ರಾಜ್ಯದ ಜನರಿಗೆ ಕೇಂದ್ರ ಸರ್ಕಾರದಿಂದ ಅನ್ಯಾಯವಾಗಿದೆ. ಬಿಜೆಪಿಯ ಪ್ರಧಾನಿ ಮೋದಿಯವರು ತಾವು ನೀಡಿದ ಯಾವುದೇ ಭರವಸೆಗಳನ್ನು ಈಡೇರಿಸಿಲ್ಲ, ಅವರ ಒಳ್ಳೆಯ ದಿನಗಳು ಬರಲೇ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರದ ವಿರುದ್ಧ ಹರಿಹಾಯ್ದಿದ್ದಾರೆ.
ಇಂದು ನರಸಿಂಹರಾಜಪುರದಲ್ಲಿ, ಚಿಕ್ಕಮಗಳೂರಿನ ಹಂದೂರು ಗ್ರಾಮದಿಂದ ನರಸಿಂಹರಾಜಪುರಕ್ಕೆ ಸಂಪರ್ಕ ಕಲ್ಪಿಸುವ ತಮ್ಮದೇ ಹೆಸರಿನ ʼಸಿದ್ದರಾಮಯ್ಯ ಸೇತುವೆʼ ಉದ್ಘಾಟಿಸಿ, ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಶಂಕುಸ್ಥಾಪನೆ ಹಾಗೂ ಸವಲತ್ತುಗಳ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡಿದರು.
ಈ ಸಂದರ್ಭದಲ್ಲಿ ಗ್ಯಾರೆಂಟಿ ಯೋಜನೆಗಳ ವಿರುದ್ಧದ ಬಿಜೆಪಿಯ ಟೀಕೆಗಳ ಕುರಿತು ಪ್ರತಿಕ್ರಿಯಿಸಿದ ಅವರು “ಕಾಂಗ್ರೆಸ್ ಸರ್ಕಾರ ಮಾತ್ರ ಕೊಟ್ಟ ಮಾತಿನಂತೆ ನಡೆಯುವ ಸರ್ಕಾರವಾಗಿದೆ. ನಮ್ಮ ಸರ್ಕಾರದಿಂದ ಗ್ಯಾರೆಂಟಿಗಳಿಗೆ ಈವರೆಗೆ 1.30 ಲಕ್ಷ ಕೋಟಿ ರೂ.ಗಳನ್ನು ವೆಚ್ಚ ಮಾಡಲಾಗಿದೆ. ರಾಜ್ಯದ ಗ್ಯಾರೆಂಟಿಗಳನ್ನು ಟೀಕಿಸುವ ಬಿಜೆಪಿಯವರು ಇತರೆ ರಾಜ್ಯಗಳಲ್ಲಿ ಅವುಗಳನ್ನೇ ಅನುಸರಿಸುತ್ತಿದ್ದಾರೆ. ಇಂದು ಕೇಂದ್ರಕ್ಕಿಂತ ರಾಜ್ಯದ ಆರ್ಥಿಕ ಸ್ಥಿತಿ ಉತ್ತಮವಾಗಿದೆ” ಎಂದಿದ್ದಾರೆ.
ಇದನ್ನೂ ಓದಿ>ಚಿಕ್ಕಮಗಳೂರು | ಬಡ ಮಕ್ಕಳಿಂದ ಶಿಕ್ಷಣವನ್ನು ಕಸಿಯಬೇಡಿ; AIDSO
“36 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಿಸಲಾಗಿರುವ ಸೇತುವೆಯೂ ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯಕ್ರಮಗಳಿಗೆ ಇಂದು ಚಾಲನೆ ನೀಡಲಾಗಿದೆ. ವಿರೋಧಪಕ್ಷದವರು ಅಭಿವೃದ್ಧಿ ಕೆಲಸಗಳಿಗೆ ಹಣವಿಲ್ಲ, ಗ್ಯಾರೆಂಟಿಗಳ ನಂತರ ಖಜಾನೆ ಖಾಲಿಯಾಗಿದೆ, ಅಭಿವೃದ್ಧಿ ಶೂನ್ಯವೆಂದು ಟೀಕಿಸುತ್ತಾರೆ. ಆದರೆ ಗ್ಯಾರೆಂಟಿಗಳ ಜತೆಗೆ ಅಭಿವೃದ್ಧಿಯನ್ನೂ ನಮ್ಮ ಸರ್ಕಾರ ಸಾಧ್ಯವಾಗಿಸಿದೆ. ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಸರ್ಕಾರವು 2023-24ರ ಆಯವ್ಯಯದಲ್ಲಿ 5300 ಕೋಟಿ ರೂ.ಗಳನ್ನು ಘೋಷಿಸಿತು. ಆದರೆ ಈವರೆಗೆ ಕೇಂದ್ರ ಈ ಅನುದಾನ ನೀಡಿಲ್ಲ. ಈ ಮೂಲಕ ರಾಜ್ಯದ ಜನರಿಗೆ ಕೇಂದ್ರ ಸರ್ಕಾರ ದ್ರೋಹವೆಸಗಿದೆ” ಎಂದು ಆರೋಪಿಸಿದರು.

ನರಸಿಂಹರಾಜಪುರ ಭಾಗದ ಅಭಿವೃದ್ಧಿ ಕಾರ್ಯಗಳ ಕುರಿತು ಮಾತನಾಡುತ್ತ, “ಮೈಸೂರು ಮಹಾರಾಜರಾಗಿದ್ದ ನರಸಿಂಹರಾಜ ಒಡೆಯರ್ ಅವರ ಕಾಲದಲ್ಲಿ ಎಡೆಹಳ್ಳಿಯಾಗಿದ್ದ ಈ ಪ್ರದೇಶಕ್ಕೆ ʼನರಸಿಂಹರಾಜಪುರʼ ಎಂದು ನಾಮಕರಣವಾಯಿತು. ಈ ಭಾಗದ ಅಭಿವೃದ್ಧಿಯ ಉದ್ದೇಶದಿಂದಾಗಿ ಇಲ್ಲಿನ ಶಾಸಕರ ಒತ್ತಾಸೆಯಿಂದ ಇಂದು ಸೇತುವೆ ನಿರ್ಮಾಣ ಸಾಧ್ಯವಾಗಿದೆ. ಉಳಿದಂತೆ ರಸ್ತೆ ಅಗಲೀಕರಣ, ಬ್ಯಾರೇಜ್ ಕಂ ಬ್ರಿಡ್ಜ್ ನಿರ್ಮಾಣ, ಪ್ರವಾಸೋದ್ಯಮವೂ ಸೇರಿದಂತೆ ಹಲವು ಬೇಡಿಕೆಗಳ ಬಗ್ಗೆ ಸರ್ಕಾರ ಕ್ರಮ ಕೈಗೊಳ್ಳಲಿದೆ” ಎಂದು ಆಶ್ವಾಸನೆ ನೀಡಿದರು.




