ಕೃತಿ: Waiting for a Visa (ವೀಸಾಗಾಗಿ ಕಾಯುತ್ತಾ)
ಹಸ್ತಪ್ರತಿ ಸಂಗ್ರಹ ಪ್ರಕಟಣೆ: ಪೀಪಲ್ಸ್ ಎಜುಕೇಷನ್ ಸೊಸೈಟಿ, 1990, ಮಾರ್ಚ್ 19
ಬರೆದಿರುವ ವರ್ಷ: ಸುಮಾರು 1935
ಮಹಾರಾಷ್ಟ್ರ ಸರ್ಕಾರದ ಪ್ರಕಟಣೆ: 1993
ಇಂಗ್ಲಿಷ್ ಸಂಪುಟ: 12
ಕನ್ನಡ ಸಂಪುಟ: 11
Delhi Open Books Edition: 2020, February 3
ಬಾಬಾಸಾಹೇಬ್ ಡಾ.ಅಂಬೇಡ್ಕರ್ ಅವರ ಆತ್ಮಚರಿತ್ರೆಯೆಂದೇ ಗುರುತಿಸಲ್ಪಡುವ ‘ವೀಸಾಗಾಗಿ ಕಾಯುತ್ತಾ’ ಎಂಬ ಪುಟ್ಟ ಬರೆಹವು ವಿದ್ವಾಂಸರ ಪ್ರಕಾರ ಭಾರತದ ಮೊದಲ ಆತ್ಮಕಥೆಯೂ ಹೌದು. ತಾವು ಬಾಲ್ಯದಲ್ಲಿ, ವೃತ್ತಿ ಬದುಕಿನಲ್ಲಿ ಕಂಡುಂಡ ಜಾತಿ- ಅಸ್ಪೃಶ್ಯತೆಯ ಕರಾಳತೆಯನ್ನು, ತಮ್ಮ ಜನರು ಅನುಭವಿಸಿದ ಅವಮಾನ, ನಿಂದನೆಗಳನ್ನು ತಮ್ಮ ಸ್ಮೃತಿಪಟಲ ತೆರೆದು ಬಾಬಾಸಾಹೇಬರು ಭಾವುಕರಾಗಿ ದಾಖಲಿಸಿದ್ದಾರೆ. ಇಲ್ಲಿ ದಾಖಲಾಗಿರುವ ಘಟನೆಗಳು ಬಾಬಾಸಾಹೇಬರ ಅನುಭವ ಕಥನವಷ್ಟೇ ಅಲ್ಲ ಭಾರತದಲ್ಲಿ ಅಸ್ಪೃಶ್ಯರು ನಿತ್ಯವು ಅನುಭವಿಸುವ ನಿಜಸ್ಥಿತಿಗಳಾಗಿಯೂ ಗೋಚರಿಸುತ್ತವೆ. ಅಸ್ಪೃಶ್ಯನು ಕೇವಲ ಹಿಂದೂಗಳಿಗಷ್ಟೇ ಅಸ್ಪೃಶ್ಯನಲ್ಲ, ಪಾರ್ಸಿಗೂ, ಮುಸ್ಲಿಮನಿಗೂ, ಕ್ರಿಶ್ಚಿಯನ್‌ಗೂ ಅಸ್ಪೃಶ್ಯನಾಗಿಯೇ ಉಳಿಯುತ್ತಾನೆ ಎಂಬುದನ್ನು ಇಲ್ಲಿನ ದಾಖಲೆಗಳು ಹೇಳುತ್ತವೆ. ವ್ಯಕ್ತಿಯು ದೇಶವೊಂದರಿಂದ ಅಧಿಕೃತ ನಾಗರಿಕ ಎಂಬ ಮಾನ್ಯತೆ ಪಡೆದ ನಂತರವೇ ಸರ್ಕಾರ ಆತನಿಗೆ ‘ವೀಸಾ’ ನೀಡುತ್ತದೆ. ಸಂಬಂಧಿಸಿದ ವ್ಯಕ್ತಿಯ ಸುರಕ್ಷತೆಯ ಸಂಪೂರ್ಣ ಹೊಣೆಯನ್ನು ವೀಸಾ ನೀಡಿದ ದೇಶ ವಹಿಸಿಕೊಳ್ಳುತ್ತದೆಂಬುದು ವೀಸಾ ನೀಡುವ ನಿಜ ಅರ್ಥ. ಅಸ್ಪೃಶ್ಯ ದಲಿತ ಸಮುದಾಯವು ಭಾರತೀಯ ಸರ್ಕಾರ ಮತ್ತು ಸಮಾಜದಿಂದ ಇಂತಹ ವೀಸಾಗಾಗಿ ಹೇಗೆ ಕಾತರಿಸಿ ಕಾಯುತ್ತಿದೆ ಎಂಬುದೇ “Waiting for a Visa” ಶೀರ್ಷಿಕೆಯ ರೂಪಕಾರ್ಥವಾಗಿದೆ.
ಬಾಬಾಸಾಹೇಬರ ಒಟ್ಟು ಬರಹವನ್ನು ಅವಲೋಕಿಸಿದರೆ “Waiting for a Visa” (ವೀಸಾಗಾಗಿ ಕಾಯುತ್ತಾ) ಸಣ್ಣ ಬರಹ. ಈ ಕೃತಿಯನ್ನು ಒಂದು ದೀರ್ಘ ಲೇಖನ ಅನ್ನಬಹುದು. ಆದರೆ, ಆ ಬರಹ ಭಾರತದ ಜಾತಿ ವ್ಯವಸ್ಥೆಯ ಸ್ವರೂಪವನ್ನು ಕೆಲವು ಸಾವಿರ ಪದಗಳಲ್ಲಿ ಹಿಡಿದಿಟ್ಟಿರುವ ವಿಶಿಷ್ಟ ಸಾಹಿತ್ಯಕ ಮಾದರಿ. ಬಾಬಾಸಾಹೇಬರು 90 ವರ್ಷಗಳ ಹಿಂದೆ 1935ರಲ್ಲಿ ಬರೆದ ಈ ಹದಿನಾರು ಪುಟಗಳ ಬರೆಹ ಆರು ಸಣ್ಣ ಸಣ್ಣ ಅಧ್ಯಾಯಗಳನ್ನು ಒಳಗೊಂಡಿದೆ. ‘ಡಾ. ಬಾಬಾಸಾಹೇಬ್ ಅಂಬೇಡ್ಕರ್: ಬರೆಹಗಳು ಮತ್ತು ಭಾಷಣಗಳು’ 12ನೆಯ ಸಂಪುಟದಲ್ಲಿ ಈ ಬರಹವನ್ನು ಸೇರಿಸಲಾಗಿದೆ. ಇದೊಂದು ಜೀವನ ಚರಿತ್ರಾತ್ಮಕ ಕಿರುಬರಹ ಅಥವಾ ಘಟನೆಗಳ ಗುಚ್ಚ. ಅವರ ಒಟ್ಟು ಬರಹ ಕೇವಲ ಸಾಹಿತ್ಯಕ ಜಿಜ್ಞಾಸೆಯಾಗಿರದೆ ಭಾರತದ ಸಮಾಜೋ- ಆರ್ಥಿಕ ದಾಖಲೀಕರಣ ಅಥವಾ ಇಡೀ ದೇಶವನ್ನು ಸಮಾನಗೊಳಿಸುವ ಮ್ಯಾನಿಫೆಸ್ಟೋ ಆಗಿದೆ. ಆದರೆ, ಈ ಲೇಖನ ಒಂದು ದೇಶದ ಸಾಮಾಜಿಕ ಪಥವನ್ನೇ ಬದಲಿಸುವ ಮಹಾನ್ ವ್ಯಕ್ತಿಯೊಬ್ಬರ ಒಡಲ ಸಂಕಟವನ್ನು, ಆ ಮೂಲಕ ತನ್ನ ನೆಲದ ಕೋಟ್ಯಂತರ ಜನರ ಕಣ್ಣೀರಿನ ಕಾರಣವನ್ನು ಕಂಡರಿಸುತ್ತದೆ. ದೇಶ ವಿದೇಶಗಳನ್ನು ಸುತ್ತಿಬಂದು ದೇಶದ ಅತ್ಯುನ್ನತ ಸ್ಥಾನಗಳನ್ನು ಅಲಂಕರಿಸಿ, ದೇಶಕ್ಕೊಪ್ಪುವ ಹಾಗೂ ಸಕಲರಿಗೂ ಬದುಕುವ ಹಕ್ಕನ್ನು ನೀಡುವ ಸಂವಿಧಾನ ರಚಿಸಿದ ಬಾಬಾಸಾಹೇಬರು ಯಾಕೆ ಈ ‘ವೀಸಾಗಾಗಿ ಕಾಯುವʼ ಲೇಖನ ಬರೆಯುತ್ತಾರೆ ಅನ್ನುವುದನ್ನು ಅಷ್ಟು ಸುಲಭವಾಗಿ ಅರ್ಥ ಮಾಡಿಕೊಳ್ಳಲು ಆಗುವುದಿಲ್ಲ. ಬಹುತೇಕ ವಿದ್ವಾಂಸರು ಅಭಿಪ್ರಾಯಪಟ್ಟಹಾಗೆ ಇದು ಭಾರತದ ಮೊದಲ ಆತ್ಮಚರಿತ್ರೆ. ಈ ಲೇಖನವನ್ನು ಓದುವಾಗ ನಮಗೆ ಭಾರತದ ದಲಿತರ ಬದುಕಿನ ಅಪಮಾನ, ಅಸಮಾನತೆ ಮತ್ತು ಅವುಗಳನ್ನು ಮೀರಿಕೊಳ್ಳಲು ನಡೆಸಿರುವ ಹೋರಾಟಗಳ ಅರಿವಿರಬೇಕು ಹಾಗೂ ಜಾತೀಯತೆಯ ಕರಾಳ ಮುಖದ ಪರಿಚಯವಿರಬೇಕು.
ಈ ಲೇಖನದ ಮೊದಲ ಘಟನೆ ನಡೆದದ್ದು 1901ರಲ್ಲಿ; ಬ್ರಿಟಿಷ್ ಆಳ್ವಿಕೆಯಲ್ಲಿದ್ದರೂ ವೈದಿಕ ಕಟ್ಟುಪಾಡುಗಳು ಮೇಲುಗೈ ಸಾಧಿಸಿದ್ದ ಕಾಲಘಟ್ಟದಲ್ಲಿ. ಆ ಹೊತ್ತಿಗೆ ತಾಯಿ ಭೀಮಾಬಾಯಿ ತೀರಿಕೊಂಡಿದ್ದರು. ಬಾಬಾಸಾಹೇಬರ ತಂದೆ ಈಸ್ಟ್ ಇಂಡಿಯಾ ಕಂಪನಿಯ ಮಿಲಿಟರಿಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಸುಬೇದಾರರಾಗಿ ಬಡ್ತಿ ಹೊಂದಿದ ರಾಮಜೀ ಸಕ್ಪಾಲ್, ಸತಾರ ಜಿಲ್ಲೆಯ ಗೋರೆಗಾಂವ್‌ನಲ್ಲಿ ಕ್ಯಾಶಿಯರ್ ಹುದ್ದೆಯಲ್ಲಿದ್ದರು. ಆದರೆ ಕುಟುಂಬ ಸತಾರದಲ್ಲೇ ನೆಲೆಸಿತ್ತು. ಬಾಬಾಸಾಹೇಬರು ಮತ್ತವರ ಸಹೋದರರು ಚಿಕ್ಕಮ್ಮನ ಜೊತೆ ಉಳಿದುಕೊಂಡಿದ್ದರು. ಕ್ಷಾಮದ ಕಾರಣಕ್ಕೆ, ಜನರಿಗೆ ಉದ್ಯೋಗ ನೀಡುವ ಸಲುವಾಗಿ ಕೆರೆ ಕಟ್ಟಿಸುವ ಬ್ರಿಟಿಷ್ ಸರ್ಕಾರದ ನಿರ್ಧಾರದಿಂದ ಅಲ್ಲಿ ಕೆಲಸ ಮಾಡುತ್ತಿದ್ದ ರಾಮಜೀ ಸಕ್ಪಾಲ್ ರಜೆ ಹಾಕಿ ಮಕ್ಕಳನ್ನು ನೋಡಲು ಬರುವಹಾಗಿರಲಿಲ್ಲ. ಬೇಸಿಗೆಯಲ್ಲಿ ತಮ್ಮನ್ನು ಕಾಣಲು ಮಕ್ಕಳೇ ಬರಲಿ ಎಂದು ಆಶಿಸಿದ್ದ ರಾಮಜೀ ಅವರು ಪತ್ರ ಬರೆದಿದ್ದರು.

