ತಮ್ಮ ಸುತ್ತಮುತ್ತಲಿನ ವ್ಯವಸ್ಥೆ ಇಷ್ಟೊಂದು ಹದಗೆಟ್ಟಿರುವುದನ್ನು ನೋಡಿ ಇಂದಿನ ಯುವಪೀಳಿಗೆ (Gen Z) ಬೀದಿಗಿಳಿದು ಪ್ರತಿಭಟಿಸುತ್ತಿರುವುದರಲ್ಲಿ ಯಾವುದೇ ಆಶ್ಚರ್ಯವಿಲ್ಲ. ಕಾಗದದ ಮೇಲೆ ನಾವು ಶೇಕಡ 7.8ರ ದರದಲ್ಲಿ ಬೆಳೆಯುತ್ತಿರಬಹುದು. ಆದರೆ ದೇಶದ ಜನಸಾಮಾನ್ಯರಿಗೆ ಅದು ನಿಜವೆಂದು ಅನ್ನಿಸುತ್ತಲೇ ಇಲ್ಲ. ಏಕೆಂದರೆ, ಅವರ ದೈನಂದಿನ ಬದುಕು ಸುಲಭವಾಗಿಲ್ಲ, ಸುಧಾರಿಸಿಯೂ ಇಲ್ಲ ಎಂಬ ಕಹಿ ಸತ್ಯ ಅವರಿಗೆ ಚೆನ್ನಾಗಿ ಗೊತ್ತಿದೆ.
ಯಾರೋ ತಮಾಷೆಯಾಗಿ ಹೇಳಿದಂತೆ, ಜನ ಜಿಡಿಪಿ ಅಂಕಿಅಂಶಗಳನ್ನು ತಿಂದು ಬದುಕಲ್ಲ. ಜನರಿಗೆ ಊಟಕ್ಕೆ ಅನ್ನ ಬೇಕು, ಮೈಗೆ ಬಟ್ಟೆ, ಕಾಲಿಗೆ ಚಪ್ಪಲಿ ಬೇಕು. ಮಕ್ಕಳಿಗೆ ಒಳ್ಳೆಯ ಶಾಲೆ, ಕಾಯಿಲೆಗೆ ಔಷಧ, ಕೈಗೊಂದು ಮೊಬೈಲ್ ಬೇಕು. ಟಿವಿ ನೋಡಬೇಕು, ಸೋಶಿಯಲ್ ಮೀಡಿಯಾ ಜಾಲಾಡಬೇಕು, ನೆಮ್ಮದಿಯಾಗಿ ಸುರಕ್ಷಿತವಾಗಿ ಬದುಕಬೇಕು. ಇದನ್ನೇ ಅರ್ಥಶಾಸ್ತ್ರದಲ್ಲಿ ‘ಬಳಕೆ’ (Consumption) ಅಂತಾರೆ. ಜನರ ಬಳಕೆ (C), ಹೂಡಿಕೆ (I), ಸರ್ಕಾರದ ಖರ್ಚು (G) ಇವೆಲ್ಲಾ ಸೇರಿಸಿ ಅದಕ್ಕೆ ರಫ್ತನ್ನು ಕೂಡಿ, ಆಮದು ಕಳೆದು, ತೆರಿಗೆ ಸೇರಿಸಿ, ಸಬ್ಸಿಡಿ ಕಳೆದರೆ ಸಿಗುವುದೇ ಒಟ್ಟು ಆಂತರಿಕ ಉತ್ಪನ್ನ- ಅಂದರೆ ಜಿಡಿಪಿ. ದೇಶದ ಆರ್ಥಿಕ ಆರೋಗ್ಯ ಹೇಗಿದೆ ಎಂದು ತಿಳಿಯಲು ಈ ಜಿಡಿಪಿ, ಅದರಲ್ಲೂ ಮುಖ್ಯವಾಗಿ ಅದು ಬೆಳೆಯುತ್ತಿರುವ ದರ ಬಹಳ ಮುಖ್ಯವಾಗುತ್ತದೆ.
