ರಾಘವೇಂದ್ರ ಪಾಟೀಲ ಅವರ ಕತೆ | ದೇಸಗತಿ

Date:

ಹುದುಗಿಹೋದ ಅನೇಕ ಮಹತ್ವದ ಕತೆಗಳನ್ನು ಹೆಕ್ಕಿ ತೆಗೆದು ಅವು ಕನ್ನಡದ ಮನಗಳನ್ನು ಮುದಗೊಳಿಸಲಿ ಎಂಬ ಕಾರಣಕ್ಕಾಗಿ ಈದಿನ.ಕಾಮ್, ಮರೆಯಬಾರದ ಕತೆಗಳು ಮಾಲಿಕೆಯಲ್ಲಿ ಪ್ರತಿ ಭಾನುವಾರ ಪ್ರಕಟಿಸಲಿದೆ.

ಕಲ್ಪನಾಥ ದೇಸಾಯರಿಗೆ ಅಳುವಿನ ದನಿ ಕಿವಿಯೊಳಗ ಗುಂಯ್ ಗುಟ್ಟಿದಂಗೆ ಅನಸಲಿಕತ್ತಿತು. ಬೆಳಗು ಮುಂಜಾನೆಯ ಹೊತ್ತು. ಕನಸಿನ್ಯಾಗೋ ವಾಸ್ತವದೊಳಗೋ ಅಂತ ಅವರಿಗೆ ಒಮ್ಮಿಗೆಲೆ ಗೊಂದಲ ಆತು… ಎಚ್ಚರಾಗಿ ಕಿವಿಗೊಟ್ಟು ಕೇಳಿದರು… ಹೌದು… ಅಮೃತಂದs ದನೀ… ಅಮೃತದೇಸಾಯಿ… ಅಂದರ ಒಂದು ವರ್ಷದ ಕೂಸು. ಕಲ್ಪನಾಥ ದೇಸಾಯರ ಮರಿಮಗ… ಅಂದರ ಮಮ್ಮಗನಾದ ಮಾಣಿಕ ದೇಸಾಯಿಯ ಮಗ… ದೇಸಾಯರಿಗೆ ಇನ್ನೂ ಬೆಳಕು ಆಗೇದೋ ಇಲ್ಲೋ ಅಂತನಿಸಿತು… ತೊಂಭತ್ತು ಮೀರಿದ ಕಣ್ಣುಗಳಿಗೆ ಕಾಣುವದೆಲ್ಲ ಮಂಜು ಮಂಜು… ಗುಬ್ಬಿಗೋಳ ಚಿಂವ್ ಚಿಂವ್ ಅಂತನ್ನುವ ದನಿ ಕೇಳಿಸಿದಂಗನಿಸಿತು. ಆದರ ಪೂರ್ವದ ಕಡೇದ ಖಡಕ್ಕಾಗಿಂದ ಬಿಸಲು ಇನ್ನೂ ಖೋಲೀ ಒಳಗ ಬಿದ್ದಿದ್ದಿಲ್ಲ… ದೇಸಾಯರಿಗೆ, ಆರು ಹೊಡದಿರಬೇಕು ಅಂತನಿಸಿತು. …ಈ ಮಾಣಿಕ ಮತ್ತ ಅವನ ಹೇಂತಿ ಎದ್ದಾರೋ ಇಲ್ಲೋ… ಎದ್ದಿರಲಿಕ್ಕಿಲ್ಲ… ಹೂಂ… ಏನ ಹೆಂಗಸೋ ಏನೋ! ಎಳೇ ಕಂದ ಅಳತಿದ್ದರೂ ಗಡದ್ದ ನಿದ್ದಿ ಮಾಡೂ ಹಂತಾ ಹೆಂಗಸು ಅದೆಂತಾದ್ದಿರಬೇಕು!… ಈ ಹೇಡಿ ಸೂಳೀಮಗ್ಗ ಕೈಯಾರ ಖಡ್ಡೀ ಕೊಟ್ಟು ಹೇಳಿದೆ… ಬ್ಯಾಡೋ ಈ ಕೆಂಪ ಮೋತೆವರ ಸಹವಾಸಾs… ನಮ್ಮ ರಕ್ತ ದೇಸಗತೀದೂ… ಬ್ರಾಹ್ಮಣ ಇಲ್ಲಾ ಕ್ಷತ್ರಿಯರ ಹೆಣ್ಣು ಆಗು… ಹೋಗಲಿ ಅವನ್ನ ಆಗದಿದ್ದರ ಬಿಡವಲ್ಯಾಕ ಕನಿಷ್ಠ ಈ ದೇಶದ ಹೆಣ್ಣ ನೋಡೂ… ಅಂತ ಹೇಳಿದರ ಎಲ್ಲಿ ಕೇಳಿದಾs? ಈಗ ಇಕೀ ಸೆರಗ ಹಿಡಕೊಂಡು ಇಕಿ ಹೇಳಿದಂಗ ಕೇಳಿಕೋತ ಬಿದ್ದಾನ… ಹುಂ… ಮಗಾ ಬ್ಯಾಡಾಗಿತ್ತಂತ ಇಕಿಗೆ… ತಾವಿಬ್ಬರೂ ಅಮೇರಿಕಾಕ್ಕ ಹೋಗತಾರಂತ… ಮಗನ್ನ ಇಲ್ಲೇ ಯಾವದರೇ ಛಲೋ ಹಾಸ್ಟೆಲ್ಲಿಗೆ ಸೇರಿಸಿ ಹೋಗತೀವಂತಾರ… ಇಷ್ಟ ಸಣ್ಣ ಕಂದನ್ನ ತಾಯಿಂದ ಅಗಲಿಸಿ ಸಾಕುವ ಹಾಸ್ಟೆಲ್ಲಗೋಳು ಅದ್ಯಾವ ಇದ್ದಿದ್ದಾವು?… ಹೂಂ… ಹೊಸಾ ಪೀಳಿಗೀ ಜೋಡೀ ಇಂಥಾ ಹೊಸಾ ಹಾಸ್ಟೆಲ್ಲಗೋಳೂ ಬಂದಿದ್ದಾವು…

- Advertisement -

…ಇದ ಸಾಲದೂ ಅನ್ನುವ ಹಂಗ ಮೊನ್ನೆ ಬಂದು, ಧರಮನಟ್ಟಿಯ ಗುಡ್ಡಾ ಮಾರತನು ಅಂತ ಹೇಳಿದಾ. ಆವತ್ತಿಂದ ಕಲ್ಪನಾಥ ದೇಸಾಯರು ಮನಸಿನೊಳಗs ಅನ್ನ ಕುದ್ದಂಗ ಕುದೀಲಿಕತ್ಕಾರ… ‘ಅದೇನು ಬರೇ ಕಲ್ಲುಗುಡ್ಡಾ…. ಧರಮನಟ್ಟಿಯ ಮಂದಿ ಗುಡ್ಡದ ವಾರೀನೆಲ್ಲಾ ಸಾಗ ಮಾಡಿಕೊಂಡ ಬಿಟ್ಟಾರ. ನಾವು ಬಿಡಂದರೂ ಅವರನೇನ ಬಿಡಸಾಕ ಆಗೂದುಲ್ಲಾ… ಈಗ ಈ ಗುಡ್ಡಕ್ಕ ಏನ ಗಿರಾಕಿ ಬಂದದಲಾs… ಆಂವ ಕಲ್ಲಕ್ವಾರೀ ಕಂಟ್ರಾಕ್ಟರ್… ಕಾಯ್ದೆ, ಕಾನೂನು ಕೋರ್ಟು ಕಚೇರಿದೆಲ್ಲಾ ತಾನು ನೋಡಿಕೋತನ ಅಂತ ಹೇಳ್ತಾನ. ರಾಜಕೀಯದಾಗ ಅವನ ಪೈಕೀ ಮಂದಿ ಅದ. ಮಡ್ಡಿ ಸಾಗಮಾಡಿದ ಮಂದಿನ್ನ ಅಲ್ಲಿಂದ ಜಾಗಾ ಹೆಂಗ ಖಾಲೀ ಮಾಡಸೂದು ತನಗೆ ಗೊತ್ತ ಅದs ಅಂತ ಹೇಳ್ತಾನ… ನಾವು ಬರೇ ಬರದಕೊಟ್ಟ ಬಿಡೋದು…’ ಅಂತ ಮಾಣಿಕ ದೇಸಾಯಿ ಅಜ್ಜನ ಮುಂದ ಗುಂಡಾಡಿಸಿದ್ದ. ಮಾಣಿಕನ ಮಾತು ಕೇಳಿದಾಗ ದೇಸಾಯರ ಅಂತಃಕರಣಕ್ಕೆ ಕಿಚ್ಚ ಹತ್ತಿದಂಗಾತು… ‘ಕಲ್ಲ ಗುಡ್ಡ ಅಂತ ಕಲ್ಲ ಗುಡ್ಡ… ಮಗನs ಈಗ ಉಳದದ್ದಂದರ ಇದ ಒಂದs. ಅಕಸ್ಮಾತ್ ನೀ ಊರಿಗೆ ಹೋದೆಂದರೆ ನೀನs ಹೇಳಿಕೋಬೇಕು… ನಾ ದೇಸಾಯಿ… ನಾ ಮಾಣಿಕ ದೇಸಾಯಿ ಅಂತ… ನಿನ್ನ ಚಹರೇ ಹೆಂಗ ಉಳದೀತೋ ಅವರ ಮನಸಿನ್ಯಾಗ…? ಆದರ ಆ ಗುಡ್ಡಾ!… ಅದ ದೇಸಾಯರ ಗುಡ್ಡಲೇ. ಅದಕ ದೇಸಾಯರ ಗುಡ್ಡಾ ದೇಸಾಯರ ಗುಡ್ಡಾ ಅಂತಾರಪಾss… ಸೂರ್ಯಾ ಚಂದ್ರಾಮ ಇರೂತನಕಾ ನಮ್ಮ ಅಜ್ಜನ ಅಜ್ಜ ಕಟ್ಟಿದ ಧರಮನಟ್ಟಿಯ ದೇಸಗತಿ ಇರತೈತೋ ಬಾಳಾ- ಅದರ ಜೋಡೀ… ಹಂತಾ ಗುಡ್ಡಾ… ಅದೇನ ಕಲ್ಲಗುಡ್ಡಾs… ಮಾರತನೂ ಅಂತೀಯಲ್ಲೋ…? ನಿನ್ನ ರಕ್ತಾನs ಬದಲ ಮಾಡಿ ಇಟ್ಟಳೇನೋ ಆಕೀ…?’ ಅಂತ ದೇಸಾಯರು ರಂದೀ ಮಾಡಲಿಕ್ಕೆ ಸುರು ಮಾಡಿದಾಗ ಮಾಣಿಕ ವಟ… ವಟ ಅಂತ ಅನಕೋತ ಅಜ್ಜನ ಖೋಲೀ ಬಿಟ್ಟು ಎದ್ದು ಹೋಗಿದ್ದ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

137 ಜೀವ ರಕ್ಷಕ ಕ್ಯಾನ್ಸರ್ ಔಷಧಗಳ ದರ ಶೇ.70ರಷ್ಟು...

ಕ್ಯಾನ್ಸರ್ ಚಿಕಿತ್ಸೆಯ ದುಬಾರಿ ವೆಚ್ಚದಿಂದ ಕಂಗೆಟ್ಟಿರುವ ರೋಗಿಗಳಿಗೆ ಕೇಂದ್ರ ಸರ್ಕಾರದಿಂದ ಕೊಂಚ ನಿರಾಳತೆಯ ಸುದ್ದಿಯೊಂದಿದೆ! 137 ಜೀವರಕ್ಷಕ ಕ್ಯಾನ್ಸರ್ ಔಷಧಗಳ ಬೆಲೆ ಇಳಿಕೆಯಾಗುವ ಸಾಧ್ಯತೆಯಿದ್ದು, ಕೆಲವು ಔಷಧಗಳ ಗರಿಷ್ಠ ಚಿಲ್ಲರೆ ಬೆಲೆ ಶೇ.70ರವರೆಗೆ...

‘ದೇಶ್ ಕೋ ಬಿಕನೇ ನಹೀ ದೂಂಗಾ’ ಎಂದು ನವಮಂಗಳೂರು...

​ರೈಲ್ವೆ, ವಿಮಾನ ನಿಲ್ದಾಣ, ಟೆಲಿಕಾಂ ಸೇರಿದಂತೆ ದೇಶದ ಪ್ರಮುಖ ಜಯಶೀಲ ಸಾರ್ವಜನಿಕ ವಲಯಗಳನ್ನು ಈಗಾಗಲೇ ಆಯ್ದ ಕಾರ್ಪೊರೇಟ್ ಕುಳಗಳಿಗೆ ಒಪ್ಪಿಸಿರುವ ಮೋದಿ ಸರ್ಕಾರ, ಈಗ ತನ್ನ ದೃಷ್ಟಿಯನ್ನು ಕಡಲತೀರಗಳತ್ತ ಹರಿಸಿದೆ. ದೇಶದ ಆಮದು-ರಫ್ತು...

SIRನ ಒಳನೋಟ: ಸೇರ್ಪಡೆಗಿಂತ ಹೊರಗಿಡುವುದಕ್ಕೆ ಆದ್ಯತೆ ನೀಡಿದಾಗ ಏನಾಗುತ್ತದೆ?

SIR ಕರಡು ಪಟ್ಟಿಯಲ್ಲಿರುವ ಮತದಾರರ ಸಂಖ್ಯೆಯು ನೈಜ ವಯಸ್ಕ ಜನಸಂಖ್ಯೆಯ ಅಂದಾಜಿಗಿಂತ ಅಷ್ಟೊಂದು ದೊಡ್ಡ ಪ್ರಮಾಣದಲ್ಲಿ ಕಡಿಮೆಯಾಗಿರುವುದಕ್ಕೆ ಕಾರಣವೇನು? ಈ ಕಾಣೆಯಾದ ಮತದಾರರೆಲ್ಲ ಯಾರು? ಅವರು ಮತದಾರರ ಪಟ್ಟಿಯಲ್ಲಿ ಬಿಟ್ಟು ಹೋಗಿದ್ದು ಹೇಗೆ?...