ದೂರದಲ್ಲಿರುವ ತಂದೆಯನ್ನು ನೋಡಲು ಹೊರಟ ಮಕ್ಕಳ ತುಮುಲ ಜಾತಿ ಸಮಾಜದ ಸಣ್ಣತನದ ಮುಂದೆ ದುಃಖ ತರಿಸುತ್ತದೆ. ಅಲ್ಲಿಯವರೆಗೂ ರೈಲು ನಿಲ್ದಾಣವನ್ನೇ ಕಾಣದ ಬಾಬಾಸಾಹೇಬರು ತಮ್ಮ ಅಣ್ಣ ಮತ್ತು ಅಕ್ಕನ ಮಗನೊಂದಿಗೆ ಗೋರೆಗಾಂವ್‌ಗೆ ಹೊರಡಲು ಇಂಗ್ಲಿಷರಿಂದ ತಯಾರಿಸಲ್ಪಟ್ಟ ಬಟ್ಟೆ, ಟೊಪ್ಪಿ, ಶೂಗಳು ಹಾಗೂ ಪಂಚೆಗಳನ್ನೂ ಕೊಂಡರು. ಹತ್ತು ಕಿಲೋಮೀಟರ್ ದೂರದ ರೈಲು ನಿಲ್ದಾಣವನ್ನು ಪ್ರತಿಷ್ಠಿತವಾದ ಉಡುಗೆ ತೊಡುಗೆಯ ಸಹಾಯದಿಂದ ಟಾಂಗಾದಲ್ಲಿ ಕ್ರಮಿಸಿದರು. ಅಲ್ಲಿಂದ ರೈಲು ಹತ್ತಿ ಮಾಸೂರು ಎಂಬಲ್ಲಿ ಇಳಿದರು. ಅಲ್ಲಿಂದ ಗೋರೆಗಾಂವ್‌ಗೆ ಕರೆದುಕೊಂಡು ಹೋಗಬೇಕಾದ ತಂದೆಯ ಕಡೆಯ ಸಹಾಯಕರು ಬಾರದ ಕಾರಣದಿಂದ ಬಹಳ ಹೊತ್ತಿನವರೆಗೆ ಮಕ್ಕಳು ಕಾಯಬೇಕಾಯಿತು. ಇವರ ವೇಷ ಭೂಷಣ ನೋಡಿ ಬ್ರಾಹ್ಮಣರೆಂದು ತಿಳಿದುಕೊಂಡಿದ್ದ ಸ್ಟೇಷನ್ ಮಾಸ್ಟರ್ ಮುತುವರ್ಜಿ ವಹಿಸುತ್ತಿದ್ದನು. ಆದರೆ, ಇವರು ಮಹಾರರೆಂದು ತಿಳಿದಮೇಲೆ ಅವನು ಬೇರೆ ರೀತಿಯಲ್ಲಿ ವರ್ತಿಸಲು ಶುರು ಮಾಡಿದನು. ಇವರಿಗೆ ಗೋರೆಗಾಂವ್ ತಲುಪಲು ಎತ್ತಿನಗಾಡಿಯ ಅಗತ್ಯವಿತ್ತು. ಆದರೆ, ಮಕ್ಕಳು ಸ್ಟೇಷನ್ ಮಾಸ್ಟರ್‌ಗೆ ಜಾತಿ ಹೇಳುವಾಗ ಕೇಳಿಸಿಕೊಂಡಿದ್ದ ಅಲ್ಲಿನ ಕೆಲವು ಎತ್ತಿನಬಂಡಿಯವರು ಮಡಿ – ಮೈಲಿಗೆಯ ಕಾರಣಕ್ಕೆ ದೂರ ಉಳಿದರು. ಸ್ವಲ್ಪಹೊತ್ತಿನ ನಂತರ ಹಿಂದಿರುಗಿದ ಸ್ಟೇಷನ್ ಮಾಸ್ಟರ್‌ಗೆ ಮನಸ್ಸು ಕರಗಿ ಹೆಚ್ಚು ಬಾಡಿಗೆ ಕೊಟ್ಟು ಎತ್ತಿನಬಂಡಿ ಬಾಡಿಗೆ ತೆಗೆದುಕೊಂಡು ತಾವೇ ಓಡಿಸಿಕೊಂಡು ಹೋಗುವಂತೆಯೂ, ಬಂಡಿ ಚಾಲಕ ನಡೆದು ಬರುತ್ತಾನೆಂದೂ ಹೇಳಿದನು. ಇದರಿಂದ ಇವರಿಗೆ ಹೇಗೋ ನಡೆದುಹೋಗುವುದು ತಪ್ಪಿತು ಅನ್ನಿಸಿ ಒಪ್ಪಿದರು. ಆದರೆ, ಸ್ವಲ್ಪ ದೂರ ಹೋದಮೇಲೆ ನಡೆದು ಸುಸ್ತಾದ ಎತ್ತಿನಬಂಡಿಯವನು ಮಕ್ಕಳನ್ನು ಸರಿಸಿ ಬಂಡಿ ಏರಿದನು. ಹೀಗೆ ಪ್ರಯಾಣದ ಸಮಸ್ಯೆ ಕೊಂಚಮಟ್ಟಿಗೆ ಬಗೆಹರಿಯಿತು ಅನ್ನಿಸಿ ನಿರುಮ್ಮಳವಾಗಿದ್ದ ಮಕ್ಕಳಲ್ಲಿ ಗೋರೆಗಾಂವ್ ಇನ್ನೂ ಸಿಗದೆ ಇರುವುದು ಮತ್ತು ಆಗಲೇ ಕತ್ತಲಾಗಿರುವುದು ಆತಂಕ ಮೂಡಿಸಿದವು.
ಇದನ್ನೂ ಓದಿರಿ: ವರ್ತಮಾನದ ಬಿಕ್ಕಟ್ಟಿಗೆ ‘ಕ್ರಾಂತಿ ಮತ್ತು ಪ್ರತಿಕ್ರಾಂತಿ’ಯ ಮದ್ದು
ರಾತ್ರಿ ಹತ್ತುಗಂಟೆ ದಾಟಿದರೂ ಗೋರೆಗಾಂವ್ ಬರಲಿಲ್ಲವೆಂದು ಮಕ್ಕಳು ಅಳತೊಡಗಿದರು. ತಮ್ಮನ್ನು ಎಲ್ಲಿಯೋ ಕಾಣದ ಜಾಗಕ್ಕೆ ಕರೆದೊಯ್ದು ಕೊಲೆ ಮಾಡಿ, ತಮ್ಮ ಮೈಮೇಲಿನ ಚಿನ್ನದ ಒಡವೆಗಳನ್ನು ಅಪಹರಿಸುವನೆಂದು ಶಂಕಿಸಿದರು. ಸರಿರಾತ್ರಿಯಲ್ಲಿ ಒಂದು ದೀಪ ಕಾಣಿಸಿ ಅದು ಸುಂಕ ಸಂಗ್ರಹಕಾರನ ಗುಡಿಸಲು ಎಂದು ತಿಳಿಯಿತು. ಹಲವು ಎತ್ತಿಬಂಡಿಗಳ ಪ್ರಯಾಣಿಕರು, ಚಾಲಕರು ವಿಶ್ರಾಂತಿಗಾಗಿ ಅಲ್ಲಿ ತಂಗಿದ್ದನ್ನು ಕಂಡ ಬಾಬಾಸಾಹೇಬರು ಅಲ್ಲೇ ಕೆಲಕಾಲ ವಿಶ್ರಮಿಸಿ ಊಟ ಮಾಡಬಹುದು ಅಂದುಕೊಂಡರು. ಆದರೆ, ಅವರ ಬಳಿ ನೀರು ಇರಲಿಲ್ಲ. ಸುಂಕದ ಕುಟೀರದಲ್ಲಿ ನೀರು ಕೇಳೋಣವೆಂದರೆ, ಎತ್ತಿನಬಂಡಿ ಚಾಲಕ ‘ನೀವು ಮಹಾರರೆಂದು ತಿಳಿದರೆ ನೀರು ಸಿಗುವುದಿಲ್ಲ; ಮುಸಲ್ಮಾನರು ಎಂದು ಸುಳ್ಳು ಹೇಳಿ ನೀರು ಪಡೆದು ಊಟ ಮಾಡಿಕೊಳ್ಳಿʼ ಎಂದನು. ಆದರೆ, ತಾವು ಮುಸಲ್ಮಾನರೆಂದು ನಂಬಿಸುವುದು ಈ ಮಕ್ಕಳಿಗೆ ಸಾಧ್ಯವಾಗುವುದಿಲ್ಲ. ಇಲ್ಲಿ ನೀರು ಸಿಗುವುದಿಲ್ಲ ಎಂದೂ, ಗುಡ್ಡದ ಮೇಲೆ ಸಿಗುತ್ತದೆ ಎಂದೂ ಆತ ಕಟುವಾಗಿ ಹೇಳಿದನು. ಈ ಕಾರಣದಿಂದ ಆ ರಾತ್ರಿ ಅವರು ಸಾಕಷ್ಟು ಆಹಾರವಿದ್ದೂ, ನೀರಿಲ್ಲದ ಕಾರಣಕ್ಕೆ ಉಪವಾಸ ಮಲಗಬೇಕಾಯಿತು. ಈ ಘಟನೆ ಬಾಬಾಸಾಹೇಬರನ್ನು ಕಂಗೆಡಿಸಿತು. ನಾವು ಯಾವ ದೇಶದಲ್ಲಿದ್ದೇವೆ ಎನ್ನಿಸಿತು. ಅಸ್ಪೃಶ್ಯರಾಗಿರುವ ಕಾರಣಕ್ಕೇ ತಮಗೆ ನೀರು ಸಿಗಲಿಲ್ಲ ಅನ್ನುವ ಸತ್ಯ ಆಗ ಅವರಿಗೆ ಮನವರಿಕೆಯಾಯಿತು. ಅವರು ಊಹಿಸಿದ ‘ಸುರಕ್ಷಿತ ತಾಣʼ ಜಾತಿಯ ಕಾರಣಕ್ಕೆ ಅಸುರಕ್ಷಿತವಾಗಿತ್ತು. ಆ ರಾತ್ರಿ ಅವರು ಇಬ್ಬರು ಮಲಗಿ ಒಬ್ಬರು ಎದ್ದಿದ್ದು ಬಂಡಿ ಮತ್ತು ತಮ್ಮ ವಸ್ತುಗಳನ್ನು ನೋಡಿಕೊಂಡು ಕಳೆದರು. ಬೆಳಿಗ್ಗೆ ಎದ್ದು ನಸುಕಿನಲ್ಲಿ ಪ್ರಯಾಣಕ್ಕೆ ಒಪ್ಪದೆ ಎಂಟಕ್ಕೆ ಹೊರಟು ಹನ್ನೊಂದು ಗಂಟೆ ಹೊತ್ತಿಗೆ ಗೋರೆಗಾಂವ್ ತಲುಪಿದರು. ಮಕ್ಕಳನ್ನು ಕಂಡ ರಾಮಜೀ ಆಶ್ಚರ್ಯಚಕಿತರಾದರು. ತಾವು ಬರುವುದಾಗಿ ಬಾಬಾಸಾಹೇಬರು ಬರೆದಿದ್ದ ಪತ್ರವನ್ನು ಅವರ ಜವಾನ ಅವರಿಗೆ ನೀಡಿಯೇ ಇರಲಿಲ್ಲ.

