ಇಂದಿನ ಜಾಗತಿಕ ಪರಿಸ್ಥಿತಿಯಲ್ಲಿ ಆರ್ಥಿಕತೆ, ರಾಜಕೀಯ ಮತ್ತು ಅಂತರರಾಷ್ಟ್ರೀಯ ಸಂಬಂಧಗಳು ವೇಗವಾಗಿ ಬದಲಾಗುತ್ತಿವೆ. ಅಮೆರಿಕ ತನ್ನ ಆರ್ಥಿಕ ಮತ್ತು ರಾಜಕೀಯ ಹಿತಾಸಕ್ತಿಗಾಗಿ ಸುಂಕಗಳು, ಒತ್ತಡ ಹಾಗೂ ಸೈನಿಕ ಹಸ್ತಕ್ಷೇಪಗಳನ್ನು ಬಳಸಿಕೊಂಡು ಹೊಸ ರೀತಿಯ ಸಾಮ್ರಾಜ್ಯಶಾಹಿಯನ್ನು ಮುಂದುವರಿಸುತ್ತಿದೆ. ಇದರ ಪರಿಣಾಮವಾಗಿ ಭಾರತದಂತಹ ದೇಶಗಳು ಸ್ವಾಯತ್ತತೆ, ವ್ಯಾಪಾರ ಸಮತೋಲನ ಮತ್ತು ಆಹಾರ ಭದ್ರತೆ ವಿಷಯಗಳಲ್ಲಿ ಸವಾಲುಗಳನ್ನು ಎದುರಿಸುತ್ತಿವೆ. ಅಮೆರಿಕದೊಂದಿಗೆ ಮಾಡಿಕೊಂಡಿರುವ ವ್ಯಾಪಾರ ಒಪ್ಪಂದಗಳು ಭಾರತಕ್ಕೆ ಅನಾನುಕೂಲಕರವಾಗುವ ಸಾಧ್ಯತೆಯಿದ್ದು, ಕೃಷಿ, ಕೈಗಾರಿಕೆ ಮತ್ತು ಇಂಧನ ಕ್ಷೇತ್ರಗಳ ಮೇಲೆ ಪರಿಣಾಮ ಬೀರುತ್ತವೆ. ಜೊತೆಗೆ ಜಾಗತಿಕ ಸಂಘರ್ಷಗಳು, ವಿಶೇಷವಾಗಿ ಮಧ್ಯಪ್ರಾಚ್ಯದ ಅಶಾಂತಿ, ತೈಲ, ರಸಗೊಬ್ಬರ ಮತ್ತು ಆಹಾರ ಸರಬರಾಜಿನ ಮೇಲೆ ಹೊಡೆತ ನೀಡುತ್ತಿವೆ. ಈ ಹಿನ್ನೆಲೆಯಲ್ಲಿ ಭಾರತ ತನ್ನ ರಾಷ್ಟ್ರೀಯ ಹಿತಾಸಕ್ತಿಯನ್ನು ಕಾಪಾಡಿಕೊಳ್ಳಲು ಸ್ವತಂತ್ರ ಮತ್ತು ದೃಢವಾದ ನಿಲುವು ತೆಗೆದುಕೊಳ್ಳುವುದು ಅತ್ಯಂತ ಅಗತ್ಯವಾಗಿದೆ.
ಇಂದು ಜಗತ್ತಿನಲ್ಲಿ ಎಲ್ಲವೂ ಅನಿಶ್ಚಿತ, ಆರ್ಥಿಕತೆ, ರಾಜಕೀಯ, ಎಲ್ಲವೂ ಕ್ಷಣಕ್ಷಣಕ್ಕೆ ಬದಲಾಗುತ್ತಿವೆ. ದೇಶಗಳ ನಡುವಿನ ಸಂಬಂಧಗಳು ಬದಲಾಗುತ್ತಿವೆ. ಇಂದು ಮಿತ್ರರಾಗಿದ್ದ ದೇಶಗಳು, ನಾಳೆ ಶತ್ರುಗಳು. ಭಾರತವನ್ನು ಅಮೆರಿಕೆ ಈವರೆಗೆ ಚೀನಾದ ವಿರುದ್ಧದ ಒಂದು ಶಕ್ತಿಯಾಗಿ ಭಾವಿಸಿತ್ತು. ಈಗ ಅದು ಅಮೇರಿಕೆಯ ಸರಕು ಮತ್ತು ಸೇವೆಗಳಿಗೆ ಒಂದು ದೊಡ್ಡ ಮಾರುಕಟ್ಟೆ, ಅಮೆರಿಕ ಹೆಚ್ಚೆಚ್ಚು ಸಾಮ್ರಾಜ್ಯಶಾಹಿ ರೂಪ ಪಡೆದುಕೊಳ್ಳುತ್ತಿದೆ. ತನ್ನ ಸ್ವಂತ ಹಿತಾಸಕ್ತಿಗಾಗಿ ಸುಂಕ, ಸೈನ್ಯ, ಯಾವುದು ಬೇಕಾದರೂ ಅದಕ್ಕೆ ಅಸ್ತ್ರವಾಗಬಹುದು. ಇದರ ಬಗ್ಗೆ ಅದಕ್ಕೆ ಅದಕ್ಕೆ ಯಾವುದೇ ಮುಚ್ಚುಮರೆ ಇಲ್ಲ. ಇತ್ತೀಚೆಗೆ ಮ್ಯೂನಿಚ್ ಭದ್ರತಾ ಸಮ್ಮೇಳನದಲ್ಲಿ ಆಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೋ ಇದನ್ನು ಸ್ಪಷ್ಟವಾಗಿ ಹೇಳಿದ್ದಾನೆ.
“ಮಹಾನ್ ಪಾಶ್ಚಾತ್ಯ ಸಾಮ್ರಾಜ್ಯಗಳು ಅವನತಿ ಹೊಂದುತ್ತಿವೆ. ನಿರೀಶ್ವರವಾದಿ ಕಮ್ಯುನಿಸ್ಟ್ ಕ್ರಾಂತಿಗಳು ಮತ್ತು ವಸಾಹತುಶಾಹಿ ವಿರೋಧಿ ದಂಗೆಗಳು ಜಗತ್ತನ್ನು ಬದಲಿಸಿವೆ”. ಈಗ ನಾವು ಮತ್ತೆ ಪಾಶ್ಚಾತ್ಯ ಜಗತ್ತನ್ನು ದೊಡ್ಡ ಶಕ್ತಿಯನ್ನಾಗಿ ಮಾಡಬೇಕು. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ‘ಅಮೆರಿಕವನ್ನು ಮತ್ತೆ ಮಹಾನ್ ದೇಶವನ್ನಾಗಿ’ ಮಾಡಹೊರಟಿರುವುದರ ಹಿಂದಿನ ಉದ್ದೇಶವೇ “ಪಾಶ್ಚಾತ್ಯ ಜಗತ್ತನ್ನು ಮತ್ತೆ ಮಹಾನ್ ಆಗಿಸುವುದು”. ರೂಬಿಯೋ ಅವರ ‘ಮ್ಯೂನಿಚ್ ಪ್ರಣಾಳಿಕೆ’, ‘ಕ್ರೈಸ್ತ ಪಾಶ್ಚಾತ್ಯ’ ದೇಶಗಳ ನಾಗರಿಕತೆಯ ಏಕತೆಯ ಘೋಷಣೆಯೂ ಹೌದು. ‘ನಿರೀಶ್ವರವಾದಿ ಕಮ್ಯುನಿಸ್ಟರು’ ಹಾಗೂ ‘ಜಾಗತಿಕ ದಕ್ಷಿಣದ’ ‘ವಸಾಹತುಶಾಹಿ ವಿರೋಧಿಗಳ ವಿರುದ್ಧದ ಸಮರ ಘೋಷಣೆಯೂ ಹೌದು. ಇಂದು ಅಮೆರಿಕ ಎರಡನೆಯ ಮಹಾಯುದ್ಧದ ನಂತರ ಗಳಿಸಿದ ಅಧಿಪತ್ಯವನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದೆ. ಕ್ಯೂಬಾ, ವೆನೆಜುವೆಲಾ, ಇರಾನ್ ಮೇಲಿನ ದಾಳಿಗಳನ್ನು ಇಂತಹ ಪ್ರಯತ್ನಗಳಾಗಿ ನೋಡಬಹುದು. ತನ್ನ ಸಾಮ್ರಾಜ್ಯಶಾಹಿ ಆಡಳಿತಕ್ಕೆ ಪೂರಕವಲ್ಲದ ಆಡಳಿತವನ್ನು ಬದಲಿಸುವ ಅಧಿಕಾರವನ್ನು ತನ್ನ ಕೈಗೆತ್ತಿಕೊಂಡಿದೆ. ಅಂತರರಾಷ್ಟ್ರೀಯ ಕಾನೂನಿನ ನಿಯಮಗಳನ್ನೆಲ್ಲಾ ಉಲ್ಲಂಘಿಸಿ, ನೇರ ಮಿಲಿಟರಿ ಹಸ್ತಕ್ಷೇಪ ನಡೆಸುತ್ತಿದೆ. ದಶಕಗಳ ಕಾಲ ವಸಾಹತುಶಾಹಿ ವಿರೋಧಿ ಚಳುವಳಿಗಳಿಂದ ಸಂಪಾದಿಸಿದ್ದ ಸ್ವಾತಂತ್ರ್ಯವನ್ನು ತೃತೀಯ ಜಗತ್ತಿನ ರಾಷ್ಟ್ರಗಳಿಂದ ಕಸಿದುಕೊಳ್ಳುವ ಪ್ರಯತ್ನಗಳು ತೀವ್ರವಾಗಿ ನಡೆಯುತ್ತಿವೆ. ರಷ್ಯಾದಿಂದ ಪೆಟ್ರೋಲ್ ಕೊಳ್ಳಲು ಅಮೆರಿಕದ ‘ಅನುಮತಿ’ ಪಡೆದುಕೊಳ್ಳಬೇಕಾದ ಸ್ಥಿತಿ ನಮ್ಮಂಥ ದೇಶಗಳಿಗೆ ನಿರ್ಮಾಣವಾಗಿದೆ.

