ರಷ್ಯಾ-ಉಕ್ರೇನ್ ಯುದ್ಧವು ಕಡಿಮೆಯಾಗುವ ಯಾವುದೇ ಲಕ್ಷಣಗಳೂ ಕಾಣುತ್ತಿಲ್ಲ. ಆದರೂ ಪಶ್ಚಿಮ ಏಷ್ಯಾದಲ್ಲಿನ ಮತ್ತೊಂದು ಪ್ರಮುಖ ಬಿಕ್ಕಟ್ಟು ಜಾಗತಿಕ ಆರ್ಥಿಕತೆಯ ಮೇಲೆ ಎರಗಿದೆ. ಈ ಯುದ್ಧವು ಕಚ್ಚಾ ತೈಲ, ನೈಸರ್ಗಿಕ ಅನಿಲ ಮತ್ತು ರಸಗೊಬ್ಬರಗಳು ಸೇರಿದಂತೆ ವಿವಿಧ ಇಂಧನ ಉತ್ಪನ್ನಗಳ ಉತ್ಪಾದನೆ. ಸಂಗ್ರಹಣೆ ಮತ್ತು ಸಾಗಣೆಯನ್ನು ಅಸ್ತವ್ಯಸ್ತಗೊಳಿಸಿದೆ. ಇದರಿಂದ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಸಂಬಂಧಿಸಿದ ಪದಾರ್ಥಗಳ ಬೆಲೆಯಲ್ಲಿ ವಿಪರೀತ ಏರಿಕೆಯಾಗಿದೆ.

–ಸಿ. ರಂಗರಾಜನ್ ಮತ್ತು ಡಿ.ಕೆ. ಶ್ರೀವಾಸ್ತವ
The article was originally published in The Hindu
[C. Rangarajan is a former Governor of the Reserve Bank of India and Chairman of the Twelfth Finance Commission. D.K. Srivastava is Chief Policy Adviser, EY India, a former Director of the Madras School of Economics and Member, Twelfth Finance Commission. The views expressed are personal]
ಹಾರ್ಮುಜ್ ಜಲಸಂಧಿಯಲ್ಲಿ [Strait of Hormuz] ಭಾಗಶಃವಾದರೂ, ಗಂಭೀರವಾದ ದಿಗ್ವಂಧನ ಏರ್ಪಟ್ಟಿದೆ. ಇದರಿಂದಾಗಿ ಕಚ್ಚಾ ತೈಲ, ಅನಿಲ ಮತ್ತು ಇತರ ಪೆಟ್ರೋಲಿಯಂ ಉತ್ಪನ್ನಗಳ ಜೊತೆಗೆ ಇತರ ಸರಕುಗಳ ಸಾಗಣೆಯಲ್ಲಿ ತೀವ್ರವಾಗಿ ಕಡಿತವಾಗಿದೆ. ಈ ಸಮಸ್ಯೆಗಳು ಕೆಲವು ದಿನಗಳಲ್ಲಿ ಬಗೆಹರಿದರೂ ಸಹ, ಪೂರೈಕೆಯ ವ್ಯವಸ್ಥೆ ಸಹಜಸ್ಥಿತಿಗೆ ಮರಳುವುದಕ್ಕೆ ಸಾಕಷ್ಟು ಸಮಯ ಬೇಕಾಗಬಹುದು. ಆದಾಗ್ಯೂ, ಸದ್ಯಕ್ಕೆ ಒಪ್ಪಿಕೊಂಡಿರುವ ತಾತ್ಕಾಲಿಕ ಕದನ ವಿರಾಮದಿಂದ ಏಪ್ರಿಲ್ 7 ಮತ್ತು 8ರಂದು ಪ್ರತಿ ಬ್ಯಾರೆಲ್ಗೆ $109.3ರಷ್ಟಿದ್ದ ಬ್ರೆಂಟ್ ಕಚ್ಚಾ ತೈಲದ ಬೆಲೆ ಸುಮಾರು 95ಕ್ಕೆ ಇಳಿದಿದೆ.