ಆರೋಗ್ಯಕರ ಚರ್ಚೆ
ಸಂಖ್ಯಾಶಾಸ್ತ್ರ ಸಚಿವಾಲಯವು (MoSPI) 2026-27ರ ಮೊದಲ ತ್ರೈಮಾಸಿಕದ ಜಿಡಿಪಿ ಅಂಕಿಅಂಶಗಳನ್ನು ಬಿಡುಗಡೆ ಮಾಡಿದೆ. ಹಿಂದಿನ ವರ್ಷದ (2025-26) ಇದೇ ಮೊದಲ ತ್ರೈಮಾಸಿಕಕ್ಕೆ ಹೋಲಿಸಿದರೆ, ಚಾಲ್ತಿ ಬೆಲೆಗಳಲ್ಲಿ ಬೆಳವಣಿಗೆ ದರ ಶೇಕಡ 10.3 ರಷ್ಟಿದೆ. ಸ್ಥಿರ ಬೆಲೆಗಳಲ್ಲಿ ಇದು ಶೇಕಡ 7.8 ರಷ್ಟಿದೆ. ಇದನ್ನು ಕಂಡು ಸರ್ಕಾರ ಮತ್ತು ಸರ್ಕಾರದ ಅರ್ಥಶಾಸ್ತ್ರಜ್ಞರು ತುಂಬಾನೆ ಖುಷಿಯಾಗಿದ್ದಾರೆ. ಆದರೆ ಅನುಮಾನ ಇರುವವರು ಹಲವು ಗಂಭೀರ ಪ್ರಶ್ನೆಗಳನ್ನು ಎತ್ತಿದ್ದಾರೆ. ಈ ಜಿಡಿಪಿ ಅಂಕಿಅಂಶಗಳನ್ನು ಎಷ್ಟರ ಮಟ್ಟಿಗೆ ನಂಬಬಹುದು ಅನ್ನುವುದರ ಬಗ್ಗೆ ಈಗ ದೊಡ್ಡ ವಾಗ್ವಾದವೇ ನಡೆಯುತ್ತಿದೆ. ನಮ್ಮ ಒಕ್ಕೂಟ ವ್ಯವಸ್ಥೆಯ ಸಂಸದೀಯ ಪ್ರಜಾಪ್ರಭುತ್ವಕ್ಕೇ ಪೆಟ್ಟು ಕೊಡುವ ‘ಒಂದು ದೇಶ, ಒಂದು ಚುನಾವಣೆ’ ಬಗ್ಗೆ ಚರ್ಚೆ ಮಾಡುವುದಕ್ಕಿಂತ, ಈ ಜಿಡಿಪಿ ಅಂಕಿಅಂಶಗಳ ಬಗ್ಗೆ ಚರ್ಚಿಸುವುದು ಒಳ್ಳೆಯದು. ದೇಶದ ಆರ್ಥಿಕ ಬೆಳವಣಿಗೆಯ ಲಾಭ ನಿಜವಾಗಿಯೂ ಜನಸಾಮಾನ್ಯರಿಗೆ ಮುಟ್ಟುತ್ತಿದೆಯೇ ಎಂದು ಪರಿಶೀಲಿಸುವುದು ಹೆಚ್ಚು ಸೂಕ್ತ.
ನಾನಿಲ್ಲಿ ಈ ಗದ್ದಲವನ್ನು ಇನ್ನಷ್ಟು ಹೆಚ್ಚು ಮಾಡಲು ಬಯಸುವುದಿಲ್ಲ.
