ಕಾರಂಜಾ ಸಂತ್ರಸ್ತರಿಗೆ ಮಾನವೀಯತೆ ಹಾಗೂ ವೈಜ್ಞಾನಿಕ ಮಾದರಿಯ ಆಧಾರದ ಮೇಲೆ ಸಮರ್ಪಕ ಪರಿಹಾರ ನೀಡಬೇಕೆಂದು ನಡೆಯುತ್ತಿರುವ ದೀರ್ಘಕಾಲ ಹೋರಾಟಕ್ಕೆ ಸರ್ಕಾರ ಸ್ಪಂದಿಸಿದರೂ, ವಿವಿಧ ಕಾರಣಗಳಿಂದ ವಿಳಂಬ ಮಾಡುತ್ತಿರುವುದನ್ನು ಖಂಡಿಸಿ ಏಪ್ರಿಲ್ 11ರಂದು ಬೀದರನಲ್ಲಿ ಬೃಹತ್ ಹೋರಾಟ ನಡೆಸಲು ಸಮಿತಿ ನಿರ್ಧರಿಸಿದೆ.
ಬೀದರ್ ನಗರದ ಅಂಬೇಡ್ಕರ್ ವೃತ್ತ ಸಮೀಪದ ಪ್ರವಾಸಿ ಮಂದಿರದಲ್ಲಿ ಹಿರಿಯ ಹೋರಾಟಗಾರ ಲಕ್ಷ್ಮಣ ದಸ್ತಿ ಅವರ ನೇತೃತ್ವದಲ್ಲಿ ಗುರುವಾರ ನಡೆದ ಕಾರಂಜಾ ಮುಳುಗಡೆ ಸಂತ್ರಸ್ತರ ಹಿತರಕ್ಷಣಾ ಸಮಿತಿಯ ಮಹತ್ವದ ಸಭೆಯಲ್ಲಿ ತೀರ್ಮಾನಿಸಲಾಯಿತು.
ಏ.11ರಂದು ಬೀದರ್ ನಗರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಗಮಿಸಲಿದ್ದು, ಕಾರಂಜಾ ರೈತ ಸಂತ್ರಸ್ತರ ನ್ಯಾಯಸಮ್ಮತ ಬೇಡಿಕೆಗಳನ್ನು ಈಡೇರಿಸುವ ಕುರಿತು ಅಧಿಕೃತ ಘೋಷಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವರ ಮೂಲಕ ಒತ್ತಾಯಿಸಲಾಗುವುದು. ಅಂದು ನಗರದ ಡಾ.ಅಂಬೇಡ್ಕರ್ ವೃತ್ತದಲ್ಲಿ ಬೃಹತ್ ಹೋರಾಟ ನಡೆಸುವ ಬಗ್ಗೆ ಸಭೆಯಲ್ಲಿ ನಿರ್ಣಯಿಸಲಾಯಿತು.
ಕಾರಂಜಾ ನೀರಾವರಿ ಯೋಜನೆಗಾಗಿ ಭೂಮಿ ನೀಡಿ ಮನೆ-ಮಠ ಕಳೆದುಕೊಂಡ 28 ಹಳ್ಳಿಗಳ ರೈತ ಸಂತ್ರಸ್ತರ ಕುಟುಂಬದ ಎಲ್ಲಾ ಸದಸ್ಯರು ಸಾವಿರಾರು ಸಂಖ್ಯೆಯಲ್ಲಿ ಅಂದಿನ ಪ್ರತಿಭಟನೆಯಲ್ಲಿ ಭಾಗವಹಿಸಬೇಕು. ಕಾರಂಜಾ ಯೋಜನೆ ಬೀದರ್ ಜಿಲ್ಲೆಯ ಜನಜೀವನದ ಜೀವನಾಡಿಯಾಗಿದ್ದು, ಈ ಯೋಜನೆಯಿಂದ ಲಕ್ಷಾಂತರ ಜನರಿಗೆ ಕುಡಿಯುವ ನೀರು ದೊರೆಯುತ್ತಿದೆ. ಜೊತೆಗೆ ಅನೇಕ ರೈತರ ಕೃಷಿ ಭೂಮಿಗೆ ನೀರಾವರಿ ಸೌಲಭ್ಯ ದಕ್ಕಿದೆ. ಆದ್ದರಿಂದ ಈ ಹೋರಾಟವನ್ನು ಯಶಸ್ವಿಗೊಳಿಸಲು ಜಿಲ್ಲೆಯ ಎಲ್ಲ ನಾಗರಿಕರು, ವಿವಿಧ ಸಂಘ-ಸಂಸ್ಥೆಗಳ ಸದಸ್ಯರು ಪಾಲ್ಗೊಳ್ಳಲು ಸಮಿತಿ ಮನವಿ ಮಾಡಿದೆ.
ಬೃಹತ್ ಹೋರಾಟದ ಯಶಸ್ಸಿಗಾಗಿ ಗ್ರಾಮವಾರು ಕ್ರಿಯಾ ಸಮಿತಿಗಳನ್ನು ರಚಿಸಿ ಸಿದ್ಧತೆ ನಡೆಸಲು ನಿರ್ಧರಿಸಲಾಗಿದೆ. ಈ ಹೋರಾಟಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು, ಸಚಿವರು, ಶಾಸಕರು, ವಿವಿಧ ರಾಜಕೀಯ ಪಕ್ಷಗಳ ನಾಯಕರು ಪಕ್ಷಭೇದ ಮರೆತು ಬೆಂಬಲ ನೀಡಬೇಕೆಂದು ಸಮಿತಿ ಕೋರಿದೆ.
ಇದನ್ನೂ ಓದಿ : ಬೀದರ್ | ಹೆಡ್ ಕಾನ್‌ಸ್ಟೆಬಲ್ ಸಂತೋಷ ಮಹಾರಾಜಗೆ ಮುಖ್ಯಮಂತ್ರಿಗಳ ಪದಕ ಪ್ರದಾನ
ಸಭೆಯಲ್ಲಿ ಸಮಿತಿಯ ಅಧ್ಯಕ್ಷ ಚಂದ್ರಶೇಖರ ಪಾಟೀಲ ಹುಚಕನಳ್ಳಿ, ಪದಾಧಿಕಾರಿಗಳಾದ ವಿನಯಕುಮಾರ ಮಾಳಗೆ, ರಾಜಪ್ಪ ಕೋಸಂ, ರಾಜಪ್ಪ ರೇಕುಳಗಿ, ವೀರೇಂದ್ರ ಭತಮರ್ಗೆ, ಮಾದಪ್ಪ ಕೌದೆ, ರೇವಣಪ್ಪ ರಂಜೋಳ, ರೋಹನ್ ಕುಮಾರ, ಸಂಗಾರೆಡ್ಡಿ ಔರಾದ, ಯೂಸುಫ್ ರೆಕುಳಗಿ, ಮಹಮ್ಮದ ಸೊಲಾಪೂರೆ, ಲಕ್ಷ್ಮೀ ಕೌದೆ, ಚಂದ್ರಶೇಖರ್ ಒಡ್ಡಿ, ಶಿವಕುಮಾರ್ ಬಗದಲ, ಲಕ್ಷ್ಮಣ ಭೂತಾಳೆ, ಸೂರ್ಯಕಾಂತ ಕುಲಕರ್ಣಿ, ಸಂಜಯ್ ಪಾಟೀಲ್ ಸೇರಿದಂತೆ ಅನೇಕರು ಸಂತ್ರಸ್ತ ರೈತರಿದ್ದರು.




