ಇರಾನ್‌ನ ಅರಾಕ್‌ನಲ್ಲಿರುವ ಖಂದಾಬ್ ಭಾರಜಲ ರಿಯಾಕ್ಟರ್ ಮತ್ತು ಅರ್ದಕಾನ್‌ನಲ್ಲಿರುವ ಯುರೇನಿಯಂ ಪುಷ್ಟೀಕರಣ ಘಟಕದ ಮೇಲೆ ಶುಕ್ರವಾರ ಇಸ್ರೇಲ್ ದಾಳಿ ನಡೆಸಿದೆ ಎಂದು ವರದಿಯಾಗಿದೆ. ತಾವೇ ದಾಳಿ ನಡೆಸಿದ್ದಾಗಿ ಇಸ್ರೇಲ್ ರಕ್ಷಣಾ ಪಡೆ (IDF) ಖಚಿತಪಡಿಸಿದೆ. ತಮ್ಮ ನೆಲೆಗಳ ಮೇಲೆ ದಾಳಿ ಮಾಡಿದ ಇಸ್ರೇಲ್ ವಿರುದ್ಧ ಪ್ರತಿಕಾರ ತೀರಿಸಿಕೊಳ್ಳುವುದಾಗಿ ಇರಾನ್‌ನ ಐಆರ್‌ಜಿಸಿ ಪ್ರತಿಜ್ಞೆ ಮಾಡಿದೆ..
ಇರಾನ್ ಸರ್ಕಾರಿ ಮಾಧ್ಯಮಗಳ ವರದಿಯ ಪ್ರಕಾರ, ಯುರೇನಿಯಂ ಪುಷ್ಟೀಕರಣ ಘಟಕವು ‘ಯೆಲ್ಲೋಕೇಕ್’ಅನ್ನು ಉತ್ಪಾದಿಸುತ್ತಿತ್ತು. ಇದು ಪರಮಾಣು ಇಂಧನ ಉತ್ಪಾದನೆಯ ಆರಂಭಿಕ ಹಂತಗಳಲ್ಲಿ ಬಳಸಲಾಗುವ ಸಾಂದ್ರೀಕೃತ ಯುರೇನಿಯಂ ಪುಡಿಯಾಗಿದೆ. ಇದರ ಮೇಲೆ ಇಸ್ರೇಲ್ ದಾಳಿ ನಡೆಸಿದೆ.
ಇರಾನ್‌ನ ಪರಮಾಣು ಶಕ್ತಿ ಸಂಸ್ಥೆಯ ಪ್ರಕಾರ, “ಶುಕ್ರವಾರ ತಡರಾತ್ರಿ ಇರಾನ್‌ನ ಬುಶೆಹರ್ ಪರಮಾಣು ಸ್ಥಾವರದ ಮೇಲೆ ಕ್ಷಿಪಣಿ ದಾಳಿ ನಡೆದಿದೆ. ಆದರೆ, ಯಾವುದೇ ಪ್ರಾಣಾಪಾಯ, ಆಸ್ತಿ ಪಾಸ್ತಿ ಹಾನಿ ಅಥವಾ ತಾಂತ್ರಿಕ ಅಡಚಣೆಗಳು ಸಂಭವಿಸಿಲ್ಲ” ಎಂದು ವರದಿಯಾಗಿದೆ.
ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ನೊಂದಿಗೆ ಸಂಪರ್ಕ ಹೊಂದಿರುವ ಇರಾನ್‌ನ ಅರೆ-ಸರ್ಕಾರಿ ಸುದ್ಧಿ ಸಂಸ್ಥೆ ‘ಫಾರ್ಸ್’ (Fars), “ಭಾರಜಲ ರಿಯಾಕ್ಟರ್ ಮೇಲಿನ ದಾಳಿಯಲ್ಲಿ ಯಾವುದೇ ಸಾವು-ನೋವು ಸಂಭವಿಸಿಲ್ಲ. ಸ್ಥಳೀಯ ಜನರಿಗೆ ಯಾವುದೇ ಅಪಾಯವಿಲ್ಲ. ಈ ಘಟಕದ ಮೇಲೆ ಎರಡು ಬಾರಿ ದಾಳಿ ನಡೆದಿದೆ ಎಂದು ವರದಿ ಮಾಡಿದೆ.
