- ಸ್ಕ್ರ್ಯಾಪ್ ಅಂಗಡಿಯಲ್ಲಿ ಪದೇಪದೆ ಕಳ್ಳತನ ಮಾಡುತ್ತಿದ್ದ ಸೆಫುಲ್ಲಾ
- ಮಗನ ಕಾಣೆ ಬಗ್ಗೆ ಮೃತನ ತಾಯಿ ಕೆ.ಜಿ ಹಳ್ಳಿ ಪೊಲೀಸ್ ಠಾಣೆಗೆ ದೂರು
ಕಳೆದ ತಿಂಗಳು ಅನುಮಾನಾಸ್ಪದ ರೀತಿಯಲ್ಲಿ ಪತ್ತೆಯಾಗಿದ್ದ ವ್ಯಕ್ತಿಯೊಬ್ಬನ ಸಾವು ಪ್ರಕರಣಕ್ಕೆ, ಇದೀಗ ತಿರುವು ಸಿಕ್ಕಿದೆ. ಕಳ್ಳನೊಬ್ಬನನ್ನು ದುಷ್ಕರ್ಮಿಗಳು ಹತ್ಯೆಗೈದಿದ್ದಾರೆ ಎಂದು ಪೊಲೀಸರು ಪತ್ತೆ ಮಾಡಿದ್ದಾರೆ.
ಬೆಂಗಳೂರಿನ ರಾಮಮೂರ್ತಿನಗರದ ಸಾದಹಳ್ಳಿ ಬಳಿಯ ಚರಂಡಿಯೊಂದರಲ್ಲಿ ಕೊಳೆತ ಸ್ಥಿತಿಯಲ್ಲಿ ಯುವಕನ ಮೃತದೇಹ ಪತ್ತೆಯಾಗಿತ್ತು. ಮೃತ ಯುವಕನನ್ನು ಸೆಫುಲ್ಲಾ ಎಂದು ಗುರುತಿಸಲಾಗಿತ್ತು. ರಾಮಮೂರ್ತಿನಗರ ಪೊಲೀಸರು ಅನುಮಾನಾಸ್ಪಾದ ಸಾವು ಎಂದು ಪ್ರಕರಣ ದಾಖಲಿಸಿಕೊಂಡು, ತನಿಖೆ ಆರಂಭಿಸಿದ್ದರು.
ಪೊಲೀಸ್ ತನಿಖೆ ವೇಳೆ, ಇದೊಂದು ಕೊಲೆ ಎಂದು ತಿಳಿದುಬಂದಿದೆ. ಪ್ರಕರಣ ಸಂಬಂಧ ಪ್ರಶಾಂತ್, ಜಬಿ ಹಾಗೂ ಶಾಬಾಜ್ ಎಂಬ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಪ್ರಕರಣದ ಹಿನ್ನಲೆ
ಸೆಫುಲ್ಲಾ ಕಾಣೆಯಾಗಿದ್ದಾನೆಂದು ಆತನ ತಾಯಿ ಕೆ.ಜಿ ಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಅಲ್ಲದೆ, ಸೆಫುಲ್ಲಾ ಕಳ್ಳತನ ಮಾಡಿದ್ದಾನೆಂದು ಆರೋಪಿಸಿ, ಪ್ರಶಾಂತ್ ಹಾಗೂ ಆತನ ಸಹಚರರು ಕೂಡಿ ಹಾಕಿ ಹಲ್ಲೆ ನಡೆಸಿದ್ದರು ಎಂದೂ ಮೃತನ ತಾಯಿ ದೂರಿನಲ್ಲಿ ತಿಳಿಸಿದ್ದರು. ಬಳಿಕ, ಪ್ರಶಾಂತ್ನನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದರು. ವಿಚಾರಣೆ ವೇಳೆ ಆತ ಸತ್ಯ ಬಾಯಿಬಿಟ್ಟಿದ್ದಾನೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಕನ್ನಡಿಗರ ಭಾವನೆಗಳೊಂದಿಗೆ ಅಮೂಲ್ ಆಟವಾಡುತ್ತಿದೆ; ಕರವೇ ಆರೋಪ
ಕೆ.ಜಿ ಹಳ್ಳಿಯಲ್ಲಿ ಪ್ರಶಾಂತ ಎಂಬುವವರಿಗೆ ಸೇರಿದ್ದ ಸ್ಕ್ರ್ಯಾಪ್ ಅಂಗಡಿಯಲ್ಲಿ ಪದೇಪದೆ ಕಳ್ಳತನವಾಗುತ್ತಿತ್ತು. ಕಳ್ಳನನ್ನು ಹಿಡಿಯಲು ಮೂವರು ಬಂಧಿತ ಆರೋಪಿಗಳು ಪ್ರಯತ್ನಿಸುತ್ತಿದ್ದರು. ಅಂಗಡಿಯಲ್ಲಿ ಕಳ್ಳತನ ಮಾಡುವಾಗ ಸೆಫುಲ್ಲಾನನ್ನು ಮೂವರೂ ಸೇರಿ ಹಿಡಿದಿದ್ದರು. ಒಂದು ವಾರದ ವರೆಗೆ ಆತನನ್ನು ಕೂಡಿ ಹಾಕಿ ನಿರಂತರವಾಗಿ ಹಲ್ಲೆ ಮಾಡಿದ್ದಾರೆ. ಆತ ಸಾವನ್ನಪ್ಪಿದ ಬಳಿಕ ಸೆಫುಲ್ಲಾನನ್ನು ಚರಂಡಿಯೊಂದರಲ್ಲಿ ಎಸೆದಿದ್ದರು ಎಂದು ವಿಚಾರಣೆ ವೇಳೆ ತಿಳಿದುಬಂದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.