ಹಿಂದೆ ತನಗೆ ಪಾವತಿ ಕೊರತೆ ಎದುರಾಗಿದ್ದಾಗ ಬ್ರಿಟನ್ ವಸಾಹತುಗಳಿಂದ ಲೂಟಿ ಮಾಡಿ ಕೊರತೆಯನ್ನು ನೀಗಿಸಿಕೊಂಡಿತ್ತು. ಈಗ ಅಮೆರಿಕದ ಆರ್ಥಿಕತೆ ತೀವ್ರ ಬಿಕ್ಕಟ್ಟಿನಲ್ಲಿದೆ. ವಿಶ್ವದ ಅತಿ ದೊಡ್ಡ ಸಾಲಗಾರ ದೇಶವಾಗಿದೆ. ಈವರೆಗೆ ಡಾಲರನ್ನು ಮುದ್ರಿಸಿ ಬಿಕ್ಕಟ್ಟನ್ನು ನಿರ್ವಹಿಸಿಕೊಳ್ಳುತ್ತಿದ್ದ ಅಮೆರಿಕ ಬೇರೆ ದಾರಿ ಕಂಡುಕೊಳ್ಳಬೇಕಾಗಿದೆ. ವಸಾಹತುಗಳಿಲ್ಲದೆ ಸಾಮ್ರಾಜ್ಯಶಾಹಿಗೆ ಆಸ್ತಿತ್ವವಿಲ್ಲ. ಜಗತ್ತಿನ ಎಲ್ಲಾ ಕಡೆ ತನ್ನ ಮಾತು ಕೇಳುವ ತನ್ನ ‘ಆರ್ಥಿಕ, ರಾಜಕೀಯ ಹಾಗೂ ಮಿಲಿಟರಿ ಹಿತಾಸಕ್ತಿಗೆ ಹೊಂದಿಕೊಳ್ಳುವ’ ಸರ್ಕಾರಗಳನ್ನು ನೇಮಿಸಬೇಕಾಗಿದೆ. ನಿರಂತರ ಮಾರುಕಟ್ಟೆಗೆ, ಕಚ್ಚಾ ಪದಾರ್ಥಗಳಿಗೆ ಅದಕ್ಕೆ ವಸಾಹತುಗಳು ಬೇಕು. ವೆನೆಜುವೆಲಾ, ಇರಾನಿನಂತಹ ತೈಲಸಂಪದ್ಭರಿತ ದೇಶಗಳ ಮೇಲಿನ ದಾಳಿಯ ಹಿಂದಿನ ಉದ್ದೇಶವೂ ಇದೇ. “ವೆನೆಜುವೆಲಾದಲ್ಲಿ ನಾನು ಆಡಳಿತ ನಡೆಸುತ್ತೇನೆ. ಅಲ್ಲಿಯ ತೈಲವನ್ನು ವಶಕ್ಕೆ ತೆಗೆದುಕೊಳ್ಳುತ್ತೇನೆ” ಎಂದು ಟ್ರಂಪ್ ನೇರವಾಗಿ ಹೇಳಿದ್ದಾನೆ. ಇನ್ನು ಮುಂದೆ ಅಮೆರಿಕದ ಕಂಪೆನಿಗಳು ಅವುಗಳ ಮಾಲೀಕರಾಗುತ್ತವೆ.

ಟ್ರಂಪ್ ತನ್ನ ಅಧ್ಯಕ್ಷತೆಯ ಮೊದಲ ಅವಧಿಯಲ್ಲೇ ಸುಂಕ ವಿಧಿಸಲು ಪ್ರಾರಂಭಿಸಿದ್ದ. “ಸುಂಕ ಅನ್ನುವುದು ಶಬ್ದಕೋಶದಲ್ಲಿ ಅತ್ಯಂತ ಸುಂದರವಾದ ಪದ” ಎಂದು ಬಿಂಕದಿಂದ ಹೇಳಿಕೊಳ್ಳುತ್ತಿದ್ದ. ತನ್ನ ಎರಡನೆ ಅವಧಿಯಲ್ಲಿ ಅದನ್ನು ಹೆಚ್ಚು ತೀವ್ರಗೊಳಿಸಿದ. ಮೊದಲು ಮೆಕ್ಸಿಕೋ, ಕೆನಡಾ ಮತ್ತು ಚೀನಾದ ಮೇಲೆ ಶೇಕಡಾ 10 ರಿಂದ 25 ರಷ್ಟು ಸುಂಕ ಹಾಕಿದ. ಆ ದೇಶಗಳಿಂದ ಮಾದಕ ವಸ್ತುವಾದ ಫೆಂಟಾನಿಲ್ ಅಮೆರಿಕಕ್ಕೆ ಸರಬರಾಜಾಗುತ್ತಿದೆ. ಅದನ್ನು ತಡೆಯುವುದಕ್ಕಾಗಿ ಸುಂಕ ಹಾಕುತ್ತಿರುವುದಾಗಿ ಘೋಷಿಸಿದ. ಎಲ್ಲಾ ದೇಶಗಳು ಅಮೆರಿಕದ ಮೇಲೆ ಸುಂಕ ಹಾಕಿ ತಮ್ಮನ್ನು ದೋಚುತ್ತಿವೆ. ಅದರಿಂದ ತಮ್ಮ ಕೈಗಾರಿಕೆಗಳು ನಾಶವಾಗಿವೆ. ತಾನು ಅಧ್ಯಕ್ಷನಾಗಿರುವುದು ಅಮೆರಿಕದ ಪುಣ್ಯ. ಆಮೆರಿಕವನ್ನು ದೋಚುವುದರಲ್ಲಿ ಎಲ್ಲಾ ದೇಶಗಳು ಭಾಗಿಯಾಗಿವೆ. ಹಾಗಾಗಿ ಎಲ್ಲಾ ದೇಶಗಳ ಮೇಲೆ ಪ್ರತಿಸುಂಕ ಹಾಕುತ್ತೇನೆ. ಮತ್ತೆ ಆಮೆರಿಕದಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸುತ್ತೇನೆ ಎಂದು ಘೋಷಿಸಿದ. ಎಲ್ಲಾ ದೇಶಗಳ ಮೇಲೆ 10% ಸುಂಕ ಹಾಕಿ ಏಪ್ರಿಲ್ 2ನ್ನು ಅಮೆರಿಕದ ವಿಮೋಚನೆಯ ದಿನವನ್ನಾಗಿ ಘೋಷಿಸಿದ. ಅಷ್ಟೇ ಅಲ್ಲ ಚೀನಾ, ಬ್ರಿಟನ್, ಇಂಡಿಯಾ ಮುಂತಾದ ದೇಶಗಳು ಹೆಚ್ಚು ಅನ್ಯಾಯ ಮಾಡಿವೆ ಅನ್ನುವ ಕಾರಣಕ್ಕೆ ಅವುಗಳ ಮೇಲೆ ವಿಶೇಷ ಸುಂಕಗಳನ್ನು ಹಾಕಿದ. ಭಾರತದ ಮೇಲೆ 26%, ಚೀನಾದ ಮೇಲೆ 34% ಹೀಗೆ ಸುಂಕದ ಪಟ್ಟಿ ಬೆಳೆಯುತ್ತಾ ಹೋಯಿತು. ಅಲ್ಲಿಗೆ ನಿಲ್ಲಲಿಲ್ಲ ಟ್ರಂಪ್ ಸುಂಕದ ದಾಳಿ, ಪ್ರತಿವಾರ ಒಂದಿಲ್ಲೊಂದು ಹೊಸ ಸುಂಕಗಳನ್ನು ತನಗೆ ತೋಚಿದ ಕಾರಣಕ್ಕೆ ವಿಧಿಸುತ್ತಾ ಹೋದ. ಅಮೆರಿಕ ಗಡೀಪಾರು ಮಾಡಿದ ವಲಸಿಗರನ್ನು ವಾಪಸ್ ಪಡೆಯಲು ನಿರಾಕರಿಸಿದ್ದಕ್ಕೆ ಕೊಲಂಬಿಯಾ ಮೇಲೆ, ತಮ್ಮ ಸ್ನೇಹಿತ ಮಾಜಿ ಅಧ್ಯಕ್ಷ ಜೈರ್ ಬೋಲ್ಪನಾರೊ ಅವರನ್ನು ವಿಚಾರಣೆಗೆ ಒಳಪಡಿಸಿದ್ದಕ್ಕಾಗಿ ಬ್ರೆಜಿಲ್ ಮೇಲೆ, ರಷ್ಯಾದಿಂದ ತೈಲವನ್ನು ಖರೀದಿಸುತ್ತಿದೆ ಅನ್ನುವ ಕಾರಣಕ್ಕೆ ಭಾರತದ ಮೇಲೆ, ಡಾಲರನ್ನು ಮೀಸಲು ಕರೆನ್ಸಿಯಾಗಿ ಬಳಸುತ್ತಿಲ್ಲ ಅನ್ನುವ ಕಾರಣಕ್ಕೆ ಇನ್ನೊಂದು ದೇಶದ ಮೇಲೆ ಹೀಗೆ ಸುಂಕ ಹಾಕುತ್ತಾ ಹೋದ. ಇದಕ್ಕೆ ಯಾವ ತರ್ಕವೂ ಇರಲಿಲ್ಲ.
