- ಪಾಲಿಕೆ ತನ್ನದೇ ಆದ ಜವಾಬ್ದಾರಿಯನ್ನು ಹೊಂದಿದೆ
- ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಸಮನ್ಸ್ ನೀಡಿದ ಲೋಕಾಯುಕ್ತ
ಕಳೆದ ಭಾನುವಾರ ಬೆಂಗಳೂರಿನ ಕೆಆರ್ ಸರ್ಕಲ್ ಅಂಡರ್‌ಪಾಸ್‌ನಲ್ಲಿ 23 ವರ್ಷದ ಯುವತಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಅಧಿಕಾರಿಗಳ ವಿರುದ್ಧ ಕರ್ನಾಟಕ ಲೋಕಾಯುಕ್ತ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದೆ.
ಪೂರ್ವ ವಲಯದ ಮುಖ್ಯ ಆಯುಕ್ತರು ಮತ್ತು ವಲಯ ಆಯುಕ್ತರು ಸೇರಿದಂತೆ ಎಂಟು ಬಿಬಿಎಂಪಿ ಅಧಿಕಾರಿಗಳಿಗೆ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ್ ಅವರು ನೋಟಿಸ್ ಜಾರಿ ಮಾಡಿದ್ದಾರೆ.
ಪ್ರಕರಣ ಸಂಬಂಧ ಜೂನ್ 5ರೊಳಗೆ ಪ್ರತಿಕ್ರಿಯೆ ನೀಡಬೇಕು. ಈ ತನಿಖೆಗೆ ಪೊಲೀಸ್ ಅಧಿಕಾರಿಗಳಿಗೆ ತಜ್ಞರು ನೆರವು ನೀಡಬೇಕು. ತಜ್ಞರನ್ನು ಕೂಡಲೇ ನೀಯೋಜಿಸಬೇಕು ಎಂದು ಮುಖ್ಯ ಎಂಜಿನಿಯರ್‌ಗೆ ಲೋಕಾಯುಕ್ತ ನ್ಯಾಯಮೂರ್ತಿ ಪಾಟೀಲ್ ನಿರ್ದೇಶನ ನೀಡಿದ್ದಾರೆ. ಈ ಪ್ರಕರಣದ ತನಿಖೆಯನ್ನು ಭ್ರಷ್ಟಾಚಾರ ನಿಗ್ರಹ ದಳದ ಪೊಲೀಸ್ ವಿಭಾಗಕ್ಕೆ ನೀಡಲಾಗಿದೆ.
ಬಿಬಿಎಂಪಿ ನಗರದಲ್ಲಿ ಚರಂಡಿಗಳ ನಿರ್ವಹಣೆ ಸರಿಯಾಗಿದೆಯೇ ಎಂಬ ಬಗ್ಗೆ ಖಾತರಿಪಡಿಸಿಕೊಳ್ಳಬೇಕು. ಪಾಲಿಕೆ ತನ್ನದೇ ಆದ ಜವಾಬ್ದಾರಿಯನ್ನು ಹೊಂದಿದೆ ಎಂದು ಲೋಕಾಯುಕ್ತ ನೋಟಿಸ್‌ನಲ್ಲಿ ಹೇಳಿದೆ.