ಇದನ್ನು ಓದಿದ್ದೀರಾ?: ಫಕೀರ್ ಮುಹಮ್ಮದ್ ಕಟ್ಪಾಡಿ ಅವರ ಕತೆ | ನೋಂಬು

ಕಲ್ಪನಾಥರು ಇದನ್ನ ಮನಸಿಗೆ ಹಚಿಗೊಂಡಾರ. ಇತ್ತ ಮಾಣಿಕನೂ ಮನಸ ತಗದ ಬಿಟ್ಟಾನ. ಇವರ ಮಾತ ಕೇಳಿಕೋತ ಹೋದರ ಕೊನೀಗಾಣೂದುಲ್ಲ… ಲಗೂನs ಅಮೇರಿಕಾಕ್ಕ ಹೊಂಟುಬಿಡಬೇಕು ಅಂತ ಅಂವ ವೀಸಾಕ್ಕ ಅಡ್ಯಾಡಲಿಕ್ಕೆ ಸುರು ಮಾಡಿದ… ದೇಸಾಯರು ಹಗಲೆಲ್ಲಾ… ‘ಇದೇನ ಕಾಲಾ ತಂದಿಟ್ಟೆಪಾs ವಿಠಲಾss…’ ಅಂತ ತಮ್ಮ ಮನಿದೇವರಾದ ಪಂಢರಪುರದ ವಿಠಲನ್ನ ನೆನೆಯುವರು. ಎಷ್ಟಂದರೂ ಹಿರಿಹೊಳಿ ದಾಟಿಸಿ- ದೇಸಗತೀ ಕಟ್ಟಲಿಕ್ಕೆ ಪ್ರೇರಣಾ ಕೊಟ್ಟವನs ಅವನು. ತಾನು ಕಟ್ಟಿಸಿದ ದೇಸಗತೀ ಉಳಸೂದೂ ಬಿಡೋದು ಅಂವಗs ಸೇರಿದ್ದು… ಅಂತ ದೇಸಾಯರು ವಿಠೋಬಾನ ಮ್ಯಾಲs ಎಲ್ಲಾ ಭಾರಾಹಾಕಿ ತಮ್ಮ ನಿತ್ಯದ ಕೆಲಸಕ್ಕೆ ಹೋದರು. ಅವರ ನಿತ್ಯದ ಕೆಲಸ ಅಂದರ… ಕುದರಿಯ ಮ್ಯಾಲ ಕುಂತು ಬಂದು… ಹಿರಿಹೊಳಿ ದಾಟಿ ಧರಮನಟ್ಟಿಯೊಳಗ ದೇಸಗತಿ ಕಟ್ಟಿದ ತಮ್ಮ ಅಜ್ಜನ ಅಜ್ಜನ ಕಥಿಯ ಭೂತಕಾಲದೊಳಗ ಸಂಚಾರ ಮಾಡೂದು! ದೇಸಾಯರಿಗೆ ತೊಂಬತ್ತರ ಮ್ಯಾಲ ಆಗೇದ. ಅನಸೂಯಾ ಅನ್ನೂ ಒಬ್ಬಾಕಿ ದಾಯಿ ಅವರನ ನೋಡಿಕೋತಾಳ. ಊಟಾ-ತಿನಿಸೂ… ಚಹಾ ಎಲ್ಲಾ ಅಲ್ಲೇ ಅವರ ಹಾಸಿಗ್ಗೇ ಬರತಾವ. ಸಂಡಾಸಕ ಮಾತ್ರ ಅನಸೂಯಾ ಕರಕೊಂಡು ಹೋಗಿ ತಂದ ಬಿಡತಾಳ… ದೇಹಕ್ಕ ಮುಪ್ಪಾದರ ಮನಸಿಗೇನು… ಹಂಗ ಕೇಳಿದರ ದೇಹದ ಚಲನೆ ಕುಗ್ಗಿದಂಗ ಮನಸಿನ ವೇಗ ಹೆಚ್ಚಿತದ. ಅದು ಸ್ವರ್ಗಾ ನರಕಾs… ಪಾತಾಳಾ ಎಲ್ಲಾ ಕಡೆ ಅಡ್ಯಾಡಿ ಬರಲಿಕ್ಕೆ ಸುರೂ ಮಾಡತದ… ಕಲ್ಪನಾಥ ದೇಸಾಯರಂತೂ ತಾವು ಸಣ್ಣಾವರಿದ್ದಾಗ ಊರಾಗಿನ ಹಿರೀಮಂದಿ ಹೇಳತಿದ್ದ ಘಟನಾವಳಿಗಳ ನೆನಪು, ಅಜ್ಜೀ… ಅವ್ವ ಹೇಳತಿದ್ದ ಹಿರ್‍ಯಾರ ಕಥಿಗೋಳು… ಮನಿತನದ ಹೆಳವರು ಹೊಗಳಿ ಹೇಳತಿದ್ದ ತಮ್ಮ ಮನಿತನದ ವಂಶಾವಳಿ… ರಗಡ ಕಡೇ ಒಂದಕ್ಕ ಒಂದು ಹೊಂದದೇ ಇರುವ ಇವನ್ನೆಲ್ಲಾs ಸೇರಿಸಿ ಒಂದು ಸುಸಂಬದ್ಧ ಭೂತಕಾಲಾs ನಿರ್ಮಿಸಿಕೊಂಡಬಿಟ್ಟಾರ. ಭೂತಕಾಲದ ಕ್ಯಾಪ್ಸೂಲ್ ಇದ್ದಂಗ. ಆಗದೀ ಸರಳಾಗಿ ಹೇಳೂದಂದರ ಒಂದು ಸಿನಿಮಾ ಮಾಡಿಕೊಂಡಬಿಟ್ಟಾರ… ಯಾವಾಗ ಬೇಕೋ ಆವಾಗ ಕಲ್ಪನಾಥ ದೇಸಾಯರು ಅದನ್ನ ತಮ್ಮ ಕಣ್ಣ ಮುಂದ ತಂದಕೋತಾರ… ಹೆಂಗಪಾs ಅಂದರ… ಬೇಕಾದ ಪುಟಾ ತಗದು ಓದಲಿಕ್ಕೆ ಬರುವ ಪುಸ್ತಕ ಓದಿದಂಗ… ಮೊದಲು ತೊಂಬತ್ತಾರನೆ ಪುಟಾ ಓದಿ ಆಮ್ಯಾಲ ಹದಿಮೂರನೇ ಪುಟಾ ಓದಬಹುದು ನೋಡ್ರಿ… ಹಂಗ…! ಓದೂದು ಬ್ಯಾಡಾತಂದರ ನೀವು ಈ ಕಥೀ ಮುಚ್ಚಿ ಇಟ್ಟ ಬಿಡತೀರೆಲಾs… ಹಂಗ…!

*

ಹರ್‍ಯಾಗ… ಹೊತ್ತ ಮಾಡೆನs ಚಿಮಣಾನ ಮನಿಗೆ ಬಂದಿದ್ದ. ಇಂವ ಮನೀ ಒಳಗ ಬಂದ ಕೂಡಲೇ ಆಕಿ ಗಾಬರಿಯಿಂದ ಭರಕ್ಕನs ಕದಾ ಎಳಕೊಂಡು ಚಿಲಕಾ ಹಾಕಿದಳು… ಇಂವ ನೆಟ್ಟಗs ಮಲಗೂಕ್ವಾಣಿಗೆ ಬಂದು ಮಂಚದ ಮ್ಯಾಲ ಕುಂತ. ಚಿಮಣಾ ಹಿಂದಿಂದs ಬಂದು ಅವನ ತಲೀ ಮ್ಯಾಲಿನ ಪಟಕಾ ತಗದು ಇಟ್ಟಳು. ಅಂಗಿಯ ಬಗಲಗಸಿಗೋಳ ಗಂಟು ಬಿಚಿಗೋತ ಅವನ ಮುಖಾ ನೋಡಿ, ತನ್ನ ಮುಖದ ಮ್ಯಾಲಿನ ಗಾಬರೀ ತೋರಿಸಿಗೋತ ‘ಅಲ್ಲಾss ಹಿಂಗ ಹಗಲ ಹೊತ್ತಿನಾಗ ಭsರ ಬೆಳಕಿನಾಗs ಬರೂದೂ? ನಿನ್ನ ಸುದ್ದಿ ಮುಟ್ಟಿಸಾಕ ಮಂದಿ ಬಾಯಿ ಬಿಟಗೊಂಡ ಕುಂತತಿ. ಪೇಶವೇಗೋಳಕಡಿಂದ ಬೆಳ್ಳಿ ಖಡೇ ಸಿಗತೈತೆಂತ ಆಸೇ ಇಟಗೊಂಡಾವು. ಸಿಪಾಯಿಗೋಳಂತೂ ನಾಯಿ ಸುತ್ತಾಕಿಧಂಗ ಸುತ್ತಾಕತ್ಯಾವು… ನಿನ್ನೆ ಏನಾತಂದೀ… ನಾ ನಿನ್ನ ಹಾದೀ ನೋಡಕೋತ ಬಾಗಲದಾಗ ನಿಂತಿನ್ನಿ. ಹಂಗ ನಿಂತಿರಬೇಕಾದರ ಒಂದ ಸಿಪಾಯಿ ಕುದರೀಮ್ಯಾಲ ಕುಂತಗೊಂಡು… ಪೋಜದಾರs ಇದ್ದಿರಬೇಕ ಅಂವ… ನನ್ನ ಕಡೇನs ಕೆಕ್ಕರಿಸಿ ನೋಡಿಕೋತ ಮೀಸೀ ತಿರಿವಿಕೋತ ಹಾದ ಹೋತು… ಅವ್ವಯ್ಯಾ! ನನಗಂತೂ ಭಾಳ ಅಂಜಿಕಿ ಬರಾಕತ್ತೇತಿ… ಚಿಮಣಾ ಭಾವಭಂಗಿ ಸಹಿತ ಹಿಂಗ ಹೇಳತಿದ್ದರ ಅಂವ ತನ್ನ ಮೋತೀ ಮ್ಯಾಲ ಯಾವ ಭಾವವಿಕಾರನೂ ತೋರಸದೇ… ಕೈ ಅಗಲಿಸಿ ಅಂಗಿ ಬಿಚ್ಚಲಿಕ್ಕೆ ಸಹಕರಿಸಿದ. ಚಿಮಣಾಗ ಇವನ ನಿರ್ಲಿಪ್ತತನಾ ಕಂಡು ಗಾಬರಿ ಆದಂಗ ಆತು. ಅಂಗೀ ಗೂಟಕ್ಕ ಹಾಕೂ ನೆವದಿಂದ ಗ್ವಾಡೀ ಕಡೆ ತಿರಿಗಿದಳು… ಅಮ್ಯಾಲ ಮತ್ತ ಅವನ ಮಗ್ಗಲಕ್ಕ ಕುಂತು ಅಗದೀ ಕಾಳಜೀ ಮಾಡಿಕೋತ, ಚಿಂತಿ ತುಂಬಿದ ದನಿಯಿಂದ… ಹೆಂಗರs ಆಗವಲ್ಲದ್ಯಾಕ… ನೀ ಅಗದೀ ಕಾಳಜಿಯಿಂದ ಇರಬೇಕು… ಅಂತ ಅನಕೋತ ಇನ್ನಷ್ಟು ಅವನ ಮಗ್ಗಲಕ್ಕ ರಬ್ಬಿಕೊಂಡು ಅವನ ಭುಜದ ಮ್ಯಾಲ ತನ್ನ ಗದ್ದಾ ಊರಿದಳು. ಚಿಮಣಾನ ಬೆಚ್ಚಗಿನ ಉಸರು ಕಿಂವೀ ಹೊಕ್ಕು ನೆಟ್ಟಗ ಅವನ ಕರ್ಣಪಟಲಕ್ಕೆ ಬಡೀಲಿಕತ್ತಿತು. ಅವನ ಕಿವಿ ಉಸರಿನೊಳಗಿನ ತರಂಗಗೋಳನ… ಆಕಿಯ ಮನಸಿನ ವಾಸನಿನ್ನ ಗುರುತಿಸಿಬಿಟ್ಟಿತು! ಅವನ ಮುಖದ ಮ್ಯಾಲ ಛಕ್ಕಂತ ಗಾಬರಿಯ ಭಾವ ಮೂಡಿ ಕ್ರಮೇಣ ಅದರ ಜಾಗಾದೊಳಗ ಭರ್ತ್ಸನೆಯ ಮುಗುಳುನಗಿ ಮೂಡಿತು… ಆಕಿನ್ನ ಹಂಗs ಮುಂದಕ ಎಳಕೊಂಡು ಬಿಗಿಯಾಗಿ ಅಪಿಗೊಂಡ. ಚಿಮಣಾ ಅವನ ಮೈಗೆ ರಬ್ಬಿಕೋತ ಧೋತರಾ ಕಟಿಕೊಂಡ ಅವನ ನಡದಮ್ಯಾಲ ಕೈಯಾಡಸಲಿಕ್ಕೆ ಸುರು ಮಾಡಿದಾಗ ಇಂವ ಒಮ್ಮಿಗೆಲೇ ಆಕಿಯ ಎರಡೂ ರಟ್ಟೀ ಹಿಡಿದು, ಮುಖದ ಮುಂದ ಕನಡೀ ಹಿಡಕೊಳ್ಳುವಂಗ ಹಿಡದು… ಆಕಿಯ ಕಣ್ಣೊಳಗ ನೋಡಿಕೋತ ಹಹ್ವಾss… ಅಂತ ಗಹಗಹಿಸಿ ನಕ್ಕ… ಆ ನಗಿಯ ಹಿಂದಿನ ಕಾಠಿಣ್ಯ ಚಿಮಣಾಳ ಮೈಗೆ ತಟ್ಟಿ ಆಕಿ ಒಮ್ಮಿಗೆಲೇ ಬೆಚ್ಚಿ, ಕೈ ಬಿಡಿಸಿಕೊಂಡು ಹಿಂದಕ ಸರದು ಅವನ ಮುಖಾ ನೋಡಿದಳು… ಅಂವ ತನ್ನ ಧೋತರದ ನಡಿಯೊಳಗ ಅಡಗಿಸಿ ಇಟಗೊಂಡ ಖಜಾನೀ ಹೊರಗ ತಗೀಲಿಕತ್ತಿದ… ಒಂದು ಪುತಳೀ ಸರಾs… ಎರಡೂ ಚಪಲಾಹಾರ… ಚೈನೂ, ಕಾಲಗೆಜ್ಜಿ…, (ಇವು ಯಾವದೋ ಸಣ್ಣ ಕೂಸಿಂದಿರಬೇಕು…) ಮತ್ತ ಹತ್ತಿಪ್ಪತ್ತು ತಾಳಿಗೋಳೂ… ಬೆಳ್ಳಿ ರುಪಾಯಿಗೋಳು. ಎಲ್ಲಾ ಸಾಮಾನಗೋಳನ ಬಗಸ್ಯಾಗ ತುಂಬಿಕೊಂಡು, ಆರತೀ ಎತ್ತವರಂಗ ಆಕಿಯ ಮುಖದ ಮುಂದ ಹಿಡದು ಮತ್ತೆ ಅದs ಹಿಂದಿನ ನಗಿಯನ್ನ ನಕ್ಕ… ಈಗ ಆಕಿ ಅವನ ಕಣ್ಣಿನ ಆಳದೊಳಗ ನೋಡಿದರs… ಅಯ್ಯೋ!… ಭಯಂಕರ ಅನ್ನುವಂತಹ ನೋವು… ದ್ವೇಷ.. ನಿಸ್ಸಹಾಯಕತೆ ಏನೇನೆಲ್ಲಾ ಭಾವನಾಗೋಳು ಕೂಡಿ ಮೂಡಿ ನಿಂತಿದ್ದವು. ಅವನ ನಗಿ ಇವನ್ನೆಲ್ಲಾ ಅನಾಮಾತಾಗಿ ಎತಿಗೊಂಡು, ಒಯ್ದು ಚಿಮಣಾನ ಹೃದಯಕ್ಕs ಮುಟ್ಟಿಸಿತು. ಚಿಮಣಾ ಒಮ್ಮಿಗಲೇ… ‘ನಿನ್ನ ಹೊಟ್ಟೆ ಹಸದಿರಬೇಕು… ನಿನ್ನ ಊಟದ ಯವಸ್ತಾ ಮಾಡತನು’ ಅಂತನಕೋತ ದುಡು ದುಡು ಅಂತ ಒಳಗೆ ನಡದಳು.

