ರಕ್ತನಿಧಿ ಕೇಂದ್ರಗಳಲ್ಲಿ ಸಂಗ್ರಹಿಸುವ ರಕ್ತ ವ್ಯರ್ಥವಾಗುವುದನ್ನು ತಡೆಗಟ್ಟಿ, ಸಮರ್ಪಕ ಬಳಕೆಯಾಗುವ ಕಡೆ ಗಮನಹರಿಸಬೇಕು ಎಂದು ಆರೋಗ್ಯಾಧಿಕಾರಿಗಳು, ಹಾಗೂ ಖಾಸಗಿ ರಕ್ತನಿಧಿ ಮುಖ್ಯಸ್ಥರಿಗೆ ಜಿಲ್ಲಾಧಿಕಾರಿ ಪ್ರಕಾಶ್ ಜಿ.ಟಿ. ನಿಟ್ಟಾಲಿ ಅವರು ಹೇಳಿದರು.
ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಜಿಲ್ಲೆಯ ರಕ್ತನಿಧಿ ಕೇಂದ್ರಗಳ ಕಾರ್ಯನಿರ್ವಹಣಾ ವರದಿ, ಏಡ್ಸ್ ನಿಯಂತ್ರಣಕ್ಕಾಗಿ ತೆಗೆದುಕೊಂಡ ಕ್ರಮಗಳು ಹಾಗೂ ಕಾರ್ಯಕ್ರಮಗಳ ಕುರಿತು ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ರಕ್ತದಾನಿಗಳಿಂದ ಸಂಗ್ರಹಿಸಿದ ರಕ್ತವನ್ನು ಕೆಂಪು ರಕ್ತಕಣಗಳು, ಪ್ಲಾಸ್ಮಾ, ಪ್ಲೇಟ್‌ಲೆಟ್‌ಗಳಾಗಿ ಬೇರ್ಪಡಿಸಿ ಅಗತ್ಯವಿರುವ ರೋಗಿಗಳಿಗೆ ಆದ್ಯತೆ ಮೇರೆಗೆ ವಿತರಿಸಬೇಕು. ಹೆರಿಗೆ, ಅಪಘಾತಗಳು, ಶಸ್ತ್ರಚಿಕಿತ್ಸೆಗಳು ಹಾಗೂ ರಕ್ತಸಂಬಂಧಿ ಕಾಯಿಲೆಗಳಂತಹ ತುರ್ತು ಚಿಕಿತ್ಸೆಗೆ ಆದ್ಯತೆ ನೀಡಬೇಕು. ಆಸ್ಪತ್ರೆಗಳ ನಡುವೆ ರಕ್ತದ ಲಭ್ಯತೆ ಮತ್ತು ಬೇಡಿಕೆಯ ಸಮನ್ವಯ ಸಾಧಿಸಬೇಕಲ್ಲದೆ, ರಕ್ತದ ಸಂಗ್ರಹಣೆ, ವಿತರಣೆ ಮತ್ತು ಬಳಕೆಯ ಬಗ್ಗೆ ನಿಖರ ದಾಖಲೆ ನಿರ್ವಹಿಸಬೇಕು. ಸ್ವಯಂಸೇವಾ ಸಂಸ್ಥೆಗಳು ಕಾರ್ಯಕ್ರಮಗಳನ್ನು ಆಯೋಜಿಸಿ ಸಂಗ್ರಹಿಸುವ ರಕ್ತದಲ್ಲಿ ಶೇ. 25ರಷ್ಟನ್ನು ನಿಯಮಾನುಸಾರ ಜಿಲ್ಲಾ ಆರೋಗ್ಯ ಇಲಾಖೆಗೆ ಸಕಾಲದಲ್ಲಿ ನೀಡುವಂತೆ ಅವರು ಸೂಚಿಸಿದರು.