ಈ ದೇಶಗಳು ಅಮೆರಿಕದೊಂದಿಗೆ ಮಾತುಕತೆ ನಡೆಸಿ ಒಪ್ಪಂದ ಮಾಡಿಕೊಳ್ಳಬೇಕು. ಆಮೆರಿಕದ ಮೇಲೆ ಹಾಕಿರುವ ಸುಂಕವನ್ನು ತೆಗೆಯಬೇಕು. ಅಮೆರಿಕದ ಸರಕುಗಳಿಗೆ ತಮ್ಮ ಮಾರುಕಟ್ಟೆಯನ್ನು ತೆರೆಯಬೇಕು. ಅಮೆರಿಕದಲ್ಲಿ ಹೂಡಿಕೆಯನ್ನು ಮಾಡಬೇಕು. ಮತ್ತೆ ಅಲ್ಲಿ ಉತ್ಪಾದನೆಯಾಗುವಂತೆ ನೋಡಿಕೊಳ್ಳಬೇಕು. ಇವು ಟ್ರಂಪ್ ಉದ್ದೇಶವಾಗಿತ್ತು. ಹಲವು ದೇಶಗಳು ಅಮೆರಿಕದ ಇಂಗಿತಕ್ಕೆ ಅನುಗುಣವಾಗಿ ಒಪ್ಪಂದಗಳನ್ನು ಮಾಡಿಕೊಂಡವು. ಅದಕ್ಕೆ ಪ್ರತಿಯಾಗಿ ಅಮೆರಿಕ ತನ್ನ ಸುಂಕದಲ್ಲೂ ಒಂದಿಷ್ಟು ಕಡಿತ ಮಾಡಿತು. ಯುರೋಪಿಯನ್ ಯೂನಿಯನ್, ಜಪಾನ್ ಮತ್ತು ದಕ್ಷಿಣ ಕೊರಿಯ ಇವುಗಳಿಗೆ ಶೇಕಡಾ 15%, ವಿಯೆಟ್ನಾಂ ಮತ್ತು ತೈವಾನ್ಗೆ 20%, ಇಂಡೋನೇಷ್ಯಾ, ಥೈಲ್ಯಾಂಡ್ ಮತ್ತು ಫಿಲಿಪೈನ್ಸ್ಗೆ 19% ಹೀಗೆ ಸುಂಕದ ದರಗಳನ್ನು ನಿಗದಿಪಡಿಸಲಾಗಿತ್ತು.
ಭಾರತವೂ ಒಪ್ಪಂದ ಮಾಡಿಕೊಂಡಿತು
ಭಾರತ ಕೂಡ ಕಳೆದ ತಿಂಗಳು, ಅಮೆರಿಕದೊಂದಿಗೆ ಒಂದು ಜಂಟಿ ಹೇಳಿಕೆಗೆ ಸಹಿ ಹಾಕಿತ್ತು. ಒಪ್ಪಂದ ಇನ್ನೂ ಅಂತಿಮವಾಗಿರಲಿಲ್ಲ. ಆದರೆ ಟ್ರಂಪ್ ಸಾಮಾಜಿಕ ಮಾಧ್ಯಮದಲ್ಲಿ “ನರೇಂದ್ರ ಮೋದಿಯವರು ರಷ್ಯಾದಿಂದ ತೈಲ ಖರೀದಿಯನ್ನು ನಿಲ್ಲಿಸಿ. ಅಮೆರಿಕದಿಂದ ಹೆಚ್ಚಿನ ತೈಲವನ್ನು ಖರೀದಿಸಲು ಒಪ್ಪಿಕೊಂಡಿದ್ದಾರೆ: ಆಮೆರಿಕದ ಸರಕು ಸೇವೆಗಳ ಮೇಲಿನ ಸುಂಕವನ್ನು ಭಾರತ ರದ್ದುಗೊಳಿಸುತ್ತದೆ, ಅದಕ್ಕೆ ಪ್ರತಿಯಾಗಿ ಅಮೆರಿಕ ಭಾರತೀಯ ಸರಕುಗಳ ಮೇಲೆ ಸುಂಕವನ್ನು 18%ಗೆ ಇಳಿಸುತ್ತದೆ ಮತ್ತು ಅಮೆರಿಕದಿಂದ 500 ಬಿಲಿಯನ್ ಡಾಲರ್ ಮೌಲ್ಯದ ಅಮೆರಿಕನ್ ಉತ್ಪನ್ನಗಳನ್ನು ಖರೀದಿಸಲು ಮೋದಿ ಒಪ್ಪಿಕೊಂಡಿದ್ದಾರೆ” ಎಂದು ಪ್ರಕಟಿಸಿದ್ದ. ಜೊತೆಗೆ ರಷ್ಯಾದಿಂದ ತೈಲವನ್ನು ಖರೀದಿಸಿದ್ದಕ್ಕೆ ವಿಧಿಸಿದ್ದ 25% ದಂಡದ ಸುಂಕಗಳನ್ನು ಅಮೆರಿಕ ಹಿಂತೆಗೆದುಕೊಳ್ಳುವುದಕ್ಕೆ ಒಪ್ಪಿತ್ತು. ಆದರೆ ಭಾರತ ಮುಂದೆ ರಷ್ಯಾದಿಂದ ನೇರವಾಗಿ ಅಥವಾ ಪರೋಕ್ಷವಾಗಿ ತೈಲ ಖರೀದಿಸಿದರೆ ಮತ್ತೆ 25% ಸುಂಕವನ್ನು ವಿಧಿಸಲಾಗುತ್ತದೆ. ಭಾರತದೆ ತೈಲ ಬಳಕೆಯ ಮೇಲೆ ನಿಗಾ ಇಡುವುದಕ್ಕೆ ಅಮೆರಿಕದ ಒಂದು ಉನ್ನತ ಅಧಿಕಾರಿಗಳ ಸಮಿತಿಯನ್ನು ರಚಿಸುವುದಾಗಿ ತಿಳಿಸಲಾಯಿತು.
ನಮ್ಮ ವಿದೇಶಾಂಗ ಸಚಿವರು ಅಮೆರಿಕದ ಒತ್ತಡವನ್ನು ಅನ್ಯಾಯ, ಅತಾರ್ಕಿಕ, ಅಸಮಂಜಸ ಎಂದು ಈ ಮೊದಲು ಖಂಡಿಸಿದ್ದರು. ಭಾರತ ತನ್ನ ಸ್ವಾಭಿಮಾನ, ಸ್ವಾಯತ್ತತೆ ಹಾಗೂ ಜನತೆಯ ಹಿತಾಸಕ್ತಿಯನ್ನು ಕಾಪಾಡಿಕೊಳ್ಳುತ್ತದೆ ಎಂದು ಅವರು ಸ್ಪಷ್ಟವಾಗಿ ಹೇಳಿದ್ದರು. ಈಗ ಭಾರತ ಈ ನಿಲುವಿನಿಂದ ಹಿಂದೆ ಸರಿದಂತೆ ಕಾಣುತ್ತದೆ. ರಷ್ಯಾದಿಂದ ತೈಲ ಖರೀದಿಯನ್ನು ಕಡಿಮೆ ಮಾಡಲು ಪ್ರಾರಂಭಿಸಿದೆ. 2024ರಲ್ಲಿ ನಮ್ಮ ಒಟ್ಟು ತೈಲದಲ್ಲಿ ಶೇಕಡ 40ರಷ್ಟು ರಷ್ಯಾದಿಂದ ಬರುತ್ತಿತ್ತು. 2025ರಲ್ಲಿ ಅದು 25%ಗೆ ಇಳಿದಿದೆ. ಹಿಂದೆ ಇರಾನ್ ಹಾಗೂ ವೆನೆಜುವೆಲಾದಿಂದ ತೈಲ ಕೊಳ್ಳುವ ವಿಷಯದಲ್ಲೂ ಭಾರತ ಅಮೆರಿಕದ ಒತ್ತಡಕ್ಕೆ ಮಣಿದಿತ್ತು. ಇರಾನ್ ಜೊತೆ ಎಲ್ಲಾ ವ್ಯಾಪಾರವನ್ನು ನಿಲ್ಲಿಸಿತ್ತು. ಈಗ ಭಾರತ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಅಮೆರಿಕದ ರಾಷ್ಟ್ರೀಯ ಸುರಕ್ಷತೆ, ವಿದೇಶಿ ನೀತಿ ಹಾಗೂ ಆರ್ಥಿಕ ವಿಷಯಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವುದಕ್ಕೆ ಸಿದ್ಧವಾಗಿದೆ ಎಂದು ಬೇರೆ ಹೇಳಿಕೊಂಡಿದೆ.