ಇದನ್ನು ಓದಿದ್ದೀರಾ?: ಮೊಗಳ್ಳಿ ಗಣೇಶ್ ಅವರ ಕತೆ | ಬುಗುರಿ

ಇಲ್ಲಿ ಅಡಿಗಿಯ ಮನಿಯೊಳಗ ಒಲಿಯ ಮುಂದ ಕುಂತರ ಅಲ್ಲಿ ಈಕಿಯ ಮಗ್ಗಲಕ್ಕss ಕುಂತು ಅವ ಖೊಕಾಟೀ ಹೊಡೆದು ಅದs ನಗೀ ನಕ್ಕಂಗ… ಆ ನಗಿಯ ಹಸ್ತಗಳೆಂಬವು ಇಕಿಯ ಎದೆಯ ಆಳಕ್ಕೆ ಇಳದೂ ಇಳದೂ ಇಕಿಯ ಮನಸಿನ ಒಂದೊಂದು ಪದರನ್ನ ಬೆದಕಿ ಬೆದಕಿ ಪರೀಕ್ಷಾ ಮಾಡಿ ನೋಡಿಧಂಗನಿಸಿ… ಚಿಮಣಾನ ಮೈಯಂತ ಮೈಯೇ ಗಾಬರಿಯ ಬೇಚೈನನ್ನ ತುಂಬಿಕೊಂಡುಬಿಟ್ಟಿತು…

ಇತ್ತ ಮಂಚದ ಮ್ಯಾಲ ಕುಂತ ವೆಂಕೋಬರಾವ ತನ್ನ ಬಗಸ್ಯಾಗಿನ ಜೀನಸಗೋಳನ ಒಂದು ಕ್ಷಣ ದಿಟ್ಟಿಸಿ ನೋಡಿ- ಸೂರ್ಯನಿಗೆ ಆರ್ಘ್ಯ ಅರ್ಪಿಸುವವನಂಗೆ ಅವನ್ನೆಲ್ಲಾ ಸಾವಕಾಶs ಹಾಸಗೀಮ್ಯಾಲ ಸುರದು… ನೀರ ಹಾಕಿ ಸೆಗಣಿ ಕಲಸವರ ಹಂಗ… ಮನಸನ್ನ ಮತ್ತೆಲ್ಲಿಗೋ ಕಳಿಸಿ ಎತ್ತಲಾಗೋ ನೋಡಿಕೋತs ಆ ವಸ್ತಾವಡವಿಗೋಳನ- ರೊಕ್ಕಾ ರುಪಾಯಿಗೋಳನ ಅಂಗೈಯಿಂದ ಕಲಸಲಿಕ್ಕತ್ತಿದ್ದ. ಮನಸು ವಿಚಾರ ಮಾಡತಿದ್ದರ ಬಲಗೈಯು ತನ್ನಷ್ಟಕ್ಕ ತಾ ಕಲಸಲಿಕ್ಕತ್ತಿತ್ತು. ಎಡಗೈ ಮಾತ್ರ ಮಂಚದ ಮ್ಯಾಲ ಹಾಸಿದ ಕುತನೀ ಗಾದಿಯ ಸುಖಸ್ಪರ್ಶದೊಳಗ ಊರಿತ್ತು… ಈಗ ಅವನ ಮನಸ್ಸು ಸಾವಕಾಶ ಸಾವಕಾಶ ಹುರಿಗಟ್ಟಲಿಕ್ಕೆ ಸುರುವಾಗಿತ್ತು… ಮುಖದ ಮ್ಯಾಲ ತಿಳುವಳಿಕಿಯ ಮುಗುಳುನಗಿ… ಅದೀಗ ಮಾಸಿತು… ಉಸ್… ಅಂತ ಸಶಬ್ದವಾಗಿ ನಿಟ್ಟುಸಿರು ಬಿಟ್ಟ… ಇದೀಗ ಏನೋ ನಿರ್ಧರಿಸಿದವನ ಮುಖಭಾವ… ಆಮ್ಯಾಲ… ಬೆನ್ನನ್ನ ಗಾದಿಯ ಸುಖದ ಸ್ಪರ್ಶಕ್ಕೆ ಅರ್ಪಿಸಿದ…

…ಚಿಮಣಾ ತನ್ನನ್ನ ತಾನs ಸಾವರಿಸಿಕೋತ ಗೋದೀ ಹಿಟ್ಟು ಕಲಿಸಿ ಚಪಾತೀ ಲಟ್ಟಿಸಿದಳು… ಹೊತ್ತುವಹಂಗ ಬೇಸಿದ್ದು ಸೇರತಾವ ಅಂವಗ… ಅಂತ ಉರಿಯುವ ಒಲಿಯ ಮ್ಯಾಲ ಕುಂತ ಕಾದ ಹಂಚಿನ ಮ್ಯಾಲ ತಾ ಲಟ್ಟಿಸಿದ ಚಪಾತೀ ಒಗದು ಎಣ್ಣೀ ಹಚ್ಚಿ ಪಾಡಂಗೇ ಬೇಯಿಸಿದಳು. ಚಪಾತಿಗೋಳನ ಬೇಯಿಸಿಕೋತನs ಬುಟ್ಯಾಗಿನ ಬಾಳೀಕಾಯಿ ತಗೊಂಡು ಎಂಟ್ಹತ್ತು ಹಣ್ಣ ಕಿಂವಿಚಿದಳು. ಆಮ್ಯಾಲ ಮುಖಾ ತೊಳಕೊಂಡು ಹಣೀ ಮ್ಯಾಲ ಢಾಳಂಗ ಇಷ್ಟಗಲ ಕುಂಕಮಾ ಹಚಿಗೊಂಡು… ಎದಿಯೊಳಗಿನ ಎದಿ ಸಂಭಾಳಿಸಿಕೋತ- ಸಾವಕಾಶ ಸಾವಕಾಶ ನಡಿಗೀ ಒಳಗಿನ ನಡಿಗೀ ಸಂಭಾಳಿಸಿಕೋತ- ಇವನ ಮಗ್ಗಲಕ್ಕ ಬಂದ ನಿಂತಳು. ಕಣ್ಣ ಮುಚಿಕೊಂಡು ಮಲಕೊಂಡಿದ್ದ. ಚಿಮಣಾ- ‘ಉಣ್ಣಾಕ ಏಳ್ರಿ…’ ಅಂದಳು. ಕಣ್ಣ ತಗದರ ತನ್ನ ಮುಖಕ್ಕ ಹತ್ತರದಾಗ ಇರುವ ಅಗಲವಾದ ಮುಖ. ಆ ಮುಖದೊಳಗಿನ ಕೊಳದಂತಹ ಕಣ್ಣುಗಳನ್ನು ಮೀರಿಸುವ ಹಂಗ ದೊಡ್ಡದಾಗಿ ಕುಂತ ಹಣಿಯಮ್ಯಾಲಿನ ಕುಂಕುಮ ಅವರ ಒಡದ ಕಾಣಿಸಿತು. ಅವ ‘ಭಕ್…’ ಅಂತ ನಕ್ಕ… ಸೋಜಿಗಗೊಂಡು ‘ಯಾಕs…’ ಅಂದಳು. ‘ಅಲ್ಲಾ… ಇವತ್ತೇನ ಇಷ್ಟ ದ್ವಾಡದ ಕುಂಕಮಾ ಹಚ್ಚೀಲಾs…’ ಅಂದ. ಚಿಮಣಾ ಅವನ ಮಗ್ಗಲದಾಗ ಕುಂತು ಅವನ ಎದಿಯ ಮ್ಯಾಲ ಗದ್ದಾ ಊರಿಕೋತ ‘ಹೂಂ… ನಾ ದ್ವಾಡದ ಕುಂಕಮಾ ಹಚಿಗೊಂಡರ ನಿನ್ನ ಆಯಸ್ಸು ಹೆಚ್ಚಿ ಆಗತೈತಿ’ ಅಂತ ಅನತಿದ್ದಂಗೇ ವೆಂಕೋಬರಾವ್ ಖೊಕಾಟೀ ಹೊಡದು ಹೊಡದು ನಗಲಿಕ್ಕತ್ತಿದ. ಚಿಮಣಾ ಅವನ ನಗಿಯಿಂದ ಸಂಭ್ರಮಗೊಳತಿರಬೇಕಾದರ ಅಂವ ಒಮ್ಮಿಗೆಲೇ ತನ್ನ ನಗೀನಿಲ್ಲಿಸಿ… ಅಗದೀ ಗಂಭೀರವಾಗಿ… ‘ಅಲ್ಲss ನಿನ್ನ ಹಣೀಮ್ಯಾಗಿನ ಸಿಂಧೂರದಿಂದ ನಂಧೆಂಗ ಆಯಸ್ ಹೆಚ್ಚ ಆಗತೈತಿ?… ನೀಯೇನ ನನ್ನ ಗರತಿ ಅಲ್ಲಲಾs…’ ಅಂತಂದ. ಆಕಿ ಮೌನಿಯಾದಳು. ಆಮ್ಯಾಲ ಸುಂಯ್… ಅಂತ ಉಸರು ಬಿಟ್ಟಳು. ಆಮ್ಯಾಲ ‘ಹೂಂ… ಉಣ್ಣಾಕ ಏಳು. ನಿನ್ನೆ ಎಷ್ಟೊತ್ತಿನಾಗ ಊಟ ಆಗೇತೋಯಾಂಬಾಲ…’ ಅಂತ ಅವನ ಕೈಹಿಡದು ಎಳದು ಎಬ್ಬಿಸಿ ಬಚ್ಚಲಮನಿಗೆ ಕರಕೊಂಡು ಹೋಗಿ ಕಾಲ ತೊಳದಳು… ಕೈತೊಳಿಸಿದಳು. ಅಡಿಗೀ ಮನಿಗೆ ಕರಕೊಂಡು ಬಂದು ಮಣೀಹಾಕಿ ಕುಂಡರಿಸಿ ಗಂಗಾಳ ಇಟ್ಟಳು. ನಾಕ ಚಪಾತಿಗೋಳನ ಮುರದು ಗಿರ್ಧಾಗೋಳನ ಮಾಡಿ ಗಂಗಾಳಕ್ಕೆ ಹಾಕಿ ಒಂದು ಸೆರಿಯಷ್ಟು ಗಟ್ಟಿಯಾದ ಹೆರತುಪ್ಪಾ ಹಾಕಿದಳು. ಅಗಲ ಬಟ್ಟಲದಾಗ ಬಾಳೀಕಾಯಿಯ ಸೀಕರಣೀ ತುಂಬಿಸಿದಳು. ಇಂವ ಇನ್ನೊಮ್ಮೆ ನಕ್ಕು… ‘ನಾಯೇನ ವಗ್ಗಯ್ಯ ಏನು? ದೋಣಿ ತುಂಬಿಧಂಗ ತುಂಬಾಕತ್ತದೀಲಾs…? ನಿನ್ನ ಕೈಯ ಅಡಿಗೀ ಉಣ್ಣೂದು ಇದs ಕಡೀ ಸರತೇ ಅನ್ನುವಂಗ ಮಾಡಾಕತ್ತದೀಲಾs…?’ ಅಂತಂದಾಗ ಚಿಮಣಾನ ಎದೀ ಧಸಲ್ ಅಂದಿತು. ಆಕಿ ಸಾವರಿಸಿಕೊಂಡು ಅಳುವ ದನೀ ಬೆರಿಸಿ ‘ಹಂಗ್ಯಾಕ ಹೊಟ್ಟೆ ಉರಸೂ ಮಾತಾಡತೀ…’ ಅಂತಂದು ಕಣ್ಣ ಒರಿಸಿಕೊಂಡಳು. ವೆಂಕೋಬರಾವ ನಿರ್ಲಿಪ್ತನಾದ… ಚಿಮಣಾ ಅವನ ಗಂಗಾಳದಾಗಿನ ಚಪಾತೀದೊಂದು ತುಂಡು ಮುರಕೊಂಡು ಅದಕ್ಕೆ ತುಪ್ಪಾ ಹಚ್ಚಿ ಸೀಕರಣ್ಯಾಗ ಎದ್ದಿ ಅವನ ಬಾಯೊಳಗ ಇಡಲಿಕ್ಕೆ ಹೋದಳು. ಆಗ ವೆಂಕೋಬರಾವನ ಕಣ್ಣ ತುದಿಯೊಳಗೆ ವ್ಯಂಗ್ಯವಿದ್ದಿತೆ?… ಚಿಮಣಾನ ಕೈನಡಗಿದೂ… ವೆಂಕೋಬರಾವ್ ಆಕಿಯ ಕೈ ತಡದು ಚಪಾತಿಯ ತುಂಡು ತಗೊಂಡು ತಾನು ಬಾಯಿಗೆ ಹಾಕ್ಕೊಂಡ. ಇಕಿ ಅಂವನ ಮುಂದ ಬೆಲ್ಲಬಡದ ಗುಂಡಕಲ್ಲಿನ ಹಂಗ ಕುಂತಳು… ಗಂಗಾಳದಾಗಿನ ಚಪಾತಿ ತೀರಲಿಕ್ಕೆ ಬಂದಕೂಡಲೇ ಚಿಮಣಾ ಇನ್ನರಡ ಚಪಾತೀ ಹಿಡಕೊಂಡು ಮುರೀಲಿಕ್ಕೆ ನೋಡಿದಳು. ಬ್ಯಾಡಂದ. ‘ಯಾಕs ಹೊಟ್ಟಿ ಬರಾಬ್ಬರಿ ಐತಿಲ್ಲೋ? ನಿನ್ನೆ ಯಾವಾಗ ಊಟ ಆಗೇತೋ ಯಾಂಬಾಲ… ಇವೆರಡ ತಿನ್ನಲಾs…’ ಅಂತ ಆಕಿ ಅಂತಿರಬೇಕಾದರ ಇಂವ ಗಂಗಾಳದಾಗ ಕೈತೊಳಕೊಂಡು ಎದ್ದುಬಿಟ್ಟ…

ಇದನ್ನು ಓದಿದ್ದೀರಾ?: ಯು.ಆರ್. ಅನಂತಮೂರ್ತಿ ಅವರ ಕತೆ | ಸೂರ್ಯನ ಕುದುರೆ

ಮಲಗೂ ಕೋಣಿಗೆ ಬಂದು ಮಂಚದ ಮ್ಯಾಲ ಕುಂತ. ಎದೆಯೊಳಗೆ ಸುಣ್ಣ ಕುದ್ದಂಗ ತಳಮಳ. ಮುಖಾ ಮಾತ್ರ ಸುಣ್ಣಾಹಚ್ಚಿದ ಗ್ವಾಡಿಯಿದ್ದಂಗ!… ಈಗ ಪಾರದರ್ಶಕ ಕಾಜ ಆತು… ಅಂವ ಒಮ್ಮಿಗೆಲೇ ಮನಸಿನೊಳಗ ನಿರ್ಧಾರ ಮಾಡಿದವನಂಗ ಧಡಕ್ಕಂತ ಮಂಚದ ಮ್ಯಾಗಿಂದ ಎದ್ದು ಗೂಟದ ಮ್ಯಾಗಿನ ಅಂಗೀ ತಗೊಂಡು ಕೈಯಾಗ ಹಿಡಕೊಂಡೂ… ಸುಮ್ಮನs ಏನೋ ಧೇನಿಸಿಕೋತ ನಿಂತ. ಮತ್ತೆ ಅದನ್ನ ಗೂಟಕ್ಕ ಹಾಕಿ ಮಂಚದ ಮ್ಯಾಲ ಕುಂತ… ಮತ್ತ ಎದ್ದ… ಈಗ ತೂಗಬಿಟ್ಟಿದ್ದ ಕತ್ತೀ ತಗೊಂಡು ವರಿಯೊಳಗಿಂದ ಹಿರದ… ಎಡಗೈಯಾಗ ಕತ್ತೀ ಹಿಡದು ಬಲಗೈ ತೋರಬೆರಳನ್ನ ಕತ್ತಿಯ ಅಂಚಿನ ಮ್ಯಾಲ ಸೂಕ್ಷ್ಮವಾಗಿ ಆಡಿಸಿದ. ಹಂಗs ಬೆರಳನ್ನ ಆಡಿಸಿಕೋತನs ಮತ್ತ ಅನ್ಯಮನಸ್ಕತೆಯನ್ನ ಹೊಕ್ಕ… ಬೆಳ್ಳು ಚುರ್… ಅಂದಾಗ ಹಾs… ಅಂತ ನೋಡಿದರ ಬೆರಳಿನ ತುದಿಗೆ ಅಂಚು ಹತ್ತಿ ನೆತ್ತರ ಬರಲಿಕತ್ತಿತ್ತು. ಬೆರಳ ತುದಿಯಿಂದ ವಸರುವ ಕೆಂಪು ನೆತ್ತರಾ ದಿಟ್ಟಿಸಿ ನೋಡಿದ ವೆಂಕೋಬರಾವ್ ಹೂಂ… ಅಂತ ಹೂಂಕರಿಸಿ ಬೆರಳು ಬಾಯೊಳಗಿಟ್ಟು ಸೀಪಲಿಕತ್ತಿದ. ಕ್ಷಣಬಿಟ್ಟು ಬೆಳ್ಳು ಹೊರಗ ತಗದು ನೋಡಿದ. ರಕ್ತದ ಸೆಲೀ ಕ್ಷೀಣವಾಗಿತ್ತು. ಈಗ ಅಂವ ಇನ್ನೊಂದು ಏನೋ ತಿಳಕೊಂಡವನಂಗೆ… ಇನ್ನೊಂದು ಏನೋ ನಿರ್ಧರಿಸಿದವನಂಗೆ… ಒಂದು ನಮೂನಿಯ ನಗೀ ನಕ್ಕು ಕತ್ತಿನ್ನ ಹೊಳ್ಳಿ ಅದರ ವರಿಗೆ ಸೇರಿಸಿ ಗ್ವಾಡಿಗೆ ತೂಗಹಾಕಿ ಮಂಚದಮ್ಯಾಲ ಕುಂತು- ಕಾಲುಚಾಚಿ ಹಾಸಿಗಿಯ ಮ್ಯಾಲ ಉಳ್ಳಿಕೊಂಡ… ತಲಿದಿಂಬಿನ ಮ್ಯಾಲ ತಲಿಯಿಟ್ಟು ಕಣ್ಣಿಗೆ ಬೆಳಕು ಮರೆಯಾಗುವ ಹಂಗೆ ಎಡಗೈಯನ್ನ ಹಣಿಯ ಮ್ಯಾಲ ಇಟಗೊಂಡು… ಉರಿಯತಿದ್ದ ಬೆರಳನ್ನ ಬಾಯಿಗೆ ಇಟಗೊಂಡ… ಆ ಬೆರಳು ಸೀಪುವುದರಲ್ಲಿ ತನ್ನ ಇಡೀ ಸಮಸ್ಯೆಗೆ ಉತ್ತರ ಇದೆ ಅನ್ನವಹಂಗೆ ವೆಂಕೋಬರಾವ್ ಕಣ್ಣು ಮುಚ್ಚಿಕೊಂಡು ತನ್ಮಯನಾಗಿ ಬೆರಳು ಸೀಪತೊಡಗಿದ…

