2017ರಲ್ಲಿ ಅಲ್ಪಸಂಖ್ಯಾತ ಮುಸ್ಲಿಮರ ವಿರುದ್ಧ ನಡೆಸಿದ ಭೀಕರ ಕಾರ್ಯಾಚರಣೆಯಲ್ಲಿ ಮ್ಯಾನ್ಮಾರ್ ಭದ್ರತಾ ಪಡೆಗಳು ಸಾವಿರಾರು ರೋಹಿಂಗ್ಯಾ ನಾಗರಿಕರನ್ನು ಹತ್ಯೆ ಮಾಡಿವೆ ಎಂದು ವಿಶ್ವಸಂಸ್ಥೆಯ ಅತ್ಯುನ್ನತ ನ್ಯಾಯಾಲಯವಾದ ಅಂತಾರಾಷ್ಟ್ರೀಯ ನ್ಯಾಯಾಲಯ (ಐಸಿಜೆ) ಗುರುವಾರ ಹೇಳಿದೆ. ಸುಮಾರು ಮೂರು ಗಂಟೆಗಳ ಕಾಲ ಓದಲಾಗುವ ಈ ಐತಿಹಾಸಿಕ ತೀರ್ಪಿನಲ್ಲಿ, ಮ್ಯಾನ್ಮಾರ್ ‘ನರಮೇಧ’ ಎಸಗಿದೆಯೇ ಎಂಬುದನ್ನು ನ್ಯಾಯಾಲಯ ಇನ್ನೂ ಪ್ರಕಟಿಸಿಲ್ಲ.
ಮ್ಯಾನ್ಮಾರ್ ಸೈನಿಕರು ರೋಹಿಂಗ್ಯಾರನ್ನು ಹತ್ಯೆ ಮಾಡಿದ್ದು, ಮಹಿಳೆಯರ ಮೇಲೆ ವ್ಯಾಪಕ ಲೈಂಗಿಕ ದೌರ್ಜನ್ಯ, ಮಕ್ಕಳ ಮೇಲೆ ತೀವ್ರ ಹಿಂಸಾಚಾರ ಎಸಗಿದ್ದಾರೆ ಮತ್ತು ಅವರ ಗ್ರಾಮಗಳನ್ನು ಧ್ವಂಸಗೊಳಿಸಿದ್ದಾರೆ ಎಂದು ಐಸಿಜೆ ಅಧ್ಯಕ್ಷ ಯುಜಿ ಇವಾಸಾವಾ ತಿಳಿಸಿದ್ದಾರೆ. ಬಾಂಗ್ಲಾದೇಶಕ್ಕೆ ಪಲಾಯನ ಮಾಡುತ್ತಿದ್ದವರ ಮೇಲೂ ದಾಳಿ ನಡೆಸಲಾಗಿದೆ. 2017ರ ಕಾರ್ಯಾಚರಣೆಯಲ್ಲಿ ಅಂದಾಜು 10,000 ರೋಹಿಂಗ್ಯಾರನ್ನು ಕ್ರೂರವಾಗಿ ಹತ್ಯೆ ಮಾಡಲಾಗಿದೆ ಎಂಬ ಅಂಶಕ್ಕೆ ಸೂಕ್ತ ಪುರಾವೆಗಳಿವೆ ಎಂದು ನ್ಯಾಯಾಲಯ ದೃಢಪಡಿಸಿದೆ.
1948ರ ವಿಶ್ವಸಂಸ್ಥೆಯ ನರಮೇಧ ತಡೆ ಒಪ್ಪಂದದ ಅಡಿಯಲ್ಲಿ, ಇಸ್ಲಾಮಿಕ್ ಸಹಕಾರ ಸಂಘಟನೆಯ (ಒಐಸಿ) 57 ರಾಷ್ಟ್ರಗಳ ಬೆಂಬಲದೊಂದಿಗೆ ಗ್ಯಾಂಬಿಯಾ ಈ ಪ್ರಕರಣ ದಾಖಲಿಸಿತ್ತು. 15 ನ್ಯಾಯಮೂರ್ತಿಗಳ ಪೀಠವು ಏಳು ವರ್ಷಗಳಿಂದ ವಿಚಾರಣೆ ನಡೆಸುತ್ತಿದೆ. ದೀರ್ಘಕಾಲದಿಂದ ದೌರ್ಜನ್ಯಕ್ಕೆ ಒಳಗಾದ ರೋಹಿಂಗ್ಯಾ ಸಮುದಾಯವನ್ನು ನಾಶಪಡಿಸುವ ಉದ್ದೇಶದಿಂದಲೇ ವ್ಯವಸ್ಥಿತ ಹಿಂಸಾಚಾರ ನಡೆಸಲಾಗಿದೆ ಎಂದು ಗ್ಯಾಂಬಿಯಾದ ಕಾನೂನು ಸಚಿವ ದಾವುದಾ ಜಾಲ್ಲೊ ವಾದಿಸಿದ್ದಾರೆ.