ಈ ಒಪ್ಪಂದದ ಪ್ರಕಾರ ಭಾರತ ಮುಂದಿನ 5 ವರ್ಷಗಳಲ್ಲಿ ಅಮೆರಿಕದಿಂದ 500 ಶತಕೋಟಿ ಡಾಲರ್ ಮೌಲ್ಯದ ‘ಇಂಧನ ಉತ್ಪನ್ನಗಳು, ವಿಮಾನ ಮತ್ತು ವಿಮಾನದ ಬಿಡಿಭಾಗಗಳು, ಅಮೂಲ್ಯ ಲೋಹಗಳು, ತಂತ್ರಜ್ಞಾನದ ಉತ್ಪನ್ನಗಳು’ ಖರೀದಿಸುವ ‘ಇಂಗಿತ’ವನ್ನು ವ್ಯಕ್ತಪಡಿಸಿದೆ. ಸದ್ಯಕ್ಕೆ ಭಾರತ ಪ್ರತಿವರ್ಷ ಸುಮಾರು 50 ಶತಕೋಟಿ ಡಾಲರ್ ಮೌಲ್ಯದ ಸರಕುಗಳನ್ನು ಆಮೆರಿಕದಿಂದ ಆಮದು ಮಾಡಿಕೊಳ್ಳುತ್ತಿದೆ. ಈ ಒಪ್ಪಂದಕ್ಕೆ ನಾವು ಬದ್ಧರಾದರೆ ಇದರ ಎರಡು ಪಟ್ಟು ಕೊಳ್ಳಬೇಕಾಗುತ್ತದೆ. ಮೊದಲನೆಯದಾಗಿ ಇದು ಆರ್ಥಿಕತೆಗೆ ಹೊರೆಯಾಗುತ್ತದೆ. ನಮ್ಮ ಆರ್ಥಿಕತೆಗೆ ಅನುಕೂಲವಾಗುವ ಯಾವ ಸರಕುಗಳನ್ನು ನಾವು ಅಮೆರಿಕದಿಂದ ಕೊಳ್ಳಬಹುದು ಅನ್ನುವುದು ಸ್ಪಷ್ಟವಿಲ್ಲ. ಅಂತಿಮವಾಗಿ ರಷ್ಯಾದ ತೈಲದ ಬದಲಿಗೆ ಅಮೆರಿಕದಿಂದ ಹೆಚ್ಚಿನ ಬೆಲೆ ತೆತ್ತು ತೈಲವನ್ನೋ, ಶಸ್ತ್ರಾಸ್ತ್ರಗಳನ್ನೋ ಖರೀದಿ ಮಾಡಬೇಕಾಗುತ್ತದೆ. ಅಮೆರಿಕದಿಂದ ಸರಕುಗಳನ್ನು ಕೊಳ್ಳುವುದಕ್ಕೆ 50 ಶತಕೋಟಿ ಡಾಲರಿಗಿಂತ ಹೆಚ್ಚಿನ ಹಣವನ್ನು ಖರ್ಚು ಮಾಡಿಬಿಟ್ಟರೆ ಬೇರೆ ದೇಶಗಳಿಂದ ಆಮದು ಮಾಡಿಕೊಳ್ಳುವ ಪ್ರಮಾಣವನ್ನು ತಗ್ಗಿಸಬೇಕಾಗುತ್ತದೆ. ಯುರೋಪ್, ನ್ಯೂಜಿಲ್ಯಾಂಡ್ ಇತ್ಯಾದಿ ದೇಶಗಳೊಂದಿಗೆ ನಾವು ಮಾಡಿಕೊಂಡಿರುವ ವ್ಯಾಪಾರ ಒಪ್ಪಂದವನ್ನು ಮಾನ್ಯ ಮಾಡುವುದಕ್ಕೂ ಕಷ್ಟವಾಗುತ್ತದೆ. ಇದು ಸಮಾನ ಒಪ್ಪಂದವೂ ಅಲ್ಲ. ನಿರ್ಬಂಧ ಇರುವುದು ಭಾರತಕ್ಕೆ ಮಾತ್ರ. ಅಮೆರಿಕಕ್ಕೆ ಯಾವ ನಿರ್ಬಂಧವೂ ಇಲ್ಲ. ಒಪ್ಪಂದದಲ್ಲಿ ‘ಎರಡು ದೇಶಗಳೂ ಗಣನೀಯವಾಗಿ ತಾಂತ್ರಿಕ ಉತ್ಪನ್ನಗಳ ವ್ಯಾಪಾರವನ್ನು ಹೆಚ್ಚಿಸುತ್ತವೆ’ ಎಂದು ಉಲ್ಲೇಖಿಸಲಾಗಿದೆ. ಆದರೆ ಹಾಗೆ ಸಿದ್ದಪಡಿಸಿದ ತಾಂತ್ರಿಕ ಉತ್ಪನ್ನಗಳ ಪಟ್ಟಿಯಲ್ಲಿ ಇರುವುದೆಲ್ಲಾ ಆಮೆರಿಕ ರಫ್ತು ಮಾಡುವ ವಸ್ತುಗಳು!
ಈವರೆಗೆ ಆಹಾರ ಮತ್ತು ಕೃಷಿ ಉತ್ಪನ್ನಗಳನ್ನು ಅಂತರಾಷ್ಟ್ರೀಯ ವ್ಯಾಪಾರ ಒಪ್ಪಂದಗಳಿಂದ ಹೊರಗಿಡಲಾಗುತ್ತಿತ್ತು. ಅಮೆರಿಕದ ಒತ್ತಡಕ್ಕೆ ಮಣಿದಿದ್ದೇವೆ. ಮೊದಲ ಬಾರಿಗೆ ಅವು ಒಪ್ಪಂದದ ಭಾಗವಾಗಿವೆ. ಅಮೆರಿಕ ಆದಕ್ಕಾಗಿ ಒತ್ತಾಯ ಮಾಡುವುದರಲ್ಲಿ ಆಶ್ಚರ್ಯವೂ ಇಲ್ಲ. ಅದು ನಿರೀಕ್ಷಿತ. ಚೀನಾ ಅಮೆರಿಕದ ಮೆಕ್ಕೆಜೋಳ ಹಾಗೂ ಸೋಯಾವನ್ನು ಕೊಳ್ಳುತ್ತಿಲ್ಲ. ಆಮೆರಿಕಕ್ಕೆ ಪರ್ಯಾಯ ಮಾರುಕಟ್ಟೆ ಬೇಕಾಗಿದೆ. ಭಾರತ ಅಮೆರಿಕದ ಕೃಷಿ ಉತ್ಪನ್ನಗಳಿಗೆ ಒಳ್ಳೆಯ ಮಾರುಕಟ್ಟೆ, ಅದು ವಿಸ್ತಾರವೂ ಆಗುತ್ತಿದೆ. ಆದರೆ ಸದ್ಯಕ್ಕೆ ಭಾರತ ಜಿಎಂ ತಳಿಗಳಿಗೆ ಅವಕಾಶ ನೀಡುತ್ತಿಲ್ಲ. ಒಪ್ಪಂದದ ಪ್ರಕಾರ ಭಾರತವು ಅಮೆರಿಕದ ಎಲ್ಲಾ ಕೈಗಾರಿಕಾ ಸರಕುಗಳು ಮತ್ತು ಪಶುಗಳ ಆಹಾರಕ್ಕಾಗಿ ಬಳಸುವ ಒಣಗಿಸಿದ ಡಿಸ್ಟಿಲರಿ ಧಾನ್ಯಗಳು (DDGS), ಕೆಂಪು ಜೋಳ, ಗೋಡಂಬಿ-ಬಾದಾಮಿ, ತಾಜಾ ಮತ್ತು ಸಂಸ್ಕರಿಸಿದ ಹಣ್ಣುಗಳು, ಸೋಯಾಬೀನ್ ಎಣ್ಣೆ, ವೈನ್ ಮತ್ತು ಸ್ಪಿರಿಟ್ ಹಾಗೂ ಇನ್ನಿತರ ಉತ್ಪನ್ನಗಳ ಮೇಲಿನ ಸುಂಕಗಳನ್ನು ತೆಗೆದುಹಾಕಬೇಕು ಅಥವಾ ಕಡಿಮೆ ಮಾಡಬೇಕು.
ಆಮೆರಿಕದಲ್ಲಿ ಬೆಳೆಯುವ ಮೆಕ್ಕೆಜೋಳ ಮತ್ತು ಸೋಯಾ ಕಾಳುಗಳು ಜಿಎಂ ತಳಿಗಳಾದ್ದರಿಂದ ನಮ್ಮಲ್ಲಿ ಮಾರುವುದಕ್ಕೆ ಅವಕಾಶ ಮಾಡಿಕೊಟ್ಟಿಲ್ಲ. ಆದರೆ ಜೋಳಕ್ಕೆ ನಮ್ಮ ಮಾರುಕಟ್ಟೆಯನ್ನು ತೆರೆಯಲಾಗಿದೆ. ನಾವು ಜೋಳವನ್ನು ಹೆಚ್ಚಾಗಿ ರಫ್ತು ಮಾಡುತ್ತಿದ್ದೇವೆ. ಬೇರೆ ದೇಶಗಳಿಂದ ಅಗ್ಗದ ಜೋಳ ನಮ್ಮ ಮಾರುಕಟ್ಟೆಯನ್ನು ಪ್ರವೇಶಿಸುವುದನ್ನು ತಪ್ಪಿಸುವುದಕ್ಕೆ ಜೋಳದ ಮೇಲೆ 57.75% ಸುಂಕ ವಿಧಿಸಲಾಗುತ್ತಿದೆ. ಈಗ ಅದಕ್ಕೆ ಅವಕಾಶವಿಲ್ಲ. ಜಗತ್ತಿನಲ್ಲೇ ಅತಿ ಹೆಚ್ಚು ಜೋಳ ರಫ್ತು ಮಾಡುತ್ತಿರುವ ದೇಶ ಆಮೆರಿಕ, ಅಮೆರಿಕದಲ್ಲಿ ವಿಪರೀತ ಸಬ್ಸಿಡಿ ಪಡೆದು ಬೆಳೆದ ಜೋಳವನ್ನು ಯಾವುದೇ ಸುಂಕವಿಲ್ಲದೆ ಭಾರತದಲ್ಲಿ ಮಾರುವುದಕ್ಕೆ ಬಾಗಿಲು ತೆರೆಯುತ್ತಿದ್ದೇವೆ. ಇದರಿಂದ ಖಂಡಿತವಾಗಿ ಜೋಳ ಬೆಳೆಯುವ ರಾಜ್ಯಗಳಿಗೆ ಸಮಸ್ಯೆಯಾಗುತ್ತದೆ.
