ಹುದುಗಿಹೋದ ಅನೇಕ ಮಹತ್ವದ ಕತೆಗಳನ್ನು ಹೆಕ್ಕಿ ತೆಗೆದು ಅವು ಕನ್ನಡದ ಮನಗಳನ್ನು ಮುದಗೊಳಿಸಲಿ ಎಂಬ ಕಾರಣಕ್ಕಾಗಿ ಈದಿನ.ಕಾಮ್, ಮರೆಯಬಾರದ ಕತೆಗಳು ಮಾಲಿಕೆಯಲ್ಲಿ ಪ್ರತಿ ಭಾನುವಾರ ಪ್ರಕಟಿಸಲಿದೆ.
ಅಮ್ಮ ಬೀಡಿಎಲೆಯೊಳಗೆ ಸೊಪ್ಪು ತುಂಬಿಸಿ ಸರ್‍ರನೆ ಸುರುಟಿ ಉಗುರಿನಿಂದ ‘ನಕ್ಕು’ ಹಾಕಿ ಅದ್ದುನ ಕೈಗೆ ಕೊಡುತ್ತಿದ್ದಳು. ಅವನು ಅದಕ್ಕೆ ಕೆಂಪುನೂಲು ಸುತ್ತಿ ಬುಟ್ಟಿಗೆ ಹಾಕುತ್ತಿದ್ದ. ಕತ್ತರಿಸಿದ ಎಲೆಗಳ ಚೂರುಗಳು ಅಮ್ಮನ ಸೀರೆಯ ಮೇಲೆ, ನೆಲದ ಮೇಲೆ ಹರಡಿಕೊಂಡಿದ್ದವು. ಹೊಗೆಸೊಪ್ಪಿನ ಕಮಟು ವಾಸನೆ ಅಲ್ಲೆಲ್ಲ ಗಮ್ಮನೆ ಹರಡಿತ್ತು. ಅಮ್ಮ ಚಕಚಕನೆ ಬೀಡಿಯನ್ನು ಕಟ್ಟಿಕೊಡುವುದು ಅದ್ದು ನೂಲು ಸುತ್ತಿ ಬುಟ್ಟಿಯೊಳಗೆ ಹಾಕುವುದು ಮೌನವಾಗಿ ಸಾಗಿತ್ತು. ಬುಟ್ಟಿಯೊಳಗೆ ಬೀಡಿಯ ಪುಟ್ಟ ರಾಶಿ ಬಿದ್ದಿತ್ತು. ಈ ಕ್ರಿಯೆ ಎಷ್ಟು ಸರಾಗವಾಗಿ ನಡೆಯುತ್ತಿತ್ತೆಂದರೆ ದೂರದಲ್ಲಿ ನಿಂತು ನೋಡುವವರಿಗೆ ಇವರು ಕಾರ್ಯನಿರತ ಮಾನವಯಂತ್ರಗಳಂತೆ ಕಂಡು ಬರುತ್ತಿದ್ದರು.
ಅದ್ದುನ ಅಮ್ಮ ಬೀಡಿ ಕಟ್ಟುತ್ತಿರುವ ಹಾಗೆಯೇ ಆಗಾಗ ಕೆಮ್ಮುತ್ತಿದ್ದಳು. ಒಮ್ಮೆ ಕೂತಲ್ಲೇ ಕಾಲು ಮಡಚುತ್ತಾ, ಒಮ್ಮೆ ಕಾಲು ಉದ್ದ ನೀಟಾಗಿ ಚಾಚುತ್ತಾ, ಕೂತ ಮಗ್ಗುಲು ಬದಲಾಯಿಸುತ್ತಾ ಇದ್ದಳು. ಕೂತಲ್ಲೇ ಕೂತು ಸೊಂಟದಲ್ಲಿ ನೋವೆದ್ದಿತ್ತೋ ಏನೋ ಬೆನ್ನನ್ನು ಒಮ್ಮೆ ನೆಟ್ಟಗಾಗಿಸಿ ಕುಗ್ಗಿಸಿಕೊಂಡಳು. ಈ ನೋವುಗಳನ್ನು ಮರೆಯಲಿಕ್ಕೋ ಏನೋ ಆಗಾಗ ‘ಮಾಪಿಳ್ಳೆ ಪಾಟ್ಟಿ’ನ ಸೊಲ್ಲುಗಳನ್ನೋ, ‘ಮಾಲೆ’ಗಳ ಸೊಲ್ಲುಗಳನ್ನೋ ಗುಣಗುಣಿಸುತ್ತಿರುವಳು. ಪರಿಚಿತ ಸೊಲ್ಲುಗಳಾದರೆ ಅದ್ದು ಕೂಡ ಅಮ್ಮನ ಜೊತೆಗೆ ದನಿ ಸೇರಿಸುತ್ತಿದ್ದ.
ಹೊರಗಿನಿಂದ ಸೀಟಿಯ ಸದ್ದೊಂದು ಅದ್ದುನ ಕಿವಿಗೆ ಬಡಿದಾಗ ಬೀಡಿ ಕಟ್ಟುವ ಯಾಂತ್ರಿಕ ಅವಸ್ಥೆಯಿಂದ ಚಕ್ಕನೆ ಸಿಡಿದೆದ್ದ. ಗಾಳಿ ಸಂಚಾರಕ್ಕಾಗಿ ತೆರೆದಿಟ್ಟಿದ್ದ ಸೋಗೆ ತಟ್ಟಿಯ ಬಾಗಿಲಿನ ಮೂಲಕ ಬಗ್ಗಿ, ಕೂತು ದೂರದೃಷ್ಟಿ ಹಾಯಿಸಿ ನೋಡಿದ. ಒಂದರ ಬೆನ್ನಿಗೆ ಇನ್ನೊಂದು, ಮತ್ತೊಂದು ಸಿಳ್ಳುಗಳು ಕೇಳಿ ಬರತೊಡಗಿದವು. ಅದ್ದು ಕೂತಲ್ಲೇ ಅತ್ತಿತ್ತ ಚಡಪಡಿಸಿದ. ಅಮ್ಮನಿಗೆ ಇದೆಲ್ಲ ತಿಳಿಯದೇ ಇಲ್ಲ. ಆಟಕ್ಕೆ ಗೆಳೆಯರ ಕರೆ ಕೇಳಿಸಿದ ನಂತರ ಮಗ ಇನ್ನು ಮನೆಯಲ್ಲಿ ನಿಲ್ಲಲಾರನೆಂಬುದು ಅವಳಿಗೆ ಚೆನ್ನಾಗಿ ಗೊತ್ತು. ಒಳಗೊಳಗೆ ನಗುತ್ತಾ “ಕತ್ತರಿಸಿದ ಎಲೆ ಇಷ್ಟು ಮುಗಿಸಿ ಹೋಗು ಮಗಾ… ನೋಂಬಿನ ಕೆಲಸಗಳೊಂದೂ ಆಗಿಲ್ಲ…” ಎಂದಳು. ಅದ್ದು ಒಲ್ಲದ ಮನಸ್ಸಿನಿಂದ ‘ಹೂಂ…’ ಎಂದು ನೂಲು ಸುತ್ತುವ ವೇಗವನ್ನು ಹೆಚ್ಚಿಸಿದ. ಈಗ ಅಮ್ಮ ಬೀಡಿ ಸುತ್ತಿ ಕೊಡುವುದು ಬಹಳ ನಿಧಾನವೆನಿಸಿತು. “ಅಮ್ಮ ಬೇಗ ಬೇಗ ಕೊಡು…” ಎಂದು ಅವಸರ ಮಾಡಿದ. ಅಮ್ಮ ನಗುತ್ತಾ “ಅದೆಂತಾ ಗಡಿಬಿಡಿ ಮಗಾ… ಒಂಚೂರು ತಾಳಿಕೋ. ಬೀಡಿ ಒಂದಕ್ಕೊಂದಾದ್ರೆ ಚಕ್ಕರು ಎಲ್ಲ ಪುಡಿಮಾಡಿ ಹಾಕ್ತಾನೆ; ನಾವೆಂತ ಮಾಡೂದು ಮತ್ತೆ ಉಣ್ಣೂದಕ್ಕೆ…?” ಎಂದಳು.
ಇದನ್ನು ಓದಿದ್ದೀರಾ?: ಮೊಗಳ್ಳಿ ಗಣೇಶ್ ಅವರ ಕತೆ | ಬುಗುರಿ
ಈ ಮಧ್ಯೆ ಅಪ್ಪ ಮನೆಯೊಳಗೆ ಬಂದದ್ದು ಅದ್ದುನಿಗೆ ಗೊತ್ತಾಗಲಿಲ್ಲ. ಅಪ್ಪ ಒಳಗೆ ಬಂದವ ತನ್ನ ಅಂಗಿಯನ್ನು ಕಳಚಿ ಗೂಟಕ್ಕೆ ಸಿಕ್ಕಿಸಿ, ಚಾಪೆ ಬಿಡಿಸಿ ಕಂಬಕ್ಕೊರಗಿ ಕೂತ. ಕಾಲು ನೀಟಾಗಿಸಿ ಕೈವಸ್ತ್ರದಿಂದ ಗಾಳಿ ಹಾಕಿಕೊಳ್ಳತೊಡಗಿದ.
ಅಮ್ಮ, ಏನಾಯ್ತು ಎಂಬಂತೆ ಅವನತ್ತ ನೋಡತೊಡಗಿದ್ದರಿಂದ ಕೆಲಸದ ವೇಗ ನಿಧಾನಗೊಂಡಿತು. ಹೊರಗಿನಿಂದ ಮತ್ತೆ ಸೀಟಿ, ಸಿಳ್ಳುಗಳು ಕೇಳಿ ಬಂದವು. “ಅಮ್ಮ ಬೇಗ ಬೇಗ ಕೊಡು…” ಎಂದು ಮತ್ತೆ ಅದ್ದು ಗೊಣಗಿದ.
“ಯಾ ಅಲ್ಲಾಹ್… ಏನು ವಿಪರೀತ ಬಿಸಿಲು! ಈ ಸಲದ ಉಪವಾಸ ಬಹಳ ಕಠಿಣವಾದದ್ದು. ಈ ಸೆಕೆ, ಉರಿ…! ನಾಲ್ಕು ಗೋಣಿ ಬೀಡಿ ಎಲೆಗಳ ಕಟ್ಟುಗಳನ್ನು ಹೊತ್ತದ್ದೇ ಸುಸ್ತಾಗಿ ಬಿಡ್ತು. ಕಣ್ಣುಗತ್ತಲೆ ಬಂದಂತಾಯ್ತು! ಇನ್ನೂ ಇಪ್ಪತ್ತು ನೋಂಬುಗಳಿವೆಯಲ್ಲಾ ಹ್ಯಾಗೆ ಮುಗಿಸೋದೋ!” ಎಂದು ಅಪ್ಪ ನಿಟ್ಟುಸಿರು ಬಿಟ್ಟ.
ಅಮ್ಮ ಬೀಡಿ ಸುತ್ತುತ್ತಿರುವಂತೆಯೇ ಅಪ್ಪನತ್ತ ನೋಡುತ್ತಿದ್ದಳು; ಅವನ ನೋವನ್ನೆಲ್ಲ ತಾನೂ ಅನುಭವಿಸುವವಳಂತೆ! ಸ್ವಲ್ಪ ಹೊತ್ತು ಮೌನವಾಗಿದ್ದವಳು “ಬೆಳಗ್ಗಿನ ಗಂಜಿ ಇದೆ. ಅದ್ದು ಹೆಚ್ಚೇನೂ ಉಂಡಿಲ್ಲ…” ಎಂದಳು ಅನುಮಾನಿಸುತ್ತಾ.
“ಛೇ…ಛೇ… ಇಂತಹ ಕಷ್ಟಗಳಿಗೆಲ್ಲಾ ಹೆದರಿ ಉಪವಾಸ ಬಿಡೋದೇ! ಅಲ್ಲಾಹನ ಕ್ಷಮೆ ಇರಲಿ. ನಾಳೆ ಆಖಿರತ್‌ನಲ್ಲಿ ‘ಮಾಷರಾ’ ಸಭೆಯಲ್ಲಿನ ಬಿಸಿಲು ಬೇಗೆ ತಡೆಯುವುದು ಬೇಡವೇ? ಬರುವಂತಹ ಕಷ್ಟಗಳೆಲ್ಲಾ ಈ ಭೂಮಿಯ ಮೇಲಿನ ಬದುಕಿನಲ್ಲೇ ಬಂದು ತೀರಲಿ. ನಾಳೆ ಸತ್ತನಂತರ ಆಖಿರತ್‌ನಲ್ಲಾದರೂ ಅಲ್ಲಾಹ ನಮಗೆ ಸುಖಸಂಪತ್ತನ್ನು ಕರುಣಿಸಲಿ…” ಎಂದ ಅಪ್ಪ.
ಇದನ್ನು ಓದಿದ್ದೀರಾ?: ಯು.ಆರ್. ಅನಂತಮೂರ್ತಿ ಅವರ ಕತೆ | ಸೂರ್ಯನ ಕುದುರೆ
ಅಮ್ಮ ಮತ್ತೆ ಬೀಡಿಯ ಕಡೆ ಗಮನ ಕೊಡದೆ ಕೆಲಸ ನಿಧಾನವಾಯಿತು. ತಡವಾದರೆ ಹುಡುಗರು ತನ್ನನ್ನು ಆಟಕ್ಕೆ ಸೇರಿಸಿಕೊಳ್ಳಲಾರರು. ಅದ್ದು ಕುಸುಕುಸು ಮಾಡತೊಡಗಿದ.
“ನಿಂದೆಂತಾದ್ದೋ ಪಿರಿಪಿರಿ… ಒಂಚೂರೂ ಬಾಸೆಯಿಲ್ಲ ನಿಂಗೆ. ಬರೀ ಆಟದ್ದೆ ಹುಚ್ಚು…” ಎಂದಳು ಅಮ್ಮ.
“ಅದ್ಯಾಕೆ ಅಂವಾ ರಗಳೆ ಮಾಡ್ತಿದ್ದಾನೆ…? ಆಡುವುದಾದರೆ ಆಡ್ಲಿ ಬಿಡು. ಸ್ವಲ್ಪ ಹೊತ್ತು ಬಿಟ್ಟು ನಾನೇ ಬೀಡಿ ಕಟ್ತೇನೆ” ಎಂದ ಅಪ್ಪ.
ಅಪ್ಪ ಅದ್ದುನ ಪರವಾಗಿ ಹೇಳಿದ್ದೇ ತಡ, ಅಮ್ಮನ ಅನುಮತಿಗೂ ಕಾಯದೆ ಚಂಗನೆ ಎದ್ದು ಹೊರಗೋಡಿಬಿಟ್ಟ.
ಹುಡುಗರೆಲ್ಲ ಆಗಲೇ ತೆಂಗಿನ ತೋಟದ ಮಧ್ಯೆ ಇದ್ದ ಪುಟ್ಟ ಖಾಲಿ ಜಾಗವನ್ನು ಆಟದ ಮೈದಾನವನ್ನಾಗಿ ಮಾಡಿಕೊಂಡಿದ್ದರು. ಮೈದಾನಕ್ಕೆ ತಕ್ಕ ಆಟ. ಇಂದಿನದ್ದು ‘ಲಗೋರಿ’ ಆಟ. ಏಳೆಂಟು ಹಂಚಿನ ಚೂರುಗಳಿಂದ ಮಾಡಿದ ಬಿಲ್ಲೆಗಳನ್ನು ಒಂದರ ಮೇಲೊಂದು ಪೇರಿಸಿಟ್ಟು ನಾಲೈದು ಮಾರು ದೂರ ನಿಂತು ಗುರಿಯಿಟ್ಟು ಚೆಂಡು ಎಸೆಯುವುದು, ಮತ್ತೆ ಬಿದ್ದ ಬಿಲ್ಲೆಗಳನ್ನು ಎದುರಾಳಿಗಳು ಚೆಂಡಿನಿಂದ ಮೈಗೆ ಹೊಡೆಯುವ ಮುಂಚೆ ಹಿಂದಿನಂತೆ ಬಿಲ್ಲೆಗಳನ್ನು ಪೇರಿಸಿ ಇಡೋದು ಈ ಆಟ. ಮಕ್ಕಳ ಕೇಕೆ, ಗುಲ್ಲು ತೋಟದ ಮಾಲೀಕ ಸುಲೇಮಾನ್ ಖಾನರಿಗೆ ಕೇಳಿಲ್ಲ. ಲೊಹರ್ ನಮಾಜ್ ಮಾಡಿದ ನಂತರ ಒಂದೋ ನಿದ್ದೆಯಲ್ಲಿರಬೇಕು ಇಲ್ಲದಿದ್ದರೆ ಪೇಟೆಗೆ ಹೋಗಿರಬೇಕು. ಅವರು ಇದ್ದಿದ್ದರೆ ದೊಡ್ಡ ಕೋಲೊಂದನ್ನು ಹಿಡಿದುಕೊಂಡು ಮಕ್ಕಳನ್ನು ಓಡಿಸಿಕೊಂಡು ಬರುತ್ತಿದ್ದರು. “ಸೈತಾನ್‌ಗಳು, ನನ್ನ ತೆಂಗಿನ ಸಸಿಗಳನ್ನೆಲ್ಲಾ ಸಾಯ್ಸಿಬಿಟ್ರು. ಈ ಬಲಾಲ್‌ಗಳ ಕಲಿಯಿಂದಾಗಿ ನನ್ನ ತೆಂಗಿನ ಮರಗಳ ಕಟ್ಟೆಗಳೆಲ್ಲ ನಿಸಂತನ ಆಯ್ತು…” ಎಂದೆಲ್ಲ ಬಯ್ಯುತ್ತಿದ್ದರು. ಮಕ್ಕಳಿಗೆ ಆಡಲು ಈ ತೆಂಗಿನ ತೋಟವೇ ಉಳಿದಿರುವುದು, ಊರಿನಲ್ಲಿ. ಬೇರೆ ಸ್ಥಳ ಸಿಗದಿರುವುದರಿಂದ ಅವರ ಕಣ್ಣು ತಪ್ಪಿಸಿ ಮತ್ತೆ ಇಲ್ಲೇ ಆಟ ಶುರು ಮಾಡುತ್ತಿದ್ದರು.