ಸಂಗ್ರಹಿಸಲಾಗುವ ಜೀವರಕ್ಷಕ ರಕ್ತವನ್ನು ಯಾವುದೇ ಕಾರಣಕ್ಕೂ ಹಾಳಾಗದಂತೆ ಹಾಗೂ ಸದ್ಭಳಕೆ ಆಗುವಂತೆ ನೋಡಿಕೊಳ್ಳಬೇಕು. ಶಾಲಾ-ಕಾಲೇಜುಗಳು, ಸರ್ಕಾರಿ ಕಚೇರಿಗಳು, ಕೈಗಾರಿಕೆಗಳು, ಸಂಘ-ಸಂಸ್ಥೆಗಳು, ಯುವಜನರು ಮತ್ತು ಸ್ವಯಂಸೇವಾ ಸಂಘಟನೆಗಳ ಸಹಯೋಗದಲ್ಲಿ ರಕ್ತದಾನ ಶಿಬಿರಗಳನ್ನು ಆಯೋಜಿಸಬೇಕು. ಈ ಮೂಲಕ ಸ್ವಯಂಪ್ರೇರಿತ ರಕ್ತದಾನಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡುವಂತೆ ಸಲಹೆ ನೀಡಿದರು.
ಆರೋಗ್ಯ ಸಚಿವರ ಸೂಚನೆಯಂತೆ ವಿಶ್ವ ರಕ್ತದಾನಿಗಳ ಮಾಸಾಚರಣೆ ಅಂಗವಾಗಿ ನವೆಂಬರ್ 25ರಂದು ಶಿವಮೊಗ್ಗ ಜಿಲ್ಲಾ ಕೇಂದ್ರ ಮತ್ತು ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಸರ್ಕಾರಿ ಮತ್ತು ಸರ್ಕಾರೇತರ ಸಂಸ್ಥೆಗಳ ಸಹಯೋಗದೊಂದಿಗೆ ರಕ್ತದಾನ ಶಿಬಿರಗಳನ್ನು ಆಯೋಜಿಸಿ, ಸುಮಾರು 1000ರಕ್ತದ ಘಟಕಗಳನ್ನು ಸಂಗ್ರಹಿಸಲು ಉದ್ಧೇಶಿಸಲಾಗಿದೆ. ಆಸಕ್ತರು ಸಹಕರಿಸಲು ಮನವಿ ಮಾಡಲಾಗಿದೆ. - ಡಾ|| ಎಸ್.ಕೆ.ಕಿರಣ್, ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ.
ಜಿಲ್ಲೆಯಲ್ಲಿ ಹೊಸದಾಗಿ ಎಚ್‌ಐವಿ ಸೋಂಕು ಪತ್ತೆಯಾಗುತ್ತಿರುವ ಪ್ರಮಾಣ ಕಡಿಮೆ ಮಾಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಅದಕ್ಕಾಗಿ ಪರೀಕ್ಷೆ ಮತ್ತು ಚಿಕಿತ್ಸೆ ಸೌಲಭ್ಯಗಳ ವ್ಯಾಪ್ತಿ ಹೆಚ್ಚಿಸುವಂತೆ ಸೂಚಿಸಿದ ಅವರು, ಸೋಂಕಿತ ಗರ್ಭಿಣಿಯರು ಮತ್ತು ಮಕ್ಕಳಿಗೆ ವಿಶೇಷ ಆರೈಕೆ ಒದಗಿಸಬೇಕಲ್ಲದೇ, ತಾಯಿಯಿಂದ ಮಗುವಿಗೆ ಸೋಂಕು ಹರಡದಂತೆ ತುರ್ತು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಅವರು ವೈದ್ಯಾಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಜಿಲ್ಲಾ ಏಯ್ಡ್ಸ್ ನಿಯಂತ್ರಣಾಧಿಕಾರಿ ಡಾ|| ಎಸ್.ಕೆ.ಕಿರಣ್, ಜಿಲ್ಲಾ ಸರ್ಜನ್ ಡಾ|| ನಾಗೇಶ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|| ಕಾಂತರಾಜ್, ಡಾ|| ಯೋಗೀಶ್ ಸೇರಿದಂತೆ ಜಿಲ್ಲೆಯ ಎಲ್ಲಾ ತಾಲೂಕುಗಳ ಆರೋಗ್ಯಾಧಿಕಾರಿಗಳು, ರಕ್ತನಿಧಿ ಕೇಂದ್ರಗಳ ಮುಖ್ಯಸ್ಥರು, ಸ್ವಯಂ ಸೇವಾ ಸಂಸ್ಥೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.