ಮೆಕ್ಕೆಜೋಳಕ್ಕೆ ಅವಕಾಶವಿಲ್ಲದಿದ್ದರೂ ಅದರಿಂದ ಇಥನಾಲ್ ತಯಾರಿಸಿ ಉಳಿದ ಹಿಂಡಿಯನ್ನು ಅಂದರೆ ಒಣಗಿಸಿದ ಡಿಸ್ಟಿಲ್ಸ್ ಮೆಕ್ಕೆಜೋಳದ (DDGs) ಮಾರಾಟಕ್ಕೆ ಅವಕಾಶ ಮಾಡಿಕೊಟ್ಟಿದ್ದೇವೆ. ಇದನ್ನು ಹಸು, ಕೋಳಿ ಇತ್ಯಾದಿಗಳ ಮೇವಾಗಿ ಬಳಸಲಾಗುತ್ತದೆ. ಈಗ ಅಮೆರಿಕದ ಜಿಎಂ ಮೆಕ್ಕೆಜೋಳ DDGs ರೂಪದಲ್ಲಿ ಭಾರತವನ್ನು ಪ್ರವೇಶಿಸಲಿದೆ.
ಭಾರತವು ಅಮೆರಿಕಕ್ಕೆ ನೀಡಿರುವ ಈ ವಿನಾಯಿತಿಗಾಗಿ ತಾನು ಭಾರತದ ಸರಕುಗಳ ಮೇಲೆ ವಿಧಿಸಿರುವ ಸುಂಕದಲ್ಲಿ 7% ತಗ್ಗಿಸುವುದಕ್ಕೆ ಅಮೆರಿಕೆ ಒಪ್ಪಿಕೊಂಡಿದೆ. ಇದರಿಂದ ಬೇರೆ ದೇಶಗಳ ಜೊತೆಗೆ ನಮ್ಮ ಬಟ್ಟೆ ಇತ್ಯಾದಿ ಉತ್ಪಾದಕರಿಗೆ ಅಮೆರಿಕದ ಮಾರುಕಟ್ಟೆಯಲ್ಲಿ ಸ್ಪರ್ಧಿಸುವುದಕ್ಕೆ ಅನುಕೂಲವಾಗುತ್ತದೆ ಎನ್ನಲಾಗಿದೆ. ಆದರೆ ಬಾಂಗ್ಲಾದೇಶದ ಮೇಲಿನ ಸುಂಕವನ್ನು ಅಮೆರಿಕೆ ಈಗ 19%ಗೆ ಇಳಿಸಿದೆ. ಜೊತೆಗೆ ಅಮೆರಿಕದ ಹತ್ತಿ ಮತ್ತು ನೂಲನ್ನು ಖರೀದಿಸಿದರೆ ಸುಂಕವನ್ನು ಪೂರ್ತಿಯಾಗಿ ರದ್ದು ಮಾಡುವುದಾಗಿ ತಿಳಿಸಿದೆ. ಬಾಂಗ್ಲಾದೇಶ ಕಳೆದ ವರ್ಷ ಭಾರತದಿಂದ 1.6 ಬಿಲಿಯನ್ ಡಾಲರ್ ನೂಲನ್ನು ಖರೀದಿಸಿತ್ತು. ಇನ್ನು ಮುಂದೆ ಅದು ಅಮೆರಿಕದಿಂದ ಖರೀದಿಸಬಹುದು. ಅಮೆರಿಕದಿಂದ ನೂಲನ್ನು ಕೊಂಡು ಬಟ್ಟೆ ತಯಾರಿಸಿದರೆ ಭಾರತಕ್ಕೂ ಸುಂಕ ಇರುವುದಿಲ್ಲ ಎಂದು ನಮ್ಮ ವಾಣಿಜ್ಯ ಮಂತ್ರಿಗಳು ಹೇಳಿದ್ದಾರೆ. ಆದರೆ ಆಗ ನಮ್ಮ ನೂಲು ಮತ್ತು ಹತ್ತಿಯನ್ನು ಕೊಳ್ಳುವವರು ಯಾರು?
ಒಟ್ಟಾರೆಯಾಗಿ ನೋಡಿದರೆ ನಾವು ಈ ಒಪ್ಪಂದದಿಂದ ಪಡೆದುಕೊಂಡಿದ್ದಕ್ಕಿಂತ ಬಿಟ್ಟುಕೊಟ್ಟಿದ್ದೇ ಹೆಚ್ಚು. ಟ್ರಂಪ್ ನಮ್ಮ ಆತ್ಮೀಯ ಗೆಳೆಯರು ಅಂತ ನಮ್ಮ ಪ್ರಧಾನಿಯವರು ಹೇಳಿಕೊಂಡರೂ, ವಾಸ್ತವದಲ್ಲಿ ಅಮೆರಿಕೆ ಭಾರತದ ಹಿತಾಸಕ್ತಿಯನ್ನು ಕಡೆಗಣಿಸುತ್ತಲೇ ಬಂದಿದೆ. ಚೀನಾ, ಟರ್ಕಿ ಇತ್ಯಾದಿ ದೇಶಗಳು ರಷ್ಯಾದಿಂದ ತೈಲವನ್ನು ಆಮದು ಮಾಡಿಕೊಳ್ಳುತ್ತಿದ್ದರೂ ಕೇವಲ ಭಾರತದ ಮೇಲೆ ಸುಂಕವನ್ನು ವಿಧಿಸಿದೆ. ಹಾಗೆಯೇ ಪಾಕಿಸ್ತಾನ ಹಾಗೂ ಬಾಂಗ್ಲಾದೇಶದೊಂದಿಗೆ ಮಾಡಿಕೊಂಡಿರುವ ಒಪ್ಪಂದಗಳಲ್ಲೂ ಭಾರತದ ಹಿತಾಸಕ್ತಿಯನ್ನು ನಿರ್ಲಕ್ಷಿಸಲಾಗಿದೆ. ದಿನದಿಂದ ದಿನಕ್ಕೆ ಟ್ರಂಪ್ ಒತ್ತಡ ಹೆಚ್ಚುತ್ತಿದೆ. ಹೊಸ ಹೊಸ ಬೇಡಿಕೆಗಳನ್ನು ಇಡಲಾಗುತ್ತಿದೆ. ಮುಂದೆ ಬೇಳೆಕಾಳುಗಳು, ಸೋಯಾಬೀನ್, ಮೆಕ್ಕೆಜೋಳ ಇವುಗಳಿಗೂ ಭಾರತದಲ್ಲಿ ಮಾರುಕಟ್ಟೆ ತೆರೆಯಲು ಒತ್ತಡ ಹೆಚ್ಚುತ್ತದೆ. ಹಾಗೆಯೇ ಡಿಜಿಟಲ್ ಸೇವೆಗಳ ಮೇಲೆ ಸುಂಕವನ್ನು ತೆಗೆಯುವುದಕ್ಕೂ ಒತ್ತಡ ಬರುತ್ತದೆ.
ಟ್ರಂಪ್ ಸುಂಕದ ನೀತಿ ಕಾನೂನುಬದ್ದವಲ್ಲ ಅನ್ನುವುದು ಸ್ಪಷ್ಟ, ಅದನ್ನು ಅಮೆರಿಕದ ಉನ್ನತ ನ್ಯಾಯಾಲಯವೇ ಹೇಳಿದೆ. ಎಲ್ಲಾ ದೇಶಗಳ ಮೇಲೆ ಸುಂಕವನ್ನು ಹಾಕುವುದಕ್ಕೆ ಅಂತರಾಷ್ಟ್ರೀಯ ತುರ್ತು ಆರ್ಥಿಕ ಶಕ್ತಿಗಳ ಕಾಯ್ದೆಯನ್ನು (IEEPA) ಬಳಸಿಕೊಳ್ಳಲಾಗಿತ್ತು. ತುರ್ತು ಪರಿಸ್ಥಿತಿಯನ್ನು ಘೋಷಿಸಿ, ಯಾವುದೇ ದೇಶದ ಮೇಲೆ, ಯಾವುದೇ ಕಾರಣಕ್ಕಾಗಿ, ಮನಸ್ಸಿಗೆ ಬಂದಷ್ಟು, ಅದೂ ಅನಿರ್ದಿಷ್ಟ ಕಾಲ ಸುಂಕ ಹಾಕಬಹುದು ಅನ್ನುವುದು ಅವರ ವಾದವಾಗಿತ್ತು. ಅಧ್ಯಕ್ಷರಿಗೆ ಮನಸೋಯಿಚ್ಛೆ ಸುಂಕಗಳನ್ನು ವಿಧಿಸುವ ಅಧಿಕಾರವನ್ನು ಆ ಕಾಯ್ದೆ ನೀಡುವುದಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಸುಂಕಗಳನ್ನು ಅಸಂವಿಧಾನಿಕ’ ಎಂದು ರದ್ದುಗೊಳಿಸಿದೆ.
