ಕರ್ನಾಟಕದ ‘ನಾವೆದ್ದು ನಿಲ್ಲದಿದ್ದರೆ’ ಸಂಘಟನೆಯು ಆರಂಭಿಸಿರುವ ‘ಕೊಂದವರು ಯಾರು? Who Killed Women in Dharmasthala?’ ಎಂಬ ರಾಜ್ಯವ್ಯಾಪಿ ಅಭಿಯಾನದ ಭಾಗವಾಗಿ, 2 ಅಕ್ಟೋಬರ್ 2026, ಶುಕ್ರವಾರದಂದು ಬೆಳಿಗ್ಗೆ 10ರಿಂದ ಸಂಜೆ 6:30ರವರೆಗೆ ಬೆಂಗಳೂರಿನ ಶಿವಾಜಿನಗರದ ಕಾಮರಾಜ್ ರಸ್ತೆಯಲ್ಲಿರುವ ‘ಸಭಾ’ ಸಭಾಂಗಣದಲ್ಲಿ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಆಯೋಜಿಸಿದೆ. ಈ ವಿಚಾರ ಸಂಕಿರಣವು ಪಿತೃಪ್ರಧಾನತೆ, ಹೊಣೆಗಾರಿಕೆ ಕುರಿತು ಚರ್ಚೆಗೆ ವೇದಿಕೆಯಾಗಲಿದೆ.
ಧರ್ಮಸ್ಥಳದಲ್ಲಿ ವರದಿಯಾದ ಪ್ರಮುಖ ಲೈಂಗಿಕ ದೌರ್ಜನ್ಯ ಮತ್ತು ಕೊಲೆ ಪ್ರಕರಣವೊಂದನ್ನು ಮರು ತನಿಖೆ ಮಾಡಲು ವಿಶೇಷ ತನಿಖಾ ತಂಡವನ್ನು ರಚಿಸುವಂತೆ ಸುಪ್ರೀಂ ಕೋರ್ಟ್ ಇತ್ತೀಚೆಗೆ ‘ಸೌಜನ್ಯ ಪ್ರಕರಣ’ದಲ್ಲಿ ನೀಡಿರುವ ಆದೇಶದ ಹಿನ್ನೆಲೆಯಲ್ಲಿ ಈ ವಿಚಾರ ಸಂಕಿರಣವು ವಿಶೇಷ ಮಹತ್ವವನ್ನು ಪಡೆದುಕೊಂಡಿದೆ.
ದಶಕಗಳಿಂದ ಧರ್ಮಸ್ಥಳ ಪ್ರದೇಶವು ಮಹಿಳೆಯರ ಮೇಲಿನ ದೌರ್ಜನ್ಯ, ಲೈಂಗಿಕ ದೌರ್ಜನ್ಯ, ಅಮಾನವೀಯ ಕೃತ್ಯಗಳು, ಕೊಲೆ ಮತ್ತು ಅಸಹಜ ಸಾವುಗಳಂತಹ ಘಟನೆಗಳಿಗೆ ಸಾಕ್ಷಿಯಾಗಿದೆ. ಆದಾಗ್ಯೂ, ಇವುಗಳಲ್ಲಿ ಅನೇಕ ಪ್ರಕರಣಗಳಲ್ಲಿ ಅಪರಾಧಿಗಳನ್ನು ಗುರುತಿಸಲಾಗಿಲ್ಲ ಅಥವಾ ಕಾನೂನಿನ ಶಿಕ್ಷೆಗೆ ಒಳಪಡಿಸಲಾಗಿಲ್ಲ. ಈ ಹಿನ್ನೆಲೆಯಲ್ಲಿ, ನ್ಯಾಯಾಲಯದ ಆದೇಶವು ಸಂತ್ರಸ್ತರ ಕುಟುಂಬಗಳಲ್ಲಿ ಹೊಸ ಭರವಸೆಯನ್ನು ಮೂಡಿಸಿದೆ.