ಬಾಬಾಸಾಹೇಬರು ಈ ಘಟನೆ ಬಗ್ಗೆ ಬರೆಯುತ್ತಾ ಭಾವುಕರಾಗುತ್ತಾರೆ. ಈ ಘಟನೆ ನಡೆದಾಗ ಅವರಿಗೆ ಒಂಬತ್ತು ವರ್ಷ. ಬಾಲ್ಯದಲ್ಲಿ ತಾವು ಅಸ್ಪೃಶ್ಯರು ಎಂದು ಅವರಿಗೆ ತಿಳಿದಿದ್ದರೂ ಸುತ್ತಲಿನ ಸಮಾಜ ತಮ್ಮನ್ನು ಈ ಮಟ್ಟದ ಕ್ರೌರ್ಯದಿಂದ ನಡೆಸಿಕೊಳ್ಳಬಹುದು ಎನ್ನುವ ಅಂದಾಜಿರಲಿಲ್ಲ. ಇದೇ ಸಂದರ್ಭದಲ್ಲಿ ಅವರು ಶಾಲೆಯ ದಿನಗಳನ್ನು ನೆನೆಯುತ್ತಾರೆ. ಶಾಲೆಯಲ್ಲಿ ಅವರು ಪ್ರತ್ಯೇಕವಾಗಿ ಒಂದು ತುಂಡು ಗೋಣಿಚೀಲ ಹಾಸಿಕೊಂಡು ಕೂರುತ್ತಿದ್ದುದು, ಜವಾನನೂ ಮುಟ್ಟಲು ಹೇಸುತ್ತಿದ್ದ ಆ ಚೀಲದ ತುಂಡನ್ನು ಪ್ರತಿದಿನ ಪುಸ್ತಕಗಳ ಜೊತೆ ಮನೆಗೆ ತೆಗೆದುಕೊಂಡು ಹೋಗಿ ಬೆಳಿಗ್ಗೆ ತರುತ್ತಿದ್ದುದು, ಸಹಪಾಠಿಗಳು ಬಾಯಾರಿಕೆಯಾದಾಗ ಶಿಕ್ಷಕರ ಒಪ್ಪಿಗೆ ಪಡೆದು ಜವಾನನಿಂದ ನೀರು ಪಡೆದು ಕುಡಿಯುತ್ತಿದ್ದುದು, ಆದರೆ, ಇವರಿಗೆ ಬಾಯಾರಿಕೆಯಾದರೆ, ನೀರು ಕೊಡಬೇಕಾದ ಜವಾನ ಎದ್ದು ಹೋಗುತ್ತಿದ್ದುದು, ಚಿಕ್ಕಂದಿನಲ್ಲಿ ತಮ್ಮ ಬಟ್ಟೆಗಳನ್ನು ಮುಟ್ಟಲು ಮಡಿವಾಳರು ನಿರಾಕರಿಸುತ್ತಿದ್ದುದು, ಕ್ಷೌರ ಮಾಡಲು ನಿರಾಕರಿಸುತ್ತಿದ್ದ ಕ್ಷೌರಿಕರ ಕೆಲಸವನ್ನು ಅಕ್ಕನೇ ಮಾಡುತ್ತಿದ್ದುದು ಇದೆಲ್ಲವನ್ನೂ ನೆನೆದು ಎಲ್ಲ ಅಸ್ಪೃಶ್ಯರ ಸಂಕಟವೂ ಇದೇ ಆಗಿರುವುದನ್ನು ಚಿಂತಿಸುತ್ತ ಬಾಬಾಸಾಹೇಬರು ಗೋರೆಗಾಂವ್‌ಗೆ ಪ್ರಯಾಣಿಸಿದ ಘಟನೆ ಅವರನ್ನು ಅದೆಷ್ಟು ಕುಗ್ಗಿಸಿತು ಎಂಬುದನ್ನು ದಾಖಲಿಸುತ್ತಾರೆ.
ಮೊದಲನೆಯ ಘಟನೆ ನಡೆದ 17 ವರ್ಷಗಳ ನಂತರದ ಘಟನೆಯನ್ನು ಬಾಬಾಸಾಹೇಬರು ಈ ಲೇಖನದ ಎರಡನೇ ಅಧ್ಯಾಯದಲ್ಲಿ ನಿರೂಪಿಸುತ್ತಾರೆ. ಅದು ಅವರು ನ್ಯೂಯಾರ್ಕ್‌ನ ಕೊಲಂಬಿಯಾ ಯೂನಿವರ್ಸಿಟಿ ಮತ್ತು ಲಂಡನ್ ವಿಶ್ವವಿದ್ಯಾಲಯದ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ನಲ್ಲಿ ವ್ಯಾಸಂಗ ಮುಗಿಸಿ 1918ರಲ್ಲಿ ಭಾರತಕ್ಕೆ ಹಿಂದಿರುಗಿದಾಗ ನಡೆದದ್ದು. ವಿದೇಶಗಳಲ್ಲಿ ಓದಿದ ಕಾರಣಕ್ಕೆ ಬಾಬಾಸಾಹೇಬರಿಗೆ ‘ತಾನೊಬ್ಬ ಅಸ್ಪೃಶ್ಯನಾಗಿ ಎಲ್ಲಿ ಹೋದರೂ ತನಗೂ ಮತ್ತು ಸಮಾಜಕ್ಕೂ ತೊಂದರೆಯಾಗುತ್ತದೆʼ ಎಂಬುದು ಮರೆತಹಾಗೇ ಆಗಿತ್ತು. ಬರೋಡಾಗೆ ಬಂದ ದಿನವೇ ಅದರ ಅನುಭವವಾಯಿತು. ಅವರಿಗೆ ತಕ್ಷಣಕ್ಕೆ ಉಳಿದುಕೊಳ್ಳಲು ಒಂದು ಜಾಗ ಬೇಕಿತ್ತು. ‘ನಾನೆಲ್ಲಿ ಹೋಗಲಿ; ಯಾರು ನನ್ನನ್ನು ಕರೆದೊಯ್ಯುತ್ತಾರೆ..?ʼ ಎಂಬ ಪ್ರಶ್ನೆ ಅವರಿಗೆ ಕಾಡುತ್ತಿತ್ತು. ಆ ಸಮಯದಲ್ಲಿ ಯಾವುದಾದರೂ ಮೇಲ್ಜಾತಿಗೆ ಸೇರಿದ ವ್ಯಕ್ತಿ ಹೀಗೆ ವಿದೇಶದಲ್ಲಿ ವ್ಯಾಸಂಗ ಮುಗಿಸಿಕೊಂಡು ಹಿಂದಿರುಗಿದ್ದರೆ ಅವರನ್ನು ಹೇಗೆ ನಡೆಸಿಕೊಳ್ಳುತ್ತಿದ್ದರು..? ಅಸ್ಪೃಶ್ಯರಾದ ಕಾರಣಕ್ಕೆ ಬಾಬಾಸಾಹೇಬರು ಅಭದ್ರತೆಯಿಂದ ನೋಯುವ ಹಾಗಾಯಿತು. ಹೇಗೋ ‘ಪಾರ್ಸಿ ಇನ್ʼ ಎಂಬ ಪಾರ್ಸಿಗಳು ಪಾರ್ಸಿಗಳಿಗಾಗಿಯೇ ನಡೆಸುತ್ತಿದ್ದ ಹೋಟೆಲ್ ಹುಡುಕಿದರು. ಪಾರ್ಸಿಗಳು ಅನುಸರಿಸುತ್ತಿದ್ದ ಝೊರಾಷ್ಟ್ರೀಯನ್ ಧರ್ಮದಲ್ಲಿ ಅಸ್ಪೃಶ್ಯತೆ ಆಚರಣೆ ಇರಲಿಲ್ಲ ಎಂಬ ಅಂಶ ಬಾಬಾಸಾಹೇಬರಲ್ಲಿ ಖುಷಿ ಮೂಡಿಸಿತು. ಆದರೆ ಇವರು ಪಾರ್ಸಿಯಲ್ಲದ್ದು ಕಂಡು ಪಾರ್ಸಿ ಇವರಿಗೆ ಕೊಠಡಿ ಕೊಡಲು ನಿರಾಕರಿಸಿದ. ಹೆಚ್ಚಿಗೆ ಹಣ ಕೊಡುವ ಒಪ್ಪಂದದೊಂದಿಗೆ ಕೊಠಡಿ ಸಿಕ್ಕಿತು. ಅದು ಪಾಳು ಕೊಂಪೆಯಂತಿತ್ತು. ಮನುಷ್ಯ ಸಂಪರ್ಕವಿಲ್ಲದೆ ಮುರಿದ ಕುರ್ಚಿ ಮೇಜು ಬೆಂಚುಗಳ ಉಗ್ರಾಣದಲ್ಲಿ ಬಾವಲಿಗಳ ಸದ್ದಿನ ನಡುವೆ ಓದುತ್ತ ದಿನ ದೂಡಿದರು ಬಾಬಾಸಾಹೇಬರು. ಬಂದಿಖಾನೆಯಂತಿದ್ದ ಆ ವಸತಿಯಲ್ಲಿ ದಿನ ದೂಡಬೇಕಿದ್ದ ಹೃದಯವಿದ್ರಾವಕ ದಿನಗಳು ಅವು ಎಂದು ಬಣ್ಣಿಸುತ್ತಾರೆ. ಆದರೂ ಈ ವಸತಿ ತಮ್ಮ ಪ್ರಾಣಕ್ಕಿಂತ ಹೆಚ್ಚು ಬೆಲೆಯುಳ್ಳದ್ದಾಗಿತ್ತು ಎನ್ನುತ್ತಾರೆ. ತಮ್ಮ ಮಿಕ್ಕ ಲಗೇಜನ್ನು ಮುಂಬಯಿಯಿಂದ ತಂದೊಪ್ಪಿಸಿದ ಸೋದರಿಯ ಮಗ, ಬಾಬಾಸಾಹೇಬರು ವಾಸಿಸಿದ್ದ ಸ್ಥಿತಿಗತಿಯನ್ನು ಕಂಡು ಮರುಗಿ ಜೋರಾಗಿ ಅಳಲಾರಂಭಿಸಿದ್ದ. ಆತನನ್ನು ಸಮಾಧಾನ ಮಾಡಿ ಕಳಿಸಬೇಕಾಗಿ ಬಂದಿತ್ತು.
