ಕೃತಕ ಬುದ್ಧಿಮತ್ತೆ (AI) ಮತ್ತು ರೋಬೋಟಿಕ್ಸ್ ಕ್ಷೇತ್ರದಲ್ಲಿ ವೇಗವಾಗಿ ಮುನ್ನಡೆಯುತ್ತಿರುವ ಚೀನಾ, ಇದೀಗ ರೋಬೋಟ್‌ಗಳನ್ನು ನೈಜ ಪೊಲೀಸ್ ಮತ್ತು ಸಂಚಾರ ನಿಯಂತ್ರಣ ಕಾರ್ಯಗಳಿಗೂ ಬಳಸಲು ಆರಂಭಿಸಿದೆ. ಹ್ಯಾಂಗ್‌ಝೌ ನಗರದಲ್ಲಿ ‘T2’ ಎಂಬ ರೋಬೋಟ್‌ಗಳನ್ನು ಟ್ರ್ಯಾಫಿಕ್ ನಿಯಂತ್ರಣಕ್ಕೆ ನಿಯೋಜಿಸಲಾಗಿದ್ದು, ಮತ್ತೊಂದೆಡೆ ಚೀನಾದ ರೋಬೋಟಿಕ್ಸ್ ಕಂಪನಿಯೊಂದು ‘ಸೂಪರ್‌ಮ್ಯಾನ್’ ಹೆಸರಿನ ಹ್ಯೂಮನಾಯ್ಡ್ ರೋಬೋಟ್ ಅನ್ನು ಪರಿಚಯಿಸಿದೆ, ಅದು ಉಸೇನ್ ಬೋಲ್ಟ್ ಅವರ 100 ಮೀಟರ್ ಓಟದ ವಿಶ್ವದಾಖಲೆಯ ವೇಗವನ್ನೂ ಮೀರಬಲ್ಲದು ಎಂದು ಹೇಳಿಕೊಂಡಿದೆ.
1.88 ಮೀಟರ್ ಎತ್ತರ ಮತ್ತು 98 ಕೆಜಿ ತೂಕ ಹೊಂದಿರುವ T2 ರೋಬೋಟ್ ಅನ್ನು SUPCON Information ಅಭಿವೃದ್ಧಿಪಡಿಸಿದೆ. ಹ್ಯಾಂಗ್‌ಝೌನ ಜನನಿಬಿಡ ರಸ್ತೆಯೊಂದರಲ್ಲಿ ಇದನ್ನು ನಿಯೋಜಿಸಲಾಗಿದೆ. ಕ್ಯಾಮೆರಾ, ರಾಡಾರ್ ಮತ್ತು ಆನ್‌ಬೋರ್ಡ್ ಕಂಪ್ಯೂಟಿಂಗ್ ವ್ಯವಸ್ಥೆ ಹೊಂದಿರುವ ಈ ರೋಬೋಟ್, ಹೆಲ್ಮೆಟ್ ಧರಿಸದ ಇ-ಬೈಕ್ ಸವಾರರು, ಬೈಕ್‌ನಲ್ಲಿ ನಿಗದಿತ ಮಿತಿಗಿಂತ ಹೆಚ್ಚು ಸ್ಪೀಡ್‌ನಲ್ಲಿ ಹೋಗುವ ಪ್ರಯಾಣಿಕರು, ಸ್ಟಾಪ್‌ಲೈನ್ ದಾಟುವ ವಾಹನಗಳು ಮತ್ತು ಸಿಗ್ನಲ್ ಉಲ್ಲಂಘಿಸುವ ಪಾದಚಾರಿಗಳನ್ನು ಗುರುತಿಸಬಲ್ಲದು.