ಇದನ್ನೂ ಓದಿ: ಸೌಜನ್ಯ ಪ್ರಕರಣ | ನ್ಯಾಯಯುತ ಮರು ತನಿಖೆಗೆ ‘ಕೊಂದವರು ಯಾರು?’ ಆಂದೋಲನ ಒತ್ತಾಯ
ಅಪರಾಧಿಗಳು ಶಿಕ್ಷೆಯಿಂದ ತಪ್ಪಿಸಿಕೊಳ್ಳುವಂತಹ ವಾತಾವರಣ ನಿರ್ಮಾಣ, ನ್ಯಾಯ ಒದಗಿಸುವಲ್ಲಿ ಸರ್ಕಾರಿ ಸಂಸ್ಥೆಗಳ ಹೊಣೆಗಾರಿಕೆಯ ಕೊರತೆ ಹಾಗೂ ಧಾರ್ಮಿಕ ಸ್ಥಳಗಳು ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರ ಸುರಕ್ಷತೆ ಮತ್ತು ಭದ್ರತೆಗೆ ಸಂಬಂಧಿಸಿದಂತೆ ರಾಜ್ಯವ್ಯಾಪಿ ಅಭಿಯಾನವು ಎತ್ತಿರುವ ಪ್ರಶ್ನೆಗಳನ್ನು ಈ ವಿಚಾರ ಸಂಕಿರಣವು ಮುಂದುವರಿಸಲಿದೆ.
ಮಹಿಳೆಯರ ಧ್ವನಿಯನ್ನು ಅಡಗಿಸಲು ಮತ್ತು ಅಪರಾಧಿಗಳಿಗೆ ಶಿಕ್ಷೆಯಾಗದಂತೆ ನೋಡಿಕೊಳ್ಳಲು ಪಿತೃಪ್ರಧಾನ ವ್ಯವಸ್ಥೆಯು ರಾಜಕೀಯ ಅಧಿಕಾರ ಹಾಗೂ ಧಾರ್ಮಿಕ, ಆರ್ಥಿಕ ಮತ್ತು ಸಾಮಾಜಿಕ ಹಿತಾಸಕ್ತಿಗಳೊಂದಿಗೆ ಹೇಗೆ ಕೈಜೋಡಿಸುತ್ತದೆ ಎಂಬ ಸಂಗತಿಯು ಈ ವಿಚಾರ ಸಂಕಿರಣದ ಕೇಂದ್ರ ಬಿಂದುವಾಗಿದೆ.
ಸಾಂಸ್ಥಿಕ ಧಾರ್ಮಿಕ ರಚನೆಗಳೊಳಗೆ ವ್ಯವಸ್ಥಿತ ಹಿಂಸೆ ಮತ್ತು ತಾರತಮ್ಯವನ್ನು ಅನುಭವಿಸುತ್ತಿದ್ದರೂ, ಮಹಿಳೆಯರು ತಮ್ಮ ನಂಬಿಕೆ ಮತ್ತು ಶ್ರದ್ಧೆಯನ್ನು ಏಕೆ ಉಳಿಸಿಕೊಂಡು ಮುಂದುವರಿಸಿಕೊಂಡು ಹೋಗುತ್ತಾರೆ? ನ್ಯಾಯಕ್ಕಾಗಿ ಹೋರಾಡುವಾಗ ಇಂತಹ ಆಂತರಿಕ ಮತ್ತು ಬಾಹ್ಯ ಸ್ವರೂಪದ ಹಿಂಸೆ ಹಾಗೂ ತಾರತಮ್ಯದ ಬಗ್ಗೆ ಮಾತನಾಡಲು, ಅದನ್ನು ಎದುರಿಸಲು ಮತ್ತು ಅದರ ವಿರುದ್ಧ ಧ್ವನಿ ಎತ್ತಲು ಮಹಿಳೆಯರಿಗೆ ಯಾವ ಅವಕಾಶಗಳು ಲಭ್ಯವಿವೆ? ಎಂಬುದನ್ನೂ ಇದು ಪರಿಶೀಲಿಸಲಿದೆ.

