ಶಹಾಪುರ ಹಾಗೂ ಗೋಗಿ ಹೋಬಳಿ ವ್ಯಾಪ್ತಿಯ ಪ್ರಜಾಸೇವಾ ಅಭಿಯಾನದಲ್ಲಿ ಸಲ್ಲಿಕೆಯಾದ ದೂರುಗಳ ಕುರಿತು ನಗರದ ತಹಶೀಲ್ದಾರ್ ಕಚೇರಿಯಲ್ಲಿ ಶುಕ್ರವಾರ ಪರಿಶೀಲನಾ ಸಭೆ ನಡೆಯಿತು.
ತಾಲ್ಲೂಕಿನಲ್ಲಿ ಸ್ಥಗಿತಗೊಂಡಿರುವ ವಿವಿಧ ಪಿಂಚಣಿ ಯೋಜನೆಗಳ ಕುರಿತು ಹೆಚ್ಚಿನ ದೂರುಗಳು ಬಂದಿರುವುದನ್ನು ಪ್ರಸ್ತಾಪಿಸಿದ ಶಾಸಕರು, ಈ ಬಗ್ಗೆ ಕೈಗೊಂಡಿರುವ ಕ್ರಮಗಳ ಕುರಿತು ತಹಶೀಲ್ದಾರ್ ಅವರನ್ನು ಪ್ರಶ್ನಿಸಿದರು.
ತಾಲ್ಲೂಕಿನಲ್ಲಿ ಸುಮಾರು 11 ಸಾವಿರ ವಿವಿಧ ಪಿಂಚಣಿ ಫಲಾನುಭವಿಗಳಿದ್ದು, ಕಂದಾಯ ಇಲಾಖೆಯ ಸಿಬ್ಬಂದಿಗೆ ಪ್ರತಿ ಗ್ರಾಮಕ್ಕೆ ಮನೆ-ಮನೆಗೆ ತೆರಳಿ ಫಲಾನುಭವಿಗಳ ದಾಖಲೆಗಳನ್ನು ಪರಿಶೀಲಿಸಿ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ ಎಂದು ತಹಶೀಲ್ದಾರ್ ಸಿದ್ದಾರೂಢ ಬನ್ನಿಕೊಪ್ಪ ತಿಳಿಸಿದರು.
ಮಹಲರೋಜಾ ಗ್ರಾಮದಲ್ಲಿ 31 ಎಕರೆ ಸರ್ಕಾರಿ ಜಮೀನು ಒತ್ತುವರಿಯಾಗಿರುವ ಕುರಿತು ಸಮತಾ ಸೈನಿಕ ದಳದ ಜಿಲ್ಲಾ ಘಟಕದ ಅಧ್ಯಕ್ಷ ಶರಣುರಡ್ಡಿ ಹತ್ತಿಗುಡೂರ ಸಲ್ಲಿಸಿದ್ದ ದೂರಿನ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಯಿತು.
ಭೂಮಾಪನ ಇಲಾಖೆಯ ಸಿಬ್ಬಂದಿ ಸ್ಥಳಕ್ಕೆ ತೆರಳಿ ಜಮೀನು ಸರ್ವೆ ನಡೆಸಿ ವರದಿ ನೀಡಿದ್ದಾರೆ. ಒತ್ತುವರಿ ಮಾಡಿಕೊಂಡಿರುವವರಿಗೆ ನೋಟಿಸ್ ಜಾರಿ ಮಾಡಲಾಗಿದೆ. ನಿಖರವಾಗಿ ಎಷ್ಟು ಜಮೀನು ಒತ್ತುವರಿಯಾಗಿದೆ ಎಂಬುದರ ಕುರಿತು ವರದಿ ಪಡೆದು, ನಿಯಮಾನುಸಾರ ಒತ್ತುವರಿ ತೆರವುಗೊಳಿಸಲಾಗುವುದು ಎಂದು ತಹಶೀಲ್ದಾರ್ ಹೇಳಿದರು.
ಇದನ್ನು ಓದಿದ್ದೀರಾ? ಕಲಬುರಗಿ | ಪರವಾನಗಿ ಇಲ್ಲದೇ ಮದ್ಯ ಮಾರಾಟ; ಆರೋಪಿತನ ವಿರುದ್ಧ ಪ್ರಕರಣ ದಾಖಲು
ಸಭೆಯಲ್ಲಿ ಕಂದಾಯ ಇಲಾಖೆಯ ಸಿಬ್ಬಂದಿ ಉಪಸ್ಥಿತರಿದ್ದರು.