ಇದನ್ನೂ ಓದಿರಿ: ‘ಕ್ರಾಂತಿ ಮತ್ತು ಪ್ರತಿಕ್ರಾಂತಿ’: ಬಾಬಾಸಾಹೇಬರು ತೆರೆದಿಟ್ಟ ಇತಿಹಾಸ
ಬಾಬಾಸಾಹೇಬರನ್ನು ವಿದೇಶದ ವ್ಯಾಸಂಗಕ್ಕೆ ಕಳಿಸಿದ್ದ ಬರೋಡಾದ ಮಹಾರಾಜರು ಇವರನ್ನು ಅಕೌಂಟೆಂಟ್ ಜನರಲ್ ಕಚೇರಿಗೆ ನೇಮಿಸಿದರು. ಸರ್ಕಾರಿ ವಸತಿಗಾಗಿ ಅವರು ಹಾಕಿದ್ದ ಅರ್ಜಿಯನ್ನು ಬರೋಡ ಸಂಸ್ಥಾನದ ಪ್ರಧಾನಮಂತ್ರಿ ನಿರ್ಲಕ್ಷಿಸಿದ್ದ. ‘ಪಾರ್ಸಿ ಇನ್ʼನಲ್ಲಿ ತಂಗಿದ್ದ 11ನೇ ದಿನದಂದು ಕೆಲವರು ಬಂದು ಪಾರ್ಸಿಯಲ್ಲದಿದ್ದರೂ ಇಲ್ಲಿ ಉಳಿದುಕೊಂಡಿರುವ ಬಗ್ಗೆ ಧಮ್ಕಿ ಹಾಕಿದರು. ಬಾಬಾಸಾಹೇಬರು ಈ ಘಟನೆಯನ್ನು ವಿವರಿಸುವಾಗ ಅವರ ಭಾಷೆಯ ಕಟುವನ್ನು ನಾವು ಗಮನಿಸಬೇಕು. ‘ನಾನು ಪಾರ್ಸಿವೇಷದಲ್ಲಿ ಆಡುತ್ತಿದ್ದ ಆಟವು ಬಯಲುಗೊಂಡಿತ್ತು ಹಾಗೂ ಈ ಆಟವನ್ನು ಮುಂದುವರಿಸಿದರೆ ಜೀವನವೇ ಅಂತ್ಯವಾಗುವ ಮಾರಣಾಂತಿಕ ಹಲ್ಲೆಗೆ ಒಳಗಾಗುತ್ತಿದ್ದೆ. ನನ್ನ ಶಾಂತಚಿತ್ತ ಮತ್ತು ಮೌನ ನನ್ನನ್ನು ಅಪಾಯದಿಂದ ಪಾರು ಮಾಡಿದವು.ʼ

ಆ ಪಾರ್ಸಿಗಳು ಅಂದು ಸಂಜೆಯ ಹೊತ್ತಿಗೆ ವಸತಿಯನ್ನು ಖಾಲಿ ಮಾಡಬೇಕೆಂದು ಧಮ್ಕಿ ಹಾಕಿ ಹೋಗಿದ್ದರಿಂದ ಬಾಬಾಸಾಹೇಬರಿಗೆ ಕೈಕಾಲು ಆಡಲಿಲ್ಲ. ಎಲ್ಲರನ್ನೂ ಶಪಿಸುತ್ತ ಜೋರಾಗಿ ಅತ್ತರು. ಅವರಿಗೆ ಸಿಗಬೇಕಾದ ಸರ್ಕಾರಿ ಬಂಗಲೆಯ ಬಗ್ಗೆ ಅವರಿಗೆ ನಂಬಿಕೆಯಿದ್ದರೂ ಆ ಕ್ಷಣದಲ್ಲಿ ಅವರಿಗೆ ಬೇರೊಂದು ವ್ಯವಸ್ಥೆ ಆಗಬೇಕಿತ್ತು. ಬರೋಡಾದಲ್ಲಿ ಅವರಿಗೆ ಇಬ್ಬರು ಸ್ನೇಹಿತರಿದ್ದರು. ಒಬ್ಬ ಹಿಂದೂ. ಇನ್ನೊಬ್ಬ ಭಾರತೀಯ ಕ್ರೈಸ್ತ. ಮೊದಲು ಹಿಂದೂ ಸ್ನೇಹಿತನನ್ನು ಕೇಳಿದರು. ಆತ ಉದಾತ್ತನೂ, ನಿಷ್ಕಲ್ಮಷ ಹೃದಯದವನೂ ಆಗಿದ್ದನು. ಆದರೆ, ‘ನೀನು ನಮ್ಮ ಮನೆಗೆ ಬಂದರೆ ನನ್ನ ಸೇವಕರು ಕೆಲಸ ಬಿಟ್ಟು ಹೋಗಬಹುದುʼ ಎಂದನು. ಇದಾದಮೇಲೆ ಬಹಳ ಯೋಚಿಸಿದ ನಂತರ ಬಾಬಾಸಾಹೇಬರು ‘ನನ್ನ ಮನೆಗೊಮ್ಮೆ ಬಾʼ ಎಂದು ಆಹ್ವಾನಿಸಿದ್ದ ಭಾರತೀಯ ಕ್ರೈಸ್ತ ಸ್ನೇಹಿತನ ಬಳಿ ಹೋಗಿ ಕೇಳಿದರು. ಅವನು ‘ನನ್ನ ಹೆಂಡತಿ ಊರಿಗೆ ಹೋಗಿದ್ದಾಳೆ; ಅವಳು ನಾಳೆ ಬರೋಡಾಗೆ ಬರುತ್ತಾಳೆ. ಅವಳೊಂದಿಗೆ ಈ ಬಗ್ಗೆ ಮಾತಾಡಿ ತಿಳಿಸುತ್ತೇನೆʼ ಎಂದನು. ಈ ಉತ್ತರ ಅವರಿಗೆ ಅರ್ಥವಾಗಿತ್ತು. ಆ ದಂಪತಿ ಮೂಲತಃ ಬ್ರಾಹ್ಮಣರಾಗಿದ್ದು, ಗಂಡನು ಸ್ವಲ್ಪಮಟ್ಟಿಗೆ ಉದಾರಿಯಾಗಿದ್ದರೂ ಹೆಂಡತಿ ಸಂಪ್ರದಾಯ ಶರಣೆಯಾಗಿದ್ದಳು. ಇದಾದಮೇಲೆ ಬಾಬಾಸಾಹೇಬರಿಗೆ ಉಳಿದ ಏಕೈಕ ದಾರಿ ಬಾಂಬೆಗೆ ಹಿಂದಿರುಗುವುದು. ರಾತ್ರಿ ಒಂಬತ್ತರ ರೈಲುಗಾಡಿ ಹಿಡಿಯಬೇಕಿರುತ್ತದೆ. ಅಲ್ಲಿಯವರೆಗೆ ಕಾಲ ಕಳೆಯುವುದಾದರೂ ಎಲ್ಲಿ? ಪಾರ್ಸಿ ಹೊಟೇಲಿಗೆ ಹಿಂದಿರುಗುವ ಆಲೋಚನೆಯನ್ನು ಕೈಬಿಡುತ್ತಾರೆ. ರಾತ್ರಿ ಎಂಟರ ತನಕ ಬರೋಡಾದ ಹೊರವಲಯದ ಕಾಮಾಟಿ ಬಾಗ್ ಎಂಬ ಪಾರ್ಕ್‌ನಲ್ಲಿ ಕುಳಿತು ಕೆಲಕಾಲ ತಮ್ಮ ದುಸ್ಥಿತಿಯನ್ನು ಧೇನಿಸುತ್ತಾರೆ. ನಂತರ ಹೋಟೆಲ್‌ಗೆ ಹೋಗಿ ಬಾಕಿ ಹಣ ಸಂದಾಯ ಮಾಡಿ ಬಾಂಬೆಗೆ ಹೊರಡುತ್ತಾರೆ. ಈ ಘಟನೆ ನಡೆದಾಗ ಭಾರತೀಯ ಶೈಕ್ಷಣಿಕ ಸೇವೆಯಲ್ಲಿ ಅನೇಕ ಹುದ್ದೆಗಳು ಖಾಲಿ ಇದ್ದವು. ಅಲ್ಲದೆ, ಲಂಡನ್ನಿನಲ್ಲಿ ಅವರಿಗೆ ಉನ್ನತ ವ್ಯಕ್ತಿಗಳ ಪರಿಚಯವಿತ್ತು. ತಮ್ಮ ಓದಿಗೆ ಸಹಾಯ ಮಾಡಿದ ಬರೋಡಾ ಮಹಾರಾಜರ ಆಡಳಿತದಲ್ಲಿ ಸೇವೆ ಸಲ್ಲಿಸಬೇಕೆಂಬ ಒಂದೇ ಕಾರಣಕ್ಕೆ ಅವರಲ್ಲಿಗೆ ಹೋಗಿದ್ದರು. ಆದರೆ, ಕೇವಲ ಹನ್ನೊಂದು ದಿವಸಗಳಲ್ಲಿ ಅವರ ಬರೋಡಾ ಸೇವೆ ಸಮಾಪ್ತಿಗೊಂಡಿತ್ತು. ಈ ಘಟನೆ ಅವರಿಗೆ ತಮ್ಮ ತಂದೆ ತಾಯಿಯವರ ಕಾಲದ ಅಸ್ಪೃಶ್ಯರು ಅನುಭವಿಸಿರಬಹುದಾದ ಸಂಕಟವನ್ನು ಅವರ ಹೃದಯಕ್ಕೆ ಕಟ್ಟಿಕೊಟ್ಟಿತ್ತು. ಈ ಘಟನೆ ನಡೆದ ಹದಿನೆಂಟು ವರ್ಷಗಳ ನಂತರ ಇದನ್ನು ದಾಖಲಿಸುತ್ತಾರೆ ಬಾಬಾಸಾಹೇಬರು. ಆಗ ಅವರು ಹೇಳುತ್ತಾರೆ: ‘ಆ ಸನ್ನಿವೇಶ ನೆನಪಾದಾಗಲೆಲ್ಲಾ ಕಣ್ಣಲ್ಲಿ ನೀರು ತನ್ನಷ್ಟಕ್ಕೆ ತಾನೇ ಹರಿಯುತ್ತದೆʼ ಅಂತ. ಇದರಿಂದ ಅವರಿಗೆ ‘ಹಿಂದೂಗಳಿಗೆ ಅಸ್ಪೃಶ್ಯರಾಗಿರುವವರು ಪಾರ್ಸಿಗಳಿಗೂ ಅಸ್ಪೃಶ್ಯರೇʼ ಅನ್ನುವ ಸತ್ಯ ಅರ್ಥವಾಗುತ್ತದೆ.