ಅದ್ದು ಅಲ್ಲಿಗೆ ಬಂದವನೇ “ನನ್ನನ್ನು ಸೇರಿಸ್ಕೊಳ್ರೋ…” ಎಂದು ಷರೀಫನನ್ನು ಕೇಳಿಕೊಂಡ. ಷರೀಫ್ ಜುಬೇರನಿಗೆ ಹೇಳಿದ, ‘ನಿನ್ನ ಪಾರ್ಟಿಗೆ ಬೇಕಿದ್ದರೆ ಇವನನ್ನು ಸೇರಿಸ್ಕೋ…’ ಜುಬೇರ್ ಅದ್ದುನನ್ನು ಕಣ್ಣಿನಿಂದಲೇ ತೂಗಿನೋಡಿದ, ಇವನನ್ನು ತನ್ನ ಪಾರ್ಟಿಗೆ ಸೇರಿಸಿಕೊಂಡರೆ ಎಷ್ಟು ಬಲವಾದೀತು ಎಂದು ಲೆಕ್ಕಹಾಕಿಕೊಂಡ. ಪೀಚು ದೇಹದ ಬಡಕಲು ಕೈಕಾಲಿನ ಅದ್ದುನ ದೇಹದಲ್ಲಿ ಎದ್ದು ಕಾಣುವುದೇ ಉರುಟಾದ ಮುದ್ದು ಮುಖ, ದೊಡ್ಡ ದೊಡ್ಡ ಹೊಳೆಯುವ ಕಣ್ಣುಗಳು. ಜುಬೇರ್ ತನ್ನ ನಿರ್ಧಾರವನ್ನು ಒಂದೇ ಮಾತಿನಿಂದ ಹೇಳಿಬಿಟ್ಟ, ”ಇಂವಾ ನಮ್ಗೆ ಬೇಡ…” ಷರೀಫ್ ಹೇಳಿದ, “ನೀನು ಬರುವಾಗ ತಡವಾಯ್ತು. ಈ ಆಟ ಮುಗಿದ ಮೇಲೆ ನೋಡೋಣ.”
ಇದನ್ನು ಓದಿದ್ದೀರಾ?: ಎ.ಕೆ. ರಾಮಾನುಜನ್ ಅವರ ಕತೆ | ಅಣ್ಣಯ್ಯನ ಮಾನವಶಾಸ್ತ್ರ
ಅದ್ದು ಪೆಚ್ಚಾಗಿ ಅಲ್ಲೇ ತೆಂಗಿನ ಮರದ ಬುಡದಲ್ಲಿ ಕೂತು ಅವರ ಆಟವನ್ನು ನೋಡತೊಡಗಿದ. ”ರಬ್ಬೆ ಈಗ್ಲೆ ಸುಲೇಮಾನ್ ಖಾನರು ಬರಬೇಕು… ಇವ್ರ ಪೊಗರೆಲ್ಲಾ ಇಳಿಯಬೇಕು” ಎಂದು ಹಾರೈಸಿಕೊಂಡ. ನಂತರ ಬಂದ ಕಾಸಿಮ್‌ಗೂ ಕೂಡ ಆಡಲು ಚಾನ್ಸು ಸಿಗಲಿಲ್ಲ. ಅವನೂ ಬಂದು ಅದ್ದು ಕೂತಲ್ಲೇ ಕೂತ. ಒಬ್ಬರ ಮುಖವನ್ನೊಬ್ಬರು ಪೆಚ್ಚಾಗಿ ನೋಡಿಕೊಂಡರು.
ಆಟ ಜೋರಾಗಿ ಸಾಗಿತ್ತು. ಅದ್ದು ಮತ್ತು ಕಾಸಿಮ್ ಇಬ್ಬರಿಗೂ ನೋಡುವ ಆಸಕ್ತಿ ಇರಲಿಲ್ಲ. ಆಟದಲ್ಲಿ ಇವರನ್ನು ಸೇರಿಸಿಕೊಳ್ಳಲಿಲ್ಲವೆಂಬ ಬೇಸರ ಇಬ್ಬರನ್ನೂ ಕಾಡತೊಡಗಿತ್ತು. ಕಾಸಿಮ್ ಮಾತಿಗಿಳಿದ. “ನಿಂಗೆ ನೋಂಬುಂಟಾ ಅದ್ದು…?” ಎಂದ. ”ಇಲ್ಲ ಮಾರಾಯ, ಅಮ್ಮ ಹೇಳ್ತಾಳೆ. ಮಕ್ಕಳಿಗೆ ನೋಂಬು ಕಡ್ಡಾಯ ಅಲ್ಲ. ಬೇಡ ಅಂತಾಳೆ.” “ನಮ್ಮಮ್ಮನೂ ಹಾಗೆಯೇ ಹೇಳ್ತಾಳೆ. ಈವತ್ತಾದ್ರೂ ಅತ್ತಾಯಕ್ಕೆ ಎಬ್ಬಿಸುವಂತೆ ಅಮ್ಮನನ್ನು ಕೇಳಬೇಕು, ನಮ್ಮಮ್ಮ ನೋಂಬು ಮಾಡಿದ ಹುಡುಗನ ಕತೆ ಹೇಳ್ತಾಳೆ. ತುಂಬ ಚೆನ್ನಾಗಿದೆ. ನೀನು ನಮ್ಮ ಮನೆಗೆ ಬರ್‍ತಿಯಾ?” ಎಂದ ಕಾಸಿಮ್, ಅದ್ದುನಿಗೂ ಇಲ್ಲಿ ಕೂತು ಬೇಸರವಾಗಿತ್ತು. “ಹೋಗೋಣ…” ಎಂದ.
ಕಾಸಿಮ್‌ನ ಮನೆ ಹೆಚ್ಚೇನೂ ದೂರವಿಲ್ಲ. ಸುಲೇಮಾನ್ ಖಾನರ ತೋಟ ದಾಟಿದರೆ ಸಿಗುವುದೇ ಕಾಸಿಮ್‌ನವರ ಹಿತ್ತಿಲು. ಅದರ ಕೊನೆಯಲ್ಲೇ ಅವರ ಮನೆ. ಅದ್ದು ಕಾಸಿಮ್‌ನ ಜೊತೆ ನಡೆಯುತ್ತಲೇ ಕೇಳಿದ, “ಅಲ್ಲಾ ಕಾಸಿಮ್, ಈ ನೋಂಬು ಹ್ಯಾಗಿರ್‍ತದೊ.” ಅದ್ದುನಿಗೆ ಮುಂಜಾವಿನಿಂದ ಕತ್ತಲಾಗುವತನಕ ಏನೂ ತಿನ್ನದೆ ಉಪವಾಸವಿರುವುದೇ ನೋಂಬು ಎನ್ನುವುದು ಗೊತ್ತು. ಆದರೆ ನೋಂಬು ಮಾಡಿದ ಅನುಭವವಿರಲಿಲ್ಲ ಅಷ್ಟೆ. ಪಾಪ ಕಾಸಿಮ್‌ಗೂ ಏನು ಗೊತ್ತು! ಅವನು ಕೂಡ ಉಪವಾಸ ಮಾಡಿದವನೇನಲ್ಲ, “ಅದೆಂತದೋ ಮಾರಾಯಾ, ಅಮ್ಮನೊಂದಿಗೆ ಕೇಳಿದ್ರೆ ನಿಂಗೆ ಈಗ ಹೇಳಿದ್ರೆ ಗೊತ್ತಾಗೋದಿಲ್ಲ. ದೊಡ್ಡವನಾದ ಮೇಲೆ ಎಲ್ಲ ಗೊತ್ತಾಗ್ತದೆ ಅಂತಾಳೆ. ಈ ರಮ್ಜಾನ್ ತಿಂಗಳಲ್ಲಿ ಕುರಾನ್ ಮುಸ್ತಾಬ್ ಇದೆಯಲ್ಲಾ ಅದು ಭೂಮಿಗೆ ಬಂದದ್ದಂತೆ. ಈ ತಿಂಗಳಲ್ಲಿ ಸ್ವರ್ಗದ ಬಾಗಿಲು ತೆರೆದಿರುತ್ತದಂತೆ. ನೋಂಬು ಮಾಡಿದವರೆಲ್ಲ ಸ್ವರ್ಗಕ್ಕೆ ಹೋಗ್ತಾರಂತೆ. ಅಮ್ಮ ಹೇಳ್ತಾಳೆ…” ಎಂದು ತನಗೆ ಗೊತ್ತಿದ್ದನ್ನು ಕಾಸಿಮ್ ಹೇಳಿದ. “ಈ ಸ್ವರ್ಗ ಅನ್ನೋದು ಸತ್ತ ನಂತರ ಸಿಗೋದು ಅಲ್ವಾ ಕಾಸಿಮ್? ಬದುಕಿರುವಾಗ ನಮಗೆ ಸಿಕ್ಕಿದ್ರೆ ಎಂತಾ ಗಮ್ಮತ್ತಾಗಿತ್ತು ಅಲ್ವಾ?” ಎಂದ ಅದ್ದು.
ಇದನ್ನು ಓದಿದ್ದೀರಾ?: ಶಾಂತಿನಾಥ ದೇಸಾಯಿ ಅವರ ಕತೆ | ದಿಗ್ಭ್ರಮೆ
”ಹೌದು ಮಾರಾಯ ಅಲ್ಲಿ ಬೇಕಾದದ್ದು ಎಲ್ಲಾ ಇರ್‍ತದಂತೆ, ತುಂಬ ಮಜಾ ಮಾಡಬಹುದಂತೆ. ಹೂರುಲ್ಲೀನ್ ಅನ್ನುವ ಚೆಂದದ ಅಪ್ಸರೆಯರು ಇರ್‍ತಾರಂತೆ. ದರ್‍ಸಿನ ಮೈಲಾರರು ಹೇಳಿದ್ದು ನಿಂಗೆ ನೆನಪಿಲ್ವಾ… ಭೂಮಿಯಲ್ಲಿ ಹರಾಮ್ ಆದದ್ದು ಕೂಡಾ ಸ್ವರ್ಗದಲ್ಲಿ ಹಲಾಲ್ ಆಗಿರ್‍ತದಂತೆ…” ಎಂದ ಕಾಸಿಮ್ ಸ್ವಲ್ಪ ಗೆಳೆಯನನ್ನು ಅಣಕಿಸುವಂತೆ.
”ಹೌದು, ಅಲ್ಲಿ ಸುಖ ಸಂಪತ್ತು ಎಲ್ಲಾ ಇರ್‍ತದಂತೆ. ಹೊಟ್ಟೆತುಂಬ ಊಟ ಇರ್‍ತದಂತೆ. ಮುಸುಂಬಿ, ಸೇಬು, ದ್ರಾಕ್ಷಿ, ಹಣ್ಣುಗಳಿರ್‍ತಾವಂತೆ. ದಿನವೂ ಮಾಂಸದ ಅಡುಗೆ, ತುಪ್ಪದನ್ನ, ಗರಿಗರಿ ಇಸ್ತ್ರಿ ಮಾಡಿದ ಸಿಲ್ಕ್ ಅಂಗಿ, ಸಿಲ್ಕ್ ಲುಂಗಿ, ಜರಿಯ ಟೊಪ್ಪಿ ಎಲ್ಲಾ ಇರ್‍ತದಂತೆ” ಎಂದು ತನ್ನ ಜ್ಞಾನವೂ ಏನೂ ಕಮ್ಮಿಯದಲ್ಲ ಎನ್ನುವಂತೆ ಅದ್ದು ಹೇಳಿದ.
”ಅಯ್ಯೋ ಅದೆಲ್ಲಾ ಬೇಕಾದ್ರೆ ಸ್ವರ್ಗಕ್ಕೆ ಹೋಗ್ಬೇಕಾ? ನಮ್ಮ ಮನೆಯಲ್ಲಿ ಅದೆಲ್ಲಾ ಇರ್‍ತದೆ…” ಎಂದು ಕಾಸಿಮ್ ನಕ್ಕ. ಅದ್ದು ಪೆಚ್ಚಾದ. “ಹಾಗಾದ್ರೆ ಕಾಸಿಮ್‌ನ ಮನೆಯೆಂದರೆ ಸ್ವರ್ಗವೇ ಇರಬೇಕು” ಎಂದುಕೊಂಡು ಅದ್ದು ಕುತೂಹಲದಿಂದ ಬೇಗ ಬೇಗನೇ ಕಾಲಿಟ್ಟ.
ಕಾಸಿಮ್‌ನದ್ದು ಸಾಕಷ್ಟು ದೊಡ್ಡ ಅಂದವಾದ ಮನೆ. ಒಳಗೆ ನೆಲವೆಲ್ಲ ಪಳಪಳನೆ ಆಗತಾನೇ ತೊಳೆದಂತೆ ಹೊಳೆಯುತ್ತಿತ್ತು. ಬೆಳ್ಳನೆ ಬೆಳಗುವ ದೀಪದ ಗುಚ್ಛಗಳು, ಬಣ್ಣಬಣ್ಣದ ಗೋಡೆ, ಮೆತ್ತನೆಯ ಆಸನಗಳು, ಚಂದದ ಹೂಗಳಿರುವ ಕಿಟಕಿ ಬಾಗಿಲಿನ ಪರದೆಗಳು… ಅಬ್ಬಾ ಸ್ವರ್ಗವೆಂದರೆ ಹೀಗೆಯೇ ಇರುತ್ತದೇನೋ! ಮನೆಯ ಒಂದು ಸುಂದರ ಕೋಣೆಯೊಳಗೆ ಮೆತ್ತನೆಯ ಹಾಸಿಗೆಯಲ್ಲಿ ಕಾಸಿಮ್‌ನ ಅಪ್ಪ ನಿದ್ದೆ ಮಾಡುತ್ತಿದ್ದರು. ಅಮ್ಮ ಅಡುಗೆ ಕೋಣೆಯಲ್ಲಿ ಅಕ್ಕಿ ರೊಟ್ಟಿ ಸುಡುತ್ತಿದ್ದಳು. ಅದ್ದು ಅಡಿಗೆ ಕೋಣೆಯ ಒಳಗೆ ಹೋದವನು ಅನುಮಾನಿಸುತ್ತಾ ಮೂಲೆಯಲ್ಲಿ ನಿಂತ. ಕಾಸಿಮ್‌ನನ್ನು ಕಂಡು ಅವನಮ್ಮ ”ರೊಟ್ಟಿ ತಿಂತಿಯೇನೋ… ಏನು ಆಟ ಬೇಗ ಮುಗೀತು?” ಅಂತ ಕೇಳಿದಳು. “ಅಮ್ಮ, ಅದ್ದು ಬಂದಿದ್ದಾನೆ. ಅವ್ನಿಗೂ ರೊಟ್ಟಿ ಕೊಡ್ತಿಯಾ ಮತ್ತೆ?” ಎಂದ ಕಾಸಿಮ್ ಅದ್ದುನನ್ನು ತೋರಿಸುತ್ತಾ. ”ಓ… ಯಾರು ಬೀಡಿ ಕಾದ್ರಿ ಮಗನಾ… ಸರಿ ಅವನೂ ನೀನು ಒಟ್ಟಿಗೆ ತಿನ್ನುವಿರಂತೆ…” ಎಂದಳು ಅಮ್ಮ. ಕಾಸಿಮ್ ಅದ್ದುನನ್ನು ಕರೆದ. ಅದ್ದು ಜೊಳ್ಳನೆ ಬೀಳುವ ನಳ್ಳಿನೀರಿನಲ್ಲಿ ಕೈತೊಳೆದು ತಟ್ಟೆಯ ಮುಂದೆ ಕೂತ. ಕಾಗದದಂತಹ ತೆಳ್ಳಗಿನ ಅಕ್ಕಿ ರೊಟ್ಟಿ, ತುಪ್ಪ ಸವರಿದ್ದು, ಜೊತೆಗೆ ಆಡಿನ ಮಾಂಸದ ಪಲ್ಯ. ನೋಂಬು ಬಿಟ್ಟ ನಂತರ ರಾತ್ರಿ ಮನೆ ಮಂದಿಯೆಲ್ಲ ಜೊತೆಗೆ ಕೂತು ತಿನ್ನುವ ರುಚಿರುಚಿಯಾದ ರೊಟ್ಟಿ. ಆದರೆ ಅದ್ದುನ ಅಮ್ಮ ಮನೆಯಲ್ಲಿ ಮಾಡುವ ರೊಟ್ಟಿ ದಪ್ಪ ದಪ್ಪದ್ದು. ಹಿಂದೊಮ್ಮೆ ಅದ್ದು ಅಮ್ಮನೊಂದಿಗೆ ತೆಳುರೊಟ್ಟಿ ಮಾಡು ಅಂತ ಹೇಳಿದ್ದ ಅದಕ್ಕೆ “ಅದೆಲ್ಲ ರಗಳೆ ಮಾಡುತ್ತಾ ಕೂರೂದಕ್ಕೆ ನಂಗೆಲ್ಲಿ ಪುರ್‍ಸೊತ್ತಿದೆ ಮಗೂ… ಬೀಡಿ ಕಟ್ಬೇಕಲ್ಲಾ…” ಎಂದಿದ್ದಳು. ಈವತ್ತು ಮತ್ತೆ ಅಮ್ಮನೊಡನೆ ಹೇಳಿ ಹೀಗಿದ್ದೇ ರೊಟ್ಟಿ ಮಾಡಿಸ್ಬೇಕು ಎಂದುಕೊಂಡ.
ಇದನ್ನು ಓದಿದ್ದೀರಾ?: ತ್ರಿವೇಣಿ ಅವರ ಕತೆ | ನರಬಲಿ
ಬೆಂಕಿಯ ಮುಂದೆ ರೊಟ್ಟಿ ಸುಡುತ್ತಾ ಕೂತ ಅಮ್ಮನನ್ನು ಕಂಡು ರೊಟ್ಟಿ ತಿನ್ನುತ್ತಾ ಕೂತ ಕಾಸಿಮ್‌ನಿಗೇನನ್ನಿಸಿತೋ ”ಅಮ್ಮ ನಿಂಗೂ ನೋಂಬುಂಟಲ್ಲಾ ನೀನು ಕೂಡಾ ಅಪ್ಪನಂತೆ ಸೊಲುಪ ಹೊತ್ತು ನಿದ್ದೆ ಮಾಡ್ಬಾರ್‍ದಾ…?” ಎಂದ. “ಮತ್ತೆ ಮನೆಕೆಲಸ, ಉಪವಾಸ ಬಿಡೂದಕ್ಕೆ ತಿಂಡಿ ಎಲ್ಲ ತಯಾರಿ ಮಾಡೋದು ಯಾರು ಮಾರಾಯ? ಗಂಡಸರ ಹಾಗೆ ಹೆಂಗಸರು ಸುಸ್ತಾಗ್ತದೆಂತ ಕೂತರೆ, ನಿದ್ದೆ ತೆಗೆದರೆ ಆಗ್ತದಾ?” ಎಂದು ಅಮ್ಮ ನಕ್ಕಳು.
