ಚೀನಾದ ಅಧ್ಯಕ್ಷ ಕ್ಷಿ ಜಿನ್‌ಪಿಂಗ್ 11 ವರ್ಷಗಳ ಬಳಿಕ ಅಮೆರಿಕಕ್ಕೆ ಅಧಿಕೃತ ಸರ್ಕಾರಿ ಭೇಟಿಗಾಗಿ ತೆರಳಿದ್ದಾರೆ. ಸೆಪ್ಟೆಂಬರ್ 23ರಂದು ಜಿನ್‌ಪಿಂಗ್ ಮತ್ತು ಅವರ ಪತ್ನಿ ಪೆಂಗ್ ಲಿಯುವಾನ್ ಅವರನ್ನು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಮೆಲಾನಿಯಾ ಟ್ರಂಪ್ ಜಾಯಿಂಟ್ ಬೇಸ್ ಆಂಡ್ರ್ಯೂಸ್‌ನಲ್ಲಿ ಖುದ್ದಾಗಿ ಸ್ವಾಗತಿಸಿದ್ದಾರೆ. ಸಾಮಾನ್ಯವಾಗಿ ವಿದೇಶಿ ರಾಷ್ಟ್ರಗಳ ಮುಖ್ಯಸ್ಥರನ್ನು ಅಮೆರಿಕದ ಅಧ್ಯಕ್ಷರು ಶ್ವೇತಭವನದಲ್ಲೇ ಸ್ವಾಗತಿಸುತ್ತಾರೆ. ಆದರೆ, ಜಿನ್‌ಪಿಂಗ್ ಅವರ ವಿಮಾನ ಇಳಿಯುವ ಸ್ಥಳಕ್ಕೇ ಟ್ರಂಪ್ ತೆರಳಿದ್ದು ಅಪರೂಪ ಸಂಗತಿ. ರಾಯಿಟರ್ಸ್ ಪ್ರಕಾರ, ಅಮೆರಿಕದ ಅಧ್ಯಕ್ಷರೊಬ್ಬರು ಜಾಯಿಂಟ್ ಬೇಸ್ ಆಂಡ್ರ್ಯೂಸ್‌ನಲ್ಲಿ ವಿದೇಶಿ ನಾಯಕನನ್ನು ಖುದ್ದು ಸ್ವಾಗತಿಸಿರುವುದು 11 ವರ್ಷಗಳ ಬಳಿಕ ಇದೇ ಮೊದಲು.
ಸೆಪ್ಟೆಂಬರ್ 24ರಂದು ಶ್ವೇತಭವನದಲ್ಲಿ ಜಿನ್‌ಪಿಂಗ್‌ಗೆ ಅಧಿಕೃತ ಸ್ವಾಗತ ಸಮಾರಂಭ, ಸೇನಾ ಗೌರವ ಮತ್ತು ರೋಸ್ ಗಾರ್ಡನ್‌ನಲ್ಲಿ ಮಿಲಿಟರಿ ರಿವ್ಯೂ ನಿಗದಿಯಾಗಿದೆ. ಸಂಜೆ ಟ್ರಂಪ್ ದಂಪತಿ ಜಿನ್‌ಪಿಂಗ್ ದಂಪತಿಗೆ ಶ್ವೇತಭವನದ ಈಸ್ಟ್ ರೂಮ್‌ನಲ್ಲಿ ಸರ್ಕಾರಿ ಔತಣಕೂಟ ಆಯೋಜಿಸಿದ್ದಾರೆ. ಅಮೆರಿಕದ ಪ್ರಮುಖ ತಂತ್ರಜ್ಞಾನ ಮತ್ತು ಉದ್ಯಮ ಕ್ಷೇತ್ರದ ನಾಯಕರೂ ಇದರಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.
ಆದರೆ, ಈ ವೈಭವದ ಸ್ವಾಗತದಿಂದ ಅಮೆರಿಕ-ಚೀನಾ ನಡುವಿನ ಮೂಲಭೂತ ಭಿನ್ನಾಭಿಪ್ರಾಯಗಳು ಮೆರೆಯಾಗಿವೆ ಎಂದು ಹೇಳಲಾಗದು. ವ್ಯಾಪಾರ, ಸುಂಕ, ಕೃತಕ ಬುದ್ಧಿಮತ್ತೆ, ಅತ್ಯಾಧುನಿಕ ಚಿಪ್‌ಗಳು, ರೇರ್ ಅರ್ಥ್ ಖನಿಜಗಳು, ತೈವಾನ್ ಮತ್ತು ಇರಾನ್ ವಿಷಯಗಳು ಇನ್ನೂ ಎರಡೂ ದೇಶಗಳ ನಡುವೆ ಪ್ರಮುಖ ಸಂಘರ್ಷದ ಕ್ಷೇತ್ರಗಳಾಗಿವೆ. ಆದ್ದರಿಂದ, ಬೃಹತ್ ಒಪ್ಪಂದಕ್ಕಿಂತ ಸಂಬಂಧವನ್ನು ನಿಯಂತ್ರಣದಲ್ಲಿ ಇಡುವುದೇ ಈ ಭೇಟಿಯ ತಕ್ಷಣದ ಉದ್ದೇಶ ಎಂದು ವಿಶ್ಲೇಷಕರು ಅಂದಾಜಿಸಿದ್ದಾರೆ.
