ಕೊಲ್ಲಿ ರಾಷ್ಟ್ರಗಳ ಪ್ರಮುಖ ಇಂಧನ ಮೂಲಸೌಕರ್ಯಗಳ ಮೇಲೆ ಭಾನುವಾರ ಇರಾನ್ ಸರಣಿ ದಾಳಿ ನಡೆಸಿದೆ. ಪರಿಣಾಮ, ಗಲ್ಫ್ ರಾಷ್ಟ್ರಗಳ ತೈಲ ನೆಲೆಗಳು ಸಂಕಷ್ಟಕ್ಕೆ ಸಿಲುಕಿವೆ. ಯುಎಇ, ಬಹ್ರೇನ್ ಹಾಗೂ ಕುವೈತ್‌ನ ನಾಗರಿಕ ಸೌಲಭ್ಯಗಳಿಗೆ ದೊಡ್ಡ ಮಟ್ಟದ ಹಾನಿಯಾಗಿದೆ ಎಂದು ವರದಿಯಾಗಿದೆ.
ಫೆಬ್ರವರಿ ಅಂತ್ಯದಲ್ಲಿ, ಇರಾನ್ ಮೇಲೆ ಅಮೆರಿಕ-ಇಸ್ರೇಲ್ ಜಂಟಿ ದಾಳಿ ನಡೆಸುವ ಮೂಲಕ ಆರಂಭಿಸಿದ ಸಂಘರ್ಷವು ಇನ್ನೂ ಮುಂದುವರೆದಿದೆ. ತೈಲ ಸಮೃದ್ಧ ಕೊಲ್ಲಿ ರಾಷ್ಟ್ರಗಳ ಭೂ ಪ್ರದೇಶದಿಂದ ಅಮೆರಿಕ ಪಡೆಗಳು ಇರಾನ್ ಮೇಲೆ ದಾಳಿ ನಡೆಸುತ್ತಿವೆ. ಆದ್ದರಿಂದ, ಅಮೆರಿಕದ ಸೇನಾ ನೆಲೆಗಳಿರುವ ಕೊಲ್ಲಿ ರಾಷ್ಟ್ರಗಳ ಮೇಲೆ ಇರಾನ್ ನಿರಂತರ ಡ್ರೋನ್ ಮತ್ತು ಕ್ಷಿಪಣಿ ದಾಳಿಗಳನ್ನು ನಡೆಸುತ್ತಿದೆ. ಅವುಗಳ ಇಂಧನ ಮತ್ತು ಕೈಗಾರಿಕಾ ಕೇಂದ್ರಗಳನ್ನು ನಾಶ ಮಾಡುತ್ತಿದೆ.
ಯುಎಇಯಲ್ಲಿನ ವಾಯುವ್ಯ ಕರಾವಳಿಯಲ್ಲಿರುವ ಹೂವೈಸ್ ಇಂಡಸ್ಟ್ರಿಯಲ್ ಸಿಟಿಯ ಪೆಟ್ರೋಕೆಮಿಕಲ್ ಪ್ಲಾಂಟ್ ಮೇಲೆ ಇರಾನ್ ದಾಳಿ ನಡೆಸಿದ್ದು, ಭಾರೀ ಬೆಂಕಿ ಹೊತ್ತಿಕೊಂಡಿದೆ. ಬೆಂಕಿ ನಂದಿಸಲು ಅಧಿಕಾರಿಗಳು ಹರಸಾಹಸ ಪಡುತ್ತಿದ್ದಾರೆ ಎಂದು ಅಬುಧಾಬಿ ಮೂಲಗಳು ತಿಳಿಸಿವೆ. ಯುಎಇ ವಾಯು ರಕ್ಷಣಾ ವ್ಯವಸ್ಥೆಗಳು ಇರಾನ್ ಕ್ಷಿಪಣಿಗಳನ್ನು ತಡೆಹಿಡಿದಾಗ ಬಿದ್ದ ಅವಶೇಷಗಳಿಂದಾಗಿ ಬೋರೂಜ್ ಪೆಟ್ರೋಕೆಮಿಕಲ್ಸ್ ಕಾರ್ಖಾನೆಯ ಹಲವೆಡೆ ಬೆಂಕಿ ಕಾಣಿಸಿಕೊಂಡಿದೆ ಎಂದು ಹೇಳಲಾಗಿದೆ.