…ಚಿಮಣಾ ತನ್ನ ಅಡಿಗಿಯ ಮನಿಯ ಕೆಲಸಾ ಎಲ್ಲಾ ಬಗಿಹರಿಸಿಕೊಂಡು ಮಲಗುವ ಕೋಣೆಗೆ ಬಂದಾಗ ಇಂವ ಕಣ್ಣು ಮುಚ್ಚಿಕೊಂಡು ಬಾಯಿಗೆ ಬಲಗೈಯ ಬೆರಳು ಇಟಗೊಂಡು ಮಲಗ್ಯಾನೆ…! ಚಿಮಣಾನ ಡವಗುಡುತ್ತಿರುವ ಎದಿಯನ್ನ ದಾಟಿಕೊಂಡು ಆಕಿಯ ಒಡಲಿನಿಂದ… ಆಕೆಯನ್ನೇ ಬೆರಗುಗೊಳಿಸುವಂತಹ ಒಂದು ಥರದ ಅಕ್ಕರೆಯ ಭಾವನೆ ಮೂಡಿಬಂದಿತು. ಅವಳು ಅದೇ ಭಾವದೊಳಗೆ… ನಿಧಾನವಾಗಿ… ಸದ್ದು ಮಾಡದ ಹಂಗೆ… ಹೆಜ್ಜೆಯ ಮ್ಯಾಲೆ ಹೆಜ್ಜೆಯನಿಟ್ಟು… ಮಂಚದ ಅಂಚಿನ ಹತ್ತಿರ ಬಂದ ನಿಂತು… ಬಾಗಿ… ತನ್ನ ಎಡಗೈಯನ್ನ ಅವನ ಬಲಮಗ್ಗಲಿಗೆ ಊರಿ… ಅವನ ಹಣೀ ತಲೀ ಸವರಬೇಕೆನ್ನುವ ಮಧುರಭಾವದೊಳಗೆ ಬಲಗೈಯನ್ನ ಅವನ ಮುಖದ ಸಮೀಪ ಒಯ್ಯುತ್ತಿದ್ದಂಗೇ ಅಂವ ಘಸಲ್ಲನೇ ಬಾಯಲ್ಲಿನ ಬೆರಳು ತಗದು ಆಕೆಯ ಮುಂಗೈಯನ್ನ ಹಿಡಿಯುತ್ತ ಕಣ್ಣ ತೆರೆದ. ಆಗs ಕೈ ಬೆರಳಿನಿಂದ ವಸರತಿದ್ದ ರಕ್ತ ಈಗ ಅವನ ಕಣ್ಣೊಳಗಿಂದ ವಸರತಿದ್ದಂಗ ಕಂಡಿತು. ಚಿಮಣಾ ಅಂತೂ ಗಡಗಡ ಅಂತ ನಡಗಿದಳು. ಆಕಿಯ ಎದಿ ಅಂಬುವದು ಒಡಲ ತುಂಬ ತುಂಬಿದ್ದ ಅಕ್ಕರೆಯ ಭಾವವನ್ನ ಗಬಕ್ಕಂತ ನುಂಗಿ… ಈಗ ಎದೀ ಒಡಲೂ ಎರಡರೊಳಗೂ ಅಂಜಿಕಿಯ ಕರಿನೀರು ತುಂಬಿಕೊಂಡಿತು. ಚಿಮಣಾನ ಕೆಂಧವಳದಂತಹ ತುಟೀ ಒಮ್ಮಿಗೆಲೇ ಒಣಗಿ ಬೂದೀಬಣ್ಣದವಾದವು… ವೆಂಕೋಬರಾವ್ ಉರಿಯುವ ಕಣ್ಣುಗಳಿಂದ ಆಕಿನ್ನ ದಿಟ್ಟಿಸಿ ನೋಡಿ ಆಮ್ಯಾಲ ಒಮ್ಮಿಗೆಲೇ ಹ್ಹ ಹ್ಹ ಹ್ಹಾsss… ಅಂತ ವಿಕಟನಗೀ ನಕ್ಕೋತ, ತನ್ನ ಹಿಡಿತವನ್ನ ಇನ್ನಷ್ಟು ಬಿಗಿ ಮಾಡಿಕೋತs… ಅಕಿನ್ನ ತನ್ನ ಬಲಕ್ಕೆ ಎಳಕೊಂಡು ಮಗ್ಗಲಕ್ಕ ಕೆಡಿವಿಕೊಂಡ. ಆಕಿಯ ಮುಂಗೈ ಹಿಡದದ್ದು ಹಿಡಿಕೊಂಡಂಗನs ಮೊಳಕೈ ಊರಿ ಅವಳತ್ತ ಹೊಳ್ಳಿದ. ಮುಖವನ್ನ ಹೆಡೀ ಎತ್ತಿದಂಗ ಎತ್ತಿ ನಿಧಾನವಾಗಿ ಅವಳ ಮುಖದ ಸಮೀಪ… ಸಮೀಪ ತಂದ. ಚಿಮಣಾ ಅಸಾಧ್ಯ ಭಯದಿಂದ ಕಣ್ಣು ಮುಚ್ಚಿದಳು. ವೆಂಕೋಬರಾವನ ಮುಖ ಅವಳ ಮುಖದಮ್ಯಾಲ ಎರಗಿತು… ಅಂವ ಈಗ ಮುಂಗೈ ಬಿಟ್ಟು ಬಲಗೈಯನ್ನ ಅವಳ ತಲಿಯ ಕೆಳಗಹಾಕಿ… ಅವಳ ಮೋತಿಯನ್ನ ಮ್ಯಾಲಕ ಎತಿಗೊಂಡೂ… ತುಟಿಗಳನ್ನ ತುಟಿಗಳ ಮ್ಯಾಲ ಊರಿದ… ಆಮ್ಯಾಲ ಹಲ್ಲುಗಳನ್ನು ಊರಿದ… ಆಮ್ಯಾಲ ಯಾವದೋ ರಾಕ್ಷಸೀ ಉನ್ಮಾದದಿಂದ ಅವಳ ತುಟಿಗಳನ್ನ ದಂಶಿಸತೊಡಗಿದ… ಆಮ್ಯಾಲ… ಎಡಗೈ ಚಲಿಸಿ ಅಕಿಯ ಮ್ಯಾಲ ಹೊಳ್ಳಿದ ಮ್ಯಾಲss… ಹಾss… ಅಂತ ನರಳಿದಳು ಚಿಮಣಾ… ಇಂದು ಯಾವದೋ ಅಲೌಕಿಕವಾದ ಹೊಸ ಅನುಭವದ ದಂಡೆ ನೋಡಿಧಂಗನಿಸಿತು. ಆಕಿ ಹಂಗs… ಕಣ್ಣ ಮುಚಿಕೊಂಡ ಬಿದ್ದಕೊಂಡಳು…

ಇದನ್ನು ಓದಿದ್ದೀರಾ?: ಎ.ಕೆ. ರಾಮಾನುಜನ್ ಅವರ ಕತೆ | ಅಣ್ಣಯ್ಯನ ಮಾನವಶಾಸ್ತ್ರ

ವೆಂಕೋಬರಾವ್ ಹಾಸಿಗೀ ಬಿಟ್ಟು ಎದ್ದು… ಅಲ್ಲೇ ತೂಗುಬಿಟ್ಟಿದ್ದ ಕತ್ತಿ ತಗೊಂಡು ವರಿಯೊಳಗಿಂದ ಹಿರದು… ಅದರ ಚೂಪಾದ ಅಂಚನ್ನ ದಿಟ್ಟಿಸಿ ನೋಡಿದ. ಯಾಕೋ ಏನೋ ಆ ಕ್ಷಣದೊಳಗ ಅಂವಗ ಸತ್ಯ ಅನ್ನೂದು ಈ ಅಂಚಿನಂಗs ಇರತಿರಬೇಕು ಅನಿಸಿ, ಅಂವ ಮತ್ತೆ ಅನುಮಾನದೊಳಗ ಬಿದ್ದ… ಕಣ್ಣು ತಗದ ಚಿಮಣಾ ವೆಂಕೋಬರಾವನ ಕೈಯೊಳಗಿನ ಕತ್ತಿ ನೋಡಿ ಗಾಬರಿಯಿಂದ ಧಡಕ್ಕಂತ ಎದ್ದು ಕೂತಾಗ ಇಂವನ ಮನಸ್ಸು ನಿರ್ಧಾರದಿಂದ ಗಟ್ಟಿಯಾತು… ಚಿಮಣಾವ ಮೈಯ್ಯು ಮರಗಟ್ಟಿಧಂಗಾತು. ಎದ್ದು ಓಡಿಹೋಗಬೇಕೆನ್ನುವ ಮನಸಿಗೆ ದೇಹ ಕೈಕೊಟ್ಟಿತು. ವೆಂಕೋಬರಾವ್ ಮುಖದ ತುಂಬ ಮುಗುಳುನಗಿ ಧರಿಸಿದ… ಚಿಮಣಾನ ಮನಸಿನಾಗ ಆಸೇ ಅನ್ನೂದು ಹುಟ್ಟಲಿಕತ್ತಿತು. ಆಕಿನೂ ನಗಲಿಕ್ಕೆ ಹೋದರ ಅದು ಅತ್ತಂಗ ಆತು. ಹೂ… ಎಷ್ಟ ವಿಚಿತ್ರಲಾs! ಹುಟ್ಟಿನಿಂದ ಸಾಯೋತನಕಾ ಒಟ್ಟಿಗೇ ಕೂಡಿ ಇರುವ ದೇಹಾ ಮನಸಗೋಳು ಒಂದಕ್ಕೊಂದು ಸಹಕರಿಸುವ ಪರಿ ನೋಡಿರಿ!…. ವೆಂಕೋಬರಾವ್‌ನ ಮುಖದ ಮ್ಯಾಲಿನ ನಗಿ ಕ್ರಮೇಣ ಉಗ್ರ ಆತು. ಆ ನಗುವಿನ ನಡವೇ ಗರ್ಜಿಸಿದ… ‘ಎಷ್ಟೊತ್ತಿಗೆ ಬರತಾರ ಅವರು?’ ಚಿಮಣಾ ನಖಶಿಖಾಂತ ನಡಗಿದಳು. ಇನ್ನೊಮ್ಮೆ ಗರ್ಜಿಸಿದ. ಒಣಗಿ ಒಂದಕ್ಕೊಂದು ಅಂಟಿಕೊಂಡಿದ್ದ ತುಟಿಗೋಳನ ಬಿಡಿಸಿಕೊಂಡು ಮಾತಾಡಲಿಕ್ಕೆ ನೋಡಿದರ ಮತ್ತ ಅದs!… ತುಟಿಗೋಳು ಅಳಿಗ್ಯಾಡಿದೂ ಅಷ್ಟs… ಇಂವ ಹೂಂ… ಅಂತ ಹೂಂಕರಿಸಿದಾಗ ಆಕಿಯ ಬಾಯಿಂದss ‘ಹೊತ್ತ ಮುಣಗಿದ ಕೂಡಲೇ…’ ಅಂತ ಮಾತು ಸರಕ್ಕಂತ ಜಾರಿಬಂದವು. ಈಗ ಚಿಮಣಾನ ಕಣ್ಣಗೋಳು ಮಾತಾಡಲಿಕತ್ತೂ… ದೀನಳಾಗಿ ನೋಡಿದಳು. ವೆಂಕೋಬರಾವನ ಮಣಿಶಿರದೊಳಗ ಒಂದು ತೀಕ್ಷ್ಮವಾದ ನೋವು ಹುಟ್ಟಿ ಅದು ಕೆಳಮುಖವಾಗಿ ಮತ್ತ ಮೇಲ್ಮುಖವಾಗಿ ಹಬ್ಬತೊಡಗಿತು… ಹಣೆಯ ಎಡಗಡೆಯ ಸ್ನಾಯುಗಳು ನೋವಿನಿಂದ ಸೆಳೆಯತೊಡಗಿದವು… ಇತ್ತ ಚಿಮಣಾನ ಕುತಿಗಿ ಅರವಳಿಕೀ ಕೊಟ್ಟವರಂಗ ಮರಗಟ್ಟಿ ಹೋಗಿತ್ತು. ಆಕಿ ತನ್ನ ಶಿರ ಕುತಿಗೀ ಮ್ಯಾಲ ಅದೆನೋ ಇಲ್ಲೋ ಅಂತ ನೋಡಲಿಕ್ಕೆ ಅಂತ ಕೈಗಳನ್ನು ನಿಧಾನವಾಗಿ ಮ್ಯಾಲಕ ಎತ್ತತಿರಬೇಕಾದರ ವೆಂಕೋಬರಾವನ ಕತ್ತಿ ಕಚಕ್ ಅಂತ ಅವಳ ಗೋಣು ಕತ್ತರಿಸಿತು. ಚಿಮಣಾನ ಕೈಗಳು ಈಗ ನಿಂದರಲಿಲ್ಲ… ಅವು ಅವಳ ಮನಸಿನಂಗs ಮ್ಯಾಲಕ ಹೋಗಿ ಶಿರವನ್ನ ಎತಿಗೊಂಡವು…!

