ಇರಾನ್ ಮೇಲೆ ಅಮೆರಿಕ-ಇಸ್ರೇಲ್ ಯುದ್ಧ ಆರಂಭಿಸಿ ಮಾರ್ಚ್ 28ಕ್ಕೆ ಒಂದು ತಿಂಗಳು ಕಳೆದಿವೆ. ಇದೀಗ, ಇರಾನ್ ಬೆಂಬಲಿತ ಯೆಮನ್‌ನ ಹೂಥೀ ಬಂಡುಕೋರರು ಇರಾನ್ ಪರವಾಗಿ ಯುದ್ಧಕ್ಕಿಳಿದಿದ್ದಾರೆ. ಶನಿವಾರ, ಇಸ್ರೇಲ್ ಮೇಲೆ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಉಡಾಯಿಸಿದ್ದಾರೆ. ಇಸ್ರೇಲ್ ತಾನು ಯೆಮನ್‌ನಿಂದ ಬಂದ ಕ್ಷಿಪಣಿಯನ್ನು ಹೊಡೆದುರುಳಿಸಿರುವುದಾಗಿ ಹೇಳಿಕೊಂಡಿದ್ದರೆ, ತಾವುಇಸ್ರೇಲ್‌ನ ಸೂಕ್ಷ್ಮ ಮಿಲಿಟರಿ ನೆಲೆಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದ್ದೇವೆಂದು ಹೌತಿ ಹೇಳಿಕೊಂಡಿದೆ.
ಕಳೆದ ನಾಲ್ಕು ವಾರಗಳಲ್ಲಿ, ಇರಾನ್ ಈ ಯುದ್ಧವನ್ನು ಅಮೆರಿಕದ ಮಿತ್ರರಾಷ್ಟ್ರಗಳಾದ ಕೊಲ್ಲಿ ದೇಶಗಳಿಗೂ ವಿಸ್ತರಿಸಿದೆ. ಹಾರ್ಮುಜ್ ಜಲಸಂಧಿಯನ್ನು ಮುಚ್ಚುವ ಮೂಲಕ, ಜಾಗತಿಕ ಇಂಧನ ಬಿಕ್ಕಟ್ಟನ್ನು ಸೃಷ್ಟಿಸಿದೆ. ಈ ನಡುವೆ, ದಕ್ಷಿಣ ಲೆಬನಾನ್ ಮೇಲೆ ಇಸ್ರೇಲ್ ಆಕ್ರಮಣ ಮಾಡಿದ್ದು, ಕಳೆದ ಮೂರು ವಾರಗಳಿಂದ ಇರಾನ್ ಬೆಂಬಲಿತ ಹಿಜ್ಬುಲ್ಲಾದೊಂದಿಗೆ ಭೂಸೇನಾ ಯುದ್ಧ ನಡೆಸುತ್ತಿದೆ.
ಆದರೆ, ಇರಾನ್‌ನ ಮಿತ್ರರಾಷ್ಟ್ರವಾದ ಯೆಮನ್‌ನ ಹೂಥೀಗಳು ಇದುವರೆಗೆ ಯುದ್ಧದಿಂದ ದೂರ ಉಳಿದಿದ್ದರು. ಈಗ, ಅವರು ಕೂಡ ಅಧಿಕೃತವಾಗಿ ಯುದ್ಧಕ್ಕೆ ಇಳಿದಿದ್ದಾರೆ. ಇದು ಈಗಾಗಲೇ ವಿಸ್ತರಿಸುತ್ತಿರುವ ಸಂಘರ್ಷವನ್ನು ಮತ್ತಷ್ಟು ಹೆಚ್ಚಿಸಿದೆ. ಮಾತ್ರವದಲ್ಲದೆ, ಮತ್ತೊಂದು ಪ್ರಮುಖ ಸಮುದ್ರ ಮಾರ್ಗವಾದ ಕೆಂಪು ಸಮುದ್ರದ ಭಾಗವಾಗಿರುವ ‘ಬಾಬ್ ಎಲ್-ಮಂದೇಬ್’ ಜಲಸಂಧಿಯತ್ತ ಜಗತ್ತು ಗಮನಹರಿಸುವಂತೆ ಮಾಡಿದೆ. ಇದೇ ಪ್ರದೇಶದಲ್ಲಿ ಹೌತಿಗಳು 2023ರ ಅಂತ್ಯದಲ್ಲಿ ಜಾಗತಿಕ ವಾಣಿಜ್ಯ ಹಡಗು ಸಂಚಾರಕ್ಕೆ ಅಡ್ಡಿಪಡಿಸಿದ್ದರು. ಈಗಲೇ, ಅದೇ ಪರಿಸ್ಥಿತಿ ಎದುರಾಗುವ ಸಾಧ್ಯತೆ ಇದೆ.