ಕಾಸಿಮ್‌ನ ದೊಡ್ಡಕ್ಕ ಜಮೀಲಾ ಒಳಗೆ ಬಂದವಳು “ಅರೆ, ಇನ್ನೂ ಹೊತ್ತು ಕಂತಿಲ್ಲ. ಆಗಲೇ ಉಪವಾಸ ಬಿಡೂದಕ್ಕೆ ಶುರುವಾಯ್ತಾ?” ಎಂದು ತಮಾಷೆ ಮಾಡಿದಳು. ಅದ್ದು ಕಸಿವಿಸಿಕೊಂಡು, “ನಂಗೆ ನೋಂಬು ಇಲ್ಲ…” ಎಂದ. “ನೋಂಬು ಇಲ್ಲದವ್ರು ಹೀಗೆ ಬಹಿರಂಗವಾಗಿ ತಿನ್ನಕೂಡ್ದು ಅಂತ ಗೊತ್ತಿಲ್ವಾ?” ಎಂದಳು ಜಮೀಲಾಕ್ಕ.
“ಚಿಕ್ಕ ಮಕ್ಕಳನ್ಯಾಕೆ ಸತಾಯಿಸುತ್ತಿ ಜಮೀಲಾ? ಅಕ್ಕಿ ತೊಳ್ದು ಅನ್ನಕ್ಕಿಡು ನೋಡೋಣ… ನೀವು ತಿನ್ನಿ ಮಕ್ಳೇ…” ಎಂದು ಕಾಸಿಮ್‌ನ ಅಮ್ಮ ಜಮೀಲಾಳ ತಮಾಷೆಯನ್ನು ನಿಲ್ಲಿಸಿದ್ಲು. ಪೆಚ್ಚಾಗಿದ್ದ ಅದ್ದು ಸಮಾಧಾನದ ಉಸಿರುಬಿಟ್ಟ.
”ಜಮೀಲಾ, ನೀನು ಮಹಡಿಮೇಲೆ ಹೋಗಿ ಬಾ. ನಿನ್ನ ಗಂಡ ಎದ್ದಿದ್ದಾನೋ ಏನೋ… ಏನಾದ್ರೂ ಬೇಕಾಂತ ನೋಡಿ ಬಾ…” ಎಂದಳು ಅಮ್ಮ. ಜಮೀಲಾಕ್ಕ ಮಹಡಿಗೆ ಹೋದಳು.
ಅದ್ದುನ ಕಿವಿಯಲ್ಲಿ ಕಾಸಿಮ್ ಪಿಸುಗುಟ್ಟಿದ, “ಬಾವ ಬಂದಿದ್ದಾರೆ. ಈವತ್ತು ಸಂಜೆ ಬಾವನ ನೋಂಬು ಬಿಡಿಸುವ ಸತ್ಕಾರ. ಅದಕ್ಕಾಗಿ ಅಮ್ಮ ಮಾಂಸದ ಸಮೋಸ, ಸಿಹಿ ಸಿಹಿ ಫಿರ್‍ನಿ, ಶಾವಿಗೆ ಪಾಯಸ, ಏನೆಲ್ಲ ತಿಂಡಿ ಮಾಡಿದ್ದಾಳೆ. ನಮ್ಮ ಬಾವನ ಮೊದಲನೆಯ ವರ್ಷದ ನೋಂಬಲ್ವಾ!” ಜಮೀಲಾಕ್ಕನ ಗಂಡನ ನೋಂಬು ಬಿಡಿಸುವುದನ್ನು ಅದ್ದುನಿಗೆ ನೋಡಬೇಕೆನಿಸಿತು. “ಅದು ಹೇಗೆ ಮಾರಾಯ ನಿನ್ನ ಬಾವನ ನೋಂಬು ಬಿಡಿಸೂದಂದ್ರೆ?” ಎಂದು ಕಾಸಿಮ್‌ನನ್ನು ಕೇಳಿದ.
ಇದನ್ನು ಓದಿದ್ದೀರಾ?: ಯಶವಂತ ಚಿತ್ತಾಲ ಅವರ ಕತೆ | ಮುಖಾಮುಖಿ
“ಹೇಗೆ ಗೊತ್ತಾ, ದೊಡ್ಡ ಮಕ್ಮಲಿನ ಜಮಖಾನಾ ಹಾಸಿರ್‍ತಾರೆ. ಅದರ ಮೇಲೆ ಸುಂದರ ಚಿತ್ರಗಳಿರುವ ಸುಪುರ ಹಾಕ್ತಾರೆ. ಮೇಲೆ ಬಣ್ಣ ಬಣ್ಣದ ಪಿಂಗಾಣಿ ಪಾತ್ರೆಯಲ್ಲಿ ಶರಬತ್ತು, ಫಿರ್‍ನಿ, ಸಮೋಸ, ಖೀರ್, ಬದಾಮಿ, ಉತ್ತುತ್ತೆ, ಮುಸಿಂಬಿ, ಸೇಬು, ದ್ರಾಕ್ಷಿ ಹಣ್ಣುಗಳು ಎಲ್ಲ ಇಡ್ತಾರೆ. ಸಂಜೆ ಸೂರ್ಯ ಕಂತಿದ ಮೇಲೆ ಬಾವ ಮತ್ತು ನಾವೆಲ್ಲ ಒಟ್ಟಿಗೆ ಕೂತು ‘ಬಿಸ್ಮಿಲ್ಲಾ’ ಹೇಳಿ ತಿನ್ನೂದು. ನಮ್ಮ ಅಜ್ಜನ ಮನೆಯಲ್ಲಿ ಅಪ್ಪನನ್ನು ಕರೆದು ಹೀಗೆಯೇ ಈಗ್ಲೂ ನೋಂಬಿನ ಸತ್ಕಾರ ಮಾಡ್ತಾರೆ ಗೊತ್ತಾ?” ಎಂದು ಕಾಸಿಮ್ ವಿವರಿಸಿದ.
ಅದ್ದು ಕಾಸಿಮ್ ಹೇಳಿದ್ದನ್ನೇ ಊಹಿಸಿಕೊಂಡು ಮನಸ್ಸಿನಲ್ಲಿ ಚಿತ್ರಿಸಿಕೊಂಡ. ಅಲ್ಲಾಹ ಕಾಸಿಮ್‌ನವರಿಗೆ ಈ ದುನಿಯಾದಲ್ಲಿ ಸ್ವರ್ಗ ಕೊಟ್ಟಿದ್ದಾನೆ. ನಮ್ಮಪ್ಪ ಹೇಳ್ತಾನೆ ನಮಗೆ ಸ್ವರ್ಗ ಸಿಗೋದು ಸತ್ತ ನಂತರವಂತೆ! ಅಲ್ಲಾಹ ಈ ದುನಿಯಾದಲ್ಲೂ ನಮಗೆ ಒಂಚೂರು ಸ್ವರ್ಗ ಕೊಟ್ಟಿದ್ದರೆ!
ಜಮೀಲಾಕ್ಕ ಹಿಂತಿರುಗಿ ಅಡುಗೆ ಕೋಣೆಗೆ ಬಂದಳು. “ಅವರಿನ್ನೂ ಎದ್ದಿಲ್ಲ. ಮಲಗಿದ್ದಾರೆ” ಎನ್ನುತ್ತಾ ಕಾಸಿಮ್‌ನ ಅಮ್ಮನ ಜೊತೆ ರೊಟ್ಟಿಯ ಹಿಟ್ಟಿನ ಉಂಡೆ ಕಟ್ಟತೊಡಗಿದಳು.
“ಅಮ್ಮ… ನೋಂಬಿದ್ದ ಹುಡುಗನ ಕತೆ ಹೇಳ್ತಿಯಾ? ಅದ್ದು ಕೇಳಬೇಕಂತ ಬಂದಿದ್ದಾನೆ…” ಎಂದು ರೊಟ್ಟಿ ತಿನ್ನುತ್ತಾ ಕಾಸಿಮ್ ಕೇಳಿದ. “ನಿನ್ನೆ ನಿಂಗೆ ಹೇಳಿದ್ನಲ್ಲಾ ಅಷ್ಟೇ ಅದ್ದುನಿಗೆ ಹೇಳು. ನಂಗೀಗ ಒಂಚೂರೂ ಪುರ್‍ಸೊತ್ತಿಲ್ಲ” ಎಂದಳು ಅಮ್ಮ. “ನಂಗೆ ಕತೆ ಹೇಳಲು ಬರೂದಿಲ್ಲ. ನೀನಾದ್ರೆ ತುಂಬ ಚಂದ ಹೇಳ್ತಿಯಾಮ್ಮ…” ಎಂದು ಕಾಸಿಮ್ ಪಟ್ಟು ಹಿಡಿದ. ಅದ್ದು ಕಿವಿ ನಿಮಿರಿಸಿ ಕೂತ.
“ನೋಂಬಿಲ್ಲದವ್ರಿಗೆ ನೋಂಬಿದ್ದ ಹುಡುಗನ ಕತೆ ಕೇಳ್ಬೇಕಾ…?” ಅಂತ ಜಮೀಲಾಕ್ಕ ಮತ್ತೆ ತಮಾಷೆ ಮಾಡಿ ನಕ್ಕಳು. ಉಪವಾಸವಿದ್ದದ್ದರಿಂದಲೋ ಏನೋ ಅವಳ ಮುಖ ಬಾಡಿತ್ತು. ತುಟಿ ಬಿಳಿಚಿಕೊಂಡಿತ್ತು. ನಕ್ಕಾಗ ಅವಳ ಕೆನ್ನೆಯಲ್ಲಿ ಬಿದ್ದ ಗುಳಿಯಿಂದಾಗಿ ಜಮೀಲಾಕ್ಕ ತುಂಬ ಚಂದ ಕಂಡು ಬಂದಳು. “ನನಗೂ ಅಕ್ಕ ಇದ್ದಿದ್ದರೆ” ಅಂತ ಅದ್ದುಗೆ ಆಸೆಯಾಯಿತು.
ಇದನ್ನು ಓದಿದ್ದೀರಾ?: ಚದುರಂಗ ಅವರ ಕತೆ | ನಾಲ್ಕು ಮೊಳ ಭೂಮಿ
“ನೀನು ಹಟ ಹಿಡಿದ್ರೆ ಮತ್ತೆ ನನ್ನನ್ನು ಕೆಲ್ಸ ಮಾಡ್ಲಿಕ್ಕೆ ಬಿಡ್ತಿಯಾ? ಈ ಉಪವಾಸದ ದಿನಗಳಲ್ಲಿ ನಿಮ್ಮ ಮದ್ರಸಾಕ್ಕೆ ರಜೆ ಕೊಡಕೂಡ್ದಪ್ಪಾ… ಕೇಳಿ ಹಾಗಾದ್ರೆ… ಒಂದೂರಲ್ಲಿ ಒಬ್ಬ ಏಳು ವರ್ಷದ ಹುಡುಗನಿದ್ದ. ನಿಮ್ಮ ಹಾಗೆ…” ಎನ್ನುತ್ತಾ ಅಮ್ಮ ರೊಟ್ಟಿ ಸುಡುವ ಜೊತೆಗೆ ಕತೆ ಹೇಳತೊಡಗಿದಳು. ಹುಡುಗ ತಾಯಿಯೊಂದಿಗೆ ಹಟ ಹಿಡಿದು ಉಪವಾಸ ಮಾಡಿದ್ದು, ಸಂಜೆಯಾಗುತ್ತಲೇ ಮುಖಬಾಡಿ, ಮೈ ಒಣಗುತ್ತಾ ಬಂದು ಅವನು ಸತ್ತು ಹೋದದ್ದು, ಆಗ ಅಲ್ಲಾಹನ ದೂತನೊಬ್ಬ ಫಕೀರನ ವೇಷದಲ್ಲಿ ಬಂದು ಅಲ್ಲಾಹನ ದಯೆಯಿಂದ ಬದುಕಿಸಿದ್ದು, ಮತ್ತೆ ಅವನು ತನ್ನ ತಂದೆತಾಯಿಗಳ ಜೊತೆಗೆ ಸುಖವಾಗಿ ಬಾಳಿದ್ದು. ಕತೆ ಕೇಳುತ್ತಾ ಅದ್ದು ರೋಮಾಂಚನಗೊಂಡ. ಕಾಸಿಮ್‌ನ ತಾಯಿ ಕತೆ ಹೇಳುವುದು ತುಂಬಾ ಚೆಂದ. ಅಮ್ಮನಿಗೂ ಈ ಕತೆ ಗೊತ್ತುಂಟಾಂತ ಕೇಳಬೇಕು ಎಂದುಕೊಂಡ ಅದ್ದು.
ಇಂದು ಅಮ್ಮನೊಂದಿಗೆ ಹಟ ಹಿಡಿದು ನಾಳೆಯ ನೋಂಬು ಮಾಡಬೇಕೆಂದುಕೊಂಡ ಅದ್ದು. ತಾನು ಸತ್ತರೆ ಅಲ್ಲಾಹನ ದೂತ ಬಂದು ಬದುಕಿಸುತ್ತಾನೆ. ಉಪವಾಸ ಮಾಡಿದಾಗ ದುವಾ ಮಾಡಿದರೆ ಅಲ್ಲಾಹ ಕೇಳಿದ್ದೆಲ್ಲವನ್ನೂ ಕೊಡುತ್ತಾನಂತೆ. ನಮ್ಮಪ್ಪ ಅಮ್ಮನಿಗೆ ಕಷ್ಟ ಕೊಡಬೇಡಾಂತ ಅಲ್ಲಾಹನನ್ನು ಬೇಡಿಕೊಳ್ಳಬೇಕು. ನಮಗೆ ಕೂಡ ಕಾಸಿಮ್‌ನವರಿಗಿರುವಂತಹ ಜನ್ನತುಲ್ ಫಿರ್‌ದೌಸ್‌ನಂತಹ ಮನೆ, ಚೆಂದದ ಬಟ್ಟೆಬರೆ ಕೊಡು ಅಂತ ಅಲ್ಲಾಹನನ್ನು ಕೇಳಬೇಕು.
ಅದ್ದು ರೊಟ್ಟಿ ತಿಂದು ಕೈತೊಳೆದ. “ನಾನು ಮನೆಗೆ ಹೋಗ್ಲಾ?” ಎಂದು ಕಾಸಿಮ್‌ನೊಂದಿಗೆ ಹೇಳಿದ, ಕತೆಯ ಗುಂಗಿನಲ್ಲಿದ್ದ ಕಾಸಿಮ್ “ಹೂಂ…” ಅಂದ. ಹೊರಟುನಿಂತ ಅದ್ದುನನ್ನು ಕಂಡು ಕಾಸಿಮ್ ಅಮ್ಮ “ನಿನ್ನಮ್ಮನಿಗೆ ಹಬ್ಬದ ದಿನ ನಮ್ಮಲ್ಲಿಗೆ ಬರ್‍ಲಿಕ್ಕೆ ಹೇಳು. ಈ ಸಲದ ಝಕಾತಿನ ಅಕ್ಕಿ, ಹಣ ಎಲ್ಲ ಇದೆ. ಕೊಡ್ತೇನೆ” ಎಂದಳು. ಅದ್ದು ‘ಹೂಂ…’ ಎಂದವನೇ ಹೊರಗೆ ಓಡಿದ.
ಹೊರಗೆ ಚಾವಡಿಗೆ ಬಂದಾಗ ಮಹಡಿಯ ಮೆಟ್ಟಿಲುಗಳನ್ನು ಕಂಡು ಕಾಸಿಮ್‌ನ ಬಾವನನ್ನು ನೋಡುವ ಕುತೂಹಲ ಮೂಡಿತು. ಮೆಟ್ಟಿಲುಗಳನ್ನು ಸರಸರನೆ ಹತ್ತಿಕೊಂಡು ಹೋದ. ಕೋಣೆಯ ಬಾಗಿಲು ಸ್ವಲ್ಪ ತೆರೆದಿತ್ತು. ಮೆಲ್ಲಗೆ ದೂಡಿದ. ಒಳಗೆ ನಸುಗೆಂಪು ಬಣ್ಣದ ಚಂದದ ದಪ್ಪ ಹಾಸಿಗೆಯ ಮೇಲೆ ಅವರು ಮಲಗಿದ್ದರು. ಅದ್ದು ಒಳಗೆ ಇಣುಕಿದಾಗ ಅವರು ಎದ್ದು ಕೂತರು. “ಅರೇ… ಯಾರೋ ಹುಡುಗಾ ನೀನು?” ಎಂದು ಕೇಳಿದರು. “ನಾನು…ಅದ್ದು…” ಅಂದ. “ಇಲ್ಲಿ ಬಾ…” ಅಂತ ಕರೆದಾಗ ಮೆಲ್ಲನೆ ಒಳಗೆ ಕಾಲಿಟ್ಟ ಅನುಮಾನಿಸುತ್ತಾ. ಅದ್ದುನ ತಲೆಯ ಮೇಲೆ ತಂಪಾಗಿ ಗಾಳಿ ಬೀಸುವ ಫ್ಯಾನು ಉರುಟಾಗಿ ತಿರುಗುತ್ತಿತ್ತು. ಅದರ ಮಧ್ಯದಲ್ಲಿ ಬಂಗಾರದ ಬಣ್ಣದ ಬೆಳಕಿನ ಗೊಂಚಲು ನೇತಾಡುತ್ತಿತ್ತು. ಸುತ್ತ ಕಿಟಕಿ ಬಾಗಿಲುಗಳಲ್ಲಿ ನೇತಾಡುವ ಸುಂದರ ಪರದೆಗಳು, ಕೋಣೆಯೊಳಗೆಲ್ಲ ಮೊಲಿಯಾರರು ಹಬ್ಬದಂದು ಪುಟ್ಟ ಪುಟ್ಟ ಬಾಟ್ಲಿಗಳಲ್ಲಿ ಮಾರುವ ಸೆಂಟಿನ ಪರಿಮಳ, ಬಹುಶಃ ಮೊಲಿಯಾರರ ಪೆಟ್ಟಿಗೆಯಲ್ಲಿದ್ದ ಎಲ್ಲ ಬಾಟ್ಲಿಗಳ ಸೆಂಟುಗಳನ್ನೂ ಕೋಣೆಯೊಳಗೆ ಚೆಲ್ಲಿದ್ದಾರೇನೋ… ಅಷ್ಟು ಪರಿಮಳ! ಈ ಸ್ವರ್ಗದಲ್ಲಿರುವ ಕಾಸಿಮ್‌ನ ಬಾವ ಪುಣ್ಯವಂತ. ಜಮೀಲಾಕ್ಕ ಜನ್ನತುಲ್ ಫಿರ್‍ದೌಸ್‌ನಲ್ಲಿರುವ ‘ಹೂರುಲ್ಲೀನ್’ ಅಪ್ಸರೆ.