ಆದರೂ ಭೇಟಿಯ ಆರಂಭದಲ್ಲೇ ಒಂದು ಮಹತ್ವದ ಬೆಳವಣಿಗೆ ನಡೆದಿದೆ. ಅಮೆರಿಕದ ಖಜಾನೆ ಕಾರ್ಯದರ್ಶಿ ಸ್ಕಾಟ್ ಬೆಸೆಂಟ್ ಪ್ರಕಾರ, ಎರಡೂ ದೇಶಗಳು ಪರಸ್ಪರ ಸುಂಕ ಹೆಚ್ಚಿಸುವುದನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದ ‘ವ್ಯಾಪಾರ ಕದನವಿರಾಮ’ವನ್ನು 2027ರ ಜನವರಿ 10ರವರೆಗೆ ವಿಸ್ತರಿಸಲು ಒಪ್ಪಿಕೊಂಡಿವೆ. ಹಿಂದೆ ಎರಡೂ ದೇಶಗಳು ಪರಸ್ಪರ 100%ಕ್ಕೂ ಹೆಚ್ಚಿನ ಸುಂಕಗಳನ್ನು ವಿಧಿಸುವ ಹಂತಕ್ಕೆ ಹೋಗಿದ್ದವು. ರಷ್ಯಾದೊಂದಿಗೆ ವ್ಯಾಪಾರ ಸಂಬಂಧ ಹೊಂದಿರುವ ಚೀನಾ ಮೇಲೆ ಅಮೆರಿಕವು ಕಳೆದ ವರ್ಷ, 145% ವರೆಗೆ ಏರಿಸಿತ್ತು. ಅದಕ್ಕೆ ಪ್ರತಿಯಾಗಿ ಚೀನಾ ಅಮೆರಿಕದ ಸರಕುಗಳ ಮೇಲಿನ ಸುಂಕವನ್ನು 125% ವರೆಗೆ ಹೆಚ್ಚಿಸಿತು. ನಂತರ 2025ರ ಮೇ ತಿಂಗಳ ತಾತ್ಕಾಲಿಕ ಒಪ್ಪಂದದಲ್ಲಿ ಅಮೆರಿಕ ತನ್ನ ಸುಂಕವನ್ನು 30%ಕ್ಕೆ ಇಳಿಸಿದರೆ, ಚೀನಾ ತನ್ನ ಸುಂಕವನ್ನು 10%ಕ್ಕೆ ಇಳಿಸಿತ್ತು.
This video cannot be played in your browser. Open the video directly
ಗಮನಾರ್ಹವಾಗಿ, 2015ರಲ್ಲಿ ಒಬಾಮ ಅಧ್ಯಕ್ಷರಾಗಿದ್ದಾಗ ಕಡೆಯ ಬಾರಿಗೆ ಜಿನ್‌ಪಿಂಗ್ ಅಮೆರಿಕಗೆ ಭೇಟಿ ನೀಡಿದ್ದರು. ಆ ಭೇಟಿಗೆ ಹೋಲಿಸಿದರೆ, ಇಂದಿನ ಭೇಟಿಯಲ್ಲಿ ಕೆಲವು ಬದಲಾವಣೆಗಳಿವೆ. ಅಂದಿನ ಸಂದರ್ಭದಲ್ಲಿ, ಒಬಾಮಾ ಆಡಳಿತವು ಚೀನಾದ ಶಾಂತಿಯುತ ಆರ್ಥಿಕ ಏರಿಕೆಯನ್ನು ಸ್ವಾಗತಿಸುವುದಾಗಿ ಹೇಳುತ್ತಿತ್ತು. ಹವಾಮಾನ ಬದಲಾವಣೆ, ಸೈಬರ್ ಭದ್ರತೆ, ಜಾಗತಿಕ ಆರೋಗ್ಯ, ಅಫ್ಘಾನಿಸ್ತಾನ ಮತ್ತು ಇರಾನ್ ಅಣು ಒಪ್ಪಂದದಂತಹ ವಿಷಯಗಳಲ್ಲಿ ಎರಡೂ ದೇಶಗಳು ಸಹಕಾರವನ್ನು ವಿಸ್ತರಿಸಲು ಪ್ರಯತ್ನಿಸಿದ್ದವು.