ಈ ಲೇಖನದ ಮೂರನೇ ಭಾಗದಲ್ಲಿ ಬಾಬಾಸಾಹೇಬರು ದಾಖಲಿಸುವ ಘಟನೆ 1929ರಲ್ಲಿ ನಡೆದದ್ದು. ಅಸ್ಪೃಶ್ಯರ ಕುಂದು ಕೊರತೆಗಳ ಅಧ್ಯಯನಕ್ಕೆಂದು ಸರ್ಕಾರ ಮಾಡಿದ ಸಮಿತಿಯಲ್ಲಿ ಇವರು ಸದಸ್ಯರಾಗಿರುತ್ತಾರೆ. ದಲಿತರ ಮೇಲೆ ಜಾತಿಯ ಕಾರಣದಿಂದ ನಡೆಯುವ ದೌರ್ಜನ್ಯ- ದಬ್ಬಾಳಿಕೆಗಳ ಸತ್ಯಶೋಧನೆ ನಡೆಸಲು ಇಡೀ ಸಮಿತಿ ಪ್ರವಾಸ ಮಾಡಬೇಕಾಗಿರುತ್ತದೆ. ಖಾಂದೇಶದಿಂದ ಬಾಂಬೆಗೆ ತೆರಳುವ ಧುಲಿಯಾ ಮಾರ್ಗದಲ್ಲಿರುವ ಒಂದು ಹಳ್ಳಿಯಲ್ಲಿ ದಲಿತರಿಗೆ ಸಾಮಾಜಿಕ ಬಹಿಷ್ಕಾರ ಹಾಕಲಾಗಿತ್ತು. ಆ ಹಳ್ಳಿಗೆ ಹೋಗಬೇಕಾದರೆ ಚಾಲೀಸಗಾಂವ್‌ನಲ್ಲಿ ರೈಲು ಇಳಿಯಬೇಕಿತ್ತು. ಹಳ್ಳಿಗೆ ಹೋಗಿ ಹಿಂದಿರುಗಿದ ಬಾಬಾಸಾಹೇಬರನ್ನು ಚಾಲೀಸ್‌ಗಾಂವ್ ಗ್ರಾಮಸ್ಥರು ತಮ್ಮೊಂದಿಗೆ ಉಳಿಯುವಂತೆ ಕೇಳಿಕೊಂಡರು. ಆ ಗ್ರಾಮದ ದಲಿತರೊಂದಿಗೆ ಬಾಬಾಸಾಹೇಬರು ಉಳಿಯಲು ತೀರ್ಮಾನಿಸಿದರು. ಈ ಚಾಲೀಸಗಾಂವ್ ಭಾಗದ ಅಸ್ಪೃಶ್ಯರು ವಾಸವಾಗಿದ್ದ ಮಹಾರವಾಡ ಗ್ರಾಮವು ರೈಲು ನಿಲ್ದಾಣದಿಂದ ಎರಡು ಕಿಲೋಮೀಟರ್ ದೂರವಿತ್ತು. ಬಾಬಾಸಾಹೇಬರನ್ನು ಹೂಗುಚ್ಛಗಳ ಮೂಲಕ ಆದರದಿಂದ ಸ್ವಾಗತಿಸಿದ ಆ ಜನರು ಮಹಾರವಾಡಕ್ಕೆ ಕಾಲ್ನಡಿಗೆಯಲ್ಲೇ ಕರೆದೊಯ್ಯಬಹುದಿತ್ತು. ಅದೂ ಅಲ್ಲದೆ ನಡುವೆ ಒಂದು ಕಾಲುವೆ ಮೂಲಕ ನದಿ ದಾಟಬೇಕಿತ್ತು. ಇವರನ್ನು ನಡೆಸಿಕೊಂಡು ಹೋಗುವುದು ಸರಿಯಲ್ಲವೆಂದು ಯೋಚಿಸಿದ ಗ್ರಾಮಸ್ಥರು ಒಂದು ಟಾಂಗಾದ ವ್ಯವಸ್ಥೆ ಮಾಡಿದ್ದರು. ಆದರೆ, ಆ ಟಾಂಗಾ ಓಡಿಸುವ ಚಾಲಕರ್ಯಾರೂ ಸಿಗದಿದ್ದ ಕಾರಣ ತಮ್ಮಲ್ಲೇ ಒಬ್ಬ ವ್ಯಕ್ತಿಯನ್ನು ಟಾಂಗಾ ಹೊಡೆಯಲು ಬಿಟ್ಟಿದ್ದರು. ದಾರಿ ಮಧ್ಯೆ ಆ ಟಾಂಗಾ ಒಂದು ಕಾರಿಗೆ ಡಿಕ್ಕಿ ಹೊಡೆಯಿತು. ಅದರಿಂದ ಹೇಗೋ ಪಾರಾಗಿ ಸೇತುವೆ ಮೇಲೆ ಬಂದಾಗ ಕುದುರೆ ಆಯತಪ್ಪಿ ಟಾಂಗಾ ಕೆಳಗೆ ಬಿದ್ದಿತು. ಬಾಬಾಸಾಹೇಬರು ಕಲ್ಲಿನ ಮೇಲೆ ಬಿದ್ದಿದ್ದರಿಂದ ಕಾಲಿಗೆ ಪೆಟ್ಟಾಯಿತು. ಎಲ್ಲರೂ ಕಣ್ಣೀರು ಹಾಕುತ್ತಾ ಅವರನ್ನು ಎತ್ತಿಕೊಂಡೇ ಹೋದರು.
ಇದನ್ನೂ ಓದಿರಿ: ಬಾಬಾಸಾಹೇಬರು ಬಿಡಿಸಿಟ್ಟ ‘ರಾಮ-ಕೃಷ್ಣರ ಒಗಟು’ ವಿವಾದ ಹುಟ್ಟುಹಾಕಿದ್ದೇಕೆ?
ಬಾಬಾಸಾಹೇಬರ ಕಾಲಿಗೆ ಹೆಚ್ಚೇ ಪೆಟ್ಟಾಗಿತ್ತು. ಮಹಾರವಾಡಕ್ಕೆ ಕರೆದೊಯ್ಯಲು ಯಾವ ಟಾಂಗಾ ಚಾಲಕನೂ ಒಪ್ಪದಿದ್ದಾಗ ಅವರನ್ನು ನಡೆಸಿಕೊಂಡು ಹೋಗುವುದು ಗೌರವಕ್ಕೆ ಧಕ್ಕೆ ಉಂಟುಮಾಡಬಹುದೆಂದು ಜನರು ಟಾಂಗಾ ಬಾಡಿಗೆ ಪಡೆದು ತಮ್ಮಲ್ಲೇ ಒಬ್ಬ ಚಾಲಕನನ್ನು ತಯಾರುಮಾಡಿದ್ದರು. ಆದರೆ, ಆ ಚಾಲಕನಿಗೆ ಟಾಂಗಾ ಹೊಡೆಯುವ ಬಗ್ಗೆ ಏನೂ ತಿಳಿದಿರಲಿಲ್ಲ. ಅಸ್ಪೃಶ್ಯರನ್ನು ಟಾಂಗಾದಲ್ಲಿ ಕೂರಿಸಬಾರದೆನ್ನುವ ಜಾತ್ಯಸ್ಥ ಮನಸ್ಸಿನ ಕೊಳಕಿನ ಕಾರಣದಿಂದ ಬಾಬಾಸಾಹೇಬರು ಕಾಲಿಗೆ ಏಟು ಮಾಡಿಕೊಳ್ಳಬೇಕಾಯಿತು. ಟಾಂಗಾ ಹೊಡೆಯುವ ಹಿಂದೂ ಕೂಡ, ಬ್ಯಾರಿಸ್ಟರ್ ಅಟ್ ಲಾ ಓದಿದ್ದ ತಾವೂ ಸೇರಿದಂತೆ ಎಲ್ಲ ಅಸ್ಪೃಶ್ಯರಿಗಿಂತ ಶ್ರೇಷ್ಠನೆಂದು ಬಗೆದಿದ್ದ ಮನಸ್ಥಿತಿಯನ್ನು ಬಾಬಾಸಾಹೇಬರು ಅನಾವರಣಗೊಳಿಸುತ್ತಾರೆ.

ಈ ಲೇಖನದ ನಾಲ್ಕನೇ ಘಟನೆ 1934ರದ್ದು. ಬಾಬಾಸಾಹೇಬರೊಂದಿಗೆ ಶೋಷಿತ ವರ್ಗಗಳ ಚಳವಳಿಯಲ್ಲಿದ್ದ ಸ್ನೇಹಿತರು ಪ್ರವಾಸವೊಂದನ್ನು ಏರ್ಪಡಿಸಿದ್ದರು. ಬೌದ್ಧ ಗುಹೆಗಳು, ವೆರುಲ್, ನಾಸಿಕ್ ಮತ್ತು ಔರಂಗಾಬಾದ್‌ಗಳಿಗೆ ಭೇಟಿ ನೀಡುವ ಉದ್ದೇಶ ತಂಡದ್ದಾಗಿತ್ತು. ಅದರಲ್ಲಿ ಔರಂಗಾಬಾದ್‌ಗೆ ಹೋಗಲೇಬೇಕೆನ್ನುವುದು ಸಾಹೇಬರ ಬಯಕೆಯಾಗಿತ್ತು. 30 ಜನರಿದ್ದ ಉದ್ದೇಶಿತ ಪ್ರವಾಸದಲ್ಲಿ ಅಸ್ಪೃಶ್ಯ ಪ್ರವಾಸಿಗ ಎದುರಿಸಬೇಕಾದ ತೊಂದರೆಗಳನ್ನು ಮನಗಂಡು ಪ್ರವಾಸಿಗರ ತಂಡ ಪ್ರವಾಸದ ಪಟ್ಟಿಯನ್ನು ಘೋಷಿಸಿರಲಿಲ್ಲ. ಎಲ್ಲರೂ ನಿಜಾಮರ ಪ್ರಾಂತದಲ್ಲಿ ಪ್ರಯಾಣ ಮಾಡುತ್ತಿದ್ದಾಗ ದೌಲತಾಬಾದಿನಲ್ಲಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಇವರ ಭೇಟಿಗೆ ಕಾಯುತ್ತಿದ್ದರು. ಅಲ್ಲಿನ ಕೋಟೆಯನ್ನು ಇವರು ನೋಡಬೇಕಿತ್ತು. ಉಪಾಹಾರ ಮತ್ತು ಚಹಾ ಸೇವಿಸಿ ನಂತರ ಕೋಟೆ ನೋಡಲು ಅಲ್ಲಿನ ಜನ ಕೇಳಿಕೊಂಡರು. ಆದರೆ, ಕತ್ತಲಾವರಿಸುವ ಮೊದಲೇ ಕೋಟೆಯನ್ನು ನೋಡುವ ಇರಾದೆಯಿಂದ ನಂತರ ಚಹಾ ಸೇವಿಸಿದರಾಯಿತು ಎಂದುಕೊಂಡರು.