ಉನ್ನತ ನ್ಯಾಯಾಲಯದ ತೀರ್ಪನ್ನು ಟ್ರಂಪ್ ತೀವ್ರವಾಗಿ ಖಂಡಿಸಿದರು. ಸುಂಕವನ್ನು ಉಳಿಸಿಕೊಳ್ಳುವುದಕ್ಕೆ ಬೇರೆ ದಾರಿಗಳನ್ನು ನೋಡುತ್ತಿದ್ದಾರೆ. ಅವರು ಸೆಕ್ಷನ್ 201, 301 ಮತ್ತು 232 ಕಾಯ್ದೆಗಳನ್ನು ಬಳಸಿಕೊಂಡು ಸುಂಕವನ್ನು ವಿಧಿಸುವ ಪ್ರಯತ್ನದಲ್ಲಿದ್ದಾರೆ. ಸುಪ್ರೀಂ ಕೋರ್ಟ್ನ ತೀರ್ಪು ಬಂದ ಕೂಡಲೇ 1974ರ ವ್ಯಾಪಾರ ಕಾಯ್ದೆಯ ಸೆಕ್ಷನ್ 122ರ ಆಡಿಯಲ್ಲಿ ಎಲ್ಲಾ ಸರಕುಗಳ ಮೇಲೆ 10% ಸುಂಕ ಘೋಷಿಸಿದರು. ಈ ಸುಂಕವನ್ನು ಯಾವುದೋ ಒಂದು ದೇಶಕ್ಕೆ ಸೀಮಿತಗೊಳಿಸುವುದಕ್ಕೆ ಸಾಧ್ಯವಿಲ್ಲ. ಇದು ಎಲ್ಲಾ ದೇಶಗಳಿಗೂ ಸಮಾನವಾಗಿ ಅನ್ವಯವಾಗುತ್ತದೆ. ಈ ನಿಯಮವು ಅಮೆರಿಕಾದ ಪಾವತಿ ಸಮತೋಲನದ ಸಮಸ್ಯೆಯನ್ನು ನಿಭಾಯಿಸುವುದಕ್ಕಾಗಿ ಅಧ್ಯಕ್ಷರಿಗೆ 150 ದಿನಗಳವರೆಗೆ ಗರಿಷ್ಠ 15% ವರೆಗೆ ಸುಂಕಗಳನ್ನು ವಿಧಿಸಲು ಅನುವು ಮಾಡಿಕೊಡುತ್ತದೆ. 150 ದಿನಗಳ ನಂತರವೂ ಮುಂದುವರಿಸಬೇಕಾದರೆ ಕಾಂಗ್ರೆಸ್ ಅನುಮೋದನೆ ಬೇಕು. ಜೊತೆಗೆ ಅಮೆರಿಕಕ್ಕೆ ಈಗ ಪಾವತಿ ಸಮತೋಲನದ ಸಮಸ್ಯೆ ಇಲ್ಲ. ಹಾಗಾಗಿ ಇದಕ್ಕೆ ಕಾನೂನಿನ ಸಮರ್ಥನೆ ಸಾಧ್ಯವಿಲ್ಲ. ಈ ಕಾಯ್ದೆಯನ್ನು ಕೂಡ ಸುಪ್ರೀಂ ಕೋರ್ಟ್ ಒಪ್ಪದೇ ಇರಬಹುದು.
ಸಮಸ್ಯೆಯೆಂದರೆ ಅಮೆರಿಕದೊಂದಿಗೆ ಈಗಾಗಲೇ ಹಲವು ದೇಶಗಳು ಒಪ್ಪಂದ ಮಾಡಿಕೊಂಡಿವೆ. ಅದರಲ್ಲಿ ಹಲವು ದೇಶಗಳ ಮೇಲೆ ವಿಧಿಸಿರುವ ಸುಂಕ 10%ಗಿಂತ ಹೆಚ್ಚಿದೆ. ಉದಾಹರಣೆಗೆ ಭಾರತ 18% ಸುಂಕಕ್ಕೆ ಒಪ್ಪಿಕೊಂಡಿತ್ತು. ಸುಪ್ರೀಂ ಕೋರ್ಟ್ ತೀರ್ಪಿನ ನಂತರ ಈಗ ಆ ಪ್ರಮಾಣದ ಸುಂಕ ಸಾಧ್ಯವಿಲ್ಲ. ಅಷ್ಟೇ ಅಲ್ಲ, ಒಪ್ಪಂದ ಮಾಡಿಕೊಂಡರೂ ಮಾಡಿಕೊಳ್ಳದಿದ್ದರೂ ಎಲ್ಲಾ ದೇಶಗಳಿಗೂ ಈಗ ಏಕರೂಪದ ಸುಂಕ (10%) ಅನ್ವಯವಾಗುತ್ತಿದೆ. ಹಾಗಾಗಿ ಒಪ್ಪಂದವಿಲ್ಲದೆಯೇ ಹೆಚ್ಚು ಅನುಕೂಲವಾದ ಪರಿಸ್ಥಿತಿ ಈ ದೇಶಗಳಿಗೆ ಇದೆ. ತಮ್ಮ ದೇಶದ ಹಿತಾಸಕ್ತಿಯನ್ನು ಬದಿಗೊತ್ತಿ ಅಮೆರಿಕಕ್ಕೆ ಯಾವುದೇ ವಿಶೇಷ ರಿಯಾಯಿತಿಯನ್ನು ತೋರಿಸುವ ಆವಶ್ಯಕತೆ ಈ ದೇಶಗಳಿಗಿಲ್ಲ.
ದೇಶಗಳ ಮೇಲೆ ಹೆಚ್ಚಿನ ಸುಂಕ ವಿಧಿಸುವುದಕ್ಕೆ ಟ್ರಂಪ್ ಬಳಸಲು ಪ್ರಯತ್ನಿಸುತ್ತಿರುವ ಇನ್ನೊಂದು ಕಾಯ್ದೆ ಸೆಕ್ಷನ್ 301. ಅಮೆರಿಕದೊಂದಿಗೆ ವ್ಯಾಪಾರ ಮಾಡುತ್ತಿರುವ ಯಾವುದೇ ದೇಶ ಅನ್ಯಾಯದ ವ್ಯಾಪಾರ ಪದ್ಧತಿಗಳಲ್ಲಿ ತೊಡಗಿದೆ ಎಂದು ಅಮೆರಿಕದ ಸರ್ಕಾರಕ್ಕೆ ಕಂಡುಬಂದರೆ ಆ ದೇಶಗಳ ಮೇಲೆ ಸುಂಕ ವಿಧಿಸಲು ಇದು ಅವಕಾಶ ನೀಡುತ್ತದೆ. ಭಾರತ, ಚೀನಾ ಸೇರಿದಂತೆ ಹಲವು ದೇಶಗಳ ಮೇಲೆ ಈ ಕಾಯ್ದೆಯ ಅನ್ವಯ ವಿಚಾರಣೆಯನ್ನು ಅಮೆರಿಕೆ ಈಗಾಗಲೇ ಪ್ರಾರಂಭಿಸಿದೆ. ಮಾರ್ಚ್ 2026ರಲ್ಲಿ ಅಮೆರಿಕೆ ಎರಡು ಪ್ರಮುಖ ತನಿಖೆಗಳನ್ನು ಘೋಷಿಸಿದೆ. ಮೊದಲನೆಯದು ಆ ದೇಶಗಳು ಬಳಸುತ್ತಿರುವ ಕೈಗಾರಿಕಾ ನೀತಿಗಳಿಂದಾಗಿ ಆ ದೇಶಗಳಲ್ಲಿ ಉತ್ಪಾದನಾ ಸಾಮರ್ಥ್ಯ ವಿಪರೀತ ಹೆಚ್ಚಾಗಿದೆಯೇ? ಮತ್ತು ಅದರಿಂದ ಆಮೆರಿಕದ ಕೈಗಾರಿಕೆಗಳಿಗೆ ಹಾನಿಯಾಗುತ್ತಿದೆಯೇ ಎನ್ನುವುದನ್ನು ಪರಿಶೀಲಿಸುವುದು.
ಎರಡನೆಯ ವಿಚಾರಣೆಯ ಉದ್ದೇಶ ಸುಮಾರು 60 ದೇಶಗಳಲ್ಲಿ ಕಾರ್ಮಿಕರನ್ನು ಬಲವಂತವಾಗಿ ದುಡಿಸಿಕೊಂಡು ಸರಕುಗಳನ್ನು ತಯಾರಿಸಲಾಗುತ್ತಿದೆಯೇ ಮತ್ತು ಅದರಿಂದ ಜಾಗತಿಕ ವ್ಯಾಪಾರಕ್ಕೆ ತೊಂದರೆಯಾಗುತ್ತಿದೆಯೇ ಎಂಬುದನ್ನು ಪರಿಶೀಲಿಸುವುದು. ಇದನ್ನು ಬಳಸಿಕೊಂಡು ಈ ದೇಶಗಳ ಮೇಲೆ ಒತ್ತಡ ಹೇರುವ ಪ್ರಯತ್ನ ನಡೆಯುತ್ತಿದೆ. ಈ ಕಾಯ್ದೆಯನ್ನು ಯಾವುದೇ ದೇಶಗಳ ಮೇಲೂ ಹೇರಬಹುದು. ಆದರೆ ಅದಕ್ಕೆ ತನಿಖೆ ಹಾಗೂ ಪುರಾವೆಗಳು ಬೇಕಾಗುತ್ತದೆ. ಚೀನಾದ ವಿರುದ್ಧ ಈಗಾಗಲೇ ಇದನ್ನು ಬಳಸಲಾಗುತ್ತಿದೆ. ಟ್ರಂಪ್ ಬಳಸಿಕೊಳ್ಳಬಹುದಾದ ಇನ್ನೊಂದು ಕಾಯ್ದೆ ಅಂದರೆ ಸೆಕ್ಷನ್ 232. ರಾಷ್ಟ್ರೀಯ ಭದ್ರತೆಯ ದೃಷ್ಟಿಯಿಂದ ಅಗತ್ಯವೆಂದು ವಾಣಿಜ್ಯ ಕಾರ್ಯದರ್ಶಿ ಭಾವಿಸಿದರೆ, ನಿರ್ದಿಷ್ಟ ವಲಯಗಳ ಮೇಲೆ ಸುಂಕ ವಿಧಿಸುವುದಕ್ಕೆ ಈ ಕಾಯ್ದೆಯಲ್ಲಿ ಅವಕಾಶವಿದೆ. ಉದಾಹರಣೆಗೆ ಉಕ್ಕು ಮತ್ತು ಅಲ್ಯೂಮಿನಿಯಂ ಮೇಲೆ ಶೇ. 50 ಸುಂಕ ಹಾಕಬಹುದು. ಆದರೆ ಇವು ಎಲ್ಲಾ ದೇಶಗಳಿಗೂ ಸಮಾನವಾಗಿ ಅನ್ವಯವಾಗಬೇಕಿರುವುದರಿಂದ ನಿರ್ದಿಷ್ಟ ದೇಶಗಳ ಮೇಲೆ ಒತ್ತಡ ಹೇರಲು ಇವುಗಳಿಂದ ಸಾಧ್ಯವಿಲ್ಲ. ಜೊತೆಗೆ ಟ್ರಂಪ್ ಒಪ್ಪಂದಕ್ಕೆ ಬದ್ಧವಾಗಿರಲು ಭಾರತದಂತಹ ದೇಶಗಳ ಮೇಲೆ ಒತ್ತಡವನ್ನು ಹೇರತೊಡಗಿದ್ದಾನೆ. ಸುಪ್ರೀಂ ಕೋರ್ಟ್ ತೀರ್ಪನ್ನು ನೆಪವಾಗಿಟ್ಟುಕೊಂಡು ಆಟವಾಡಲು ಬಯಸುವ ಯಾವುದೇ ದೇಶವು ಈಗ ಒಪ್ಪಿಕೊಂಡಿರುವುದಕ್ಕಿಂತಲೂ ಹೆಚ್ಚಿನ ಸುಂಕ ಮತ್ತು ಕೆಟ್ಟ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾನೆ.