ಸರ್ಕಾರದ ಅಂಕಿಅಂಶಗಳೇ ಸರಿ ಅಂತಲೇ ಇಟ್ಟುಕೊಳ್ಳೋಣ. ಹಳೆಯ ಮತ್ತು ಹೊಸ ಮೂಲ ವರ್ಷಗಳನ್ನು (base years) ಇಟ್ಟುಕೊಂಡು, ನೈಜ ಹಾಗೂ ನಾಮಮಾತ್ರ ಜಿಡಿಪಿಯ ಸಂಯುಕ್ತ ವಾರ್ಷಿಕ ಬೆಳವಣಿಗೆ ದರವನ್ನು (CAGR) ನಾನು ಲೆಕ್ಕ ಹಾಕಿದ್ದೇನೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ಹಳೆಯ ಮೂಲ ವರ್ಷದಲ್ಲಾಗಲಿ ಅಥವಾ ಹೊಸ ಮೂಲ ವರ್ಷದಲ್ಲಾಗಲಿ, 2022-23ರಿಂದ ಪ್ರಾರಂಭವಾಗುವ ವಾರ್ಷಿಕ ಬೆಳವಣಿಗೆ ದರ ಹೆಚ್ಚು ಕಡಿಮೆ ಒಂದೇ ಆಗಿದೆ. 2026-27ರ ಮೊದಲ ತ್ರೈಮಾಸಿಕದ ಬೆಳವಣಿಗೆ ದರ ಸ್ವಲ್ಪ ಹೆಚ್ಚಿದೆ ಅಷ್ಟೆ. ಇದರ ಅಂತಿಮ ತೀರ್ಮಾನ ಇಷ್ಟೇ: ನಮ್ಮ ಆರ್ಥಿಕತೆಯು 2026-27ರಲ್ಲಿ ಗೇರ್ ಬದಲಾಯಿಸಿಲ್ಲ, ಅದು ಅತಿವೇಗದ ಓವರ್‌ಡ್ರೈವ್‌ನಲ್ಲೂ ಇಲ್ಲ. ಹೀಗಾಗಿ, ನಾವು ದೊಡ್ಡದಾಗಿ ಕೊಚ್ಚಿಕೊಳ್ಳಲು ಅಥವಾ ಬೆನ್ನು ತಟ್ಟಿಕೊಳ್ಳಲು ಇಲ್ಲಿ ಯಾವುದೇ ಬಲವಾದ ಆಧಾರವಿಲ್ಲ.
ಕೆಲವು ಪ್ರಶ್ನೆಗಳು
ಈಗ ಬಿಡುಗಡೆಯಾಗಿರುವ ಜಿಡಿಪಿ ಅಂಕಿಅಂಶಗಳಿಗೆ ಒಮ್ಮೆ ಕನ್ನಡಿ ಹಿಡಿದು ನೋಡೋಣ. ಇಲ್ಲಿ ಸದಾ ಕಾಡುವ ಒಂದು ಪ್ರಶ್ನೆಯಿದೆ. ಹಳೆಯ ಮೂಲ ವರ್ಷದ ಲೆಕ್ಕದಲ್ಲಿ, ಚಾಲ್ತಿ ಬೆಲೆಗಳ ಜಿಡಿಪಿಗೆ ಹೋಲಿಸಿದರೆ ಸ್ಥಿರ ಬೆಲೆಗಳ ಜಿಡಿಪಿ ತೀರಾ ಕುಸಿದುಹೋಗಿತ್ತು. ಆದರೆ ಹೊಸ ಮೂಲ ವರ್ಷದ ಲೆಕ್ಕದಲ್ಲಿ ಹಾಗೇಕೆ ಆಗಿಲ್ಲ? ಇದು ಏಕೆ ಹೀಗಾಯಿತು?