ಇದನ್ನು ಓದಿದ್ದೀರಾ?: ಕೊಡಗಿನ ಗೌರಮ್ಮ ಅವರ ಕತೆ | ವಾಣಿಯ ಸಮಸ್ಯೆ
ಕಾಸಿಮ್‌ನ ಬಾವ ಹೇಳಿದರು, “ನಂಗೊಂದು ಪ್ಯಾಕೇಟು ಸಿಗರೇಟು ತರ್‍ತೀಯಾ? ಯಾರ ಬಳಿಯೂ ಹೇಳಬೇಡ…” ಹತ್ತು ರೂಪಾಯಿಯ ನೋಟನ್ನು ಕೊಟ್ಟರು. “ನೋಂಬು…” ಅದೇನೋ ಹೇಳಬೇಕೆಂದ ಅದ್ದು ನಾಲಗೆಯನ್ನು ತಡೆಹಿಡಿದ. ಕಾಸಿಮ್‌ನ ಬಾವ ನಕ್ಕರು. ಅದ್ದು ಹೊರಗೆ ಮೆಟ್ಟಿಲಿಳಿದು ಬಂದ. “ಡ್ರೂ…” ಎಂದು ಬಸ್ ಬಿಡುತ್ತಾ ಓಡಿದವನು ನಿಂತದ್ದು ಸೂರಪ್ಪನ ಬೀಡಾಬೀಡಿ ಗೂಡಂಗಡಿಯ ಮುಂದೆ. “ಒಂದು ಪಾಕೀಟು ಸಿಗ್ರೇಟು…” ಎಂದು ಅವನ ಮುಂದೆ ಹತ್ತು ರೂಪಾಯಿಯ ನೋಟನ್ನು ಚಾಚಿ ಹಿಡಿದ. ಸಿಗರೇಟು ತೆಗೆದುಕೊಂಡು ಚಿಲ್ಲರೆ ಹಣ ಪಡೆದು ಹಿಂತಿರುಗುವಾಗ ಅಲ್ಲಿಗೆ ಬಂದ ಇಸ್ಮಾಲಿ ಹಾಜಿಯವರು “ಯಾರಿಗೋ ಇದು ಈ ನೋಂಬು ದಿನಗಳಲ್ಲಿ ಸಿಗರೇಟು?” ಎಂದು ತುಟಿ ಸೊಟ್ಟಗೆ ಮಾಡಿ ಕೇಳಿದಾಗ “ಅದು…ಅದು…” ಎಂದು ಹೇಳಬೇಕಾದ್ದನ್ನು ತಡೆದುಕೊಂಡ. “ನಿನ್ನಪ್ಪಂಗೇ ಇರಬೇಕು. ಇಂತಹ ಬುದ್ದಿಯಿಂದಲೇ ನಿಮಗೆ ‘ಬಲಾಲ್’ ಬಂದಿರೂದು. ಇಸ್ಲಾಮಿಯತನ್ನು ಸೋಲುಪವು ಪಾಲಿಸದಿರುವುದರಿಂದಲೇ ನೀವು ಬರ್‍ಕತ್ತಾಗದಿರದು” ಎಂದರು ಹಾಜಿ. ತನ್ನ ಅಪ್ಪನ ಮೇಲಿನ ಇಲ್ಲ ಸಲ್ಲದ ಆರೋಪ ಕೇಳಿ ಸಿಟ್ಟಾದರೂ ಕಾಸಿಮ್ ಬಾವನಿಗಾಗಿ ತಡೆದುಕೊಂಡ. ಅಪ್ಪ, ಅಮ್ಮ ನೋಂಬು, ನಮಾಜು ಎರಡನ್ನೂ ಎಂದೂ ತಪ್ಪಿಸಿದವರಲ್ಲವಾದರೂ ನಾವು ‘ಬರ್‍ಕತ್ತಾ’ಗಲೇ ಇಲ್ಲ. ಇದೇಕೆ ಹೀಗೆ…? ಎಂದುಕೊಳ್ಳುತ್ತಲೇ “ಅಪ್ಪನಿಗಲ್ಲ… ಇದು” ಎಂದ ಅದ್ದು. “ಸುಳ್ಳು ಹೇಳುವುದನ್ನು ನಿನಗೆ ಕಲಿಸಿ ಕೊಡ್ಬೇಕಾ… ಅಂತವನ ಮಗನಲ್ವಾ ನೀನು…?” ಎಂದರು ಹಾಜಿ. ಅದ್ದುನಿಗೆ ಆಳು ಬಂದಂತಾಯಿತು. ಅಲ್ಲಿ ನಿಲ್ಲಲಾರದೆ ನಡೆಯತೊಡಗಿದ.
ಅದ್ದು ಮಹಡಿಯೇರಿ ಕೋಣೆಯ ಬಳಿ ಬರುವಾಗ ಒಳಗಿನಿಂದ ಯಾರೋ ಮಾತಾಡುತ್ತಿರುವುದು ಕೇಳಿಸಿತು. “ನಾನು ಹೇಳಿದ ಹಾಗೆ ಕೇಳ್ಬೇಕು. ತಪ್ಪಿ ಎದುರು ಮಾತಾಡಿದ್ರೆ ಸೊಡ್ಡಿಗೆ ಜಪ್ಪುತ್ತೇನೆ…” ಎಂದದ್ದು ಕಾಸಿಮ್‌ನ ಬಾವ. ”ಅದೆಷ್ಟು ಹಣ ನಿಮ್ಗೆ ಅಪ್ಪನಿಂದ ಕೊಡಿಸೋದು? ನೀವೇನಾದ್ರೂ ಸಂಪಾದನೆ ಮಾಡದಿದ್ರೆ ಹ್ಯಾಗೆ? ಅಪ್ಪ ಎಷ್ಟೂಂತ ಕೊಟ್ಟಾರು?” ಇದು ಜಮೀಲಾಕ್ಕನ ಸ್ವರ. ಪಟಾರನೆ ಪೆಟ್ಟಿನ ಶಬ್ದ, ಅಳು…ಅದ್ದು ಗಡಗಡನೆ ನಡುಗಿದ. ಇಲ್ಲಿಂದ ಕೂಡಲೇ ಓಡುವ ಎನಿಸಿತು. ಕೈಯಲ್ಲಿದ್ದ ಸಿಗರೇಟು ಚಿಲ್ಲರೆ ಹಣ ತಡೆದು ನಿಲ್ಲಿಸಿತು. ಬಾಗಿಲ ಬಡಿದ. ಸ್ವಲ್ಪ ಹೊತ್ತಿನಲ್ಲೇ ಕಾಸಿಮ್‌ನ ಬಾವ ಬಾಗಿಲು ತೆರೆದರು. ಅದ್ದುನನ್ನು ಕಂಡು ಜಮೀಲಾಕ್ಕ ಕಣ್ಣೂರೆಸಿಕೊಳ್ಳುತ್ತಾ ಹೊರಗೆ ಹೋದಳು. ಅದ್ದು ಸಿಗರೇಟನ್ನು ಅವರ ಕೈಗೆ ಕೊಟ್ಟ. ಚಿಲ್ಲರೆ ಹಣವನ್ನು ಅವರ ಕೈಗೆ ಕೊಟ್ಟು ಹೊರಡಲನುವಾದಾಗ ಅವರು ಸಿಗರೇಟು ತುಟಿಗಿಟ್ಟು ಲೈಟರಿನಿಂದ ಬೆಂಕಿ ಹೊತ್ತಿಸುವುದನ್ನು ನೋಡಿ “ಸಿಗ್ರೇಟು ಸೇದಿದ್ರೆ ನೋಂಬು ಹೋಗುತ್ತದೆ…” ಎಂದ. “ನಂಗೆ ಬುದ್ಧಿ ಹೇಳ್ತಿಯೇನೋ ಹುಡುಗಾ…” ಎಂದರು. ಅವರು ಗದರಿದ ಕೂಡಲೇ ಅದ್ದು ಅಲ್ಲಿಂದ ಕಂಬಿಕಿತ್ತ. ‘ಸ್ವರ್ಗದಲ್ಲಿ ಹರಾಮ್ ಅನ್ನೂದೇ ಇಲ್ಲ. ಭೂಮಿಯಲ್ಲಿ ಹರಾಮ್ ಆದದ್ದು ಸ್ವರ್ಗದಲ್ಲಿ ಹಲಾಲ್ ಆಗಿರುತ್ತದೆ.’ ಕಾಸಿಮ್‌ನವರ ಮನೆಯೂ ಒಂದು ಸ್ವರ್ಗ ತಾನೇ?
ಮನೆಯ ಹೊರಗೆ ಆಗಲೇ ನಿದ್ದೆಯಿಂದೆದ್ದ ಕಾಸಿಮ್‌ನ ಅಪ್ಪ ಗಟ್ಟಿಯಾಗಿ ಮಾತಾಡುತ್ತಿರುವುದು ಕೇಳಿತು. ಅದ್ದು ಅಂಗಳಕ್ಕೆ ಬಂದು ಅತ್ತಿತ್ತ ನೋಡಿದ. ಮಸೀದಿಯ ಮುಂದೆ ಹರಕು ಬಟ್ಟೆ ತೊಟ್ಟು ಯಾವಾಗಲೂ ಬೇಡುತ್ತಾ ನಿಲ್ಲುವ ಹುಚ್ಚನನ್ನು ಕಾಸಿಮ್‌ನ ಅಪ್ಪ ಗದರಿಸುತ್ತಿದ್ದರು, “ನಿಂಗೆ ನೋಂಬಿನ ದಿನ ಅಂತ ಗೊತ್ತುಂಟಾ ಇಲ್ಲವಾ? ಊಟ ಹಾಕಿ ಅಂತ ಕೇಳುತ್ತಿದ್ದಿಯಲ್ಲಾ ನಾಚಿಕೆ ಇಲ್ಲದವ್ನೇ! ಇದಕ್ಕಾಗಿ ನಿನ್ನನ್ನು ಅಲ್ಲಾಹ ಹೀಗೆ ಮಾಡಿಟ್ಟಿದ್ದಾನೆ… ನಡಿಯಾಚೆ” ಎಂದು ಕಾಸಿಮ್‌ನ ಅಪ್ಪ ಗದರಿಸಿದಾಗ ಹುಚ್ಚ ಒಂಥರಾ ನಕ್ಕು ಅಲ್ಲಿಂದ ಓಡಿಬಿಟ್ಟ. ಮುಸ್ಲಿಮರ ಮನೆಯಲ್ಲದೆ ಬೇರೆಯವರ ಮನೆಯಲ್ಲಿ ಬೇಡಲಿಕ್ಕೆ ಈ ಹುಚ್ಚ ಹೋಗೋದಿಲ್ಲವಂತೆ. “ಇಲ್ಲ… ಈ ಹುಚ್ಚನಿಗೂ ಹೀಗೆಯೇ ಒಂದು ದಿನದ ನೋಂಬು…” ಎಂದುಕೊಂಡು ಅದ್ದು ಒಳಗೊಳಗೇ ನಕ್ಕ. ಹುಚ್ಚ ಹೋದನಂತರ ತಿರುಗಿದ ಕಾಸಿಮ್‌ನ ಅಪ್ಪನನ್ನು ಕಂಡು ಸರಿದು ನಿಂತ. ಹುಚ್ಚನಿಗೆ ಜೋರು ಮಾಡಿದ ಸಿಟ್ಟಿನ್ನೂ ಅವರ ಮುಖದಿಂದ ಮಾಯವಾಗಿಲ್ಲ. ”ಯಾಕೋ ಹುಡುಗಾ ಇಲ್ಲಿ ನಿಂತಿದ್ದಿಯಾ, ಹೋಗೋ ಮನೆಗೆ…” ಎಂದು ಅದೇ ಸ್ವರದಲ್ಲಿ ಗದರಿಸಿದರು. ಅದ್ದುನಿಗೆ ಇದು ಅನಿರೀಕ್ಷಿತ. ಭಯಗೊಂಡು ಅಳು ಬರುವಂತಾಯಿತು. ಅಲ್ಲಿ ನಿಲ್ಲದೆ ಮನೆಯ ಕಡೆ ಕಾಲು ಹಾಕಿದ.
ಇದನ್ನು ಓದಿದ್ದೀರಾ?: ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ ಕತೆ | ಕಮ್ಮಾರ ವೀರಭದ್ರಾಚಾರಿ ಜೋಯಿಸನಾದುದು
ಅದ್ದು ತನ್ನ ಮನೆಯೊಳಗೆ ಹೋದಾಗ ಅಪ್ಪ ಬೀಡಿ ಕಟ್ಟಿ ತಾನೇ ನೂಲು ಸುತ್ತುತ್ತಿದ್ದ. ಅಮ್ಮ ಒಳಗೆ ಸಂಜೆಯ ಅಡುಗೆಯ ತಯಾರಿಕೆಯಲ್ಲಿ ತೊಡಗಿದ್ದಳು. ಆಗಾಗ ಕೆಮ್ಮುತ್ತಿದ್ದಳು. ಅಪ್ಪನೂ ಬೀಡಿ ಕಟ್ಟುತ್ತಾ ಕೆಮ್ಮುತ್ತಿದ್ದ. ಅದ್ದು ಒಳಗೆ ಹೋದವನೇ ಅಮ್ಮನ ಬಳಿಗೋಡಿದ. “ಅಮ್ಮಾ… ನಾಳೆ ನಾನು ನೋಂಬು ಮಾಡುತ್ತೇನೆ” ಎಂದ. “ನೀನು ಉಪವಾಸ ಮಾಡೂದು ಬೇಡ ಮಗಾ… ನಿಂಗೇನೂ ಕಡ್ಡಾಯ ಆಗಿಲ್ಲ” ಎಂದು ಅಮ್ಮ ಸಮಜಾಯಿಸಿದರೂ ಅದ್ದು ಬಿಡಲಿಲ್ಲ. “ಇಲ್ಲ, ನಾನು ನೋಂಬು ಮಾಡಿಯೇ ಮಾಡುತ್ತೇನೆ” ಎಂದು ಹಟ ಹಿಡಿದ. ಅಮ್ಮ ‘ಹೂಂ’ ಅನ್ನುವವರೆಗೂ ಬಿಡಲಿಲ್ಲ.
”ಓಹೋ… ನಾಳೆ ನನ್ನ ಮಗ ‘ನೋಂಬು’ ಮಾಡುವವನಾ?” ಎನ್ನುತ್ತಾ ಅಡುಗೆ ಕೋಣೆಯಿಂದ ಹೊರಬಂದ ಅದ್ದುನನ್ನು ಅಪ್ಪ ಕೇಳಿದ. “ಹೌದು…” ಎಂದ ಅದ್ದು. “ನೋಂಬು ಮಾಡಿ ಅಲ್ಲಾಹನೊಂದಿಗೆ ದುವಾ ಮಾಡಿದರೆ ಕೇಳಿದ್ದೆಲ್ಲಾ ಕೊಡ್ತಾನಲ್ಲಾಪ್ಪ…?” ಎಂದು ಕೇಳಿದಾಗ ಬೀಡಿ ಕಟ್ಟುತ್ತಿದ್ದ ಅಪ್ಪ “ನನ್ನ ಮುದ್ದು ಮಗ ಅಲ್ಲಾಹನೊಂದಿಗೆ ಏನು ಕೇಳುತ್ತಾನೆ?” ಎಂದು ನಗುತ್ತಾ ಕೇಳಿದ. ಅದ್ದು ಯೋಚನೆಯಲ್ಲಿ ಬಿದ್ದ. ಕೇಳಬೇಕೆಂದುಕೊಂಡದ್ದು ನೆನಪಾಗಲೇ ಇಲ್ಲ. ಮತ್ತೆ ಅಪ್ಪ ಕೆಮ್ಮತೊಡಗಿದ. ಈ ಸಲದ ಕೆಮ್ಮು ದೀರ್ಘವಾಗಿತ್ತು. ಕೆಮ್ಮಿನ ರಭಸಕ್ಕೆ ಬೀಡಿಯ ಕುಕ್ಕೆಯಲ್ಲಿದ್ದ ಬೀಡಿಗಳು ಚೆಲ್ಲಿದವು. ಅದ್ದು ಬೀಡಿಗಳನ್ನು ಹೆಕ್ಕಿ ಬುಟ್ಟಿಯೊಳಗೆ ಹಾಕುತ್ತಾ ಹೇಳಿದ, “ಅಪ್ಪ… ನಿನ್ನ ಮತ್ತು ಅಮ್ಮನ ಕೆಮ್ಮು ವಾಸಿಯಾಗ್ಲಿಕ್ಕೆ ದುವಾ ಮಾಡುತ್ತೇನೆ…” ಅಪ್ಪನ ಮುಖದಲ್ಲಿ ನಗೆ ಮೂಡಿತು. ಒಂದು ಕ್ಷಣ ಬೀಡಿ ಕಟ್ಟುವುದನ್ನು ನಿಲ್ಲಿಸಿ ಅದ್ದುನನ್ನು ಹತ್ತಿರ ಕರೆದು ಮೈಗೆ ಒತ್ತಿಕೊಂಡ. “ಈ ಕೆಮ್ಮು ನಮ್ಮ ಬದುಕಿಗೇ ಅಂಟಿದ್ದು, ಬಿಟ್ಟು ಹೋಗುವುದು ಇನ್ನು ಗೋರಿಯೊಳಗೆ ಮಾತ್ರ…” ಎಂದು ಅಪ್ಪ ನಿಟ್ಟುಸಿರುಬಿಟ್ಟ. ಮತ್ತೇ ಬೀಡಿ ಕಟ್ಟಿಕೊಳ್ಳುತ್ತಾ ”ಯಾ ಅಲ್ಲಾಹ್… ನಮ್ಮ ಮಗನಾದ್ರೂ ಇದರಿಂದ ಬಿಡುಗಡೆ ಹೊಂದುವುದು ಸಾಧ್ಯವಾಗುತ್ತಿದ್ದರೆ!” ಅರೆತೆರೆದ ಕಣ್ಣಿನಿಂದ ಮೇಲೆ ಸೂರಿನತ್ತ ನೋಡುತ್ತಾ ಅಪ್ಪ ನಿರಾಕಾರನಾದ ಸೃಷ್ಟಿಕರ್ತನೊಂದಿಗೆ ಮಾತಾಡಿದ.