ಕತ್ತಿಯ ನಡುಭಾಗದೊಳಗೆ- ಮೂರುನಾಕು ಇಂಚಿನಷ್ಟು ಭಾಗದೊಳಗೆ ರಕ್ತಮೆತ್ತಿಕೊಂಡಿತು… ಎಷ್ಟು ರಕ್ತ ಆದು!… ಅಲ್ಲಿ ನೋಡಿದರ ಆ ಕಡದ ಚಂಡಿನಿಂದ ಅಷ್ಟ ರಕ್ತ ಬರಲಿಕ್ಕತ್ತಿಲ್ಲ… ಇಲ್ಲಿ ಈ ಕತ್ಯಾಗನs ನೆತ್ತರ ತುಂಬಿಕೊಂಡದ ಏನೋ ಅನ್ನುವಹಂಗ… ಸೆಲೀ ಒಡದ ಬರತದ ಏನೋ ಅನ್ನುವಹಂಗ… ತಟ ತಟಾ ಅಂತ ನೆತ್ತರು ತೊಟ್ಟಿಕ್ಕಲಿಕ್ಕೆ ಹತ್ತಿತ್ತು… ವೆಂಕೋಬರಾವಗ ಯಾಕೋ ಈ ನೆತ್ತರಿನ ಹನಿ ನೆಲದಮ್ಯಾಲ ಬೀಳಬಾರದೂ ಅಂತನಿಸಿತು. ಅಂವ ಖಡ್ಗದ ಅಲಗನ್ನ ಅಡ್ಡ ಹಿಡಿದು ತಿರಗಸಲಿಕ್ಕೆ ಹತ್ತಿದ… ಎಂಥಾ ನೀರ ರಕ್ತ ಅದೂ… ಎಲ್ಲೆಲ್ಲೂ ಲಗೂನs ಹೆಪ್ಪುಗಟ್ಟವಲ್ಲದು. ಇತ್ತ ನೋಡಿದರ ಹೊತ್ತಬ್ಯಾರೇ ಸರೀಲಿಕತ್ತದೆ. ಹೊತ್ತ ಮುಣಗಲಿಕ್ಕೆ ಬರೇ ಎರಡು ತಾಸುಗಳು… ಹೊತ್ತ ಮುಣಗಿದ ಮ್ಯಾಲ ಬರತಾರಂತ… ವೆಂಕೋಬರಾವ್ ಉಫ್… ಉಫ್… ಅಂತ ಊದಿಕೋತs ಕತ್ತಿ ಹೊಳ್ಳಿಸ್ಯಾಡಿದ. ಎಷ್ಟಂದರೂ ನಿರ್ಜಿವರಕ್ತ, ಜೀವ ಇರೂತನಕಾ ಉದ್ದೇಶದ ಬದ್ಧತೆ… ಸಾವಕಾಶ ಸಾವಕಾಶ ಹೆಪ್ಪಗಟ್ಟಿಕೋತ ಬಂತು… ಮದಲ ಮ್ಯಾಲಿನ ಪದರು… ಅಷ್ಟಕ್ಕs ಬಿಡಲಿಲ್ಲ ಇಂವ. ಈ ರಕ್ತದ ಹಕೀಕತ್ತು ಅಂವಗ ತಿಳದs ಇತ್ತು. ಅದಕ್ಕs ಪೂರಾ ಹೆಪ್ಪುಗಟ್ಟಿ ಕತ್ತಿಯ ಮ್ಯಾಲ ಕಂದೀಬಣ್ಣದ ಪಟ್ಟಿ ಮೂಡುವತನಕಾ ಊದಿ ಊದಿ ಒಣಗಿಸಿದ.

ಇದನ್ನು ಓದಿದ್ದೀರಾ?: ಶಾಂತಿನಾಥ ದೇಸಾಯಿ ಅವರ ಕತೆ | ದಿಗ್ಭ್ರಮೆ

ಕತ್ರೀ ಗ್ವಾಡಿಗೆ ಆನಿಸಿ ಇಟ್ಟು ಲಗುಬಗೆಯಿಂದ ಅಂಗಿ ಹಾಕೊಂಡು ಕಸಿಗೋಳನ ಕಟಿಗೊಂಡ. ಸುತ್ತಿಕೊಂಡಂಗs ತಗದ ಇಟ್ಟಿದ್ದ ಪಟಕಾ ತಲೀಮ್ಯಾಲ ಇಟಗೊಂಡು ಒತ್ತಿ ಕೂಡಿಸಿಗೊಂಡ. ಕತ್ತಿಯ ವರಿಯನ್ನ ಅಲ್ಲೇ ಗೂಟಕ್ಕ ತೂಗ್ಯಾಡಲಿಕ್ಕೆ ಬಿಟ್ಟು, ಕತ್ತಿ ಒಂದು ಹಿಡಕೊಂಡು ಚಡಾವು ಮೆಟ್ಟಿ ತೆರೆದ ಬಾಗಲಾ ತೆರಧಂಗs ಬಿಟ್ಟು ದುಡು ದುಡೂ ಅಂತ ಊರ ಮಗ್ಗಲದಾಗಿನ ಗುಡ್ಡದಾಗಿನ ಗವೀ ಕಡೆ ಓಡಿದ. ಇವನ ಕೈಯಾಗಿನ ಹುಡಗ ಕುದರೀ ಬಿಟಗೊಂಡು ಮೇಸಿಗೋತs ಕುಂತಿದ್ದ. ವೆಂಕೋಬರಾವ್ ಹಿಂಗ ದುಡುದುಡು ಅಂತ ಓಡಿಬರೂದು ನೋಡಿ ಗಾಬರ್‍ಯಾಗಿ ಇವ ಅವನ ಕಡೇ ಓಡಲಕತ್ತಿದ. ಅಂವ ಕುದರಿ ತತಾs ಅಂತನ್ನುವಹಂಗ ಸನ್ನೇ ಮಾಡಿದಾಗ ಹುಡುಗ ಹೊಳ್ಳಿ ಓಡಿಬಂದು ಕುದರಿಗೆ ಲಗಾಮು ಜಾಕುವಷ್ಟೊತ್ತಿಗೆ ವೆಂಕೋಬರಾವ್ ಓದಿ ಬಂದು ಲಗಾಮದ ಹಗ್ಗಾ ಕೈಯಾಗ ತಗೊಂಡ… ಈ ಹುಡುಗ ಇಷ್ಟ ವರ್ಷ ನಿಷ್ಟಾದಿಂದ ನನ್ನ ಸೇವಾ ಮಾಡೇದ… ಇದಕ್ಕೆ ಏನರ ಕೊಡಬೇಕು ಅಂತ ವೆಂಕೋಬರಾವನ ಮನಸಿಗೆ ಅಗದೀ ತೀವ್ರವಾಗಿ ಅನಿಸಿತು. ಆದರ ಅವನ ದೇಹದಮ್ಯಾಲ ಏನ ಉಳಿದದ…? ನಡಿನೊಳಗ ಕಟಿಗೊಂಡ ಸಮಗ್ರ ಸಂಪತ್ತನ್ನ ಆ ಹೆಂಗಸಿನ ಹಾಸಗೀ ಮ್ಯಾಲ ಸುರದು ಬಂದುಬಿಟ್ಟಾನೆ…! ಅಂವಗ ಕೆಡಕ ಅನಿಸಿತು… ಆ ಹುಡುಗನ ರಟ್ಟಿ ಹಿಚಕಿ ಬೆನ್ನು ಚಪ್ಪರಿಸಿದ… ಕುದರೀ ಹತ್ತುವಾಗ ಆ ಹುಡುಗನ ಕಣ್ಣಾಗ ಮತ್ತ ಇಂವನ ಕಣ್ಣಾಗ ಇಬ್ಬರ ಕಣ್ಣಾಗೂ ನೀರಿನ ಸೆಲೀ ಒಡದಿದ್ದವು. ಉಸ್… ಅಂತ ಉಸುರುಬಿಟ್ಟರು.

ವೆಂಕೋಬರಾವ್ ಕುದರಿಗೆ ಛಕ್… ಅಂತ ಒಂದು ಏಟು ಕೊಟ್ಟು ಖಟ ಖಟಾ ಅಂತ ಓಡಿಸಿಕೊಂಡು ಹೋಗಿಬಿಟ್ಟ… ಮನಸ್ಸನ್ನ ಅವರಿಸಿದ ವಿಷಾದದ ಕಾರಣ ತಿಳಿಯದೇ ಗೊಂದಲಕ್ಕ ಬಿದ್ದ ಈ ಹುಡುಗ ಅಲ್ಲೇ ಕುಂತು ಚಿಂತಿಗೆ ಬಿತ್ತು… ವೆಂಕೋಬರಾವ್ ಹೋಗಿ ತಾಸ ಅರ್ಧಾ ತಾಸ ಆಗಿರಬಹುದು… ಆಗ- ಏs… ಅಂತ ಒದರಿಧಂಗಾತು. ಸಮಾಧಿಂದ ಎಚ್ಚತ್ತ ಹುಡುಗನ ಮುಂದ ನಾಕಮಂದಿ ಪೇಶವೇಗೋಳ ಸಿಪಾಯಿಗೋಳು ನಿಂತಾರೆ! ತಪ್ಪಿಸಿಕೊಂಡು ಓಡೇನೆನ್ನುವಹಂಗಿಲ್ಲ… ಒಬ್ಬ ಸಿಪಾಯಿ… ಕೈಯಾಗ ಕೋರಡಾ ಹಿಡದಿದ್ದ… ಅಂವ ಟಣ್ಣಂತ ಕುದರಿ ಮ್ಯಾಲಿಂದ ಹುಡುಗನ ಮುಂದs ಜಿಗದು… ‘ಹೂಂ…. ಅಂವ ಎತ್ತಾಗ ಹ್ವಾದ ಹೇಳು…’ ಅಂತ ಘರ್ಜಿಸಿದ. ಹುಡುಗ ಮೂಕನಹಂಗ ಪಿಳಿ ಪಿಳೀ ಅಂತ ತನ್ನ ಮುಂದ ನಿಂತ ಸಿಪಾಯಿನ್ನ ನೋಡಿದ. ಸಿಪಾಯಿ ಇನ್ನೊಮ್ಮೆ ಗುಟರ ಹಾಕಿದಾಗ ಆ ಹುಡುಗ ಸಾವಕಾಶೇ ಕೈ ಎತ್ತಿ, ವೆಂಕೋಬರಾವ್ ಹೋದ ದಿಕ್ಕಿನ ವಿರುದ್ಧ ದಿಕ್ಕು ತೋರಿಸಿದ. ಸಿಪಾಯಿ ಹೂಂ… ಅಂತ ಹೂಂಕರಿಸಿ… ಜಿಗಿದು ಕುದರಿ ಮ್ಯಾಲ ಕುಂತು ನೋಡ ನೋಡತಿದ್ದಂಗs ಕೋರಡಾ ಎತ್ತಿ ಬೀಸಿದ. ಛಟಲ್… ಅಂತ ಬಿದ್ದ ಅನಿರೀಕ್ಷಿತ ಹೊಡತದಿಂದ ತತ್ತರಿಸಿದ ಹುಡುಗ ಹಾs… ಅಂದು ನೆಲಕ್ಕೆ ಬೀಳತಿದ್ದಂಗೇ ಆ ಸಿಪಾಯಿಗೋಳು ತಮ್ಮ ಕುದರಿಗೋಳನ್ನ ವೆಂಕೋಬರಾವ್ ಹೋದ ದಿಕ್ಕಿಗೇ ದೌಡಾಯಿಸಿದರು… ಈ ಹುಡುಗನಿಗೆ ಈಗ ನೋವು ಮರತು ಗಾಬರಿಯಾಯಿತು!

*

ಉಳದ ಹಗಲು… ರಾತ್ರಿ ಮತ್ತ ಮರುದಿನದ ಹಗಲು… ಬಿಟ್ಟೂ ಬಿಡದೇ ಕುದರಿ ಒಂದs ಸವನ ಓಡಲಿಕತ್ತಿತ್ತು. ಸೂರ್ಯಾ ಕೆಂಪಾಗಿ ಪಶ್ಚಿಮದ ಅಂಚಿನೊಳಗ ಜಾರಿ ಕತ್ತಲಿ ಕವಿಯಲಿಕ್ಕೆ ಸುರುವಾತು. ಬೆನ್ನು ಹತ್ತಿದ ಕುದುರಿಗೋಳು ಎಂಟ ಹತ್ತ ಹರದಾರಿಯಷ್ಟರೇ ಹಿಂದುಬಿದ್ದಿರಬೇಕು ಅಂತನಿಸಿ ವೆಂಕೋಬರಾವನಿಗೆ ತನ್ನ ಕುದರಿಯ ಬಗ್ಗೆ ಅಭಿಮಾನ ಮೂಡಿತು. ನೋಡಲಿಕ್ಕೆ ಸಾಧಾರಣ ಕುದರಿ… ಅದರ ಇಂವ ಬೆನ್ನ ಮ್ಯಾಲ ಕುಂತು ಇವನ ಪಾದಗೋಳು ಅದರ ಎದಿಯನ್ನ ತಬ್ಬತಿದ್ದರ ಅದರ ಹರಣ ಉದ್ದೀಪನಗೊಂಡು… ಅದಕ್ಕೆ ಅದರ ಭಾರನs ಕಳದಹೋದಂಗ ಅನಸತಿತ್ತು… ಕಿವ್ಯಾಗ ಗಾಳಿ ತುಂಬಿದ ದನದ ಕರಧಂಗ… ಗಾಳೀ ಸೀಳಿಕೊಂಡು ನುಗ್ಗುವ ಭರ್ಚಿ ಹಂಗ ಸಾಗತಿತ್ತು… ಕತ್ತಲಿಯ ಸಾಂದ್ರತೆ ಹೆಚ್ಚ ಆಕ್ಕೋತs ಹೋತು… ಈಗ ಕುದರಿ ತನ್ನ ಮುಂಗಾಲಗೋಳ ಮ್ಯಾಲ ಹೆಚ್ಚು ಭಾರ ಬಿದ್ದಂಗ ಸಾವರಿಸಿಕೋತs… ಕಂದಕ ಒಂದನ್ನ ಇಳಕೋತ ಓಡಲಿಕತ್ತಿತು. ಇಡೀ ಪ್ರಯಾಣದೊಳಗ ವೆಂಕೋಬರಾವ್ ತನ್ನ ಕಣ್ಣು ಕಿವಿಗೋಳನ ಬೆನ್ನಿಗೆ ಹೊಂದಿಸಿಕೊಂಡು ಮುಂದಿನ ಹಾದಿ ಎಲ್ಲಾ ಕುದರಿಗೆ ಒಪ್ಪಿಸಿಬಿಟ್ಟಿದ್ದ. ಅದಕ್ಕs ಆ ಕುದುರಿ ಎಡಕ್ಕ ಬಲಕ್ಕ ಹೊಳ್ಳದs ಗೆರೀ ಕೊರಧಂಗ ನೆಟ್ಟಗ ಮುಂದ ಮುಖಾ ಮಾಡಿ ಓಡಿ ಓಡಿ ಬಂದಿತ್ತು… ಓಡುವ ಕುದರಿ ಒಮ್ಮಿಗೆಲೇ ಛಕ್… ಅಂತ ನಿಂತು ಮುಂಗಾಲಗೋಳನ ಮ್ಯಾಲಕ ಎತ್ತಿ ಕೊಹೊಹೋs… ಅಂತ ಕೆನೆಯಿತು. ವೆಂಕೋಬರಾವನಿಗೆ ಜೋಲೀ ಹೋಗಿ ಹಿಂದೆ ಬೀಳುವಂಗಾಗಿ… ಅವನು ಸಾವರಿಸಿಕೊಂಡು ಸರಕ್ಕನೇ ಮುಂದೆ ಬಾಗಿ ಕುದರಿಯ ಕುತಗೀ ಅಪ್ಪಿಕೊಂಡ. ಕೈಯೊಳಗೆ ಹಿಡದ ಕತ್ತಿಯ ತುದಿ ಸೊಂಡಿಗೆ ಚುಚ್ಚಿ ಆ ಕುದರಿ ಇನ್ನಷ್ಟು ಗಾಬರಿಗೊಂಡು ಗೋಣು ಹೊಯ್ದಾಡಿಸಿ ಮೈ ಜಾಡಿಸಿತು… ಕತ್ತಿನ್ನ ಕೆಳಗೆ ಬಾಗಿಸಿ ಇನ್ನಷ್ಟು ರಬ್ಬಿ ಬಲಗೈಯಿಂದ ಕುದರಿಯ ಕುತಿಗೀ ಗಟ್ಯಾಗಿ ಹಿಡಕೊಂಡು… ಆಮ್ಯಾಲ ಎಡಗೈಯಿಂದ ಕುದರಿಯ ಕುತಗಿ ಹೆಡಕೂ ಚಪ್ಪರಿಸಿ ಅದನ್ನ ಸಮಾಧಾನ ಮಾಡಲಿಕ್ಕೆ ಹತ್ತಿದ. ಕುದರಿ ಸಮಾಧಾನ ಆತು ಅಂತ ಆದಮ್ಯಾಲ ವೆಂಕೋಬರಾವನ ಪ್ರಜ್ಞೆಗೆ ಒಡಲೆಲ್ಲಾ ತುಂಬಿಕೊಂಡು ಅಗಲವಾಗಿ ಹರಿಯುವ ಹಿರಿಹೊಳಿ ಗೋಚರವಾಗಿ… ಅವನ ಕಣ್ಣಿಗೆ ಕತ್ತಲು ಕವಧಂಗಾತು… ಎತ್ತಹೋಗೊದೀಗ…? ವೆಂಕೋಬರಾವ್ ಇಂಥಾ ದಿಜ್ಞೂಢ ಸ್ಥಿತಿಯೊಳಗ ಇರುವಾಗ ಅಂವ ಕುಂತ ಕುದರಿ ಸಾವಕಾಶ ಒಂದೊಂದs ಹೆಜ್ಜೀ ಹಿಂದಕ ಇಟಗೋತ… ನಾಕೈದ ಹೆಜ್ಜೀ ಹಿಂದಕ ಸರದು- ಗಸಲ್ಲನೇ ಜಿಗಿದು ಮೈ ಜಾಡಿಸಿಬಿಟ್ಟಿತು. ವೆಂಕೋಬರಾವನ್ನ ಬಿಸಾಕಿಧಂಗ ಆಗಿ ಅವ ಅಷ್ಟ ದೂರ ಹೋಗಿ ಬಿದ್ದಿದ್ದ. ಅವನ ಕೈಯಾಗಿನ ಕತ್ತಿ ಜಾರಿ ದೂರಬಿದ್ದಿತ್ತು… ಕುದರಿ ಕತ್ತಲಿನ್ಯಾಗ ಎತ್ತಲಾಗೋ ಓಡಲಿಕ್ಕತ್ತಿತು. ವೆಂಕೋಬರಾವ್ ಹೋ… ಹೋ… ಅನಕೋತನs ಎದ್ದು ಕಂಗಾಲಾಗಿ ಅದರ ಹಿಂದಿದ ಓಡಿದ. ಕುದರಿಗೆ ಇನ್ನಷ್ಟು ಗಾಬರಿ ಆಧಂಗ ಆತು. ಅದು ಹಾರಿಗ್ಗಾಲು ಬಿದ್ದು ಇವನಿಗೆ ಎಂದೆಂದೂ ಸಿಗದಂತೆ ಓಡಿ ಓಡಿ ಕತ್ತಲಿನಲ್ಲಿ ಕರಗಿ ಹೋಯಿತು. ದಿಕ್ಕು ತಪ್ಪಿಧಂಗಾದ ವೆಂಕೋಬರಾವ್ ನಿಂತಲ್ಲಿಯೇ ನಿಂತುಬಿಟ್ಟ…