ದೇಶಗಳನ್ನು ನಿಯಂತ್ರಿಸುವುದಕ್ಕೆ ಒಂದು ಕಡೆ ಸುಂಕವನ್ನು ಅಸ್ತ್ರವನ್ನಾಗಿ ಪ್ರಯೋಗಿಸುತ್ತಿದ್ದರೆ ಇನ್ನೊಂದೆಡೆ ವೆನೆಜುವೆಲಾ, ಇರಾನ್ ದೇಶಗಳ ಮೇಲೆ ತಮ್ಮ ಮಾತನ್ನು ಕೇಳುವ ನಾಯಕರನ್ನು ಸ್ಥಾಪಿಸಲು ನೇರ ಮಿಲಿಟರಿ ದಾಳಿ ನಡೆಸುತ್ತಿದ್ದಾನೆ. ಅಲ್ಲಿಯ ಸಂಪನ್ಮೂಲಗಳ ಒಡೆತನಕ್ಕಾಗಿ ಪ್ರಯತ್ನಿಸುತ್ತಿದ್ದಾನೆ. ಸಾಮಾ ಸಾಮಾನ್ಯವಾಗಿ ಇಂತಹ ನಾಯಕರಿಗೆ ಜನಸಾಮಾನ್ಯರ ಚಿಂತೆ ಇರುವುದಿಲ್ಲ. ಇಂತಹ ಯುದ್ಧಗಳಿಂದ ಜನಸಾಮಾನ್ಯರ ಬದುಕು ಹೈರಾಣಾಗುತ್ತದೆ.
ಭಾರತದ ಮೇಲೆ ಯುದ್ಧದ ಪರಿಣಾಮ:
ಈಗ ಹೊರ್ಮುಜ್ ಜಲಸಂಧಿ ಸ್ಥಗಿತಗೊಂಡಿದೆ. ವಿಶ್ವದ ತೈಲ ಪೂರೈಕೆಯ ಐದನೇ ಒಂದು ಭಾಗ, ರಸಗೊಬ್ಬರದ ಮೂರನೇ ಒಂದು ಭಾಗ ಹೊರ್ಮುಜ್ ಜಲಸಂಧಿಯ ಮೂಲಕವೇ ಸರಬರಾಜಾಗುವುದು. ಜಾಗತಿಕ ಯೂರಿಯಾ ರಫ್ತನ 35% ಮತ್ತು ಗಂಧಕದ ರಫ್ರಿನ 45%ರಷ್ಟು ಅದನ್ನು ಹಾದುಕೊಂಡೇ ಬರುವುದು. ತೈಲದ, ಎಲ್ ಪಿಜಿ ಕೊರತೆಯನ್ನು ಎಲ್ಲರೂ ಅನುಭವಿಸುತ್ತಿದ್ದಾರೆ. ಬೆಲೆಗಳು ಗಗನಕ್ಕೇರುತ್ತಿವೆ. ರಸ್ತೆ ಬದಿಯಲ್ಲಿ ಬೋಂಡಾ ಮಾರುವ ಅಂಗಡಿಗಳಿಂದ ಹಿಡಿದು ದೊಡ್ಡ ಹೋಟೆಲ್ಲುಗಳವರೆಗೆ ಎಲ್ಲವನ್ನೂ ಮುಚ್ಚಬೇಕಾದ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಆಹಾರದ ಮೇಲೆ ಇನ್ನೊಂದು ರೀತಿಯಲ್ಲೂ ಹೊಡೆತ ಬೀಳುತ್ತಿದೆ. ಭಾರತಕ್ಕೆ ಪ್ರತಿ ತಿಂಗಳು ಸುಮಾರು 20 ಲಕ್ಷ ಟನ್ ವಿವಿಧ ರಸಗೊಬ್ಬರದ ಅವಶ್ಯಕತೆಯಿದೆ. ಭಾರತ ಬಹುತೇಕ ರಸಾಯನಿಕಗಳನ್ನು ಆಮದು ಮಾಡಿಕೊಳ್ಳುತ್ತದೆ. ಯೂರಿಯಾ. ಗಂಧಕ ಮತ್ತು ಅಮೋನಿಯಾ ಇವೆಲ್ಲಾ ಬಹುತೇಕ ತಯಾರಾಗುವುದು ಸೌದಿ ಅರೇಬಿಯಾ, ಕತಾರ್, ಓಮನ್ ಮತ್ತು ಯುಎಇ ರಾಷ್ಟ್ರಗಳಲ್ಲಿ, ಇರಾನ್ ಅಮೋನಿಯಾ ಉತ್ಪಾದನೆಯಲ್ಲಿ ವಿಶ್ವದಲ್ಲೇ ಮೂರನೇ ಸ್ಥಾನದಲ್ಲಿದೆ. ಯುದ್ಧ ಮುಂದುವರಿದರೆ ರಸಗೊಬ್ಬರದ ಪೂರೈಕೆ ಅಸ್ತವ್ಯಸ್ತಗೊಳ್ಳುತ್ತದೆ. ರಷ್ಯಾ ಈ ಕೊರತೆಯನ್ನು ತುಂಬಬಹುದಿತ್ತು, ಆದರೆ ಉತ್ಪಾದನಾ ಮಿತಿ ಮತ್ತು ರಫ್ತು ನಿರ್ಬಂಧಗಳಿಂದಾಗಿ ಅದು ಸಾಧ್ಯವಾಗುತ್ತಿಲ್ಲ. ಅಮೋನಿಯಾ ಕೊರತೆಯಾದರೆ ದೇಶೀಯ ಯೂರಿಯಾ ಉತ್ಪಾದನೆಗೂ ಹೊಡೆತ ಬೀಳುತ್ತದೆ. ಬಿತ್ತನೆಯ ಸಮಯದಲ್ಲಿ ರಸಗೊಬ್ಬರ ಸಿಗದಿದ್ದರೆ ಅದರ ಪರಿಣಾಮ ಇಳುವರಿಯ ಮೇಲೆ ಆಗುತ್ತದೆ.

ಬೆಲೆ ಏರಿದರೆ ರೈತರು ಬಳಸುವ ಪ್ರಮಾಣವೂ ಕಡಿಮೆಯಾಗುತ್ತದೆ. ಅಂತಿಮವಾಗಿ ಇಳುವರಿ ಕಮ್ಮಿಯಾಗುತ್ತದೆ. ಪರಿಣಾಮವಾಗಿ ಬ್ರೆಡ್, ಮೊಟ್ಟೆ, ಮಾಂಸ ಮತ್ತು ಇತರ ಮೂಲಭೂತ ಆಹಾರ ಪದಾರ್ಥಗಳ ಬೆಲೆ ಗಗನಕ್ಕೇರುತ್ತದೆ. ಈಗ ನಾವು ಅನುಭವಿಸುತ್ತಿರುವ ಬಿಕ್ಕಟ್ಟು 2022ರ ರಷ್ಯಾ-ಉಕ್ರೇನ್ ಯುದ್ಧದಿಂದ ಉಂಟಾದ ಬಿಕ್ಕಟ್ಟಿಗಿಂತ ಹಲವು ಪಟ್ಟು ಹೆಚ್ಚಿದೆ ಅನ್ನುವ ಆತಂಕವಿದೆ. ಅಂತಿಮವಾಗಿ ಇದರ ಪರಿಣಾಮ ನಮ್ಮ ಅಡುಗೆ ಮನೆಯ ಮೇಲೂ ಆಗುತ್ತದೆ. ಇದು ನಮ್ಮ ಆಹಾರದ ಸುರಕ್ಷತೆಗೆ ದೊಡ್ಡ ಪೆಟ್ಟಾಗುತ್ತದೆ. ಬಾಸ್ಮತಿ ಅಕ್ಕಿ, ಚಹಾ ಇವೆಲ್ಲ ಇರಾನ್ ಮತ್ತು ಅದರ ನೆರೆಯ ರಾಷ್ಟ್ರಗಳಿಗೆ ರಫ್ತು ಆಗುತ್ತಿತ್ತು, ಈಗ ಅವೆಲ್ಲಾ ಸಂಕಷ್ಟದಲ್ಲಿ ಸಿಲುಕಿವೆ. ಹಾಗೆಯೇ ನಮಗೆ ಗಲ್ಫ್ ದೇಶಗಳಲ್ಲಿ ದುಡಿಯುತ್ತಿರುವ ಕಾರ್ಮಿಕರು ಭಾರತಕ್ಕೆ ಹಣವನ್ನು ಕಳುಹಿಸುತ್ತಿದ್ದರು. ಅದು ದೊಡ್ಡ ಪ್ರಮಾಣದಲ್ಲೇ ಇತ್ತು. ಈಗ ಅದಕ್ಕೆ ಪೆಟ್ಟು ಬಿದ್ದಿದೆ. ಜೊತೆಗೆ ಅವರ ಉದ್ಯೋಗಕ್ಕೂ ತೊಂದರೆಯಾಗಬಹುದು. ಅವರು ಭಾರತಕ್ಕೆ ಮರಳಿದರೆ ಇಲ್ಲಿಯ ಉದ್ಯೋಗ ಪರಿಸ್ಥಿತಿಯ ಮೇಲೆ ಒತ್ತಡ ಇನ್ನೂ ತೀವ್ರವಾಗುತ್ತದೆ.