ಗುಜರಾತ್, ಕೇರಳ ಮತ್ತು ಇತರ ರಾಜ್ಯಗಳ ಮಹಿಳೆಯರು — ‘ಸಿಸ್ಟರ್ಸ್ ಇನ್ ಸಾಲಿಡಾರಿಟಿ’ಯ ಸಿಸ್ಟರ್ ರಾನಿತ್ ಮತ್ತು ‘ಭಾರತೀಯ ಮುಸ್ಲಿಂ ಮಹಿಳಾ ಆಂದೋಲನ’ದ ಜಾಕಿಯಾ ಸೋಮನ್ ಸೇರಿದಂತೆ — ಮಾಧ್ಯಮ, ಚಲನಚಿತ್ರ ಮತ್ತು ಕಾನೂನು ಕ್ಷೇತ್ರಗಳ ಗಣ್ಯರು ತಮ್ಮ ಅನುಭವಗಳು ಮತ್ತು ದೃಷ್ಟಿಕೋನಗಳನ್ನು ಹಂಚಿಕೊಳ್ಳಲಿದ್ದಾರೆ.
ಇದನ್ನೂ ಓದಿ: ಕೂಡಲೇ ಸೌಜನ್ಯ ಎಸ್‌ಐಟಿ ಪುನರಚಿಸಿ: ರಾಜ್ಯ ಸರ್ಕಾರಕ್ಕೆ ‘ಕೊಂದವರು ಯಾರು?’ ಆಂದೋಲನ ಬಹಿರಂಗ ಪತ್ರ
ವಿಚಾರ ಸಂಕಿರಣದ ವಿವರಗಳು ಈ ಕೆಳಗಿನಂತಿದೆ:
ಶ್ರದ್ಧೆ-ನಂಬಿಕೆಯೊಂದಿಗೆ ಅನುಸಂಧಾನ: ಅಧಿಕಾರ, ಪಿತೃಪ್ರಧಾನತೆ ಮತ್ತು ಹೊಣೆಗಾರಿಕೆ
2 ಅಕ್ಟೋಬರ್, ಶುಕ್ರವಾರ, | ‘ಸಭಾ’ ಸಭಾಂಗಣ, 262, ಕಾಮರಾಜ ರಸ್ತೆ, ಕಮರ್ಷಿಯಲ್ ಸ್ಟ್ರೀಟ್ ಹತ್ತಿರ, ಶಿವಾಜಿನಗರ, ಬೆಂಗಳೂರು- 560042
ಉದ್ಘಾಟನೆ: ನಗಾರಿ ವಾದ್ಯ ನುಡಿಸುವುದು, ಮಂಡ್ಯದ ಮಹಿಳಾ ತಂಡ
ಗೋಷ್ಠಿ 1: ಅಪರಾಧಿಗಳ ನಿರ್ಭೀತಿ: ಪ್ರಶ್ನಿಸುವುದು, ಉತ್ತರಕ್ಕಾಗಿ ಆಗ್ರಹಿಸುವುದು ಮತ್ತು ಪುಸ್ತಕ ಬಿಡುಗಡೆ
ಡಾ. ಆರ್. ಸುನಂದಮ್ಮ, ಅಧ್ಯಕ್ಷರು, ಕರ್ನಾಟಕ ಲೇಖಕಿಯರ ಸಂಘ, ಬೆಂಗಳೂರು.
ಮಾಯಾ ರಾವ್, ರಂಗಕರ್ಮಿ, ಬೆಂಗಳೂರು.
ನೊಂದವರ ಕುಟುಂಬಗಳು, ಧರ್ಮಸ್ಥಳ.
ಪುಸ್ತಕದ ಕುರಿತು: ಚಂಪಾವತಿ ಎಚ್.ಎಸ್., ಬೆಂಗಳೂರು.
ಗೋಷ್ಠಿ ನಿರ್ವಹಣೆ: ಜ್ಯೋತಿ ಎ.