ಭಾರಜಲವು ಪರಮಾಣು ರಿಯಾಕ್ಟರ್‌ಗಳನ್ನು ನಿರ್ವಹಿಸಲು ಬಳಸುವ ಒಂದು ವಿಶಿಷ್ಟ ವಸ್ತುವಾಗಿದೆ. ಅರಾಕ್ ರಿಯಾಕ್ಟರ್ ಅನ್ನು ಮೂಲತಃ ಶಸ್ತ್ರಾಸ್ತ್ರ ದರ್ಜೆಯ ಪ್ಲುಟೋನಿಯಂ ಉತ್ಪಾದನಾ ಸಾಮರ್ಥ್ಯ ಹೊಂದುವಂತೆ ವಿನ್ಯಾಸಗೊಳಿಸಲಾಗಿತ್ತು. ಈ ವಸ್ತುಗಳನ್ನು ಪರಮಾಣು ಶಸ್ತ್ರಾಸ್ತ್ರಗಳಿಗೆ ನ್ಯೂಟ್ರಾನ್ ಮೂಲವಾಗಿಯೂ ಬಳಸಬಹುದು ಎಂದು ತಿಳಿದುಬಂದಿದೆ.
2025ರ ನೂನ್‌ನಲ್ಲಿ ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧದ ಸಮಯದಲ್ಲಿಯೂ ಈ ಘಟಕದ ಮೇಲೆ ದಾಳಿ ನಡೆಸಲಾಗಿತ್ತು. ಇದು ಇರಾನ್ ಆಡಳಿತಕ್ಕೆ ‘ಗಣನೀಯ ಆರ್ಥಿಕ ಆಸ್ತಿ’ಯಾಗಿದ್ದು, ಇರಾನ್ ಪರಮಾಣು ಶಕ್ತಿ ಸಂಸ್ಥೆಗೆ ಕೋಟ್ಯಂತರ ಡಾಲರ್ ಆದಾಯ ತಂದುಕೊಡುತ್ತಿತ್ತು ಎಂದು ಇಸ್ರೇಲ್ ಸೇನೆ ತಿಳಿಸಿದೆ.
“ಒಂಬತ್ತು ತಿಂಗಳ ಹಿಂದೆ ದಾಳಿಗೊಳಗಾಗಿದ್ದ ಈ ಘಟಕವನ್ನು ಪುನರ್ನಿರ್ಮಿಸಲು ಇರಾನ್ ಶ್ರಮಿಸಿತ್ತು. ಶಸ್ತ್ರಾಸ್ತ್ರ ದರ್ಜೆಯ ಪ್ಲುಟೋನಿಯಂ ಉತ್ಪಾದಿಸಲು ಸಾಧ್ಯವಾಗದಂತೆ ರಿಯಾಕ್ಟರ್ ಅನ್ನು ಮಾರ್ಪಡಿಸಬೇಕೆಂಬ ಆದೇಶವನ್ನು ಇರಾನ್ ಉದ್ದೇಶಪೂರ್ವಕವಾಗಿ ತಪ್ಪಿಸಿತ್ತು” ಎಂದು ಇಸ್ರೇಲ್ ಆರೋಪಿಸಿದೆ.
ಶುಕ್ರವಾರ ಬೆಳಗ್ಗೆ, “ಇರಾನ್‌ನ ಅರಾಕ್ ನಗರದ ಸಮೀಪದ ಮಿಲಿಟರಿ ಮೂಲಸೌಕರ್ಯಗಳ ಮೇಲೆ ದಾಳಿ ನಡೆಯಲಿದೆ. ನಗರದ ನಿವಾಸಿಗಳು ಸ್ಥಳಾಂತರಗೊಳ್ಳಬೇಕು. ಖೈರಾಬಾದ್ ಕೈಗಾರಿಕಾ ವಲಯದಲ್ಲಿರುವವರು ಕೂಡ ಸ್ಥಳಾಂತರ ಮಾಡಬೇಕು” ಎಂದು ಇಸ್ರೇಲ್ ಎಚ್ಚರಿಕೆ ನೀಡಿತ್ತು.
