ಬೆಲೆ ಏರಿಕೆಯಿಂದ ತತ್ತರಿಸಿರುವ ಜನಸಾಮಾನ್ಯರ ಮೇಲೆ ಮತ್ತಷ್ಟು ಆರ್ಥಿಕ ಹೊರೆ ಹೇರುತ್ತಿರುವ ರಾಜ್ಯ ಸರ್ಕಾರದ ಹಾಲು ಮತ್ತು ಬಸ್ ಪ್ರಯಾಣ ದರ ಏರಿಕೆ ನಿರ್ಧಾರ ಖಂಡನೀಯ ಎಂದು ಭೀಮ್ ರಾಜ್ಯ ದಲಿತ್ ಸೇವಾ ಸಮಿತಿ ರಾಜ್ಯಾಧ್ಯಕ್ಷ ಅಪ್ಪುರಾಜ್ ನಿಮಾದಾರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಾಲು ಪ್ರತಿಯೊಂದು ಕುಟುಂಬದ ದಿನನಿತ್ಯದ ಅಗತ್ಯ ವಸ್ತುವಾಗಿದ್ದು, ಪ್ರತಿ ಲೀಟರ್‌ಗೆ ₹8 ದರ ಹೆಚ್ಚಳ ಮಾಡಿರುವುದು ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳ ಬಜೆಟ್ ಮೇಲೆ ಪರಿಣಾಮ ಬೀರಲಿದೆ. ಬಸ್ ಪ್ರಯಾಣ ದರ ಏರಿಕೆಯಿಂದ ಕೂಲಿ ಕಾರ್ಮಿಕರು, ನೌಕರರು, ವಿದ್ಯಾರ್ಥಿಗಳು ಹಾಗೂ ಗ್ರಾಮೀಣ ಜನರು ಸಂಕಷ್ಟಕ್ಕೆ ಸಿಲುಕಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಜನಸಾಮಾನ್ಯರ ಆರ್ಥಿಕ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು ಆಡಳಿತ ನಡೆಸಬೇಕಾದ ಸರ್ಕಾರ, ಒಂದರ ಹಿಂದೆ ಒಂದರಂತೆ ದರ ಹೆಚ್ಚಳ ಮಾಡುತ್ತಿರುವುದು ಸರಿಯಲ್ಲ. ಜನರ ಜೇಬಿಗೆ ಕತ್ತರಿ ಹಾಕುವ ನೀತಿಯನ್ನು ಕೈಬಿಟ್ಟು, ಹಾಲು ಮತ್ತು ಬಸ್ ಪ್ರಯಾಣ ದರ ಏರಿಕೆ ನಿರ್ಧಾರವನ್ನು ತಕ್ಷಣ ಹಿಂಪಡೆಯಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಬಡವರು, ರೈತರು, ಕಾರ್ಮಿಕರು, ಮಹಿಳೆಯರು ಹಾಗೂ ವಿದ್ಯಾರ್ಥಿಗಳ ಹಿತಾಸಕ್ತಿಗೆ ಧಕ್ಕೆ ಉಂಟಾದಾಗ ಸಮಿತಿ ಸದಾ ಜನರ ಪರವಾಗಿ ಧ್ವನಿ ಎತ್ತಲಿದೆ ಎಂದು ಅಪ್ಪುರಾಜ್ ನಿಮಾದಾರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





