- ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
- ಪರವಾನಗಿ ಇಲ್ಲದೆ ಅಕ್ರಮವಾಗಿ ಸ್ಪೋಟಕ ವಸ್ತುಗಳ ಸಂಗ್ರಹಣೆ
ಅನುಮತಿಯಿಲ್ಲದೆ ಎರಡು ಮನೆಗಳಲ್ಲಿ ಅಕ್ರಮವಾಗಿ ಭಾರೀ ಪ್ರಮಾಣದ ಸ್ಪೋಟಕ ಸಾಮಗ್ರಿಗಳನ್ನು ಸಂಗ್ರಹಣೆ ಮಾಡಿಟ್ಟಿದ್ದ ಆರೋಪದಡಿ ಮೂವರು ಆರೋಪಿಗಳನ್ನು ಸೋಲದೇವನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಹೆಸರಘಟ್ಟದ ಕಲ್ಲುಗುಡ್ಡದಹಳ್ಳಿ ಹಾಗೂ ದಾಸೇನಹಳ್ಳಿ ಬಳಿಯ ಎರಡು ಮನೆಗಳಲ್ಲಿ ಪೊಲೀಸರು ಶೋಧ ಕಾರ್ಯ ನಡೆಸಿದ್ದರು. ಅನುಮತಿ ಇಲ್ಲದೆ ಮನೆಗಳಲ್ಲಿ ಆಡಗಿಸಿದ್ದ ಅಪಾರ ಪ್ರಮಾಣದ ಸ್ಫೋಟಕ ವಸ್ತುಗಳು ವಶಕ್ಕೆ ಪಡೆದಿದ್ದಾರೆ.
ಹೆಸರಘಟ್ಟದ ರಾಘವೇಂದ್ರ ಲೇಔಟ್ ನಿವಾಸಿ ಶ್ರೀನಿವಾಸ (40), ಕಲ್ಲುಗುಡ್ಡದಹಳ್ಳಿ ನಿವಾಸಿ ಶಂಕರ್ (30) ಹಾಗೂ ಕುಮಾರ್ (21) ಬಂಧಿತರು.
ಪರವಾನಗಿ ಇಲ್ಲದೆ ಅಕ್ರಮವಾಗಿ ಆರೋಪಿ ಶ್ರೀನಿವಾಸ ಮನೆಯಲ್ಲಿ ಸ್ಫೋಟಕ ವಸ್ತುಗಳನ್ನು ಸಂಗ್ರಹಣೆ ಮಾಡಿಟ್ಟ ಬಗ್ಗೆ ಖಚಿತ ಮಾಹಿತಿ ಪಡೆದ ಸೋಲದೇವನಹಳ್ಳಿ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಜತೆಗೆ 16 ಕೆ.ಜಿ. ಇದ್ದಿಲು ಪುಡಿ, 10 ಕೆ.ಜಿ. ಸಲ್ಫರ್ ಪೌಡರ್, 2 ಕೆ.ಜಿ. ಸ್ಫೋಟಕ ಜೆಲ್, 59 ಕೆ.ಜಿ ಪೊಟ್ಯಾಶಿಯಮ್ ನೈಟ್ರೇಟ್, 1 ಕ್ವಿಂಟಲ್ 10 ಕೆ.ಜಿ ಇತರೆ ಸ್ಫೋಟಕ ವಸ್ತುಗಳನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಪ್ರಯಾಣಿಕರ ಸುರಕ್ಷತೆಗೆ ನಮ್ಮ ಮೆಟ್ರೋ ನಿಲ್ದಾಣದಲ್ಲಿ ಪಿಎಸ್‌ಡಿ ಅಳವಡಿಕೆ
ಮತ್ತೊಂದು ಮನೆಯಲ್ಲಿ ಕಲ್ಲು ಕ್ವಾರಿಗಳಲ್ಲಿ ಸ್ಫೋಟಿಸಲು ಆರೋಪಿಗಳು ಸ್ಫೋಟಕ ವಸ್ತುಗಳನ್ನು ಸಂಗ್ರಹಿಸಿರುವುದು ತನಿಖೆಯಿಂದ ತಿಳಿದು ಬಂದಿದೆ.
ಆರೋಪಿಗಳಾದ ಶಂಕರ್ ಮತ್ತು ಕುಮಾರ್ ಎಂಬುವರ ಮನೆಗಳ ಮೇಲೆ ದಾಳಿ ಮಾಡಿದಾಗ ಭಾರೀ ಪ್ರಮಾಣದ ಸ್ಫೋಟಕ ವಸ್ತುಗಳು ಪತ್ತೆಯಾಗಿವೆ.
ಈ ಎರಡೂ ಪ್ರಕರಣಗಳಲ್ಲಿ ಯಾವುದೇ ಅನುಮತಿ ಪಡೆಯದೆ ಸ್ಫೋಟಕಗಳನ್ನು ಸಂಗ್ರಹಿಸಿದ್ದ ಆರೋಪದಡಿ ಆರೋಪಿಗಳ ವಿರುದ್ಧ ಸ್ಫೋಟಕ ಕಾಯ್ದೆಯಡಿ ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಎಫ್‌ಐಆರ್ ದಾಖಲಿಸಲಾಗಿದೆ.