ಆದರೆ ಈ ರೋಬೋಟ್ ಪೊಲೀಸ್‌ಗೆ ಬಂಧಿಸುವ ಅಧಿಕಾರವಿಲ್ಲ ಮತ್ತು ಬಂದೂಕನ್ನೂ ಹೊಂದಿಲ್ಲ. ಬದಲಿಗೆ, ಸಂಚಾರ ನಿಯಮ ಉಲ್ಲಂಘಿಸಿದವರಿಗೆ ಎಚ್ಚರಿಕೆ ನೀಡುತ್ತದೆ. ದಾರಿ, ಪಾರ್ಕಿಂಗ್ ಮತ್ತು ಟ್ರಾಫಿಕ್ ನಿಯಮಗಳ ಬಗ್ಗೆ ಪ್ರಶ್ನೆಗಳಿಗೆ ಉತ್ತರಿಸುತ್ತದೆ. ತುರ್ತು ಪರಿಸ್ಥಿತಿಯಲ್ಲಿ ಪೊಲೀಸರೊಂದಿಗೆ ಸಂಪರ್ಕ ಕಲ್ಪಿಸುತ್ತದೆ. ರೋಬೋಟ್‌ನ ಏಳು ಜಾಯಿಂಟ್‌ಗಳಿರುವ ಕೈಗಳು ಟ್ರಾಫಿಕ್ ಸಿಗ್ನಲ್‌ಗೆ ಅನುಗುಣವಾಗಿ ಮಾನವ ಟ್ರಾಫಿಕ್ ಪೊಲೀಸರಂತೆ ಸಂಜ್ಞೆಗಳನ್ನು ನೀಡಬಲ್ಲವು.

SUPCON ಮೇ ತಿಂಗಳಿನಿಂದ ಹ್ಯಾಂಗ್‌ಝೌನಲ್ಲಿ 15 ರೋಬೋಟ್‌ಗಳನ್ನು ನಿಯೋಜಿಸಿದ್ದು, ಅವು ಈವರೆಗೆ 1.70 ಲಕ್ಷಕ್ಕೂ ಹೆಚ್ಚು ಎಚ್ಚರಿಕೆಗಳನ್ನು ನೀಡಿವೆ ಎಂದು ಕಂಪನಿ ಹೇಳಿದೆ. ಹೆಲ್ಮೆಟ್ ಇಲ್ಲದೆ ವಾಹನ ಚಲಾಯಿಸುವುದು ಮತ್ತು ಸ್ಟಾಪ್‌ಲೈನ್ ದಾಟುವ ವಾಹನಗಳ ಪ್ರಕರಣಗಳು ತಿಂಗಳಿಗೆ ಶೇ.40ಕ್ಕೂ ಹೆಚ್ಚು ಕಡಿಮೆಯಾಗಿವೆ ಎಂದೂ ಕಂಪನಿ ಹೇಳಿಕೊಂಡಿದೆ.
T2 ರೋಬೋಟ್‌ಗಳ ಪ್ರಮುಖ ಅನುಕೂಲವೆಂದರೆ ಅವು ದೀರ್ಘಕಾಲ ನಿರಂತರವಾಗಿ ಕೆಲಸ ಮಾಡಬಲ್ಲವು ಎನ್ನುವುದು. SUPCONನ ಇಂಟೆಲಿಜೆಂಟ್ ಅನ್‌ಮ್ಯಾನ್ಡ್ ಸಿಸ್ಟಮ್ಸ್ ಇನ್ನೋವೇಶನ್ ಸೆಂಟರ್ ಮುಖ್ಯಸ್ಥ ಕಾವೊ ಹುಯಿ ಪ್ರಕಾರ, “ಈ ರೋಬೋಟ್‌ಗೆ ದಣಿವಾಗಲ್ಲ. ದೀರ್ಘಕಾಲ ಸ್ಥಿರವಾಗಿ ಕೆಲಸ ಮಾಡಬಲ್ಲದು.” ರೋಬೋಟ್‌ಗಳು ಬೆಳಗ್ಗೆ 7ರಿಂದ ಸಂಜೆ 6ರವರೆಗೆ ಸ್ವಯಂಚಾಲಿತವಾಗಿ ಕಾರ್ಯನಿರ್ವಹಿಸುತ್ತವೆ. ನಿಗದಿತ ಸ್ಥಳಗಳ ನಡುವೆ ಸಂಚರಿಸುವ ಅವುಗಳನ್ನು ಕೇಂದ್ರ ನಿಯಂತ್ರಣ ವ್ಯವಸ್ಥೆಯ ಮೂಲಕ ಟ್ರಾಫಿಕ್ ಪೊಲೀಸರು ಮೇಲ್ವಿಚಾರಣೆ ಮಾಡಿ ಅಗತ್ಯವಿದ್ದಾಗ ಸ್ಥಳ ಬದಲಾಯಿಸಬಹುದು.
