ಭಾರತದಲ್ಲಿ ತಮ್ಮ ಉಪಗ್ರಹ ಆಧಾರಿತ ಇಂಟರ್ನೆಟ್ ಸೇವೆ ‘ಸ್ಟಾರ್ಲಿಂಕ್’ ಮಾರುಕಟ್ಟೆಗೆ ಪ್ರವೇಶಿಸುವುದನ್ನು ದೇಶದ ಕೆಲವು ಉದ್ಯಮಿಗಳು, ಏಕಸ್ವಾಮ್ಯ ಹೊಂದಿರುವ ಪ್ರಭಾವಿಗಳು ತಡೆಯುತ್ತಿದ್ದಾರೆ ಎಂದು ಟೆಸ್ಲಾ ಮತ್ತು ಸ್ಪೇಸ್ಎಕ್ಸ್ ಸಂಸ್ಥಾಪಕ ಎಲಾನ್ ಮಸ್ಕ್ ಗಂಭೀರ ಆರೋಪ ಮಾಡಿದ್ದಾರೆ.
ಎಲಾನ್ ಮಸ್ಕ್ ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಮುಕೇಶ್ ಅಂಬಾನಿ ಅವರನ್ನು ಗುರಿಯಾಗಿಸಿಕೊಂಡು “ಪೂಜ್ಯ ಪ್ರಧಾನಮಂತ್ರಿ ಅಂಬಾನಿ ಅವರೇ, ನೀವೇ ಭಾರತದ ನಿಜವಾದ ಬಾಸ್ ಎಂದು ನನಗೆ ತಿಳಿಯದಿದ್ದಕ್ಕೆ ದಯವಿಟ್ಟು ನನ್ನ ಕ್ಷಮೆಯಾಚನೆಯನ್ನು ಸ್ವೀಕರಿಸಿ” ಎಂದು ವ್ಯಂಗ್ಯವಾಗಿ ಪೋಸ್ಟ್ ಮಾಡಿದ್ದಾರೆ.
ಇದನ್ನೂ ಓದಿ: ಭಾರತದಲ್ಲಿ ಪರವಾನಗಿ ಪಡೆದ ಎಲಾನ್ ಮಸ್ಕ್ ಕಂಪನಿ ಸ್ಟಾರ್ಲಿಂಕ್
“ಸ್ಟಾರ್ಲಿಂಕ್ ಸೇವೆಯನ್ನು ಭಾರತಕ್ಕೆ ತಂದರೆ ಗ್ರಾಮೀಣ ಮತ್ತು ಇಂಟರ್ನೆಟ್ ತಲುಪದ ಪ್ರದೇಶಗಳಿಗೆ ಶಿಕ್ಷಣ ಹಾಗೂ ವಾಣಿಜ್ಯ ಅವಕಾಶಗಳು ಸಿಗುತ್ತವೆ. ಅದನ್ನು ಏಕಸ್ವಾಮ್ಯ ಬಯಸುವ ಉದ್ಯಮಿಗಳು ತಡೆಯುತ್ತಿದ್ದಾರೆ” ಎಂದು ಆರೋಪಿಸಿದ್ದಾರೆ. ಭಾರತೀಯ ಗ್ರಾಮೀಣ ಜನರಿಗೆ ಅಗ್ಗದ ದರದಲ್ಲಿ ಇಂಟರ್ನೆಟ್ ನೀಡುವುದಕ್ಕೆ ತಡೆಯೊಡ್ಡುವುದು ದೇಶದ ಜನರಿಗೆ ಮಾಡುವ ಅನ್ಯಾಯ ಎಂದಿದ್ದಾರೆ.
ಮಸ್ಕ್ ಅವರ ಈ ಬಹಿರಂಗ ಆರೋಪ ಮತ್ತು ವ್ಯಂಗ್ಯಕ್ಕೆ ಭಾರತ ಸರ್ಕಾರದ ಕೇಂದ್ರ ಸಂಪರ್ಕ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಸೇರಿದಂತೆ ಮಾಹಿತಿ ತಂತ್ರಜ್ಞಾನ ಸಚಿವಾಲಯ ತಕ್ಷಣ ಪ್ರತಿಕ್ರಿಯೆ ನೀಡಿದೆ. ಭಾರತದಲ್ಲಿ ಯಾವುದೇ ರಂಗದಲ್ಲೂ ಏಕಸ್ವಾಮ್ಯಕ್ಕೆ ಅವಕಾಶವಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ.
ಸ್ಟಾರ್ಲಿಂಕ್, ಜಿಯೋ ಸ್ಯಾಟ್ಕಾಮ್ ಮತ್ತು ಭಾರ್ತಿ ಗ್ರೂಪ್ ಬೆಂಬಲಿತ ಯೂಟೇಲ್ಸ್ಯಾಟ್ ಒನ್ವೆಬ್ — ಮೂರೂ ಕಂಪನಿಗಳು ನಿಯಮಾವಳಿಗಳ ಒಂದೇ ಹಂತದಲ್ಲಿವೆ. ಸ್ಪೆಕ್ಟ್ರಮ್ ಬೆಲೆ ಪ್ರಕ್ರಿಯೆ ಮತ್ತು ಭದ್ರತಾ ತಪಾಸಣೆ ಪೂರ್ಣಗೊಂಡ ಬಳಿಕ ಎಲ್ಲಾ ಕಂಪನಿಗಳಿಗೂ ನಿಯಮಾನುಸಾರ ಅವಕಾಶ ನೀಡಲಾಗುವುದು ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಈ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೂಡ X ನಲ್ಲಿ ಮಸ್ಕ್ ಪೋಸ್ಟ್ಗೆ ಪ್ರತಿಕ್ರಿಯಿಸಿ, “ಭಾರತಕ್ಕೆ ಸುಸ್ವಾಗತ ಎಲಾನ್, ನೀವಿನ್ನು ಮತ್ತೊಬ್ಬ ವ್ಯಕ್ತಿಯನ್ನು (ದಿ ಅದರ್ ಗೈ) ಅರಿಯುವುದು ಬಾಕಿ ಇದೆ” ಎಂದು ಮಾರ್ಮಿಕವಾಗಿ ಹೇಳಿದ್ದು, ಅದಕ್ಕೆ ಮಸ್ಕ್ ಧನ್ಯವಾದ ತಿಳಿಸಿದ್ದಾರೆ.