ಅದ್ದು ಅಪ್ಪ ಕಟ್ಟಿದ ಬೀಡಿಗೆ ನೂಲು ಸುತ್ತುತ್ತಾ ಕೂತಾಗ ಅಲ್ಲಾಹನ ಬಗ್ಗೆ ‘ದರ್ಸಿ’ನಲ್ಲಿ ಮೊಲಿಯಾರರು ಹೇಳಿಕೊಟ್ಟಿದ್ದು ನೆನಪಾಯಿತು- ‘ಅಲ್ಲಾಹನು ಒಬ್ಬನೇ. ಅವನು ಅನಾದಿಯಿಂದ ಇರುವವನೂ, ಯಾವ ಕುಟುಂಬ ಸಂಸಾರವಿಲ್ಲದವನೂ ಆಗಿದ್ದಾನೆ. ಅವನು ಕಣ್ಣಿಲ್ಲದೆ ಕಾಣುವವನೂ… ಕಿವಿಯಿಲ್ಲದೆ ಕೇಳುವವನೂ, ಎಲ್ಲವನ್ನೂ ಸೃಷ್ಟಿಸಿದವನೂ ಆಗಿದ್ದಾನೆ.’ ಅಲ್ಲಾಹ ಕಣ್ಣಿಲ್ಲದೆ ಎಲ್ಲವನ್ನೂ ಕಾಣುವವನಾದ್ದರಿಂದ ಕಾಸಿಮ್‌ನ ಬಾವ ಸಿಗರೇಟು ಸೇದಿದ್ದು ನೋಡಿರಬಹುದು. ಅಪ್ಪ ಕೆಮ್ಮುತ್ತಿದ್ದರೂ ತಲೆ ತಿರುಗಿದರೂ ಬಿಡದೆ ನೋಂಬು ಮಾಡುತ್ತಿರುವುದನ್ನು ನೋಡಿರಬಹುದು. ಆದರೂ ಕಾಸಿಮ್‌ನ ಬಾವ ಇರೂದು ಸ್ವರ್ಗದಂತಹ ಮನೆಯಲ್ಲಿ… ನಾವಿರೋದು ಮತ್ತು ಸೋಗೆಯಲ್ಲಿ ಕಟ್ಟಿದ ಗುಡಿಸಲಲ್ಲಿ… ಇದೇಕೆ ಹೀಗೆ? ಬಹುಶಃ ಅಪ್ಪ ಹೇಳುವ ಹಾಗೆ ಸತ್ತ ನಂತರ ನಮ್ಮನ್ನು ಅಲ್ಲಾಹ ಸುಖದಲ್ಲಿಡುತ್ತಾನೆನ್ನುವುದು ಸತ್ಯವಿರಬೇಕು. ಪಕ್ಕನೆ ಅದೇನೋ ನೆನಪಾದಂತೆ ಅಮ್ಮನನ್ನು ಕೂಗಿ ಹೇಳಿದ. ”ಅಮ್ಮ… ಕಾಸಿಮ್‌ನ ಅಮ್ಮ ಹೇಳಿದ್ರು, ಹಬ್ಬದ ದಿನ ಅವರಲ್ಲಿಗೆ ಹೋಗಬೇಕಂತೆ. ಝಕಾತಿನ ಹಣ, ಅಕ್ಕಿ ಎಲ್ಲಾ ಕೊಡುತ್ತಾರಂತೆ” ಒಳಗಿಂದ ಅಮ್ಮ ”ನಮ್ಗೆ ದಾನಕ್ಕೆ ಕೈಯೊಡ್ಡಲಿಕ್ಕೇನೇ ಆಯ್ತು…” ಎಂದು ಗೊಣಗಿದಳು.
ಇದನ್ನು ಓದಿದ್ದೀರಾ?: ಕುವೆಂಪು ಅವರ ಕತೆ | ಧನ್ವಂತರಿಯ ಚಿಕಿತ್ಸೆ
ಸಂಜೆ ಕಾಸಿಮ್ ಮನೆಯ ಬಳಿಗೆ ಬಂದಿದ್ದ. “ಅದ್ದು ನಾನು ಮಸೀದಿಗೆ ಹೋಗುತ್ತೇನೆ. ಈವತ್ತು ನಮ್ಮ ಮನೆಯ ತಿಂಡಿ ಶರಬತ್ತು ಹಣ್ಣು ಎಲ್ಲಾ ಮಸೀದಿಗೆ ಕೊಂಡು ಹೋಗಿದ್ದಾರೆ. ಮಸೀದಿಯಲ್ಲಿ ಈವತ್ತು ‘ನೋಂಬು ತೆರೆಸುವುದು’ ನಮ್ಮ ಲೆಕ್ಕದಲ್ಲಿ… ನೀನು ಬರ್ತಿಯಾ…?” ಎಂದ. ಅದ್ದು ಅಮ್ಮನ ಬಳಿಗೋಡಿ “ಅಮ್ಮಾ ನಾನು ಮಸೀದಿಗೆ ನೋಂಬು ತೆರೆಸೂದಕ್ಕೆ ಹೋಗ್ಲಾ?” ಎಂದ. “ಛೇ…ಛೇ… ನೋಂಬಿದ್ದವರು ಮಾತ್ರ ಅದಕ್ಕೆ ಹೋಗಬೇಕು. ನೋಂಬಿದ್ದವರ ಪಾಲಿಂದು ನೀವು ತಿಂದರೆ ಅವರಿಗೆ ಕಮ್ಮಿಯಾಗುತ್ತದೆ. ಬೇಡ ಮಗಾ… ರಾತ್ರಿ ಅಪ್ಪನ ಜೊತೆಗೆ ತರಾವೀಹ್ ನಮಾಜಿಗೆ ಹೋಗುವಿಯಂತೆ…” ಎಂದಳು ಅಮ್ಮ. ಅದ್ದು ಬೇಸರಗೊಂಡರೂ ಅಮ್ಮ ಹೇಳಿದ್ದು ಸರಿಯೆನಿಸಿತು. ಕಾಸಿಮ್‌ನಿಗೆ ಹೇಳಿದ, “ನಾನು ಬರೊದಿಲ್ಲ, ಅದು ನೋಂಬಿದ್ದವರಿಗೆ ಮಾತ್ರವಂತೆ, ನಾನು ರಾತ್ರಿ ತರಾವೀಹ್ ನಮಾಜಿಗೆ ಹೋಗೇನೆ. ನೀನೂ ಬರ್‍ತಿಯಾ…?”
ಕಾಸಿಮ್ ಕ್ಷಣ ನೊಂದುಕೊಂಡರೂ “ಸರಿ…” ಎಂದು ಅಲ್ಲಿಂದ ಓಡಿದ.
ರಾತ್ರಿ ಮಗ ಮಸೀದಿಗೆ ಹೋಗುತ್ತಾನಲ್ಲಾ ಎಂದು ಅಮ್ಮ ಅದ್ದುನನ್ನು ಪುಸಲಾಯಿಸಿ ಪುಟ್ಟ ಲುಂಗಿಯನ್ನು ಉಡಿಸಿದಳು. ಮೇಲೆ ಶರ್ಟು, ಪುಟ್ಟ ಟೋಪಿ ತೊಡಿಸಿದಳು. ಅಪ್ಪನ ಹಿಂದೆ ಅದ್ದು ಠೀವಿಯಿಂದ ಮಸೀದಿಗೆ ಹೋದ.
ಮಸೀದಿಯಲ್ಲಿ ಆಗಲೇ ಕೆಲವು ಮಕ್ಕಳು, ಹಿರಿಯರು ಸೇರಿದ್ದರು. ಮಕ್ಕಳ ಗುಂಪಿನಲ್ಲಿ ಅದ್ದು ಕೂಡಾ ಸೇರಿಕೊಂಡ. ಅದ್ದು ಸೇರುವಾಗಲೇ ಗುಂಪಿನಲ್ಲಿ ಯಾರ್ಯಾರದ್ದು ಎಷ್ಟೆಷ್ಟು ನೋಂಬು ಆಯ್ತು ಎನ್ನುವ ಲೆಕ್ಕ ನಡೆಯುತ್ತಿತ್ತು. ಷರೀಫ್, ಜುಬೇರ್, ಕರೀಮ್, ಹನೀಫ್, ಲತೀಫ್, ಬಶೀರ್ ಎಲ್ಲ ತಮ್ಮದು ಎಷ್ಟೆಷ್ಟು ನೋಂಬು ಎನ್ನುವುದರ ಲೆಕ್ಕ ಹೇಳುತ್ತಿದ್ದರು. ಅದ್ದು ಷರೀಫ್ ಮತ್ತು ಜುಬೇರ್‌ನನ್ನು ನೋಡಿ ಮುಖ ಗಂಟಿಕ್ಕಿಕೊಂಡ. ‘ಆಟದಲ್ಲಿ ಸೇರಿಸ್ಕೊಳ್ಳಲಿಲ್ಲವಲ್ಲಾ ಇವ್ರು ಬೆಳಗ್ಗೆ!’ ಷರೀಫ್ ತನ್ನ ನೋಂಬಿನ ಲೆಕ್ಕ ಕೊಡುತ್ತಾ “ನನ್ನದು ಹನ್ನೆರಡು ನೋಂಬು ಆಯ್ತು” ಎಂದ. ಅದ್ದು ಲೆಕ್ಕ ಮಾಡಿದ. “ಇನ್ನೂ ಆದದ್ದು ಹತ್ತು ನೋಂಬು ಮಾತ್ರ. ಇವನಿಗೆ ಹನ್ನೆರಡು ಆಯ್ತಂತೆ. ಬಂಡಲ್ ಬಿಡ್ತಾನೆ…” ಎಂದ ಅದ್ದು. ಹುಡುಗರೆಲ್ಲ ಗೊಳ್ಳನೆ ನಕ್ಕರು. ಷರೀಫ್ ಪೆಜ್ಜಾದ. ಅದ್ದು ಬೆಳಗ್ಗಿನ ಆಟದ ಮೈದಾನದಲ್ಲಿ ಆದ ಸೋಲನ್ನು ತೀರಿಸಿಕೊಂಡ. ಮಕ್ಕಳ ನಗು ಮಾತು ಕೇಳಿ ದೊಡ್ಡವರಿಗೆ ತಲೆಚಿಟ್ಟು ಹಿಡಿದಂತಾಗಿತ್ತು. “ಮಸೀದಿಯೊಳಗೆ ಗಲಾಟೆ ಮಾಡಕೂಡದು. ಶಾಂತವಾಗಿರ್‍ಬೇಕು. ಸುಮ್ಮನಿರದಿದ್ದರೆ ನಿಮ್ಮನ್ನೆಲ್ಲ ಹೊರಗೆ ಎಳೆದು ಹಾಕ್ತೇನೆ” ಎಂದು ಅಬೂಕಾಕಾ ಜೋರು ಮಾಡಿದಾಗ ಮಕ್ಕಳೆಲ್ಲ ಮೌನವಾದರು. ದೊಡ್ಡವರು ನಮಾಜು ಮಾಡುವುದನ್ನು ನೋಡಿ ಮಕ್ಕಳೂ ಅನುಕರಿಸಿದರು. ನಮಾಜು ಮುಗಿದು ‘ದಿಕ್ರ್’ ಹೇಳುವಾಗ ಮತ್ತೆ ಮಕ್ಕಳಲ್ಲಿ ಯಾರು ಜೋರಾಗಿ ಹೇಳುವುದು ಎನ್ನುವ ಪೈಪೋಟಿ ನಡೆಯಿತು. ಮತ್ತೆ ದೊಡ್ಡವರು ಪ್ರವೇಶಿಸಿ ಅವರನ್ನು ಹತೋಟಿಗೆ ತರಬೇಕಾಯಿತು. ದೀರ್ಘವಾದ ತರಾವೀಹ್ ನಮಾಜು ಮುಗಿಯುವಾಗ ಅದ್ದುನಿಗೆ ಸುಸ್ತಾಗಿತ್ತು. ಮನೆಗೆ ಹಿಂತಿರುಗುವಾಗ ಮಧ್ಯರಾತ್ರಿಯಾಗಿತ್ತು. ನಾಳಿನ ಉಪವಾಸ ಮಾಡುತ್ತೇನೆಂದು ಹಟಹಿಡಿದ ಅದ್ದುನಿಗೆ ರಾತ್ರಿ ನಿದ್ದೆ ಸರಿಯಾಗಿ ಹತ್ತಲಿಲ್ಲ. ಆಗಾಗ ಎಚ್ಚರಗೊಳ್ಳುತ್ತಿದ್ದ.
*
ಕೇರಿಯಲ್ಲಿ ಮೊದಲ ಜಾವದ ಕೋಳಿಯ ಕೂಗಿನ ಹೊತ್ತಿಗೆ ”ಸಹರಿಯ ಹೊತ್ತಾಯಿತು ಏಳಿ…” ಎಂದು ಹಾಡುತ್ತಾ ತಮಟೆ ಬಡಿಯುತ್ತಾ ‘ಅತ್ತಾಯ ಕೋಟಿಗಳು’ ಬಂದಾಗ ಅದ್ದು ಗಡಬಡಿಸಿ ಎದ್ದ. ಅಮ್ಮ ಆಗ್ಲೆ ಎದ್ದು ಅಡುಗೆಯ ಕೆಲಸದಲ್ಲಿ ತೊಡಗಿದ್ದಳು. “ಯಾಕೆ ಮಗೂ ಮಲಗಕೂಡದಾ?” ಎಂದಳು. ಅದ್ದು ಅಳತೊಡಗಿದ. “ಸರಿ ಮಾರಾಯ… ನೀನು ನೋಂಬು ಮಾಡು… ಅಳಬೇಡ…” ಎಂದು ಅಮ್ಮ ಸಮಾಧಾನ ಮಾಡಿದಳು.
ಇದನ್ನು ಓದಿದ್ದೀರಾ?: ಕೆ.ವಿ. ಅಯ್ಯರ್ ಅವರ ಕತೆ | ಅನಾಥೆ ಅನಸೂಯೆ
ಅಪ್ಪನೊಂದಿಗೆ ಮುಖ ಕೈಕಾಲು ತೊಳೆದು ಬಂದು ಊಟಕ್ಕೆ ಕೂತ. ಗಂಜಿ, ಒಣಮೀನು ಸುಟ್ಟದ್ದು, ಚಟ್ನಿ. ಊಟ ಮುಗಿದ ಕೂಡಲೇ ಅಪ್ಪ ‘ನಿಯ್ಯತ್’ ಹೇಳಿಕೊಟ್ಟರು. ”ನವೈತು ಸೌಮಖದಿನ್ ಅನ್ ಅದಾಯಿಫರಲ್ ರಮ್ಲಾನಿ ಹಾದಿಹಿಸ್ಸನತಿ ಲಿಲ್ಲಾಹಿತಿ ಅಲ… ಅಂದರೆ ಈ ವರ್ಷದ ಕಡ್ಡಾಯ ಕರ್ತವ್ಯವೆನಿಸಿದ ರಮ್ಜಾನ್ ತಿಂಗಳ ನಾಳೆಯ ದಿನದ ಉಪವಾಸವನ್ನು ಅಲ್ಲಾಹನಿಗಾಗಿ ಮಾಡುತ್ತೇನೆಂದು ದೃಢ ನಿಶ್ಚಯ ಮಾಡಿದ್ದೇನೆ.” ಅಪ್ಪ ಹೇಳಿಕೊಟ್ಟಂತೆ ಅದ್ದು ಹೇಳಿದ. ಸ್ವಲ್ಪ ಹೊತ್ತಿನಲ್ಲೇ ಮಸೀದಿಯ ಸುಬಹಭಾಂಗ್ ಕೇಳಿಬಂತು. ಅಪ್ಪ ನಮಾಜಿಗೆ ಹೋದರು. ಅದ್ದುನಿಗೆ ತೂಕಡಿಕೆ ಶುರುವಾಗಿ ಮತ್ತೆ ನಿದ್ರೆಯಲ್ಲಿ ಬಿದ್ದ.