SUPCON ಪ್ರಕಾರ, ಚೀನಾದ ಮೂರು ಪ್ರಾಂತ್ಯಗಳ ಸುಮಾರು ಎಂಟು ನಗರಗಳಲ್ಲಿ ಈಗಾಗಲೇ 50ರಷ್ಟು ಇಂತಹ ರೋಬೋಟ್‌ಗಳು ಕಾರ್ಯನಿರ್ವಹಿಸುತ್ತಿವೆ. ಈ ವರ್ಷದ ಅಂತ್ಯದ ವೇಳೆಗೆ ಅವುಗಳ ಸಂಖ್ಯೆಯನ್ನು ಸುಮಾರು 200ಕ್ಕೆ ಏರಿಸುವ ಗುರಿ ಹೊಂದಲಾಗಿದೆ.
ಈಗ ‘ಸೂಪರ್‌ಮ್ಯಾನ್’ ಸರದಿ
ಚೀನಾದ ರೋಬೋಟಿಕ್ಸ್ ಕ್ಷೇತ್ರದ ಮತ್ತೊಂದು ಬೆಳವಣಿಗೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. Unitree ಕಂಪನಿ ಅಭಿವೃದ್ಧಿಪಡಿಸಿರುವ ‘Superman’ ಎಂಬ ಹ್ಯೂಮನಾಯ್ಡ್ ರೋಬೋಟ್, ಮಾನವರ ನಿಂತುಕೊಂಡೇ ಮಾಡುವ ಎತ್ತರ ಜಿಗಿತ ಮತ್ತು ಓಟದ ವೇಗದ ದಾಖಲೆಗಳನ್ನು ಮೀರಿದೆ ಎಂದು ಕಂಪನಿ ಹೇಳಿಕೊಂಡಿದೆ. ಕಂಪನಿಯ ಪ್ರಕಾರ, ಈ ರೋಬೋಟ್‌ನ ಗರಿಷ್ಠ ವೇಗ ಸೆಕೆಂಡ್‌ಗೆ 12.66 ಮೀಟರ್. ಇದೇ ವೇಗವನ್ನು 100 ಮೀಟರ್‌ವರೆಗೆ ನಿರಂತರವಾಗಿ ಕಾಯ್ದುಕೊಂಡರೆ, ಅದು ಉಸೇನ್ ಬೋಲ್ಟ್ ಅವರ 100 ಮೀಟರ್ ವಿಶ್ವದಾಖಲೆಯ ಸರಾಸರಿ ವೇಗಕ್ಕಿಂತ ಹೆಚ್ಚಾಗುತ್ತದೆ. ಆದರೆ ಇದನ್ನು ಬೋಲ್ಟ್ ವಿರುದ್ಧ ಓಡಿಸಿ ಪರೀಕ್ಷಿಸಲಾಗಿಲ್ಲ.


ಇದನ್ನೂ ಓದಿ: ಚೀನಾದ ‘ಹ್ಯೂಮನಾಯ್ಡ್ ರೋಬೋಟ್’ಗಳಿಗೆ ಜಗತ್ತು ನಿಬ್ಬೆರಗು!