ಅದೇನೇ ಇರಲಿ, ದೇಶ ನಿಜವಾಗಿಯೂ ಬೆಳೆಯುತ್ತಿದ್ದರೆ ಅದು ಉದ್ಯೋಗ, ಕೂಲಿ, ಜನರ ಬಳಕೆ, ವ್ಯಾಪಾರ ಮತ್ತು ಹೂಡಿಕೆಯಂತಹ ವಿಷಯಗಳಲ್ಲಿ ಕಾಣಿಸಬೇಕು. ಇಲ್ಲಿ ಕೆಲವು ಪ್ರಮುಖ ಪ್ರಶ್ನೆಗಳು ಎದುರಾಗುತ್ತವೆ:
ಮೊದಲನೆಯದಾಗಿ, 15ರಿಂದ 29 ವರ್ಷದ ಯುವಜನರಲ್ಲಿ ನಿರುದ್ಯೋಗ ದರ ಶೇಕಡ 16.2ರಷ್ಟು ಗರಿಷ್ಠ ಮಟ್ಟದಲ್ಲಿ ಇರುವುದೇಕೆ? 29ರಿಂದ 34 ವರ್ಷದ ಪದವೀಧರರಲ್ಲಿ ನಿರುದ್ಯೋಗ ದರ ಶೇಕಡ 40ರಿಂದ 45ರಷ್ಟಿದೆ ಎಂದು ಸಿಎಂಐಇ ವರದಿ ಹೇಳುತ್ತದೆ; ಇದು ಯಾಕೆ? ನೀತಿ ಆಯೋಗದ ಪ್ರಕಾರವೇ 15ರಿಂದ 29 ವರ್ಷದ ಸುಮಾರು 8.7 ಕೋಟಿ ಯುವಕರು ಕೆಲಸವಿಲ್ಲದೆ, ಶಿಕ್ಷಣವೂ ಇಲ್ಲದೆ, ಯಾವುದೇ ತರಬೇತಿಯೂ ಪಡೆಯದೆ (NEET) ಸುಮ್ಮನೆ ಕೂತಿದ್ದಾರೆ. ಏಕೆ ಹೀಗೆ?
ಇದನ್ನು ಓದಿದ್ದೀರಾ?: ಮೋದಿ ಸರ್ಕಾರದ ಕೈಗಾರಿಕಾ ನೀತಿಯ ಸಂಪೂರ್ಣ ವೈಫಲ್ಯ: ಐಫೋನ್ ತಯಾರಿಕೆಯ ಹಿಂದಿನ ಸತ್ಯ
ಎರಡನೆಯದಾಗಿ, ದಿನಗೂಲಿ ನೌಕರರು, ವೇತನ ಪಡೆಯುವ ನೌಕರರು ಮತ್ತು ಸ್ವಯಂ ಉದ್ಯೋಗಿಗಳಲ್ಲಿ ನೈಜ ಕೂಲಿಯು ಕ್ರಮವಾಗಿ ಮೈನಸ್ 5.5, 1.7 ಮತ್ತು 3.3ರಷ್ಟು ಕಳಪೆಯಾಗಿರುವುದೇಕೆ? ನಮ್ಮ ದೇಶದ ಒಟ್ಟು ಕಾರ್ಮಿಕರಲ್ಲಿ ದಿನಗೂಲಿ ಕಾರ್ಮಿಕರೇ ಶೇಕಡ 20ರಷ್ಟಿದ್ದಾರೆ. ಹೀಗೆ ಕೂಲಿ ಮೈನಸ್ಸಲ್ಲಿ ಬೆಳೆಯುತ್ತಿದ್ದರೆ ಈ ಕಾರ್ಮಿಕರು ಮತ್ತಷ್ಟು ಬಡವರಾಗುವುದಿಲ್ಲವೇ?