ಹೂಥೀಗಳು ಯಾರು?
ಹೌತಿಗಳು ಯೆಮನ್‌ನ ಶಿಯಾ ಮುಸ್ಲಿಂ ಅಲ್ಪಸಂಖ್ಯಾತರಾದ ‘ಜೈದಿ’ಗಳ ಪರವಾಗಿ ಹೋರಾಡುವ ಒಂದು ಸಶಸ್ತ್ರ ರಾಜಕೀಯ ಮತ್ತು ಧಾರ್ಮಿಕ ಗುಂಪು. ಇವರು ಪಶ್ಚಿಮ ಏಷ್ಯಾದಾದ್ಯಂತ ಇರುವ ಇರಾನ್‌ನ ಮಿತ್ರರಾಷ್ಟ್ರಗಳ ಜಾಲದ (‘ಪ್ರತಿರೋಧದ ಅಕ್ಷ’) ಭಾಗವಾಗಿದ್ದಾರೆ. ಗಾಜಾದ ಹಮಾಸ್ ಮತ್ತು ಲೆಬನಾನ್‌ನ ಹಿಜ್ಬುಲ್ಲಾ ಕೂಡ ಈ ಜಾಲದಲ್ಲಿವೆ. ಆದರೆ, ಇಸ್ರೇಲ್ ಈಗಾಗಲೇ ಹಮಾಸ್ ಮತ್ತು ಹಿಜ್ಬುಲ್ಲಾಗಳ ಶಕ್ತಿಯನ್ನು ಬಹುತೇಕ ಕುಂದಿಸುತ್ತಿದೆ. ಪ್ರಸ್ತುತ ಹೌತಿಗಳು ಇರಾನ್‌ನ ಅತ್ಯಂತ ಪ್ರಬಲ ಪ್ರಾದೇಶಿಕ ಮಿತ್ರರಾಗಿ ಉಳಿದಿದ್ದಾರೆ. ಸಶಕ್ತರೂ ಆಗಿದ್ದಾರೆ.
1990ರ ದಶಕದಲ್ಲಿ ಹುಸೇನ್ ಬದ್ರೆದ್ದೀನ್ ಅಲ್-ಹೂತಿ ಅವರಿಂದ ಸ್ಥಾಪಿಸಲ್ಪಟ್ಟ ಈ ಚಳವಳಿಯು, ಅಮೆರಿಕ ಮತ್ತು ಇಸ್ರೇಲ್ ವಿರುದ್ಧ ಹೋರಾಡುವ ಗುರಿಯನ್ನು ಹೊಂದಿದೆ. ಇವರ ಘೋಷಣೆ; “ದೇವರು ದೊಡ್ಡವನು, ಅಮೆರಿಕಕ್ಕೆ ಸಾವು, ಇಸ್ರೇಲ್‌ಗೆ ಸಾವು, ಯಹೂದಿಗಳಿಗೆ ಶಾಪ, ಇಸ್ಲಾಂಗೆ ಜಯ” ಎಂಬುದಾಗಿದೆ. 2014ರಲ್ಲಿ ಹೌತಿಗಳು ಯೆಮನ್ ರಾಜಧಾನಿ ಸನಾವನ್ನು ವಶಪಡಿಸಿಕೊಂಡು, ಅಂದಿನ ಅಧ್ಯಕ್ಷ ಅಬ್ದ್ ರಬ್ಬು ಮನ್ಸೂರ್ ಹಾದಿ ಅವರನ್ನು ಪದಚ್ಯುತಗೊಳಿಸಿದ್ದರು.
2023ರಲ್ಲಿ ಹೂಥೀಗಳು ಕೆಂಪು ಸಮುದ್ರದ ಹಡಗು ಸಂಚಾರಕ್ಕೆ ಅಡ್ಡಿಪಡಿಸಿದ್ದು ಹೇಗೆ?