Unitree ಪ್ರಕಾರ, ‘Superman’ ಅನ್ನು ಕೇವಲ ಮೂರು ತಿಂಗಳಿಗೂ ಸ್ವಲ್ಪ ಹೆಚ್ಚು ಅವಧಿಯಲ್ಲಿ ಅಭಿವೃದ್ಧಿಪಡಿಸಲಾಗಿದೆ. ಮುಂದಿನ ದಿನಗಳಲ್ಲಿ ಇದರ ಸಾಮರ್ಥ್ಯವನ್ನು ಇನ್ನಷ್ಟು ಹೆಚ್ಚಿಸುವ ಅವಕಾಶವಿದೆ ಎಂದು ಕಂಪನಿ ಹೇಳಿದೆ. ರೋಬೋಟ್ 2 ಮೀಟರ್ ಎತ್ತರಕ್ಕೆ ನಿಂತಲ್ಲಿಂದಲೇ ಜಿಗಿಯಬಲ್ಲದು ಮತ್ತು ಅದರ ಕಾಲುಗಳ ಉದ್ದ 0.85 ಮೀಟರ್ ಎಂದು ಕಂಪನಿ ತಿಳಿಸಿದೆ. ಆದರೆ ಈ ಕಾರ್ಯಕ್ಷಮತೆಯ ಅಂಕಿಅಂಶಗಳನ್ನೂ ಸ್ವತಂತ್ರವಾಗಿ ಪರಿಶೀಲಿಸಲಾಗಿಲ್ಲ. ಇದೇ ವೇಳೆ, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಕೆಲವು ವಿಡಿಯೊಗಳಲ್ಲಿ ‘Superman’ ದಿಕ್ಕು ತಪ್ಪಿ ಗೋಡೆಗೆ ಡಿಕ್ಕಿ ಹೊಡೆಯುತ್ತಿರುವ ದೃಶ್ಯಗಳೂ ಕಾಣಿಸಿಕೊಂಡಿವೆ.
ಚೀನಾ ರೋಬೋಟ್‌ಗಳನ್ನು ಕೇವಲ ಪ್ರದರ್ಶನದ ವಸ್ತುವಾಗಿ ಇರಿಸದೆ, ಸಂಚಾರ ನಿಯಂತ್ರಣದಂತಹ ನೈಜ ಕಾರ್ಯಗಳಲ್ಲಿ ಬಳಸಲು ಮುಂದಾಗಿದೆ. ಆದರೆ ಇವುಗಳನ್ನು ಇತರ ದೇಶಗಳಲ್ಲೂ ನಿಯೋಜಿಸುವುದು ಅಷ್ಟು ಸುಲಭವಲ್ಲ. AiMOGA ಸಂಸ್ಥೆಯ ಕಾರ್ಯನಿರ್ವಾಹಕ ಝಾಂಗ್ ಗುಯಿಬಿಂಗ್ ಪ್ರಕಾರ, ಪೊಲೀಸ್ ರೋಬೋಟ್‌ಗಳು ಸ್ಥಳೀಯ ಕಾನೂನುಗಳಿಗೆ ಅನುಗುಣವಾಗಿರಬೇಕು. ಅಲ್ಲದೆ, ಪೊಲೀಸ್ ವ್ಯವಸ್ಥೆಗಳೊಂದಿಗೆ ಸಂಯೋಜನೆ, ಅಗತ್ಯ ಪ್ರಮಾಣೀಕರಣ ಮತ್ತು ಡೇಟಾ ಸಂರಕ್ಷಣಾ ನಿಯಮಗಳ ಪಾಲನೆ ಕೂಡ ಅಗತ್ಯವಾಗಲಿದೆ. ಹೀಗಾಗಿ ಚೀನಾದ ಈ ಪ್ರಯೋಗ ಕೇವಲ ರೋಬೋಟ್‌ಗಳ ಸಾಮರ್ಥ್ಯದ ಪ್ರದರ್ಶನವಲ್ಲ. ಮುಂದಿನ ದಿನಗಳಲ್ಲಿ ಪೊಲೀಸಿಂಗ್, ಸಂಚಾರ ನಿಯಂತ್ರಣ ಮತ್ತು ಸಾರ್ವಜನಿಕ ಸೇವೆಗಳಲ್ಲಿ ಮಾನವರ ಜಾಗವನ್ನು AI ಹಾಗೂ ರೋಬೋಟ್‌ಗಳು ಎಷ್ಟರ ಮಟ್ಟಿಗೆ ತುಂಬಬಹುದು ಎಂಬ ಪ್ರಶ್ನೆಗೆ ಇದು ಒಂದು ನೈಜ ಪ್ರಯೋಗವಾಗಲಿದೆ.