ಆದರೆ, ಮ್ಯಾನ್ಮಾರ್ ನರಮೇಧದ ಆರೋಪವನ್ನು ನಿರಾಕರಿಸಿದೆ. ಭದ್ರತಾ ಸಿಬ್ಬಂದಿಯ ಹತ್ಯೆಯ ಬಳಿಕ ಉಗ್ರರ ಬಂಡಾಯ ಹತ್ತಿಕ್ಕಲು ಈ ಕ್ರಮ ಕೈಗೊಳ್ಳಲಾಯಿತು ಎಂದು ಮ್ಯಾನ್ಮಾರ್ ಪ್ರತಿನಿಧಿ ಕೊ ಕೊ ಹ್ಲೈಂಗ್ ಜನವರಿಯ ವಿಚಾರಣೆಯಲ್ಲಿ ಸಮರ್ಥಿಸಿಕೊಂಡಿದ್ದರು. ಐಸಿಜೆ ತೀರ್ಪನ್ನು ಜಾರಿಗೊಳಿಸುವ ಅಧಿಕಾರ ಹೊಂದಿಲ್ಲದಿದ್ದರೂ, ನರಮೇಧ ಸಾಬೀತಾದರೆ 2017ರ ಕಾರ್ಯಾಚರಣೆಯ ನೇತೃತ್ವ ವಹಿಸಿದ್ದ ಹಾಗೂ 2021ರ ಸೇನಾ ದಂಗೆಯ ಬಳಿಕ ಈ ವರ್ಷ ಅಧ್ಯಕ್ಷರಾಗಿರುವ ಮಿನ್ ಆಂಗ್ ಹ್ಲೈಂಗ್ ಮೇಲೆ ಅಂತಾರಾಷ್ಟ್ರೀಯ ಒತ್ತಡ ಹೆಚ್ಚಲಿದೆ.
ಈ ಬೆಳವಣಿಗೆಯು ಬಾಂಗ್ಲಾದೇಶದ ಗಡಿಯಲ್ಲಿರುವ ವಿಶ್ವದ ಅತಿದೊಡ್ಡ ನಿರಾಶ್ರಿತರ ಶಿಬಿರದಲ್ಲಿ ವಾಸಿಸುತ್ತಿರುವ 10 ಲಕ್ಷಕ್ಕೂ ಅಧಿಕ ರೋಹಿಂಗ್ಯಾರಲ್ಲಿ ನ್ಯಾಯದ ಆಶಾಕಿರಣ ಮೂಡಿಸಿದೆ. ಅತ್ಯಾಚಾರ ಹಾಗೂ ಹತ್ಯೆ ಎಸಗಿದವರಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಸಂತ್ರಸ್ತರು ಆಗ್ರಹಿಸಿದ್ದಾರೆ. ಪೋಷಕರು ಮತ್ತು ತಮ್ಮನನ್ನು ಕಳೆದುಕೊಂಡಿರುವ 20 ವರ್ಷದ ಮೊಹಮ್ಮದ್ ಉಸ್ಮಾನ್, ತವರಿಗೆ ಮರಳಿ ಕುಟುಂಬಸ್ಥರ ಅಂತಿಮ ವಿಧಿವಿಧಾನ ನೆರವೇರಿಸಲು ಈ ತೀರ್ಪು ನೆರವಾಗಬಹುದು ಎಂಬ ನಿರೀಕ್ಷೆ ವ್ಯಕ್ತಪಡಿಸಿದ್ದಾರೆ.
ಅಂತಾರಾಷ್ಟ್ರೀಯ ಕಾನೂನಿನಲ್ಲಿ ಒಂದು ಸಮುದಾಯವನ್ನು ನಾಶಪಡಿಸುವ ನಿರ್ದಿಷ್ಟ ಉದ್ದೇಶವಿತ್ತು ಎಂಬುದನ್ನು ಸಾಬೀತುಪಡಿಸುವುದು ಕಷ್ಟಕರವಾಗಿದೆ. ಐಸಿಜೆ ಈವರೆಗೆ 1995ರ ಬೋಸ್ನಿಯಾದ ಸ್ರೆಬ್ರೆನಿಕಾ ಹತ್ಯಾಕಾಂಡವನ್ನು ಮಾತ್ರ ನರಮೇಧ ಎಂದು ಘೋಷಿಸಿದೆ. ಹೀಗಾಗಿ, ಈ ಪ್ರಕರಣದಲ್ಲಿ ನ್ಯಾಯಾಲಯ ಅನುಸರಿಸುವ ಕಾನೂನು ವ್ಯಾಖ್ಯಾನವು ಗಾಜಾದಲ್ಲಿ ಪ್ಯಾಲೆಸ್ಟೀನಿಯನ್ನರ ವಿರುದ್ಧ ಇಸ್ರೇಲ್ ನರಮೇಧ ಎಸಗಿದೆ ಎಂದು ದಕ್ಷಿಣ ಆಫ್ರಿಕಾ ದಾಖಲಿಸಿರುವ ಪ್ರಕರಣದ ಮೇಲೂ ಪ್ರಭಾವ ಬೀರಲಿದೆ ಎಂದು ಕಾನೂನು ತಜ್ಞರು ಹಾಗೂ ಹ್ಯೂಮನ್ ರೈಟ್ಸ್ ವಾಚ್ ಅಭಿಪ್ರಾಯಪಟ್ಟಿವೆ.