ಕೋಟೆಗೆ ಪ್ರವೇಶಿಸುವ ಮುನ್ನ ಅಲ್ಲೇ ಇದ್ದ ಸ್ವಚ್ಛವಾದ ಪುಟ್ಟ ಕೆರೆಯ ಕಟ್ಟೆಯ ಮೇಲೆ ನಿಂತು ಪ್ರವಾಸದ ಕಾರಣಕ್ಕೆ ಧೂಳಿನಿಂದ ಕೂಡಿದ್ದ ಕೈಕಾಲು ಮುಖ ತೊಳೆದುಕೊಂಡರು. ಇನ್ನೇನು ಕೋಟೆಯ ಒಳಗೆ ಪ್ರವೇಶಿಸಬೇಕು ಅನ್ನುವಾಗ ವಯಸ್ಸಾದ ಮಹಮದೀಯನೊಬ್ಬ ‘ಅಸ್ಪೃಶ್ಯರು ಕೆರೆಯನ್ನು ಮಲಿನಗೊಳಿಸಿದರುʼ ಎಂದು ಕೂಗುತ್ತಾ ಓಡಿಬಂದ. ಅವನೊಂದಿಗೆ ಕೆಲವರು ಸೇರಿಕೊಂಡು, ‘ಈ ಅಸ್ಪೃಶ್ಯರಿಗೆ ಸೊಕ್ಕು ಜಾಸ್ತಿಯಾಗಿದೆ; ಅವರು ತಮ್ಮ ಸ್ಥಾನವನ್ನು ಮರೆತಿದ್ದಾರೆʼ ಎಂದು ಜೋರಾಗಿ ಬೈಯಲು ಶುರುಮಾಡಿದರು. ಪ್ರವಾಸಿಗರ ತಂಡ ‘ನೋಡಿ ನಾವು ಹೊರಗಿನವರು, ನಮಗೆ ಇಲ್ಲಿಯ ಸಂಪ್ರದಾಯ ತಿಳಿದಿರಲಿಲ್ಲʼ ಎಂದು ಹೇಳಿದರೂ ಕೇಳದೆ, ಇವರನ್ನು ಕರೆತಂದಿದ್ದ ಸ್ಥಳೀಯ ಅಸ್ಪೃಶ್ಯರನ್ನು ಬೈಯತೊಡಗಿದರು. ಪಾಪ ಇವರು ಕೆರೆಯಲ್ಲಿ ಮುಖ ತೊಳೆಯುವಾಗ ಅಲ್ಲಿನ ಅಸ್ಪೃಶ್ಯರು ಅಲ್ಲಿರಲೇ ಇಲ್ಲ. ಅವರು ‘ಅದು ನಮ್ಮ ತಪ್ಪಲ್ಲʼ ಎಂದರೂ ಕೇಳದೆ ಹಲ್ಲೆಗೆ ಮುಂದಾದರು. ಅವರಲ್ಲೊಬ್ಬ ಯುವಕ ‘ಅಸ್ಪೃಶ್ಯರು ತಮ್ಮ ಸ್ಥಾನವನ್ನು ಮರೆಯಬಾರದುʼ ಎಂದು ಕೂಗುತ್ತಲೇ ಇದ್ದ. ಬಾಬಾಸಾಹೇಬರಿಗೆ ಸಿಟ್ಟು ಬಂದು, ‘ನಿನ್ನ ಧರ್ಮ ಹೇಳುವುದು ಇದೇ ಏನು..? ಅಸ್ಪೃಶ್ಯನೊಬ್ಬನು ಮಹಮ್ಮದೀಯನಾದಾಗಲೂ ಆತ ಈ ಕೆರೆಯ ನೀರನ್ನು ಮುಟ್ಟುವುದನ್ನು ತಡೆಯುತ್ತೀಯಾ?’ ಎಂದು ಆ ಯುವಕನನ್ನು ಏರಿದ ದನಿಯಲ್ಲಿ ಪ್ರಶ್ನಿಸಿದರು. ನೆರೆದಿದ್ದ ಮುಸಲ್ಮಾನರು ಮಾತು ಹೊರಡದೆ ಸ್ತಬ್ಧರಾಗುತ್ತಾರೆ. ಅದೇ ಸಿಟ್ಟಿನಲ್ಲಿ ಕೋಟೆಯ ಗಾರ್ಡ್ ಬಳಿ ಹೋಗಿ ‘ನಮಗೆ ಕೋಟೆ ನೋಡಲು ಬಿಡುವಿರೋ ಇಲ್ಲವೋ ಹೇಳಿʼ ಅಂದರು. ಅವನು ಇವರ ಹೆಸರು ಕೇಳಿದ. ಒಂದು ಚೀಟಿಯಲ್ಲಿ ಬರೆದುಕೊಟ್ಟರು. ಅವನು ಒಳಗೆ ಹೋಗಿ ಹಿಂದಿರುಗಿ ‘ಒಳಗೆ ಬನ್ನಿʼ ಅಂದ. ಇದು ಅಲ್ಲಿದ್ದ ಮಹಮ್ಮದೀಯರ ಬಾಯಿ ಮುಚ್ಚಿಸಿತು. ಇದರಿಂದ ಬಾಬಾಸಾಹೇಬರು ಅಸ್ಪೃಶ್ಯರು ಹಿಂದೂಗಳಿಗೆ ಹೇಗೆ ಅಸ್ಪೃಶ್ಯರೋ, ಪಾರ್ಸಿಗಳಿಗೂ, ಮುಸಲ್ಮಾನರಿಗೂ ಅಸ್ಪೃಶ್ಯರೇ ಎಂಬುದನ್ನು ನಿರೂಪಿಸಿದರು. ಈ ಎರಡೂ ಘಟನೆಗಳಿಂದ ಅವರು ಬಹಳಷ್ಟು ನೊಂದುಕೊಂಡಿದ್ದರು.
‘ವೇಯ್ಟಿಂಗ್ ಫಾರ್ ಎ ವೀಸಾ’ ಲೇಖನದಲ್ಲಿ ಬಾಬಾಸಾಹೇಬರು ಮಿಕ್ಕ ಎರಡು ಘಟನೆಗಳಲ್ಲಿ ಇಬ್ಬರು ಬೇರೆ ಬೇರೆ ಅಸ್ಪೃಶ್ಯರ ಅನುಭವಗಳನ್ನು ದಾಖಲಿಸಿದ್ದಾರೆ. ಅವರಲ್ಲಿ ಒಬ್ಬ ಕಾಥೇವಾಡದ ಒಂದು ಹಳ್ಳಿಯಲ್ಲಿ ಕೆಲಸ ಮಾಡುವ ಶಿಕ್ಷಕ. 1929ರ ಡಿಸೆಂಬರ್ ತಿಂಗಳ 12ನೇ ತಾರೀಖಿನಲ್ಲಿ ಪ್ರಕಟವಾದ ಗಾಂಧೀಜಿ ನೇತೃತ್ವದ ‘ಯಂಗ್ ಇಂಡಿಯಾʼ ಪತ್ರಿಕೆಯಲ್ಲಿ ಅಚ್ಚಾದ ಪತ್ರವನ್ನು ಆಧರಿಸಿದ ಬರಹವಿದು. ಅಸ್ಪೃಶ್ಯ ಶಿಕ್ಷಕನ ಹೆಂಡತಿ ಒಂದು ಹೆಣ್ಣುಮಗುವಿಗೆ ಜನ್ಮ ನೀಡುತ್ತಾಳೆ. ಹುಟ್ಟಿದ ಎರಡನೇ ದಿನಕ್ಕೆ ಮಗುವಿಗೆ ಭೇದಿ ಶುರುವಾಗುತ್ತದೆ. ಬಾಣಂತಿಯೂ ಅವ್ಯಕ್ತ ನೋವಿನಿಂದ ನರಳುತ್ತಿರುತ್ತಾಳೆ. ಶಿಕ್ಷಕ ಡಾಕ್ಟರನ್ನು ಕರೆಯಲು ಹೋದಾಗ ‘ಹರಿಜನರ ಮನೆಗೆ ನಾನು ಬರುವುದಿಲ್ಲʼ ಎನ್ನುತ್ತಾನೆ. ಡಾಕ್ಟರಿಗೆ ಎರಡು ರೂಪಾಯಿ ಫೀಸ್ ಕೊಡುತ್ತೇನೆ ಎಂದು ಕೇಳಿಕೊಂಡಾಗ ದಲಿತ ಕೇರಿಯ ಹೊರಗೆ ನಿಂತು ಪರೀಕ್ಷಿಸುತ್ತೇನೆ ಎಂಬ ಷರತ್ತಿನ ಮೇಲೆ ಡಾಕ್ಟರ್ ಬರುತ್ತಾನೆ. ಶಿಕ್ಷಕ ತನ್ನ ಪತ್ನಿ ಮತ್ತು ಮಗುವನ್ನು ಹರಿಜನ ಕಾಲೊನಿಯ ಹೊರಗೆ ಕರೆತರುತ್ತಾನೆ. ಮತ್ತೆ ಡಾಕ್ಟರ್ ಅವರನ್ನು ಪರೀಕ್ಷಿಸಲು ಥರ್ಮಾಮೀಟರ್ ಕೊಡುವುದಿಲ್ಲ ಎಂಬುದಾಗಿ ಹೇಳಿದ. ಬಗೆಬಗೆಯಾಗಿ ಬೇಡಿಕೊಂಡ ನಂತರ ಒಬ್ಬ ಮುಸಲ್ಮಾನ ವ್ಯಕ್ತಿಯ ಕೈಗೆ ಥರ್ಮಾ ಮೀಟರ್ ಕೊಟ್ಟು, ಆತ ಶಿಕ್ಷಕನಿಗೆ ಕೊಟ್ಟು, ಶಿಕ್ಷಕ ತನ್ನ ಹೆಂಡತಿಗೆ ಕೊಟ್ಟು ಪರೀಕ್ಷಿಸಿದ ನಂತರ ಡಾಕ್ಟರನಿಗೆ ಹಿಂದಿರುಗಿಸಲಾಯಿತು. ಡಾಕ್ಟರ್ ಬಾಣಂತಿಗೆ ನ್ಯುಮೋನಿಯಾ ಇರುವುದಾಗಿ ಹೇಳಿ ಶಿಕ್ಷಕ ನೀಡಿದ ಎರಡು ರೂಪಾಯಿ ಶುಲ್ಕ ತೆಗೆದುಕೊಂಡು ಹೊರಟುಹೋದ. ಅಗಸೆ ಬೀಜಗಳನ್ನು ತಂದುಕೊಟ್ಟು ಸೇವಿಸಲು ಹೇಳಿದ ಶಿಕ್ಷಕ ಕೊನೆಗೆ, “ನನ್ನ ಜೀವನದ ಜ್ಯೋತಿ ಆರಿಹೋಯಿತು. ಮಧ್ಯಾಹ್ನ ಎರಡರ ಸಮಯಕ್ಕೆ ಆಕೆ ತೀರಿಕೊಂಡಳು” ಎಂದು ಬರೆದ.

ಈ ಬಗ್ಗೆ ಬಾಬಾಸಾಹೇಬರು ಇದರ ವಿಶ್ಲೇಷಣೆಯ ಅಗತ್ಯವೇ ಇಲ್ಲ ಎನ್ನುತ್ತಾರೆ. ಒಬ್ಬ ಸುಶಿಕ್ಷಿತನಾದ ಡಾಕ್ಟರ್ ರೋಗಿಯ ಜಾತಿ ಕಾರಣಕ್ಕೆ ಥರ್ಮಾಮೀಟರ್ ಕೊಡಲು ಹಾಗೂ ಶುಶ್ರೂಷೆ ಮಾಡಲು ನಿರಾಕರಿಸುವುದು ಅದೆಷ್ಟು ಅಮಾನವೀಯ ಎಂದು ಬರೆಯುತ್ತಾರೆ. ಶಿಕ್ಷಕನ ಮತ್ತು ವೈದ್ಯನ ಹೆಸರುಗಳನ್ನು ನಮೂದಿಸದಂತೆ ಶಿಕ್ಷಕನೇ ಕೋರಿರುತ್ತಾನೆ. ಹೆಸರು ನಮೂದಿಸಿದರೆ ಸವರ್ಣೀಯರು ಸೇಡು ತೀರಿಸಿಕೊಳ್ಳಲು ಬರುತ್ತಾರೆಂಬ ಭಯ ಆತನದು.