“ಮಳೆನೀರು ಚರಂಡಿಗಳ ನಿರ್ವಹಣೆಯ ಜವಾಬ್ದಾರಿ ವಹಿಸಿರುವ ಅಧಿಕಾರಿಗಳು ಈ ಬಗ್ಗೆ ನಿರ್ಲಕ್ಷ್ಯ ತೋರಿದ್ದಾರೆ. ಪುರಸಭೆಯ ಪ್ರದೇಶ ಅಥವಾ ಸ್ಥಳೀಯ ಸಂಸ್ಥೆಯೊಳಗೆ ವಾಸಿಸುವ ಪ್ರತಿಯೊಬ್ಬ ನಾಗರಿಕನಿಗೆ ಸಮಂಜಸವಾದ ಸ್ಥಿತಿಯಲ್ಲಿ ರಸ್ತೆಗಳನ್ನು ಒದಗಿಸಬೇಕು. ಇದು ಭಾರತದ ಸಂವಿಧಾನದ 21ನೇ ವಿಧಿಯ ಅಡಿಯಲ್ಲಿ ಖಾತರಿಪಡಿಸಲಾದ ಮೂಲಭೂತ ಹಕ್ಕಿನ ಒಂದು ಭಾಗವಾಗಿದೆ” ಎಂದು ನೋಟಿಸ್‌ನಲ್ಲಿ ತಿಳಿಸಿದೆ.
“ಸಾರ್ವಜನಿಕರು ತೆರಿಗೆಗಳನ್ನು ಪಾವತಿಸುತ್ತಾರೆ. ಅದಕ್ಕೆ ಅನುಗುಣವಾಗಿ ಸೌಲಭ್ಯಗಳನ್ನು ನಿರೀಕ್ಷಿಸುತ್ತಾರೆ. ಆದರೆ, ಬಿಬಿಎಂಪಿ ತನ್ನ ಜವಾಬ್ದಾರಿಗಳನ್ನು ನಿರ್ವಹಿಸಲು ವಿಫಲವಾಗಿದೆ. ಬಿಬಿಎಂಪಿ ಚರಂಡಿ ನಿರ್ವಹಣೆಯಲ್ಲಿ ವಿಫಲವಾಗಿದ್ದು, ಇದು ಪಾಲಿಕೆಯ ‘ದುರಾಡಳಿತ’” ಎಂದು ಲೋಕಾಯುಕ್ತ ನ್ಯಾಯಮೂರ್ತಿ ಪಾಟೀಲ್ ಹೇಳಿದರು.
ಈ ಸುದ್ದಿ ಓದಿದ್ದೀರಾ? ಹಳೆ ಬಟ್ಟೆ, ಮರುಬಳಕೆಯ ವಸ್ತುಗಳ ಸಂಗ್ರಹ ಕೇಂದ್ರ ತೆರೆದ ಬಿಬಿಎಂಪಿ
ಲೋಕಾಯುಕ್ತರು ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಸಮನ್ಸ್ ನೀಡಿದ್ದಾರೆ. ವಲಯ ಆಯುಕ್ತರು, ಬಿಬಿಎಂಪಿ ಪೂರ್ವ ವಲಯ, ಕಾರ್ಯನಿರ್ವಾಹಕ ಎಂಜಿನಿಯರ್, ಶಿವಾಜಿನಗರ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್, ಸಹಾಯಕ ಕಾರ್ಯಪಾಲಕ ಎಂಜಿನಿಯರ್ (ಎಇಇ) ಮತ್ತು ಸಹಾಯಕ ಎಂಜಿನಿಯರ್ (ಎಇ). ಸಂಪಂಗಿರಾಮನಗರ ವಾರ್ಡ್‌ನ ಕಾರ್ಯಪಾಲಕ ಅಭಿಯಂತರರು, ಎಇಇ ಮತ್ತು ಚಂಡಮಾರುತ ನೀರು ಚರಂಡಿ ವಿಭಾಗದ ಎಇಗಳಿಗೆ ನೋಟಿಸ್ ಜಾರಿ ಮಾಡಿ ಸಮಸ್ಯೆಯ ಕುರಿತು ವಿವರಗಳನ್ನು ನೀಡಲು ಅವರ ಮುಂದೆ ಹಾಜರಾಗಲು ತಿಳಿಸಿದ್ದಾರೆ. ಪ್ರಕರಣದ ವಿಚಾರಣೆಯನ್ನು ಜೂ.15ಕ್ಕೆ ನಿಗದಿ ಮಾಡಲಾಗಿದೆ.