ದಕ್ಷಿಣ ಲೆಬನಾನ್‌ನ ನಬಾತಿಯೆ ನಗರ ಮತ್ತು ಸುತ್ತಮುತ್ತಲಿನ ಪಟ್ಟಣಗಳ ಮೇಲೆ ಇಸ್ರೇಲ್ ನಡೆಸಿದ ಭೀಕರ ವೈಮಾನಿಕ ದಾಳಿಯಲ್ಲಿ ಕನಿಷ್ಠ 16 ಮಂದಿ ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ. ಲೆಬನಾನ್ ಸೇರಿದಂತೆ ಎಲ್ಲ ರಂಗಗಳಲ್ಲೂ ಸೇನಾ ಕಾರ್ಯಾಚರಣೆಯನ್ನು ತಕ್ಷಣವೇ ನಿಲ್ಲಿಸುವ ಉದ್ದೇಶ ಹೊಂದಿರುವ ‘ಅಮೆರಿಕ-ಇರಾನ್’ ನಡುವಿನ ಶಾಂತಿ ಒಪ್ಪಂದವು ಜಾರಿಗೆ ಬಂದ ಬೆನ್ನಲ್ಲೇ ಶುಕ್ರವಾರ ಮುಂಜಾನೆ ಈ ಮಾರಣಾಂತಿಕ ದಾಳಿ ನಡೆದಿದೆ. ಇಸ್ರೇಲ್‌ನ ಈ ನಡೆಯು ಮಧ್ಯಪ್ರಾಚ್ಯದಲ್ಲಿ ಶಾಂತಿ ನೆಲೆಸುವಂತೆ ಮಾಡಲು ನಡೆಸುತ್ತಿರುವ ರಾಜತಾಂತ್ರಿಕ ಪ್ರಯತ್ನಗಳಿಗೆ ಭಾರಿ ಹಿನ್ನಡೆಯನ್ನುಂಟು ಮಾಡಿದೆ.
ಮಧ್ಯರಾತ್ರಿಯ ಬಳಿಕ ಇಸ್ರೇಲ್ ಯುದ್ಧವಿಮಾನಗಳು ಹಾಗೂ ಡ್ರೋನ್‌ಗಳು ಅಲ್-ಶರ್ಕಿಯಾ, ಹರೌಫ್ ಮತ್ತು ಕ್ಫಾರ್ ಸಿರ್ ಪಟ್ಟಣಗಳ ವಸತಿ ಪ್ರದೇಶಗಳನ್ನು ಗುರಿಯಾಗಿಸಿ ಸರಣಿ ದಾಳಿ ನಡೆಸಿವೆ ಎಂದು ಲೆಬನಾನ್‌ನ ರಾಷ್ಟ್ರೀಯ ಸುದ್ದಿ ಸಂಸ್ಥೆ (NNA) ವರದಿ ಮಾಡಿದೆ. ಈ ದಾಳಿಯಿಂದಾಗಿ ಹಲವು ಕಟ್ಟಡಗಳು ನೆಲಸಮವಾಗಿದ್ದು, ಅವಶೇಷಗಳಡಿ ಸಿಲುಕಿರುವವರಿಗಾಗಿ ಶೋಧ ಕಾರ್ಯ ಮುಂದುವರಿದಿದೆ. ಮತ್ತೊಂದೆಡೆ ದಕ್ಷಿಣ ಲೆಬನಾನ್‌ನಲ್ಲಿ ಹಿಜ್ಬುಲ್ಲಾ ವಿರುದ್ಧ ತನ್ನ ಕಾರ್ಯಾಚರಣೆ ಮುಂದುವರಿದಿರುವುದನ್ನು ಇಸ್ರೇಲ್ ಸೇನೆ ಖಚಿತಪಡಿಸಿದ್ದು, ಈ ಕಾದಾಟದಲ್ಲಿ ಲೆಫ್ಟಿನೆಂಟ್ ಕರ್ನಲ್ ಸೇರಿದಂತೆ ತನ್ನ ನಾಲ್ವರು ಯೋಧರು ಬಲಿಯಾಗಿದ್ದಾರೆ ಎಂದು ತಿಳಿಸಿದೆ.