ಭಾರತ ಈಗ ತನಗೆ ಬೇಕಾದ ಕಚ್ಚಾ ತೈಲ, ಅನಿಲ ಮತ್ತು ರಸಗೊಬ್ಬರ ಇವುಗಳನ್ನು ಬೇರೆ ಬೇರೆ ದೇಶಗಳಿಂದ ಕೊಳ್ಳಲು ಪ್ರಾರಂಭಿಸಿದೆ. ಪ್ರಸ್ತುತ. ಭಾರತ 41 ದೇಶಗಳಿಂದ ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುತ್ತಿದೆ. ಭಾರತ ಕಚ್ಚಾ ತೈಲಕ್ಕೆ ಬಹುತೇಕ ಆಮದನ್ನು ನೆಚ್ಚಿಕೊಂಡಿದೆ. ಆಮದಿನ ಪ್ರಮಾಣ ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿದೆ. ಈಗ ಭಾರತ ತನ್ನ ಅವಶ್ಯಕತೆಯ ಶೇಕಡ 90ರಷ್ಟನ್ನು ಆಮದು ಮಾಡಿಕೊಳ್ಳುತ್ತಿದೆ.
ಭಾರತಕ್ಕೆ ಅನ್ವಯವಾಗುವ ಕಚ್ಚಾ ತೈಲ ಬೆಲೆ ಸೂಚ್ಯಂಕವನ್ನು ಇಂಡಿಯನ್ ಕ್ರೂಡ್ ಬಾಸ್ಕೆಟ್’ ಎಂದು ಕರೆಯಲಾಗುತ್ತದೆ. ಇದು ಮುಖ್ಯವಾಗಿ ‘ಸ್ವೀಟ್ ಗ್ರೇಡ್’ (ಬ್ರೆಂಟ್) ಮತ್ತು ‘ಸೋರ್ ಗ್ರೇಡ್’ (ಓಮನ್ ಹಾಗೂ ದುಬೈ ಸರಾಸರಿ) ತೈಲಗಳನ್ನು ಒಳಗೊಂಡಿದೆ. ಈ ಬಾಸ್ಕೆಟ್ ಬೆಲೆಯು ಯಾವಾಗಲೂ ಜಾಗತಿಕ ಕಚ್ಚಾ ತೈಲ ಬೆಲೆಗಳೊಂದಿಗೆ ನೇರವಾಗಿ ತೆಕ್ಕೆಹಾಕಿಕೊಂಡಿರುತ್ತದೆ. ಈ ಜಾಗತಿಕ ಬೆಲೆಯು ಬ್ರೆಂಟ್, ಡಬ್ಲ್ಯುಟಿಐ ಮತ್ತು ದುಬೈ ಬೈಲಗಳ ಬೆಲೆಯ ಸರಾಸರಿಯಾಗಿರುತ್ತದೆ.
2026ರ ಮಾರ್ಚ್ ತಿಂಗಳ ಸರಾಸರಿಯನ್ನು ನೋಡಿದರೆ, ಭಾರತ ಖರೀದಿಸುವ ತೈಲದ ಬೆಲೆ ಜಾಗತಿಕ ಮಾರುಕಟ್ಟೆಯ ಬೆಲೆಗಿಂತ ಸುಮಾರು 19% ಹೆಚ್ಚಿತ್ತು. ಫೆಬ್ರವರಿ 2026ಕ್ಕೆ ಹೋಲಿಸಿದರೆ, ಮಾರ್ಚ್ನಲ್ಲಿ ಈ ಬೆಲೆಯಲ್ಲಿ ಸರಾಸರಿ 64.5%ರಷ್ಟು ಭಾರಿ ಏರಿಕೆಯಾಗಿತ್ತು. ಆದರೆ ಸಾಮಾನ್ಯ ಗ್ರಾಹಕರ ಮೇಲೆ ಇದರ ಪರಿಣಾಮ ಅಷ್ಟಾಗಿ ಆಗದಂತೆ ಬೆಲೆಯನ್ನು ಸ್ವಲ್ಪ ಮಟ್ಟಿಗೆ ನಿಯಂತ್ರಿಸಲಾಗಿತ್ತು.
ಈಗ ತಾತ್ಕಾಲಿಕವಾಗಿ ಯುದ್ಧ ನಿಂತಿರುವುದರಿಂದ, ತೈಲ ಬೆಲೆಯಲ್ಲಿ ಸ್ವಲ್ಪ ಇಳಿಕೆಯಾಗಿದೆ. ಮಾರ್ಚ್ 23, 2026ರಂದು ಒಂದು ಬ್ಯಾರೆಲ್ಗೆ $157 ರಷ್ಟಿದ್ದ ಗರಿಷ್ಠ ಬೆಲೆಯು, ಏಪ್ರಿಲ್ 9ರ ವೇಳೆಗೆ 120.28 ಕ್ಕೆ ಇಳಿದಿದೆ. ಅಂದರೆ ಪ್ರತಿ ಬ್ಯಾರೆಲ್ಗೆ ಸುಮಾರು $37 ರಷ್ಟು ಬೆಲೆ ಕಡಿಮೆಯಾದಂತಾಗಿದೆ.