ಹೀಗೆ ಒಂದು ವ್ಯವಸ್ಥೆಯಲ್ಲಿ ಹಲವು ವಿಷಯಗಳು ಒಂದಕ್ಕೊಂದು ತೆಕ್ಕೆಹಾಕಿಕೊಂಡಿರುತ್ತವೆ. ಪರಿಣಾಮ ಎಲ್ಲೆಲ್ಲೋ ಆಗುತ್ತಿರುತ್ತವೆ. ಉದಾಹರಣೆಗೆ ಭಾರತದಲ್ಲಿ ರಸಗೊಬ್ಬರಕ್ಕೆ ಸಬ್ಸಿಡಿ ನೀಡಲಾಗುತ್ತಿದೆ. ಬೆಲೆ ಏರಿದರೆ ಸಬ್ಸಿಡಿಯ ಪ್ರಮಾಣವೂ ಹೆಚ್ಚುತ್ತದೆ, 2024-25ರಲ್ಲಿ ಸರ್ಕಾರವು ಸುಮಾರು 1.9 ಲಕ್ಷ ಕೋಟಿ ರೂಪಾಯಿಗಳನ್ನು ಸಬ್ಸಿಡಿಗಾಗಿ ವ್ಯಯಿಸಿದೆ. ಈಗ ಯೂರಿಯಾ ದರಗಳು ಶೇ. 30-40ರಷ್ಟು ಏರಿಕೆಯಾಗುವ
ಸಾಧ್ಯತೆಯಿದ್ದು, ದೇಶದ ಬೊಕ್ಕಸಕ್ಕೆ ದೊಡ್ಡ ಹೊರೆಯಾಗಲಿದೆ. ಕಚ್ಚಾ ತೈಲದ ಬೆಲೆ 10 ಡಾಲರ್ ಏರಿದರೆ ಭಾರತದ ವಾರ್ಷಿಕ ಆಮದಿನ ವೆಚ್ಚ ಸುಮಾರು 13 ರಿಂದ 14 ಶತಕೋಟಿ ಡಾಲರ್ಗಳಷ್ಟು ಹೆಚ್ಚುತ್ತದೆ ಅನ್ನುವ ಅಂದಾಜು ಇದೆ. ಇದರಿಂದ ದೇಶದ ಚಾಲ್ತಿ ಖಾತೆ ಕೊರತೆ ಹೆಚ್ಚುತ್ತದೆ. ರೂಪಾಯಿ ಮೌಲ್ಯದ ಮೇಲೆ ಒತ್ತಡ ಹೆಚ್ಚುತ್ತದೆ. ಆಮದು ದುಬಾರಿಯಾಗುತ್ತದೆ. ಹಣದುಬ್ಬರ ಮತ್ತೂ ಹೆಚ್ಚಬಹುದು. ಹೀಗೆ ಪರಿಸ್ಥಿತಿ ಬಿಗಡಾಯಿಸುತ್ತದೆ. “
ಹಾಗಾಗಿ ಭಾರತ ಇಂತಹ ಸಂಕಷ್ಟದ ಸಮಯದಲ್ಲಿ ತನ್ನ ಸ್ವಾಯತ್ತತೆಯನ್ನು, ಜನರ ಹಿತವನ್ನು ಗಮನದಲ್ಲಿಟ್ಟುಕೊಂಡು ಗಟ್ಟಿಯಾದ ನಿಲುವನ್ನು ತೆಗೆದುಕೊಳ್ಳಬೇಕು. ಭಾರತಕ್ಕೆ ಇಸ್ರೇಲ್-ಅಮೆರಿಕ ಪರವಾಗಿ ನಿಲ್ಲುವ ಅವಶ್ಯಕತೆಯಿರಲಿಲ್ಲ. ಭಾರತ ಅಮೆರಿಕದೊಂದಿಗೆ ವ್ಯಾಪಾರವನ್ನು ಸುಧಾರಿಸಿಕೊಳ್ಳುವ ನಿಟ್ಟಿನಲ್ಲಿ ಯೋಚಿಸುತ್ತಿರಬಹುದು. ವ್ಯಾಪಾರ ಎಲ್ಲರಿಗೂ ಒಳ್ಳೆಯದು, ಆದರೆ ಅಮೆರಿಕ ಎಲ್ಲವನ್ನೂ ತಾನೇ ಲಪಟಾಯಿಸಲು ಯೋಚಿಸುತ್ತಿದೆ. ಇದರಿಂದ ಯಾರಿಗೂ ಲಾಭವಿರುವುದಿಲ್ಲ. ತಮ್ಮ ಸರಕುಗಳಿಗೆ ಪರ್ಯಾಯ ಮಾರುಕಟ್ಟೆಯನ್ನು ಕಂಡುಕೊಳ್ಳುವುದಕ್ಕೆ ಭಾರತದಂತಹ ರಾಷ್ಟ್ರಗಳಿಗೆ ಸಾಧ್ಯವಿದೆ. ಆದರೆ ಅಮೆರಿಕೆಗೆ ತನಗೆ ಬೇಕಾದ ವಸ್ತುಗಳನ್ನೆಲ್ಲಾ ತನ್ನಲ್ಲೇ ತಯಾರಿಸಿಕೊಳ್ಳುವುದು ಕಷ್ಟ. ಹಿರಿಯರು ಸ್ಥಾಪಿಸಿದ ಸರ್ಕಾರಿ ಉದ್ದಿಮೆಗಳನ್ನು ಬಂಡವಾಳದ ಕ್ರೋಡೀಕರಣಕ್ಕಾಗಿ ನಾವು ಮಾರಿಕೊಳ್ಳುತ್ತಿದ್ದೇವೆ. ಹಿರಿಯರು ಗಳಿಸಿಕೊಟ್ಟಿರುವ ಸ್ವಾತಂತ್ರ್ಯವನ್ನೂ ಬಲಿಕೊಡುವುದು ಬೇಡ. ನೂರಾರು ಮಕ್ಕಳನ್ನು ಬಲಿ ಪಡೆದ ಯುದ್ಧ ಯಾವುದೇ ಸಮಸ್ಯೆಗೂ ಪರಿಹಾರವಲ್ಲ.
ಕೃಪೆ: ಹೊಸತು, ಮಾಸಪತ್ರಿಕೆ

ಆರ್ಥಿಕತೆಯ ಕುರಿತು, ಅರ್ಥಶಾಸ್ತ್ರದ ಕುರಿತು ಮತ್ತು ಈ ವಿಷಯದಲ್ಲಿ ಜಗತ್ತಿನಲ್ಲಿ ನಡೆಯುವ ಹಲವಾರು ವಿದ್ಯಮಾನಗಳ ಕುರಿತು ಈದಿನ.ಕಾಮ್ನಲ್ಲಿ ಪ್ರಕಟವಾಗುತ್ತಿರುವ ಈ ಬರೆಹಗಳು ಮೂಲದಲ್ಲಿ ಡಾ.ಟಿ.ಎಸ್.ವೇಣುಗೋಪಾಲ್ ಮತ್ತು ಡಾ.ಶೈಲಜಾ ಅವರು ಹೊರತರುತ್ತಿರುವ ʼಅರ್ಥʼ ಎಂಬ ಇ-ಮ್ಯಾಗಜೀನ್ನಲ್ಲಿ ಪ್ರಕಟವಾದಂಥವು. ಇವುಗಳನ್ನು ನಮ್ಮಲ್ಲಿ ಪ್ರಕಟಿಸಲು ಅನುಮತಿ ಕೊಟ್ಟಿರುವ ಅವರಿಗೆ ಹೃತ್ಪೂರ್ವಕ ಧನ್ಯವಾದಗಳು. ಮೂಲ ಲೇಖನಗಳ ಜೊತೆಗೆ ಅವರ ಕೆಲವು ಪುಸ್ತಕಗಳನ್ನು ನೇರವಾಗಿ ಓದಲು ಬಯಸುವವರು ಇಲ್ಲಿ ಕ್ಲಿಕ್ ಮಾಡಿ.




