- ಮದುವೆಯಾಗುವುದಾಗಿ ಹೇಳಿ ಬಳಿಕ ನಿರ್ಲಕ್ಷ್ಯ ಮಾಡಿದ ಆರೋಪಿ
- ಪೂರ್ವ ವಿಭಾಗದ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
70ರ ಹರೆಯದ ಅಜ್ಜ ಪ್ರೀತಿಸಿ ಮದುವೆಯಾಗುವುದಾಗಿ ಮೋಸ ಮಾಡಿದ್ದಾರೆ. ಅಲ್ಲದೇ, ಜೀವ ಬೆದರಿಕೆ ಹಾಕಿದ್ದಾರೆ ಎಂದು 63 ವರ್ಷದ ಅಜ್ಜಿ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ.
ಈ ಪ್ರಕರಣ ಬೆಂಗಳೂರಿನಲ್ಲಿ ನಡೆದಿದೆ. ಹಲಸೂರಿನ ದಯಾಮಣಿ(63) ಎಂಬ ಅಜ್ಜಿ, ಲೋಕನಾಥ್ (70) ಎಂಬ ಅಜ್ಜನ ವಿರುದ್ಧ ಬೆಂಗಳೂರು ಪೂರ್ವ ವಿಭಾಗದ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ನೊಂದ ವೃದ್ಧೆ ನೀಡಿರುವ ದೂರಿನನ್ವಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದಯಾಮಣಿಯ ಪತಿ ಹಾಗೂ ಲೋಕನಾಥ್ ಪತ್ನಿ ಸಾವನ್ನಪ್ಪಿದ್ದಾರೆ. ಆರೋಪಿ ಲೋಕನಾಥ ಅವರು ತಮ್ಮ ಮಗನಿಗೆ ಮದುವೆ ಮಾಡಲು ವಧು ಹುಡುಕುತ್ತಿದ್ದಾಗ ಈ ವೃದ್ಧೆಯ ಪರಿಚಯವಾಗಿದೆ. ಕಳೆದ ಐದು ವರ್ಷಗಳ ಹಿಂದೆಯೇ ಈ ಇಬ್ಬರಿಗೂ ಪರಿಚಯವಾಗಿದೆ. ಆರೋಪಿಯ ಮಗನ ಮದುವೆಯನ್ನು ಇಬ್ಬರೂ ಜತೆಗೆ ಸೇರಿ ಮಾಡಿದ್ದಾರೆ.
ಈ ಮದುವೆ ಬಳಿಕ ಅಜ್ಜ-ಅಜ್ಜಿ ನಡುವೆ ಸಲುಗೆ ಬೆಳೆದಿತ್ತು. ನಂತರ ಇಬ್ಬರೂ ಪ್ರೀತಿ ಮಾಡುತ್ತಿದ್ದರು. ಇಬ್ಬರೂ ಜತೆಗೆ ಮೈಸೂರು, ದಾವಣಗೆರೆ, ಬೆಳಗಾವಿ ಸೇರಿದಂತೆ ಹಲವೆಡೆ ಸುತ್ತಾಟ ನಡೆಸಿದ್ದಾರೆ. ಈ ವೇಳೆ ವೃದ್ಧೆ ತನ್ನನ್ನು ಮದುವೆಯಾಗುವಂತೆ ಆರೋಪಿ ಲೋಕನಾಥ್ ಅವರನ್ನು ಕೇಳಿದ್ದರು. ಇದಕ್ಕೆ ಅವರೂ ಕೂಡಾ ಸಮ್ಮತಿಸಿದ್ದರು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ₹2.7 ಲಕ್ಷ ಸಾಲ ಮಾಡಿ ರಸ್ತೆ ಗುಂಡಿ ಮುಚ್ಚಿದ ಸಿಟಿಜನ್ಸ್ ಗ್ರೂಪ್ ಸಂಘಟನೆ
ಕಳೆದ ಕೆಲ ದಿನಗಳಿಂದ ಆರೋಪಿ ವೃದ್ಧೆಯನ್ನು ಕಡೆಗಣಿಸುತ್ತಿದ್ದು, ಮದುವೆ ಮಾಡಿಕೊಳ್ಳಲು ನಿರಾಕರಿಸುತ್ತಿದ್ದಾರೆ. ಇದಲ್ಲದೇ, ಆರೋಪಿ ಕರೆದಾಗ ಮಾತ್ರ ಹೋಗಬೇಕು ಇಲ್ಲದಿದ್ದರೆ, ಸಾಯಿಸುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ವೃದ್ಧೆ ಆರೋಪಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಪೂರ್ವ ವಿಭಾಗದ ಮಹಿಳಾ ಠಾಣೆಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.