ಹಲವು ಒತ್ತಡಗಳು
ಈ ಬಿಕ್ಕಟ್ಟಿನ ಪರಿಣಾಮ ಭಾರತದ ಆರ್ಥಿಕತೆಯ ಮೇಲೆ ಹಲವು ರೀತಿಯಲ್ಲಾಗುತ್ತದೆ. ಮೊದಲಿಗೆ ಪೂರೈಕೆಯಲ್ಲಿ ಅಡಚಣೆಗಳಾಗುತ್ತವೆ. ಪೂರೈಕೆಯಲ್ಲಿ ಸಮಸ್ಯೆಯಾದರೆ ಇಂಧನ ಮತ್ತು ವಿದ್ಯುತ್ತನ್ನು ಹೆಚ್ಚಾಗಿ ಬಳಸುವ ಕೈಗಾರಿಕೆಗಳಲ್ಲಿ ಉತ್ಪಾದನೆ ಕಡಿಮೆಯಾಗುತ್ತದೆ. ಈ ವಲಯದಲ್ಲಿ ಆಗುವ ತೊಂದರೆಯ ಪರಿಣಾಮ ಆರ್ಥಿಕತೆಯ ಇತರ ಕ್ಷೇತ್ರಗಳ ಮೇಲೆ ಆಗುತ್ತದೆ. ಬಟ್ಟೆ, ಪೇಂಟ್, ರಾಸಾಯನಿಕಗಳು, ರಸಗೊಬ್ಬರ, ಸಿಮೆಂಟ್ ಮತ್ತು ಟೈರ್ ಉದ್ಯಮಗಳಿಗೆ ಹೊಡೆತ ಬೀಳುತ್ತದೆ. ಮುಖ್ಯವಾಗಿ ರಸಗೊಬ್ಬರ ಮತ್ತು ರಾಸಾಯನಿಕಗಳ ಕೊರತೆಯಾದರೆ, ಜೂನ್ನಿಂದ ಆರಂಭವಾಗುವ ಮುಂಗಾರಿನಲ್ಲಿ ಕೃಷಿ ಇಳುವರಿ ಕಡಿಮೆಯಾಗಬಹುದು.
ಎರಡನೆಯದಾಗಿ ಹೊಡೆತ ಬೀಳುವ ಕ್ಷೇತ್ರವೆಂದರೆ ಸಾಗಣೆ. ವಸ್ತುಗಳ ಸಂಗ್ರಹಣೆ ಮತ್ತು ಸಾಗಾಣಿಕೆಗೆ ಹೆಚ್ಚು ಇಂಧನ ಬೇಕಾಗುತ್ತದೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರುವುದರಿಂದ ಸಾಗಾಣಿಕೆ ವೆಚ್ಚ ಹೆಚ್ಚುತ್ತದೆ. ಇದರಿಂದಾಗಿ ಮಾರುಕಟ್ಟೆಗೆ ಬರುವ ಪ್ರತಿಯೊಂದು ವಸ್ತುವಿನ ಬೆಲೆಯೂ ಏರುತ್ತಾ ಹೋಗುತ್ತದೆ.