2023ರ ಅಕ್ಟೋಬರ್ 7ರಂದು ಹಮಾಸ್ ಮತ್ತು ಇಸ್ರೇಲ್ ನಡುವೆ ಸಂಘರ್ಷ ನಡೆದ ಬಳಿಕ, ಗಾಜಾದ ಮೇಲೆ ಇಸ್ರೇಲ್ ಯುದ್ಧ ಆರಂಭಿಸಿತು. ಆಗ, ಹೂಥೀಗಳು ಗಾಜಾಕ್ಕೆ ಬೆಂಬಲ ಘೋಷಿಸಿದರು. ಇಸ್ರೇಲ್ ಅನ್ನು ತಡೆಯುವುದು ಮತ್ತು ಅಮೆರಿಕಕ್ಕೆ ಎಚ್ಚರಿಕೆ ನೀಡುವುದು ಇವರ ಮುಖ್ಯ ಗುರಿಯಾಗಿತ್ತು. ಆರಂಭದಲ್ಲಿ ಇಸ್ರೇಲ್ ಮೇಲೆ ಕ್ಷಿಪಣಿ ಮತ್ತು ಡ್ರೋನ್ ದಾಳಿ ನಡೆಸಿದರು. ನಂತರ 2023ರ ಅಂತ್ಯದ ವೇಳೆಗೆ ಕೆಂಪು ಸಮುದ್ರದ ಹಡಗು ಸಂಚಾರ ಮಾರ್ಗಗಳ ಮೇಲೆ ದಾಳಿ ಮಾಡಲು ಶುರು ಮಾಡಿದರು.
ಯೆಮನ್ ದೇಶವು ಕೆಂಪು ಸಮುದ್ರಕ್ಕೆ ದಾರಿಯಾಗಿರುವ ಕಿರಿದಾದ ಬಾಬ್ ಎಲ್-ಮಂದೇಬ್ ಜಲಸಂಧಿಯ ಸಮೀಪದಲ್ಲಿದೆ. ಈ ಜಲಸಂಧಿಯು ಯುರೋಪ್ ಮತ್ತು ಉತ್ತರ ಅಮೆರಿಕಕ್ಕೆ ಪರ್ಷಿಯನ್ ಗಲ್ಫ್‌ನ ತೈಲ ಮತ್ತು ನೈಸರ್ಗಿಕ ಅನಿಲವನ್ನು ಸಾಗಿಸಲು ಅಗತ್ಯ ಮಾರ್ಗವಾಗಿದೆ. 2023ರ ಮೊದಲಾರ್ಧದಲ್ಲಿ ಸಮುದ್ರದ ಮೂಲಕ ನಡೆದ ಒಟ್ಟು ತೈಲ ವ್ಯಾಪಾರದ ಸುಮಾರು 12% ಮತ್ತು ನೈಸರ್ಗಿಕ ಅನಿಲ (LNG) ವ್ಯಾಪಾರದ 8% ಈ ಮಾರ್ಗದ ಮೂಲಕವೇ ನಡೆದಿತ್ತು.
ಆದರೆ, 2023ರ ಡಿಸೆಂಬರ್‌ನಲ್ಲಿ ಹೂಥೀಗಳು ದಾಳಿ ಆರಂಭಿಸಿದ ಕೇವಲ ಎರಡು ತಿಂಗಳಲ್ಲೇ, ಸುಯೆಜ್ ಕಾಲುವೆ ಮೂಲಕ ನಡೆಯುವ ವ್ಯಾಪಾರದ ಪ್ರಮಾಣ 40%ಕ್ಕಿಂತ ಹೆಚ್ಚು ಕುಸಿಯಿತು. ದಾಳಿಯ ಭಯದಿಂದ ಹಡಗುಗಳು ಆಫ್ರಿಕಾದ ದಕ್ಷಿಣ ತುದಿಯಾದ ‘ಕೇಪ್ ಆಫ್ ಗುಡ್ ಹೋಪ್’ ಮೂಲಕ ಸುತ್ತುಬಳಸಿ ಹೋಗಬೇಕಾಯಿತು. ಇದು ವಿಮಾ ವೆಚ್ಚ ಮತ್ತು ಸಾರಿಗೆ ವೆಚ್ಚವನ್ನು ವಿಪರೀತ ಹೆಚ್ಚಿಸಿತು.
ಈ ಅಡಚಣೆಯು 2024 ಮತ್ತು 2025ರ ಬಹುಪಾಲು ಸಮಯದವರೆಗೆ ಮುಂದುವರಿದಿತ್ತು. 2025ರಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಈ ದಾಳಿಗಳನ್ನು ತಡೆಯಲು ಬ್ರಿಟನ್ ಜೊತೆಗೂಡಿ ಬಾಂಬ್ ದಾಳಿ ನಡೆಸಿದರು. ಈ ಕಾರ್ಯಾಚರಣೆಯಲ್ಲಿ ಅನೇಕ ಹೌತಿ ಅಧಿಕಾರಿಗಳು ಹತರಾದರು. ಅಂತಿಮವಾಗಿ, ಕದನ ವಿರಾಮಕ್ಕೆ ಒಪ್ಪಂದ ನಡೆಯಿತು. ಈ ವರ್ಷದ ಆರಂಭದಿಂದ ಕೆಂಪು ಸಮುದ್ರದಲ್ಲಿ ಹಡಗು ಸಂಚಾರ ಮತ್ತೆ ಆರಂಭವಾಗಿತ್ತು.