ಇದನ್ನೂ ಓದಿರಿ: ಬಟವಾಡೆಯಾಗದ ಭಾಷಣ ‘ಅನಾಇಲೇಷನ್ ಆಫ್ ಕಾಸ್ಟ್’
ಇನ್ನೊಂದು ಕೊನೆಯ ಘಟನೆ: 1938ರಲ್ಲಿ ದಾದರಿನ ಕಾಸರವಾಡಿಯಲ್ಲಿ ನಡೆದ ಸಭೆಯೊಂದರಲ್ಲಿ ಒಬ್ಬ ಭಂಗಿ ಹುಡುಗ ನಿಂತು ಹೇಳಿದ್ದು. ಅವನ ಹೆಸರು ಪಾರಮಾರ ಕಾಳಿದಾಸ ಶಿವರಾಮ. ಅದನ್ನು ಬಾಬಾಸಾಹೇಬರು ಯಥಾವತ್ತಾಗಿ ದಾಖಲಿಸುತ್ತಾರೆ. 1933ರಲ್ಲಿ ವರ್ನ್ಯಾಕ್ಯುಲರ್ ಅಂತಿಮ ಪರೀಕ್ಷೆಯಲ್ಲಿ ಪಾಸಾದ ಇಂಗ್ಲಿಷ್ ಓದಿದ ಹುಡುಗ ಬಾಂಬೆ ಮುನಿಸಿಪಾಲಿಟಿಯ ಶಿಕ್ಷಕ ಹುದ್ದೆಗೆ ಅರ್ಜಿ ಹಾಕಿ ಸಿಗದೆ, ತಲಾಟಿ (ಗ್ರಾಮಲೆಕ್ಕಿಗ) ಹುದ್ದೆಗೆ ಅರ್ಜಿ ಸಲ್ಲಿಸುತ್ತಾನೆ. 1936ರಲ್ಲಿ ಖೇಡ ಜಿಲ್ಲೆಯ ಬೋರ್ಸಾ ತಾಲ್ಲೂಕಿನ ಮಾಮಲೇದಾರರ ಕಚೇರಿಯಲ್ಲಿ ಅವನಿಗೆ ತಲಾಟಿ ಹುದ್ದೆ ಸಿಗುತ್ತದೆ. ಮೂಲತಃ ಗುಜರಾತಿನವನಾದ ಈ ಹುಡುಗನಿಗೆ ಸರ್ಕಾರಿ ಕಚೇರಿಯಲ್ಲಿಯೂ ಅಸ್ಪೃಶ್ಯತೆ ಆಚರಿಸುವ ಬಗ್ಗೆ ತಿಳಿದಿರುತ್ತದೆ. ಅರ್ಜಿಯಲ್ಲಿ ಇವನ ಜಾತಿ ಹೆಸರು ನೋಡಿ ಕೆಲಸಕ್ಕೆ ವರದಿ ಮಾಡಿಕೊಳ್ಳುವ ದಿನವೇ ಗುಮಾಸ್ತ ಇವನನ್ನು ಅವಮಾನಿಸುತ್ತಾನೆ. ‘ದೂರ ನಿಂತುಕೋ, ನನ್ನ ಹತ್ತಿರವೇ ನಿಲ್ಲಲು ನಿನಗೆಷ್ಟು ಧೈರ್ಯʼ ಎಂದೆಲ್ಲ ನೇರವಾಗಿ ಬೈಯುತ್ತಾನೆ. ‘ನೀನೇನಾದರೂ ಕಚೇರಿಯ ಹೊರಗಿದ್ದರೆ ಆರು ಒದೆಗಳನ್ನು ನೀಡುತ್ತಿದ್ದೆ; ಇಲ್ಲಿವರೆಗೆ ಸೇವೆಗೆ ಬರಲು ನಿನಗೆಷ್ಟು ಧೈರ್ಯʼ ಎಂದೆಲ್ಲ ನಿಂದಿಸಿ ನೇಮಕಾತಿ ಆದೇಶಗಳನ್ನು ನೆಲದ ಮೇಲಿಡಲು ಆದೇಶಿಸುತ್ತಾನೆ.
ಅದಾದ ಮೇಲೆ ಆ ಹುಡುಗನಿಗೆ ಅಲ್ಲಿ ಕೆಲಸ ಮಾಡುವಷ್ಟೂ ದಿನವೂ ನರಕದರ್ಶನವೇ ಆಗುತ್ತದೆ. ಕುಡಿಯುವ ನೀರಿಗೂ ಪರಿಪಾಟಲು ಪಡಬೇಕಿತ್ತು. ತುಕ್ಕು ಹಿಡಿದ ಪಾತ್ರೆಯೊಂದಕ್ಕೆ ಸುರಿಯುವ ನೀರನ್ನು ಈತ ಕುಡಿಯಬೇಕಿರುತ್ತದೆ. ಆ ಪಾತ್ರೆಯನ್ನು ಕೂಡ ಅಸ್ಪೃಶ್ಯನಂತೆಯೇ ಕಾಣಲಾಗುತ್ತಿರುತ್ತದೆ. ಸಿಬ್ಬಂದಿಗಳಿಗೆ ನೀರು ಸರಬರಾಜು ಮಾಡುವ ಜವಾನನಿಲ್ಲದಿದ್ದಾಗಲಂತೂ ಎಲ್ಲರ ಹಾಗೆ ಕ್ಯಾನಿನಿಂದ ನೀರು ತೆಗೆದುಕೊಳ್ಳುವ ಹಾಗಿರಲಿಲ್ಲ. ಅವನಿದ್ದಾಗಲೂ ಬಾಯಾರಿಕೆ ಆದಾಗ ನೀರನ್ನರಸಿ ಹೋಗುತ್ತಿದ್ದ ಈತನ ಕೈಗೇ ಸಿಗದೆ ತಪ್ಪಿಸಿಕೊಳ್ಳುತ್ತಿದ್ದ ಜವಾನ. ಊಟಕ್ಕೆ, ವಾಸಕ್ಕೆ ಆ ಹುಡುಗನಿಗೆ ತುಂಬಾ ಕಷ್ಟವಾಗುತ್ತಿತ್ತು. ಬಜ್ಜಿಗಳನ್ನು ಖರೀದಿಸಿ ಊರ ಹೊರಗೆ ತಿಂದು ಬಂದು ಮಾಮಲೇದಾರ ಕಚೇರಿಯ ಕಟ್ಟೆಯ ಮೇಲೆ ಮಲಗಬೇಕಿರುತ್ತದೆ. ಬೋರ್ಸದ್ ಗ್ರಾಮದ ಯಾರೂ ಈತನಿಗೆ ಮನೆ ಬಾಡಿಗೆಗೆ ಕೊಡುವುದಿಲ್ಲ. ಕಡೆಗೆ ಬೋರ್ಸದ್‌ನಿಂದ ಆರು ಮೈಲಿ ದೂರದ ತನ್ನ ಪೂರ್ವಿಕರ ಊರು ಜೆಂಟ್ರಲ್‌ಗೆ ತೆರಳಿ ಅಲ್ಲಿ ರಾತ್ರಿ ಕಳೆದು ಮುಂಜಾನೆ ಉದ್ಯೋಗಕ್ಕೆ ಮರಳುವ ರೂಢಿ ಮಾಡಿಕೊಳ್ಳುತ್ತಾನೆ. ಆದರೆ ಪ್ರತಿದಿನವೂ ಹನ್ನೆರಡು ಮೈಲಿ ನಡೆಯಬೇಕಾಗಿತ್ತು. ಕೆಲಸಕ್ಕೆ ಸೇರಿದ ಒಂದೂವರೆ ತಿಂಗಳ ನಂತರ ಒಬ್ಬ ತಲಾಟಿಯ ಹತ್ತಿರ ಕೆಲಸ ಕಲಿಯಲು ಕಳಿಸಿಕೊಡಲಾಯಿತು. ಅವನು ಮೂರು ಗ್ರಾಮಗಳ ಉಸ್ತುವಾರಿ ನೋಡಿಕೊಳ್ಳುತ್ತಿದ್ದ. ಅವನೊಂದಿಗೆ ಜೆಂಟ್ರಾಲ್ ಎಂಬಲ್ಲಿ ಎರಡು ತಿಂಗಳು ಕೆಲಸ ಮಾಡಿದರೂ ಅವನೇನೂ ಕಲಿಸಿಕೊಡಲಿಲ್ಲ. ಆ ನಂತರ ಅವನು ಈ ಹುಡುಗನನ್ನು ಸೈಜಾಪುರಕ್ಕೆ ಜನಸಂಖ್ಯೆಯ ಟೇಬಲ್ ಸಿದ್ಧಪಡಿಸಲು ಕರೆದುಕೊಂಡು ಹೋದನು. ಒಂದು ದಿನ ತಲಾಟಿ ಮತ್ತು ಗ್ರಾಮದ ಮುಖ್ಯಸ್ಥ ಕೆಲಸದಲ್ಲಿ ತೊಡಗಿದ್ದರು. ಇವನು ಗುಡ್ ಮಾರ್ನಿಂಗ್ ಹೇಳಿದರೂ ಬೇಕೆಂದೇ ಮಾರುತ್ತರ ನೀಡದೆ ನಿಂತಲ್ಲೇ ಕಾಯುವಂತೆ ಮಾಡಿ ಅವಮಾನಿಸಲಾಗುತ್ತದೆ. ಇವನಿಗೆ ಸುಸ್ತಾಗಿ ಅಲ್ಲೇ ಇದ್ದ ಕುರ್ಚಿಯಲ್ಲಿ ಕುಳಿತುಕೊಂಡ. ಇದನ್ನು ಕಂಡು ತಲಾಟಿ ಮತ್ತು ಗ್ರಾಮದ ಮುಖ್ಯಸ್ಥ ಹೊರಗೆ ಹೊರಟುಹೋದರು. ಸ್ವಲ್ಪಹೊತ್ತಿನ ನಂತರ ಹಲವು ಜನ ಇವನ ಸುತ್ತ ಜಮಾಯಿಸಿದರು. ಬಾಯಿಗೆ ಬಂದಹಾಗೆ ಬೈಯತೊಡಗಿದರು. ಅವರ ನೇತೃತ್ವವನ್ನು ವಹಿಸಿಕೊಂಡಿದ್ದವ ಸುಶಿಕ್ಷಿತ ಲೈಬ್ರರಿಯನ್ ಎಂಬುದು ತಿಳಿದು ಇವನಿಗೆ ದುಃಖವಾಯಿತು. ಇವನು ಕುಳಿತಿದ್ದ ಕುರ್ಚಿ ಆ ಲೈಬ್ರರಿಯನ್‌ದಾಗಿತ್ತು. ಅಲ್ಲಿಗೆ ಧಾವಿಸಿದ ಗ್ರಾಮಸೇವಕ, “ಈ ನಾಯಿ ಭಂಗಿಗೆ ಕುಳಿತುಕೊಳ್ಳಲು ಕುರ್ಚಿ ಕೊಟ್ಟವರಾರು” ಎಂದು ಅಬ್ಬರಿಸಿದ. ಕುರ್ಚಿಯನ್ನು ಕಿತ್ತುಕೊಂಡ ನಂತರ ಹುಡುಗ ನೆಲದ ಮೇಲೆ ಕುಳಿತುಕೊಳ್ಳುತ್ತಾನೆ. ಖಡ್ಗದಿಂದ ಹುಡುಗನನ್ನು ತುಂಡು ತುಂಡಾಗಿ ಕತ್ತರಿಸುವುದಾಗಿ ನೆರೆದ ಗುಂಪು ಅಬ್ಬರಿಸುತ್ತದೆ. ತನ್ನನ್ನು ಕನಿಕರಿಸಿ ಕ್ಷಮಿಸಬೇಕೆಂದು ಹುಡುಗ ಪರಿಪರಿಯಾಗಿ ಬೇಡಿಕೊಳ್ಳುತ್ತಾನೆ. ಪರಿಸ್ಥಿತಿ ಕೈಮೀರುವುದನ್ನು ಅರಿತ ಹುಡುಗ ಅಲ್ಲೊಂದು ಬಿಳಿ ಕಾಗದ ತೆಗೆದುಕೊಂಡು ಮಾಮಲೇದಾರನಿಗೆ ದೊಡ್ಡ ಅಕ್ಷರಗಳಲ್ಲಿ ಪತ್ರ ಬರೆದ. “ಇಂದು ನನ್ನ ಮೇಲೆ ಮೃತ್ಯು ತನ್ನ ಕರಾಳ ಹಸ್ತ ಚಾಚಿದೆ ಎಂಬ ವಿಷಯವನ್ನು ತಮಗೆ ವಿನಯಪೂರ್ವಕವಾಗಿ ತಿಳಿಸಲು ಬಯಸುತ್ತೇನೆ. ನನ್ನ ತಂದೆ ತಾಯಿಯರ ಮಾತು ಕೇಳಿದ್ದರೆ ನನಗೆ ಈ ಆಪತ್ತು ಬರುತ್ತಿರಲಿಲ್ಲ. ಅವರಿಗೆ ನನ್ನ ಮರಣದ ಸುದ್ದಿಯನ್ನು ತಿಳಿಸಿ” ಎಂದು ಬರೆದದ್ದನ್ನು ಲೈಬ್ರರಿಯನ್ ಜೋರಾಗಿ ಓದಿದ. ನಂತರ ಅದನ್ನು ಹರಿದುಹಾಕುವಂತೆ ಹೇಳಿದ. ಇವನು ಹರಿದು ಹಾಕಿದ.