ಇದನ್ನು ಓದಿದ್ದೀರಾ?: ತ್ರಿವೇಣಿ ಅವರ ಕತೆ | ನರಬಲಿ

ಸುಂಯ್… ಅಂತ ಗಾಳಿ ಬೀಸಿ ನಡಿಗಿಸಿತು… ಅವನಿಗೆ ತಾನು ಯಾವ ದಿಕ್ಕಿನಿಂದ ಬಂದೆ ಅನ್ನುವುದೇ ತಿಳಿಯಧಂಗಾಗಿ ಸುತ್ತಮುತ್ತ ನೋಡಿ… ಇಷ್ಟಗಲ ಹರಿಯುವ ನದಿಯ ದಿಕ್ಕಿನ ವಿರುದ್ಧ ದಿಕ್ಕಿಗೆ ತಿರಿಗಿ, ಕಣ್ಣಗೊಂಬಿಯನ್ನ ಇಷ್ಟಗಲ ಹಿಗ್ಗಿಸಿ ಏನಾದರೂ ಕಂಡೀತೇನು ಅಂತ ದಿಟ್ಟಿಸಿ ನೋಡಿದ. ಹತ್ತು ಹೆಜ್ಜೆಗಳಷ್ಟು ಸಹಿತ ಅವನ ದೃಷ್ಟಿ ಹರಿಯಲಿಲ್ಲ. ಈಗ ಕಿವಿಗಳ ಮ್ಯಾಲ ಎಲ್ಲಾ ನಂಬಿಕೀ ಇಟ್ಟು ಅವನ್ನ ಕೆಲಸಕ್ಕೆ ಹಚ್ಚಿದ. ನದಿಯ ಭೋರೆನ್ನುವ ಸಪ್ಪಳಾ ಬಿಟ್ಟು ಬ್ಯಾರೇ ಏನೂ ಕೇಳಸಲಿಲ್ಲ… ಹಿಂಗ ಕಣ್ಣೂ ಕಿವಿಗೋಳನ ಮತ್ತ ಮತ್ತ ತೀವ್ರವಾಗಿ ಕೆಲಸಕ್ಕೆ ಹಚ್ಚಿದ್ದರಿಂದ ಅಸಾಧ್ಯವಾದ ದಣಿವು ಹುಟ್ಟಿತು… ಅಂಗಾಲಿನಿಂದ ನೆತ್ತಿಯ ತನಕದ ಅವನ ಎಲ್ಲ ಸ್ನಾಯುಗಳು ಉಸರು ಕಟ್ಟಿಧಂಗೆ ತಳಮಳಿಸಿ, ಅವ ಅಲ್ಲಿಯೇ ನಿಂತಲ್ಲಿ ಕುಸದು ಕುಂತ… ಅವ ಪ್ರಜ್ಞೆಯ ಮುಸುಕು ನಿಧಾನವಾಗಿ ಜಾರಿಹೋಗಿ ಕುಂತಲ್ಲಿಯೇ ಹೊರಳಿ ಒರಗಿದ… ಅದು ನಿದ್ದೆಯೋ ಅಜಾಗರಸ್ಥಿತಿಯೋ… ಯಾರು ಬಲ್ಲರು?!

…ಹ್ಯಾಂಗ ಬಂದದ್ದವನು…! ಹಾರಿಬಂದನೇ ಇಲ್ಲಾ ನಡದು ಬಂದನೇ?… ಯಾಕೆಂದರೆ ಅವನು ನಡೆದುಬಂದದ್ದಾಗಲೀ… ಹಾರಿ ಬಂದದ್ದಾಗಲೀ ವೆಂಕೋಬರಾವನಿಗೆ ಕಂಡಿರಲೇ ಇಲ್ಲ. ಇದ್ದಕ್ಕಿದ್ದಂಗೆ ವೆಂಕೋಬರಾವನ ಪ್ರಜ್ಞೆಯ ಪಾತಳಿಯಮ್ಯಾಲೆ ಉದ್ಭವಗೊಂಡು ನಿಂತಿದ್ದ. ಹ್ಯಾಗಂದರೆ… ಮಜ್ಜಿಗಿಯೊಳಗ ಬೆಣ್ಣೆ ಘನೀಭೂತಗೊಳ್ಳುವಹಂಗ… ಅವನ ಮೋತಿ ಕಡುಕಪ್ಪು. ಇಷ್ಟಗಲದ ಕೆಂಪಂಚಿನ ದಟ್ಟಿ ಉಟಗೊಂಡಾನೆ ಮತ್ತ ಹೆಗಲ ಮ್ಯಾಲ ಜರದ ಅಂಚಿನ ಉಪ್ಪರಣಿ… ತಲಿಯ ಮ್ಯಾಲನದೇನದು? ಕಿರೀಟವೋ? ಟೊಪ್ಪಿಗಿಯೋ…? ಸ್ಪಷ್ಟವಾಗಲಿಲ್ಲ. ವೆಂಕೋಬರಾವನಿಗೆ ಇವನನ್ನ ಎಲ್ಲಿಯೋ ನೋಡಿದ ನೆನಪು. ಎಲ್ಲಿ ನೋಡಿದ್ದೆನೋs… ಅಂತ ನೆನಪ ಮಾಡಿಕೋತಿರಬೇಕಾದರ ಅಂವನs… ‘ಯಾಕs ಗುರತ ಮರತೇನು?… ನಾ ವಿಠ್ಠಲಾss…’ ಅಂದ. ವೆಂಕೋಬರಾವನಿಗೆ ಒಮ್ಮಿಗೆಲೇ ಗುರುತು ಸಿಕ್ಕಂಗಾಗಿ… ‘ಹಾಂ… ಹೌದು. ಗುರ್‍ತ ಹತ್ತಿತು… ನಮಸ್ಕಾರ’ ಅಂತಂದು- ನನ್ನ ಹಂತೇಕ ಏನ ದಗದ ಇಂವಗs ಅಂತ ಗೊಂದಲಕ್ಕ ಬಿದ್ದ. ವಿಠಲ ನಕ್ಕು ‘ಏನಾ… ಭಾಳ ತಳಮಳಕ್ಕೆ ಬಿದ್ದದೀಲಾs?… ನದೀ ನೋಡಿ ಅಂಜಿದಿ ಏನು? ನನ್ನ ನೋಡು. ಒಡಲೆಲ್ಲಾ ತುಂಬಿ ಹರಿಯುವ ಚಂದ್ರಭಾಗಾ ನದಿನ್ನ ದಾಟಿ ಬಂದೀನಿಲ್ಲೋ…? ಜಿಗಿದ ಈಸಿದರ ದಾಟತೀ… ಹಾಂ. ಅಂಧಂಗ… ಕತ್ತೀಬಿಟ್ಟ ಹೋಗಬ್ಯಾಡಾ ಮತ್ತ. ಅದನ್ನ ನೀರಾಗ ತೋಯಿಸಿ ಜಂಗ ಹತ್ತೂಹಂಗ ಮಾಡಿಗೀಡೀ… ಅದಕ ಹತ್ತಿದ ನೆತ್ತರ ಹೋಗಬಾರದು ನೋಡು…’ ಅಂತ ಹೇಳಿದಾಗ ವೆಂಕೋಬರಾವನಿಗೆ ತನ್ನ ಜೋಡೀ ಮಾತಾಡುವ ಪಂಢರಾಪುರದ ವಿಠ್ಠಲನ ಗುರುತು ಪೂರಾ ಹತ್ತಿತು… ‘ಹಾಂss…’ ಅಂತ ಗಡಬಡಿಸಿ ಕಣ್ಣ ತಗದ ನೋಡಿದರ ಅಲ್ಯಾರ ಇದ್ದಾರ?… ಸುತ್ತಲೂ ಕತ್ತಲಿ. ಇದು ಈಗ ಆಕಾಶದಾಗ ಬೆಳ್ಳಿ ಚಿಕ್ಕಿ ಮೂಡಲಿಕ್ಕತ್ತೇದ. ಹತ್ತ ಮಾರ ದೂರದೊಳಗೆ ಭೋರೆನ್ನುವ ಸಪ್ಪಳಾ ಮಾಡಿಕೋತ ಹಿರಿಹೊಳಿ ಹರಿಯಲಿಕ್ಕತೇದ. ಅವಗ ಒಮ್ಮಿಗೆಲೇ ತನ್ನ ಕತ್ತಿಯ ನೆನಪಾತು. ಕತ್ತಲ್ಯಾಗ ಕಾಣಿಸಲಿಲ್ಲ. ಎದ್ದು ಕೂತು ಕೈಯಾಡಿಸಲಿಕ್ಕೆ ಸುರು ಮಾಡಿದ. ಕೈಗೆ ಹತ್ತಿತು. ಅದರ ಹಿಡಿಯನ್ನ ಊಹಿಸಿ ಹಿಡಿದು ಕತ್ತಿಯನ್ನ ಎತಿಗೊಂಡ…

ಇದನ್ನು ಓದಿದ್ದೀರಾ?: ಯಶವಂತ ಚಿತ್ತಾಲ ಅವರ ಕತೆ | ಮುಖಾಮುಖಿ

ವೆಂಕೋಬರಾವ್ ಎದ್ದು ನದಿಯ ದಂಡಿಗೆ ಬಂದ. ನದಿಯಿಂದ ಒಂದು ಮಾರು ದೂರದಾಗ ಒಂದ ಕಲ್ಲ ಇತ್ತು. ಆ ಕಲ್ಲಮ್ಯಾಲ ಪಟಕಾ ಅಂಗೀ ತಗದ ಇಟ್ಟು ಅವುಗಳ ಮ್ಯಾಲ ಕತ್ತಿ ಇಟ್ಟ. ಧೋತರಾ ಮ್ಯಾಲ ಎತ್ತಿ, ಕಚ್ಚೇ ಬಿಕ್ಕೊಂಡು ಅಲ್ಲೇ ದಂಡ್ಯಾಗ ಒಮ್ಮಿ ಮುಣಗಿ ಎದ್ದ. ವಿಠ್ಠಲ ವಿಠ್ಠಲ ಪಾಂಡುರಂಗಾs… ಅಂತ ಜಪಾ ಮಾಡಿಕೋತs ತನಗ ತೋರಿದ ದಿಕ್ಕನ್ನs ಪಂಢರಪುರದ ದಿಕ್ಕು ಅಂತ ಭಾವಿಸಿ ಆಕಡೇ ಹೊಳ್ಳಿ ಕೈಮುಗದ. ಧೋತರಾ ಬಿಚ್ಚಿ ಹಿಂಡಿ ಜಾಡಿಸಿ ಉಟಗೊಂಡ. ಅಂಗೀ ತಲಿಗೆ ಕಟಿಗೊಂಡ. ಆಮ್ಯಾಲ ಕತ್ತಿನ್ನ ತಲಿಯ ಹಿಂದಕ ಇಟಗೊಂಡು, ಪಟಕಾ ಬಿಚ್ಚಿ ಅದರಲ್ಲೇ ಕಟಿಗೊಂಡ. ವೆಂಕೋಬರಾವನ ತಲಿಯಮ್ಯಾಲ ಒಂಟಿ ಕೊಂಬಿನಹಂಗ ಅವನ ಕತ್ತಿ ನಿಂತಿತು. ಅಂವ ಕತ್ತಿನ್ನ ಅಳಿಗ್ಯಾಡಿಸಿ ಅದು ಬೀಳೂದುಲ್ಲ ಅಂತ ಖಾತ್ರಿ ಮಾಡಿಕೊಂಡು… ವಿಠ್ಠಲ… ವಿಠ್ಠಲ… ಅಂತನಕೋತ ಎದೀತನಕಾ ನೀರು ಬರುವತನಕಾ ನದಿಯೊಳಗ ಕಾಲು ಸರಿಸಿಕೋತ ನಡದಹೋಗಿ… ಆಮ್ಯಾಲ ಖಡ್ಗ ತೋಯ್ಯಧಂಗ ಗೋಣು ಚಾಚಿ ಮ್ಯಾಲಕೆತ್ತಿ ನದಿಯೊಳಗ ಈಸುಬಿದ್ದ…

