- 2018-19ರ ಸಮೀಕ್ಷೆಯಲ್ಲಿ ನಗರದಲ್ಲಿ 25,000 ಬೀದಿ ವ್ಯಾಪಾರಿಗಳಿದ್ದರು
- ಬ್ರ್ಯಾಂಡ್ ಬೆಂಗಳೂರು ಕಲ್ಪನೆಗೆ ಬೀದಿಬದಿ ವ್ಯಾಪಾರಿಗಳು ವಿರುದ್ಧವಾಗಿಲ್ಲ
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಹಾಗೂ ನಗರ ಸಂಚಾರ ಪೊಲೀಸರು ಫುಟ್‌ಪಾತ್ ಅತಿಕ್ರಮಣ ತೆರವು ಕಾರ್ಯಾಚರಣೆ ನಡೆಸುತ್ತಿದ್ದು, ಇದನ್ನು ವಿರೋಧಿಸಿ ಮಹದೇವಪುರ ವಲಯದ ಬೀದಿಬದಿ ವ್ಯಾಪಾರಿಗಳು ಸೋಮವಾರ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ.
ಬೀದಿಬದಿ ವ್ಯಾಪಾರಿಗಳ ಸಂಘ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿಯಾಗಿ ‘ವೆಂಡಿಂಗ್ ಜೋನ್’ ಮಂಜೂರು ಮಾಡುವಂತೆ ಮನವಿ ಸಲ್ಲಿಸಲಿದ್ದಾರೆ. ಇದಕ್ಕೂ ಮುನ್ನ ಕೆ ಆರ್ ಪುರ ಸರ್ಕಾರಿ ಆಸ್ಪತ್ರೆಯಿಂದ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯವರೆಗೂ ಬೀದಿಬದಿ ವ್ಯಾಪಾರಿಗಳು ಮೆರವಣಿಗೆ ನಡೆಸಲಿದ್ದು, ಈ ಮೆರವಣಿಗೆಯಲ್ಲಿ 1,500ಕ್ಕೂ ಹೆಚ್ಚು ಬೀದಿಬದಿ ವ್ಯಾಪಾರಿಗಳು ಭಾಗವಹಿಸುವ ನಿರೀಕ್ಷೆಯಿದೆ.
“ವಿಧಾನಸಭಾ ಚುನಾವಣೆಗೂ ಮುನ್ನ ಕಾಂಗ್ರೆಸ್ ಮುಖಂಡರಾದ ರಾಹುಲ್‌ಗಾಂಧಿ ಹಾಗೂ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರ ಜತೆ ಎರಡು ಸುತ್ತಿನ ಸಭೆ ನಡೆಸಿದ್ದೇವು. ಬೀದಿಬದಿ ವ್ಯಾಪಾರಿಗಳಿಗೆ ಸೂಕ್ತ ವೆಂಡಿಂಗ್ ಜೋನ್ ಕೊಡಿಸುವುದಾಗಿ ಭರವಸೆ ನೀಡಿದ್ದರು. ಈಗ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ನಾವು ಒಮ್ಮೆಲೇ ತೊಂದರೆಗೆ ಒಳಗಾಗಿದ್ದೇವೆ” ಎಂದು ನಗರ ಮಾರಾಟ ಸಮಿತಿ ಅಧ್ಯಕ್ಷ ಶಂಕರ್ ಹೇಳಿದರು.
“ಬ್ರ್ಯಾಂಡ್ ಬೆಂಗಳೂರು ಕಲ್ಪನೆಗೆ ಬೀದಿಬದಿ ವ್ಯಾಪಾರಿಗಳು ವಿರುದ್ಧವಾಗಿಲ್ಲ. ಸರ್ಕಾರವು ಮೊದಲಿಗೆ ವ್ಯಾಪಾರಿಗಳಿಗೆ ವೆಂಡಿಂಗ್ ಜೋನ್‌ಗಳನ್ನು ನಿಗದಿಪಡಿಸಬೇಕು. ನಂತರ ಪಾದಚಾರಿ ರಸ್ತೆಗಳನ್ನು ತೆರವುಗೊಳಿಸಬೇಕು” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಪ್ರಯಾಣಿಕರ ಸುರಕ್ಷತೆಗೆ ನಮ್ಮ ಮೆಟ್ರೋ ನಿಲ್ದಾಣದಲ್ಲಿ ಪಿಎಸ್‌ಡಿ ಅಳವಡಿಕೆ
ಕರ್ನಾಟಕ ಬೀದಿಬದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ರಂಗಸ್ವಾಮಿ ಮಾತನಾಡಿ, “ಬೀದಿಬದಿ ವ್ಯಾಪಾರಿಗಳ (ಜೀವನೋಪಾಯ ರಕ್ಷಣೆ ಮತ್ತು ಬೀದಿಬದಿ ವ್ಯಾಪಾರ ನಿಯಂತ್ರಣ) ಕಾಯ್ದೆ 2014ರ ಪ್ರಕಾರ ಪ್ರತಿ ಆರು ತಿಂಗಳಿಗೊಮ್ಮೆ ಸಮೀಕ್ಷೆ ನಡೆಸಬೇಕು. ಸಮೀಕ್ಷೆ ನಡೆಸಿ ಮಾರಾಟಗಾರರನ್ನು ಗುರುತಿಸದ ಕಾರಣ ಕೇಂದ್ರದ ಹಣ ವ್ಯರ್ಥವಾಗುತ್ತಿದೆ. 2018-19ರ ಕೊನೆಯ ಸಮೀಕ್ಷೆಯಲ್ಲಿ ನಗರದಲ್ಲಿ 25,000 ಬೀದಿ ವ್ಯಾಪಾರಿಗಳನ್ನು ಗುರುತಿಸಲಾಗಿತ್ತು” ಎಂದರು.