ಮೂರನೆಯದಾಗಿ, ಭಾರತದ ರಫ್ತು ವಹಿವಾಟಿಗೆ ಬೇಡಿಕೆ ಮತ್ತು ಪೂರೈಕೆ ಎರಡೂ ಕಡೆಯಿಂದ ಹೊಡೆತ ಬೀಳುತ್ತದೆ. ಯುದ್ದದಿಂದ ಪಶ್ಚಿಮ ಏಷ್ಯಾದ ದೇಶಗಳಲ್ಲಿ ಆಗುವ ಅಡಚಣೆಯಿಂದ ಆ ದೇಶಗಳಲ್ಲಿ ನಮ್ಮ ಸರಕುಗಳ ಮಾರಾಟಕ್ಕೆ ಹೊಡೆತ ಬೀಳುತ್ತದೆ. ಅಂದರೆ ಬೇಡಿಕೆ ಕಡಿಮೆಯಾಗುತ್ತದೆ. ಅಷ್ಟೇ ಅಲ್ಲ ಈ ಯುದ್ದದಿಂದ ಅಮೆರಿಕ ಮತ್ತು ಯುರೋಪ್ ಸೇರಿದಂತೆ ಇತರ ದೇಶಗಳಲ್ಲಿ ಆರ್ಥಿಕ ಬೆಳವಣಿಗೆ ನಿಧಾನವಾಗುತ್ತದೆ. ಹಾಗಾಗಿ ಆ ದೇಶಗಳಲ್ಲೂ ನಮ್ಮ ಸರಕುಗಳಿಗೆ ಬೇಡಿಕೆ ಕುಸಿಯುತ್ತದೆ. 2024-25ರಲ್ಲಿ ಭಾರತದ ಒಟ್ಟು ಸರಕು ರಫ್ಟಿನಲ್ಲಿ ಶೇಕಡ 16.4 ರಷ್ಟು ಪಶ್ಚಿಮ ಏಷ್ಯಾದ ರಾಷ್ಟ್ರಗಳಿಗೆ ಹೋಗುತ್ತಿತ್ತು. ರೂಪಾಯಿ ಮೌಲ್ಯ ಕುಸಿಯುತ್ತಿರುವುದರಿಂದ ಭಾರತೀಯ ರಫ್ತುದಾರರಿಗೆ ಸ್ವಲ್ಪಮಟ್ಟಿಗೆ ಅನುಕೂಲವಾಗಬಹುದು.
ನಾಲ್ಕನೆಯದಾಗಿ, ಇದು ವಿದೇಶಿ ವಿನಿಮಯ ದರ ಮತ್ತು ಭಾರತಕ್ಕೆ ಬರುವ ಹಣದ ಮೇಲೆ ಪರಿಣಾಮ ಬೀರುತ್ತದೆ. ಇತ್ತೀಚಿನ ಕೆಲವು ತಿಂಗಳುಗಳಿಂದ ಭಾರತದ ರೂಪಾಯಿ ಮೌಲ್ಯ ಕುಸಿಯುತ್ತಿದೆ. ಪಶ್ಚಿಮ ಏಷ್ಯಾದ ಯುದ್ಧ ಶುರುವಾದ ಮೇಲೆ ಈ ಕುಸಿತದ ವೇಗ ಇನ್ನಷ್ಟು ತೀವ್ರಗೊಂಡಿದೆ. ಜಾಗತಿಕ ಕಚ್ಚಾ ತೈಲ, ರಸಗೊಬ್ಬರ ಹಾಗೂ ಇತರ ಇಂಧನ ಉತ್ಪನ್ನಗಳ ಬೆಲೆ ಹೆಚ್ಚಾದಂತೆ, ಡಾಲರ್ ಮತ್ತು ಇತರ ಪ್ರಬಲ ವಿದೇಶಿ ಕರೆನ್ಸಿಗಳಿಗೆ ಬೇಡಿಕೆ ಹೆಚ್ಚಾಗುತ್ತದೆ. ಇದರಿಂದ ವಿನಿಮಯ ದರ ಒತ್ತಡಕ್ಕೆ ಸಿಲುಕುತ್ತದೆ. ಇದರೊಂದಿಗೆ, ಗಲ್ಫ್ ರಾಷ್ಟ್ರಗಳಲ್ಲಿ ಉದ್ಯೋಗದಲ್ಲಿರುವ ಭಾರತೀಯರು ಇಲ್ಲಿಕೆ ಕಳುಹಿಸುತ್ತಿದ್ದ ವಿದೇಶಿ ಹಣದ [Remittances] ಪ್ರಮಾಣವು ಕುಸಿಯುತ್ತಿದೆ. ಇದರಿಂದ ವಿನಿಮಯ ದರದ ಮೇಲೆ ಒತ್ತಡ ಮತ್ತಷ್ಟು ಹೆಚ್ಚುತ್ತದೆ. ಆದಾಗ್ಯೂ, ಒಟ್ಟಾರೆ ಪರಿಸ್ಥಿತಿಯಲ್ಲಿ ಸುಧಾರಣೆಯಾದರೆ ರುಪಾಯಿ ಚೇತರಿಸಿಕೊಳ್ಳಬಹುದು.