*

ಬ್ಯಾಡರ ಕೇಯ್ಯಾಗಿನ ಕೋಳಿ ಒಂದು ಕುಕ್ಕುಕ್ಕೂs ಅಂತ ಕೂಗಿದಾಗ ಇನ್ನೂ ಬೆಳ್ಳಿ ಮೂಡಿರಲಿಲ್ಲ. ತ್ರಿಯಂಬಕ ಭಟ್ಟರು ಎಂದಿನಂಗ ಕೋಳಿ ಕೂಗಿದ ಕೂಡಲೇ ಎದ್ದು ಎರಡೂ ಅಂಗೈಗೋಳನ ತಿಕ್ಕಿ- ಕರಾಗ್ರೇ… ಹೇಳಿಕೋತ ಕರದರ್ಶನ ಮಾಡಿದರು. ತಲಿದಿಂಬಿನ ಹತ್ತಿರ ಇಟ್ಟ ಪಣತಿಯ ಬತ್ತಿ ಮುಂದಕ ನುಗಿಸಿ ದೀಪಾ ದೋಡದ ಮಾಡಿದರು… ಅಲ್ಲೇ ಸನೇದಾಗ ಮಲಗಿದ ಮಗಳ ಹೊದಿಕಿ ಜಾರಿಹೋಗಿತ್ತು… ಹುಚ್ಚು ಖೋಡಿ… ನಿದ್ದಿ ಹತ್ತೂತನಕಾ ಅಷ್ಟs ಮೈಮ್ಯಾಲ ಹೊದಿಕಿ ಇರತದ… ಅಂತ ಅನಕೋತ ಎದ್ದು ಮಗಳ ಮ್ಯಾಲಿನ ಚಾದರಿನ ಹೊದಿಕೀ ಸರಿ ಮಾಡಿದರು. ಆಮ್ಯಾಲ ತಮ್ಮ ತಲಿದಿಂಬಿನ ಹತ್ತಿರ ನೀರಿಗೀ ಮಾಡಿ ಇಟ್ಟ ಪಂಜಾ ಮತ್ತೆ ತಾಮ್ರದ ತಂಬಿಗಿ ತಗೊಂಡು… ಸಪ್ಪಳಾಗಧಂಗ ಬಾಗಲಾ ತಗದು- ಹೊರಗ ಬಂದು ಬಾಗಲಾ ಎಳಕೊಂಡರು… ಯಾಕೋ ಕೋಳಿ ಅಗಾವಾಗೇ ಕೂಗಿತ್ತು. ಭಟ್ಟರು ದಿನಾಲೂ ಹೋಗೂಕಿಂತಾ ಇಂದ ಲಗೂನು ನದಿಗೆ ಹೊಂಟಬಿಟ್ಟಿದ್ದರು… ಮಳೆಗಾಲದ ಕಾಲ. ಎರಿಯ ಹೊಲದಾಗ ಕಚಿಪಿಚಿ ಅನ್ನುವ ಕಾಲುಹಾದಿ. ಹೆಜ್ಜಿ ಕಿತ್ತು ಹೆಜ್ಜಿ ಇಟಗೋತ ತ್ರಿಯಂಬಕಭಟ್ಟರು ತಮ್ಮ ನಿತ್ಯದ ಸ್ನಾನದ ಜಾಗಾಕ್ಕೆ ಬಂದರು. ದಂಡಿಯ ಹಾಸುಪಡಿಯ ತನಕಾ ನೀರು ಬಂದಿತ್ತು. ಆ ಹಾಸುಗಲ್ಲು ಅವರು ನಿತ್ಯ ಪಂಜಾ ಇಡುವ ಜಾಗಾ. ಅಲ್ಲಿ ಪಂಜಾ ಇಟ್ಟು ತಂಬಿಗಿಯೊಳಗ ನೀರು ತುಂಬಿಕೊಂಡು ಶೌಚಕ್ಕೆ ಹೋಗಿಬಂದರು. ಮಣ್ಣ ಹಚ್ಚಿ ತಂಬಿಗಿ ತಿಕ್ಕಿದರು. ಆಮ್ಯಾಲ ಕಲ್ಲಮ್ಯಾಲ ಕೂತು ತಂಬಿಗ್ಯಾಗ ನೀರು ತುಂಬಿಕೊಂಡು ತಲೀಮ್ಯಾಲ ಸುರವಿಕೋತ… ಹಾ…ಹಾs… ಅಂತ ನಡಿಕೋತ ಜಳಕಾ ನಡಿಸಿದರು. ತಂಬಿಗಿ ತುಂಬಿ ಕಲ್ಲಮ್ಯಾಲ ಇಟ್ಟು ಎದಿ ಹೊಟ್ಟೆ… ಕೈಯೂಮೈಯೂ ಗಸಗಸಾ ಅಂತ ತಿಕ್ಕೋತ ಅಚಾನಕವಾಗಿ ದೃಷ್ಟಿಯನ್ನ ನದಿಯ ಪಾತಳಿಯ ಮ್ಯಾಲ ಹರಿಸಿ… ಅವರು ಧಡಕ್ಕಂತ ಗಾಬರಿಯಿಂದ ಎದ್ದು ನಿಂತರು… ಅವರು ಕೂತ ಕಲ್ಲಿನ ಕಡೇನs ಒಂದ ಹತ್ತಿಪ್ಪತ್ತು ಮಾರು ದೂರದೊಳಗ ಒಂಟಿ ಕೊಂಬಿನದೇನೋ ಒಂದು ಈಸಿಕೊಂಡು ಬರಲಿಕತ್ತಿದೆ! ದಟ್ಟವಾದ ಕತ್ತಲಿಯೊಳಗ ಅದು ಏನಂತ ಸ್ಪಷ್ಟವಾಗಲಿಲ್ಲ. ಭಟ್ಟರ ಮನಸಿನೊಳಗ ಯಾವ ಯಾವದೋ ದುಷ್ಟ ಜೀವಿಗಳು ಹುಟ್ಟಿ, ಭಯ ಮೂಡಿ ಅವರ ಕಾಲುಗಳು ಗದಗದ ಅಂತ ನಡಗಿದುವು. ಅವರು ತಂಬಿಗಿ ಎತಿಗೊಂಡು ಇನ್ನೇನು ಓಟಾ ಹೊಡೀಬೇಕು ಅಂತ ಇರಬೇಕಾದರ… ‘ಥಾಂಬವೋ… ಥಾಂ…ಬಾ…ವೋ…’ ಅಂತನ್ನುವ ಮನಶಾನ ದೀನವಾದ ದನೀ ಕೇಳಿಸಿತು. ಭಟ್ಟರಿಗೆ ಒಮಿಗೆಲೇ ಆಶ್ಚರ್ಯ ಆತು. ಅವರು ಹೊಂಡುವ ವಿಚಾರ ಸುಳ್ಳು ಮಾಡಿ ತಂಬಿಗಿ ಕಲ್ಲಮ್ಯಾಲ ಇಟ್ಟರು. ‘ಯಾರಾs… ಕೋಣ…?’ ಅಂತ ಒದರಿ ಕೇಳಿದರ ಈಸುವ ಮನಶಾ ‘ಮೀ…ನಾ… ವೆಂಕೋ…’ ಅಂತ ಕೂಗಿದ್ದು ಭಟ್ಟರಿಗೆ ಏನೇನೂ ಸ್ಪಷ್ಟವಾಗಲಿಲ್ಲ. ಅವರು, ಯಾರಿದ್ದಾನಿಂವಾs… ಅಂತ ಸೋಜಿಗಪಟಗೋತ ನಿಂತರು… ವೆಂಕೋಬರಾವ್ ಸಾವಕಾಶ ಸಾವಕಾಶ ಈಸಿಗೋತ… ಇವರು ನಿಂತ ಕಲ್ಲಿನ ಹತ್ತಿರ ಬಂದು ಅದನ್ನ ಹಿಡಕೊಂಡ. ಭಟ್ಟರು ಲಗೂ ಮಾಡಿ ಅವನ ಕೈ ಹಿಡದು ಕಲ್ಲಮ್ಯಾಲ ಎಳಕೊಂಡರು. ತಮಗೆ ಒಂಟಿ ಕೊಂಬಿನಹಂಗ ಕಂಡದ್ದೇನು ಅಂತ ನೋಡಿದರ ಅದು ತಲಿಯ ಹಿಂಭಾಗಕ್ಕ ಕಟಿಗೊಂಡಿದ್ದ ಕತ್ತಿ.

ಇದನ್ನು ಓದಿದ್ದೀರಾ?: ಚದುರಂಗ ಅವರ ಕತೆ | ನಾಲ್ಕು ಮೊಳ ಭೂಮಿ

ವೆಂಕೋಬರಾವ್ ವಸ್ ವಸ್… ಅಂತ ತೇಕಿಕೋತ ಹಂಗs ಕವಚಿಕೊಂಡು ಕಲ್ಲಮ್ಯಾಲ ಒರಗಿದ. ಭಟ್ಟರಿಗೆ ಈ ಮನಶಾಗ ಏನ ಉಪಚಾರ ಮಾಡಬೇಕಂತ ತಿಳೀಲಿಲ್ಲ… ಇಷ್ಟಗಲದ ನದೀ ಈಸಿ ಬಂದ ಅವನಿಗೆ ನೀರ ಕುಡಿಸಬೇಕೋ ಬ್ಯಾಡೋ ಅಂತ ಗೊಂದಲ ಆತು. ಹೆಂಗರೇ ಆಗವಲ್ಲತಂತ ತಂಬಿಗಿ ತಗೊಂಡು ನೀರು ಕುಡಸಲಿಕ್ಕತ್ತಿದರು. ಗುಟುಗುಟೂ ಗುಟುಕರಿಸಿದ… ಮೂಡಣ ದಿಕ್ಕು ಹೌರಗs ಕೆಂಪಗಾಗಲಿಕತ್ತಿತು. ಆ ಬೆಳಕಿನ್ಯಾಗ ಭಟ್ಟರಿಗೆ ಕತ್ತಿಯ ಅಲಗಿಗೆ ಅಂಟಿದ ನೆತ್ತರಿನ ಪಟ್ಟಿ ಕಾಣಿಸಿತು… ‘ಯಾರ ನೀವೂ…. ಏನ್ರಪಾs… ಹಿಂಗ ತುಂಬಿದ ನದ್ಯಾಗ ಈಸೂದೂ…?’ ಅಂತ ಕೇಳಿದರು. ವೆಂಕೋಬರಾವ್ ನಿಧಾನಕs ಕಣ್ಣ ತಗದು ಎದ್ದಕೂತ. ನದಿಯೊಳಗ ಹರಿಯುವ ಕೆಂಪನೆಯ ನೀರು ನೋಡಿದಾಗ ಅವಗ ತನ್ನ ತಲಿಗೆ ಕಟಿಗೊಂಡಿದ್ದ ಕತ್ತಿಯ ನೆನಪು ಬಂತು. ಪಟಕಾ ಬಿಚ್ಚಿ, ಕತ್ತೀ ತಗೊಂಡು ಅದನ್ನ ನೋಡಿ ಮಗ್ಗಲಕ್ಕ ಇಟಗೊಂಡ. ಪಟಕಾದಲೇ ಮೈ ಒರಿಸಿಕೊಂಡು ಅಂಗೀ ಹಾಕ್ಕೋಬೇಕಾರ ಭಟ್ಟರ ಕಣ್ಣು ಹುರಿಕಟ್ಟಾದ ಅವನ ಎದೆಯ ಮ್ಯಾಲಿನ ಜನಿವಾರದ ಮ್ಯಾಲs ಇದ್ದವು. ಅವರು ಒಮ್ಮೆ ಜನಿವಾರ ನೋಡವರು ಮತ್ತ ನೆತ್ತರ ಅಂಟಿದ ಕತ್ತಿಯನ್ನ ನೋಡವರು… ಎಲ್ಲಿಂದ ಬಂದೇರಿ?… ನಿಮ್ಮ ಹಕೀಕತ್ತ ಏನ ಹೇಳ್ರೆಲಾs…’ ಅಂತ ಅವರು ಕೇಳಿದಾಗ ವೆಂಕೋಬರಾವನ ಎದೆಯೊಳಗಿಂದ ಬಂದ ಸಹಜ ದನಿ ‘ಆಕೀ ಚಂಡ ಕಡದ ಹೊಂಟಬಿಟ್ಟಿನಿ… ನಾಯಿಗೋಳು ಬೆನ್ನ ಹತ್ತಿದ್ದೂ…’ ಅಂತ ಉದ್ಗರಿಸಿದಾಗ ಭಟ್ಟರಿಗೆ ಇನ್ನಷ್ಟು ಗೊಂದಲಾತು. ಅವರು ಆ ಮನಶಾ ಹೇಳಿದ್ದರ ಮ್ಯಾಲ ಏನೇನೋ ತಿಳಕೋಲಿಕ್ಕೆ ನೋಡಿದರು. ಬಗೀಹರೀಲಿಲ್ಲ… ಈಗ ಇರವಲ್ಲದ್ಯಾಕ… ಮನಿಗೆ ಕರಕೊಂಡು ಹೋದರಾತು. ಆಮ್ಯಾಲ ಪೂರಾ ಹಕೀಕತ್ತು ಸವಿಸ್ತಾರವಾಗಿ ಕೇಳಿದರಾತು ಅಂತ ಅನಕೊಂಡು ‘ನಿಮ್ಮನ್ನ ನೋಡಿದರ ಕೊಂಕಣ ಪಟ್ಟಿಂದ ಬಂದಂಗ ಅನಸತೇರಿ… ನೀವು ಕೊಂಕಣಸ್ತೋ ಏನ ದೇಶಸ್ತೋ…?’ ಅಂತ ಕೇಳಿದರು. ವೆಂಕೋಬರಾವನ ನಾಲಿಗಿ… ನಾ ಮರಾಠಾ… ಅಂತ ಹೇಳಬೇಕಂದದ್ದು ಒಮ್ಮಿಗೆಲೇ ತಡದ ನಿಂತಿತು. ಅಂವ ದೇಶಸ್ತ… ಅಂತ ಹೇಳಿದ. ಭಟ್ಟರು ‘ಹಾಂ. ಅದಕ್ಕs ಅಂದೆ. ನಿಮ್ಮ ಮೋತೀಮ್ಯಾಲಿನ ವರ್ಚಸ್ಸು ನೋಡಿದ ಕೂಡಲೇ ಇವರು ನಮ್ಮವರು ಇರಬೇಕಂತ ಅನಿಸಿತು…’ ಅಂತ ವೆಂಕೋಬರಾವನ ಕತ್ತಿ ನೋಡಿಕೋತ ಹೇಳಿ… ‘ಹೂಂ… ಈಗ ನಡೀರಿ. ನಮ್ಮ ಮನಿಗೆ ಹೋಗೋಣೂ…’ ಅಂದಾಗ ವೆಂಕೋಬರಾವ್… ‘ಏ ಬ್ಯಾಡ್ರಿ, ನಿಮಗ್ಯಾಕ ಒಣಾ ತ್ರಾಸು’ ಅಂದ. ಭಟ್ಟರಂದರು ‘ಇದೆಂಥಾ ಮಾತ ಹೇಳತೇರೀ… ನೀವ ಒಬ್ಬರು ನಮ್ಮ ಮನಿಗೆ ಬಂದರ ತ್ರಾಸ ಆಗತದ?… ನಡೀರಿ. ಮದಲ ಒಂದ ಸ್ವಲ್ಪ ವಿಶ್ರಾಂತೀ ತಗೋರಿ. ಆಮ್ಯಾಲ ಮುಂದಿಂದು ನಿಮ್ಮ ವಿಚಾರಧಂಗ’ ಅಂತ ಒತ್ತಾಯದಿಂದ ಕೈಹಿಡದು ಎಬ್ಬಿಸಿ ಕರಕೊಂಡ ನಡದರು. ಕತ್ತಿ ಹಿಡಿದ ವೆಂಕೋಬರಾವನ ಮಗ್ಗಲಕ್ಕ ನಡೆದಿದ್ದ ಭಟ್ಟರ ತಲಿಯೊಳಗ ಏನೇನೋ ಉದ್ದುದ್ದ ಯೋಜನೆಗಳು ಮೊಳಕಿಯೊಡೆಯಲಿಕ್ಕೆ ಸುರು ಮಾಡಿದ್ದವು…