ಇದನ್ನು ಓದಿದ್ದೀರಾ? ಭಾರತಕ್ಕೆ 170 ರನ್‌ಗಳ ಬೃಹತ್ ಜಯ: ಅಫ್ಘಾನ್ ವಿರುದ್ಧ ಸರಣಿ ವಶ
ಈ ತಾಜಾ ದಾಳಿಯು ಇತ್ತೀಚೆಗಷ್ಟೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯನ್ ಅವರು ಸಹಿ ಹಾಕಿರುವ ‘ಇಸ್ಲಾಮಾಬಾದ್ ತಿಳಿವಳಿಕೆ ಒಪ್ಪಂದ’ದ (ಎಂಒಯು) ಅಸ್ತಿತ್ವಕ್ಕೆ ಕುತ್ತು ತಂದಿದೆ. ಇತ್ತೀಚೆಗೆ ಆರಂಭವಾದ ಯುದ್ಧವನ್ನು ಕೊನೆಗೊಳಿಸುವುದು, ಲೆಬನಾನ್ ಮೇಲಿನ ಇಸ್ರೇಲ್ ದಾಳಿಯನ್ನು ತಡೆಯುವುದು ಹಾಗೂ ಇರಾನ್‌ನ ಪರಮಾಣು ಕಾರ್ಯಕ್ರಮ ಮತ್ತು ನಿರ್ಬಂಧಗಳ ಕುರಿತು 60 ದಿನಗಳ ಕಾಲ ಮಾತುಕತೆ ನಡೆಸುವ ಪ್ರಮುಖ ಅಂಶಗಳನ್ನು ಈ ಒಪ್ಪಂದ ಒಳಗೊಂಡಿದೆ. ಆದರೆ, ಇಸ್ರೇಲ್ ತನ್ನ ಸೇನಾ ಕಾರ್ಯಾಚರಣೆಯನ್ನು ಮುಂದುವರಿಸುವ ಮೂಲಕ ಒಪ್ಪಂದದ ಆಶಯವನ್ನು ಗಾಳಿಗೆ ತೂರಿದೆ.
ಲೆಬನಾನ್‌ನಲ್ಲಿ ಇಸ್ರೇಲ್‌ನ ಹಿಂಸಾಚಾರ ಮುಂದುವರಿದಿರುವ ಹಿನ್ನೆಲೆಯಲ್ಲಿ, ಸ್ವಿಟ್ಜರ್ಲೆಂಡ್‌ನಲ್ಲಿ ನಿಗದಿಯಾಗಿದ್ದ ಅಮೆರಿಕ ಮತ್ತು ಇರಾನ್ ನಡುವಿನ ಶಾಂತಿ ಮಾತುಕತೆಯನ್ನು ಮುಂದೂಡಲಾಗಿದೆ. ಲಾಜಿಸ್ಟಿಕ್ಸ್ (ಸಾರಿಗೆ-ಸೌಲಭ್ಯ) ಸಮಸ್ಯೆಗಳಿಂದಾಗಿ ಅಮೆರಿಕದ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಅವರು ತಮ್ಮ ಪ್ರಯಾಣವನ್ನು ವಿಳಂಬ ಮಾಡಿದ್ದಾರೆ ಎಂದು ಶ್ವೇತಭವನ ತಿಳಿಸಿದೆ. ಆದರೆ, ಇಸ್ರೇಲ್ ಸತತ ದಾಳಿ ನಡೆಸುತ್ತಿರುವ ಕಾರಣಕ್ಕಾಗಿ ಇರಾನ್ ತನ್ನ ನಿಯೋಗದ ಪ್ರಯಾಣವನ್ನು ತಡೆಹಿಡಿದಿದೆ ಎಂದು ವರದಿಗಳು ಉಲ್ಲೇಖಿಸಿವೆ. ಮಾತುಕತೆ ಮುಂದೂಡಿಕೆಯಾಗಿರುವುದನ್ನು ಸ್ವಿಟ್ಜರ್ಲೆಂಡ್ ವಿದೇಶಾಂಗ ಸಚಿವಾಲಯ ಸಹ ಖಚಿತಪಡಿಸಿದೆ.