ಗೋಷ್ಠಿ 2: ನೊಂದವರ ಚೇತರಿಕೆ: ಅಧಿಕಾರ, ಪಿತೃಪ್ರಧಾನತೆ, ಧಾರ್ಮಿಕ ರಾಜಕೀಯವನ್ನು ಎದುರಿಸುವುದು
ಧರ್ಮಸ್ಥಳದ ನೊಂದವರ ಕುಟುಂಬಸ್ಥರು, ಬೆಳ್ತಂಗಡಿ
ಸಿಸ್ಟರ್ ರನಿತ್ ಎಂ.ಜೆ., ‘ಸಿಸ್ಟರ್ಸ್ ಇನ್ ಸಾಲಿಡಾರಿಟಿ’, ಕೇರಳ.
ಜಾಕಿಯಾ ಸೋಮನ್, ಭಾರತೀಯ ಮುಸ್ಲಿಂ ಮಹಿಳಾ ಆಂದೋಲನ, ಅಹ್ಮದಾಬಾದ್, ಗುಜರಾತ್.
ವಿಮಲಾ ಕೆ.ಎಸ್., ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ, ಬೆಂಗಳೂರು.
ಗೋಷ್ಠಿ ನಿರ್ವಹಣೆ: ಮಧು ಭೂಷಣ್ ಮತ್ತು ಅನಿತಾ ಚೆರಿಯಾ.
ಗೋಷ್ಠಿ 3: ಪ್ರತಿರೋಧ ಬೆಳೆಸುವುದು: ಹೊಣೆಗಾರಿಕೆಗೆ ಹಕ್ಕೊತ್ತಾಯ ಮತ್ತು ನ್ಯಾಯಕ್ಕಾಗಿ ಹೋರಾಟ
ಧನ್ಯಾ ರಾಜೇಂದ್ರನ್, ಸಂಪಾದಕರು, ‘ದಿ ನ್ಯೂಸ್ ಮಿನಿಟ್’ (ಟಿಎನ್‍ಎಂ), ಬೆಂಗಳೂರು.
ಪೂರ್ಣಾ ರವಿಶಂಕರ್, ವಕೀಲರು, ಬೆಂಗಳೂರು.
ಡಾ. ಆಶಾ ಅಚಿ ಜೋಸೆಫ್, ವಿಮೆನ್ ಇನ್ ಸಿನೆಮಾ ಕಲೆಕ್ಟಿವ್, ಕೇರಳ.
ನಾಗಲಕ್ಷ್ಮಿ ಚೌಧರಿ, ಅಧ್ಯಕ್ಷರು, ಕರ್ನಾಟಕ ರಾಜ್ಯ ಮಹಿಳಾ ಆಯೋಗ.
ಗೋಷ್ಠಿ ನಿರ್ವಹಣೆ: ಮಲ್ಲಿಗೆ ಸಿರಿಮನೆ.
ಗೋಷ್ಠಿ 4: ಶ್ರದ್ಧೆ-ನಂಬಿಕೆಯೊಂದಿಗೆ ಅನುಸಂಧಾನ- ಘನತೆಯ ಸಂಸ್ಕೃತಿಯನ್ನು ಎತ್ತಿಹಿಡಿಯುವುದು
ಸಾಂಸ್ಕೃತಿಕ ಪ್ರಸ್ತುತಿ ಮಾಡುವ ಕಲಾವಿದರು:
ಗೀತಾ ಸುರತ್ಕಲ್, ಮಂಗಳೂರು.
ಶಿಲ್ಪಾ ಮುಡುಬಿ, ಗೋವಾ
ಚಿತ್ರಾ ಅಯ್ಯರ್, ಬೆಂಗಳೂರು
ಬೇರು-ಬೆವರು, ಬೆಂಗಳೂರು
ಮಿಂಚು ಆರ್ಟ್ ಕಲೆಕ್ಟಿವ್, ಆನೆಕಲ್, ಬೆಂಗಳೂರು. ಮತ್ತು ಇತರ ಕಲಾವಿದರು
ಗೋಷ್ಠಿ ನಿರ್ವಹಣೆ: ಅಕ್ಕೈ ಪದ್ಮಶಾಲಿ ಮತ್ತು ಮಮತಾ ಯಜಮಾನ್