ಮನಿಗೆ ಬಂದಕೂಡಲೇ ತ್ರಿಯಂಬರ ಭಟ್ಟರು ಒಂದ ಧೋತರಾ ಮತ್ತ ಒಂದ ಅಂಗವಸ್ತ್ರಾ ಕೊಟ್ಟು ‘ವದ್ಧಿ ತಗದ ಬಿಡ್ರಿ…’ ಅಂತ ಹೇಳಿದರು. ವೆಂಕೋಬರಾವ್ ಆಕಡೆ ಈಕಡೆ ನೋಡಿ ಪಡಸಾಲಿಯ ಮೂಲಿಯೊಳಗ ಇದ್ದ ಕಮಾನದಂಥಾ ಮಾಡದೊಳಗ ತನ್ನ ಕತ್ತಿ ಇಟ್ಟು ಅಲ್ಲೇ ಮೂಲ್ಯಾಗ ನಿಂತು ಅರಿವೀ ಬದಲಿಸಿದ. ಕತ್ತಿ ಇಟ್ಟ ಆ ಮಾಡದೊಳಗ ಭಟ್ಟರು ಗಣೇಶ ಚೌತಿಗೆ ಗಣಪತಿನ್ನ ಕೂಡಸತ್ತಿದ್ದರು. ವೆಂಕೋಬರಾವ್ ಅರಿವಿ ಬದಲಿಸತಿದ್ದಂಗs ಭಟ್ಟರು ‘ಲೀಲಾs…’ ಅಂತ ತಮ್ಮ ಮಗಳನ್ನ ಕರದು ‘ಇವರಿಗೆ ಸಂಧ್ಯಾವಂದನಕ್ಕ ತಂಬಿಗಿ ಪಂಚಪಾತ್ರಿ ಕೊಡು’ ಅಂದರು. ವೆಂಕೋಬರಾವಗ ಕುತಿಗ್ಗೆ ಬಂದಂಗಾತು. ಅಂವ ‘ಭಡಜೀ… ನಾನು ಕರ್ಮ ಜೀವನಕ್ಕೆ ಬಿದ್ದು… ಹಾಂ… ಪೇಶವೇಗೋಳ ಸಿಪಾಯಿಗೋಳ ಗದ್ದಲದಾಗ ಬಿದ್ದು…. ಹಾಂ… ಒಟ್ಟs ನನಗ ಇದರದೆಲ್ಲಾ ಏನ್ರೆಪಾs ಸ್ಪರ್ಶನs ತಪ್ಪಿ ಹೋದಂಗ ಆಗೇದ… ಒಂದು ಥರಾ ಬ್ಯಾರೇ ಹಾದಿಗೇ ಜೀವನನ್ನೂದು ಒಗ್ಗಿ ಹೋಗೇದ…’ ಅಂತ ಹೇಳಿದಾಗ ಭಟ್ಟರ ಮನಸಿನೊಳಗ ಅನುಮಾನದ ಎಳೇ ಮೂಡಿತು. ಅದನ್ನ ತೋರಿಸಿಕೊಡದs ‘ಹಿಂಗs… ಆಗಲಿ ಆಗಲಿ…’ ಅಂತಂದು… ‘ಹೂಂ… ಅದೂ ಖರೇ ನೋಡ್ರಿ. ಕತ್ತೀ ಹಿಡದ ಕೈಗೆ ತೀರ್ಥಸೌಟು ಹಿಡೀಲಿಕ್ಕೆ ಬ್ಯಾಡ ಅನಸತದ….’ ಅಂತ ಹೇಳಿ ತಮ್ಮ ಮಾತಿಗೆ ತಾವs ನಕ್ಕರು. ಮತ್ತ… ‘ಲೀಲಾ… ರಾಯರಿಗೆ ಒಂದಿಷ್ಟು ಆಳ್ಳಿಟ್ಟ ಕಲಿಸಿ ಕೊಡೂ… ಪಾಪ. ನಿನ್ನೆ ರಾತ್ರಿ ಅವರ ಊಟ ಆಗೇದೋ ಇಲ್ಲೋ ಯಾರಿಗೊತ್ತು…’ ಅಂತ ಒದರಿ ಹೇಳಿದರು. ಲೀಲಾ ಒಳಗಿನಿಂದ ಹೂಂ ಅಂದಳು. ಹತ್ತು ಹನ್ನೆರಡು ವರ್ಷದ ಹುಡುಗಿಯೊಂದು ಬಟ್ಟಲದೊಳಗ ಅಳ್ಳಿಟ್ಟಿನ ಉಂಡೀ ಇಟಗೊಂಡು, ಎಡಗೈಯೊಳಗ ನೀರು ತುಂಬಿದ ತಾಮ್ರದ ತಂಬಿಗಿ ತಗೊಂಡು ಹೊರಗೆ ಬಂದಳು. ಭಟ್ಟರು ‘ನನ ಮಗಳು. ಲೀಲಾ ಅಂತ ಇಕೀ ಹೆಸರು… ಇಕಿನ ಈಗ ಮನೀ ಯಜಮಾನತಿ… ನನ್ನ ಕುಟುಂಬ ಈ ಹುಡುಗಿ ಇನೂ ಯೋಳೆಂಟ ವರ್ಷದಾಕಿ ಇದ್ದಾಗs ತೀರಿಕೊಂಡಿತು…’ ಅಂತ ಹೇಳತಿದ್ದಂಗs ವೆಂಕೋಬರಾವನ ಬಾಯೊಳಗಿಂದ ಹಾಂs… ಅನ್ನುವ ಚೀತ್ಕಾರ ಒಂದು ಹೊರಬಿತ್ತು. ಅಳ್ಳಿಟ್ಟು ಇಟ್ಟು ಒಳಗ ನಡದಿದ್ದ ಲೀಲಾ ಗಾಬರಿಯಿಂದ ಇವನ್ನ ತಿರಿಗಿ ನೋಡಿ ಸರ ಸರ ಅಂತ ಒಳಗೆ ಹೋದಳು. ಹೆಂಡತಿಯ ನೆನಪಿನೊಳಗ ಮುಣಗಿದ ತ್ರಿಯಂಬಕ ಭಡಜಿಗೆ ಇವನ ಚೀತ್ಕಾರದ ಉದ್ಗಾರ ಕೇಳಿಸಿರಲಿಲ್ಲ… ಅಳ್ಳಿಟ್ಟಿನ ಉಂಡಿಯ ಮ್ಯಾಲ ಹೆರತುಪ್ಪದ ಕರಣಿ ಇತ್ತು… ವೆಂಕೋಬರಾವನಿಗೆ ಚಿಮಣಾನ ನೆನಪು ಬಂದು ಗಂಟಲ ಹಿಚಕಿಧಂಗ ಆತು… ಪ್ರಯಾಸಪೂರ್ವಕವಾಗಿ ಅಳ್ಳಿಟ್ಟು ನುಂಗಿ ನೀರು ಕುಡದು ಎದ್ದಬಿಟ್ಟ.

ಇದನ್ನು ಓದಿದ್ದೀರಾ?: ಕೊಡಗಿನ ಗೌರಮ್ಮ ಅವರ ಕತೆ | ವಾಣಿಯ ಸಮಸ್ಯೆ

ಅಂವಗ ನಿದ್ದಿ ಬೇಕಾಗಿತ್ತು. ಒಂದ ಚಾಪೀ ಇಸಗೊಂಡು, ತಲಬಾಗಿಲಿನಿಂದ ಒಳಗ ಹೋದಕೂಡಲೇ ಇದ್ದಂತಹ ಎಡಕಿನ ಕಟ್ಟಿಯಮ್ಯಾಲ ಆ ಚಾಪೀ ಉಳ್ಳಿಸಿಕೊಂಡು ಮಲಗಿಬಿಟ್ಟ. ಗಡದ್ದಾದ ನಿದ್ದಿ… ಅವನು ಏಳುವಷ್ಟೊತ್ತಿಗೆ ಭಟ್ಟರ ಪೂಜೀ ಊಟಾ ಮುಗದಿತ್ತು. ಇವ ಎದ್ದಮ್ಯಾಲ ಇಂವಗೂ ಊಟಕ್ಕ ಹಾಕಿಸಿದರು. ಊಟಾ ಮುಗಿಸಿಬಂದ ವೆಂಕೋಬರಾವ್ ಆಡಿದ ಮದಲನೇ ಮಾತಂದರ… ‘ಯಜಮಾನರs… ನನಗ ಒಂದ ಸಣ್ಣ ಖೋಲೀ ಕೊಡಿಸಿಬಿಡ್ರಿ. ವಿನಾಕಾರಣ ನಿಮಗ ತ್ರಾಸು…’ ಭಟ್ಟರು ತೋರಿಕೆಗೆ ‘ಏ ಎಲ್ಲಿ ತ್ರಾಸರೀ… ನೀವು ನಮ್ಮ ಅತಿಥಿ ಆಗೂದಂದರ ಅದs ನಮ್ಮ ಭಾಗ್ಯ ಇದ್ದಂಗ…’ ಅಂತಂದು ಹಹ್ಹಾ… ಅಂತ ನಕ್ಕರು. ಆಮ್ಯಾಲ ಮತ್ತೆ ತಾವs… ‘ನಿಮಗ ಅಷ್ಟಕ್ಕೊಂದ ಭಿಡೇ ಅನಸತಿದ್ದರs… ಆತು. ಇಂದ ಸಂಜೀ ಒಳಗನs ನಿಮಗ ಒಂದ ವ್ಯವಸ್ಥಾ ಮಾಡೂಣೂ…’ ಅಂತ ಹೇಳಿಕೋತ, ಸೂಕ್ಷ್ಮವಾಗಿ ಏನೋ ಸೂಚನಾ ಕೊಡಲಿಕ್ಕೆ ಹತ್ತಿದವರಂಗೆ ತಮ್ಮ ಮುಂದ ಕುಂತ ಮನಶಾನ ಮಕಾ ನೋಡಿದರು… ವೆಂಕೋಬರಾವಗ ಆ ಸೂಚನಾ ಏನೂ ಮುಟ್ಟಲಿಲ್ಲನ್ನುವುದನ್ನ ತಿಳಿದ ತ್ರಿಯಂಬಕ ಭಟ್ಟರು ಅವನ ಸಮೀಪಕ್ಕ ಸರದು… ‘ಅದಾತಲಾss… ಈಗ ನಿಮ್ಮ ಹಕೀಕತ್ತು ಹೇಳರಿ. ನಿಮ್ಮದ ಯಾವೂರು… ಹೆಸರೇನೂ…’ ಅಂತ ಸಣ್ಣ ದನಿಯಿಂದ ಕೇಳಿದರು. ವೆಂಕೋಬರಾವ್ ಮಾತಾಡಬೇಕೆಂದರ ಅವನ ಮಾತಗೋಳಿಗೆ ಸಿಗಲಿಕ್ಕತ್ತಿದ ಚಿತ್ರಗಳಂದರ ಕತ್ತಿಗೆ ಹತ್ತಿದ ರಕ್ತ… ವಿಠ್ಠಲಾ… ಮತ್ತ ಒಡಲು ತುಂಬಿ ಹರೀತಿದ್ದ ಕೆನ್ನೀರಿನ ಕೃಷ್ಣಾನದಿ… ಆಂವಗ ಅವನ ಇಡೀ ಪ್ರಜ್ಞೆಯ ತುಂಬ ಇವs ಚಿತ್ರಗೋಳು ತುಂಬಿಧಂಗನಿಸಿತು. ತನ್ನ ಇಷ್ಟು ದಿನದ ಬದಕಿನಾಗಿನ ಬ್ಯಾರೇ ಏನೆಲ್ಲಾ ವಿವರಗೋಳು ಅನುಭವಗಳೇ ಅಲ್ಲವೇನೋ ಅಂತ ಅನಸಲಿಕ್ಕತ್ತಿತು… ವೆಂಕೋಬರಾವ್ ಒಂದು ಕ್ಷಣ ಕಣ್ಣುಮುಚ್ಚಿ ಕೂತು- ದೀರ್ಘವಾದ ಉಸರು ಬಿಟ್ಟ. ಅಮ್ಯಾಲ ಕಣ್ಣುತೆರೆದು… ‘ಯಜಮಾನರs… ನನ್ನ ಸಂಗತೀನೆಲ್ಲಾ ಇನ್ನೊಮ್ಮೆ ಯಾವಾಗರೇ ವಿಸ್ತಾರವಾಗಿ ಹೇಳತನು… ಈಗ ಯಾಕೋ ಉತ್ಸಾಹನs ಇಲಧಂಗ ಆಗೇದ….’ ಅಂತ ಹೇಳಿದ. ಭಟ್ಟರಿಗೆ ಉತ್ಸಾಹ ಇತ್ತು. ವೆಂಕೋಬರಾವನ ಮಾತು ಕೇಳಿ… ‘ಹೂಂ… ಆಗಲಿ… ನಿಮ್ಮ ಹೆಸರರೇ ಹೇಳತೀರಿಲ್ಲೋ…’ ಅಂತ ನಕ್ಕೋತ ಕೇಳಿದರು. ‘ರಂಗೋ ಪಟವರ್ಧನ್’ ಅಂದ… ಹಾ. ಹೌದು, ಆಗದೀ ಸಹಜವಾದ ಸುಳ್ಳು. ವೆಂಕೋಬರಾವನಿಗೇ ತನ್ನ ಹೊಸಾ ಹೆಸರಿನ ಉಚ್ಚಾರದ ದನೀ ಕೇಳಿ ಒಂದು ಥರದ ವಿಚಿತ್ರ ಸಂಭ್ರಮ ಆತು…

(ಮುಂದಿನ ವಾರ ಮುಂದಿನ ಭಾಗ)

ಇದನ್ನು ಓದಿದ್ದೀರಾ?: ಕುವೆಂಪು ಅವರ ಕತೆ | ಧನ್ವಂತರಿಯ ಚಿಕಿತ್ಸೆ

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಜಿ.ಬಿ. ಜೋಶಿ ಅವರ ಕತೆ | ಡೂಗಜ್ಜನ ಬಹಿಷ್ಕಾರ

ಹುದುಗಿಹೋದ ಅನೇಕ ಮಹತ್ವದ ಕತೆಗಳನ್ನು ಹೆಕ್ಕಿ ತೆಗೆದು ಅವು ಕನ್ನಡದ ಮನಗಳನ್ನು...

ಸಿದ್ಧಲಿಂಗಯ್ಯ ಅವರ ಕತೆ | ಮತಾಂತರ

ಹುದುಗಿಹೋದ ಅನೇಕ ಮಹತ್ವದ ಕತೆಗಳನ್ನು ಹೆಕ್ಕಿ ತೆಗೆದು ಅವು ಕನ್ನಡದ ಮನಗಳನ್ನು...

ಪಾಟೀಲ ಪುಟ್ಟಪ್ಪ ಅವರ ಕತೆ | ಸಾವಿನ ಮೇಜವಾನಿ

ಹುದುಗಿಹೋದ ಅನೇಕ ಮಹತ್ವದ ಕತೆಗಳನ್ನು ಹೆಕ್ಕಿ ತೆಗೆದು ಅವು ಕನ್ನಡದ ಮನಗಳನ್ನು...

ಎಚ್. ನಾಗವೇಣಿ ಅವರ ಕತೆ | ಧಣಿಗಳ ಬೆಳ್ಳಿಲೋಟ

ಹುದುಗಿಹೋದ ಅನೇಕ ಮಹತ್ವದ ಕತೆಗಳನ್ನು ಹೆಕ್ಕಿ ತೆಗೆದು ಅವು ಕನ್ನಡದ ಮನಗಳನ್ನು...