ಯುದ್ಧದಿಂದ ಉಂಟಾಗಿರುವ ಅನಿಶ್ಚತತೆ ಮತ್ತು ಆತಂಕದಿಂದ ವಿದೇಶಿ ಹೂಡಿಕೆದಾರರು ತಮ್ಮ ಹಣವನ್ನು ಭಾರತದಿಂದ ಹಿಂತೆಗೆದುಕೊಳ್ಳುತ್ತಿದ್ದಾರೆ. ಇದು ರೂಪಾಯಿ ಕುಸಿತಕ್ಕೆ ಬಹು ಮುಖ್ಯವಾದ ಕಾರಣ. ಯುದ್ಧ ನಿಂತ ಕೂಡಲೆ ರೂಪಾಯಿ ಮೌಲ್ಯ ಮತ್ತೆ ಚೇತರಿಸಿಕೊಳ್ಳುತ್ತದೆ. ಮಾರ್ಚ್ 2026ರಲ್ಲಿ ಸುಮಾರು 13.6 ಬಿಲಿಯನ್ ಡಾಲರ್ ಹೂಡಿಕೆ ಭಾರತದಿಂದ ಹೊರಗೆ ಹೋಗಿದೆ. ಇದು ತುಂಬಾ ದೊಡ್ಡ ಮೊತ್ತ.
ಐದನೆಯದಾಗಿ, ಚಾಲ್ತಿ ಖಾತೆ ಕೊರತೆ [Current Account Deficit] ಯ ಸಮಸ್ಯೆ. ರಫ್ತು ಕಡಿಮೆಯಾಗಿ, ಆಮದು ಹೆಚ್ಚಾದರೆ ಚಾಲ್ತಿ ಖಾತೆಯಲ್ಲಿ ಕೊರತೆಯುಂಟಾಗುತ್ತದೆ. ಯುದ್ಧ ಮುಂದುವರಿದರೆ ಈ ಸಮಸ್ಯೆ ತೀವ್ರವಾಗುತ್ತದೆ.
ಆರನೆಯದಾಗಿ, ಹಣದುಬ್ಬರದ ಸಮಸ್ಯೆ. ಉತ್ಪಾದನಾ ವೆಚ್ಚದಿಂದ ಆಗುವ ಹಣದುಬ್ಬರದಿಂದ ಪೆಟ್ರೋಲಿಯಂ ಉತ್ಪನ್ನಗಳು ಹಾಗೂ ರಸಗೊಬ್ಬರದಂತಹ ಉತ್ಪನ್ನಗಳ ಮೇಲೆ ನೇರ ಪರಿಣಾಮ ಉಂಟಾಗುತ್ತದೆ. ಒಂದು ವೇಳೆ ಮಾರುಕಟ್ಟೆಯಲ್ಲಿ ಹಣದ ಚಲಾವಣೆಯೂ ಹೆಚ್ಚಾದರೆ, ಅದರಿಂದ ಒಟ್ಟಾರೆ ಹಣದುಬ್ಬರದ ಮೇಲಿನ ಒತ್ತಡ ಇನ್ನೂ ಹೆಚ್ಚುತ್ತದೆ. ಆದ್ದರಿಂದ ದೇಶದಲ್ಲಿ ಹಣದ ಪ್ರಮಾಣ ದೊಡ್ಡ ಪ್ರಮಾಣದಲ್ಲಿ ಹೆಚ್ಚಾಗದಂತೆ ನೋಡಿಕೊಳ್ಳಬೇಕು.
ಕೊನೆಯದಾಗಿ, ವಿತ್ತೀಯ ಕೊರತೆಯ ಸಮಸ್ಯೆ. ಚಿಲ್ಲರೆ ಮಾರಾಟ ಬೆಲೆ ಹೆಚ್ಚಾಗದಂತೆ ನೋಡಿಕೊಳ್ಳಬೇಕಾದರೆ, ತೈಲ ಮಾರಾಟ ಮಾಡುವ ಕಂಪನಿಗಳಿಗೆ [OMCs] ಹೆಚ್ಚಿನ ಸಬ್ಸಿಡಿ ನೀಡಬೇಕಾಗಿ ಬರಬಹುದು. ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು [Excise Duty] ಕಡಿತಗೊಳಿಸಿದರೆ ತೈಲ ಕಂಪನಿಗಳ ನಷ್ಟ ಕಡಿಮೆಯಾಗಬಹುದು. ಆದರೆ ಅದರಿಂದ ಸರ್ಕಾರದ ಆದಾಯಕ್ಕೆ ನೇರವಾಗಿ ಹೊಡೆತ ಬೀಳುತ್ತದೆ.