ಬೆಳಿಗ್ಗೆ ಏಳುವಾಗ ಸೂರ್ಯ ಆಗಲೇ ಮಾರೆತ್ತರಕ್ಕೆ ಬಂದಿದ್ದ. ಅದ್ದು ಎದ್ದವನೇ ‘ನನಗೆ ನೋಂಬು ಇದೆ’ ಎಂದುಕೊಂಡು ಖುಷಿಯಾದ. ಮುಖ ತೊಳೆದವನು ಕಾಸಿಮ್‌ನಿಗೆ ಸುದ್ದಿ ಮುಟ್ಟಿಸಲು ಓಡಿದ. ಮನೆ ಹತ್ತಿರವಾದಂತೆ ಕಾಸಿಮ್‌ನ ಅಪ್ಪ ಕಂಡರೆ…? ಅನ್ನೋ ಅಳುಕು ಮೂಡಿತು. ಮನೆಯ ಮುಂದಿನ ತೆಂಗಿನಮರದ ಬುಡದಲ್ಲಿ ನಿಂತು ಯಾರಾದರೂ ಹೊರಗೆ ಬರುತ್ತಾರೋ ಎಂದು ಕಾದು ನಿಂತ. ಸ್ವಲ್ಪಹೊತ್ತಿನಲ್ಲಿ ಜಮೀಲಾಕ್ಕ ಹೊರಗೆ ಬಂದಳು. ”ಅರೆ… ನೋಂಬಿಲ್ಲದ ಹುಡುಗನಾ” ಎಂದು ನಕ್ಕಳು. ಅವಳ ನಗು ಎಂದಿನಂತೆ ಇಲ್ಲವೆನಿಸಿತು. ಮುಖ ಬಾಡಿತ್ತು. “ನಂಗೆ ಈವತ್ತು ನೋಂಬಿದೆ…” ಎಂದ ಅದ್ದು. “ಹೌದಾ…” ಎಂದವಳೇ ಸುಮ್ಮನಾದಳು. ಜಮೀಲಾಕ್ಕ ಏನಾದರೂ ಹೇಳುತ್ತಾಳೆ ಎಂದು ಕಾದ ಅದ್ದು. ಅವಳಿಂದ ಮಾತು ಬಾರದಿದ್ದಾಗ ”ಕಾಸಿಮ್‌ಗೆ ನೋಂಬುಂಟಾ?” ಎಂದು ಕೇಳಿದ. ಜಮೀಲಾಕ್ಕ ತಲೆ ತಗ್ಗಿಸಿದವಳು ತಲೆಯೆತ್ತಿ ಅವನತ್ತ ನೋಡಿದಳು. ಅದ್ದು ಮತ್ತೊಮ್ಮೆ ಕೇಳಬೇಕಾಯಿತು. “ಹೂಂ, ಅವನಿಗೆ ನೋಂಬು ಬೆಳಿಗ್ಗೆ ಎದ್ದು ತಿಂಡಿ ತಿಂದು ಮಧ್ಯಾಹ್ನ ಊಟ ಮಾಡುವ ತನಕ, ಮತ್ತೆ ಮಧ್ಯಾಹ್ನ ಉಂಡು ಸಾಯಂಕಾಲದ ತಿಂಡಿಯತನಕ, ಮತ್ತೆ ರಾತ್ರಿ ಊಟ ಮಾಡುವತನಕ ದಿನವೂ ಇದೆ. ಅದೇ ಏನೋ ನಿಂದೂ ನೋಂಬು?” ಎಂದು ನಕ್ಕಳು. “ಇಲ್ಲ, ನಂದು ಮಾತ್ರ ನಿಜಾದ್ದು…” ಎಂದ ಅದ್ದು. ಜಮೀಲಾಕ್ಕ ಮತ್ತೆ ಎತ್ತಲೋ ನೋಡತೊಡಗಿದ್ದಳು. “ಕಾಸಿಮ್ ಎಲ್ಲಿ…?” ಎಂದು ಕೇಳಿದಾಗ “ಎಲ್ಲೋ ಆಡಲು ಹೋಗಿರಬೇಕು” ಎಂದಳು. ಅದ್ದು ಅಲ್ಲಿಂದ ಹೊರಡಲು ತಯಾರಾದಾಗ “ಅದ್ದು ನನ್ನದೊಂದು ಕೆಲಸ ಮಾಡಿಕೊಡ್ತೀಯಾ… ಅದು ಬಹಳ ಗುಟ್ಟಾಗಿರ್‍ಬೇಕು… ನನ್ನಾಣೆಯುಂಟು…” ಎಂದಳು. ಅದ್ದು ‘ಹೂಂ…’ ಎಂದ. “ಅಲ್ಲಿ ಹೊಳೆಯ ಬದಿಯಲ್ಲಿ ತೆಂಬೆಯ ಮರ ಉಂಟಲ್ಲಾ ಅದರ ಎರಡು ಕಾಯಿ ಕೊಯ್ದು ನಂಗೆ ತಂದು ಕೊಡ್ತಿಯಾ… ನಂಗೇಂತ ಯಾರಿಗೂ ಹೇಳಕೂಡ್ದು…” ಎಂದಳು. ಓಹೋ…ಅದೆಷ್ಟು ಸುಲಭದ ಕೆಲ್ಸ… “ಆಗ್ಬಹುದು, ಈಗ್ಲೆ ತಂದು ಕೊಡ್ತೇನೆ. ಇಲ್ಲೇ ನಿಲ್ಲಿ…” ಎಂದು ಅದ್ದು ಓಡಿದ.
ಹೊಳೆ ಬದಿಯಲ್ಲಿದ್ದ ತೆಂಬೆಕಾಯಿಯ ಮರಹತ್ತಿ ಎರಡು ಕಾಯಿಗಳನ್ನು ತರುವವರೆಗೂ ಜಮೀಲಾಕ್ಕ ಅಲ್ಲೇ ನಿಂತಿದ್ದಳು. ಕಾಯಿಗಳನ್ನು ಕೊಟ್ಟಾಗ ಅವಳ ಕೈ ನಡುಗುತ್ತಿತ್ತು. “ಅದ್ಯಾಕೆ ಈ ಕಾಯಿ?” ಎಂದು ಅದ್ದು ಕೇಳಿದಾಗ ತಟ್ಟನೆ ಜಮೀಲಾಕ್ಕ ಹೇಳಿದಳು, “ತಿಂದು ಸಾಯ್ಲಿಕ್ಕೆ…” “ಇದನ್ನು ತಿಂದ್ರೆ ನೋಂಬು ಹೋಗ್ತದೆ…” ಎಂದ ಅದ್ದು. ಅವಳು ಕ್ಷಣ ಮೌನವಾಗಿದ್ದವಳು “ಇದನ್ನು ಯಾರಿಗೂ ಹೇಳಬೇಡ. ನೀನು ಹೋಗಿ ಆಡು…” ಎಂದಳು.
ಇದನ್ನು ಓದಿದ್ದೀರಾ?: ದೇವುಡು ಅವರ ಕತೆ | ಮೂರು ಕನಸು
”ಜಮೀಲಾಕ್ಕ ತನ್ನ ಗಂಡನ ಹಾಗೆ ಗುಟ್ಟಾಗಿ…? ನೋಂಬಿಲ್ಲವೇನೋ ಇವ್ಳಿಗೆ!” ಎಂದುಕೊಂಡು ಕಾಸಿಮ್‌ನನ್ನು ಹುಡುಕಿಕೊಂಡು ಹೊರಟ. ಬುಗರಿಹಣ್ಣಿನ ಮರದಡಿಯಲ್ಲಿ ಕಾಸಿಮ್ ಸಿಕ್ಕಿದ. ಅದ್ದು ಅವನನ್ನು ಅಲ್ಲಿ ಕಂಡು “ನೋಂಬಿಲ್ಲವಾ ಕಾಸಿಮ್ ನಿಂಗೆ…?” ಎಂದ. “ನಂಗೆ ನೋಂಬುಂಟು… ನಿಂಗೆ?” ಎಂದ ಕಾಸಿಮ್. “ನಂಗೆ ಕೂಡಾ ಉಂಟು. ಇದು ಬುಗರಿ ಹಣ್ಣು ಹೆಕ್ತಾ ಇದ್ದಿಯಲ್ಲಾ… ತಿಂದರೆ ನೋಂಬು ಹೋಗ್ತದಲ್ಲಾ!” ಎಂದ ಅದ್ದು ಅನುಮಾನಿಸುತ್ತಾ. “ಇದು ಈಗ ತಿನ್ಲಿಕ್ಕೆ ಅಲ್ಲ ಮಾರಾಯ ನೋಂಬು ಬಿಡ್ತೇವಲ್ಲಾ ಕತ್ತಲಾದಾಗ, ಆಗ ತಿನ್ಲಿಕ್ಕೆ…” ಎಂದ ಕಾಸಿಮ್. “ನೀನು ಕೂಡಾ ನೋಂಬು ಬಿಟ್ಟ ನಂತರ ತಿನ್ನು…” ಎಂದು ಎರಡು ಹಣ್ಣುಗಳನ್ನು ಅದ್ದುನಿಗೆ ಕೊಟ್ಟ. ಅದ್ದು ಜೇಬಿನಲ್ಲಿಟ್ಟುಕೊಂಡ.
ಎಲ್ಲಾ ಗೆಳೆಯರಿಗೂ “ನಂಗೆ ನೋಂಬುಂಟು ಮಾರಾಯಾ” ಎನ್ನುವ ವರ್ತಮಾನ ಮುಟ್ಟಿಸಿ ಬರುವಾಗ ಮಧ್ಯಾಹ್ನ ದಾಟಿತ್ತು. “ಸ್ವಲ್ಪ ನೀರು ಕುಡೀಲಿಕ್ಕಿದ್ದಿದ್ರೆ ಈ ನೋಂಬು ಚೆನ್ನಾಗಿರ್‍ತಿತ್ತು ಅಲ್ಲವಾ” ಎಂದ ಕಾಸಿಮ್. ಅದ್ದುನಿಗೂ ಹೌದೆನಿಸಿತ್ತು. ಅಪ್ಪನಿಗೂ ಕೆಲಸ ಮಾಡಿ ಸುಸ್ತಾದಾಗ ಆರಾಮ ಆಗ್ತಿತ್ತು ಎಂದುಕೊಂಡ. ಕಾಸಿಮ್ ಹಾಡತೊಡಗಿದ.
ಉಪ್ಪು ತಿಂದು
ನೀರು ಕುಡಿದೆ
ಅಲ್ಲಾಹ್
ನನಗೊಂದು ನೋಂಬು ಕೊಡು
ಕುಣಿದು ಕುಪ್ಪಳಿಸುತ್ತಾ ಕಾಸಿಮ್ ಹಾಡತೊಡಗಿದ. ಅದ್ದು ನಗುತ್ತಾ ನಿಂತ. ಸ್ವಲ್ಪ ಹೊತ್ತಿನಲ್ಲೇ ಎಲ್ಲ ನಿಲ್ಲಿಸಿ “ನಾನು ಮನೆ ಕಡೆ ಹೋಗ್ಬೇಕು” ಎಂದು ಗೆಳೆಯನ ಉತ್ತರಕ್ಕೂ ಕಾಯದೆ ಕಾಸಿಮ್ ಓಡಿದ. ಒಂಟಿಯಾದ ಅದ್ದುನಿಗೆ ಅಲ್ಲಿ ನಿಲ್ಲಲು ಮನಸ್ಸಾಗದೆ ತನ್ನ ಮನೆ ಕಡೆ ಹೊರಟ.
ಮನೆಯಲ್ಲಿ ಯಾರೂ ಇರಲಿಲ್ಲ. ಅಮ್ಮ ಬಾಗಿಲು ಎಳೆದು ಕಟ್ಟಿ, ಬಾವಿಕಟ್ಟಿಗೆ ನೀರು ತರಲು ಹೋಗಿದ್ದಳು. ಅಲ್ಲೇ ಬಾಗಿಲ ಬಳಿ ಅಮ್ಮನ ದಾರಿ ಕಾಯುತ್ತಾ ಕೂತ. ಅಮ್ಮ ನೀರಿನ ಕೊಡಗಳನ್ನು ಎತ್ತಿಕೊಂಡು ಬರುವಾಗ ಅದ್ದು ಬಾಗಿಲಲ್ಲಿ ಕೂತವನು ತೂಕಡಿಸುತ್ತಿದ್ದ. “ನನ್ಮಗು ಉಪವಾಸದಿಂದಾಗಿ ಎಷ್ಟು ದಣೀತೋ! ಬಿಸಿಲಿಗೆ ಓಡಾಡಬಾರದಿತ್ತು ನೀನು… ಒಳಗೆ ಹೋಗಿ ಚಾಪೆ ಹಾಕ್ಕೊಂಡು ಮಲಗು ನೋಡುವ…” ಎನ್ನುತ್ತಾ ಬಾಗಿಲನ್ನು ತೆರೆದಳು. “ಹೇಗಿದೆಯೋ ನೋಂಬು…? ಊಟ ಮಾಡುತ್ತಿಯಾ…?” ಎನ್ನುತ್ತಾ ಅಮ್ಮ ಅವನ ತಲೆಮೇಲೆ ಕೈಯಾಡಿಸಿದಳು. “ಊಹೂಂ… ಅಮ್ಮ ನಾನು ನೋಂಬು ಬಿಡುವುದಿಲ್ಲ” ಎಂದ. ಅದ್ದು ಕಣ್ಣಮುಂದೆ ಕತೆಯ ನೋಂಬು ಮಾಡಿದ ಹುಡುಗನ ನೆನಪಾಯಿತು. “ಸರಿ ಹಾಗಾದರೆ ಇನ್ನು ಬಿಸಿಲಿಗೆ ಓಡಾಡಬೇಡ. ಒಳಗೆ ಮಲಗು” ಎಂದಳು ಅಮ್ಮ.
ಅಮ್ಮ ನೀರಿನ ಕೊಡಗಳನ್ನು ಒಳಗೆ ಇಡುತ್ತಿರುವಾಗ ಅದ್ದು ಅಮ್ಮನ ಬಳಿಗೆ ಬಂದವನು ಅಮ್ಮನನ್ನು ಕೇಳಲೋ ಬೇಡವೊ ಒಂದು ಚಡಪಡಿಸತೊಡಗಿದ. “ಏನೋ…ಅದು” ಎಂದು ಅಮ್ಮ ಕೇಳಿದಾಗ ಜಮೀಲಾಕ್ಕ ‘ನನ್ನಾಣೆ’ ಅಂದದ್ದು ನೆನಪಾಗಿ “ಏನೂ ಇಲ್ಲಾಮ್ಮ…” ಎಂದ. ಮತ್ತೂ ಕುತೂಹಲ ತಾಳದೆ ”ಅಮ್ಮ ತೆಂಬೆಕಾಯಿ ತಿಂದ್ರೆ ನೋಂಬು ಹೋಗ್ತದಾ ಇಲ್ವಾ?” ಎಂದು ಕೇಳಿದ. ಅಮ್ಮ ಗಾಬರಿ ಬಿದ್ದು “ಯಾರೋ ತೆಂಬೆಕಾಯಿ ತಿಂದವ್ರು? ಅದು ವಿಷದ ಕಾಯಿಯೋ…” ಎಂದಾಗ ಅದ್ದು ಗಡಗಡನೆ ನಡುಗಿದ. “ಅದೇ ಕಾಸಿಮ್ ಅಕ್ಕ… ಜಮೀಲಾಕ್ಕ ತಂದು ಕೊಡ್ಲಿಕ್ಕೆ ಹೇಳಿದ್ದು… ನಾನು ಹೊಳೆಬದಿಯ ಮರದಿಂದ ಕೊಯ್ದು ತಂದು ಕೊಟ್ಟೆ…” ಎಂದ. ಅದ್ದುನಿಗೆ ತೆಂಬೆಕಾಯಿ ವಿಷವೆನ್ನುವುದು ತಿಳಿದಿರಲಿಲ್ಲ. ಒಣಗಿದ ತೆಂಬೆಕಾಯಿಗಳನ್ನು ತಂದು ಚೆಂಡಿನಂತೆ ಆಡಲು ಉಪಯೋಗಿಸಿದ್ದು ಇದೆ. ಅದು ಒಡೆದಾಗ ಅದರೊಳಗೆ ಬಿಳಿ ತಿರುಳು ಇರುವುದನ್ನು ಕಂಡಿದ್ದ. ಅದು ವಿಷವೆನ್ನುವುದು ಅವನಿಗೇನು ಗೊತ್ತು? “ಅಲ್ಲಾ ನಿಂಗೆ ಒಂಚೂರಾದ್ರೂ ತಲೆ ಉಂಟಾ? ಅದ್ಯಾಕೆ ಅವ್ಳಿಗೆ ಕೊಟ್ಟೆಯೋ… ಅದ್ನ ತಿಂದ್ರೆ ಸಾಯ್ತಾರಲ್ಲೋ…” ಎಂದು ಗಾಬರಿಗೊಂಡು ಅಮ್ಮ ಬೇಗ ಬೇಗನೆ ಮನೆಯ ಬಾಗಿಲನ್ನು ಎಳೆದು ಕಟ್ಟಿ ಹೊರಗೆ ಹೊರಟಳು. ಅದ್ದು ಕೂಡಾ ಅವಳನ್ನು ಹಿಂಬಾಲಿಸಿದ “ಯಾ ಅಲ್ಲಾಹ್… ಜಮೀಲಾಕ್ಕನಿಗೇನೂ ಆಗದಿದ್ರೆ ಸಾಕು… ನಾನಿನ್ನು ಅವಳು ಕೇಳಿದ್ರೂ ತೆಂಬೆಕಾಯಿ ತಂದುಕೊಡುವುದಿಲ್ಲ…” ಕಾಸಿಮ್‌ನವರ ‘ಜಿನ್ನತುಲ್ ರ್ಫಿದೌಸ್’ ಮನೆಯೊಳಗೆ ಅಮ್ಮ ಹೊಕ್ಕವಳೇ ಅವನಮ್ಮನನ್ನು ಕೂಗಿ ಕರೆದಳು. “ಜಮೀಲಾ ಎಲ್ಲಿ? ನಮ್ಮ ಹುಡುಗ ಅವಳಿಗೆ ತೆಂಬೆಕಾಯಿ ತಂದುಕೊಟ್ಟಂತೆ…” ಎಂದು ಎದುಸಿರು ಬಿಡುತ್ತಾ ಅಂದಳು. ಕಾಸಿಮ್ ಅಮ್ಮ ಒಮ್ಮೆಲೇ ಗಾಬರಿಗೊಂಡು “ಅಲ್ಲಾ ಅವ್ಳಿಗೇನು ಶನಿ ಹಿಡಿದಿದೆ? ಯಾ ರಬ್ಬನಾ… ಯಾವ ಗಳಿಗೆಯಲ್ಲಿ ಅವನನ್ನು ಮದುವೆಯಾದ್ಲೋ… ನನ್ನ ಚಿನ್ನದಂತಹ ಹುಡುಗಿಯನ್ನು ಹಣ…ಹಣ ಅಂತ ರಣಹದ್ದುಗಳ ಕೈಗೆ ಹಾಕಿದ್ರು…” ಎಂದು ಅಳುತ್ತಾ ಮಹಡಿಯ ಕಡೆ ಬಡಬಡನೆ ಮೆಟ್ಟಿಲು ಹತ್ತಿ ಹೋದಳು. ಅಮ್ಮ ಅವಳನ್ನು ಹಿಂಬಾಲಿಸಿದಳು.
