ಹಣದ ವರ್ಗಾವಣೆ, ಚಿನ್ನ ಖರೀದಿ ಹಾಗೂ ಆರೋಪಿಗಳ ನಡುವಿನ ಸಂಪರ್ಕಕ್ಕೆ ಸಂಬಂಧಿಸಿದ ಸಾಕ್ಷ್ಯಗಳನ್ನು ನ್ಯಾಯಾಲಯ ಪರಿಗಣಿಸಿದೆ.
ಪ್ರಶ್ನೆಪತ್ರಿಕೆಗಳನ್ನು ಕನ್ನಾಳೆಗೆ ಹಸ್ತಾಂತರಿಸಲಾಗಿದೆ ಎನ್ನಲಾದ ಸ್ಥಳವನ್ನು ತನಿಖಾಧಿಕಾರಿಗಳು ಗುರುತಿಸಿದ್ದಾರೆ. ಈ ಕೃತ್ಯಕ್ಕೆ ಬಳಸಲಾಗಿದೆ ಎನ್ನಲಾದ ಶವೋಮಿ ಟ್ಯಾಬ್ಲೆಟ್ ಅನ್ನು ನಾಶಪಡಿಸಿರುವ ಆರೋಪವೂ ಗಂಗ್ವಾರ್ ವಿರುದ್ಧ ಇದೆ. ಜಪ್ತಿ ಮಾಡಿರುವ ವಸ್ತುಗಳ ವಿಧಿವಿಜ್ಞಾನ ಪರೀಕ್ಷೆ ಇನ್ನೂ ಪೂರ್ಣಗೊಂಡಿಲ್ಲ. ಅಭ್ಯರ್ಥಿಗಳು ಹಾಗೂ ಸಾಕ್ಷಿಗಳ ಹೇಳಿಕೆಗಳ ದಾಖಲಾತಿ ಪ್ರಕ್ರಿಯೆಯೂ ಬಾಕಿ ಇರುವುದರಿಂದ ತನಿಖೆ ಮುಂದುವರಿದಿದೆ ಎಂದು ನ್ಯಾಯಾಲಯ ಹೇಳಿದೆ.
ಗಂಗ್ವಾರ್ ಐಎಎಸ್ ಅಧಿಕಾರಿಯಾಗಿರುವ ಹಿನ್ನೆಲೆಯಲ್ಲಿ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಿದರೆ ಸಾಕ್ಷ್ಯ ನಾಶಪಡಿಸುವ ಅಥವಾ ತನಿಖೆಯ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ ಎಂಬ ಪ್ರಾಸಿಕ್ಯೂಷನ್ ವಾದವನ್ನೂ ನ್ಯಾಯಾಲಯ ಪರಿಗಣಿಸಿದೆ.
ಇದನ್ನೂ ಓದಿ: KPSC ಹಗರಣ | ತಪ್ಪಿತಸ್ಥರೆಲ್ಲರಿಗೂ ಕಠಿಣ ಶಿಕ್ಷೆ ಆಗುತ್ತದೆ : ಸಚಿವ ಈಶ್ವರ ಖಂಡ್ರೆ
ಜತೆಗೆ ಗಂಗ್ವಾರ್ ಹೆಸರಿನಲ್ಲಿ 54 ವಿಮಾನ ಟಿಕೆಟ್‌ಗಳು ಹಾಗೂ ಯಶಿ ಜೈಸ್ವಾಲ್ ಹೆಸರಿನಲ್ಲಿ ಕಾಯ್ದಿರಿಸಲಾಗಿದ್ದ 11 ಟಿಕೆಟ್‌ಗಳಿಗೆ ಒಟ್ಟು ₹11.37 ಲಕ್ಷ ವೆಚ್ಚವಾಗಿರುವ ದಾಖಲೆಗಳನ್ನೂ ನ್ಯಾಯಾಲಯ ಗಮನಿಸಿದೆ. ಗಂಗ್ವಾರ್ ಮತ್ತು ಕನ್ನಾಳೆ ನಡುವಿನ ಕರೆ ಸಂವಹನದ ವಿವರಗಳನ್ನೂ ತನಿಖೆಯ ಭಾಗವಾಗಿ ಪರಿಗಣಿಸಲಾಗಿದೆ. ಕ್ಯಾನ್ಸರ್‌ನಿಂದ ಚೇತರಿಸಿಕೊಂಡಿರುವುದನ್ನು ಉಲ್ಲೇಖಿಸಿ ಗಂಗ್ವಾರ್ ಜಾಮೀನು ಕೋರಿದ್ದರು. ಆದರೆ, ಸದ್ಯ ಯಾವುದೇ ಗಂಭೀರ ವೈದ್ಯಕೀಯ ಸಮಸ್ಯೆಯಿಂದ ಬಳಲುತ್ತಿರುವುದಕ್ಕೆ ಸಂಬಂಧಿಸಿದ ವೈದ್ಯಕೀಯ ದಾಖಲೆಗಳನ್ನು ಅವರು ಸಲ್ಲಿಸಿಲ್ಲ ಎಂದು ನ್ಯಾಯಾಲಯ ತಿಳಿಸಿದೆ. ಈ ಹಂತದಲ್ಲಿ ಜಾಮೀನು ಮಂಜೂರು ಮಾಡಲು ಅಗತ್ಯವಾದ ಸೂಕ್ತ ಆಧಾರಗಳನ್ನು ಅರ್ಜಿದಾರರು ಒದಗಿಸಿಲ್ಲ ಎಂದು ಹೇಳಿದ ನ್ಯಾಯಾಲಯ, ಗಂಗ್ವಾರ್ ಅವರ ಜಾಮೀನು ಅರ್ಜಿಯನ್ನು ವಜಾಗೊಳಿಸಿದೆ.
ಸದ್ಯ ಜಾರಿ ನಿರ್ದೇಶನಾಲಯದ ಕಸ್ಟಡಿಯಲ್ಲಿರುವ ಗಂಗ್ವಾರ್ ಅವರ ಆರು ದಿನಗಳ ಕಸ್ಟಡಿ ಅವಧಿ ಇಂದು ಮುಕ್ತಾಯಗೊಳ್ಳಲಿದೆ. ಈ ಮಧ್ಯೆ, ಪಶು ವೈದ್ಯಾಧಿಕಾರಿ ಹಾಗೂ ಕೈಗಾರಿಕಾ ವಿಸ್ತರಣಾಧಿಕಾರಿ ನೇಮಕಾತಿ ಹಗರಣಗಳ ತನಿಖೆಗಾಗಿ ಕರ್ನಾಟಕ ಹೈಕೋರ್ಟ್ ಇತ್ತೀಚೆಗೆ ವಿಶೇಷ ತನಿಖಾ ತಂಡ (SIT) ರಚಿಸಿದೆ. ಡಿಜಿಪಿ ಅಲೋಕ್ ಕುಮಾರ್ ನೇತೃತ್ವದಲ್ಲಿ ಐವರು ಅಧಿಕಾರಿಗಳನ್ನು ಒಳಗೊಂಡ ತಂಡವನ್ನು ರಚಿಸಲಾಗಿದೆ.