ಒಂದು ವೇಳೆ ನೈಜ ಜಿಡಿಪಿ ಬೆಳವಣಿಗೆ ಕುಂಠಿತವಾಗಿ, ಪ್ರಮುಖ ಉತ್ಪಾದಕರ ಲಾಭಾಂಶವು ಕುಸಿದರೆ, ಆಗ ಸರ್ಕಾರದ ತೆರಿಗೆ ಸಂಗ್ರಹ ಕಡಿಮೆಯಾಗುತ್ತದೆ. ಆರ್ಥಿಕ ಚಟುವಟಿಕೆಗಳು ನಿಧಾನಗೊಳ್ಳುವುದರಿಂದ ರಾಜ್ಯಗಳ ಹಣಕಾಸಿನ ಸ್ಥಿತಿಯೂ ಹದಗೆಡಬಹುದು. ಕೇಂದ್ರ ಸರ್ಕಾರದ ತೆರಿಗೆ ಸಂಗ್ರಹ ಕಡಿಮೆಯಾದಾಗ, ರಾಜ್ಯಗಳಿಗೆ ಸಿಗುವ ತೆರಿಗೆ ಪಾಲು [Tax Devolution] ಕೂಡ ಕಡಿಮೆಯಾಗುತ್ತದೆ. ಜೊತೆಗೆ, ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ಮಾರಾಟ ತೆರಿಗೆ ಅಥವಾ ವ್ಯಾಟ್ [VAT] ಕಡಿಮೆ ಮಾಡುವಂತೆ ರಾಜ್ಯಗಳ ಮೇಲೂ ಒತ್ತಡ ಬರಬಹುದು.
ವಾಸ್ತವವಾಗಿ, ಅಬಕಾರಿ ಸುಂಕದ ಕಡಿತದ ಕುರಿತು ಸರ್ಕಾರ ಮರುಚಿಂತನೆ ನಡೆಸಬೇಕಿದೆ. ಈಗ ಕಡಿತ ಮಾಡಿರುವುದಕ್ಕೆ ರಾಜ್ಯಗಳಲ್ಲಿ ನಡೆಯಲಿರುವ ಚುನಾವಣೆಗಳು ಕಾರಣ. ಚುನಾವಣೆಗಳ ನಂತರ ಮತ್ತು ಯುದ್ಧವು ಮುಂದುವರಿದರೆ, ತೈಲದ ಬೆಲೆಗಳಲ್ಲಿ ಏರಿಕೆಯಾಗುತ್ತದೆ. ಅಂತಹ ಸಂದರ್ಭದಲ್ಲಿ, ಬೆಲೆ ಹೆಚ್ಚಾದಾಗ, ತೈಲದ ಬೇಡಿಕೆ ತಗ್ಗಬಹುದು. ಅದು ಒಳ್ಳೆಯದು.
ವಿವಿಧ ನೀತಿ ಕ್ರಮಗಳು
ಮಾರ್ಚ್ 27ರಂದು ಕೇಂದ್ರೀಯ ಪರೋಕ್ಷ ತೆರಿಗೆಗಳು ಹಾಗೂ ಕಸ್ಟಮ್ಸ್ ಮಂಡಳಿ [CBIC] ಅಧ್ಯಕ್ಷರು ಹಂಚಿಕೊಂಡಿರುವ ಮಾಹಿತಿಯ ಪ್ರಕಾರ. ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆ ಕಡಿತದಿಂದ ಸರ್ಕಾರಕ್ಕೆ ಪ್ರತಿ 15 ದಿನಕ್ಕೆ 7,000 ಕೋಟಿ ರೂಪಾಯಿ ನಷ್ಟವಾಗುತ್ತಿದೆ.