ಮೂರನೆಯದಾಗಿ, ದೇಶಕ್ಕೆ ಹರಿದುಬರುತ್ತಿರುವ ನಿವ್ವಳ ವಿದೇಶಿ ನೇರ ಬಂಡವಾಳ (FDI) ಇಷ್ಟು ಪಾತಾಳಕ್ಕೆ ಕುಸಿದಿರುವುದೇಕೆ? ಶೇಕಡ 6ರಿಂದ 7ರಷ್ಟು ಬಡ್ಡಿ ನೀಡುವ ಎಫ್‌ಸಿಎನ್‌ಆರ್ (FCNR-B) ಠೇವಣಿಗಳು ಮಾತ್ರ ಲಾರಿಗಟ್ಟಲೆ ರಾಶಿ ಬಂದು ಬೀಳುತ್ತಿವೆ. ಆದರೆ ಕೈಗಾರಿಕೆಗಳಲ್ಲಿ ತೊಡಗಿಸುವ ನಿಜವಾದ ವಿದೇಶಿ ಬಂಡವಾಳ ನೇರ ಹೂಡಿಕೆಯಾಗಿ ಏಕೆ ಬರುತ್ತಿಲ್ಲ?
ನಾಲ್ಕನೆಯದಾಗಿ, ನಮ್ಮ ವಿದೇಶಿ ವಿನಿಮಯ ಮೀಸಲು ನಿಧಿ ಬರೋಬ್ಬರಿ 74,000 ಕೋಟಿ ಅಮೆರಿಕನ್ ಡಾಲರ್ ಮುಟ್ಟಿ ಸಾರ್ವಕಾಲಿಕ ದಾಖಲೆ ಸಾಧಿಸಿದೆ. ಆದರೂ ರೂಪಾಯಿಯ ಮೌಲ್ಯ ಏಕೆ ಚೇತರಿಸಿಕೊಳ್ಳುತ್ತಿಲ್ಲ? 2026ರ ಜನವರಿಯಿಂದೀಚೆಗೆ ಅಮೆರಿಕನ್ ಡಾಲರ್ ಎದುರು ರೂಪಾಯಿ ಮೌಲ್ಯ ಸುಮಾರು ಶೇಕಡ 5ರಷ್ಟು ಕುಸಿದಿದೆ. ಇಡೀ ಏಷ್ಯಾದಲ್ಲೇ ಅತ್ಯಂತ ಕಳಪೆ ಪ್ರದರ್ಶನ ನೀಡಿದ ಕರೆನ್ಸಿ ನಮ್ಮ ರೂಪಾಯಿ ಎಂದು ವರದಿಯಾಗಿದೆ. ಇದಕ್ಕೆ ಕಾರಣವೇನು?

ಐದನೆಯದಾಗಿ, ನಮ್ಮ ರಫ್ತುಗಳು ಹೆಚ್ಚುತ್ತಿವೆ ನಿಜ, ಆದರೆ ಆಮದುಗಳು ಕೂಡ ಏರುತ್ತಿವೆ. ಚಾಲ್ತಿ ಬೆಲೆಗಳಲ್ಲಿ ನೋಡಿದರೆ ಆಮದುಗಳು ರಫ್ತಿಗಿಂತಲೂ ವೇಗವಾಗಿ ಬೆಳೆಯುತ್ತಿವೆ. 2026ರ ಏಪ್ರಿಲ್‌ನಿಂದ ಆಗಸ್ಟ್‌ವರೆಗಿನ ಅವಧಿಯಲ್ಲೇ ಸರಕು ವ್ಯಾಪಾರ ಕೊರತೆಯು 15,000 ಕೋಟಿ ಡಾಲರ್‌ಗಳನ್ನು ಮುಟ್ಟಿದೆ. ಕೇವಲ ಏಪ್ರಿಲ್‌ನಿಂದ ಜುಲೈವರೆಗಿನ ಅವಧಿಯಲ್ಲಿ ಚೀನಾದೊಂದಿಗಿನ ವ್ಯಾಪಾರ ಕೊರತೆಯೇ ಬರೋಬ್ಬರಿ 4,400 ಕೋಟಿ ಡಾಲರ್ ಆಗಿದೆ. ಈ ವ್ಯಾಪಾರ ಕೊರತೆಯು ಆರ್ಥಿಕತೆಗೆ ದೊಡ್ಡ ಹೊರೆಯಲ್ಲವೇ? ‘ಮೇಕ್ ಇನ್ ಇಂಡಿಯಾ’, ಪಿಎಲ್‌ಐ, ಆಸ್ಪೈರ್, ಎನ್‌ಎಂಸಿಪಿ ಮುಂತಾದ ಹತ್ತಾರು ಸರ್ಕಾರಿ ಯೋಜನೆಗಳಿದ್ದರೂ, ನಾವು ಚೀನಾದಿಂದ ಆಮದು ಮಾಡಿಕೊಳ್ಳುವ ವಸ್ತುಗಳನ್ನು ನಮ್ಮ ದೇಶದಲ್ಲೇ ತಯಾರಿಸಲು ಏಕೆ ಸಾಧ್ಯವಾಗುತ್ತಿಲ್ಲ?