ಈ ಲೇಖನ ಓದಿದ್ದೀರಾ?: ‘ವಿಶ್ವಗುರು’ವಿನ ನಿಜ ಬಣ್ಣ ಬಯಲು ಮಾಡಿದ ಮಧು ಕಿಶ್ವರ್: ಸುದ್ದಿ ಮಾಡದ ಮಡಿಲ ಮಾಧ್ಯಮಗಳು
ಅದಾದ ಕೆಲವೇ ಕ್ಷಣಗಳಲ್ಲಿ, ಇರಾನ್‌ನ ಮೂರು ಪ್ರದೇಶಗಳಲ್ಲಿನ ಮಿಲಿಟರಿ ಮೂಲಸೌಕರ್ಯಗಳ ಮೇಲೆ ಏಕಕಾಲದಲ್ಲಿ ಇಸ್ರೇಲ್ ಪಡೆ ದಾಳಿ ನಡೆಸಿದೆ. ಭಾರಜಲ ಸಂಶೋಧನಾ ರಿಯಾಕ್ಟರ್ ಮೇಲಿನ ದಾಳಿಯ ಬೆನ್ನಲ್ಲೇ, ಅರ್ದಕಾನ್‌ನಲ್ಲಿರುವ ಯೆಲ್ಲೋಕೇಕ್ ಉತ್ಪಾದನಾ ಘಟಕದ ಮೇಲೆ ದಾಳಿ ನಡೆದಿದೆ ಎಂದು ಇರಾನ್ ಸರ್ಕಾರಿ ಮಾಧ್ಯಮಗಳು ವರದಿ ಮಾಡಿವೆ. ನಂತರ ಇಸ್ರೇಲ್ ಸೇನೆಯೂ ಈ ಸ್ಥಳದ ಮೇಲೆ ದಾಳಿ ಮಾಡಿರುವುದನ್ನು ಖಚಿತಪಡಿಸಿದೆ.
ತಮ್ಮ ‘ಕೈಗಾರಿಕಾ ಕೇಂದ್ರಗಳ’ ಮೇಲೆ ದಾಳಿ ನಡೆದಿದೆ. ನಾವು ಕೂಡ ಪ್ರತಿಕಾರವಾಗಿ ಅಮೆರಿಕದ ಷೇರುದಾರರನ್ನು ಹೊಂದಿರುವ ಅಥವಾ ಇಸ್ರೇಲ್‌ನೊಂದಿಗೆ ಸಂಬಂಧ ಹೊಂದಿರುವ ಮಧ್ಯಪ್ರಾಚ್ಯದ ಕೈಗಾರಿಕಾ ಕಂಪನಿಗಳ ಮೇಲೆ ಪ್ರತಿದಾಳಿ ನಡೆಸುತ್ತೇವೆ ಎಂದು ಇರಾನ್ ಸೇನೆ ಘೋಷಿಸಿದೆ. ಅಂತಹ ಕಂಪನಿಗಳ ಸಮೀಪವಿರುವ ನಿವಾಸಿಗಳು ಕೂಡ ಸ್ಥಳಾಂತರಗೊಳ್ಳಬೇಕು ಎಂದು ಇರಾನ್ ಹೇಳಿದೆ.
“ನಮ್ಮ ಹೋರಾಟಗಾರರು ಪ್ರತೀಕಾರದ ದಾಳಿಗಳನ್ನು ನಡೆಸುತ್ತಿದ್ದಾರೆ. ಆದ್ದರಿಂದ ಅಮೆರಿಕದ ಷೇರುದಾರರನ್ನು ಹೊಂದಿರುವ ಪ್ರದೇಶದ ಕೈಗಾರಿಕಾ ಕಂಪನಿಗಳ ಎಲ್ಲ ಉದ್ಯೋಗಿಳು ಮತ್ತು ಈ ಪ್ರದೇಶದಲ್ಲಿ ಝಿಯಾನಿಸ್ಟ್ ಆಡಳಿತದೊಂದಿಗೆ ಮೈತ್ರಿ ಮಾಡಿಕೊಂಡಿರುವ ಬೃಹತ್ ಕೈಗಾರಿಕೆಗಳ ಸಿಬ್ಬಂದಿಗೆ ನಾವು ಎಚ್ಚರಿಕೆ ನೀಡುತ್ತೇವೆ. ನಿಮ್ಮ ಪ್ರಾಣಕ್ಕೆ ಅಪಾಯವಾಗದಂತೆ ತಕ್ಷಣವೇ ನಿಮ್ಮ ಕೆಲಸದ ಸ್ಥಳಗಳನ್ನು ಬಿಟ್ಟು ಹೊರಬನ್ನಿ,” ಎಂದು IRGC ತಿಳಿಸಿದೆ.