ಆದರೆ, ಭಾರತದ ತೈಲ ಕಂಪೆನಿಗಳ ವಿಮಾನ ಇಂಧನದ ರಫ್ತನ ಮೇಲಿನ ತೆರಿಗೆಯಿಂದ 1.500 ಕೋಟಿ ರೂಪಾಯಿ ಆದಾಯ ಬರುತ್ತಿದೆ. ಅಂತಿಮವಾಗಿ, ಸರ್ಕಾರಕ್ಕೆ ಪ್ರತಿ 15 ದಿನಕ್ಕೆ ಒಟ್ಟು 5,500 ಕೋಟಿ ರೂಪಾಯಿಯಷ್ಟು ನಷ್ಟವಾಗುತ್ತಿದೆ. ಈ ಬಿಕ್ಕಟ್ಟು ಒಂದು ವರ್ಷ ಮುಂದುವರಿದರೆ, ಸರ್ಕಾರಕ್ಕೆ ಸುಮಾರು 1,32,000 ಕೋಟಿ ರೂಪಾಯಿ ತೆರಿಗೆ ಆದಾಯ ನಷ್ಟವಾಗಲಿದೆ.
ಸಬ್ಸಿಡಿ ಮತ್ತು ಬೆಲೆ ಏರಿಕೆ
2026-27ರ ಬಜೆಟ್ ಅಂದಾಜಿಗಿಂತ ಆಹಾರ, ರಸಗೊಬ್ಬರ ಮತ್ತು ಪೆಟ್ರೋಲಿಯಂ ಸಬ್ಸಿಡಿಗಳು ಹೆಚ್ಚಾಗುವ ಸಾಧ್ಯತೆಯಿದೆ. ನಾವು ಈಗಾಗಲೇ ಸೂಚಿಸಿರುವಂತೆ ಕಚ್ಚಾ ತೈಲ ಬೆಲೆ ಹೆಚ್ಚಿಗೆ ಇರುವವರೆಗೂ, ಚಿಲ್ಲರೆ ಮಾರಾಟ ಬೆಲೆಗಳನ್ನು ಹೆಚ್ಚಾಗುವುದಕ್ಕೆ ಬಿಡುವುದು ಅನಿವಾರ್ಯವಾಗಿದೆ.
ಆರ್ಥಿಕತೆಯ ಮೇಲೆ ಪರಿಣಾಮ ಕೇಂದ್ರ ಬ್ಯಾಂಕಿನ [RBI] ಅಂದಾಜು
ಅಕ್ಟೋಬರ್ 2025ರ ಆರ್ಬಿಐ [RBI] ತನ್ನ ವರದಿಯಲ್ಲಿ ಈ ಬಿಕ್ಕಟ್ಟಿನ ಪರಿಣಾಮದ ಬಗ್ಗೆ ಮಾಹಿತಿ ನೀಡಿದೆ. ತೈಲ ಬೆಲೆ ಪ್ರತಿ ಬ್ಯಾರೆಲ್ಗೆ 70 ಡಾಲರ್ನಿಂದ 7 ಡಾಲರ್ ಏರಿಕೆಯಾದರೆ (ಅಂದರೆ ಶೇ. 10 ರಷ್ಟು ಏರಿಕೆ), ದೇಶದ ಜಿಡಿಪಿ ಬೆಳವಣಿಗೆ ಶೇ. 0.15 ರಷ್ಟು ಕಡಿಮೆಯಾಗಬಹುದು.
ಪ್ರಸ್ತುತ ಬಿಕ್ಕಟ್ಟಿನಿಂದ ಆಗುವ ಪರಿಣಾಮದ ಪ್ರಮಾಣವನ್ನು ಅಂದಾಜು ಮಾಡುವುದು ಕಷ್ಟ. ಭಾರತೀಯ ರಿಸರ್ವ್ ಬ್ಯಾಂಕ್ [RBI] ತನ್ನ ಅಕ್ಟೋಬರ್ 2025ರ ಹಣಕಾಸು ನೀತಿ ವರದಿಯಲ್ಲಿ ಕೆಲವು ಸಂಭಾವ್ಯ ಪರಿಣಾಮಗಳನ್ನು ಉಲ್ಲೇಖಿಸಿದೆ. ಈ ಅಂದಾಜಿನ ಪ್ರಕಾರ, ಬ್ಯಾರೆಲ್ಗೆ $70ರ ಮೂಲ ಬೆಲೆಯಿಂದ ಭಾರತೀಯ ಕಚ್ಚಾ ತೈಲ ಮಿಶ್ರಣದ (ಬ್ಯಾಸ್ಕೆಟ್) ಬೆಲೆಯಲ್ಲಿ ಶೇಕಡ 10% ಹೆಚ್ಚಳವಾಗಬಹುದು. ಅಂದರೆ ಪ್ರತಿ ಬ್ಯಾರೆಲ್ಗೆ $7ರ ಏರಿಕೆಯಾಗುತ್ತದೆ. ನೈಜ ಜಿಡಿಪಿ ಬೆಳವಣಿಗೆಯಲ್ಲಿ ಸುಮಾರು 15 ಬೇಸಿಸ್ ಪಾಯಿಂಟ್ಗಳಷ್ಟು ಕುಸಿಯಬಹುದು. ಇದರ ಪರಿಣಾಮವನ್ನು ದೇಶೀಯ ಉತ್ಪನ್ನಗಳು ಭರಿಸಬೇಕಾಗುತ್ತವೆ. ಅವುಗಳ ಬೆಲೆ ಏರುತ್ತದೆ. ಹಾಗಾದರೆ ಹಣದುಬ್ಬರವು 30 ಬೇಸಿಸ್ ಪಾಯಿಂಟ್ಗಳಷ್ಟು ಹೆಚ್ಚಾಗುವ ಸಾಧ್ಯತೆಯಿದೆ.