ಆನಂತರ ಗುಂಪಿನಿಂದ ಬೈಗುಳಗಳ ಸುರಿಮಳೆಯಾಗುತ್ತದೆ. ನೀನೊಬ್ಬ ಯಕಃಶ್ಚಿತ್ ಭಂಗಿ. ನಿನ್ನನ್ನು ನಾವು ತಲಾಟಿ ಎಂದು ಗೌರವ ನೀಡಿ ಕರೆಯಬೇಕೇ? ನೀನು ಕಚೇರಿ ಪ್ರವೇಶಿಸಿ ಕುರ್ಚಿಯ ಮೇಲೆ ಬೇರೆ ಕುಳಿತುಕೊಳ್ಳುತ್ತೀಯಾ? ಎಂದು ಕಿರಿಚುತ್ತದೆ. ನಾನು ಕೆಲಸ ಬಿಟ್ಟುಬಿಡುತ್ತೇನೆಂದೂ ನನ್ನನ್ನು ಕ್ಷಮಿಸಬೇಕೆಂದೂ ಕೇಳಿಕೊಂಡರೂ ಕೂಡಿಹಾಕಿದರು. ಸಂಜೆ ಏಳು ಗಂಟೆಗೆ ಬಿಡುಗಡೆಗೊಳಿಸಿದರು. ತಲಾಟಿ ಮತ್ತು ಗ್ರಾಮದ ಮುಖ್ಯಸ್ಥ ಅಲ್ಲಿಯವರೆಗೂ ಬಂದಿರಲಿಲ್ಲ. ಹುಡುಗ ಹದಿನೈದು ದಿನ ರಜೆ ಪಡೆದು ಬಾಂಬೆಯಲ್ಲಿದ್ದ ತಂದೆ ತಾಯಿಯ ಬಳಿ ಬಂದ.

ಈ ಘಟನೆಯನ್ನು ನಿರೂಪಿಸಿದ ನಂತರ ಬಾಬಾಸಾಹೇಬರು ಏನೂ ಹೇಳುವುದಿಲ್ಲ. ಆ ಮೌನವನ್ನು ಭಾರತದ ಮುಂದಿನ ಪೀಳಿಗೆಗೆ ವರ್ಗಾಯಿಸುತ್ತಾರೆ. ಇದೊಂದು ದೇವನೂರ ಮಹಾದೇವರ ‘ಮೂಡಲ ಸೀಮೆಲಿ ಕೊಲೆ ಗಿಲೆ ಮುಂತಾಗಿʼ ಕತೆಯಂಥ ಬರಹ. ಅಂದರೆ, ಅಸ್ಪೃಶ್ಯರ ಬದುಕಿನ ನೈಜ ರೂಪಕ. ದಿನಕ್ಕೆ ಸಾವಿರಾರು ವೀಸಾಗಳು ದೊರೆಯುತ್ತಿರುವ ಈ ಸಂದರ್ಭದಲ್ಲಿ ಸಾವಿರಾರು ವರ್ಷಗಳಿಂದ ದಲಿತ ಸಮುದಾಯ ತಾನು ಬದುಕುತ್ತಿರುವ ಸಮಾಜದೊಳಕ್ಕೆ ಹೋಗಲು ವೀಸಾಗಾಗಿ ಕಾಯುತ್ತಿದೆ. ಪ್ರತಿ ಕ್ಷಣ ಪ್ರತಿ ಭಾರತೀಯ ದಲಿತರಿಗೆ ಈ ಕಾಯುವಿಕೆ ರೂಢಿಯಾಗಿಬಿಟ್ಟಿದೆ. ಬಹುಶಃ ಈ ವೀಸಾ ಸಿಗಲಾರದು ಎಂಬಂಥ ಪರಿಸ್ಥಿತಿಯಿದೆ.
ಇದನ್ನೂ ಓದಿರಿ: ಬಾಬಾಸಾಹೇಬರ ಕಣ್ಣಲ್ಲಿ ಭಗವದ್ಗೀತೆ; ಸತ್ಯ ಮರೆಯಲಾದೀತೆ?
ವ್ಯಕ್ತಿಯು ದೇಶವೊಂದರಿಂದ ಅಧಿಕೃತ ನಾಗರಿಕ ಎಂಬ ಮಾನ್ಯತೆ ಪಡೆದ ನಂತರವೇ ಸರ್ಕಾರ ಆತನಿಗೆ ‘ವೀಸಾ’ ನೀಡುತ್ತದೆ. ಸಂಬಂಧಿಸಿದ ವ್ಯಕ್ತಿಯ ಸುರಕ್ಷತೆಯ ಸಂಪೂರ್ಣ ಹೊಣೆಯನ್ನು ವೀಸಾ ನೀಡಿದ ದೇಶ ವಹಿಸಿಕೊಳ್ಳುತ್ತದೆಂಬುದು ವೀಸಾ ನೀಡುವ ನಿಜ ಅರ್ಥ. ಅಸ್ಪೃಶ್ಯ ದಲಿತ ಸಮುದಾಯವು ಭಾರತೀಯ ಸರ್ಕಾರ ಮತ್ತು ಸಮಾಜದಿಂದ ಇಂತಹ ವೀಸಾಗಾಗಿ ಹೇಗೆ ಕಾತರಿಸಿ ಕಾಯುತ್ತಿದೆ ಎಂಬುದೇ “Waiting for a Visa” ಶೀರ್ಷಿಕೆಯ ರೂಪಕಾರ್ಥವಾಗಿದೆ. ಭಾರತದಲ್ಲಿ ಜಾತಿಪದ್ಧತಿಯ ಜೊತೆ ಜೊತೆಗೆ ಅಸ್ಪೃಶ್ಯತೆಯ ಅಮಾನವೀಯ ಆಚರಣೆಯೂ ಇದೆಯೆಂಬ ಸಂಗತಿಯನ್ನು ಹೊರಜಗತ್ತು ಅರಿಯದು. ಇದನ್ನು ಅಂತಾರಾಷ್ಟ್ರೀಯ ಓದುಗರು ಅಥವಾ ನೋಡುಗರಿಗೆ ಅರ್ಥ ಮಾಡಿಸುವ ಬಗೆ ಎಂತು? ತಮ್ಮ ಬದುಕಿನ ಕೆಲ ಉದಾಹರಣೆಗಳೂ ಸೇರಿದಂತೆ ಅಸ್ಪೃಶ್ಯತೆ ಆಚರಣೆಯ ಘಟನೆಗಳನ್ನು ವಿವರಿಸುವುದೊಂದೇ ದಾರಿ ಎನ್ನುತ್ತಾರೆ ಅಂಬೇಡ್ಕರ್.
ಈ ಒಟ್ಟು ಬರಹದಲ್ಲಿ ಬಾಬಾಸಾಹೇಬರು ಇಡೀ ಭಾರತದ ಅಸ್ಪೃಶ್ಯರ ಆತ್ಮಚರಿತ್ರೆಯನ್ನು ಬರೆದಿದ್ದಾರೆ. ನಾವು ಇಲ್ಲಿ ಎಲ್ಲರಂತೆ ಬದುಕು ನಡೆಸಲು ಬೇಕಾಗಿರುವ ವೀಸಾಗಾಗಿ ಕಾಯುತ್ತಲೇ ಇರಬೇಕು. ಸಂವಿಧಾನ ಎಂಬ ವೀಸಾವನ್ನು ನಮಗೆ ಕೊಟ್ಟುಹೋದ ಬಾಬಾಸಾಹೇಬರು ಈಗ ಬದುಕಿದ್ದರೆ.. ಇನ್ನೂ ಕೈಗೆಟುಕದೆ ಕಾಯುತ್ತಲೇ ಇರುವ ದಲಿತರನ್ನು ಕಂಡು ಅದೆಷ್ಟು ಮರುಗುತ್ತಿದ್ದರೋ.

ಹುಲಿಕುಂಟೆ ಮೂರ್ತಿ
ದೊಡ್ಡಬಳ್ಳಾಪುರ ತಾಲೂಕಿನ ಹುಲಿಕುಂಟೆಯವರು. ಕನ್ನಡ ಮೇಷ್ಟ್ರು. ಸಮಕಾಲೀನ ಚಳವಳಿಗಳ ಸಂದರ್ಭದಲ್ಲಿ ತಪ್ಪದೆ ಕಾಣಿಸಿಕೊಳ್ಳುವ ಹೆಸರು. ಸಾಮಾಜಿಕ ಅನ್ಯಾಯಗಳನ್ನು ಕಂಡರೆ ಸಿಡಿದೇಳುವ ಸ್ವಭಾವದ ಮೂರ್ತಿ ಅವರಿಗೆ, ಕವಿತೆಗಳು ಅಚ್ಚುಮೆಚ್ಚು.