ಆದರೆ, ಈಗಿನ ಟ್ರಂಪ್ ಆಡಳಿತದಲ್ಲಿ ಚಿತ್ರ ಸಂಪೂರ್ಣ ಬದಲಾಗಿದೆ. ಈಗ ಚೀನಾ ಕೇವಲ ಅಮೆರಿಕದ ದೊಡ್ಡ ವ್ಯಾಪಾರ ಪಾಲುದಾರನಲ್ಲ; ತಂತ್ರಜ್ಞಾನ, ಸೇನಾ ಸಾಮರ್ಥ್ಯ, ಕೃತಕ ಬುದ್ಧಿಮತ್ತೆ ಮತ್ತು ಜಾಗತಿಕ ಪ್ರಭಾವದಲ್ಲಿ ಅಮೆರಿಕಕ್ಕೆ ಪ್ರಮುಖ ಸ್ಪರ್ಧಿಯಾಗಿದೆ. ಅಮೆರಿಕವು ಚೀನಾದ ಅತ್ಯಾಧುನಿಕ ತಂತ್ರಜ್ಞಾನ ಪ್ರವೇಶವನ್ನು ನಿರ್ಬಂಧಿಸುತ್ತಿದ್ದರೆ, ಚೀನಾ ರೇರ್ ಅರ್ಥ್ ಖನಿಜಗಳ ಮೇಲಿನ ತನ್ನ ಹಿಡಿತವನ್ನು ಮಾತುಕತೆಯ ಪ್ರಮುಖ ಸಾಧನವಾಗಿ ಬಳಸುವ ಸಾಮರ್ಥ್ಯ ಬೆಳೆಸಿಕೊಂಡಿದೆ.
ಈ ಲೇಖನ ಓದಿದ್ದೀರಾ?: ವಂದೇ ಮಾತರಂ: ರಾಷ್ಟ್ರಗೌರವದ ಸಂಕೇತವೋ, ಚಿತ್ತ ಚದುರಿಸುವ ರಾಜಕೀಯ ತಂತ್ರವೋ?
ತೈವಾನ್ ವಿಷಯ ಇನ್ನೂ ಅತ್ಯಂತ ಸೂಕ್ಷ್ಮವಾಗಿದೆ. ಅಮೆರಿಕವು ತೈವಾನ್‌ಗೆ ಶಸ್ತ್ರಾಸ್ತ್ರ ಮಾರಾಟವನ್ನು ಕಡಿಮೆ ಮಾಡಬೇಕೆಂದು ಜಿನ್‌ಪಿಂಗ್ ಒತ್ತಾಯಿಸುತ್ತಿದ್ದಾರೆ; ಮತ್ತೊಂದೆಡೆ ಅಮೆರಿಕ ತೈವಾನ್‌ನ ಸ್ವರಕ್ಷಣೆಗೆ ಬೆಂಬಲ ನೀಡುವ ತನ್ನ ನೀತಿಯನ್ನು ಮುಂದುವರಿಸಿದೆ. AI ಮತ್ತು ಅತ್ಯಾಧುನಿಕ ಚಿಪ್‌ಗಳ ಮೇಲಿನ ನಿಯಂತ್ರಣಗಳಲ್ಲಿಯೂ ಎರಡೂ ರಾಷ್ಟ್ರಗಳ ನಡುವೆ ತಕ್ಷಣದ ದೊಡ್ಡ ರಾಜಿ ಸಾಧ್ಯತೆ ಕಡಿಮೆ ಎಂದು ವರದಿಗಳು ಸೂಚಿಸುತ್ತವೆ.
ಹೀಗಾಗಿ, ಈ ಭೇಟಿಯ ಮೇಲೆ ಹೆಚ್ಚಿನ ನಿರೀಕ್ಷೆ ಇಟ್ಟುಕೊಳ್ಳಲು ಸಾಧ್ಯವಿಲ್ಲ ಎಂದು ವಿಶ್ಲೇಷಕರು ಹೇಳುತ್ತಾರೆ. ಆದಾಗ್ಯೂ, ಉಭಯ ರಾಷ್ಟ್ರಗಳ ನಡುವಿನ ತೀವ್ರ ಸ್ಪರ್ಧೆಯನ್ನು ನಿಯಂತ್ರಿತ ಸ್ಪರ್ಧೆಯಾಗಿ ಉಳಿಸುವ ಪ್ರಯತ್ನ ನಡೆಯುವ ಸಾಧ್ಯತೆ ಇದೆ. ಸದ್ಯಕ್ಕೆ, ಎರಡೂ ರಾಷ್ಟ್ರಗಳಿಗೆ ‘ಸಂಘರ್ಷಕ್ಕೆ ಹೋಗದಂತೆ ಸ್ಪರ್ಧೆಯನ್ನು ನಿರ್ವಹಿಸುವುದು’ ಎನ್ನುವುದೇ ಮುಖ್ಯವಾಗಿದೆ. ಆದ್ದರಿಂದಲೇ, ಜಿನ್‌ಪಿಂಗ್ ಕೂಡ ಅಮೆರಿಕ ಮತ್ತು ಚೀನಾ ‘ಪ್ರತಿಸ್ಪರ್ಧಿಗಳಲ್ಲ, ಪಾಲುದಾರರಾಗಬೇಕು” ಎಂಬ ಸಂದೇಶ ನೀಡಿದ್ದಾರೆ.