ಇದನ್ನು ಓದಿದ್ದೀರಾ?: ಭಾರತೀಪ್ರಿಯ ಅವರ ಕತೆ | ಒಂದು ಹಳೆಯ ಕತೆ
ಜಮೀಲಾಕ್ಕ ಹಾಸಿಗೆಯಲ್ಲಿ ಮಲಗಿದ್ದಳು. ಅವಳಮ್ಮ ಹತ್ತಿರ ಹೋದವಳೇ “ಜಮೀಲಾ… ನೀನ್ಯಾಕೆ ಹೀಗೆ ಮಾಡ್ತಿ ಮಗಾ…” ಎನ್ನುತ್ತಾ ಅವಳ ಮೈ ಮುಟ್ಟಿದಳು. ಅದ್ದು ಅವರ ಹಿಂದೆ ಹೋದವನೇ ಕಾಸಿಮ್‌ನನ್ನು ಕಂಡು ಅವನ ಕೈ ಹಿಡಿದು “ನಿನ್ನ ಅಕ್ಕ ತೆಂಬೆಕಾಯಿ ತಿಂದಿದ್ದಾರೆ. ಅಮ್ಮ ಹೇಳ್ತಾಳೆ ಅದ್ನ ತಿಂದ್ರೆ ಸಾಯ್ತಾರಂತೆ…” ಎಂದ. ಕಾಸಿಮ್ ಕೂಡಾ ಮಹಡಿಯ ಮೇಲೆ ಹೋದ. ಜಮೀಲಾಕ್ಕ ಬಿದ್ದುಕೊಂಡ ರೀತಿ ನೋಡಿ ಎಲ್ಲರಿಗೂ ಗಾಬರಿಯಾಗಿತ್ತು. ಅವಳು ಕಣ್ಣುಮುಚ್ಚಿಕೊಂಡಿದ್ದಳು. ಅಮ್ಮ ಅವಳ ಮೈ ಮುಟ್ಟಿ ಅಲುಗಾಡಿಸಿದಾಗ ಅವಳು ಮೆಲ್ಲನೆ ಕಣ್ಣುಗಳನ್ನು ತೆರೆದಳು. ಕಣ್ಣು ಮುಚ್ಚಿದಾಗ ಅದರೊಳಗೆ ಶೇಖರವಾದದ್ದೋ ಏನೋ… ಬಳಬಳನೆ ಕಣ್ಣೀರು ಹರಿಯತೊಡಗಿತು. ”ಅದ್ಯಾಕೆ ಹೀಗೆ ನನ್ನನ್ನು ಸತಾಯಿಸ್ತಾ ಇದ್ದಿ…? ನೀನು ನನ್ನ ಹೊಟ್ಟೆಯಲ್ಲಿ ಹುಟ್ಟದಿರುತ್ತಿದ್ರೆ ಹುಟ್ಟಿಲ್ಲಾಂದು ಬಿಡುತ್ತಿದ್ದೆ… ನೀನು ಹುಟ್ಟಿದ್ದೇ ನನ್ನನ್ನು ಸಾಯಿಸ್ಲಿಕ್ಕೆ…” ಎಂದು ಕಾಸಿಮ್‌ನ ಅಮ್ಮ ಅಳತೊಡಗಿದಳು.
ಅದ್ದು ಕಾಸಿಮ್‌ನೊಂದಿಗೆ “ಅದ್ಯಾಕೆ ನಿನ್ನಕ್ಕ ಸಾಯ್ಲಿಕ್ಕೆ ನೋಡಿದ್ದು?” ಎಂದ. ಕಾಸಿಮ್ ಉತ್ತರಿಸಲಿಲ್ಲ. ಅದ್ದುನಿಗೆ ಸಂಶಯವಾಗಿ ”ಕಾಸಿಮ್ ನಿನ್ನ ಬಾಯಿ ತೆರಿ ನೋಡುವ…” ಎಂದ. ಕಾಸಿಮ್ ಮೆಲ್ಲನೆ ಬಾಯಿ ತೆರೆದ. ಬಾಯಲ್ಲಿ ಚಾಕ್ಲೇಟು! “ನಿನ್ನ ನೋಂಬು ಹೋಯ್ತಾ…” ಅಂತ ಕನಿಕರ ತುಂಬಿದ ದನಿಯಲ್ಲಿ ಅದ್ದು ಕೇಳಿದಾಗ ಕಾಸಿಮ್ ಅಪರಾಧಿಯಂತೆ ತಲೆಯಾಡಿಸಿದ.
ಅಮ್ಮ ಜಮೀಲಾಳ ತಲೆ ನೇವರಿಸಿದಳು. “ಹೆಣ್ಮಕ್ಕಳು ಎಲ್ಲಿದ್ದರೂ ಒಂದೇ ಮಗಾ… ಎಲ್ಲವನ್ನೂ ಸಹಿಸಿಕೊಳ್ಬೇಕು. ಆತ್ಮಹತ್ಯೆ ಪಾಪ ಅಂತ ಅಲ್ಲಾಹ ಹೇಳಿದ್ದಾನೆ…” ಎಂದಳು. ಅದ್ದು ಮತ್ತು ಕಾಸಿಮ್ ತೆಂಬೆಕಾಯಿಗಾಗಿ ಕೋಣೆ ಎಲ್ಲ ಹುಡುಕಾಡಿದರು. ಎಲ್ಲೂ ಸಿಗಲಿಲ್ಲ. ಅಮ್ಮನ ಬಳಿ ಬಂದು “ತೆಂಬೆಕಾಯಿ ಎಲ್ಲೂ ಕಾಣ್ತಾ ಇಲ್ಲಮ್ಮಾ…” ಎಂದ. ಜಮೀಲಾಕ್ಕ ಎತ್ತಲೋ ನೋಡುತ್ತಾ “ಅದನ್ನು ಒಡೆದು ತಿಂದೆ. ಆದ್ರೂ ಸಾಯಲಿಲ್ಲ. ಎರಡು ಮೂರು ಸಲ ಕಾರಿದೆ ಅಷ್ಟೆ…” ಎಂದು ಒಳನಗೆ ನಕ್ಕಳು. ಅವಳ ಮುಖವೆಲ್ಲ ಬಿಳಿಚಿಕೊಂಡಿತ್ತು. ಕಣ್ಣುಗಳು ಗುಳಿ ಬಿದ್ದಂತಿದ್ದುವು. ತುಟಿಗಳು ಬಿಳಿಚಿ ಒಣಗಿದ್ದವು. ಜಮೀಲಾಕ್ಕನ ಸ್ಥಿತಿ ಕಂಡು ಅದ್ದುನಿಗೆ ಕಣ್ಣೀರು ಉಕ್ಕಿ ಬಂದಂತಾಯಿತು. ”ಒಮ್ಮೆ ಡಾಕ್ಟರಿಗೆ ತೋರಿಸಿ ಜಮೀಲಾನ್ನು…” ಎಂದಳು ಅಮ್ಮ. ಕಾಸಿಮ್‌ನ ಅಮ್ಮ ಬಿಕ್ಕಿ ಬಿಕ್ಕಿ ಅಳುತ್ತಿದ್ದರು. ಅದ್ದುನನ್ನು ನೋಡಿ ಅಮ್ಮ “ಎಲ್ಲ ನಿನ್ನಿಂದಾಗಿಯೇ. ಅವಳು ಕೇಳಿದ್ಲು ಅಂತ ನೀನ್ಯಾಕೆ ತರಬೇಕಿತ್ತು?” ಎಂದಳು. ಕಾಸಿಮ್‌ನ ಅಮ್ಮ ಅದನ್ನು ಕಂಡು “ಅವನು ಚಿಕ್ಕವನಲ್ವಾ… ಅವನಿಗೇನು ಗೊತ್ತು? ಅವನಿಗ್ಯಾಕೆ ಜೋರು ಮಾಡ್ತಿ ಹಲಿಮಾ…” ಎಂದು ಅಮ್ಮನಿಗೆ ಜೋರು ಮಾಡಿದಳು. “ಮುಖ್ಯ ಹೆಣ್ಣು ಮಕ್ಳು ಭೂಮಿಯಲ್ಲಿ ಹುಟ್ಟಬಾರ್‍ದು…” ಎಂದು ಅಮ್ಮ ನಿಟ್ಟುಸಿರುಬಿಟ್ಟಳು. “ನಂಗೆ ತುಂಬಾ ಕೆಲಸ ಇದೆ. ಬರ್‍ತೀನಿ ಜಮೀಲಾ, ಇದ್ದಷ್ಟು ದಿನ ಈ ಭೂಮಿಯಲ್ಲಿ ಹೇಗಾದ್ರೂ ಬದುಕಬೇಕಮ್ಮ…” ಎಂದವಳು ಅದ್ದುನ ಕೈ ಹಿಡಿದುಕೊಂಡು ಹೊರಟಳು.
ದಾರಿತುಂಬ ಅದ್ದುನ ತಲೆಯೊಳಗೆ ಜಮೀಲಾಕ್ಕ ಯಾಕೆ ಸಾಯಲಿಕ್ಕೆ ನೋಡಿದ್ದು? ಎನ್ನುವ ಪ್ರಶ್ನೆಯೇ ತುಂಬಿತ್ತು. ಅಮ್ಮನೊಂದಿಗೆ ಕೇಳಿದ, “ರಮ್ಜಾನ್ ತಿಂಗಳಲ್ಲಿ ‘ಕಬರ್’ ಹೊಂಡದಲ್ಲಿ ‘ಚೋತಿಯಾ’ ಇಲ್ಲವಲ್ಲಾ… ಸ್ವರ್ಗದ ಬಾಗಿಲು ತೆರೆದಿಟ್ಟಿರ್‍ತದಲ್ಲಾ. ನೇರವಾಗಿ ಹೋಗಬಹುದು ಅಂತ ಇರಬೇಕು ಜಮೀಲಾಕ್ಕ ಸಾಯಲಿಕ್ಕೆ ನೋಡಿದ್ದು… ಅಲ್ವಾಮ್ಮಾ…?” ಅಮ್ಮನಿಗೆ ಸಣ್ಣ ನಗು ಬಂದು ”ಹೌದೇನೋ!” ಎಂದು ಸುಮ್ಮನಾದಳು.
ಇದನ್ನು ಓದಿದ್ದೀರಾ?: ಕೊರಡ್ಕಲ್ ಶ್ರೀನಿವಾಸರಾವ್ ಅವರ ಕತೆ | ಧನಿಯರ ಸತ್ಯನಾರಾಯಣ
ಸತ್ತಾಗ ಗೋರಿಯೊಳಗೆ ಇಟ್ಟು ಮಣ್ಣು ಹಾಕಿದ ನಂತರ ಗೋರಿಯೊಳಗೆ ಇಬ್ಬರು ಮಲಕ್ ಅನ್ನುವ ದೇವದೂತರು ಬಂದು ಶವಕ್ಕೆ ಮತ್ತೆ ಜೀವ ಹಾಕಿ ಪ್ರಶ್ನೆಗಳನ್ನು ಕೇಳುತ್ತಾರೆ. ‘ಚೋತಿಯಾ’ ಅನ್ನೂದು ಇದಕ್ಕೆ ‘ನಿನ್ನ ಹೆಸರೇನು? ನಿನ್ನ ‘ದೀನ್’ ಯಾವುದು? ‘ಷಹಾದತ್ ಕಲ್ಮಾ’ ಹೇಳು? ಇಸ್ಲಾಮ್ ಕಾರ್ಯಗಳೆಷ್ಟು? ಈಮಾನ್ ಕಾರ್ಯಗಳಷ್ಟು? ಎಂದೆಲ್ಲ ಪ್ರಶ್ನೆಗಳನ್ನು ಹಾಕಿಯಾರು. ಮದ್ರಸದಲ್ಲಿ ಮೊಲಿಯಾರರು ಅದ್ದುನಿಗೆ ಹೇಳಿದ್ದರು ”ಅದಕ್ಕೆಲ್ಲ ಸರಿಯಾದ ಉತ್ತರ ಕೊಡುವವರು ಸ್ವರ್ಗಕ್ಕೆ ಹೋಗುತ್ತಾರೆ. ಉತ್ತರಿಸಲಾರದವರು ನರಕವಾಸಿಗಳು. ಕೆಟ್ಟ ಕೆಲಸ ಮಾಡಿದವರಿಗೆ ನಾಲಗೆಯನ್ನು ಆ ಸಮಯದಲ್ಲಿ ತಿರುಗಿಸಲು ಆಗದು. ಅಲ್ಲಾಹನೇ ನಮ್ಮೆಲ್ಲರನ್ನೂ ಸ್ವರ್ಗಕ್ಕೆ ಹೋಗುವವರ ಪಂಗಡಕ್ಕೆ ಸೇರಿಸು.” ಅದ್ದುನಿಗೆ ಈ ಪ್ರಶ್ನೆಗಳನ್ನು ಯಾರಾದರೂ ಕೇಳಿದರೆ ಪಟಪನೆ ಉತ್ತರಿಸಿಯಾನು. ಮದ್ರಸದಲ್ಲಿ ಮೊಲಿಯಾರರು ಇದನ್ನೆಲ್ಲಾ ಕಲಿಸಿಕೊಟ್ಟಿದ್ದಾರೆ. ಉಪವಾಸದ ರಮ್ಜಾನ್ ತಿಂಗಳಲ್ಲಿ ಮಾತ್ರ ದೇವದೂತರು ಈ ಪ್ರಶ್ನೆಗಳನ್ನು ಕೇಳಲು ಬರುವುದಿಲ್ಲ. ಶಿಕ್ಷೆ ಕೂಡ ಇರುವುದಿಲ್ಲ, ಅದಕ್ಕಾಗಿಯೇ ಇರಬೇಕು ಜಮೀಲಾಕ್ಕ ಸಾಯಲು ಪ್ರಯತ್ನಿಸಿದ್ದು. ಆದರೆ ತೆಂಬೆಕಾಯಿ ತಿಂದರೂ ಜಮೀಲಾಕ್ಕ ಸಾಯಲಿಲ್ಲ. ಸ್ವರ್ಗದಲ್ಲಿರುವ ‘ಶಜರುಲ್ ಮುನ್ತಹಾ’ ಎನ್ನುವ ಮರದ ಜಮೀಲಾಕ್ಕನ ಹೆಸರಿನ ಎಲೆ ಬೀಳಲಿಲ್ಲಾಂತ ಕಾಣುತ್ತದೆ. ಅದಕ್ಕೆ ಅವಳು ಸಾಯಲಿಲ್ಲ. ಭೂಲೋಕದಲ್ಲೂ ಸ್ವರ್ಗದಂತಹ ಮನೆಯಲ್ಲಿರುವವರು ‘ಆಖಿರತ್’ನ ಸ್ವರ್ಗಕ್ಕೆ ಯಾಕಿಷ್ಟು ಆಸೆ ಪಡಬೇಕು? ಎನ್ನುವ ಪ್ರಶ್ನೆ ಅದ್ದುನ ಮುಂದೆ ಒಗಟಿನಂತೆ ನಿಂತಿತು.
ಅಮ್ಮ ದಾರಿಯಲ್ಲಿ ಫಕ್ಕನೆ ನೆನಪದಾವಳಂತೆ ‘ಅಯ್ಯೋ ನನಗೆಂತಹ ಮರೆವು. ಈವತ್ತು ತೌಬಾ ಹೇಳಲಿಕ್ಕೆ ಅಮೀನಮ್ಮ, ಜೈನಾಬಿಯವರೆಲ್ಲ ಬರ್‍ತೇವೆಂತ ಹೇಳಿದ್ದಾರೆ. ಈಗಾಗ್ಲೆ ‘ಅಸರ್’ ನಮಾಜಿನ ಸಮಯ ಕೂಡ ಆಯ್ತು. ಅವ್ರೆಲ್ಲಾ ಮನೆ ಮುಂದೆ ನಿಂತಿದ್ದಾರೋ ಏನೋ! ಬೇಗ ಹೋಗುವ’ ಎಂದು ಬೇಗ ಬೇಗನೆ ಕಾಲು ಹಾಕತೊಡಗಿದಳು. ರಮ್ಜಾನ್ ತಿಂಗಳಲ್ಲಿ ಪ್ರತೀ ಶುಕ್ರವಾರ, ಸೋಮವಾರ ನೆರೆಹೊರೆಯ ಕುರಾನ್ ಓದಲು ಬಾರದ ಮುಸ್ಲಿಮ್ ಹೆಂಗಸರು ಅದ್ದುನ ಅಮ್ಮನಿಂದ ತೌಬಾ ಹೇಳಿಸಿ ಕೇಳುವರು. ಅವಳು ಹೇಳಿದಂತೆಯೇ ಭಕ್ತಿಯಿಂದ ಕೂತು ಅಲ್ಲಾಹನಿಂದ ತಾವು ಮಾಡಿದ ತಪ್ಪುಗಳಿಗೆ ಕ್ಷಮೆ ಯಾಚಿಸುವರು. ನೋಂಬಿನ ದಿನಗಳಲ್ಲಿ ತಾವು ಮಾಡಿದ ತಪ್ಪುಗಳ ಬಗ್ಗೆ ನೊಂದು, ಭಯಪಟ್ಟು ಪಶ್ಚಾತ್ತಾಪ ಪಟ್ಟುಕೊಂಡು ತೌಬಾ ಹೇಳಿ ಕ್ಷಮೆ ಯಾಚಿಸಿದಲ್ಲಿ ಅಲ್ಲಾಹನು ನಮ್ಮ ಸರ್ವ ತಪ್ಪುಗಳನ್ನೂ ಮನ್ನಿಸಿಯಾನು! ತನ್ನ ಅಪಾರವಾದ ಕರುಣೆಯ ಖಜಾನೆಯಿಂದ ಸುಖ ಸಂಪತ್ತನ್ನು ದಯಪಾಲಿಸಿಯಾನು, ತನ್ನ ‘ಜನ್ನತುಲ್ ಫಿರ್‌ದೌಸ್’ ಅನ್ನುವ ಸ್ವರ್ಗದ ಬಾಗಿಲು ತೆರೆದು ಸ್ವಾಗತಿಸಿಯಾನು. ಗಂಡಸರೆಲ್ಲ ‘ತರಾವೀಹ್’ ನಮಾಜಿನ ನಂತರ ಮಸೀದಿಯಲ್ಲಿ ತೌಬಾವನ್ನು ಮೊಲಿಯಾರರಿಂದ ಹೇಳಿಸಿ ಕೇಳಿಯಾರು. ಹೆಂಗಸರು ಕುರಾನ್ ಕಲಿತವರು ಮನೆಯಲ್ಲೇ ಓದಿಯಾರು. ಅದಲ್ಲದಿದ್ದರೆ ಅದ್ದುನ ಅಮ್ಮನ ಬಳಿಗೆ ಬಂದು ಓದಿಸಿ ಅವಳು ಹೇಳಿಕೊಟ್ಟಂತೆ ಮೆಲ್ಲನೆ ಹೇಳಿಯಾರು.
