ರಾಜ್ಯದ ಹಲವೆಡೆ ಆಲಿಕಲ್ಲು ಸಹಿತ ಮಳೆಯಾಗಿದ್ದು, ಸುಡುಧಗೆಯಲಿ ಬೆಂದಿದ್ದ ಹಲವು ಜಿಲ್ಲೆಗಳಿಗೆ ಮಳೆ ತಂಪೆರದಿದೆ. ಚಿಕ್ಕಮಗಳೂರು, ಧಾರವಾಡ, ಬೀದರ್ ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾಗಿದೆ.
ಚಿಕ್ಕಮಗಳೂರು ಜಿಲ್ಲೆಯ ಆಲ್ದೂರು ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಶುಕ್ರವಾರ ಸಂಜೆ ಆಲಿಕಲ್ಲು ಮಳೆಯಾಗಿದ್ದು, ಆಲ್ದೂರಿನಲ್ಲಿ ಸಾಲು ಸಾಲು ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ಬಿರುಗಾಳಿ ಸಹಿತ ಸುರಿದ ಮಳೆಗೆ ರಸ್ತೆ ಬದಿಯ ಮರಗಳು ಧರೆಗುರುಳಿ ಕೆಲಕಾಲ ಜನಸಂಚಾರ ಸ್ಥಗಿತವಾಗಿತ್ತು.

ನೆಲಕ್ಕೆ ಉರುಳಿದ ವಿದ್ಯುತ್ ಕಂಬ ಹಾಗೂ ಮರದ ಹರೆಯಿಂದಾಗಿ ಆಲ್ದೂರು- ಬಾಳೆಹೊನ್ನೂರು-ಚಿಕ್ಕಮಗಳೂರು ಸಂಪರ್ಕ ರಸ್ತೆಯಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಬಾಳೆಹೊನ್ನೂರಿನಲ್ಲಿ ಜನ ಹಳ್ಳ ದಾಟಿ ಮನೆ ಸೇರುವ ಹಾಗಾಗಿದೆ. ಆಲ್ದೂರು ಪಟ್ಟಣದ ರೈಸ್‌ಮಿಲ್ ಹಾಗೂ ಮೇದರಬೀದಿಯಲ್ಲಿ ಮನೆ ಮತ್ತು ಅಂಗಡಿ ಮುಂಗಟ್ಟುಗಳ ಹೆಂಚು, ಶೀಟ್‌ಗಳು ಗಾಳಿಗೆ ಹಾರಿ ಹೋಗಿರುವ ಘಟನೆ ವರದಿಯಾಗಿದೆ.
ಇದನ್ನೂ ಓದಿ> ಚಿಕ್ಕಮಗಳೂರು | ರಾಜ್ಯದ ಜನತೆಗೆ ಕೇಂದ್ರದಿಂದ ಅನ್ಯಾಯ: ಮುಖ್ಯಮಂತ್ರಿ ಸಿದ್ದರಾಮಯ್ಯ
ಧಾರವಾಡ ಜಿಲ್ಲೆಯ ವಿವಿಧೆಡೆ ಗುರುವಾರ ಸಂಜೆಯಿಂದ ಗುಡುಗು ಸಮೇತ ಭಾರೀ ಮಳೆ ಸುರಿದಿದೆ. ಸಂಜೆ 6ರ ಹೊತ್ತಿಗೆ ಶುರುವಾದ ಮಳೆ ಕೆಲಕಾಲ ರಭಸವಾಗಿ ಸುರಿದಿದೆ. ಮಳೆ ಹೆಚ್ಚಾದರಿಂದ ಮಾರುಕಟ್ಟೆ ಪ್ರದೇಶದಲ್ಲಿ ಜನ ಜೀವನ ಅಸ್ತವ್ಯಸ್ತಗೊಂಡಿತ್ತು. ದ್ವಿಚಕ್ರ ವಾಹನ ಸವಾರರು ಹಾಗೂ ಮಾರುಕಟ್ಟೆಗೆ ಬಂದ ಜನ ಮಳೆಯಿಂದ ರಕ್ಷಣೆ ಪಡೆಯಲು ಅಂಗಡಿ- ಮುಂಗಟ್ಟುಗಳನ್ನು ಹೊಕ್ಕಿದ್ದರು. ಗುಡುಗಿನ ಅಬ್ಬರವೂ ಹೆಚ್ಚಾಗಿದ್ದರಿಂದ ಜನರ ಓಡಾಟ ಕೆಲಕಾಲ ಸ್ತಬ್ಧವಾಗಿತ್ತು.
ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ನಾವದಗಿ ಗ್ರಾಮದ ಹೊಲವೊಂದರಲ್ಲಿ ಕೆಲಸಮಾಡುತ್ತಿದ್ದ ಯುವಕರಿಗೆ ಸಿಡಿಲು ಬಡಿದು ಇಬ್ಬರು ಯುವಕರು ಮೃತಪಟ್ಟಿದ್ದಾರೆ. ನಾವದಗಿ ಗ್ರಾಮದ ರೇವಣಸಿದ್ದ ಹನುಮಂತ(28) ಮತ್ತು ಜೇವರ್ಗಿಯ ಯಲ್ಲಾಲಿಂಗ(28) ಮೃತಪಟ್ಟವರು.
ಇವರು ಮಳೆಯಿಂದ ರಕ್ಷಣೆ ಪಡೆಯಲು ಮಾವಿನ ಮರದಡಿ ಆಶ್ರಯ ಪಡೆದಿದ್ದರು. ಈ ಸಂದರ್ಭದಲ್ಲಿ ಸಿಡಿಲು ಬಡಿದಿದ್ದು, ಇಬ್ಬರೂ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.