ಆರನೆಯದಾಗಿ, ನಾಮಮಾತ್ರ ಒಟ್ಟು ಮೌಲ್ಯವರ್ಧನೆಯ (GVA) ವಲಯವಾರು ಹಂಚಿಕೆಯಲ್ಲಿ ಉತ್ಪಾದನಾ ವಲಯದ ಪಾಲು ಶೇಕಡ 13ರಲ್ಲೇ ಏಕೆ ನಿಂತುಹೋಗಿದೆ? ವಾಸ್ತವವಾಗಿ, ಹಲವು ತ್ರೈಮಾಸಿಕಗಳಿಂದ ಈ ನಾಮಮಾತ್ರ ಜಿವಿಎಯಲ್ಲಿ ದ್ವಿತೀಯ ವಲಯದ ಪಾಲು ಕೇವಲ ಶೇಕಡ 24ರಿಂದ 26ರಿಂದ ಮೇಲಕ್ಕೆ ಏಳುತ್ತಲೇ ಇಲ್ಲ. ಸರ್ಕಾರದ ಯೋಜನೆಗಳು ಈ ಮುಳ್ಳನ್ನು ಮೇಲಕ್ಕೇಕೆ ತಳ್ಳುತ್ತಿಲ್ಲ?
ಏಳನೆಯದಾಗಿ, ಒಟ್ಟು ಸ್ಥಿರ ಬಂಡವಾಳ ರಚನೆಯ (GFCF) ಮೂಲಕ ಅಳೆಯಲಾಗುವ ಬಂಡವಾಳ ಹೂಡಿಕೆಯು ಜಿಡಿಪಿಯ ಸುಮಾರು ಶೇಕಡ 33.5ರಲ್ಲೇ ಇನ್ನೂ ಏಕೆ ಸಿಕ್ಕಿಕೊಂಡಿದೆ? ಇದರಲ್ಲಿ ಖಾಸಗಿ ಕಾರ್ಪೊರೇಟ್ ವಲಯದ ಬಂಡವಾಳ ವೆಚ್ಚವಂತೂ ಸುಮಾರು ಶೇಕಡ 12ಕ್ಕಿಂತ ಮೇಲೆ ಏಳುತ್ತಲೇ ಇಲ್ಲ. ಎಷ್ಟೇ ಪುಸಲಾಯಿಸಿದರೂ, ಎಚ್ಚರಿಕೆ ಕೊಟ್ಟರೂ, ಬೆದರಿಕೆ ಹಾಕಿದರೂ ಸಹ ಖಾಸಗಿ ಕಾರ್ಪೊರೇಟ್ ಹೂಡಿಕೆದಾರರು ಹೊಸದಾಗಿ ಬಂಡವಾಳ ಹೂಡಲು ಏಕೆ ಮುಂದೆ ಬರುತ್ತಿಲ್ಲ?