ಏಪ್ರಿಲ್ 9, 2026ರ ಹೊತ್ತಿಗೆ ತೈಲ ಬೆಲೆ ಪ್ರತಿ ಬ್ಯಾರೆಲ್ಗೆ 120.28 ಡಾಲರ್ ಆಗಿದೆ. ಇದು ಸಾಮಾನ್ಯ ದರಕ್ಕಿಂತ ಸುಮಾರು 50 ಡಾಲರ್ನಷ್ಟು ಹೆಚ್ಚಾಗಿದೆ. ಬೆಲೆ ಏರಿಕೆ ಹೀಗೆಯೇ ಮುಂದುವರಿದರೆ, ದೇಶದ ಜಿಡಿಪಿ ಬೆಳವಣಿಗೆ ಶೇ. 1ರಷ್ಟು ಕುಸಿಯಬಹುದು.
ಹಣದುಬ್ಬರವು ಶೇ. 2ಕ್ಕಿಂತ ಹೆಚ್ಚು ಏರಿಕೆಯಾಗುವ ಅಪಾಯವಿದೆ. ಯುದ್ಧ ಬೇಗ ಮುಗಿದರೆ ಈ ಹಾನಿ ಕಡಿಮೆಯಾಗಬಹುದು. ಆದರೆ ಶಾಂತಿ ನಿಜವಾಗಿ ಯಾವಾಗ ಸಾಧ್ಯವಾಗುತ್ತದೆ ಅನ್ನುವುದರ ಮೇಲೆ ಎಲ್ಲವೂ ನಿಂತಿದೆ.
Originally published in The Hindu

ಆರ್ಥಿಕತೆಯ ಕುರಿತು, ಅರ್ಥಶಾಸ್ತ್ರದ ಕುರಿತು ಮತ್ತು ಈ ವಿಷಯದಲ್ಲಿ ಜಗತ್ತಿನಲ್ಲಿ ನಡೆಯುವ ಹಲವಾರು ವಿದ್ಯಮಾನಗಳ ಕುರಿತು ಈದಿನ.ಕಾಮ್ನಲ್ಲಿ ಪ್ರಕಟವಾಗುತ್ತಿರುವ ಈ ಬರೆಹಗಳು ಮೂಲದಲ್ಲಿ ಡಾ.ಟಿ.ಎಸ್.ವೇಣುಗೋಪಾಲ್ ಮತ್ತು ಡಾ.ಶೈಲಜಾ ಅವರು ಹೊರತರುತ್ತಿರುವ ʼಅರ್ಥʼ ಎಂಬ ಇ-ಮ್ಯಾಗಜೀನ್ನಲ್ಲಿ ಪ್ರಕಟವಾದಂಥವು. ಇವುಗಳನ್ನು ನಮ್ಮಲ್ಲಿ ಪ್ರಕಟಿಸಲು ಅನುಮತಿ ಕೊಟ್ಟಿರುವ ಅವರಿಗೆ ಹೃತ್ಪೂರ್ವಕ ಧನ್ಯವಾದಗಳು. ಮೂಲ ಲೇಖನಗಳ ಜೊತೆಗೆ ಅವರ ಕೆಲವು ಪುಸ್ತಕಗಳನ್ನು ನೇರವಾಗಿ ಓದಲು ಬಯಸುವವರು ಇಲ್ಲಿ ಕ್ಲಿಕ್ ಮಾಡಿ.