ಮುನ್ನೆಚ್ಚರಿಕಾ ಕ್ರಮವಾಗಿ ಈ ಘಟಕದ ಕಾರ್ಯಾಚರಣೆಯನ್ನು ತಕ್ಷಣವೇ ಸ್ಥಗಿತಗೊಳಿಸಲಾಗಿದೆ. ಸದ್ಯಕ್ಕೆ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ಯುಎಇ ಮಾಧ್ಯಮ ಕಚೇರಿ ಸ್ಪಷ್ಟಪಡಿಸಿದೆ. ಇದಕ್ಕೂ ಮುನ್ನ ಶನಿವಾರ, ಇರಾನ್ ಸೇನೆಯು ಯುಎಇಯ ಅಲ್ಯೂಮಿನಿಯಂ ಉದ್ಯಮಗಳು ಮತ್ತು ಕುವೈತ್‌ನಲ್ಲಿರುವ ಅಮೆರಿಕದ ಮಿಲಿಟರಿ ನೆಲೆಗಳನ್ನು ಗುರಿಯಾಗಿಸಿ ದಾಳಿ ನಡೆಸುವುದಾಗಿ ಎಚ್ಚರಿಕೆ ನೀಡಿತ್ತು.
ಈ ಲೇಖನ ಓದಿದ್ದೀರಾ?: ಮಧ್ಯಪ್ರಾಚ್ಯದಲ್ಲಿ ಶಾಂತಿ ಮರುಸ್ಥಾಪನೆಗೆ ಚೀನಾ – ಪಾಕಿಸ್ತಾನದ 5 ಅಂಶಗಳ ಮಹತ್ವದ ಪ್ರಸ್ತಾವನೆ
ಇನ್ನು, ಬಹ್ರೇನ್‌ನಲ್ಲಿಯೂ ಇರಾನ್‌ನ ಡ್ರೋನ್ ದಾಳಿಯಿಂದಾಗಿ ತೈಲ ಸಂಗ್ರಹಣಾ ಟ್ಯಾಂಕರ್ ಒಂದರಲ್ಲಿ ಬೆಂಕಿ ಕಾಣಿಸಿಕೊಂಡಿದೆ. ದಾಳಿಯಿಂದ ಹೊತ್ತಿಕೊಂಡ ಬೆಂಕಿಯನ್ನು ಸಂಪೂರ್ಣವಾಗಿ ನಂದಿಸಲಾಗಿದೆ. ಈಗ ಪರಿಸ್ಥಿತಿ ಹತೋಟಿಯಲ್ಲಿದೆ ಎಂದು ಬಹ್ರೇನ್ ಸರ್ಕಾರ ತಿಳಿಸಿದೆ. ಈ ಘಟನೆಯಲ್ಲಿ ಯಾವುದೇ ಸಾವುನೋವು ಸಂಭವಿಸದಿದ್ದರೂ, ಆಸ್ತಿಪಾಸ್ತಿ ಹಾನಿಯ ಮೌಲ್ಯಮಾಪನ ನಡೆಯುತ್ತಿದೆ.
ಕುವೈತ್‌ನಲ್ಲಿಯೂ ಸಾಕಷ್ಟು ಹಾನಿ ಸಂಭವಿಸಿದೆ. ಅಲ್ಲಿನ ವಿದ್ಯುತ್ ಮತ್ತು ನೀರು ಸರಬರಾಜು ಸಚಿವಾಲಯದ ಪ್ರಕಾರ, ಇರಾನ್ ನಡೆಸಿದ ಡ್ರೋನ್ ದಾಳಿಯಿಂದಾಗಿ ಎರಡು ವಿದ್ಯುತ್ ಉತ್ಪಾದನಾ ಘಟಕಗಳು ಮತ್ತು ನೀರು ಶುದ್ಧೀಕರಣ ಘಟಕಗಳು ಜಖಂಗೊಂಡಿವೆ. ಇದರಿಂದಾಗಿ ಭಾರಿ ಪ್ರಮಾಣದ ಹಾನಿಯಾಗಿದ್ದು, ಎರಡು ವಿದ್ಯುತ್ ಉತ್ಪಾದನಾ ಘಟಕಗಳು ಕಾರ್ಯನಿರ್ವಹಣೆಯನ್ನು ನಿಲ್ಲಿಸಿವೆ.
ಈ ದೇಶವು ಕುಡಿಯುವ ನೀರಿಗಾಗಿ ಸಂಪೂರ್ಣವಾಗಿ ಸಮುದ್ರದ ನೀರನ್ನು ಅವಲಂಬಿಸಿದೆ. ಆ ನೀರನ್ನು ಸಿಹಿಗೊಳಿಸುವ ಘಟಕಗಳ ಮೇಲೆ ಇರಾನ್‌ನ ನಡೆಸಿರುವ ದಾಳಿ ದೊಡ್ಡ ಆತಂಕವನ್ನು ತಂದೊಡ್ಡಿದೆ.