ಇದನ್ನು ಓದಿದ್ದೀರಾ?: ಬಾಗಲೋಡಿ ದೇವರಾಯ ಅವರ ಕತೆ | ಅವರವರ ಸುಖದುಃಖ
ಅಮ್ಮ ಹೇಳಿದಂತೆ ಆಗಲೇ ಮನೆಯ ಮುಂದೆ ಹೆಂಗಸರು ಸೇರಿದ್ದರು. ಆಗಲೇ ಅವರನ್ನು ಕಂಡು “ನೀವು ಬಂದು ತುಂಬ ಹೊತ್ತಾಯ್ತನೋ, ಸ್ವಲ್ಪ ಕೆಲಸ ಇತ್ತು. ಹೊರಗೆ ಹೋಗಿ ಬಂದೆ. ಬೇಗ ‘ಅಸರ್’ ನಮಾಜು ಮುಗಿಸಿ ಬರ್‍ತೇನೆ. ನೀವೆಲ್ಲ ಕೂತಿರಿ” ಎಂದು ಬಾಗಿಲಿನ ಹಗ್ಗ ಬಿಚ್ಚಿ ಒಳಗೆ ಹೋದಳು. ಹೆಂಗಸರು ಒಳಗೆ ಬಂದು ಕೂತರು. ಅಮ್ಮ ಅದ್ದುನನ್ನು ಕರೆದು ”ಅದ್ದು ನೀನು ಜಮೀಲಾಳ ವಿಷಯ ಯಾರಿಗೂ ಹೇಳಬೇಡ. ಬೇರೆಯವರ ಮನೆಯ ವಿಷಯ ನಮಗ್ಯಾಕೆ. ನಾವು ಬಡವರು, ಮತ್ತೆ ಅವರೆಲ್ಲ ನಮ್ಮನ್ನು ಸುಮ್ಮನೆ ಬಿಡಲಿಕ್ಕಿಲ್ಲ ಮಗಾ…” ಎಂದಳು. ಅದ್ದು ‘ಹೂಂ…’ ಎಂದು ತಲೆಯಾಡಿಸಿದ.
ಅಮ್ಮ ನಮಾಜು ಮಾಡಲಿಕ್ಕಾಗಿ ಒಳಗೆ ಹೋದಳು. ಅದ್ದು ಅಲ್ಲೇ ಮಡಚಿಟ್ಟ ಚಾಪೆಯ ಬದಿಯಲ್ಲಿ ಒರಗಿ ಕೂತ. ಅಮಿನಮ್ಮ ಅದ್ದುನನ್ನು ಕಂಡು “ನೋಂಬುಂಟಾ ಮಗಾ ನಿಂಗೆ?” ಎಂದು ಕೇಳಿದಳು. ಅದ್ದು ಉತ್ಸಾಹದಿಂದ ‘ನಂಗೆ ನೋಂಬುಂಟು…’ ಎಂದ. ಅವರೆಲ್ಲಾ ‘ಹುಶಾರು ಹುಡುಗ’ ಎಂದರು. “ನಿನ್ನ ದೋಸ್ತ ಜುಬೇರ್ ಇದ್ದಾನಲ್ಲಾ, ಮೂರು ಹೊತ್ತೂ ತಿನ್ತಾ ಇದ್ದಾನೆ. ನೋಂಬು ಮಾಡುವುದೇ ಇಲ್ಲ” ಎಂದಳು ಜೈನಾಬಿ. ಅದ್ದುನಿಗೆ ಜುಬೇರ್ ಮಸೀದಿಯಲ್ಲಿ ಹೇಳಿದ್ದು ನೆನಪಾಗಿ “ಸುಳ್ಳು ಹೇಳಿದ್ದ ಜುಬೇರ್, ನೋಂಬು ಮಾಡಿದ್ದೇನೆ ಅಂತ” ಎಂದ. ಹೆಂಗಸರೆಲ್ಲ ನಕ್ಕರು, “ಸುಳ್ಳು ಹೇಳುವುದು ಪಾಪ…” ಎಂದು ಅದ್ದು ಗೊಣಗಿಕೊಂಡ.
ನಮಾಜು ಮುಗಿಸಿ ಬಂದ ಅಮ್ಮ ಅಲ್ಲಿ ಸೇರಿದ ಹೆಂಗಸರಿಗೆ ತೌಬಾ ಹೇಳಿಕೊಟ್ಟಳು. “ಅಸ್ತಗ್ ಫಿರುಲ್ಲಾಹಲ್ ಅಲೀಮ್…” ಎಂದು ಅರಬಿಯಲ್ಲಿ ಹೇಳಿ ಮತ್ತೆ ಅದರ ಅನುವಾದವನ್ನು ಹೇಳಿಕೊಡತೊಡಗಿದಳು. “ತಂಪುರಾನೆ, ನಾವು ತಿಳಿದೋ, ತಿಳಿಯದೆಯೋ, ಮರೆತೋ ಮಾಡಿದ ಎಲ್ಲಾ ಸಣ್ಣ ದೊಡ್ಡ ತಪ್ಪುಗಳಿಗೆ ನಿನ್ನ ‘ಪುರ್ ಖಾನುಲ್ ಅಲೀಮ್’ ಎನ್ನುವ ‘ಕುರ್‌ಆನ್’ ಗ್ರಂಥದ ನಿಯಮಗಳಿಗೆ ಸರಿಯಾಗಿ ಪಶ್ಚಾತ್ತಾಪ ಪಟ್ಟು ನಿನ್ನಿಂದ ಕ್ರಮೆ ಯಾಚಿಸುತ್ತಿದ್ದೇವೆ. ನಾವೆಲ್ಲ ಅನೇಕ ತಪ್ಪುಗಳನ್ನು ಮಾಡಿದವರು, ಮಹಾಮಹಿಮನೇ, ನರಕದಲ್ಲಿ ಬಿದ್ದು ಬೆಂದು, ಕಮರಿ ಹೋಗುವವರ ಸಾಲಿಗೆ ನಮ್ಮನ್ನು ನೀನು ಸೇರಿಸಬೇಡ…”
ಅಮ್ಮ ಹೇಳುವಂತೆಯೇ ಹೆಂಗಸರೂ ಮೆಲುದನಿಯಲ್ಲಿ ಹೇಳುತ್ತಿದ್ದರು. ಕೇಳುತ್ತಾ ಕೂತಿದ್ದ ಅದ್ದುನಿಗೆ ನಿದ್ದೆಯ ಮಂಪರು ಕವಿದಿತ್ತು. ಚಾಪೆಯ ಸುರುಳಿಯ ಮೇಲೆ ತಲೆಯಿಟ್ಟು ಮಲಗಿದ.
*
ಅದ್ದು ಕಣ್ಣುಬಿಟ್ಟಾಗ ಅಪ್ಪ ಆಗಲೇ ಮನೆಗೆ ಬಂದಿದ್ದ. ”ನಮ್ಮ ಮಗು ಈವತ್ತು ಉಪವಾಸ ಇದ್ದಾನಲ್ಲಾ, ಅದಕ್ಕೆಂತ ಇದ್ನೆಲ್ಲ ತಂದೆ…” ಎನ್ನುತ್ತಾ ಅಪ್ಪ ಅಮ್ಮನ ಕೈಗೆ ತಂಪಿನ ಬೀಜ, ಶಾವಿಗೆಯ ಪೊಟ್ಟಣಗಳನ್ನು ಕೊಟ್ಟ. ಅದ್ದುನಿಗೆ ತಂಪಿನ ಬೀಜದ ಶರಬತ್ತು, ಶಾವಿಗೆ ಪಾಯಸ ನೆನೆದು ಖುಷಿಯಾಯಿತು. ಎದ್ದು ಕೂತ ಅದ್ದುನನ್ನು ಕಂಡು ಅಪ್ಪ, “ಆದರೆ… ನಮ್ಮ ಕಂದ ಆಗ್ಲೆ ಎದ್ದು ಬಿಟ್ನಲ್ಲ…” ಎನ್ನುತ್ತಾ ಮುದ್ದು ಮಾಡುತ್ತಿದ್ದಂತೆ ಹೊರಗೆ ಯಾರೋ ಕೂಗಿದ್ದು ಕೇಳಿಸಿತು. ಇಬ್ಬರೂ ಎದ್ದು ಹೊರಬಂದು ನೋಡುವಾಗ ಕಾಸಿಮ್‌ನ ಮನೆಯ ಹತ್ತಿರ ನಿಂತಿದ್ದ ಹುಚ್ಚ, ”ಹಸೀತದೆ, ತಿನ್ನಲಿಕ್ಕೆ ಏನಾದರೂ ಕೊಡಿ…” ಎನ್ನುವ ಸಂಜ್ಞೆ ಮಾಡುತ್ತಾ ನಿಂತಿದ್ದ. ಅಪ್ಪ ಕೂಗಿ ಹೇಳಿದ, ”ಪಾಪ, ಅವ್ನ ಗೆ ಹಸೀತದೋ ಏನೋ! ಅನ್ನ ಕೇಳ್ತಾ ಇದ್ದಾನೆ. ಏನಾದ್ರೂ ಇದೆಯೇನೇ?” ಅಮ್ಮ ಒಳಗಿನಿಂದ ”ಅದ್ದುನಿಗಾಗಿ ಇಟ್ಟ ಅನ್ನ ಹಾಗೆಯೇ ಇದೆ. ಅವನಿಗೆ ಕೊಡಿ” ಎಂದಳು. ಅಪ್ಪ ಅನ್ನ ತಂದು ಅವನಿಗೆ ಕೊಟ್ಟ. ಹುಚ್ಚ ಗಬಗಬನೆ ತಿನ್ನತೊಡಗಿದ.
ಇದನ್ನು ಓದಿದ್ದೀರಾ?: ದ.ರಾ. ಬೇಂದ್ರೆ ಕತೆ | ಮಗುವಿನ ಕರೆ
ಸಂಜೆಯಾಗುತ್ತಾ ಬರುತ್ತಿತ್ತು. ಅದ್ದು ಯೋಚಿಸಿದ. ಕಾಸಿಮ್‌ನ ಅಮ್ಮ ಹೇಳಿದ ಕತೆಯಲ್ಲಿ ಹುಡುಗ ಸತ್ತದ್ದು ಇದೇ ಹೊತ್ತಿಗೆ. ಆಗಲೇ ದೇವದೂತ ಭಿಕ್ಷುಕನ ರೂಪದಲ್ಲಿ ಬಂದದ್ದು. ಈ ಹುಚ್ಚನ ರೂಪದಲ್ಲಿ ದೇವದೂತ ಬಂದಿರಬಹುದೇ ಎನ್ನುವ ಅನುಮಾನ ಬಂತು. ಗಬಗಬನೆ ತಿನ್ನುವುದರಲ್ಲಿ ಬಿದ್ದಿದ್ದ ಹುಚ್ಚನ ಬಳಿ ಹೋಗಿ ”ನೀನು ದೇವದೂತನಾ?” ಎಂದು ಕೇಳಿದ. ಹುಚ್ಚ ತಲೆಯೆತ್ತಿ ಅವನತ್ತ ನೋಡಿ ಪುಸಪುಸನೆ ಗೇಲಿ ಮಾಡುವವನಂತೆ ನಕ್ಕ. ಅದ್ದು ಪೆಚ್ಚಾದ. ನೋಂಬಿಲ್ಲದವ ಇಂವ ದೇವದೂತ ಹೇಗಾದಾನು? ಕಾಸಿಮ್‌ನ ಅಪ್ಪನಾಗಿದ್ದರೆ ಆಗ್ಲೇ ಇವ್ನನ್ನು ಓಡಿಸಿ ಬಿಡುತ್ತಿದ್ದರು. ಅದ್ದುನ ಅಪ್ಪ ಹುಚ್ಚ ತಿನ್ನುವುದನ್ನು ನೋಡಿ ಹೇಳಿದ, ”ಅದೆಷ್ಟು ದಿನವಾಯ್ತೋ ಇಂವಾ ಉಣ್ಣದೆ!”
ಸೂರ್ಯ ಮುಳುಗಿದ. ಮಸೀದಿಯಿಂದ ಮೊಗ್ರಿಬ್ ನಮಾಜಿನ ಬಾಂಗ್ ಕೇಳಿ ಬಂತು. ಉಪವಾಸ ಬಿಡುವ ಹೊತ್ತು. ಅದ್ದು ಮತ್ತೆ ಯೋಚನೆಯಲ್ಲಿ ಬಿದ್ದ. ಕತೆಯಲ್ಲಿನ ಹುಡುಗನಂತೆ ಅದ್ದು ಸಾಯಲೂ ಇಲ್ಲ ದೇವದೂತನೂ ಬರಲಿಲ್ಲ. ಯಾಕೆ ಹೀಗೆ? ಅಪ್ಪ, ಅಮ್ಮ ವಲೂ ಮಾಡಿಕೊಂಡು ಬಂದು ಅದ್ದುನ ಜೊತೆಗೆ ಉಪವಾಸ ಬಿಡಲು ಕೂತರು. ಅದ್ದು ತನ್ನ ಮೊದಲ ಉಪವಾಸವನ್ನು ತಂಪಿನ ಬೀಜದ ಶರಬತ್ತನ್ನು ಕುಡಿಯುವುದರೊಂದಿಗೆ ಮುಗಿಸಿದ. ಅದೇನೋ ನೆನಪಾಗಿ ಜೇಬನ್ನೆಲ್ಲ ತಡಕಾಡಿದ. ಕೈಗೆ ಕಾಸಿಮ್ ಕೊಟ್ಟ ಎರಡು ಬುಗರಿ ಹಣ್ಣುಗಳು ಸಿಕ್ಕಿದವು. ಒಗರು… ಸಿಹಿ ಸಿಹಿ… ಕಾಸಿಮ್ ನೆನಪಿಗೆ ಬಂದ. ಕಾಸಿಮ್‌ನ ಅಮ್ಮ ಹೇಳಿದ ಕತೆಯ ಹುಡುಗ ಒಂದೇ ಒಂದು ದಿನದ ನೋಂಬಿನಲ್ಲಿ ಹೇಗೆ ಸತ್ತ? ನಾನ್ಯಾಕೆ ಸಾಯಲಿಲ್ಲ? ಅನ್ನುವ ಪ್ರಶ್ನೆಗಳು ಮತ್ತೆ ಕಾಡತೊಡಗಿದವು.
ಅದ್ದು ಮೌನವಾಗಿರುವುದನ್ನು ಕಂಡ ಅಮ್ಮ “ಹೇಗಾಯ್ತು ಮಗಾ ನೋಂಬು?” ಎಂದು ಕೇಳಿದಳು. ”ಅರೆ… ನೋಂಬಂದ್ರೆ ಇದೇ ಏನಮ್ಮಾ…? ಹೀಗೆ ನಾವು ತುಂಬಾ ಸಲ ಇದ್ದೆವಲ್ಲಾ…! ಆ ದಿನ ನೋಡು, ಅಪ್ಪ ಆಸ್ಪತ್ರೆಯಲ್ಲಿದ್ದಾಗ ನೀನು ಬೀಡಿಕಟ್ಟದ ದಿನ… ಅನ್ನ ಮಾಡದೆ, ಹೀಗೆಯೇ ನೋಂಬಿನಂತೆಯೇ ಇತ್ತಲ್ಲಾ…?” ಎಂದ ಅದ್ದು. ಅಮ್ಮ ಅಪ್ಪನ ಮುಖ ನೋಡಿದಳು. ಅಪ್ಪ ಹೇಳಿದ. ”ನಮ್ಮ ಮಗ ಎಲ್ಲವನ್ನೂ ನೆನಪಿಟ್ಟುಕೊಳ್ತಾನೆ…”
(ಕೃಪೆ: ಶತಮಾನದ ಸಣ್ಣ ಕತೆಗಳು, ಸಂ: ಎಸ್.ದಿವಾಕರ್, ಪ್ರ: ಪ್ರಿಸಂ ಬುಕ್ಸ್ ಪ್ರೈ.ಲಿ. ಬೆಂಗಳೂರು)

ಫಕೀರ್ ಮುಹಮ್ಮದ್ ಕಟ್ಪಾಡಿ (1949): ಕಟ್ಪಾಡಿಯಲ್ಲಿ ಜನಿಸಿದ ಫಕೀರ್ ಮುಹಮ್ಮದ್ ಬಿ.ಕಾಂ. ಪದವೀಧರರು. ಬ್ಯಾಂಕ್ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿ ನಿವೃತ್ತರಾಗಿದ್ದಾರೆ. ಕನ್ನಡ ಕಥಾ ಲೋಕಕ್ಕೆ ಬ್ಯಾರಿ ಮುಸ್ಲಿಮ್ ಸಮುದಾಯದ ನೋವು ನಲಿವುಗಳನ್ನು ಅತ್ಯಂತ ಹೃದಯಸ್ಪರ್ಶಿಯಾಗಿ ಕೊಟ್ಟವರಲ್ಲಿ ಪ್ರಮುಖರು. ಪ್ರಕಟಿತ ಕೃತಿಗಳು: ಗೋರಿ ಕಟ್ಟಿಕೊಂಡವರು, ನೋಂಬು, ದಜ್ಜಾಲ, ಅತ್ತರ್ ಹಾಜಿಕ್ ಮತ್ತು ಇತರ ಕತೆಗಳು, ಪಚ್ಚ ಕುದುರೆ (ಕಥಾಸಂಕಲನಗಳು). ನೀಳ್ಗತೆಗಳ ಸಂಕಲನ ಕಡವು ಮನೆ; ಸರಕುಗಳು ಮತ್ತು ಕಚ್ಚಾದ (ಕಾದಂಬರಿಗಳು). ಬೇರೂತಿನಿಂದ ಜರುಸಲೇಮಿಗೆ ಮತ್ತು ಮಂಟೋ ಬರೆದ ದೇಶ ವಿಭಜನೆಯ ಕತೆಗಳು ಅನುವಾದ ಕೃತಿಗಳು. ಕಯ್ಯೂರಿನ ರೈತವೀರರು (ಐತಿಹಾಸಿಕ ಘಟನೆಯ ಅಧ್ಯಯನ). ರಾಷ್ಟ್ರೀಯತೆ ಮತ್ತು ಮುಸ್ಲಿಮರು (ಲೇಖನ ಸಂಗ್ರಹ). ಸೂಫಿ ಸಂತರು, ಸೂಫಿ ಮಹಿಳೆಯರು, ಉತ್ತರ ಕರ್ನಾಟಕದ ಸೂಫಿಸಂತರು ಕೃತಿಗಳನ್ನು ಪ್ರಕಟಿಸಿದ್ದಾರೆ. ಇವರಿಗೆ ಕರ್ನಾಟಕ ಸರ್ಕಾರ ನೀಡುವ ರಾಜ್ಯೋತ್ಸವ ಪ್ರಶಸ್ತಿ ಹಾಗೂ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸಾಹಿತ್ಯಶ್ರೀ ಪ್ರಶಸ್ತಿಗಳು ದೊರೆತಿವೆ.