ಮುಂದಿನ ಪರಿಣಾಮವೇನು?
ಹೌತಿಗಳು ಈಗ ಮತ್ತೆ ಯುದ್ಧಕ್ಕೆ ಇಳಿದಿರುವುದರಿಂದ, ಕೆಂಪು ಸಮುದ್ರ ಮತ್ತು ಹಿಂದು ಮಹಾಸಾಗರದ ನಡುವಿನ ಕೊಂಡಿಯಾದ ಬಾಬ್ ಎಲ್-ಮಂದೇಬ್ ಜಲಸಂಧಿಯಲ್ಲಿ ಮತ್ತೆ ದೀರ್ಘಕಾಲದ ಅಡಚಣೆ ಉಂಟಾಗಬಹುದು. ಇದು ಈಗಾಗಲೇ ತೈಲ ಬೆಲೆ ಏರಿಕೆಗೆ ಕಾರಣವಾಗಿರುವ ಹಾರ್ಮುಜ್ ಜಲಸಂಧಿಯ ಬಿಕ್ಕಟ್ಟನ್ನು ಮತ್ತಷ್ಟು ಭೀಕರಗೊಳಿಸಲಿದೆ.
ಈ ಲೇಖನ ಓದಿದ್ದೀರಾ?: ಬಂಗಾಳ ಚುನಾವಣೆ | ಸಂದೇಶ್‌ಖಾಲಿ, ಆರ್.ಜಿ ಕರ್ ಘಟನೆಗಳಿಗೆ ಮರುಜೀವ ತುಂಬಲು BJP ಕುತಂತ್ರ!
ಜಾಗತಿಕ ಸರಕು ವ್ಯಾಪಾರದ 80%ಕ್ಕಿಂತ ಹೆಚ್ಚು ಸಮುದ್ರದ ಮೂಲಕವೇ ನಡೆಯುತ್ತದೆ. ಭಾರತದಂತಹ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಈ ಪಾಲು ಇನ್ನೂ ಹೆಚ್ಚು. ಭಾರತದ ಇಂಧನ ಆಮದಿಗೆ ಹಾರ್ಮುಜ್ ಜಲಸಂಧಿ ಮುಖ್ಯವಾದರೆ, ರಫ್ತು ವ್ಯವಹಾರಕ್ಕೆ (ವಿಶೇಷವಾಗಿ ಯುರೋಪ್‌ಗೆ) ಕೆಂಪು ಸಮುದ್ರದ ಮಾರ್ಗವು ಅತ್ಯಂತ ಪ್ರಮುಖವಾಗಿದೆ. ಯುರೋಪ್‌ನೊಂದಿಗೆ ಭಾರತ ನಡೆಸುವ ಒಟ್ಟು ವ್ಯಾಪಾರದ ಸುಮಾರು 80% ಸರಕು ಸಾಗಣೆಯು ಈ ಮಾರ್ಗದ ಮೂಲಕವೇ ಸಾಗುತ್ತದೆ.
ಈಗ ಮತ್ತೆ ದಾಳಿಯ ಭೀತಿ ಎದುರಾಗಿರುವುದರಿಂದ ಹಡಗುಗಳು ಕೇಪ್ ಆಫ್ ಗುಡ್ ಹೋಪ್ ಮೂಲಕ 4,000 ದಿಂದ 6,000 ನಾಟಿಕಲ್ ಮೈಲಿಗಳಷ್ಟು ದೂರ ಸುತ್ತುಬಳಸಿ ಹೋಗಬೇಕಾಗುತ್ತದೆ. ಇದರಿಂದ ಪ್ರಯಾಣದ ಅವಧಿ 14 ರಿಂದ 20 ದಿನಗಳಷ್ಟು ಹೆಚ್ಚಾಗಲಿದೆ. ಈ ದೀರ್ಘ ಮಾರ್ಗಗಳಿಂದ ಹಡಗು ಬಾಡಿಗೆ ಗಗನಕ್ಕೇರಲಿದ್ದು, ಇದು ಭಾರತದ ಕೃಷಿ ಮತ್ತು ಜವಳಿ ಉದ್ಯಮದಂತಹ ರಫ್ತು ವಲಯಗಳ ಮೇಲೆ ತೀವ್ರ ಪೆಟ್ಟು ನೀಡಲಿದೆ.