ಇದನ್ನು ಓದಿದ್ದೀರಾ?: ಬಣ್ಣದ ವೇದಿಕೆ, ಬರಿದಾದ ಭರವಸೆ: ‘ಜೆನ್-ಝೀ’ ಎದುರು ಮಂಕಾದ ಮೋದಿಯ ಮೋಡಿ
ಕೊನೆಯದಾಗಿ, ಈ ಆರ್ಥಿಕ ಬೆಳವಣಿಗೆಯ ಅಂಕಿಅಂಶಗಳು ಸಾರ್ವಜನಿಕ ಸೌಲಭ್ಯಗಳಾಗಿ ಏಕೆ ಪರಿವರ್ತನೆಯಾಗುತ್ತಿಲ್ಲ? ಅಂದರೆ ಒಳ್ಳೆಯ ಶಾಲೆಗಳು, ಸುಸಜ್ಜಿತ ಆಸ್ಪತ್ರೆಗಳು, ಉತ್ತಮ ರಸ್ತೆಗಳು, ಸಮರ್ಪಕ ಕುಡಿಯುವ ನೀರು ಮತ್ತು ಉತ್ತಮ ಪೊಲೀಸ್ ವ್ಯವಸ್ಥೆಯಂತಹ ಸೌಲಭ್ಯಗಳು ಏಕೆ ಸಿಗುತ್ತಿಲ್ಲ? ಜನರ ಬಳಿ ಹೋಗಿ ಒಂದು ಮಾದರಿ ಸಮೀಕ್ಷೆ ನಡೆಸಿ ನೋಡಿ, ಬಹುಪಾಲು ನಾಗರಿಕರು ಈ ಪ್ರತಿಯೊಂದು ವಿಷಯದಲ್ಲೂ ವ್ಯವಸ್ಥೆಗೆ ಹೆಬ್ಬೆರಳು ಕೆಳಗೆ ಮಾಡಿ ಕಳಪೆಯೆಂದೇ ತೀರ್ಪು ನೀಡುತ್ತಾರೆ.
ಕನ್ನಡಿಯೊಳಗಿನ ನಿರಾಶಾದಾಯಕ ಚಿತ್ರ
ತಮ್ಮ ಸುತ್ತಮುತ್ತಲಿನ ವ್ಯವಸ್ಥೆ ಇಷ್ಟೊಂದು ಹದಗೆಟ್ಟಿರುವುದನ್ನು ನೋಡಿ ಇಂದಿನ ಯುವಪೀಳಿಗೆ (Gen Z) ಬೀದಿಗಿಳಿದು ಪ್ರತಿಭಟಿಸುತ್ತಿರುವುದರಲ್ಲಿ ಯಾವುದೇ ಆಶ್ಚರ್ಯವಿಲ್ಲ. ಕಾಗದದ ಮೇಲೆ ನಾವು ಶೇಕಡ 7.8ರ ದರದಲ್ಲಿ ಬೆಳೆಯುತ್ತಿರಬಹುದು. ಆದರೆ ದೇಶದ ಜನಸಾಮಾನ್ಯರಿಗೆ ಅದು ನಿಜವೆಂದು ಅನ್ನಿಸುತ್ತಲೇ ಇಲ್ಲ. ಏಕೆಂದರೆ, ಅವರ ದೈನಂದಿನ ಬದುಕು ಸುಲಭವಾಗಿಲ್ಲ, ಸುಧಾರಿಸಿಯೂ ಇಲ್ಲ ಎಂಬ ಕಹಿ ಸತ್ಯ ಅವರಿಗೆ ಚೆನ್ನಾಗಿ ಗೊತ್ತಿದೆ.
(ಕೃಪೆ: ದಿ ಇಂಡಿಯನ್ ಎಕ್ಸ್‌ಪ್ರೆಸ್, ಕನ್ನಡಕ್ಕೆ: ಟಿ.ಎಸ್. ವೇಣುಗೋಪಾಲ್, ಹಿರಿಯ ಪತ್ರಕರ್ತರು)





