ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ ನೀಗಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಎಲ್‌ಕೆಜಿ, ಯುಕೆಜಿ ಹಾಗೂ ಪಿಎಂಶ್ರೀ ಶಾಲೆಗಳ ಅತಿಥಿ ಶಿಕ್ಷಕರಿಗೆ ಕಳೆದ ನಾಲ್ಕು ತಿಂಗಳಿಂದ ವೇತನ ಪಾವತಿಯಾಗಿಲ್ಲ. ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಅತಿಥಿ ಶಿಕ್ಷಕರಿಗೆ ಎರಡು ತಿಂಗಳ ವೇತನ ಬಾಕಿ ಉಳಿದಿದ್ದು, ಶಿಕ್ಷಕರು ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ.
ಈ ಕುರಿತು ಯಾದಗಿರಿ ಡಿಡಿಪಿಐ ಕಚೇರಿಗೆ ಮನವಿ ಸಲ್ಲಿಸಿದ ವಡಗೇರಾ ತಾಲೂಕು ಅತಿಥಿ ಶಿಕ್ಷಕರ ಸಂಘದ ಅಧ್ಯಕ್ಷ ವಿರೇಶ ಎಚ್. ಕೊಂಕಲ್ ಮಾತನಾಡಿ, ಎಲ್‌ಕೆಜಿ, ಯುಕೆಜಿ ಮತ್ತು ಪಿಎಂಶ್ರೀ ಶಾಲೆಗಳ ಅತಿಥಿ ಶಿಕ್ಷಕರಿಗೆ ಜುಲೈನಿಂದ ಅಕ್ಟೋಬರ್‌ವರೆಗೆ ನಾಲ್ಕು ತಿಂಗಳ ವೇತನ ನೀಡಿಲ್ಲ. ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಅತಿಥಿ ಶಿಕ್ಷಕರಿಗೆ ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳ ವೇತನ ಬಾಕಿ ಇದೆ ಎಂದು ತಿಳಿಸಿದರು.
ಸರ್ಕಾರ ಹಾಗೂ ಕೆಕೆಆರ್‌ಡಿಬಿಯಿಂದ ಅನುದಾನ ಬಿಡುಗಡೆಯಾಗಿದ್ದರೂ ಅತಿಥಿ ಶಿಕ್ಷಕರಿಗೆ ವೇತನ ಪಾವತಿಯಾಗದಿರುವುದು ವಿಷಾದನೀಯ. ತಿಂಗಳುಗಟ್ಟಲೆ ದುಡಿದರೂ ವೇತನ ದೊರೆಯದ ಕಾರಣ ಶಿಕ್ಷಕರು ತಮ್ಮ ಕುಟುಂಬಗಳ ಜೀವನ ನಿರ್ವಹಣೆಗಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಬಾಕಿ ವೇತನ ಬಿಡುಗಡೆ ಮಾಡಬೇಕು. ಅತಿಥಿ ಶಿಕ್ಷಕರ ಆರ್ಥಿಕ ಸಂಕಷ್ಟ ನಿವಾರಿಸಿ, ಮುಂದಿನ ದಿನಗಳಲ್ಲಿ ಯಾವುದೇ ವಿಳಂಬವಿಲ್ಲದೆ ವೇತನ ಪಾವತಿಸುವ ವ್ಯವಸ್ಥೆ ಕಲ್ಪಿಸಬೇಕು ಎಂದು ಮನವಿ ಮಾಡಿದರು.
ಇದನ್ನು ಓದಿದ್ದೀರಾ? ಯಾದಗಿರಿ | 200 ದಿನ ಕೆಲಸ, ₹600 ಕೂಲಿ ನೀಡುವಂತೆ ಆಗ್ರಹಿಸಿ ಕೃಷಿ ಕೂಲಿಕಾರರ ಪ್ರತಿಭಟನೆ
ಈ ಸಂದರ್ಭದಲ್ಲಿ ವಡಗೇರಾ ತಾಲೂಕು ಅಧ್ಯಕ್ಷ ವಿರೇಶ ಎಚ್. ಕೊಂಕಲ್, ತಾಯಪ್ಪ ಲಿಂಗೇರಿ, ಶಿವರಾಜ್ ಚಂದಾಪುರ, ನಾರಾಯಣ್ ವಂಕಸಂಬ್ರ, ಅತಿಥಿ ಶಿಕ್ಷಕಿಯರಾದ ರೇಣುಕಾ ಎವೂರ, ಮಾಸಾಬಿ ಮುಲ್ಲಾ, ರುದ್ರಮ್ಮ, ರೂಪಾ, ಆದೇಮ್ಮ, ಸುರೇಖಾ, ಪೂಜಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.






